ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ – ವಿದಾಯಕ್ಕಿಂತ ಅಲ್ಪವಿರಾಮವೆನ್ನಬಹುದೇನೋ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.


ಶ್ರೀನಿವಾಸ ಪ್ರಭು ಅವರ ಬದುಕಿನ ಮಹತ್ವದ ತಿರುವುಗಳು, ಕೌಟುಂಬಿಕ ಸಂಭ್ರಮ ಹಾಗೂ ಲಂಡನ್‌ನ ಹೊಸ ಬದುಕಿನ ಪಯಣದೊಂದಿಗೆ ಅವರ ಆತ್ಮೀಯ ಅಂಕಣ ಬರಹಕ್ಕೆ ಇಲ್ಲಿ ಭಾವುಕ ಅಲ್ಪವಿರಾಮ ಬಿದ್ದಿದೆ.

ರಂಗಭೂಮಿ, ಕಿರುತೆರೆಯ ಸಾರ್ಥಕ ಪಯಣದ ನಂತರ ಮಗಳ ಪ್ರೀತಿಯ ಹಠಕ್ಕೆ ಒಲಿದ ‘ಗ್ಲೋಬಲ್ ಟ್ಯಾಲೆಂಟ್ ವೀಸಾ’ ಅವರ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಕಲಾಭಿಮಾನಿಗಳ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿ, ಹೊಸ ಜಗತ್ತಿನ ಅನುಭವಗಳ ಮೂಟೆಯೊಂದಿಗೆ ಮರಳಿ ಬರುವ ಭರವಸೆಯಿತ್ತ ರಂಗಸಾಧಕನಿಗೆ ಪ್ರೀತಿಯ ಅಭಿನಂದನೆಗಳು.

ಅಂಕಣ 175

ಅನಿರುದ್ಧ ನಿಧಾನವಾಗಿ ಒಬ್ಬ ಸ್ವತಂತ್ರ—ಸಮರ್ಥ ಡಿ ಜೆ ಆಗಿ ರೂಪುಗೊಳ್ಳುತ್ತಿದ್ದ. ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಆ ವಲಯದಲ್ಲಿ ಒಳ್ಳೆಯ ಹೆಸರು ಗಳಿಸತೊಡಗಿದ್ದ. ಇದೇ ವೇಳೆಯಲ್ಲಿಯೇ ಗೆಳೆಯ ಗೌರವ್ ಸಿಯಾಲ್ ಜೊತೆಯಲ್ಲಿ ದೊಮ್ಮಲೂರಿನಲ್ಲಿ “EIGHTH NOTE OF MUSIC” ಎಂಬ ಸಂಗೀತಶಾಲೆಯನ್ನೂ ಆರಂಭಿಸಿದ್ದ. ಗಿಟಾರ್—ಕೀಬೋರ್ಡ್ ಹಾಗೂ ಡಿ ಜೆ ತರಗತಿಗಳನ್ನು ತಾನೇ ನಿರ್ವಹಿಸುವುದರ ಜೊತೆಗೆ ಶಾಲೆಯ ಪಠ್ಯಗಳನ್ನು ತಯಾರಿಸುವುದರಿಂದ ಮೊದಲುಗೊಂಡು ಶಾಲೆಯ ಪೂರ್ಣ ಉಸ್ತುವಾರಿ ಅವನದಾಗಿತ್ತು. ಅದಾಗ ಅವನಿಗೆ ಇಪ್ಪತ್ತಾರರ ಹರಯ.
ನಾವು ಆಗಾಗ್ಗೆ ಬೇಲೂರಿನ ಸಮೀಪ ಇರುವ ಸಿದ್ಧರಹಳ್ಳಿಯ ಬನಶಂಕರಿ ದೇವಸ್ಥಾನಕ್ಕೂ ಅಲ್ಲಿಯೇ ಮೂಡಿಗೆರೆಯ ಸಮೀಪದ ಗೋಣೀಬೀಡಿನ ಆದಿ ಸುಬ್ರಹ್ಮಣ್ಯ ದೇವಾಲಯಕ್ಕೂ ಹೋಗಿಬರುತ್ತಿದ್ದುದುಂಟು. ಬನಶಂಕರಿ ದೇಗುಲದ ಅರ್ಚಕ ದೇವರಾಜ ಭಟ್ಟರು ಹಾಗೂ ಗೋಣೀಬೀಡು ದೇಗುಲದ ಅರ್ಚಕರಾದ ಸುಬ್ರಹ್ಮಣ್ಯ ಭಟ್ಟರು ನಮಗೆ ಆತ್ಮೀಯರು. ಒಮ್ಮೆ ಹೀಗೇ ಬಿಡುವಿನ ಸಮಯದಲ್ಲಿ ಪ್ರವಾಸ ಹೊರಟು ಬೇಲೂರಿನಲ್ಲಿ ತಂಗಿ ಚೆನ್ನಕೇಶವನ ದರ್ಶನ ಪಡೆದು ದೇವಾಲಯವನ್ನು ಮತ್ತೊಮ್ಮೆ ಆಮೂಲಾಗ್ರವಾಗಿ ವೀಕ್ಷಿಸಿ ಅಲ್ಲಿನ ಕಲಾವೈಭವವನ್ನು ಕಣ್ತುಂಬಿಕೊಂಡು ಮರುದಿನ ಬನಶಂಕರಿ ದೇಗುಲಕ್ಕೆ ಹೋದೆವು. ದೇವರಾಜಭಟ್ಟರು ಪೂಜೆ ಅರ್ಚನೆಗಳನ್ನು ಸಾಂಗವಾಗಿ ನೆರವೇರಿಸಿ ತೆಂಗಿನಕಾಯಿಯನ್ನು ಒಡೆದವರೇ ಆಶ್ಚರ್ಯದಿಂದ ಉದ್ಗರಿಸಿದರು: ಪ್ರಭುಗಳೇ, ತೊಟ್ಟಿಲುಕಾಯಿ! ಮನೆಯಲ್ಲಿ ಶುಭಕಾರ್ಯ ನಡೆಯುತ್ತೆ. ಮದುವೆಗೆ ಸಿದ್ಧತೆ ಮಾಡಿಕೊಳ್ಳಿ!”. ಅವರ ಮಾತು ಕೇಳಿ ನಮಗೆ ಪರಮಾಶ್ಚರ್ಯವಾಗಿಹೋಯಿತು! ಲಂಡನ್ ನಲ್ಲಿದ್ದ ಮಗಳು ರಾಧಿಕಾ ಮದುವೆಯಾಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿ ವರ್ಷಗಳೇ ಕಳೆದಿದ್ದವು. ಮಗನ ಮದುವೆಯ ಬಗ್ಗೆ ಇನ್ನೂ ಯೋಚಿಸಲೂ ಆರಂಭಿಸಿರಲಿಲ್ಲ! ಆಗಷ್ಟೇ ನಿಧಾನವಾಗಿ ಬದುಕಿನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದ ಮಗನಿಗೆ ಇನ್ನೆರಡು ವರ್ಷಗಳ ನಂತರ ಮದುವೆ ಮಾಡುವುದೆಂಬುದು ನಮ್ಮ ಆಲೋಚನೆಯಾಗಿತ್ತು. ಹಾಗೆಂದು ದೇವರಾಜಭಟ್ಟರಿಗೂ ಹೇಳಿದರೆ ಅವರು ನಕ್ಕು,”ಅದೆಲ್ಲಾ ನನಗೆ ತಿಳಿಯದು ಪ್ರಭುಗಳೇ…ತಾಯಿ ನೀಡಿದ ಸೂಚನೆಯನ್ನು ನಾನು ನಿಮಗೆ ತಿಳಿಸಿದ್ದೇನೆ ಅಷ್ಟೇ” ಎಂದು ನಮ್ಮ ಪಕ್ಕದಲ್ಲೇ ಇದ್ದ ಅನಿರುದ್ಧನನ್ನು ದಿಟ್ಟಿಸಿ ನೋಡಿ ನಕ್ಕರು. ಅನಿರುದ್ಧ ಸುಮ್ಮನೇ ನೆಲ ನೋಡುತ್ತಾ ನಿಂತಿದ್ದ. ನಾನು ಆಸ್ತಿಕನೇ ಆದರೂ ಈ ಸೂಚನೆ ಸಂಕೇತಗಳನ್ನು ಅಷ್ಟು ಗಂಭೀರವಾಗಿ ಎಂದೂ ಪರಿಗಣಿಸಿದವನಲ್ಲ. ಹಾಗಾಗಿ ತೊಟ್ಟಿಲುಕಾಯಿ ಯಾಕೆ ಕಾಕತಾಳೀಯವೋ ಆಕಸ್ಮಿಕವೋ ಆಗಿರಬಾರದು ಎಂದುಕೊಂಡು ಆ ವಿಷಯವನ್ನು ಅಲ್ಲಿಯೇ ಮರೆತು ಮರಳಿ ಊರಿಗೆ ಹೊರಟೆವು. ದಾರಿಯುದ್ದಕ್ಕೂ ಅನಿರುದ್ಧ ಯಾಕೋ ತುಂಬಾ ಗಂಭೀರನಾಗಿದ್ದ. ಮಾತಿಲ್ಲ…ಕಥೆಯಿಲ್ಲ…ದೀರ್ಘಾಲೋಚನೆಯಲ್ಲಿ ಮುಳುಗಿಹೋಗಿದ್ದ. ಕಾಫಿಗೆಂದು ನಡುವೆ ನಿಲ್ಲಿಸಿದಾಗ ನಿಧಾನವಾಗಿ ಬಾಯ್ತೆರೆದ: “ನಿಮಗೊಂದು ವಿಷಯ ಹೇಳಬೇಕು…ದೇವರಾಜ ಗುರುಗಳು ಹೇಳಿದ್ದು ನಿಜ..ನಾನೊಂದು ಹುಡುಗೀನ ಇಷ್ಟಪಡ್ತಿದೀನಿ.. ನೀವೂ ನೋಡಿದೀರಿ…ಮನೇಗೂ ಬಂದಿದ್ಲು..ಕಾಮ್ಯಾ ಅಂತ..ನಾವಿಬ್ರೂ ಮದುವೆ ಆಗಬೇಕೂಂತಾನೂ ತೀರ್ಮಾನ ಮಾಡಿಕೊಂಡಿದೀವಿ”. ಮಗರಾಯನ ಮಾತು ಕೇಳಿ ನಾನೂ ರಂಜಿನಿಯೂ ದಂಗುಬಡಿದುಹೋದೆವು. ನಾವು ಎಂದೂ ಮನೆಯಲ್ಲಿ ಮಕ್ಕಳ ಮೇಲೆ ಯಾವ ತರಹದ ಒತ್ತಡವನ್ನೂ ಹಾಕಿದವರಲ್ಲ. ಸಂಪ್ರದಾಯಸ್ಥ ಕುಟುಂಬದಿಂದಲೇ ಬಂದವರಾದರೂ ಜಾತಿ ಒಳಜಾತಿ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಅದನ್ನು ಮಕ್ಕಳ ಮುಂದೆ ಹೇಳಿದ್ದೆವು ಕೂಡಾ. “ನೀವು ಪ್ರಾಪ್ತ ವಯಸ್ಕರಾದಾಗ ನಿಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳುವ ಹಕ್ಕು— ಸ್ವಾತಂತ್ರ್ಯ ನಿಮಗಿದೆ…ಆಯ್ಕೆ ಉತ್ತಮವಾಗಿದ್ದರೆ ಸಾಕು ಅಷ್ಟೇ! ನಿಮ್ಮ ಸಂಗಾತಿಯ ಜಾತಿ ಧರ್ಮಗಳಿಗಿಂತ ಅವರ ವ್ಯಕ್ತಿತ್ವ—ಸದಭಿರುಚಿ—ಮಾನವೀಯ ಗುಣಗಳು ನಮಗೆ ಮುಖ್ಯ” ಎಂದು ಸ್ಪಷ್ಟ ಪಡಿಸಿದ್ದೆವು. ಮಗಳು ‘ಮದುವೆಯೇ ಬೇಡ ‘ ಎಂದು ಖಡಾಖಂಡಿತವಾಗಿ ಘೋಷಿಸಿಯಾಗಿತ್ತಲ್ಲಾ…ಆದರೆ ಮಗರಾಯ ಇಷ್ಟು ಬೇಗ ಮದುವೆಯ ಪ್ರಸ್ತಾವನೆಯನ್ನು ಮುಂದಿಡುತ್ತಾನೆಂದು ಕನಸುಮನಸಿನಲ್ಲೂ ಎಣಿಸಿರಲಿಲ್ಲ! “ಭಲೇ ತೊಟ್ಟಿಲಕಾಯಿ ಮಹಿಮೆಯೇ” ಎಂದು ಅಚ್ಚರಿಪಡುತ್ತಾ, ಅನಿರುದ್ಧ ಪ್ರೇಮಚಕಿತನಾದ ಪರಿಯನ್ನು ಅವನಿಂದಲೇ ವಿವರವಾಗಿ ಕೇಳಿ ತಿಳಿದುಕೊಂಡೆವು. ಮೂಲತಃ ತೆಲುಗರಾದರೂ ಪ್ರಸಕ್ತ ಮುಂಬೈ ನಿವಾಸಿಗಳಾಗಿದ್ದ ಆನಂದಬಾಬು ಹಾಗೂ ರೇಣುಕಾ ದಂಪತಿಗಳ ಜ್ಯೇಷ್ಠ ಪುತ್ರಿ ಕಾಮ್ಯಾ. ಬೆಂಗಳೂರು ಹಾಗೂ ಅಹ್ಮದಾಬಾದ್ ಗಳಲ್ಲಿ ವ್ಯಾಸಂಗಮಾಡಿ ಡಿಜ಼ೈನಿಂಗ್ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಜಾಣ ಹುಡುಗಿ. ಗೆಳೆಯರ ಮೂಲಕ ಪರಿಚಿತರಾದ ಇವರಿಬ್ಬರೂ 2—3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ! ಅವರ ಮನೆಯವರಿಗೆ ಇನ್ನೂ ವಿಷಯ ತಿಳಿಸಿಲ್ಲ! “ತೊಟ್ಟಿಲಕಾಯಿ”ಯ ಮಧ್ಯಸ್ತಿಕೆ ಒದಗದಿದ್ದರೆ ಅನಿರುದ್ಧನೂ ತಕ್ಷಣಕ್ಕೆ ಬಾಯಿ ಬಿಡುತ್ತಿರಲಿಲ್ಲವೇನೋ! ಇರಲಿ. ಎರಡೂ ಕುಟುಂಬಗಳ ನಡುವೆ ಯಾವುದೇ ವಿಶೇಷ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರದೆ ಇಬ್ಬರೂ ಸಮಾನ ಮನಸ್ಕರೇ ಆದ್ದರಿಂದ ಯಾವುದೇ ತಕರಾರುಗಳಿಲ್ಲದೆ ಮದುವೆ ನಿಶ್ಚಯವಾಗಿಯೇ ಹೋಯಿತು. ಮುಂಬೈನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಆತ್ಮೀಯ ಬಂಧು ಮಿತ್ರರ ಸಮಕ್ಷಮದಲ್ಲಿ ಸೊಗಸಾಗಿ ನೆರವೇರಿತು. ಮದುವೆ ನಡೆದದ್ದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ. ಆಪ್ತ ವಾತಾವರಣದಲ್ಲಿ ಬಂಧುಮಿತ್ರರ ಸಮಕ್ಷಮದಲ್ಲಿ ವಿಶೇಷ ವೈಭವ ಆಡಂಬರಗಳಿಲ್ಲದೆ ಸರಳವಾಗಿ ಹಿತವಾಗಿ ಜನ ಮೆಚ್ಚುವಂತೆ ಅನಿರುದ್ಧ—ಕಾಮ್ಯಾ ರ ವಿವಾಹ ನೆರವೇರಿತು. ಎಲ್ಲಕ್ಕಿಂತ ವಿಶೇಷವೆಂದರೆ ಮಗಳು ರಾಧಿಕಾ ಹದಿನೈದು ದಿನಗಳ ಮಟ್ಟಿಗೆ ಬಿಡುವು ಮಾಡಿಕೊಂಡು ಬಂದು ಪ್ರೀತಿಯ ಸೋದರನ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿ ನಮ್ಮ ಸಂತಸವನ್ನು ನೂರ್ಮಡಿಗೊಳಿಸಿದಳು.ಮದುವೆಯ ಶುಭಕಾರ್ಯಗಳು ಮುಗಿದ ಒಂದು ವಾರದ ನಂತರ ಆನಂದಬಾಬು ಅವರು ಮುಂಬೈನಲ್ಲಿ ಅಲ್ಲಿನ ಅವರ ಸಹೋದ್ಯೋಗಿಗಳು ಹಾಗೂ ಮಿತ್ರರಿಗಾಗಿ ಒಂದು ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಾನು, ರಂಜಿನಿ ಹಾಗೂ ರಾಧಿಕಾ ಮುಂಬೈಗೆ ಪ್ರಯಾಣ ಬೆಳೆಸಿದೆವು. ಬೆಂಗಳೂರಿನಿಂದ ದೂರವಾಗಿ ಕೆಲವಾರು ವರ್ಷಗಳಿಂದ ಲಂಡನ್ ನಲ್ಲೆ ನೆಲೆಸಿದ್ದ ಮಗಳು ರಾಧಿಕಾಳಿಗೆ ಮರಳಿ ಇಲ್ಲಿಗೆ ಬಂದಾಗ ಇಲ್ಲಿನ ಹವಾಮಾನಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗಿ ವಿಪರೀತ ಜ್ವರ ಕಾಡತೊಡಗಿ ಮಲಗಿಯೇಬಿಟ್ಟಳು. ಎದ್ದು ಬರಲೂ ಸಾಧ್ಯವಾಗದಷ್ಟು ನಿತ್ರಾಣವಾಗಿ ಆರತಕ್ಷತೆಗೂ ಬರಲಾಗದಂತಾಗಿಹೋದ್ದರಿಂದ ವಿಧಿಯಿಲ್ಲದೇ ಅವಳನ್ನು ಹೋಟಲ್ ನಲ್ಲೇ ಬಿಟ್ಟು ನಾವಿಬ್ಬರೇ ಹೋಗಬೇಕಾಗಿ ಬಂದದ್ದೊಂದು ಬೇಸರದ ಸಂಗತಿಯಾಯಿತು. ಅದಾದ ಒಂದೆರಡು ದಿನಗಳಲ್ಲೇ ರಾಧಿಕೆ ಲಂಡನ್ ಗೆ ಹೊರಟು ನಿಂತಾಗ ತುಂಬಾ ಪಿಚ್ಚೆನ್ನಿಸಿಬಿಟ್ಟಿತು. ಮದುವೆಯ ಸಂಭ್ರಮದ ಗದ್ದಲ ಓಡಾಟಗಳ ನಡುವೆ ಮಗಳ ಜೊತೆ ಹೆಚ್ಚು ಸಮಯ ಕಳೆಯಲಾಗಲಿಲ್ಲವೆಂಬ ಬೇಸರ ತುಂಬಿಕೊಂಡರೂ ಈ ನೆಪದಲ್ಲಿ ಮಗಳನ್ನು ಒಮ್ಮೆ ನೋಡಲಾಯಿತಲ್ಲಾ ಎಂಬುದೇ ಸಮಾಧಾನದ ವಿಷಯವಾಯಿತು.


ಒಂದು ದಿನ ಗೆಳೆಯ ಸೂರಿಯಿಂದ ಕರೆ ಬಂತು: “ಒಂದು ವಿಶೇಷ ಪ್ರಯೋಗಾತ್ಮಕ ನಾಟಕವನ್ನು ಮಾಡಿಸುತ್ತಿದ್ದೇನೆ. ಸಂಗೀತ ಹಾಗೂ ನಾಟಕಗಳನ್ನು ವಿಶಿಷ್ಟವಾಗಿ ಬೆಸೆಯುವ ಪ್ರಯತ್ನ ಇದು. ಅಂತಾರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕರಾದ ಮೈಸೂರು ಮಂಜುನಾಥ್ ಅವರು ಸಂಗೀತ ವಿಭಾಗದ ಸಾರಥ್ಯ ವಹಿಸುತ್ತಿದ್ದಾರೆ. ನಾಟಕದ ವಿಭಾಗದ ಹೊಣೆ ನನ್ನದು..ಮುಖ್ಯ ಪಾತ್ರ ನಿನ್ನದು. ಮಾಡುತ್ತೀಯಾ? ಬಿಡುವಿದೆಯಾ?” ಎಂದ ಗೆಳೆಯ ಸೂರಿ. ಒಂದೊಳ್ಳೆಯ ರಂಗಪ್ರಯೋಗದಲ್ಲಿ ಭಾಗಿಯಾಗುವ ಅವಕಾಶವನ್ನು ಕೈಚೆಲ್ಲಲು ಮನಸ್ಸಾಗಲಿಲ್ಲ. ಆಗಲಿ ಎಂದು ಒಪ್ಪಿಕೊಂಡೆ.
ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ರಂಗಭೂಮಿಗಳನ್ನು ಬೆಸೆಯುವ ನಿಟ್ಟಿನಲ್ಲಿ ಗಮನಾರ್ಹ ಪ್ರಯೋಗಗಳನ್ನು ಸಾದರಪಡಿಸುತ್ತಿರುವ ಭೂಮಿಜಾ ಸಂಸ್ಥೆಯ ವತಿಯಿಂದಲೇ “ಆರೋಹ” ಸಂಗೀತ—ನಾಟಕ ರೂಪುಗೊಳ್ಳತೊಡಗಿತು. ಮಹಾನ್ ಸಂಗೀತ ಪ್ರೇಮಿಯೂ ರಂಗಭೂಮಿಯ ಅಭಿಮಾನಿಯೂ ಆದ ಗಾಯತ್ರಿ ಅವರು ಭೂಮಿಜಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ. ಆಗಸ್ಟ್ 23—24, 2022—ರಂಗಶಂಕರದಲ್ಲಿ ಆರೋಹ ನಾಟಕದ ಪ್ರಥಮ ಪ್ರದರ್ಶನಗಳು ಏರ್ಪಾಡಾದವು. ಸಂಗೀತ ಪರಿಕಲ್ಪನೆ, ಸಂಯೋಜನೆ ಹಾಗೂ ಮುಖ್ಯ ವಯೋಲಿನ್ ವಾದನ—ಡಾ. ಮೈಸೂರು ಮಂಜುನಾಥ್ ; ನಾಟಕ ಪರಿಕಲ್ಪನೆ, ರಚನೆ, ವಿನ್ಯಾಸ ಮತ್ತು ನಿರ್ದೇಶನ ಸೂರಿ ಅಲಿಯಾಸ್ ಎಸ್. ಸುರೇಂದ್ರನಾಥ್ ಅವರದು. ರಂಗದ ಮೇಲೆ ಹಿನ್ನೆಲೆ ಚಿತ್ರವನ್ನು ಅರ್ಥಪೂರ್ಣವಾಗಿ ರೂಪಿಸಿಕೊಟ್ಟವರು ಪ್ರಸಿದ್ಧ ಕಲಾವಿದ ಎಸ್.ಜಿ.ವಾಸುದೇವ್ ಅವರು.
“ಆರೋಹ” ಸಂಗೀತ—ನಾಟಕದ ಕುರಿತಾಗಿ ಸಿದ್ಧಪಡಿಸಿದ ಪ್ರಚಾರ—ಪರಿಚಯ ಸಾಮಗ್ರಿಯನ್ನು ಗಮನಿಸಿದರೆ ನಾಟಕದ ವಿನ್ಯಾಸದ ಸ್ಥೂಲ ಪರಿಚಯವಾಗುತ್ತದೆ:

“ಆರೋಹ ಸಂಗೀತ -ನಾಟಕ. ಪ್ರಸಿದ್ಧ ವಯಲಿನ್ ವಾದಕ ಡಾ.ಮೈಸೂರು ಮಂಜುನಾಥ್ ; ನಾಟಕಕಾರ- ನಿರ್ದೇಶಕ-
ವಿನ್ಯಾಸಕಾರ ಸುರೇಂ ದ್ರನಾಥ್ ; ಖ್ಯಾತ ನಟ-ನಿರ್ದೇಶಕ ಶ್ರೀನಿವಾಸ ಪ್ರಭು; ಅಂ ತಾರಾಷ್ಟ್ರೀಯ ಕಲಾ ವಿದ ಎಸ್. ಜಿ.
ವಾಸುದೇವ್– ಈ ನಾ ಲ್ವರೂ ಒಂದುಗೂಡಿದ ಒಂದು ಸಂಗೀತ ನಾಟಕ ಸಂಜೆಯನ್ನು ಭೂಮಿಜಾ ಪ್ರಸ್ತುತಪಡಿಸುತ್ತಿದೆ. ಈ
ಪ್ರದರ್ಶನದ ಪ್ರಮುಖ ಆಕರ್ಷಣೆ ಡಾ.ಮಂಜುನಾಥ್ ಅವರು ಸಂಯೋಜಿಸಿ ನಡೆಸಿಕೊಡುವ 20 ಸದಸ್ಯರ ಯುವ ಆರ್ಕೆಸ್ಟ್ರಾ. ಜನಪ್ರಿಯ
ಭಾರತೀಯ ಸಂಯೋಜನೆಗಳಲ್ಲದೆ ಈ ವಾದ್ಯವೃಂದವು ಮಂಜುನಾಥ್ ಅವರು ರಚಿಸಿದ ಕೆಲವು ಅತ್ಯುತ್ತಮ ಕೃತಿಗಳನ್ನು ನುಡಿಸಲಿದೆ. ಸುರೇಂದ್ರನಾಥ್ ಅವರು ಜನಪ್ರಿಯ ಕವಿತೆಗಳು ಮತ್ತು ನಾಟಕಗಳ ಸಾಲುಗಳ ಮೂಲಕ ಪ್ರೇಮ ಮತ್ತು ಸಂಗೀತದ, ಕನಸು ಮತ್ತು ಹಂಬಲಗಳ ಸುತ್ತ
ಒಂದು
ಸುಂದರ ಕಥೆಯನ್ನು ಹೆಣೆದಿದ್ದಾರೆ. ಶ್ರೀನಿವಾಸ ಪ್ರಭು ಅವರು ಸೂತ್ರಧಾರನಾ ಗಿ ನಟಿಸಿದ್ದು ಕನ್ನಡದ ಮೇಲಿನ ತಮ್ಮ ಅದ್ಭುತ
ಹಿಡಿತ ಮತ್ತು ವಿಶಿಷ್ಟ ಶೈಲಿಯಲ್ಲಿ ಕಥೆಯನ್ನು ನಿರೂಪಿಸಲಿದ್ದಾರೆ. ಈ ಪ್ರದರ್ಶನಕ್ಕೆ ಎಸ್ ಜಿ ವಾಸುದೇವ್
ಅವರು ಭವ್ಯವಾದ ಹಿನ್ನೆಲೆಯನ್ನು ರೂಪಿಸಿದ್ದಾರೆ. ಸುರೇಂದ್ರನಾಥ್ ಅವರು ಪ್ರದರ್ಶನದ ವೇದಿಕೆ ಮತ್ತು ಬೆಳಕಿನ ವಿನ್ಯಾಸವನ್ನೂ ಮಾಡಿದ್ದಾರೆ.
ಈ ವಾದ್ಯ ವೃಂದದಲ್ಲಿ 12 ಪಿಟೀಲುಗಳು, ತಲಾ ಒಂದು ಸಾರಂಗಿ ,ಕೊಳಲು, ಮ್ಯಾಂಡೊಲಿನ್ ಮತ್ತು ರಿದಂವಾದ್ಯ ಗಳಿವೆ. ಈ ಎಲ್ಲಾ
ಸಂಗೀತಗಾರರು 25 ವರ್ಷದೊಳಗಿನ ಯುವಕರಾಗಿದ್ದಾರೆ.”

“ಆರೋಹ” ರಂಗದ ಮೇಲೆ ಸೊಗಸಾಗಿ ಮೂಡಿಬಂದಿತು. ಎಲ್ಲಕ್ಕಿಂತ ವಿಶೇಷ ಸಂಗತಿ ಅಂದರೆ ರಂಗಭೂಮಿಯ ಅಭಿಮಾನಿಗಳ ಜತೆಗೇ ದೊಡ್ಡ ಸಂಖ್ಯೆಯಲ್ಲಿ ಸಂಗೀತ ಪ್ರೇಮಿಗಳೂ ನಾಟಕವನ್ನು ವೀಕ್ಷಿಸಲು ಬಂದಿದ್ದರು! ಎಷ್ಟೋ ಸಂಗೀತಗಾರರಿಗೆ ಇದೇ ಮೊಟ್ಟಮೊದಲ ರಂಗಾನುಭವ ಇದ್ದಿರಲಿಕ್ಕೂ ಸಾಕು! ರಂಗಭೂಮಿ—ಸಂಗೀತ ಸಮನ್ವಯಕ್ಕೆ ಹೊಸತೊಂದು ವ್ಯಾಖ್ಯಾನವನ್ನು ಬರೆದಂತಿದ್ದ “ಆರೋಹ” ರಂಗ ಪ್ರಯೋಗ ಒಂದು ವಿಶಿಷ್ಟ ಅನುಭವವನ್ನು ಕಟ್ಟಿಕೊಡುವುದರಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿತು.


ಈ ಸಮಯದಲ್ಲಿ ನಾನು ಅಭಿನಯಿಸಿದ ಒಂದು ಮುಖ್ಯ ಧಾರಾವಾಹಿ “ನೀನಾದೆ ನಾ”. ದಿಲೀಪ್ ಶೆಟ್ಟಿ ಹಾಗೂ ಖುಷಿ ಶಿವು ಅವರು ನಾಯಕ—ನಾಯಕಿಯರಾಗಿ ಅಭಿನಯಿಸುತ್ತಿದ್ದರೆ ನಾಗೇಶ್ ಯಾದವ್ , ಸ್ವಾತಿ, ಜ್ಯೋತಿ ಬಂಟ್ವಾಳ, ವಿಶ್ವಾಸ್ ಭಾರದ್ವಾಜ್ , ನೇತ್ರಾ, ನರೇಶ್ ಮೊದಲಾದವರು ಮುಖ್ಯ ಪಾತ್ರಗಳನ್ನು ನಿರ್ವಹಿಸುವವರಿದ್ದರು. ನನ್ನದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಪಾತ್ರ. ಸ್ಟಾರ್ ಸುವರ್ಣ ವಾಹಿನಿಗಾಗಿ ನಿರ್ಮಾಣವಾದ ಧಾರಾವಾಹಿ ಇದು. ಬಹಳ ದಿನಗಳ ನಂತರ ಗಟ್ಟಿಯಾದ ಪಾತ್ರವೊಂದು ಈ ಧಾರಾವಾಹಿಯಲ್ಲಿ ದೊರೆತದ್ದು ಸಂತಸ ತಂದಿತು.


ಈ ವೇಳೆಗೆ ರಂಜನಿಗೆ ಕಾಲೇಜ್ ಅಧ್ಯಾಪಕಿಯ ವೃತ್ತಿಜೀವನದಿಂದ ನಿವೃತ್ತಿ ದೊರೆತು ಎರಡು ವರ್ಷಗಳೇ ಕಳೆದುಹೋಗಿದ್ದವು! ಕೊರೋನಾ ಸಮಯದ ನೋವು ನರಳಾಟ ನಿಟ್ಟುಸಿರುಗಳ ನಡುವೆ ಒಂದು ರೀತಿಯಲ್ಲಿ ನಿವೃತ್ತಿಗಾಗಿ ಸಂಭ್ರಮಿಸುವುದೋ ಬೇಸರಿಸುವುದೋ ಅನ್ನುವುದೂ ತಿಳಿಯದಂತಹ ಅಯೋಮಯ ಸ್ಥಿತಿ ತಲೆದೋರಿತ್ತು!
ರಂಜನಿಯ ಅರವತ್ತನೆಯ ಹುಟ್ಟುಹಬ್ಬದ ವೇಳೆಗೆ ಅವಳ ಮೂರನೆಯ ಕವಿತಾ ಸಂಕಲನವನ್ನೂ ಐದನೆಯ ಭಾವಗೀತಾ ಗುಚ್ಭವನ್ನೂ ಲೋಕಾರ್ಪಣೆಗೊಳಿಸಬೇಕು ಎಂಬುದು ನನ್ನ ಮನದಾಳದ ಬಯಕೆಯಾಗಿತ್ತು. ಕೊರೋನಾ ದೆಸೆಯಿಂದಾಗಿ ನನ್ನಾಸೆ ಪೂರೈಸಲಿಲ್ಲ. ಈಗ ತಡವಾಗಿಯಾದರೂ ಸರಿ, ಅಂದುಕೊಂಡಿದ್ದಂತೆ ಕವನಸಂಕಲನ ಹಾಗೂ ಗೀತಗುಚ್ಛಗಳನ್ನು ಬಿಡುಗಡೆ ಮಾಡಿಯೇ ಬಿಡುವುದೆಂದು ತೀರ್ಮಾನಿಸಿದೆ. ಎಂದಿನಂತೆ ನಮ್ಮ ಸಾಹಸಕ್ಕೆ ಕೈಜೋಡಿಸಿ ನಿಂತವರು ಉಪಾಸನಾ ಮೋಹನ್. ಈ ಬಾರಿ ಮತ್ತೊಬ್ಬ ಅತ್ಯಾಪ್ತ ಮಿತ್ರರೂ ನಮ್ಮ ಬೆಂಬಲಕ್ಕೆ ಗಟ್ಟಿಯಾಗಿ ನಿಂತುಬಿಟ್ಟರು—ಅವರೂ ‘ಮೋಹನ’ರೇ—ಪ್ರಸಿದ್ಧ ಸಾಹಿತಿ, ಪತ್ರಕರ್ತ ಜಿ.ಎನ್. ಮೋಹನ್!
ಜಿ.ಎನ್.ಮೋಹನ್ ಅವರು ಕವನ ಸಂಕಲನದ ಪ್ರಕಟಣೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರೆ ಗೀತಗುಚ್ಛವನ್ನು ಉಪಾಸನಾ ಮೋಹನ್ ಸಿದ್ಧಪಡಿಸತೊಡಗಿದರು.
2022—ಡಿಸೆಂಬರ್ 22 : “ವೈಶಾಖದ ಹನಿಗಳು” ಕವನ ಸಂಕಲನ ಹಾಗೂ “ಬಣ್ಣದೋಕುಳಿ” ಭಾವಗೀತಾಗುಚ್ಛಗಳ ಲೋಕಾರ್ಪಣೆ ರವೀಂದ್ರ ಕಲಾಕ್ಷೇತ್ರದ ಹಿಂಬದಿಯ ಸಂಸ ರಂಗಮಂದಿರದಲ್ಲಿ ಎಂಬುದಾಗಿ ಸುಮುಹೂರ್ತ ಸಿದ್ಧವಾಯಿತು.
ಜಿ.ಎನ್. ಮೋಹನ್ ಅವರ ನೇತೃತ್ವದಲ್ಲಿ “ವೈಶಾಖದ ಹನಿಗಳು” ಕವನ ಸಂಕಲನ ಅತ್ಯಂತ ಸುಂದರವಾಗಿ ವಿನ್ಯಾಸಗೊಂಡಿತು. ಮೆಲೋಡಿ ಕಿಂಗ್ ಮೋಹನ್ ತಮ್ಮ ಎಂದಿನ ಮಾಧುರ್ಯಪೂರ್ಣ ಸಂಯೋಜನೆಗಳಲ್ಲಿ ರಂಜನಿಯ ಹೊಸ ಕವಿತೆಗಳನ್ನು ಸಿಂಗರಿಸಿದರು. ನಾಡಿನ ಹೆಮ್ಮೆಯ ಗಾಯಕ ಗಾಯಕಿಯರು ಹೊಸ ಗೀತೆಗಳಿಗೆ ಕೊರಳಾಗಿ ಜೀವ ತುಂಬಿದರು.
“ವೈಶಾಖದ ಹನಿಗಳು” ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿ ಬರೆದುಕೊಟ್ಟವರು ಪ್ರಸಿದ್ಧ ಸಾಹಿತಿ—ಪತ್ರಕರ್ತ ಜೋಗಿ. ಮುನ್ನುಡಿಯ ಕೆಲವೇ ಸಾಲುಗಳನ್ನು ಉಲ್ಲೇಖಿಸುವುದಾದರೆ:
“ರಂಜನಿ ಪ್ರಭು ಅವರ ಕವಿತೆಗಳನ್ನು ಅಚ್ಚರಿ ಬೆರೆತ ಅಸೂಯೆಯಿಂದಲೂ ವಿಸ್ಮಯಕಾರಿ ಅನುಮಾನದಿಂದಲೂ ಮೆಚ್ಚಿಕೊಳ್ಳಬಹುದು. ಅದೇ ಈ ಕವಿತೆಗಳ ದೊಡ್ಡ ಶಕ್ತಿ. ಕಾವ್ಯ ಮತ್ತು ಕಾವ್ಯಪ್ರೇಮಿಗಳ ನಡುವೆ ಕವಿತೆ ಹುಟ್ಟಿ ಇಷ್ಟು ವರ್ಷಗಳಾದ ನಂತರವೂ ಅಂತರವೊಂದು ಉಳಿದಿದೆ. ಕವಿತೆಯನ್ನೂ ರಸಿಕರನ್ನೂ ಹತ್ತಿರ ತರಲಿಕ್ಕೆ ಈ ಸಂಕಲನ ನೆರವಾದೀತು ಎಂಬುದು ನನ್ನ ನಂಬಿಕೆ”.
ಅಂದಿನ ಸಮಾರಂಭ ಆಪ್ತೇಷ್ಟರ, ಸಹೃದಯರ ಸಮ್ಮುಖದಲ್ಲಿ ಅತ್ಯಾಪ್ತ ವಾತಾವರಣದಲ್ಲಿ ಸಂಭ್ರಮ ಸಡಗರಗಳಿಂದ ನೆರವೇರಿತು. ಸುಗಮಸಂಗೀತ ಕ್ಷೇತ್ರದ ‘ಲೆಜೆಂಡ್’ , ಇನಿದನಿಯ ಮಹೋನ್ನತ ಗಾಯಕಿ—ಸಂಯೋಜಕಿ ಹೆಚ್. ಆರ್. ಲೀಲಾವತಿ ಅಮ್ಮ, ಕವಿಗುರು-ಶ್ರೇಷ್ಠ ನಾಟಕಕಾರ ಹೆಚ್.ಎಸ್.ವೆಂಕಟೇಶಮೂರ್ತಿ, ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರೂ ಆಪ್ತ ಮಿತ್ರರೂ ಆದ ಬಿ.ಆರ್. ಲಕ್ಷ್ಮಣರಾವ್ , ಹಾಗೂ ಪ್ರಸಿದ್ಧ ಸಾಹಿತಿ—ಶ್ರೇಷ್ಠ ಕವಯಿತ್ರಿ ಎಂ ಆರ್ ಕಮಲಾ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರಂಭವನ್ನು ಕಳೆಗಟ್ಟಿಸಿದರು. ವಿಶೇಷವಾಗಿ ಕವಿತೆಗಳ ಹೂರಣವನ್ನು ಕುರಿತು ಎಂ ಆರ್ ಕಮಲಾ ಅವರು ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡಿದರೆ ಬಿ ಆರ್ ಎಲ್ ಅವರು ಉಪಾಸನಾ ಮೋಹನರ ಸಂಯೋಜನೆಗಳ ವಿಶೇಷತೆಗಳ ಕಡೆಗೆ ಗಮನ ಸೆಳೆದರು. ಲೀಲಾವತಿ ಅಮ್ಮ ಗೀತಗುಚ್ಛದಲ್ಲಿನ ಸಾಹಿತ್ಯ—ಸಂಗೀತಗಳ ಸಮ್ಮಿಳನದ ಸೊಗಸನ್ನು ಅನಾವರಣಗೊಳಿಸಿದರೆ ಗೀತಕಾರ್ತಿಯಾಗಿ ಅಷ್ಟೇ ಅಲ್ಲದೆ ಗಂಭೀರ ಕವಿತೆಗಳ ರಚನೆಯಲ್ಲಿಯೂ ಪ್ರಬುದ್ಧತೆಯನ್ನು ತೋರಿರುವ ರಂಜನಿಯ ಕಾವ್ಯಾತ್ಮಕ ಬೆಳವಣಿಗೆಯನ್ನೂ ಕಾವ್ಯ ರಚನಾ ಕುಶಲತೆಯನ್ನೂ ಶ್ಲಾಘಿಸಿ ಹೆಚ್ ಎಸ್ ವಿ ಅವರು ಮಾತನಾಡಿದರು. ಖ್ಯಾತ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಅವರದು ಸಮಯೋಚಿತ—ಸಂದರ್ಭೋಚಿತ ನಿರ್ವಹಣೆಯಾಗಿತ್ತು. ಡಿಸೆಂಬರ್ ತಿಂಗಳ ಕೊರೆಯುವ ಛಳಿಯಲ್ಲಿಯೂ ನಮ್ಮ ಆಹ್ವಾನದ ಕರೆಗೆ ಓಗೊಟ್ಟು ಬಂದಿದ್ದ ಆತ್ಮೀಯರ ಪ್ರೀತಿ ವಿಶ್ವಾಸಗಳಿಗೆ ಮನಸ್ಸು ತುಂಬಿ ಬಂದಿತು. ಎಲ್ಲ ಪ್ರಸಿದ್ಧ ಸಾಹಿತಿ ಮಿತ್ರರ—ರಂಗಮಿತ್ರರ ಉಪಸ್ಥಿತಿಯ ಜೊತೆಗೆ ಕರ್ನಾಟಕ ಸಂಗೀತ ಕ್ಷೇತ್ರದ ಬಹು ದೊಡ್ಡ ಹೆಸರಾದ ಆರ್.ಕೆ. ಪದ್ಮನಾಭ ಅವರ ಉಪಸ್ಥಿತಿ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ನಾಡಿನ ಖ್ಯಾತ ಗಾಯಕ ಗಾಯಕಿಯರು ರಂಜನಿಯ ಕೆಲವು ಹೊಸ—ಕೆಲವು ಹಳೆಯ ಹಾಡುಗಳನ್ನು ಮಧುರವಾಗಿ ಹಾಡಿ ಮುದಗೊಳಿಸಿದರು.
ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಮುಖ್ಯ ಕಾರಣರಾದ ಜಿ.ಎನ್. ಮೋಹನ್ ಹಾಗೂ ಉಪಾಸನಾ ಮೋಹನ್ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲಲೇಬೇಕು!


ಈ ಸಮಯದಲ್ಲಿ ಅಥವಾ ಕೊಂಚ ಮೊದಲೇ ಇದ್ದಿರಬೇಕು—ನಾನು ಅಭಿನಯಿಸಿದ ಒಂದು ಧಾರಾವಾಹಿ “ಯಡಿಯೂರು ಸಿದ್ಧಲಿಂಗೇಶ್ವರ ಮಹಾತ್ಮೆ”. ಭಾರೀ ಗಡ್ಡ ಮೀಸೆಗಳನ್ನು ಧರಿಸಬೇಕಾಗಿದ್ದ ಮುನಿವರ್ಯರ ಪಾತ್ರನಿರ್ವಹಣೆಗೆ ನನ್ನನ್ನು ಆಹ್ವಾನಿಸಿದಾಗ ನಾನು ಸಾಧ್ಯವೇ ಇಲ್ಲ ಎಂದು ನಿರಾಕರಿಸಿಬಿಟ್ಟಿದ್ದೆ. ಗಡ್ಡ ಮೀಸೆಗಳನ್ನು ಅಂಟಿಸಿಕೊಂಡು ಅಭಿನಯಿಸುವುದು ಮಹಾ ಹಿಂಸೆಯ ಕೆಲಸ. ನನಗಂತೂ ಆ ಅಂಟೆಂದರೇ ಅಲರ್ಜಿ. ಆದರೆ ಶಿವರಾಮಣ್ಣನವರು (ಶರಪಂಜರ ಶಿವರಾಂ) ಅಭಿನಯಿಸುತ್ತಿದ್ದ ಪಾತ್ರವದು! ಅವರ ಅಕಾಲಿಕ ನಿಧನದ ನಂತರ ಆ ಪಾತ್ರ ನಿರ್ವಹಿಸಲು ನನ್ನನ್ನು ಕೇಳುತ್ತಿದ್ದಾರೆ! ಒಬ್ಬ ಕಲಾವಿದರು ನಡುವೆ ಬಿಟ್ಟುಹೋದ ಪಾತ್ರವನ್ನು ನಾನೆಂದೂ ಒಪ್ಪಿಕೊಂಡವನಲ್ಲ. ಆದರೆ ಈ ಬಾರಿ ಏಕೋ ಇಲ್ಲವೆನ್ನಲಾಗಲಿಲ್ಲ. ನನಗೆ ಅತ್ಯಂತ ಆತ್ಮೀಯರೂ ಆಗಿದ್ದ ಪ್ರೀತಿಯ ಶಿವರಾಮಣ್ಣನಿಗೆ ಒಂದು ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲು ನನಗೆ ದೊರೆತಿರುವ ಅವಕಾಶವಿದೆಂದು ನನ್ನ ಮನಸ್ಸಿಗೆ ತೋರಿ ಆಗಲೆಂದು ಒಪ್ಪಿಕೊಂಡುಬಿಟ್ಟೆ.


2023ನೇ ಇಸವಿ ಒಂದು ಪ್ರಮುಖ ಬೆಳವಣಿಗೆಗೆ ಸಾಕ್ಷಿಯಾದ ವರ್ಷ. ಲಂಡನ್ ನಲ್ಲಿದ್ದ ಮಗಳು ರಾಧಿಕಾ ಒಂದು ದಿನ ಫೋನ್ ಮಾಡಿ ” ಡ್ಯಾಡಿ, ನನಗೊಂದು fantastic idea ಬಂದಿದೆ” ಎಂದಳು! ಉತ್ಸಾಹ ಸಂಭ್ರಮದಿಂದ ಪುಟಿಯುತ್ತಿದ್ದಳು ರಾಧಿಕೆ! “ಏನೋ ಪುಟ್ಟಮ್ಮಾ ಅದು ಅಂಥಾ ಅದ್ಭುತವಾದ ಐಡಿಯಾ?” ಎಂದೆ ನಾನು. ಒಂದೇ ಉಸುರಿಗೆ ಬಡಬಡನೆ ಹೇಳತೊಡಗಿದಳು ರಾಧಿಕೆ: ” ಈ ಸಲ ನೀನೂ GLOBAL TALENT VISA ಗೆ apply ಮಾಡಿಬಿಡು ಡ್ಯಾಡಿ! ನಿನ್ನ bio data ನೋಡಿದರೆ ಖಂಡಿತಾ ಕೊಟ್ಟೇಕೊಡ್ತಾರೆ! ನೋ ಅನ್ನೊ ಛಾನ್ಸೇ ಇಲ್ಲ…ನಾನು ಕೇಳೋ ಒಂದಷ್ಟು ಡೀಟೇಲ್ಸ್ ಕಳಿಸಿಕೊಡು ಸಾಕು…ಉಳಿದದ್ದೆಲ್ಲಾ ನಾನು ಮಾಡಿಕೋತೀನಿ”. ಅವಳು ಮಾತು ಮುಗಿಸಿದರೂ ನನ್ನಿಂದ ಮಾತು ಹೊರಡಲಿಲ್ಲ! ಇದ್ದಕ್ಕಿದ್ದಹಾಗೆ ಇದೇನೋ ಹೊಸ ವಿಚಾರ ತಲೆಗೆ ತುಂಬುತ್ತಿದ್ದಾಳೆ!! ಈ ವಯಸ್ಸಿನಲ್ಲಿ ಹೊಸ ಸಾಧ್ಯತೆಗಳನ್ನರಸುತ್ತಾ ಅರ್ಜಿ ಹಾಕುತ್ತಾ ಕೂರುವುದೇ!! ಯಾಕೋ ಅಗತ್ಯವಲ್ಲದ ಉಸಾಬರಿ ಇದು ಅನ್ನಿಸಿತು. ಆದರೆ ಮಗಳ ವಿಚಾರ ಬೇರೆಯದೇ ಇತ್ತು!ನಾನೆಷ್ಟೇ ಸಬೂಬುಗಳನ್ನು ನೀಡಿದರೂ ಅವಳು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ! ಹಾಗೂ ಹೀಗೂ ಮಾಡಿ ಮಗಳು ಹಠ ಸಾಧಿಸಿಯೇಬಿಟ್ಟಳು! ಸರಿ, ಅರ್ಜಿ ಹಾಕಿದಾಕ್ಷಣ ಅವಕಾಶ ಕೊಟ್ಟುಬಿಡುತ್ತಾರೆಯೆ ಎಂದುಕೊಂಡು “ಆಯಿತು ಪುಟ್ಟಾ, ಅರ್ಜಿ ಹಾಕುತ್ತೇನೆ’ ಎಂದುಬಿಟ್ಟೆ.
ಕೆಲವೇ ದಿವಸಗಳ ಅಂತರದಲ್ಲಿ ಅರ್ಜಿ ಹಾಗೂ ಅಗತ್ಯವಿದ್ದ ಎಲ್ಲ ಸಾಮಗ್ರಿಗಳನ್ನೂ ಸಿದ್ಧಪಡಿಸಿಕೊಂಡು, ಈವರೆಗಿನ ನನ್ನೆಲ್ಲ ಸೃಜನಶೀಲ ಚಟುವಟಿಕೆಗಳ ಪಟ್ಟಿಯನ್ನೂ ಸಿದ್ಧಪಡಿಸಿ ಬ್ರಿಟಿಷ್ ಸರಕಾರದ ಹೋಂ ಆಫೀಸಿಗೆ ಕಳಿಸಿಕೊಟ್ಟೆವು. ನನಗೋ, ಮುಖ್ಯವಾಗಿ ನನ್ನ ವಯಸ್ಸಿನ ಕಾರಣಕ್ಕೆ ನನ್ನ ಅರ್ಜಿಯನ್ನು ಪರಿಗಣಿಸಲಾರರೆಂಬ ಅನುಮಾನವಿತ್ತು. ಅನುಮಾನವೇನು ಬಂತು, ಖಾತರಿಯೇ ಇತ್ತು! ಆದರೆ , “ಇಲ್ಲಿ ಹಾಗೆಲ್ಲಾ ಯೋಚಿಸುವುದೇ ಇಲ್ಲ ಡ್ಯಾಡಿ…ನಿನ್ನ ಕೆಲಸ ಸಾಧನೆಗಳು ಅವರ ನಿರೀಕ್ಷಿತ ಮಟ್ಟಕ್ಕಿದ್ದರೆ ಖಂಡಿತ ಅವಕಾಶ ನೀಡುತ್ತಾರೆ” ಎಂದು ರಾಧಿಕಾ ತುಂಬು ಭರವಸೆಯಿಂದ ನುಡಿಯುತ್ತಿದ್ದಳು. ಕೊನೆಗೆ , ‘ಏನಾದರೂ ಸರಿಯೇ; ಅವಕಾಶ ಕೊಟ್ಟರೆ ಒಂದಷ್ಟು ಸಮಯದ ಮಟ್ಟಿಗೆ ಲಂಡನ್ ಗೆ ಹೋಗುವುದು; ಅಲ್ಲಿ ಏನಾಗದಿದ್ದರೂ ಮಗಳ ಜೊತೆಗೆ ಕೆಲ ಸಮಯ ಖುಷಿಯಾಗಿ ಕಳೆಯಬಹುದು; ಅರ್ಜಿಯನ್ನು ತಿರಸ್ಕರಿಸಿದರೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲದೆ ಜೀವನ ಮೊದಲಿನಂತೇ ನಡೆದುಕೊಂಡು ಹೋಗುತ್ತದೆ ಎಂದುಕೊಂಡು ನಾನೂ ನನ್ನ ಕೆಲಸಗಳಲ್ಲಿ ಮಗ್ನನಾದೆ.


ಈ ಸಮಯದಲ್ಲೇ ಬರಸಿಡಿಲಿನಂತೆ ಬಂದೆರಗಿ ವಿಚಲಿತಗೊಳಿಸಿದ ಸುದ್ದಿಯೆಂದರೆ ರಂಜನಿಯ ಅಕ್ಕ ರಾಜಲಕ್ಷ್ಮಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನುವುದು. ಕ್ಯಾನ್ಸರ್ ಅನ್ನು ವೈದ್ಯರು ಸರಿಯಾಗಿ ಪತ್ತೆ ಮಾಡುವ ವೇಳೆಗಾಗಲೇ ಕಾಯಿಲೆ ಅವರ ಶರೀರದಲ್ಲಿ ಭದ್ರವಾಗಿ ಮನೆ ಮಾಡಿಕೊಂಡಾಗಿತ್ತು. ನಾಲ್ಕನೇ ಹಂತಕ್ಕೆ ಕಾಲಿಟ್ಟಿದ್ದ ಕ್ಯಾನ್ಸರ್ ಗೆ ತಕ್ಷಣವೇ ಅಗತ್ಯ ಚಿಕಿತ್ಸೆಗಳನ್ನು ಪ್ರಾರಂಭಿಸಿದರೂ ಅಕ್ಕ ತೀರಾ ಬಸವಳಿದುಹೋಗಿದ್ದರು. ರಂಜನಿಗಂತೂ ಅಕ್ಕನೆಂದರೆ ವಿಶೇಷ ಪ್ರೀತಿ..ಎರಡನೆಯ ಅಮ್ಮ ಈ ಅಕ್ಕ ನನಗೆ ಎಂದೇ ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದಳು ಕೂಡಾ. ಅಂಥ ಅಕ್ಕನಿಗೆ ಹೀಗಾಯಿತಲ್ಲಾ ಎಂದು ಒಂದೇ ಸಮನೆ ಕೊರಗುತ್ತಿದ್ದಳು.


ಇತ್ತ ವೀಸಾಗೆ ಅರ್ಜಿ ಹಾಕಿದ ಒಂದೆರಡು ವಾರಗಳಲ್ಲೇ ಮಗಳು ಫೋನ್ ಮಾಡಿ ನನ್ನ ಅರ್ಜಿ ಸ್ವೀಕೃತವಾಗಿದೆಯೆಂದೂ ನನಗೆ ಗ್ಲೋಬಲ್ ಟ್ಯಾಲೆಂಟ್ ವೀಸಾ ನೀಡಲು ಬ್ರಿಟಿಷ್ ಸರಕಾರದ ಹೋಂ ಆಫೀಸ್ ಸಂತಸದಿಂದ ಅನುಮತಿ ನೀಡಿದೆಯೆಂದೂ ಹರ್ಷೋದ್ಗಾರಗಳೊಂದಿಗೆ ನುಡಿದಾಗ ನನ್ನದು ಅಯೋಮಯ ಸ್ಥಿತಿ! ಇದೀಗ ಲಂಡನ್ ಗೆ ಹೋಗಲೇಬೇಕಾಗಿರುವುದಂತೂ ಖಚಿತವಾಗಿಹೋಗಿದೆ! ಇಲ್ಲದಿದ್ದರೆ ಮಗಳ ಸಂಭ್ರಮ ಸಂತೋಷಗಳನ್ನು ಹಾಳುಮಾಡಿದಂತಾಗುತ್ತದೆ! ಜೊತೆಗೆ ಹೋಗದೇ ಇರುವುದಕ್ಕೂ ಅಂತಹ ಅಮೋಘ ಕಾರಣಗಳೂ ಏನೂ ಕಾಣುತ್ತಿಲ್ಲ! ಈಗ ವಾಸ್ತವವಾಗಿ ಇದ್ದ ಒಂದೇ ಚಿಂತನಾರ್ಹ ಸಂಗತಿಯೆಂದರೆ ರಂಜನಿಯ ಅಕ್ಕನ ಹದಗೆಡುತ್ತಿದ್ದ ಆರೋಗ್ಯ ಸ್ಥಿತಿ. ಬಹಳಷ್ಟು ವಿಚಾರ ಮಾಡಿ ಚರ್ಚಿಸಿದ ತರುವಾಯ ಬ್ರಿಟಿಷ್ ಸರಕಾರ ನೀಡಿದ್ದ ಗಡುವಿನ ಅವಧಿಯೊಳಗೆ ಲಂಡನ್ ಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳುವುದೆಂದು ನಿರ್ಧರಿಸಿದೆವು.
ರಂಜನಿಗೆ ಮಾತ್ರ ದ್ವಂದ್ವ ಕಾಡುತ್ತಲೇ ಇತ್ತು. ಆದರೂ ವಿಧಿಯಿಲ್ಲ..ಹೊರಡಬೇಕು…
ಬ್ರಿಟಿಷ್ ಸರಕಾರ ಗ್ಲೋಬಲ್ ಟ್ಯಾಲೆಂಟ್ ವೀಸಾ ನೀಡುತ್ತಿದೆ; ಅದರ ಪರಿಧಿಯೊಳಗೆ ಬರುವ ಸಂಗತಿಗಳೆಂದರೆ ನಾನು ಬ್ರಿಟನ್ ನಲ್ಲಿ ಕ್ರೀಡಾ ಕ್ಷೇತ್ರವೊಂದನ್ನು ಬಿಟ್ಟು ಇನ್ನಾವ ಕ್ಷೇತ್ರದಲ್ಲಾದರೂ ಕೆಲಸ ಮಾಡಿ ಸಂಪಾದಿಸಬಹುದು; ಆದರೆ ಅವರು ಯಾವುದೇ ಉದ್ಯೋಗವನ್ನಾಗಲೀ ಧನಸಹಾಯವನ್ನಾಗಲೀ ನೀಡುವುದಿಲ್ಲ; ನಿಮಗೆ ಕೆಲಸ ಮಾಡಲು ಅವಕಾಶ ನೀಡುತ್ತಿರುವುದೇ ಈ ವೀಸಾದ ಮುಖ್ಯ ಕೊಡುಗೆ.
ಹೊರಡುವುದೆಂದು ನಿರ್ಧಾರವಾದ ಕೂಡಲೇ ಬಾಕಿ ಉಳಿದಿದ್ದ ಶೂಟಿಂಗ್ , ಡಬ್ಬಿಂಗ್ ಇತ್ಯಾದಿ ಕೆಲಸಗಳನ್ನು ಮುಗಿಸುವುದರ ಕಡೆಗೆ ಗಮನ ಹರಿಸಿದೆ. ಕನಿಷ್ಠ ಆರು ತಿಂಗಳಾದರೂ ಲಂಡನ್ ನಲ್ಲಿ ಇದ್ದು ಬರಬೇಕೆಂದು ನಿರ್ಧಾರ ಮಾಡಿಕೊಂಡಿದ್ದೆವು.
ಬೇಸರವಾದದ್ದು ಒಂದೇ ಕಾರಣಕ್ಕೆ: ನಾನು ಇಷ್ಟಪಟ್ಟು ನಿರ್ವಹಿಸುತ್ತಿದ್ದ ‘ನೀನಾದೆ ನಾ’ ಧಾರಾವಾಹಿಯ ಜಡ್ಜ್ ಪಾತ್ರವನ್ನು ಬಿಟ್ಟು ಹೊರಡಬೇಕು!! ಸಾಕಷ್ಟು ಮುಂಚಿತವಾಗಿಯೇ ಧಾರಾವಾಹಿಯ ನಿರ್ಮಾಪಕರಿಗೆ ವಿಷಯ ತಿಳಿಸಿ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದೆ.ಎಲ್ಲಾ ಕೆಲಸಗಳನ್ನೂ ಮುಗಿಸಿ ಲಂಡನ್ ಗೆ ಹೊರಡಲು ಸಿದ್ಧತೆ ಮಾಡಿಕೊಂಡೆವು.

2023 ನವಂಬರ್ 25.

ಹೊರಟಿದ್ದೇವೆ….ಹೊಸ ದೇಶಕ್ಕೆ…ಹೊಸ ಬದುಕಿಗೆ. ಹೊಸ ಜಗತ್ತು ನಮ್ಮನ್ನು ಹೇಗೆ ಸ್ವಾಗತಿಸುತ್ತದೋ ತಿಳಿಯದು. ಹೊಸ ಜೀವನ ಕ್ರಮಕ್ಕೆ, ಅಲ್ಲಿನ ಹವಾಮಾನ ವೈಪರೀತ್ಯಗಳಿಗೆ ನಮ್ಮ ತನು ಮನಗಳು ಹೇಗೆ ಪ್ರತಿಕ್ರಿಯಿಸುತ್ತವೋ, ಹೇಗೆ ಹೊಂದಿಕೊಳ್ಳುತ್ತವೋ ಅನ್ನುವುದೊಂದು ಆತಂಕ!
ಜೊತೆಗೆ ಅಲ್ಲಿ ಇರುವಷ್ಟು ಸಮಯ ಪ್ರೀತಿಯ ಮಗನಿಂದ ದೂರವಾಗಿರಬೇಕು ಎನ್ನುವ ಚಿಂತೆಯೂ ಕಾಡುತ್ತಿತ್ತಾದರೂ ಅವನಿಗೆ ಜೊತೆಯಾಗಿ ಬಾಳಸಂಗಾತಿ ಕಾಮ್ಯಳಿದ್ದಾಳೆಂದು ಸಮಾಧಾನ ಮಾಡಿಕೊಂಡೆವು.

ಏನೇ ಆದರೂ ಅಲ್ಲಿ ಮುದ್ದುಮಗಳ ಪ್ರೀತಿಯ ಆಸರೆಯಿದೆ…
ಹಲವು ಹತ್ತು ವರ್ಷಗಳಿಂದ ದೂರವೇ ಇದ್ದ ಕರುಳ ಕುಡಿಯೊಂದಿಗೆ ಒಂದಷ್ಟು ಕನಸುಗಳನ್ನು ಹಂಚಿಕೊಳ್ಳುವ ಸದವಕಾಶ ದೊರೆತಿದೆ…
ಅವಳಿಗಿಷ್ಟವಾದ ತಿಂಡಿ ಅಡುಗೆಗಳನ್ನು ಮಾಡಿಕೊಟ್ಟು ಅವಳಿಗೆ ತಿನ್ನಿಸಿ ಅವಳ ಖುಷಿಯಲ್ಲಿ ಸುಖಿಸುವ ಗಳಿಗೆಗಳು ಒದಗುತ್ತಿವೆ…
ಹಾಗಾಗಿ ಕೈಬೀಸಿ ಕರೆಯುತ್ತಿರುವ ಹೊಸ ಬದುಕಿನ ಕರೆಗೆ ಓಗೊಡುತ್ತಲೇ ಇಲ್ಲಿ ನಿಮಗೆ ವಿದಾಯವನ್ನು ಹೇಳುತ್ತಿದ್ದೇನೆ. ವಿದಾಯಕ್ಕಿಂತ ಅಲ್ಪವಿರಾಮವೆನ್ನಬಹುದೇನೋ. ಹೊಸ ಜಗತ್ತಿನ ಹೊಸ ಅನುಭವಗಳೊಂದಿಗೆ ಮತ್ತೆ ನಿಮ್ಮೆದುರು ಹಾಜರಾಗಿ ನೆನಪ ಸುರುಳಿಗಳನ್ನು ತೆರೆಯುತ್ತೇನೆ. ಅಲ್ಲಿಯವರೆಗೆ ಅನುಮತಿ ನೀಡಿ.
ಪ್ರೀತಿಯ ನಮಸ್ಕಾರಗಳು

‍ಲೇಖಕರು Admin

17 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading