ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ಕಾಡುವ ಅಮ್ಮನ ನೆನಪು..

-ನಾ ದಿವಾಕರ 

ಕಳೆದುಕೊಳ್ಳುವುದೂ ಬದುಕಿನ ಭಾಗವಾದಾಗ ಅಮ್ಮ ಹೆಚ್ಚು ಹೆಚ್ಚು ಕಾಡುತ್ತಾಳೆ 

36 ವಸಂತಗಳು ಸಂದು ಹೋದವು. (05 ಜೂನ್‌ 1990). ಈ ದಿನ ನನ್ನನ್ನು ಕಾಡದೆ ಬಿಡುತ್ತಿಲ್ಲ. ಮತ್ತೆ ಮತ್ತೆ ಮನಸ್ಸು ಹಿಂದೆ ಸರಿಯುತ್ತದೆ. ಸಂತ ಜಾನ್ಸ್‌ ಆಸ್ಪತ್ರೆ,  ವಿಲ್ಸನ್‌ ಗಾರ್ಡನ್‌, ಚಿತಾಗಾರ ಎಲ್ಲವೂ ಕಣ್ಣಮುಂದೆ ಹಾದುಹೋಗುವಾಗ ಸಂಜೆಯ ತಂಪು ಹೊತ್ತಿನಲ್ಲೂ ಕಣ್ಣುಗಳು ಕೆಂಪಾಗುತ್ತವೆ, ಅವ್ಯಕ್ತ ವೇದನೆಯ ಬೆಂಕಿ ಎದೆಯನ್ನು ಸುಡುತ್ತಿರುವಂತೆ ಭಾಸವಾಗುತ್ತದೆ. ಇದು ಸಹಜ ಅಲ್ಲವೇ ಅಮ್ಮಾ ! ಈ ಒಳಬೇಗೆಯನ್ನು ತಣಿಸಲು ಏನು ಮಾಡಬೇಕು ? ನಿನ್ನೊಡನೆ ಇದ್ದ ಕ್ಷಣಗಳನ್ನು ಮೆಲುಕು ಹಾಕೋಣವೆಂದರೆ, ಹಂಚಿಕೊಳ್ಳಲು ಎಂಟರಲ್ಲಿ ಇರುವುದು ಒಬ್ಬಳೇ ಸೋದರಿ. ಮತ್ತೊಬ್ಬಳು ಇದ್ದಾಳೆ ಅಷ್ಟೆ ನಿನ್ನ ಎಂಟು ಕುಡಿಗಳಲ್ಲಿ ಐದು ನಂದಿಹೋಗಿವೆ. ಒಬ್ಬೊಬ್ಬರೇ ನೆನಪಾಗುವಾಗ ಒಳಮನಸ್ಸು ನಿನ್ನ ಬಳಿಗೇ ಸಾಗುತ್ತದೆ.

ಇತ್ತೀಚೆಗೆ ನಿರ್ಗಮಿಸಿದವಳು, ಅವಳ ಬಾಲ್ಯದಲ್ಲಿ ನೀನು ಕರ್ಪಿ (ಬಹುಶಃ ತುಸು ಕಪ್ಪಗಿದ್ದ ಕಾರಣಕ್ಕೆ) ಎಂದೇ ಕರೆಯುತ್ತಿದ್ದ ಅಕ್ಕ, ಬೇಬಿ (ಮಂಜುಳ). ಅವಳ ಸಾವು ತೀವ್ರವಾಗಿ ಬಾಧಿಸುತ್ತೆ ಯಾಕೆ ಗೊತ್ತೇ ಅಮ್ಮಾ, ಅವಳು ಎರಡು ಬಾರಿ ಸತ್ತಳು. ಎರಡು-ಮೂರು ವರ್ಷಗಳ ಕಾಲ ಅಜ್ಞಾತದ ಸೀತೆಯ ಹಾಗೆ, ವೃದ್ಧಾಶ್ರಮ ಎಂಬ (ಅ)ಶೋಕವನದಲ್ಲಿದ್ದಳು. ಅಲ್ಲಿ ರಾವಣನೇನೂ ಇರಲಿಲ್ಲ. ಅಲ್ಲಿಗೆ ನೂಕಿದ ಹೆತ್ತ ಮಗನೇ ಸಾಕಿತ್ತಲ್ಲವೇ ? ನಮ್ಮ ಪಾಲಿಗೆ ಎಟುಕದ ಜೀವ ಆಗಿಬಿಟ್ಟಳು. ಕೊನೆಗೂ ಮಾರ್ಚ್‌  22ಕ್ಕೆ ಸದ್ದಿಲ್ಲದೆ ಉಸಿರು ನಿಲ್ಲಿಸಿಬಿಟ್ಟಳು. ಕಾಶಿಯ ಗಂಗೆ ಅವಳ ಅಸ್ಥಿಯಿಂದ ಇನ್ನೂ ನೊಂದಿರಬಹುದು. ಏನೋ ಒಟ್ಟಿನಲ್ಲಿ ನೀನು ಕರೂ, ಮಗೂ ಎಂದು ಕರೆಯುತ್ತಿದ್ದ ಹಾಗೆ ಅಮ್ಮೀ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಜೀವ ಈಗ ಇಲ್ಲ.

ನಿನ್ನನ್ನು ಹಿಂಬಾಲಿಸಿದ ಜೀವಗಳೆಷ್ಟೋ !

ನೀನು ಹೊರಟ ಮೇಲೆ ಅದೆಷ್ಟು ಪ್ರೀತಿಸುವ ಜೀವಗಳು ಹೊರಟುಹೋದವು ಅಮ್ಮಾ. ನೀನು ಮಗನಂತೆಯೇ ಕಾಣುತ್ತಿದ್ದ ಬಾಲ್ಯದ ಗೆಳೆಯ ಶ್ರೀಧರ (2005), ಲವ-ಕುಶರನ್ನು ನೆನಪಿಸುವಂತೆ ನನ್ನೊಡನೆ ಸಾಗಿದ ಅಣ್ನ ನಾಗಿ (ನಾಗರಾಜ-2001), ಒಂದು ಹಂತದಲ್ಲಿ ಸೂರಿಲ್ಲದಾಗ ಆಸರೆ ನೀಡಿದ ನಿನ್ನ ಅಳಿಯ ಸುಬ್ಬರಾವ್‌ (2001), ದೊಡ್ಡಣ್ಣ ಮಂಜು (2009) ಮತ್ತೊಬ್ಬ ಸೋದರ ರವಿ (2021) ನಿನ್ನ ನಂತರ ಅಮ್ಮನಾಗಿಯೇ ಇದ್ದ ದೊಡ್ಡಕ್ಕ ವಿಜಯ (2016) ಈಗ ಮತ್ತೋರ್ವ ಸೋದರಿ ಬೇಬಿ (ಮಂಜುಳ-ನಿನ್ನ ಕರ್ಪಿ 2026)  ಮತ್ತು ನನ್ನನ್ನು ಬಹಿಷ್ಕೃತನಾಗಿಯೇ ನೋಡಿದ ಅವಳ ಪತಿ (2024) ಹೀಗೆ ನಿನ್ನೊಡಲು ಅಮೂರ್ತವಾಗಿದ್ದರೂ ಸತತವಾಗಿ ಖಾಲಿಯಾಗುತ್ತಲೇ ಇದೆ. ಇದೇ ಜೀವನ ಅಲ್ಲವೇ ಅಮ್ಮಾ !

ಹೋಗುವವರಿಗೆ ಸಾವೊಂದೇ ಕಾಡುತ್ತದೆ. ಬದುಕುಳಿದವರಿಗೆ ನೋವು, ದುಃಖ, ವೇದನೆ, ತಳಮಳ ಏನೆಲ್ಲಾ ಕಾಡುತ್ತದೆ ಅಲ್ಲವೇನಮ್ಮಾ ?  ಹೀಗೆ ಕಾಡಿಸಿದವರ ಸಂಖ್ಯೆಯೇನೂ ಕಡಿಮೆ ಇಲ್ಲ. ಕುಟುಂಬದಲ್ಲಿ ಕಡೆಯ ಶ್ರೇಣಿಯಲ್ಲಿ ಜನಿಸಿದಾಗ ಈ ದುರಂತಗಳ ಸಾಲನ್ನು ನೋಡುವುದೂ ಒಂದು ಶಿಕ್ಷೆಯೇನೋ ಎನಿಸುತ್ತದೆ ಅಮ್ಮಾ. ಬದುಕು ಇಷ್ಟೇ ಎಂದು ಆಧ್ಯಾತ್ಮಿಕ ಭಾವದಲ್ಲಿ ನಾನಂತೂ ಯೋಚಿಸುವುದಿಲ್ಲ. ಎಷ್ಟೆಂದು ತಾಳಲು ಸಾಧ್ಯ ಹೇಳಮ್ಮಾ ? ಇದು ನಿಲ್ಲುವುದಿಲ್ಲ ಎಂದೂ ಗೊತ್ತಿದೆ. ಆದರೂ ಕಳೆದುಹೋದವರು ನೆನಪಾದಾಗ ನಿನ್ನ ನೆನಪೂ ಕಾಡುತ್ತಾ ಮನದಾಳದ ಬೇಗೆಗೆ  ಮತ್ತಷ್ಟು ಶಾಖ ನೀಡುತ್ತದೆ. ನಿನಗೆ ಹಿತಕರ ಬದುಕು ಕಲ್ಪಿಸಲು ನನ್ನಿಂದ ಸಾಧ್ಯವಾದ ಕೆಲವೇ ವರ್ಷಗಳಲ್ಲಿ ಮೂಡಿದ ಅನಿರ್ವಚನೀಯ ಸಂಬಂಧಗಳಲ್ಲಿ ದಾವಣಗೆರೆಯ ಎರಡು ಕುಟುಂಬಗಳು. ಹೆತ್ತೊಡಲು ಅಲ್ಲದಿದ್ದರೂ, ಭಾವನಾತ್ಮಕ ಅಮ್ಮಂದಿರಾದ ಅತ್ತಿಗೆಯರು ಮತ್ತು ಅವರ ಬಾಳಸಂಗಾತಿಗಳಾದ ಸೀತಣ್ಣ (ಸೀತಾರಾಮರಾವ್)‌ ಮತ್ತು ನಾಗರಾಜರಾವ್.‌ 

ಅಕ್ಷರಶಃ ಸೋದರ ಭಾವದಿಂದ ಕೆಲವೇ ವರ್ಷಗಳು ಒಡನಾಡಿದ ಈ ಎರಡೂ ಜೀವಗಳು ಸದ್ದಿಲ್ಲದೆ ನಿರ್ಗಮಿಸಿಬಿಟ್ಟವು. ದಶಕಗಳು ಕಳೆದರೂ ಮರೆಯಲಾಗದ ಜೀವಗಳಲ್ಲವೇ ? ಈ ಪಟ್ಟಿ ಬೆಳೆಯುತ್ತಲೇ ಹೋಗಬಹುದು. ಮರೆಯಲಾಗದ ನಾಲ್ಕು ಜೀವಗಳನ್ನು ನೆನಪಿಸಿಬಿಡುತ್ತೇನೆ. ನಮ್ಮ ಸಂಕಷ್ಟದ ದಿನಗಳಲ್ಲಿ ಸದ್ದಿಲ್ಲದೆ, ಸದ್ದುಮಾಡದೆ ಹೆಗಲು ನೀಡಿದ ಅಮ್ಮ-ಮಾಮ (ಜಯಮ್ಮ -2011, ಕೃಷ್ಣಮೂರ್ತಿಗಳು 2011) ಮತ್ತು ಮನೆಯ ಮಕ್ಕಳೇ ಆಗಿದ್ದ ಅವರ ಇಬ್ಬರು ಪುತ್ರರು ಚಂದ್ರು (2025) ಮತ್ತು ಗುರು (2023), ನಾನು ಕಳೆದುಕೊಂಡ ಆತ್ಮೀಯರ ಸಾಲಿನಲ್ಲಿದ್ದಾರೆ. ಹಾಗೆಯೇ ನನ್ನ ಪಯಣದಲ್ಲಿ ನಾ ಕಂಡಂತಹ ಮೇರು ವ್ಯಕ್ತಿತ್ವದ ಅತ್ತೆ-ಮಾವ (ಮಡದಿಯ ತಂದೆ ತಾಯಿ 2009-2010) ಹೆತ್ತೊಡಲಿನಷ್ಟೆ ಸ್ಮರಣಾರ್ಹರು. 

ಈ ಕುಟುಂಬ ಬಂಧನಗಳಿಂದಾಚೆ ನೋಡಿದಾಗ ನಿನಗೆ ಹೆತ್ತ ಮಗನಿಗಿಂತಲೂ ಪ್ರೀತಿಪಾತ್ರನಾಗಿದ್ದ ಸೀನ (ಶ್ರೀನಿವಾಸ) ಅವರ ಸೋದರ ಅನಂತಸುಬ್ಬರಾವ್‌ (2026) ಈ ಅಗಲಿದವರ ಸಾಲಿನಲ್ಲಿದ್ದಾರೆ. ನಿನಗೆ ಪರಿಚಯವೇ ಇಲ್ಲದೆಯೂ ನಿನ್ನ ಈ ಮಗುವಿಗೆ ಸೋದರನಂತಿದ್ದ ಡಾ. ಲಕ್ಷ್ಮೀನಾರಾಯಣ್ (2024)‌ ಈಗ ಅಮೂರ್ತ ರೂಪದಲ್ಲಿ ನಿನ್ನ ಜೊತೆ ಸೇರಿದ್ದಾರೆ. ಗೆಳತಿಯೊಬ್ಬರು (ಡಾ. ಸುಧಾ) ಬರೆದ ಪುಟ್ಕತೆಯಲ್ಲಿ ಒಂದು ಸಾಲು ಹೀಗಿದೆ : “ ಎಲ್ಲಿ ನಿಜವಾದ ಬಾಂಧವ್ಯ ಇರುತ್ತದೋ ಆ ಸಂಬಂಧ ದೊಡ್ಡದು ಕಂದಾ ”. ಎಷ್ಟು ಸತ್ಯ ಅಲ್ಲವೇನಮ್ಮಾ ? ಈಗ ಕಳೆದುಕೊಂಡವರ ನೆನಪಿನ ದುಃಖದ ಹೊಂಡದಿಂದ ಸ್ವಲ್ಪ ಹೊತ್ತು ಹೊರಬರುತ್ತೇನೆ. ನಿನ್ನ ಹರುಷದ ದಿನಗಳತ್ತ ಹೊರಳಿ ನೋಡೋಣವೇನಮ್ಮಾ ?

ಸಂಕಟ-ಹರುಷದ ದಿನಗಳ ಮೆಲುಕು

ನನಗೆ ನೆನಪಿರುವಂತೆ ನಾನು ಬಾಲ್ಯ ಕಳೆಯುವ ಹೊತ್ತಿಗೇ ನಿನ್ನ ಹರುಷದ ಕ್ಷಣಗಳ ಅಂತ್ಯ ಆರಂಭವಾಗಿತ್ತು. ಎಂದೂ ಮುಖಭಾವದಲ್ಲಿ ಕಾಣದಿದ್ದ ನಿನ್ನ ಅಂತರಂಗದ ನೋವು, ಸಂಕಟಗಳು ಅರ್ಥವಾಗುತ್ತಿದ್ದುದು ಒಮ್ಮೊಮ್ಮೆ ಮಾತ್ರ. ಉಪ್ಪರಿಗೆಯ ಸುಖದಿಂದ ಪಾತಾಳದ ಸಂಕಟಗಳಿಗೆ ಒಮ್ಮೆಲೇ ಕುಸಿದಾಗ ಇದು ನಿಧಾನವಾಗಿ ಅರ್ಥವಾಗತೊಡಗಿತ್ತು. ನಿನಗೂ ಕಷ್ಟದ ದಿನಗಳಿವೆ ಎಂದು ಸ್ಪಷ್ಟವಾಗಿ ಅರಿವಾದದ್ದು ನೀನು ಕತ್ತಿನಲ್ಲಿದ್ದ ಚಿನ್ನದ ತಾಳಿ ಸರವನ್ನು ಮಾರಲು ನಿರ್ಧರಿಸಿದಾಗ. ಕಿರಿಯನಾದರೂ ಆ ಕೆಲಸ ಮಾಡಿದವನು ನಾನೇ. ದುರದೃಷ್ಟ ಎನ್ನಲೇ ಅಥವಾ ಸಮಯದ ಅನಿವಾರ್ಯತೆ ಎನ್ನಲೇ ? ಅದನ್ನು ಖರೀದಿಸಿದವರು ನನ್ನ ಪ್ರಾಥಮಿಕ ಶಾಲಾ ಶಿಕ್ಷಕಿಯೇ ಆಗಿದ್ದುದು ಒಂದು ರೀತಿಯ ವಿಡಂಬನೆ ಎಂದೇ ಈಗಲೂ ಭಾಸವಾಗುತ್ತದೆ. 

ಇರಲಿ ಈ ಕ್ಷಣಗಳು ನಿನ್ನ ಬದುಕನ್ನು ಪಲ್ಲಟಗೊಳಿಸಿದ ಮೇಲೆ ನೀನು ಹಿತಕರ ಬದುಕನ್ನು ಕಾಣಲು ದಶಕಕ್ಕೂ ಹೆಚ್ಚು ಕಾಲ ಬೇಕಾಯಿತು. 1983-84ರಲ್ಲಿ ನನಗೆ ಮತ್ತು ಸೋದರನಿಗೆ ನೌಕರಿ ದೊರೆತ ನಂತರವೇ. ನಿನ್ನ ಹರುಷದ ದಿನಗಳು ತೆರೆದುಕೊಳ್ಳಲಾರಂಭಿಸಿದ್ದು ಆಗಲೇ. ನಿನಗೆ ಸುಖದ ಬದುಕು ಕಲ್ಪಿಸಿದ್ದೆ ಎಂದರೆ ತಪ್ಪಾಗುತ್ತದೆ ಆದರೆ ಹಿತಕರ ಜೀವನದ ವಾತಾವರಣವನ್ನು ಕಲ್ಪಿಸಿದ್ದೆ ಎಂದು ಎದೆಮುಟ್ಟಿ ಹೇಳಬಲ್ಲೆ. ಇದು ಸಾಧ್ಯವಾಗಿದ್ದು ನಾವು ದಾವಣಗೆರೆಯಲ್ಲಿ ನೆಲೆಸಿದ ನಂತರ. ನಾಲ್ಕೈದು ವರ್ಷಗಳ ಎಂತಹ ಸುಂದರ ದಿನಗಳವು. “ ಎಲ್ಲಿ ನಿಜವಾದ ಬಾಂಧವ್ಯ ಇರುತ್ತದೋ ಆ ಸಂಬಂಧ ದೊಡ್ಡದು ಕಂದಾ ”. ಎಂಬ ಗೆಳತಿಯ ಕಥಾಭಿವ್ಯಕ್ತಿ ಸಾಕಾರಗೊಂಡಿದ್ದು ಆ ದಿನಗಳಲ್ಲಿ, ಆ ಸುಂದರ ವಾತಾವರಣದಲ್ಲಿ.

ಪರಿಚಯ, ಊರು, ವಾತಾವರಣ ಎಲ್ಲವೂ ಹೊಸತು. ಆದರೆ ಅಲ್ಲಿ ನಮ್ಮ ನಡುವೆ ಇದ್ದು, ನಮ್ಮೊಳಗೊಂದಾದ ಎರಡು ಕುಟುಂಬಗಳು ಮಾತ್ರ ಹುಟ್ಟಿನಿಂದಲೇ ಪರಿಚಿತರು ಎಂಬ ಭಾವನೆಯನ್ನು ಬೆಳೆಸಿಬಿಟ್ಟವು. ಈಗ ನಮ್ಮೊಡನಿಲ್ಲದ ನಾಗರಾಜರಾವ್‌ ಮತ್ತು ಸೀತಾರಾಮರಾವ್‌ ಸೋದರರು ಮತ್ತು ಅವರ ಬಾಳಸಂಗಾತಿಗಳಾದ ಚಂಪಾ ಮತ್ತು ರತ್ಮಮ್ಮ, ಅಕ್ಷರಶಃ ನನಗೆ ಅಣ್ಣ ಅತ್ತಿಗೆಯರಂತೆಯೇ ಕಂಡಿದ್ದರು. ಹಾಗೆಯೇ ನಮ್ಮ ಬಾಂಧವ್ಯವೂ ಬೆಳೆದಿತ್ತು. ಅವರಿಬ್ಬರಲ್ಲಿ ನಾನು ತಾಯ್ಮಮತೆಯನ್ನು ಕಂಡಿದ್ದಂತೂ ಸತ್ಯ. ಆ ಸೋದರರಿಬ್ಬರ ಪ್ರೀತಿ ವಾತ್ಸಲ್ಯಗಳು ಅವರ ಇಡೀ ಕುಟುಂಬವನ್ನು ನಮಗೆ ಪರಿಚಯಿಸಿದ್ದವು.

ಮಕ್ಕಳ ಸುಂದರ ಲೋಕದಲ್ಲಿ 

ಏಳೆಂಟು ಕುಟುಂಬಗಳು ಮತ್ತು ಅವರ ಹಿರಿಯ ತಂದೆ ತಾಯಿಯರು, ದೂರದ ಊರುಗಳಲ್ಲಿದ್ದ ಅವರ ಸೋದರ, ಸೋದರಿಯರು, ಅವರ ಮಕ್ಕಳು ಹೀಗೆ ನಮ್ಮ ಬಾಂಧವ್ಯದ ಸರಪಳಿ ಕುಂಬಳದ ಬಳ್ಳಿಯಂತೆ ಹಬ್ಬುತ್ತಾ, ಬೆಳೆಯುತ್ತಾ ಹೋಗಿದ್ದು , ನಿನ್ನ ಮನಸ್ಸಿಗೆ ಮುದ ನೀಡಿತ್ತೆನ್ನುವುದು ದಿಟ. ಈ ಬಾಂಧವ್ಯದ ತಂತುಗಳ ನಡುವೆ ಎರಡು ಕುಟುಂಬಗಳಲ್ಲಿದ್ದ ಸುಂದರ ಮುದ್ದು ಮಕ್ಕಳ ಸನಿಹ ನಮಗೆ, ವಿಶೇಷವಾಗಿ ನಿನಗೆ ನೀಡಿದ ಸಂತಸದ ಸ್ಪರ್ಶವನ್ನು ಮರೆಯುವುದಾದರೂ ಹೇಗಮ್ಮ. ರೇಖಾ, ರಷ್ಮಿ, ರಜನಿ, ಅರ್ಚನ, ಅರವಿಂದ ಈ ಮಕ್ಕಳು ಮತ್ತು ಅವರ ಓರಿಗೆಯ ಕಸಿನ್‌ಗಳು (ಈಗ ಕುಟುಂಬಸ್ಥರಾಗಿ ದೆಹಲಿ ಬೆಂಗಳೂರು ಮುಂಬೈ ಹೀಗೆ ಚದುರಿಹೋಗಿದ್ದಾರೆ) ನಮ್ಮ ಮನೆಯ ಮಕ್ಕಳಂತೆಯೇ ಒಂದಾಗಿ ನೀಡಿದ ಬಾಂಧವ್ಯದ ಸ್ಪರ್ಶವನ್ನು ಹೇಗೆ ಬಣ್ಣಿಸುವುದಮ್ಮಾ ?

ನನ್ನನ್ನು , ಸೋದರನನ್ನು ಮಾಮಾಶ್ರೀ ಎಂದು ಕರೆಯುತ್ತಾ, ನಿನ್ನನ್ನು ಅಜ್ಜಿ ಅಜ್ಜಿ ಎಂದು ಕರೆಯುತ್ತಾ ಈ ಮಕ್ಕಳು ನಮ್ಮೊಡನೆ ಕಳೆದ ಆ ಕ್ಷಣಗಳು ನಿನಗೆ ಒಂದು ಹಿತಕರ ವಾತಾವರಣವನ್ನು ಸೃಷ್ಟಿಸಿತ್ತು. ಈ ಮಕ್ಕಳ ಪ್ರೀತಿ ವಾತ್ಸಲ್ಯಗಳು (ಈಗಲೂ ಅಚ್ಚಳಿಯದೆ ಉಳಿದಿದೆ) ನಿನ್ನೊಳಗೆ ಒಂದು ಹೊಸ ಚೈತನ್ಯವನ್ನು ಹುಟ್ಟುಹಾಕಿದ್ದಂತೂ ಹೌದು. ಆ ಎರಡು ಕುಟುಂಬಗಳು ಮತ್ತು ಅವರ ಸಂಬಂಧಿ ಕುಟುಂಬಗಳು ಎಷ್ಟೋ ವರ್ಷಗಳ ಬಾಂಧವ್ಯವನ್ನು ಸಂಕೇತಿಸುವ ರೀತಿಯಲ್ಲಿ ನಮ್ಮ ನಡುವೆ ಬೆರೆತುಹೋಗಿದ್ದವು. ನಿನ್ನ ಹೃದಯದಲ್ಲಿ ಈ ಪ್ರೀತಿ ವಾತ್ಸಲ್ಯಗಳು ಎಷ್ಟು ಆಳವಾಗಿದ್ದವು ಎನ್ನುವುದಕ್ಕೆ ಸಾಕ್ಷಿ, ನಾವು 1988ರಲ್ಲಿ ದಾವಣಗೆರೆಯನ್ನು ಬಿಟ್ಟು ಬರುವಾಗ ನೀನಾಡಿದ ಮಾತುಗಳು. “ ಯಾವ ನೆಂಟಸ್ತನವೂ ಇಲ್ಲದಿದ್ದರೂ ಇಷ್ಟೊಂದು ಪ್ರೀತಿ ವಾತ್ಸಲ್ಯದಿಂದ ನಿನ್ನನ್ನು ಕಾಣುತ್ತಾರೆ ಅಲ್ಲವೇ ಮಗು, ಇಂತಹ ಒಡನಾಟ, ಮಮತೆ, ಬಾಂಧವ್ಯವನ್ನು ಬಿಟ್ಟು ಆ ಚಂಡಾಲನಿಗಾಗಿ ಯಾಕೆ ಊರು ಬಿಟ್ಟು ಹೋಗ್ಬೇಕು, ಒಮ್ಮೆ ಯೋಚಿಸಪ್ಪಾ ” ಎಂಬ ನಿನ್ನ ಸಲಹೆಯನ್ನು ನಾನು ಸೋದರ ಪ್ರೀತಿಗೆ ಕಟ್ಟುಬಿದ್ದು ತಿರಸ್ಕರಿಸಿದ್ದೆ.

ವಿದಾಯದ ಮುಂಚಿನ ದಿನಗಳ ನೆನಪು

ಅನಂತರದ ದಿನಗಳ ಕತೆಯೇ ಬೇರೆ. ನಿನ್ನ ಮಾತು ನಿಜವಾಗಿದ್ದಂತೂ ಹೌದು. ಈಗಲೂ ಪಶ್ಚಾತ್ತಾಪ ಪಡುವಂತಹ ನಿರ್ಧಾರ ಅದು. ಬದುಕಿನ ತಿರುವುಗಳೇ ಹಾಗೆ ಅಲ್ಲವೇನಮ್ಮಾ ? ಎತ್ತೆತ್ತಲೋ ಕರೆದೊಯ್ದುಬಿಡುತ್ತದೆ. ನನ್ನ ದುರದೃಷ್ಟ ಅಲ್ಲಿಂದ ಹಿಂತಿರುಗಿದ ಮೇಲೆ ನೀನು ಏನೆಲ್ಲಾ ಕಳೆದುಕೊಂಡೆ. ಆ ನಗು, ಮಕ್ಕಳ ಒಡನಾಟದಲ್ಲಿದ್ದ ಸುಖಾನುಭವ, ಹಿತಕರ ವಾತಾವರಣ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಆರೋಗ್ಯ. ಎರಡು ವರ್ಷಗಳಲ್ಲೇ ನಿನಗೆ ವಿದಾಯದ ಕ್ಷಣ ಬಂದುಬಿಟ್ಟಿತು. ದೈಹಿಕವಾಗಿ ನಿನ್ನನ್ನು ಸೆಳೆದೊಯ್ದಿದ್ದು ಮಧುಮೇಹವೇ ಸರಿ ಆದರೆ ಮಾನಸಿಕವಾಗಿ ಆ ಹಿಂಸೆ, ಒಳಬೇಗುದಿ, ನೋವು, ಅಪಮಾನ ಯಾತನೆ ಇತ್ಯಾದಿ. ಮಕ್ಕಳನ್ನು ಮಾಪನ ಮಾಡುವ ಶಕ್ತಿ ಇರುವುದು ತಾಯಿಗೆ ಮಾತ್ರ ಎಂಬ ಸತ್ಯವನ್ನು ನೀನು ನಿರೂಪಿಸಿಬಿಟ್ಟೆ. 

ಆದರೆ ಸಂಬಂಧ, ಕುಟುಂಬ, ಬಾಂಧವ್ಯ ಈ ಮೌಲ್ಯಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಮಾನ್ಯತೆ ನೀಡುತ್ತಾ ನಾನು ನಿನ್ನ ಎಚ್ಚರಿಕೆಯ ಮಾತುಗಳನ್ನೂ ಧಿಕ್ಕರಿಸಿ ನಡೆದುಬಿಟ್ಟೆ.  ಈ ರೀತಿಯ ಪ್ರಸಂಗಗಳು ಹಲವಾರು. ಈಗ ನೆನಪು ಮತ್ತು ಪರಿತಾಪವಷ್ಟೇ ಸಾಧ್ಯ. ಆದರೆ ನಿನ್ನ ಅಗಲಿಕೆಯ ದಿನ ಇವೆಲ್ಲವೂ ಸುರುಳಿಯಂತೆ ಮನಸ್ಸಿನಲ್ಲಿ ಸುತ್ತಲಾರಂಭಿಸುತ್ತವೆ.  ʼನಾನು ಅಮ್ಮನ ಮಾತು ಕೇಳಬೇಕಿತ್ತುʼ ಎಂದೆನಿಸಿದಾಗೆಲ್ಲಾ ಆ ನಿನ್ನ ಎಚ್ಚರಿಕೆಯ ನುಡಿಗಳು ನುಸುಳಿ ಹೋಗುತ್ತವೆ. ಅದು ಸುಮ್ಮನೆ ಹೋಗುವುದಿಲ್ಲ ನಡುವೆ ನಿಂತು, ಕಣ್ಣುಗಳಲ್ಲಿ ಒಂದೆರಡು ಹನಿಗಳನ್ನು ಮೂಡಿಸಿ ಮರೆಯಾಗುತ್ತವೆ. ಕೆನ್ನೆಗಳಿಂದ ಅಂಗೈಗೆ ಜಾರುವ ಈ ಕಂಬನಿ ಹನಿಗಳನ್ನು ದಿಟ್ಟಿಸಿದಾಗ ಅಲ್ಲಿ ನಿನ್ನ ನಗುಮೊಗದ ದರ್ಶನವಾಗುತ್ತದೆ. 

ಅದೇ ಸಾರ್ಥಕತೆ. ಅದೇ ನಿನಗೆ ನಾನು ನೀಡುತ್ತಾ ಬಂದಿರುವ, ನೀಡುವ ತರ್ಪಣ. ಅಶ್ರು ತರ್ಪಣ.

‍ಲೇಖಕರು Admin

5 June, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading