ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿರಸಿ ಕ್ಯಾಂಪೂ, ಕುಂಟ ಕೋಣವೂ..

ಕಿರಣ ಭಟ್‌

ಕನ್ನಡದ ನಾಟಕ ಕಂಪ್ನಿಗಳು ಬದುಕೋದು ಎರಡು ಜಾತ್ರೆಗಳಿಂದ ಅಂತ ಹೇಳ್ತಾರೆ. ಒಂದು ಬನಶಂಕರಿ ಜಾತ್ರೆ, ಇನ್ನೊಂದು ಶಿರಸಿ ಜಾತ್ರೆ. ಈ ಎರಡೂ ಜಾತ್ರೆಗಳಲ್ಲಿ ಐದಾರು ಕಂಪ್ನಿಗಳು ಟೆಂಟ್‌ ಹಾಕ್ತವೆ. ಶಿರಸಿ ಮಾರಿ ಜಾತ್ರೆಗೆ ಬಂದ ಪ್ರತಿ ಕಂಪ್ನಿಯೂ ಜಾತ್ರೆ ಮುಗಿದ ಮೇಲೂ ನಾಲ್ಕು ತಿಂಗಳು ಅಲ್ಲೇ ಕ್ಯಾಂಪ್‌ ಹೂಡಿ, ಎಲ್ಲ ನಾಟಕಗಳನ್ನೂ ಪ್ರಯೋಗಿಸಿ, ನಂತರ ಮಳೆಗಾಲದ ಕ್ಯಾಂಪ್‌ ಗೆ ಹೊರಡ್ತದೆ.

ಈ ಕಂಪನಿಯ ಕಲಾವಿದರಿಗೆ ಶಿರಸಿಯ ಕಲಾಸಕ್ತರೆಂದರೆ ತುಂಬಾ ಪ್ರೀತಿ, ಗೌರವ. ಅದ್ಯಾವದೇ ನಾಟಕ ಇರ್ಲಿ ಗಲಾಟೆ ಮಾಡದೆ, ನಾಟಕ ನೋಡಿ, ನಾಟಕ ಮುಗಿದ ಮೇಲೂ ಸ್ವಲ್ಪ ನಿಂತು ಕಲಾವಿದರನ್ನು ಮಾತನಾಡಿಸಿ ಹೋಗುವ ರಂಗಪ್ರೇಮಿಗಳು ಇವರು. ಇಷ್ಟೇ ಅಲ್ಲ, ಇವರ ಔದಾರ್ಯವೂ ದೊಡ್ಡದೇ.

ಕೊರೋನಾ ಸಂದರ್ಭ ಅದು. ಮಾತ್ರ ಜಾತ್ರೆ ಮುಗಿದಿತ್ತು. ಥಟ್ಟನೆ ಕೊರೋನಾ ವಕ್ಕರಿಸಿತು. ಲಾಕೌಟ್‌ ಘೋಷಣೆಯಾಯ್ತು. ನಾಟಕ ಪ್ರದರ್ಶನಗಳು ನಿಂತುಹೋದವು. ದಿನ ದಿನದ ಕಮಾಯಿ ಯಿರಲಿ, ಟೆಂಟ್‌ ಕಿತ್ತು ಸಾಗಾಟ ಮಾಡಲಾಗದ ಕಷ್ಟ. ಕಲಾವಿದರು ಉಪವಾಸ ಬೀಳಬೇಕಾದ ದುಸ್ಥಿತಿ. ಇಂಥ ಸಂದರ್ಭದಲ್ಲಿ ಶಿರಸಿಯ ರಂಗಾಸಕ್ತರು ಅವರನ್ನುತಿಂಗಳುಗಟ್ಟಲೆ ಪೊರೆದರು. ಆಹಾರ, ಔಷಧ, ಬಟ್ಟೆ ಬರೆ ಪೂರೈಸಿ ಅವರನ್ನು ನೋಡಿಕೊಂಡ್ರು.

ಇಂಥ ಶಿರಸಿಯಲ್ಲಿ ಈ ವರ್ಷಾನೂ ನಾಲ್ಕು ಕಂಪನಿಗಳು ಟೆಂಟ್‌ ಹಾಕಿದ್ದವು. ಮೂರು ಇನ್ನೂ ನಡೀತಿವೆ. ಪ್ರತಿ ಜಾತ್ರೇಲೂ ಒಂದು ನಾಲ್ಕು ನಾಟಕ ನೋಡೋದು ನನ್ನ ಹರಕೆ. ಈ ಬಾರಿ ಯಾಕೋ ಜಾತ್ರೆ ಮಿಸ್ಸಾಯ್ತು. ಹರಕೆ ತೀರಿಸದ ಬೇಸರದಲ್ಲಿದ್ದವನಿಗೆ ಥಟ್ಟನೆ ಶಿರಸಿಗೆ ಹೋಗೋ ಅವಕಾಶ ಬಂತು. ಹೋದವನು ಬಿಡ್ಲೇ ಇಲ್ಲ. ಜೇವರ್ಗಿ ಕಂಪ್ನಿಯ ಟೆಂಟ್‌ ಗೆ ನುಗ್ಗಿದ್ದೇ.

ಗೆಳೆಯ ಜೇವರ್ಗಿ ರಾಜಣ್ಣ ಈಗಿನ ʼಡಬಲ್‌ ಮೀನಿಂಗ್‌ʼ ಕಾಲದಲ್ಲೂ ಸದಭಿರುಚಿಯ ನಾಟಕಗಳನ್ನು ಬರೆಯೋದು, ಆಡಿಸೋದ್ರಲ್ಲಿ ಪ್ರಸಿದ್ಧರು. ನಾನು ಹೋದ ದಿನ ಅವರ ʼ ಕುಂಟ ಕೋಣ: ಮೂಕ ಜಾಣʼ ನಾಟ್ಕ ನಡೀತಿತ್ತು.

ಈಗ ಎಲ್ಲ ಕಂಪ್ನಿಗಳು ನಡೀತಿರೋದೂ ಕಾಮೆಡಿ ದೃಶ್ಯಗಳ ಮೇಲೆ. ಪ್ರಸಿದ್ಧ ಕಾಮೆಡಿ ಟ್ರ್ಯಾಕ್‌ ಗಳನ್ನು ಬೇರೆ ಬೇರೆ ನಾಟಕಗಳ ನಡುವೆ ಸೇರಿಸಿಬಿಡುವ ಹುಷಾರಿತನ ಎಲ್ಲ ಕಂಪನಿಗಳಿಗೆ ಸಿದ್ಧಿಸಿದೆ. ಹಾಗಾಗಿ ಅದೇ ಹೆಸರಿನ ನಾಟ್ಕ ಮತ್ತೆ ಮತ್ತೆ ನೋಡಿದ್ರೂ ಕಥೆಯ ಹಂದರ ಬೇರೆಯೇ ಆಗಿರೋದ್ರಿಂದ ಹೊಸಾ ನಾಟಕ ನೋಡಿದ ಅನುಭವ ಕೊಡ್ತದೆ.

ನಾನು ನೋಡಿದ ಪ್ರದರ್ಶನವೂ ಹಾಗೇ ಇತ್ತು. ಮೂಕ,ಕುಂಟ, ಕುರುಡರ ಅವಾಂತರಗಳ ಕಾಮೆಡಿ ಟ್ರ್ಯಾಕ್‌ ಅದೇ ಆಗಿದ್ರೂ ಕಥಾ ಭಾಗ ಬೇರೆಯೇ. ಶ್ರೀಮಂತ ಯುವಕ, ಬಡ ಹುಡುಗಿ, ಅವರ ಪ್ರೇಮ, ಹಸ್ತಾಂತರವಾಗುವ ಮಗು, ಮತ್ತೆ ಪುನರ್ಮಿಲನ. ಇಂಥ ಕಥೆಯ ನಡುವೆ. ಈ ಕಂಪನಿಯ ಮಾಸ್ಟರ್‌ ಪೀಸ್‌ ಕಾಮೆಡಿ. ಅದೇ ಆದ್ರೂ ಪ್ರತಿ ಸರ್ತಿಯೂ ಹೊಸದೇ ಎನಿಸುವ ಆಂಗಿಕಾಭಿನಯಗಳು. ನಟರು ಆಗಾಗ್ಗೆ ಹೊರಡಿಸುವ ತಕ್ಷಣದ ಪ್ರತಿಕ್ರಿಯೆಗಳು. ಪ್ರೇಕ್ಷಕರ ಜೊತೆಗಿನ ಅನುಸಂಧಾನಗಳು ಪ್ರತಿ ಪರ್ದರ್ಶನವನ್ನೂ ಹೊಸದಾಗಿಸ್ತವೆ. ಈ ಪ್ರದರ್ಶನವೂ ಹಾಗೇ ಇತ್ತು. ಪ್ರೇಕ್ಷಕರಲ್ಲಿ ಕೆಲವರು ನಾಟಕವನ್ನು ಅದೆಷ್ಟು ಸರ್ತಿ ನೋಡಿದ್ದರೋ, ಮುಂದಿನ ಡೈಲಾಗ್‌ ಅವರೇ ಹೇಳ್ತಿದ್ರು.

ಜೊತೆಗೆ, ಈಗ ಕಂಪ್ನಿ ನಾಟಕಗಳು ಮತ್ತೆ ಸಂಗೀತದ ಕಡೆಗೇ ವಾಲ್ತಿವೆಯೇನೋ ಅನ್ನಿಸ್ತದೆ. ಹಾಡುಗಳನ್ನೆಲ್ಲ ನಟರೇ ಚಲೋ ಆಗಿ ಹಾಡ್ತಾರೆ. ಸಾಂದರ್ಭಿಕವಾಗಿ ಅಲ್ಲಲ್ಲಿ ಬರುವ ಭಾವಗೀತೆಗಳು, ಷರೀಫರ ಹಾಡುಗಳು, ಜಾನಪದ ಗೀತೆಗಳು ಪುಟಾಣಿ ಆರ್ಕೆಸ್ಟ್ರಾ ದ ಭಾವನೆ ಕೊಡ್ತವೆ. ಈ ಪ್ರಯೋಗದಲ್ಲಂತೂ ಮಾರುತಿ ಶೇಟ್‌ ಮತ್ತು ಸುಜಾತಾ ಗುಬ್ಬಿ ಹಾಡಿದ ʼ ಕಾಣದಾ ಕಡಲಿಗೆ…ʼ ಮತ್ತು ʼ ಸುಳ್ಳೇ ಸುಳ್ಳು, ಸಂಸಾರದಾಟ..ʼ ಹಾಡುಗಳಂತೂ ತುಂಬ ಭಾವಪೂರ್ಣವಾಗಿದ್ದವು. ದೃಶ್ಯ ನಿರ್ಮಿತಿಗಳಲ್ಲೂ ಇವರು ಸಾಕಷ್ಟು ಸುಧಾರಿಸಿದ್ದಾರೆ.

ಇದೇ ಕಂಪ್ನಿಯ ಇದೇ ಹೆಸರಿನ ನಾಟ್ಕ ಅದೆಷ್ಟು ಸರ್ತಿ ನೋಡಿದ್ನೋ. ಆದ್ರೆ ಪ್ರತಿ ಸರ್ತಿಗೋ ಹೊಸ ಅನುಭವ ಕೊಡೋದಂತೂ ಸತ್ಯ.


‍ಲೇಖಕರು Admin

26 April, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading