ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 171
2019 ಬಹಳಷ್ಟು ಸಂಗತಿಗಳಿಗಾಗಿ ಬಹು ಮುಖ್ಯ ವರ್ಷ..ಘಟನಾಪೂರ್ಣ ಸ್ಮರಣೀಯ ವರ್ಷ. 2019 ರ ಒಂದು ಮುಖ್ಯ ಸಂಗತಿ “ಸಂಸಾಯಣ”ದ ಬಗ್ಗೆ ಸಾಕಷ್ಟು ವಿವರವಾಗಿ ಹಿಂದಿನ ಸಂಚಿಕೆಯಲ್ಲಿ ಬರೆದಿದ್ದೇನೆ. ಮತ್ತೊಂದು ಮುಖ್ಯ ಮಗ್ಗುಲು ಲಂಡನ್ ಗಾಥೆ!
ರಾಧಿಕಾ ಲಂಡನ್ ನಲ್ಲಿ ಕೆಲವಾರು ವರ್ಷಗಳಿಂದ ನೆಲೆಸಿದ್ದರೂ ಅಲ್ಲಿ ಅವಳದು ಸಂಘರ್ಷಪೂರ್ಣ ಬದುಕೇ ಆಗಿತ್ತು. ಲಂಡನ್ ನಂತಹ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಬದುಕು ಸಾಗಿಸುವುದು ದೊಡ್ಡ ಸವಾಲು. ಉಳಿದ ಸಂಗತಿಗಳಲ್ಲಿ ಹೇಗೋ ಮಿತವ್ಯಯ ಸಾಧಿಸಿ ಸಂಭಾಳಿಸಿಕೊಂಡು ಹೋಗಬಹುದು ಎಂದುಕೊಂಡರೂ ಬಾಡಿಗೆಯದೇ ಭಾರೀ ಹಾವಳಿ. 1000—1200 ಪೌಂಡ್ ಗಳಿಗಿಂತ ಕಡಿಮೆಯ ಬಾಡಿಗೆ ಮನೆ ಸಿಗುವುದೇ ದುಸ್ತರ. ಅದೂ ಪುಟ್ಟ ಮನೆ. ನಮ್ಮ ಕರೆನ್ಸಿಯಲ್ಲಿ ಒಂದು ಲಕ್ಷದ ಮೇಲೆ! ಕೊಂಚ ಕಡಿಮೆ ಬಾಡಿಗೆಯ ಮನೆ ಸಿಗಬೇಕಾದರೆ ನಗರದ ಹೊರವಲಯಗಳನ್ನು ಹುಡುಕಿಕೊಂಡು ಹೋಗಬೇಕು. ಅಲ್ಲಿಂದ ನಿಮ್ಮ ಕೆಲಸದ ತಾಣಕ್ಕೆ ಬಸ್ ಯಾ ಲೋಕಲ್ ಟ್ರೈನ್ ನಲ್ಲಿ ಪ್ರಯಾಣವೆಂದರೆ ಅದು ಮತ್ತೊಂದು ವಿಶೇಷ ಖರ್ಚು! ಇತ್ತೀಚಿನ ವರ್ಷಗಳಲ್ಲಂತೂ uk ಯ ಆರ್ಥಿಕತೆ ಸಾಕಷ್ಟು ಕುಸಿದು ಉದ್ಯೋಗಾವಕಾಶಗಳೂ ವಿಪರೀತ ಕಡಿಮೆಯಾಗಿಬಿಟ್ಟಿವೆ. ಹಾಗಾಗಿಯೇ ನೂರು ಕನಸುಗಳನ್ನು ಕಟ್ಟಿಕೊಂಡು ಈ ಲಂಡನ್ ಎಂಬ ಮಾಯಾನಗರಿಗೆ ನೆಲೆಯೂರಲು ಬರುವ ಬಹಳಷ್ಟು ಹೊರಗಿನ ಮಂದಿ—ಅದರಲ್ಲೂ ಏಷಿಯನ್ನರು—ಬಲು ಬೇಗ ಭ್ರಮನಿರಸನ ಹೊಂದಿ ತಂತಮ್ಮ ದೇಶಗಳಿಗೆ ಮರಳಿಬಿಡುತ್ತಾರೆ. ನಮ್ಮವರು ಅನ್ನಿಸಿಕೊಂಡವರು ಅಲ್ಲಿ ಹೇರಳವಾಗಿ ನೆಲೆಸಿದ್ದಾರೆ..ಆದರೆ ಅಲ್ಲಿಯ ನೀರು ಗಾಳಿಗೆ ಹೊಂದಿಕೊಂಡವರು ಹೆಚ್ಚುಕಡಿಮೆ ಅಲ್ಲಿಯವರಂತೆಯೇ ಆಗಿಬಿಟ್ಟಿರುತ್ತಾರೆ. ನಾನು ಕಂಡಂತೆ ವ್ಯಾವಹಾರಿಕತೆ—ಔಪಚಾರಿಕತೆಯೇ ಅಲ್ಲಿ ಪ್ರಧಾನ. ಆಶ್ವಾಸನೆ—ಹಾರೈಕೆಗಳಷ್ಟು ಸುಲಭವಾಗಿ ಸಲೀಸಾಗಿ ನೆರವು ದಕ್ಕುವುದಿಲ್ಲ! ಬಹುಶಃ ಎಲ್ಲಿ ನಾವು ಅವರಿಗೆ ಹೊರೆಯೇ ಆಗಿಬಿಡುತ್ತೇವೋ ಅಂತಲೋ ವಿಶೇಷ ಜವಾಬ್ದಾರಿ ಹೊರಬೇಕಾಗುತ್ತದೆನ್ನುವ ಭಯವೋ ಕಾಣೆ…ಒಂದು ಅಂತರ ಕಾದುಕೊಳ್ಳುವ ಪ್ರವೃತ್ತಿ. ಅಂತಹ ಪ್ರತಿಭಾವಂತ ಮಗಳಿಗೆ ಹೂ ಹಾಸಲ್ಲದಿದ್ದರೂ ಒಂದು ಬೆಚ್ಚನೆಯ ಸ್ವಾಗತ ದೊರೆಯುವ ನಿರೀಕ್ಷೆ ಇತ್ತು ನಮಗೆ. ಯಾಕೋ ಹಾಗಾಗಲಿಲ್ಲ. ಇರಲಿ. ಇದು ನನ್ನ ಅನುಭವದ ಹಾಗೂ ಅತ್ಯಂತ ವೈಯಕ್ತಿಕ ಅಭಿಪ್ರಾಯ.
ಹಾಗೆ ನೋಡಿದರೆ ನಮ್ಮ ಮಗಳು ರಾಧಿಕಾ ಮಹಾ ಗಟ್ಟಿಗಿತ್ತಿ. ಹೇಗಾದರೂ ಸರಿಯೇ ತನಗೆ ಅತ್ಯಂತ ಪ್ರಿಯವಾದ ಈ ನಗರದಲ್ಲಿಯೇ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಹಠ ಹಿಡಿದು ಅಲ್ಲಿ ಹಲ್ಲು ಕಚ್ಚಿಕೊಂಡು ನಿಂತವಳು. ಅವಳ ಆ ಸಾಹಸಗಾಥೆಯನ್ನು ನಿರೂಪಿಸಹೊರಟರೆ ಅದೇ ಒಂದು ದೊಡ್ಡ ಕಾದಂಬರಿಯಾಗಿಬಿಡುತ್ತದೆ! ಎಂಬತ್ತು ವಯಸ್ಸಿನ ಆಲ್ ಜ಼ೈಮರ್ ನಿಂದ ಬಳಲುತ್ತಿದ್ದ ವೃದ್ಧೆಯನ್ನು ನೋಡಿಕೊಳ್ಳುವುದರಿಂದ ಹಿಡಿದು ಅನೇಕ ಬಗೆಯ ಕೆಲಸಗಳಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ತೊಡಗಿಕೊಂಡು ಸಂಬಂಧಪಟ್ಟವರಿಂದ ಭೇಷ್ ಅನ್ನಿಸಿಕೊಂಡವಳು ನನ್ನ ಮಗಳು! ಅದಕ್ಕೇ ಹೇಳುವುದು—ಪ್ರತಿಭೆ ಇದ್ದರಷ್ಟೇ ಸಾಲದು; ಅದರ ಪ್ರದರ್ಶನಕ್ಕೆ ಸೂಕ್ತ ವೇದಿಕೆಗಳು ದೊರೆಯಬೇಕು…ವೇದಿಕೆಗಳನ್ನು ಕಲ್ಪಿಸಿಕೊಡುವ ಗಾಡ್ ಫಾದರ್ ಗಳು ಬೆಂಬಲಕ್ಕಿರಬೇಕು!…ಅಗಾಧವಾದ ಅದೃಷ್ಟ ನಿಮ್ಮ ಪಾಲಿಗಿರಬೇಕು! ಇಲ್ಲದಿದ್ದರೆ ನಿಮ್ಮ ಪ್ರತಿಭೆ..ಸೃಜನಶೀಲತೆ..ಎಲ್ಲವೂ ‘ಕಾಡ ಬೆಳದಿಂಗಳು’. ಎಂಥ ವಿಪರೀತ ಪರಿಸ್ಥಿತಿಯಲ್ಲೂ ಎದೆಗುಂದದೆ ನಮ್ಮ ಸಹಾಯದ ಮೇಲೆಯೂ ಅವಲಂಬಿಸದೆ ವರ್ಷಗಳ ಕಾಲ ಲಂಡನ್ ನಲ್ಲಿ ಜೀವನ ನಡೆಸಿದವಳು ನಮ್ಮ ಮಗಳು ರಾಧಿಕಾ.
ಈ ಸಮಯದಲ್ಲಿಯೇ ಲಂಡನ್ ನಲ್ಲಿ ಮಿಸ್ ಹಾಗೂ ಮಿಸೆಸ್ ಬ್ರಿಟನ್ ಎಂಬ ಪ್ರತಿಷ್ಠಿತ ಸೌಂದರ್ಯಸ್ಪರ್ಧೆ ನಡೆಯಿತು. ರಾಧಿಕಾ ಹಿಂದುಳಿಯುವುದುಂಟೇ? ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಸೂಕ್ತ ತರಬೇತಿಯನ್ನೂ ಪಡೆದುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದಳು. ಹತ್ತಾರು ಕಠಿಣ ಸುತ್ತುಗಳ ಪರೀಕ್ಷೆಯ ನಂತರ ಫಲಿತಾಂಶಗಳು ಹೊರಹೊಮ್ಮಿದವು: ರಾಧಿಕಾ “ಮಿಸ್ ಗ್ಲಾಮರಸ್” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ವಿಜೇತೆಯಾಗಿ ಆಯ್ಕೆಯಾದಳು! ಅಷ್ಟೇ ಅಲ್ಲ, ಒಟ್ಟಾರೆ ಸ್ಪರ್ಧೆಯ ಎರಡನೆಯ ರನ್ನರ್ ಅಪ್ ಆಗಿಯೂ ಆಯ್ಕೆಯಾಗಿ ಜಯಭೇರಿ ಮೊಳಗಿಸಿದಳು! ಮಕ್ಕಳ ಅಭೂತಪೂರ್ವ ಯಶಸ್ಸಿಗಿಂತಲೂ ಸಂತಸ ನೀಡುವ ಮತ್ತಾವುದಾದರೂ ಸಂಗತಿ ತಂದೆ ತಾಯಿಗಳ ಪಾಲಿಗಿರುವುದುಂಟೇ?! ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಮ್ಮನ್ನು ಲಂಡನ್ ಗೆ ಕರೆಸಿಕೊಳ್ಳಬೇಕೆಂದು ಅವಳಿಗೆ ಮಹದಾಸೆಯಿತ್ತು. “ನನ್ನ ಎಂ ಎ ಪದವಿ ಸ್ವೀಕಾರದ ಘಟಿಕೋತ್ಸವಕ್ಕೂ ನಿಮಗೆ ಬರಲಾಗಲಿಲ್ಲ; ಈಗಲಾದರೂ ಬನ್ನಿ” ಎಂದು ಹಂಬಲಿಸಿದಳು. ಆದರೆ ಪರದೇಶಕ್ಕೆ ಹೋಗಲು ಬೇಕಾದ ವೀಸಾ ಇತ್ಯಾದಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಗತ್ಯವಿದ್ದಷ್ಟು ಸಮಯಾವಕಾಶ ನಮಗಿರಲಿಲ್ಲವಾಗಿ ಈ ಬಾರಿಗೂ ಅವಳಿಗೆ ನಿರಾಶೆಯೇ ಕಾದಿತ್ತು. ಫೋಟೋಗಳು ಹಾಗೂ ವಿಡಿಯೋ ತುಣುಕುಗಳನ್ನೇ ನೋಡಿ ನೋಡಿ ನಾವು ಸಿಹಿ ತಿಂದು ಸಂಭ್ರಮಿಸಿದೆವು! ಬಂಧು ಬಳಗ ಮಿತ್ರ ಬಳಗದೊಂದಿಗೆಲ್ಲಾ ವಿಷಯವನ್ನು ಹಂಚಿಕೊಂಡು ಮತ್ತಷ್ಟು ಖುಷಿ ಪಟ್ಟೆವು!


ಆ ಸಂದರ್ಭಕ್ಕೆ ಹೋಗಲಾಗದಿದ್ದರೂ ಅದಾದ ಕೆಲ ಸಮಯಕ್ಕೇ ರಾಧಿಕಾ ನಮ್ಮಿಬ್ಬರನ್ನೂ ಲಂಡನ್ ಗೆ ಕರೆಸಿಕೊಂಡೇ ಬಿಟ್ಟಳು! ಅನಿರುದ್ಧನ ವೃತ್ತಿ ಬದುಕು ಆಗಷ್ಟೇ ಆರಂಭವಾಗುತ್ತಿದ್ದುದರಿಂದ ಅವನು ಬರುವ ಸ್ಥಿತಿಯಲ್ಲಿರಲಿಲ್ಲ. ನಾನು ಹಿಂದೆ ಮ್ಯಾಂಚೆಸ್ಟರ್ ವಿಶ್ವಕನ್ನಡ ಸಮ್ಮೇಳನದಲ್ಲಿ ನಮ್ಮ”ಸಿಕ್ಕು” ನಾಟಕದ ಪ್ರದರ್ಶನಕ್ಕಾಗಿ ಹೋಗಿದ್ದ ಸಂದರ್ಭದಲ್ಲಿ ಲಂಡನ್ ನಗರವನ್ನು ನೋಡಿದ್ದೆನಾದರೂ ರಂಜನಿಗೆ ಇದು ಮೊದಲ ಲಂಡನ್ ಪ್ರವಾಸ. ಈ ಪ್ರವಾಸದ ಸಂದರ್ಭದಲ್ಲಿ ನಾವು ಲಂಡನ್ ನಲ್ಲಿ ಕಳೆದದ್ದು ಒಂದು ತಿಂಗಳು. “ನೀವು ಇಲ್ಲಿರುವಷ್ಟು ಸಮಯದಲ್ಲಿ ಒಂದು ದಿನವೂ ಖಾಲಿ ಕುಳಿತು ವ್ಯರ್ಥವಾಗಬಾರದು..ಸಾಧ್ಯವಾದಷ್ಟೂ ಸುತ್ತಾಡಿಸಿಬಿಡುತ್ತೇನೆ” ಎಂದು ರಾಧಿಕಾ ಕಡ್ಡಾಯವಾಗಿ ಹೇಳಿಬಿಟ್ಟಿದ್ದಳು. ಎಲ್ಲ ಜಾಗಗಳಿಗೂ ಅವಳು ಕಾರ್ಯನಿಮಿತ್ತ ಬರಲಾಗದಿದ್ದರೂ ನಮಗೆ ಎಲ್ಲಾ ವ್ಯವಸ್ಥೆ ಮಾಡಿ ಕಳಿಸಿಕೊಡುತ್ತಿದ್ದಳು. ಅವುಗಳಲ್ಲಿ ಮುಖ್ಯವಾದ ಎರಡು ಪ್ರವಾಸಗಳೆಂದರೆ ಸ್ಟೋನ್ ಹೆಂಜ್ , ಬಾತ್ ಹಾಗೂ ಶೇಕ್ಸ್ ಪಿಯರನ ಜನ್ಮಸ್ಥಳ ಸ್ಟ್ರಾಟ್ ಫೋರ್ಡ್ ಅಪಾನ್ ಎವಾನ್ ಗಳಿಗೆ ಹೋಗಿಬಂದದ್ದು; ಹಾಗೂ ಸ್ಕಾಟ್ ಲೆಂಡ್ ನ ಗ್ಲಾಸ್ಗೋ, ಎಡಿನ್ ಬರೊ ಹಾಗೂ ಹೈಲ್ಯಾಂಡ್ ಗಳಿಗೆ ಹೋಗಿಬಂದದ್ದು. ನಿಜಕ್ಕೂ ಎಲ್ಲವೂ ಅದ್ಭುತ ಪ್ರವಾಸೀ ತಾಣಗಳು. ಇದ್ದ ಒಂದೇ ಸಮಸ್ಯೆ ಅಂದರೆ ಆಹಾರದ್ದು! ಸಸ್ಯಾಹಾರಿ ದಕ್ಷಿಣ ಭಾರತೀಯರ ಜಿಹ್ವೆಗೆ ಮುದನೀಡುವ ತಿಂಡಿ ತಿನಿಸುಗಳನ್ನು ಅಲ್ಲಿ ನಿರೀಕ್ಷಿಸುವಂತೆಯೇ ಇರಲಿಲ್ಲ! ನಾವೇ ಖಾಕರಾ—ಥೇಪ್ಲಾ ಇತ್ಯಾದಿ ಸಿದ್ಧ ಆಹಾರಗಳನ್ನು ತುಂಬಿಕೊಂಡು ಹೋಗಿದ್ದರಿಂದ ಹೇಗೋ ಜೀವನ ಕಳೆಯಿತು ಅನ್ನಿ! ಸ್ಟ್ರ್ಯಾಟ್ ಫೋರ್ಡ್ ಅಪಾನ್ ಎವಾನ್ ನಲ್ಲಂತೂ ಶೇಕ್ಸಪಿಯರ್ ಹುಟ್ಟಿದ ಮನೆಯಂಗಳದಲ್ಲಿ ನಿಂತಾಗ ಅನಿರ್ವಚನೀಯ ಆನಂದ!! ಅಲ್ಲಿದ್ದವರಿಗೆಲ್ಲಾ ಬಲು ಸಂಭ್ರಮದಿಂದ “ನಾನು ನಮ್ಮ ಕನ್ನಡ ಭಾಷೆಯಲ್ಲಿ ಹ್ಯಾಮ್ಲೆಟ್ ನ ಪಾತ್ರ ಮಾಡಿದ್ದೇನೆ” ಎಂದು ಹೇಳಿಹೇಳಿಕೊಂಡು ಖುಷಿಪಟ್ಟೆ! “ಇರಲೆ ಇರದಿರಲೆ ” ಸ್ವಗತದ ಸಾಲುಗಳನ್ನು ಮತ್ತೆ ಮತ್ತೆ ಹೇಳಿಕೊಂಡು ಹನಿಗಣ್ಣಾದೆ. ಶೇಕ್ಸ್ ಪಿಯರ್ ಅಂದರೆ ಹಾಗೇ— ನಮ್ಮ ಭಾವಕೋಶವನ್ನೇ ಆಕ್ರಮಿಸಿಕೊಂಡುಬಿಡುವ ಮೇರು ನಾಟಕಕಾರ..ದಾರ್ಶನಿಕ!
ಲಂಡನ್ ನಗರದ ಅನೇಕ ಪಾರ್ಕ್ ಹಾಗೂ ಮ್ಯೂಸಿಯಂಗಳಿಗೆ ರಾಧಿಕಾ ಕರೆದುಕೊಂಡು ಹೋದಳು. ಎಲ್ಲೆಲ್ಲೂ ಹಸಿರು..ಶುದ್ಧಗಾಳಿ..ಸ್ವಚ್ಛ ವಾತಾವರಣ! ಚಂದದ ನಾಗರಿಕ ಬದುಕಿಗೆ ಮತ್ತೇನು ಬೇಕು?
ಸಾಕಷ್ಟು ವರ್ಷಗಳಿಂದ ಲಂಡನ್ ನಲ್ಲಿ ತಮ್ಮದೇ ಇಂಡಸ್ಟ್ರಿಯನ್ನು ನಡೆಸಿಕೊಂಡು ನೆಲೆಸಿರುವ ಆತ್ಮೀಯ ಮಿತ್ರರೆಂದರೆ ಪ್ರಮೋದ್ ಹಾಗೂ ಸಂಧ್ಯಾ ಪ್ರಮೋದ್ ಕುಟುಂಬ ಹಾಗೂ ಪ್ರಮೋದ್ ರ ಸೋದರ ಪ್ರಸನ್ನ ಹಾಗೂ ಗೌರಿ ಪ್ರಸನ್ನ ಕುಟುಂಬ. ಪ್ರಮೋದ್ ಅವರು ವಿವಿಡ್ ಲಿಪಿಯೆಂಬ ಮಾಧ್ಯಮ ಸಂಸ್ಥೆಯನ್ನೂ ನಡೆಸಿಕೊಂಡು ಬರುತ್ತಾ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಿರುವವರು; ಗೌರಿ ಪ್ರಸನ್ನ ಅವರು ಉತ್ತಮ ಬರಹಗಾರ್ತಿ. ಹಲವಾರು ಕತೆ ಕವಿತೆಗಳನ್ನು ಬರೆದಿದ್ದಾರೆ; ಮುಖಪುಸ್ತಕದ ತಮ್ಮ ಚಂದದ ಬರಹಗಳಿಂದ ಸಹೃದಯರ ಗಮನ ಸೆಳೆದಿದ್ದಾರೆ. ಈ ಎರಡು ಕುಟುಂಬಗಳೊಂದಿಗೂ ಒಂದಷ್ಟು ಸಾರ್ಥಕ ಸಮಯವನ್ನು ಕಳೆಯುವ, ನಮ್ಮ ಊಟ ತಿಂಡಿಗಳನ್ನು ಸವಿಯುವ ಸದವಕಾಶ ನಮಗೆ ದೊರೆಯಿತು.
ಪ್ರಮೋದ್ ಅವರು ಅವರ ಮನೆಯ ಸಮೀಪದಲ್ಲೇ ಇದ್ದ ಹೋಟೆಲ್ ಒಂದರ ಸಭಾಂಗಣದಲ್ಲಿ “ಬಿಂಬ ಆ ತೊಂಬತ್ತು ನಿಮಿಷಗಳು” ಚಲನಚಿತ್ರದ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಲಂಡನ್ ನಗರದ ಅನೇಕ ಸಹೃದಯ ಪ್ರೇಕ್ಷಕರು ಪ್ರದರ್ಶನಕ್ಕೆ ಬಂದು ಚಿತ್ರವನ್ನು ನೋಡಿ ಅಪಾರವಾಗಿ ಮೆಚ್ಚಿಕೊಂಡರು. ಪ್ರದರ್ಶನದ ನಂತರ ಒಂದು ಅರ್ಥಪೂರ್ಣ ಸಂವಾದವೂ ನಡೆದು ಆರೋಗ್ಯಕರ ಚರ್ಚೆಗೆ ಅವಕಾಶವಾಯಿತು.
ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ನೋಡಿದ ಎರಡು ನಾಟಕಗಳ ಬಗ್ಗೆ ನಿಮಗೆ ಹೇಳಲೇಬೇಕು. ಮೊದಲನೆಯದು “ಮೌಸ್ ಟ್ರ್ಯಾಪ್”. ಒಂದು ಕೊಲೆಯ ಸುತ್ತ ಗಿರಕಿ ಹೊಡೆಯುತ್ತಾ ಕಡೆಯಲ್ಲಿ ರಹಸ್ಯವನ್ನು ಭೇದಿಸುವ ಕಥಾಹಂದರದ ಅಗಾಥಾ ಕ್ರಿಸ್ಟಿಯವರ ಈ ಪತ್ತೇದಾರಿ ನಾಟಕ ಮೊಟ್ಟಮೊದಲು ಲಂಡನ್ ನಲ್ಲಿ ಪ್ರದರ್ಶನಗೊಂಡದ್ದು 1952 ರಲ್ಲಿ! ಅಂದಿನಿಂದ ಇಂದಿನವರೆಗೆ ಸತತವಾಗಿ ನಿರಂತರವಾಗಿ ಪ್ರದರ್ಶಿತವಾಗುತ್ತಲೇ ಬಂದಿರುವ “ಮೌಸ್ ಟ್ರ್ಯಾಪ್” ನಾಟಕ ಜಗತ್ತಿನಲ್ಲೇ ಅತ್ಯಂತ ದೀರ್ಘ ಕಾಲ ಪ್ರದರ್ಶಿತವಾಗಿರುವ—ಆಗುತ್ತಿರುವ ನಾಟಕ! ಎಂದರೆ ಈಗಾಗಲೇ 72 ವರ್ಷಗಳ ಪ್ರದರ್ಶನವನ್ನು ಪೂರೈಸಿದ್ದರೂ ಇನ್ನೂ ಈ ನಾಟಕದ ಜನಪ್ರಿಯತೆ ಎಳ್ಳಷ್ಟೂ ಮಾಸಿಲ್ಲ ಎನ್ನುವುದೇ ಸೋಜಿಗದ ಸಂಗತಿ! ನಟವರ್ಗ ಹಲವು ಹತ್ತು ಬಾರಿ ಬದಲಾಗಿದ್ದಾರೆ; ತಂತ್ರಜ್ಞರು ಬದಲಾಗಿದ್ದಾರೆ; ಆದರೆ ಅದೇ ನಾಟಕ ಹಾಗೂ ಅದೇ ವಿನ್ಯಾಸ! ಲಂಡನ್ ಗೆ ಬರುವ ಹೊರಗಿನವರೆಲ್ಲರಿಗೂ ಲಂಡನ್ ನ ಮ್ಯೂಸಿಯಂಗಳು ಹಾಗೂ ಪಾರ್ಕ್ ಗಳಂತೆ ಈ ನಾಟಕವೂ ಒಂದು ಪ್ರೇಕ್ಷಣೀಯ ಸ್ಥಳವೇ ಆಗಿಬಿಟ್ಟಿದೆ! “ಲಂಡನ್ ನಲ್ಲಿ ತಪ್ಪಿಸಿಕೊಳ್ಳಲೇ ಬಾರದ ಸಂಗತಿ”ಗಳ ಪಟ್ಟಿಯಲ್ಲಿ ಮೌಸ್ ಟ್ರ್ಯಾಪ್ ನಾಟಕಕ್ಕೆ ವಿಶೇಷ ಸ್ಥಾನ! ಹಲವಾರು ದಿನಗಳು ಮುಂಚಿತವಾಗಿ, ಕೆಲವೊಮ್ಮೆ ತಿಂಗಳುಗಳ ಮುಂಚಿತವಾಗಿ ಸೀಟ್ ಗಳನ್ನು ಕಾದಿರಿಸಬೇಕಾಗುತ್ತದೆ! ಈಗಲೂ!!! ಇದು ಮಾತ್ರ ನಿಜಕ್ಕೂ ದಂಗುಬಡಿಸುವ ಜನಪ್ರಿಯತೆ! ನನ್ನ ಹಿಂದಿನ ಭೇಟಿಯ ಸಂದರ್ಭದಲ್ಲೂ ಟಿಕೇಟ್ ದೊರೆಯದ ಕಾರಣಕ್ಕೆ ಈ ನಾಟಕವನ್ನು ನನಗೆ ನೋಡಲಾಗಿರಲಿಲ್ಲ. ಆ ಕಾರಣಕ್ಕೇ ಮುಂಜಾಗ್ರತೆಯ ಕ್ರಮವಾಗಿ ರಾಧಿಕಾ ಮೊದಲೇ ಟಿಕೆಟ್ ಗಳನ್ನು ಕಾದಿರಿಸಿಬಿಟ್ಟಿದ್ದಳು!
ನನಗೆ ಪ್ರದರ್ಶನದಲ್ಲಿ ಪ್ರಪ್ರಥಮವಾಗಿ ಗಮನ ಸೆಳೆದದ್ದು ತಂಡದ ವೃತ್ತಿಪರತೆ. ಎಲ್ಲಿಯೂ ಒಂದು ಎಳ್ಳುಕಾಳಿನಷ್ಟೂ ಆಭಾಸವಾಗಲೀ ಗೊಂದಲವಾಗಲೀ ಇಣುಕಲೂ ಇಲ್ಲ. ಪ್ರತಿಯೊಂದೂ ಗೆರೆ ಕೊರೆದಿಟ್ಟಹಾಗೆ. ನನಗನ್ನಿಸುವ ಮಟ್ಟಿಗೆ ಪ್ರದರ್ಶನದ ಸಂಖ್ಯೆ ಎಷ್ಟನೆಯದೇ ಆದರೂ ಒಂದರಿಂದ ಮತ್ತೊಂದು ಪ್ರದರ್ಶನಕ್ಕೆ ವ್ಯತ್ಯಾಸ ಗುರುತಿಸುವುದು ಅಸಾಧ್ಯದ ಮಾತು! ಮಾತಿನ ಒಂದೇ ಒಂದು ತೊದಲು… ರಂಗಸಜ್ಜಿಕೆಯ ಬದಲಾವಣೆಯಲ್ಲಿ ಅರೆ ಚಣದ ವಿಳಂಬ.. ಹಿನ್ನೆಲೆ ಸಂಗೀತದ ಪ್ರಸ್ತುತಿಯಲ್ಲಿ ಸಾಸಿವೆಕಾಳಿನ ಏರಿಳಿತ…ಉಂಹೂಂ!! ಎಷ್ಟು ಮಾತ್ರಕ್ಕೂನೂ ಇಲ್ಲ! ಅಂತಹ ಖಚಿತತೆ..ನಿರ್ದಿಷ್ಟತೆ..ಸ್ಪಷ್ಟತೆ! 70 ವರ್ಷಗಳ ಹಿಂದಿನ ನಾಟಕದ ಇಂದಿನ ಪ್ರಸ್ತುತಿಯಲ್ಲೂ ಯಾವ ಬದಲಾವಣೆ ಇಲ್ಲ; ವಿನ್ಯಾಸ—ಆಶಯ—ಆಕೃತಿಗಳನ್ನು ಬದಲಿಸುವ ಪ್ರಯತ್ನವಿಲ್ಲ! ಒಂದು ರೀತಿಯಲ್ಲಿ ಪರಂಪರೆಯನ್ನು ರಕ್ಷಿಸಿಕೊಂಡು ಬರುವಲ್ಲಿನ ಶ್ರದ್ಧೆ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು. ನಾನು ಮೊದಲೇ ಪತ್ತೇದಾರಿ ಕಥೆ ಕಾದಂಬರಿಗಳನ್ನು ಇಷ್ಟ ಪಡುವವ; ಆ ಮಾರ್ಗದ ನಾಟಕ—ಧಾರಾವಾಹಿಗಳನ್ನು ನಿರ್ದೇಶಿಸಿದವ. ಹಾಗಾಗಿ “ಮೌಸ್ ಟ್ರ್ಯಾಪ್” ನಾಟಕ ನನಗೆ ಅತೀವ ಸಂತಸವನ್ನು ನೀಡಿತು.






0 Comments