ಸಂಪು ಕಾಲಂ : ಪ್ರೀತಿ, ಜೀವನಪ್ರೀತಿ ಮತ್ತು ಸಮ್ತಿಂಗ್


ಉಗಾದಿ ಹಬ್ಬದ ದಿನ ಆಫೀಸ್ ಕೆಲಸದಲ್ಲಿ ಮುಳುಗಿದ್ದ ನನ್ನ ಪತಿ, ಹಬ್ಬದ ಸಡಗರಕ್ಕಾಗಿ ಬಗೆಬಗೆ ಸಿಹಿ ತಿಂಡಿ ಮಾಡುತ್ತಿದ್ದ ನನ್ನ ಅತ್ತೆ ಮತ್ತು ಅದ್ಯಾವುದೋ ಲಹರಿಯಲ್ಲಿ ಮುಳುಗಿ, ಹಬ್ಬದ ಶುಭಾಶಯಗಳ ದೊಡ್ಡ ಬತ್ತಳಿಕೆಯೇ ತುಂಬಿದ್ದ ನನ್ನ ಮೊಬೈಲ್ ನ ಸಂದೇಶಗಳಿಗೆ, ಕರ್ತವ್ಯವೆಂಬಂತೆ, “ಥ್ಯಾಂಕ್ಯೂ, ನಿಮಗೂ ಶುಭಾಷಯಗಳು” ಎಂದು ನಿರುತ್ಸಾಹದಿಂದಲೇ ಮಾರುತ್ತರ ಕೊಡುತ್ತಿದ್ದೆ. ಇದ್ದಕ್ಕಿದ್ದಂತೆ, ಒಂದು ಮೊಬೈಲ್ ಕರೆ, ನನ್ನ ಹೆಲೋಗೆ ಬಂದ ಮಾರುತ್ತರ, “ಶುಭಾಶಯಗಳಮ್ಮ ನಿನಗೆ” ಅಂತ. ನೀವು ಊಹಿಸಲಾರಿರಿ! ಅದು ತೊಂಭತ್ತು ಮೀರಿ ಮೈಯೆಲ್ಲ ಒಣಗಿ, ಸುಕ್ಕಾಗಿ, ಬೆನ್ನು ಬಾಗಿ ಪ್ರತಿ ಹೆಜ್ಜೆ ಇಡಲೂ ಎರಡು ನಿಮಿಷ ತೆಗೆದುಕೊಳ್ಳುವ ಹಣ್ಣುಹಣ್ಣು ಮುದುಕಿಯಾದ ನನ್ನಜ್ಜಿ. ಇನ್ನೂ ಆಕೆಗೆ ಅದಮ್ಯ ಜೀವನಪ್ರೀತಿ. ನನ್ನಲ್ಲೆಲ್ಲೋ ಕಳೆದುಹೋಗಿದ್ದ ಸಂಭ್ರಮ ಆಗಷ್ಟೇ ತೇಲಿಬಂದಿತ್ತು.
ಆಕೆಯದು ಕಂಟೇಜಿಯಸ್ ಎಂಬಂತಹ ಸಂಭ್ರಮ, ಜೀವನಪ್ರೀತಿ. ಬದುಕನ್ನು ಎಂದೂ ತೀವ್ರವಾಗಿ ನೋಡದೆ, ಬಂದದಾರಿಯ ಹೂವು, ಮುಳ್ಳುಗಳನ್ನೆಲ್ಲಾ ಮುಗ್ಧವಾಗಿಯೇ ಸ್ವೀಕರಿಸಿ ಹಾಗೆಯೇ ಸಂಜೆಯತ್ತ ಮುಖ ಮಾಡಿರುವ ಅವರಲ್ಲಿ, ಬಹುಶಃ ಅವರ ಮುಗ್ಧತೆಯೇ ಕಾರಣವೆಂಬಂತೆ ಇಂದಿಗೂ ತುಂಬು ಚೇತನ. ಮುಗ್ಧತೆ, ಮಗುಮನಸ್ಸು, ವಿಶಾಲ ಮನೋಭಾವ, ಮೌಢ್ಯ, ಕಂದಾಚಾರಗಳ ಜೊತೆಗೆ ಸಿಟ್ಟು, ಪೊಗರು, ಸ್ವಾಭಿಮಾನಗಳೂ ಅಚಲವಾಗಿದೆ. ಈ ಮುಗ್ಧ ಶುದ್ಧತೆಯನ್ನು ಮಲಿನ ಮಾಡುವ ಜೀವನ ಪಾಠಗಳು, ಇವರು ಮತ್ತು ಇಂಥವರನ್ಯಾಕೆ ಕಾಡಲಿಲ್ಲ, ಕಾಡಿ ಅಶುದ್ಧಗೊಳಿಸಲಿಲ್ಲ ಎಂಬುದು ನನ್ನನ್ನು ಕಾಡುವ ಪ್ರಶ್ನೆ.

ಜೀವನದ ಯಾವುದೋ ಸಣ್ಣ ಪುಟ್ಟ ನೋವುಗಳಿಗೆ ಆಕಾಶ ಕಳಚಿಬಿದ್ದಂತೆ ರಿಯಾಕ್ಟ್ ಮಾಡುವ ನಮ್ಮ ಯುವಜನರಲ್ಲಿ ಈ ರೀತಿಯಾದ ಸಣ್ಣಪುಟ್ಟ ಸುಖಗಳನ್ನು ಸುಖಿಸುವ ಸಂಭ್ರಮಿಸುವ ಮನೋಭಾವ ಕಳಚುತ್ತಿದೆ. ಜೊತೆಗೆ, ಕಷ್ಟಗಳನ್ನು ಎದುರಿಸುವ, ನೋವುಗಳನ್ನು ಅನುಭವಿಸುವ ಗಟ್ಟಿತನ ಅಥವಾ ಎದೆಗಾರಿಕೆಯೂ ಇಲ್ಲವಾಗುತ್ತಿದೆ. ಸದಾ ಅತೃಪ್ತಭಾವ ಕಾಡುತ್ತದೆ. ಸಂಜೆಯನ್ನು ಆಸ್ಪತ್ರೆಯಲ್ಲಿನ ಒಬ್ಬ ರೋಗಿಯ ಹಾಸಿಗೆಗೆ ಹೋಲಿಸುವ ಟಿ.ಎಸ್. ಈಲಿಯಟ್ ನ ಕಾಲದಿಂದ ಪ್ರಾರಂಭವಾಗಿದೆ ಈ ಅಂತರ್ಮುಖೀ, ಅತೃಪ್ತ ಮನಸ್ಸುಗಳು. ನಾವು ಏನೇ ಮಾಡಿದರೂ, ಇಷ್ಟೇ ಅಲ್ಲವೇ? ಜೀವನವೆಂದರೆ ಮತ್ತೇನು? ಹೊಸತು? ಎಂಬ ಯಾವ ಪ್ರಶ್ನೆಗಳಿಗೂ ಉತ್ತರ ಸಿಗದ ವಾತಾವರಣಕ್ಕೆ ಇಂಬು ಕೊಡುವುದು ನಾವು ಕಟ್ಟಿಕೊಂಡಿರುವ ಅಂತರ್ಜಾಲ, ದೂರದರ್ಶನ, ದೂರವಾಣಿ ಇಂತಹ ಶೆಲ್ ಗಳು. ಹೆಚ್ಚು ತಲೆಕೆಟ್ಟಾಗ ಸುಮ್ಮನೆ ಇಂಟರ್ನೆಟ್ ಬ್ರೌಸ್ ಮಾಡುವ ನಮ್ಮ ಮನಸ್ಸೇ ಇದಕ್ಕೆ ಸಾಕ್ಷಿ. ಎಷ್ಟೋ ಬಾರಿ, ಜೀವನ ಎಂದರೇನು, ಸುಖ, ಸಂತೋಷ ಎಂದರೇನು ಎಂಬ ಜಿಜ್ಞಾಸೆಯಲ್ಲೇ ನಮ್ಮ ದಿನಗಳು ಕಳೆದುಹೋಗುತ್ತಿರುತ್ತವೆ. ಇತ್ತೀಚೆಗಿನ ಮನಶಾಃಸ್ತ್ರದ ಕುರಿತ ವರದಿಯೊಂದರ ಪ್ರಕಾರ, ಖಿನ್ನತೆ, ನೋವು, ಕಳೆದುಹೋದ ಭಾವ ಇವುಗಳನ್ನು ಇಂದಿನ ತಲೆಮಾರು ಅತ್ಯಂತ ಹೆಚ್ಚಾಗಿ ಅನುಭವಿಸುತ್ತಿದೆ.
ಮಾಸ್ ಇಶ್ಯೂ ಆಗಿರುವ ಇದಕ್ಕೆ ಕಾರಣವನ್ನು ಹುಡುಕುವ ಬದಲು, ಪರ್ಯಾಯವನ್ನು ಹುಡುಕಿದಾಗ ಬಹುಶಃ ನಮಗೆ ಕಂಡುಬರುವುದು, ಪರಸ್ಪರ ವ್ಯಕ್ತಿಗಳಲ್ಲಿ ಹೆಚ್ಚಾಗಬೇಕಾದ, ಪ್ರೀತಿ-ವಿಶ್ವಾಸ. ನಮ್ಮ ಗ್ಯಾಜ್ಜೆಟ್ಟುಗಳನ್ನು, ಅಂತರ್ಜಾಲವನ್ನು ಅನುಭವಿಸುವಷ್ಟು ಸಮಯ, ಪ್ರೀತಿಗಳನ್ನು ನಮ್ಮ ಇಷ್ಟರ ಜೊತೆಗೆ ಕಳೆದರೆ ಅದರ ಗಮ್ಮತ್ತೇ ಬೇರೆಯದಾಗಿರುತ್ತದೆ. ಇದೇ ಅಂತರ್ಜಾಲದಲ್ಲೇ, ಒಂದೇ ಮನೆಯ ಅಣ್ಣತಮ್ಮಂದಿರು ತಮ್ಮ ತಮ್ಮ ಲ್ಯಾಪ್ಟಾಪ್ ಗಳಲ್ಲಿ ಕಾರ್ಯನಿರತರಾಗಿದ್ದು, ಪರಸ್ಪರ ಮಾತುಕತೆಗಳು ಸಹ ತಮ್ಮ ಚಾಟ್ ಬಾಕ್ಸ್ ಮೂಲಕವೇ ಹೇಳುಕೊಂಡ ಒಂದು ವ್ಯಂಗ್ಯಚಿತ್ರ ನೋಡಿದ್ದೆ. ನಗುಬಂದಿತ್ತು, ಅತಿರೇಕವೆನಿಸಿತ್ತು. ಆದರೆ ವಿಪರ್ಯಾಸವೆಂದರೆ ಬಹುಬೇಗ ಇದು ಇಂದಿನ ಸತ್ಯಗಳಲ್ಲಿ ಒಂದಾಗಿಬಿಟ್ಟಿದೆ. ಅದ್ಯಾವುದೋ ಹೊಟೆಲೊಂದರಲ್ಲಿ ಎಲ್ಲರ ಮೊಬೈಲ್ ಊಟದ ಟೇಬಲ್ಲಿನ ಮಧ್ಯಕ್ಕೆ ಜೋಡಿಸಿ ಇಡುವ ಪರಿಪಾಠವಂತೆ, ಮೊದಲು ಯಾರು ಮೊಬೈಲ್ ಮುಟ್ಟುತ್ತಾರೋ ಅವರೇ ಬಿಲ್ ಕಟ್ಟುವ ನಿಯಮ. ಆಶ್ಚರ್ಯಭರಿತ ವಿಶಯವೆಂದರೆ, ನಾವೇ ನಮ್ಮ ಲೋಕದಲ್ಲಿ ಮುಳುಗೇಳುವ ಸರಕಾಗುತ್ತಿದ್ದೇವೆ, ಆದರೆ ಅದರಿಂದ ಹೊರಬರುವ ಪ್ರಯತ್ನವೂ ನಮ್ಮದೇ ಆಗಿದೆ. ಇದರ ಹಿಂದೆ ಅದ್ಯಾವ ಪ್ರಬಲ ಶಕ್ತಿಗಳು ಕೈಮಾಡುತ್ತಿವೆ ಎಂಬುದು ಬಗೆಹರಿಸಲಾರದ ಚಕ್ರ. ಒಳಹೊಕ್ಕಷ್ಟೂ ಬಿಡುಗಡೆ ದೂರ, ಆದರೆ ಮುಂದಾರಿ ಅನಿವಾರ್ಯ!
ತಂದೆಯೊಬ್ಬ ತನ್ನವೆಲ್ಲವನ್ನೂ ಕಳೆದುಕೊಂಡು, ಹೆಂಡತಿಯ ಅಗಲಿಕೆಯೂ ಸೇರಿ ಹತಾಶನಾಗಿರುತ್ತಾನೆ. ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ದುಃಖ, ನಿರಾಸೆ, ನೋವು ತುಂಬಿದ ಜೀವನ. ಆಗ ಅವನ ಚೈತನ್ಯವಾಗಿ, ಜೀವನ ಪ್ರೀತಿಯ ದ್ಯೋತಕವಾಗಿ ನಿಲ್ಲುವುದು ಅವನ ಕಣ್ಣ ಮುಂದಿರುವ ಅವನ ಮುದ್ದು ಮಗು. ಮಗನಿಗಾಗಿ, ಕಳೆದುಕೊಂಡ ತನ್ನೆಲ್ಲಾ ವಸ್ತುಗಳನ್ನು ಮರಳಿ ಪಡೆವ ಉತ್ಸಾಹ ಅವನಲ್ಲಿ ತುಂಬುವುದು ಅವನ ಮಗುವಿನ ಮುಗ್ಧ ಪ್ರೀತಿಯಿಂದ. ಇನ್ನು ಸೋತೆ, ಎಂದು ಕೈಬಿಡುವ ಪ್ರತಿ ಪ್ರಯತ್ನವನ್ನೂ, ಮರುಯತ್ನಗಳ ಪ್ರೇರೇಪಣೆಯಂತೆ ಬದಲಾಯಿಸುವುದು ಅವನ ಮಗನ ಪ್ರೀತಿಯುಕ್ತ ಮಾತುಗಳು. ಇದು ನಾನು ಇತ್ತೀಗೆಚೆ ಕಂಡ ಸುಂದರ ಸಿನೆಮಾ Pursuit of Happiness.
ತನ್ನ ಮಗುವಿಗಾಗಿ, ಅವನ ಪ್ರೀತಿಗಾಗಿ, ನಾಜಿಯ ಕಾನ್ಸೆನ್ ಟ್ರೇಷನ್ ಕ್ಯಾಂಪ್ ನಲ್ಲಿ ಸಿಲುಕಿದರೂ, ಅದರ ಒಂದು ಸುಳುಹೂ ನೀಡದಂತೆ ಮಗನನ್ನು ಸಲುಹಿ, ಅದೊಂದು ಆಟದಂತೆ ತನ್ನ ಮಗನಿಗೆ ನಂಬಿಸಿ, ಹೆಜ್ಜೆಹೆಜ್ಜೆಗೂ ಅವನ ಆಸರೆಯಾಗಿ ನಿಲ್ಲುತ್ತಾನೆ. ತನ್ನಮ್ಮನ್ನು ನೆನೆದರೆ, ಹಸಿವು ಎಂದರೆ ಆಟದಲ್ಲಿ ಸೋಲು ಎಂಬಂತೆ ತಿಳಿಸಿ, ತಾನು ಹೇಳಿದ ಕೆಲಸವೆಲ್ಲ ಮಾಡಿದರೆ ಅಂಕ ಕೂಡುವುದೆಂದು ತಿಳಿಸಿ, ಆ ಮುಗ್ಧ ಮನಸ್ಸಿಗೆ ನಾಜಿಯ ಯಾವ ಅಮಾನವೀಯತೆಯ, ಬರ್ಬರತೆಯ ಇಂಚೂ ತಾಕದಂತೆ, ನಕ್ಕು ನಲಿಸಿಯೇ ಗೆಲಿಸುತ್ತಾನೆ. ತನ್ನ ಪ್ರಾಣಕಳೆದುಕೊಂಡರೂ ಮಗನನ್ನು ಆಟಗೆದ್ದ ಗೆಲುವಿನಲ್ಲಿ, ಜೀವಂತವಾಗಿರಿಸಿದ, (ಸ್ವಲ್ಪ ಭಾಗ) ಸತ್ಯಘಟನೆಯಾಧಾರಿತ ಸಿನೆಮಾ Life is Beautiful.
ಇತ್ತೀಚೆಗಷ್ಟೇ ನೋಡಿ, ಇದೇ ಗುಂಗಿನಲ್ಲಿದ್ದುದರಿಂದ ಈ ಎರಡು ಸಿನೆಮಾಗಳ ಉದಾಹರಣೆಯನ್ನೇ ಕೊಟ್ಟಿದ್ದೇನೆ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದು, ಜೀವನ ಪ್ರೀತಿಗೆ ಅಥವಾ ಬದುಕಿನ ಹೋರಾಟಕ್ಕೆ ಆಸರೆಯಾಗಿ ನಿಂತ ಪ್ರೀತಿಯನ್ನು. ಪರಸ್ಪರ ವ್ಯಕ್ತಿಪ್ರೀತಿ ಇದ್ದೇ ಇರುತ್ತದೆ. ಅದು ಸರಿಯಾದ ರೀತಿಯಲ್ಲಿ ಅವ್ಯಕ್ತವಾಗದಿದ್ದರೆ, ನಾವು ಜೀವನದಲ್ಲಿ ಸಾಕಷ್ಟನ್ನು ಕಳೆದುಕೊಳ್ಳುತ್ತೇವೆ. ಮುಂಜಾನೆಯ ಬೆಳಕಲ್ಲಿ ನನ್ನ ಗಂಡ ವಿವರಿಸಿದ ಒಂದು ವಿಷಯ ಕೇಳಿ ಬೆಚ್ಚಿಬಿದ್ದೆ. LinkedIn ನ ಒಂದು ಸಮೀಕ್ಷೆಯ ಪ್ರಕಾರ ವ್ಯಕ್ತಿಯೊಬ್ಬ ದಿನಕ್ಕೆ ಕಡಿಮೆಯೆಂದರೆ ನೂರುಬಾರಿ, ಹೆಚ್ಚೆಂದರೆ ಒಂಭೈನೂರು ಬಾರಿ ತನ್ನ ಮೊಬೈಲ್ ನಲ್ಲಿ ಮುಳುಗಿರುತ್ತಾನಂತೆ! ಒಬ್ಬ ವ್ಯಕ್ತಿ ಇದು ತನಗೆ ತಾನು ಹೆಣೆದುಕೊಳ್ಳುವ ಬಲೆ, ಕೊನೆಗೆ ಸಿಲುಕಿ ಬೀಳುವುದೂ ಸಹ ತಾನೇ ಎಂದು ಗೊತ್ತಿದ್ದರೂ ಸಹ, ವ್ಯವಸ್ತೆ ರಚಿಸುತ್ತಿರುವ ಈ ವ್ಯೂಹಕ್ಕೆ ಶರಣಾಗುತ್ತಲೇ ಇದ್ದೇವೆ. ನಮ್ಮಲ್ಲಿನ ಜೀವನಪ್ರೀತಿಯನ್ನು ಜೀವಂತವಾಗಿರಿಸಿಕೊಳ್ಳಲು ಪರಸ್ಪರ ಪ್ರೀತಿಯನ್ನು ಹಂಚೋಣ. ಪರಿಸ್ಥಿತಿ ಕೈ ಮೀರುವ ಮೊದಲೇ, ಎಚ್ಚೆತ್ತುಕೊಳ್ಳೋಣ.
ಅಂದಹಾಗೆ, ಕೊನೆಹನಿ: ನನ್ನ ಸ್ನೇಹಿತೆಯೊಬ್ಬಳು, ತುಂಬು ಗರ್ಭಿಣಿ. ಒಂದಷ್ಟು ಚೇಡಿಸಿ, ನಗಿಸಿ, ನಿನಗ್ಯಾವ ಮಗು ಬೇಕು ಎಂದು ಕೇಳಿದರೆ, ತುಂಬ ನಿರುತ್ಸಾಹದಿಂದ “ಯಾವಮಗುವಾದರೇನು. ಎಲ್ಲವೂ ಒಂದೇ” ಎಂದು ಉತ್ತರಕೊಟ್ಟಳು. ಮರುಕ್ಷಣವೇ, “ಹೆಣ್ಣುಮಗುವಾದರೆ ಉತ್ತಮ, ಯಾಕೆಂದರೆ ಹೆಣ್ಣು ಮಕ್ಕಳಿಗೆ ಪ್ರೀತಿ, ಎಮೋಷನ್ಸ್ ಜಾಸ್ತಿ” ಎಂದಳು. ಅವಳ ಎರಡು ಮಾತನ್ನೂ ಸುಳ್ಳಾಗಿಸುವ ಆ ಎರಡು ಸಿನೆಮಾಗಳು ನನ್ನ ಮನಸ್ಸನ್ನು ಮತ್ತೆ ಹಾದುನಿಂತು ಕಾಡಿತು!

‍ಲೇಖಕರು G

April 5, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಪು.ಸೂ.ಲಕ್ಷ್ಮೀನಾರಾಯಣ ರಾವ್

    ಹಣವು ನಮ್ಮೆಲ್ಲ ಬಯಕೆಗಳನ್ನು ಈಡೇರಿಸುತ್ತದೆ ಎಂಬ ಭ್ರಮೆಯಲ್ಲಿ ಸಿಲುಕಿರುವ ಮಾನವ ಮತ್ತು ಜನರ ಈ ಭ್ರಮೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಉದ್ಯಮಪತಿಗಳು ಹಾಗು ಈ ಬಂಡವಾಳಶಾಹಿಗಳು ಹೇಳಿದಂತೆ ಕುಣಿಯುವ ಸರಕಾರಗಳು ಜೊತೆಗೆ ಸ್ವಲ್ಪ ಶ್ರಮಿಸಿದರೆ ಹಣ ಮಾಡಿಕೊಳ್ಳಬಹುದಾದ ಸಾಧ್ಯತೆ – ಹೀಗೆ ಇವೆಲ್ಲದರ ಪರಿಣಾಮವಾಗಿ ಇಂದು ನಾವು ನೈಜವಾದ ಬದುಕಿಗೆ ವಿಮಖರಾಗುತ್ತಿದ್ದೇವೆ. ಈ ದುಃಸ್ಥಿತಿಗೆ ಮೊದಲ ಬಲಿ ಇಂದಿನ ಯುವಪೀಳಿಗೆ. ಅಂದರೆ ಇದು ಭವಿಷ್ಯಸೂಚಕವೂ ಆಗಿದೆ.
    ಇಂತಹ ಗಂಭೀರ ಸಮಸ್ಯೆಯೊಂದನ್ನು ಕುರಿತು ತಲೆಕೆಡಿಸಿಕೊಂಡಿರುವುದಕ್ಕಾಗಿ ಅಭಿನಂದನೆಗಳು.

    ಪ್ರತಿಕ್ರಿಯೆ
  2. v sagar

    Uffff….nimma sogasada baravanige vodi tumba khushi aytu. Yeshtondu vastavanna kannige katto haage vivarisiddira, manassige muda niditu!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: