ಚಂಸು ಪಾಟೀಲರ ‘ಕುಳದ ಸಂಗಾತ’
‘ಕವಿತಾ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿ ಕುರಿತು ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ.
–ನಾಮದೇವ ಕಾಗದಗಾರ
ಇಲ್ಲಿ ಕೇಳ್ರಪಾ, ‘ಕುಳದ ಸಂಗಾತ’, ಅನ್ನೋದು ನಮ್ ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ಪಾಟೀಲರ ಜಬರ್ದಸ್ತ್ ಕೃತಿ ಇದು! ನಮ್ಮ ಚಂದ್ರಶೇಖರ ನಂಗಲಿ ಸರ್ ಮುನ್ನುಡಿಯಾಗೇನೋ ಚಂದಾಗಿ ಬರೆದಾರ. ಆದ್ರೆ ಈ ಕೃತಿ ಒಳಗೆ ಇಳಿದು ನೋಡಿದ್ರ, ಬರೀ ಅಕ್ಷರಗಳಲ್ಲ, ಹಾವೇರಿ ಮಣ್ಣಿನ ಹಸಿ ವಾಸನೆ, ರೈತನ ಕಣ್ಣೀರ ಕತೆ, ಮತ್ತೆ ಆತನ ಎದೆಗಟ್ಟಿತನ ಎಲ್ಲವೂ ಎದ್ದು ಕಾಣ್ತಾವ. ಈ ಪುಸ್ತಕದ ಬಗ್ಗೆ ಒಂದಿಷ್ಟು ಕಡಕ್ ಆಗಿ ಮಾತಾಡಲೇಬೇಕಾಗದ.
ನಂಗಲಿ ಸರ್ ಮುನ್ನುಡಿಯಾಗ ಹೇಳ್ಯಾರ, ಒಂದೇ ವಿಷಯದ ಬಗ್ಗೆ ನೂರಕ್ಕಿಂತ ಹೆಚ್ಚು ಹನಿಗವಿತೆ, ಚುಟುಕು ಬರೆಯೋದಕ್ಕೆ ಸಂಸ್ಕೃತದಾಗ ‘ಸಂಗಾತ’ ಅಂತಾರ ಅಂತ. ಆದ್ರೆ ಚಂಸು ಪಾಟೀಲರು ಅದನ್ನ ಬರೀ ಸಂಸ್ಕೃತದ ಚೌಕಟ್ಟಿಗೆ ಇಡಲಿಲ್ಲ. ಅದಕ್ಕೆ ‘ಕುಳದ ಸಂಗಾತ’ ಅಂತ ಹೆಸರಿಟ್ಟು, ನೇಗಿಲ ಕುಳ ಹಿಡಿಯೋ ರೈತನ ಜೀವನಾಡಿ ಮಾಡ್ಯಾರ. ಇದ್ರಲ್ಲಿ ಕವಿತೆ, ಹನಿಗವಿತೆ, ಹೈಕು, ಚುಟುಕು ಅಂತ ಎಲ್ಲ ತರಹದ, ತಲೆಬರಹಗಳೇ ಇಲ್ಲದ 109 ಕವಿತೆಗಳ ಮೇಳ ಐತಿ. ಇದು ಬರೀ ಸಾಹಿತ್ಯದ ಜಬರ್‌ದಸ್ತಿ ಅಲ್ಲ, ಬೇವಸಾಯದ ಒಗಟು!
ಮುನ್ನುಡಿಯಾಗ ಇನ್ನೂಂದು ಭಾಳ ಚಂದದ ಮಾತು ಐತಿ, ‘ತೆಲುಗಿನ ವೇಮನ, ತಮಿಳಿನ ತಿರುವಳ್ಳುವರ್, ನಮ್ಮ ಸರ್ವಜ್ಞ ಇವ್ಯಾರೂ ಅರಮನೆ ನಂಬಿ ಬದುಕಿದವರಲ್ಲ. ಇವ್ರಿಗೆಲ್ಲಾ ಜನಾಶ್ರಯ ಇತ್ತು’ ಅಂತ. ನಮ್ಮ ಚಂಸು ಪಾಟೀಲರು ಕೂಡ ಅದೇ ಸಾಲಿಗೆ ಸೇರಿದವ್ರು. ಎಸಿ ರೂಮಾಗ ಕುಂತು ಕವಿತೆ ಗೀಚಿದವರಲ್ಲ, ಹೊಲದಾಗ ಬೆವರು ಸುರಿಸಿ, ಮುಂಗಾರು-ಹಿಂಗಾರು ಮಳಿಗಾಗಿ ಕಣ್ಗಾವಲು ಇಟ್ಟು, ಮಣ್ಣಿನ ಜೊತೆ ಮಾತಾಡಿದವ್ರು. ಅದಕ್ಕ ಇವ್ರ ಕವಿತೆಯಾಗ ‘ಮಣ್ಣು ಅಂದ್ರೆ ಬರೀ ಮಣ್ಣಲ್ಲ, ಅದು ಜೀವರಾಶಿಕುಲದ ಜನ್ಮಸ್ಥಳ’ ಅನ್ನೋ ಸತ್ಯ ಎದ್ದು ಕಾಣ್ತದ.
ಈ ‘ಕುಳದ ಸಂಗಾತ’ ಐತಲ್ಲ, ಅದು ಬರೀ ಕಾಗದದ ಮೇಲೆ ಗೀಚಿದ ಅಕ್ಷರಗಳ ಜಾತ್ರೆಯಲ್ಲ ಮಾರಾಯಾ! ಅದು ವ್ಯವಸ್ಥೆಯ ಮಾರುಕಟ್ಟೆಗೆ ಸಿಲುಕಿ ಜರ್ಜರಿತನಾಗುತ್ತಿರೋ ಒಕ್ಕಲಿಗನ ಎದೆಯಾಳದ ಬೆಂಕಿಯ ಕನ್ನಡಿ! ಕೃತಿಯ ಮೊದಲನೇ ಕವಿತೆಯೇ ಇವತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಮುಖಕ್ಕೆ ಕಡಕ್ ಆಗಿ ಛೀಮಾರಿ ಹಾಕುತ್ತದೆ:
ನಾವು ರೈತರು, ಕೂಲಿಕಾರ್ಮಿಕರು
ನಮ್ಮ ಶ್ರಮಕ್ಕೆ ಬಂಡವಾಳ
ಎನ್ನುತ್ತೇವೆ!
ಅವರು ಕೈಗಾರಿಕೋದ್ಯಮಿಗಳು
ಹಣಕ್ಕೆ ಬಂಡವಾಳ ಎನ್ನುತ್ತಾರೆ!
‘ಅಲ್ನೋಡ್ರಣ್ಣಾ… ಇಂತಾ ಕಟು ಸತ್ಯ ಎಲ್ಲಾದ್ರೂ ಕಂಡಿದ್ದೀರಾನ್ರಿ?’ ಕೈಗಾರಿಕೋದ್ಯಮಿಗಳು ತಾವಿಟ್ಟ ಹಣಕ್ಕೆ ಬೆಲೆ ಕಟ್ತಾರೆ, ಅವ್ರ ಸಾಬೂನು, ಕಾರ್ಖಾನೆ ಸಾಮಗ್ರಿ ಎಲ್ಲದಕ್ಕೂ ಮುಂಚೆಯೇ ನಿಗದಿಯಾದ ದರಪಟ್ಟಿ ಇರ್ತದ. ಆದ್ರೆ ಹಗಲು ರಾತ್ರಿ ಬೆವರು ಸುರಿಸಿ ತರಕಾರಿ, ಕಾಳು ಬೆಳೆಯೋ ರೈತನ ಶ್ರಮದ ಬಂಡವಾಳಕ್ಕೆ ಬೆಲೆಯೇ ಇಲ್ಲ! ಹರಾಜಿನ ಬಜಾರಿನಲ್ಲಿ ಚೌಕಾಸಿ ಆಗೋ ರೈತನ ಬದುಕು ‘ಊರಿಗೆ ಉಪಕಾರಿ, ಮನೆಗೆ ಮಾರಿ’ ಆಗಿರೋ ದುರಂತವನ್ನು ಕವಿ ಚಂಸು ಮೊದಲ ಸಾಲಲ್ಲೇ ಎದೆಗೆ ನಾಟುವಂತೆ ಕಟ್ಟಿಕೊಟ್ಟಾರೆ.
ಆರಂಭದ ಕವಿತೆಗಳು ಕವಿಯ ಪರಿಸರ ಪ್ರಜ್ಞೆಯನ್ನು ಬಹಳ ಗಟ್ಟಿಯಾಗಿ ಸಾರುತ್ತವೆ. ಮಾನವನ ದುರಾಶೆಗೆ ಪ್ರಕೃತಿ ಹೆಂಗೆ ಬಲಿಯಾಗ್ತಿದೆ ಅನ್ನೋದನ್ನು ಕವಿ ಬಹಳ ಮಾರ್ಮಿಕವಾಗಿ ಕವಿತೆ 24 ರಲ್ಲಿ ಪ್ರಶ್ನೆ ಮಾಡ್ತಾರೆ:
ಭೂಮಿಯ ಮೇಲೆ
ಸೌದೆಗೆ ಬೆಲೆ
ನಿಗದಿಯಾದ ದಿನ
ಮರಗಳೆಲ್ಲವೂ
ಬಿಕ್ಕಿ ಬಿಕ್ಕಿ ಅತ್ತವು!
ನಗರೀಕರಣದ ಹೆಸರಲ್ಲಿ ಕಾಡು ಕಡಿದು ಚಿನ್ನದ ನಗರಿ ಮಾಡಲು ಹೊರಟಿರೋ ಮನುಷ್ಯನಿಗೆ, ತಾಯ್ನೆಲದ ಕಣ್ಣೀರು ಕಾಣುತ್ತಿಲ್ಲ. ಕವಿ ಚಂಸು ಅವರ ಈ ಪರಿಸರ ಕಾಳಜಿ ಕೇವಲ ಒಣ ಭಾಷಣವಲ್ಲ; ಅದು ಮಣ್ಣನ್ನು ನಂಬಿ ಬದುಕೋ ರೈತನ ಕರುಳಿನ ಕೂಗು.
ಕವಿತೆ 26 ರ ಸಾಲುಗಳನ್ನು ಓದಿದ್ರೆ, ಇವತ್ತಿನ ಶಿಕ್ಷಣ ವ್ಯವಸ್ಥೆ ಹಳ್ಳಿಯ ಯುವಕರನ್ನು ತಾಯ್ನೆಲದಿಂದ ಹೆಂಗೆ ದೂರ ಮಾಡ್ತಾ ಇದೆ ಅನ್ನೋ ಕಹಿಸತ್ಯ ಜಗಜ್ಜಾಹೀರಾಗುತ್ತದೆ. ಇವತ್ತಿನ ಓದು ಹಳ್ಳಿಯ ಮಕ್ಕಳಿಗೆ ಮಣ್ಣಿನ ಪ್ರೀತಿಯನ್ನು ಕಲಿಸುತ್ತಿಲ್ಲ; ಬದಲಾಗಿ ಅವರನ್ನು ತಾಯ್ನೆಲವನ್ನು ಮರೆತು ಪೇಟೆಯ ಗುಲಾಮರಾಗುವಂತೆ ಮಾಡ್ತಾ ಇದೆ. ಕವಿ ಈ ವ್ಯವಸ್ಥೆಯನ್ನು ‘ಯುದ್ಧಾಭಿಮಾನಿ’ ಹಾಗೂ ಕಳ್ಳತನದ ಹಾದಿಗೆ ಹೋಲಿಸಿ ಬಹಳ ಕಟುವಾದ ವ್ಯಂಗ್ಯದ ಮೂಲಕ ತರಾಟೆಗೆ ತಗೋತಾರೆ.
ಕೃತಿಯ ಮಧ್ಯಭಾಗದ ಕವಿತೆಗಳಾದ 50, 51 ಮತ್ತು ಕೊನೆಯ 109ನೇ ಕವಿತೆ ‘ಲಾಕ್‌ಡೌನ್’ ವರೆಗೂ ರೈತನ ಆರ್ಥಿಕ ದುಸ್ಥಿತಿಯ ಕಟು ಚಿತ್ರಣ ಕಣ್ಣಿಗೆ ಕಟ್ಟುವಂತೆ ಬರುತ್ತದೆ:’ಕಾಗದದ ನೋಟುಗಳ ನಡುವೆ ಮಣ್ಣಿನ ಬೆಲೆ ಕಳೆದುಹೋಗಿದೆ. ಬ್ಯಾಂಕಿನಿಂದ ಹಣ ತಂದು ಸಾಲ ಮಾಡಿ ಬೇಸಾಯ ಮಾಡೋ ದರಿದ್ರ ಜನ್ಮ!’ ಹೊಲ ಎಷ್ಟು ಫಲವತ್ತಾಗಿದ್ದರೂ, ಇವತ್ತಿನ ಮಾರ್ಕೆಟ್ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ರೈತನನ್ನು ಸಾಲಗಾರನನ್ನಾಗಿ ಮಾಡೇ ಬಿಡುತ್ತದೆ. ‘ಬ್ಯಾಂಕಿನ ಮುಂದೆ ಮುಳ್ಳುದ್ದ ಸಾಲು, ರೈತನ ಮನೆ ಮುಂದೆ ಸಾಲಗಾರರ ಸಾಲು’ ಅನ್ನೋ ಸಾಲು ವ್ಯವಸ್ಥೆಯ ಕ್ರೂರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ‘ಬ್ಯಾಂಕೋ… ಪಡಾ ಬಿದ್ದ ಮರಭೂಮಿ!’ ಅನ್ನೋ ಕವಿಯ ನುಡಿ ಇವತ್ತಿನ ಆರ್ಥಿಕ ನರಕಕ್ಕೆ ಸಾಕ್ಷಿ.
ಗೆಳೆಯ, ಕವಿ ಬಿ. ಪೀರ್ ಬಾಷಾ ಅವರು ಬೆನ್ನುಡಿಯಲ್ಲಿ ಹೇಳಿದ ಮಾತು ಅಕ್ಷರಶಃ ಖರೆ ಐತಿ. ಈ ಕೃತಿಯಲ್ಲಿ ಪೇಟೆಯ ಪ್ರೇಮಿಗಳು ಕೊಟ್ಟುಕೊಳ್ಳೋ ಗುಲಾಬಿ ಹೂವಿನ ಸುಗಂಧವಿಲ್ಲ; ಬದಲಾಗಿ ಬೆದ್ದಲು ಹೊಲದ ಕಂಟಿಗಳ ಮಧ್ಯೆ, ಬತ್ತಿದ ಹಳ್ಳದ ದಂಡೆಯ ಮೇಲೆ ಬೆಳೆದ ಗಟ್ಟಿ ಜೋಳದ ತೆನೆಯ ಕಾಳುಗಳಿವೆ. ಇದನ್ನು ಹಿಟ್ಟು ಮಾಡಿ, ರೊಟ್ಟಿ ಸುಟ್ಟುಕೊಂಡೇ ಉಣ್ಣಬೇಕು! ಕಾವ್ಯ ಎಂದರೆ ಕೇವಲ ನವರಸಗಳ ಮಜಾ ಅಲ್ಲ, ಅದರ ಹಿಂದೆ ‘ಒಕ್ಕಲು ಪ್ರಜ್ಞೆ’ ಇರಬೇಕು ಅನ್ನೋದನ್ನು ಚಂಸು ಅವರ ಪ್ರತಿ ಸಾಲೂ ಸಾಬೀತುಪಡಿಸುತ್ತದೆ ಪೀರ್‌ಬಾಷ ರವರ ಮಾತುಗಳು.
ಕವಿ ಚಂಸು ಅವರು ಬರೋಬ್ಬರಿ ಹದಿನೈದು ವರ್ಷಗಳ ಕಾಲ ಕೃಷಿ ಕಾಯಕದಲ್ಲಿ ಮುಳುಗಿ ಸಾಹಿತ್ಯದಿಂದ ದೂರಾಗಿದ್ದಾಗ, ಅವರಿಗೆ ಸಿಕ್ಕ ‘ಡಿಜಿಟಲ್ ಊರುಗೋಲೇ’ ಈ ಫೇಸ್‌ಬುಕ್ ಮತ್ತು ಮೊಬೈಲ್! ಹೊಲದಲ್ಲಿ ಕೆಲಸ ಮಾಡ್ತಾ ಮಾಡ್ತಾ ತಲೆಗೆ ಹೊಳೆದಿದ್ದನ್ನು ಮೊಬೈಲ್ ಸ್ಕ್ರೀನ್ ನ ಮೇಲೆ ಟೈಪ್ ಮಾಡಿ ಫೇಸ್‌ಬುಕ್ ಗದ್ದೆಗೆ ಬಿತ್ತುತ್ತಿದ್ದರು. ಅದಕ್ಕೆ ನೂರಾರು ಸಹೃದಯಿ ಗೆಳೆಯರು ಲೈಕು, ಕಮೆಂಟುಗಳ ನೀರು-ಗೊಬ್ಬರ ಹಾಕಿ ಈ ಕಾವ್ಯದ ಪೈರನ್ನು ಬೆಳೆಸಿದ್ದಾರೆ. ಇದಕ್ಕಿಂತ ದೇಸಿ ಜನಾಶ್ರಯ ಮತ್ತೊಂದಿತ್ತೇನ್ರಿ?
ಚಂಪಾ ಅವರಂತೆ ಚಂಸು ರವರ ಲೇಖನಿಯೂ ಅಧಿಕಾರಶಾಹಿಗೆ ತಲೆಬಾಗದೆ, ವ್ಯವಸ್ಥೆಯ ಲೋಪದೋಷಗಳನ್ನು ಖಂಡತುಂಡವಾಗಿ ಖಂಡಿಸುತ್ತದೆ. ಇಡೀ ಕೃತಿಯಲ್ಲಿ ಹಾವೇರಿ ನೆಲದ ಅಪ್ಪಟ ದೇಶಿ ಪದಗಳಾದ ‘ಬೇಸಾಯ’, ‘ಬೆದ್ದಲು ಹೊಲ’, ‘ನೇಗಿಲ ಕುಳ’, ‘ಪಡಾ ಭೂಮಿ’, ‘ಚೌಕಾಸಿ ಪಿಟ್ಟಿ’ ಮುಂತಾದ ಪದಬಂಧಗಳು ಕಾವ್ಯಕ್ಕೆ ಅಪ್ಪಟ ಮಣ್ಣಿನ ತಾಕತ್ತನ್ನು ತಂದುಕೊಟ್ಟಿವೆ.
ಇಲ್ಲಿಕೇಳ್ರಿ ಅಣ್ಣಾ… ಚಂಸು ಪಾಟೀಲರ ಈ ಕುಳದ ಸಂಗಾತ ಬರೀ ಕಾವ್ಯಪ್ರೇಮಿಗಳು ಓದೋ ಪುಸ್ತಕ ಅಲ್ಲ. ಬರೀ ಲೈಬ್ರರಿಯಾಗ ಇಡೋ ಪುಸ್ತಕ ಅಲ್ಲ. ಪ್ರತಿಯೊಬ್ಬ ಹೊಲದಾಗ ದುಡಿಯೋ ಮಗನೂ, ಪೇಟೆಯಾಗ ಕುಂತು ಅನ್ನ ಉಣ್ಣೋ ಸಾಹುಕಾರನೂ ಓದಬೇಕಾದ ಕೃತಿ. ಇದು ಇವತ್ತಿನ ಕಾಲದ ಕೃಷಿ ಬದುಕಿನ ತಲ್ಲಣಗಳನ್ನು, ಜಾಗತೀಕರಣದ ಹೊಡೆತವನ್ನು ಮತ್ತು ಮಣ್ಣಿನ ಮಗನ ಸಂಕಟವನ್ನು ಕಟ್ಟಿಕೊಟ್ಟಿರೋ ಒಂದು ಜೀವಂತ ದಸ್ತಾವೇಜು. ಹೊಲದಾಗ ಬೆವರು ಸುರಿಸುತ್ತಲೇ, ಕೈಯಲ್ಲಿ ಮೊಬೈಲ್ ಹಿಡಿದು ವ್ಯವಸ್ಥೆಯನ್ನು ಜಬರ್ದಸ್ತಾಗಿ ಪ್ರಶ್ನೆ ಮಾಡಿರೋ ಮಣ್ಣಿನ ಕಳಕಳಿ ಇರೋ ನಮ್ಮ ‘ಕೃಷಿಕಕವಿ’ ಚಂಸು ಅವರಿಗೆ ನಮ್ಮದೊಂದು ಜೋರು ಚಪ್ಪಾಳೆ ಇರಲಿ! ಕವಿ ಚಂಸು ಪಾಟೀಲರ ಈ ಸಾಹಿತ್ಯಿಕ ಉಳುಮೆ ಕನ್ನಡ ಕಾವ್ಯಲೋಕದಲ್ಲಿ ಸದಾ ಹಸಿರಾಗಿರಲಿ.






0 Comments