ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೃಥ್ವಿ ಸೂರಿ ಅಂಕಣ – ಕೋರ್ಟ್ ನಿಮ್ಮ ಜತೆಯಲ್ಲಿದ್ದಾಗ..

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು

ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.

ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ

ಅಂಕಣ – 3

ಕೋರ್ಟ್ ನಿಮ್ಮ ಜತೆಯಲ್ಲಿದ್ದಾಗ (WHEN THE COURT IS WITH YOU)

ಯುವ ವಕೀಲರೊಬ್ಬರು ದಿವಂಗತ ನ್ಯಾಯಮೂರ್ತಿ ಜಿ.ಎನ್. ವೈದ್ಯ ಅವರ ನ್ಯಾಯಾಲಯದಲ್ಲಿ ಹಿರಿಯ ಅನುಭವಿ ವಕೀಲರೊಬ್ಬರ ವಿರುದ್ಧ ವಾದ ಮಾಡಬೇಕಾದ ಸಂದರ್ಭವೊಂದು ಎದುರಾಗಿತ್ತು. ನ್ಯಾಯಮೂರ್ತಿ ವೈದ್ಯ ಅವರು ಅತ್ಯಂತ ಶಿಸ್ತುಬದ್ಧವಾದ ನ್ಯಾಯಾಧೀಶರಾಗಿದ್ದರು. ಪೂರ್ವ ತಯಾರಿಯಿಲ್ಲದೆ ತಮ್ಮ ಮುಂದೆ ಹಾಜರಾಗುವ ವಕೀಲರು ಹಾಗು ತಲೆಬುಡವಿಲ್ಲದ ವಾದ ಮಂಡಿಸುವವರಿಗೆ ಅವರು ಕೇಳುತ್ತಿದ್ದ ತೀಕ್ಷ್ಣವಾದ ಪ್ರಶ್ನೆಗಳಿಗೆ ಬಾಂಬೆ ಹೈಕೋರ್ಟಿನ ವಕೀಲ ಸಮೂಹವೇ ಕಕ್ಕಾಬಿಕ್ಕಿಯಾಗುತ್ತಿತ್ತು.

ನ್ಯಾಯಾಧೀಶರು ಬಹಳ ಚುರುಕಾಗಿದ್ದರು. ಅದರ ಜತೆಯಲ್ಲಿ ಅವರಿಗೆ ತಮ್ಮದೇ ಆದ ಕೆಲವು ಆಯ್ಕೆಗಳು ಮತ್ತು ಪೂರ್ವಾಗ್ರಹಗಳಿದ್ದವು ಎಂದು ಹೇಳಲಾಗುತ್ತಿತ್ತು.

ಇವುಗಳ ಫಲಶೃತಿಯಾಗಿ, ಅಂದಿಗೆ ಶ್ರೇಷ್ಠ ವಕೀಲರು ಎನಿಸಿಕೊಂಡಿದ್ದ ಅನೇಕರು ಇವರ ಮುಂದೆ ಹಾಜರಾಗುವುದನ್ನು ವಿನಾಕಾರಣ ತಪ್ಪಿಸುತ್ತಿದ್ದರು. ದಿಗ್ಗಜರು ಎಂದು ಹೇಳಿಕೊಳ್ಳುವ ವಕೀಲರು ತಮ್ಮ ನ್ಯಾಯಾಲಯದಲ್ಲಿ ಹ್ಯಾಪುಮೋರೆ ಹಾಕಿಕೊಳ್ಳುವುದನ್ನು ನ್ಯಾಯಾಧೀಶರು ಬಹಳವಾಗಿ ಆನಂದಿಸುತ್ತಿದ್ದರು.

ಇವುಗಳ ನಡುವೆ ಅತೀ ಆಶ್ಚರ್ಯಕರ ವಿಷಯವೇನೆಂದರೆ, ಯಾವುದೇ ದೊಡ್ಡ ಲಾ ಛೇಂಬರ್ ಗಳ ಹಿನ್ನಲೆ ಇಲ್ಲದವರು ಮತ್ತು ಬಾರ್ ನಲ್ಲಿ ಯಾವುದೇ ಗಾಡ್‌ಫಾದರ್‌ಗಳ ಆಶ್ರಯವಿಲ್ಲದ ಸಾಮಾನ್ಯ ಜೂನಿಯರ್ ವಕೀಲರ ಬಗ್ಗೆ ನ್ಯಾಯಾಧೀಶರು ವಿನಯಪೂರ್ವಕವಾದ ಸಹಾನುಭೂತಿಯನ್ನು ಹೊಂದಿದ್ದರು.

ಈ ಕತೆಯನ್ನು ಅಂದು ಜೂನಿಯರ್ ಆಗಿ ವಾದಸಿದ್ದ ಅದೇ ವ್ಯಕ್ತಿ, ಸ್ವತಃ ತಾವು ಹಿರಿಯ ನಾಗರೀಕರಾದ ಮೇಲೆ ನನಗೆ ವಿವರಿಸಿದ್ದರು.

ದಿವಂಗತ ನ್ಯಾಯಮೂರ್ತಿ ಜಿ.ಎನ್. ವೈದ್ಯ ಅವರು ಬಾಂಬೆ ಹೈಕೋರ್ಟಿನಲ್ಲಿ ಎಂಟು ವರ್ಷಗಳಿಂತ ಹೆಚ್ಚು ಸುದೀರ್ಘ ಅಧಿಕಾರಾವಧಿಯನ್ನು ಹೊಂದಿದ್ದರೂ ಅವರ ಕೋರ್ಟ್ ಕಲಾಪವನ್ನು ನೇರವಾಗಿ ನೋಡುವ ಅವಕಾಶ ನನಗೆ ಒದಗಿಬರಲಿಲ್ಲ. ನಾನು 1985 ರಲ್ಲಿ ಬಾಂಬೆ ಬಾರ್ ಗೆ ಸೇರುವ ಮೊದಲೇ ಅವರು ನಿಧನರಾಗಿದ್ದರು.

ನನಗೆ ನ್ಯಾಯಾಧೀಶರ ಹೆಸರು ಬಹಳ ಚೆನ್ನಾಗಿ ನೆನಪಿರುವ ಕಾರಣವೇನೆಂದರೆ, ದಕ್ಷಿಣ ಮುಂಬೈನ ರಸ್ತೆಯೊಂದಕ್ಕೆ ‘ನ್ಯಾಯಮೂರ್ತಿ ಜಿ.ಎನ್. ವೈದ್ಯ ಮಾರ್ಗ’ ಎಂದು ಹೆಸರಿಡಲಾಗಿತ್ತು. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಏಷಿಯಾಟಿಕ್ ಲೈಬ್ರರಿಗೆ ಹೋಗುವ ಸಂದರ್ಭ ನಾನು ಅನೇಕ ಬಾರಿ ಆ ರಸ್ತೆಯನ್ನು ದಾಟಿದ ನೆನಪು.

ಸರಿ, ಈಗ ನಮ್ಮ ಕತೆಗೆ ಬರೋಣ.

ಪ್ರಕರಣವೊಂದರ ಅಂತಿಮ ವಿಚಾರಣೆಯ ಸಮಯ. ಯುವ ವಕೀಲರು ಅರ್ಜಿದಾರರ ಪರವಾಗಿಯೂ, ಹಿರಿಯ ಅನುಭವಿ ವಕೀಲರು ಎದುರುದಾರರ ಪರವಾಗಿಯೂ ಹಾಜರಿದ್ದರು. ಇಬ್ಬರೂ ತಮ್ಮ ತಮ್ಮ ವಾದ ಮಂಡಿಸಲು ಸಿದ್ಧರಾಗಿದ್ದರು.

ಪ್ರಕರಣವನ್ನು ಕರೆದ ಸಂದರ್ಭ, ಜೂನಿಯರ್ ವಕೀಲರು ಪೀಠದ ಮುಂದೆ ಬಂದು ನಿಂತು ತಾನು ಅರ್ಜಿದಾರರ ಪರವಾಗಿ ಹಾಜರಾಗುತ್ತಿದ್ದೇನೆಂದು ಹೇಳಿದರು. ನ್ಯಾಯಾಧೀಶರು ಒಮ್ಮೆ ಅವರನ್ನು ತೀಕ್ಷ್ಣವಾಗಿ ದಿಟ್ಟಿಸಿ ನೋಡಿ, ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು.

ನ್ಯಾಯಾಧೀಶರ ಖ್ಯಾತಿಯ ಬಗ್ಗೆ ಮೊದಲೇ ತಿಳಿದಿದ್ದರಿಂದ ವಕೀಲರು ಸುಮ್ಮನೆ ತಮ್ಮ ಆಸನದಲ್ಲಿ ಕುಳಿತುಕೊಂಡರು.

ನಂತರ ನ್ಯಾಯಾಧೀಶರು ಎದುರುದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲರ ಕಡೆ ಮುಖಮಾಡಿ ಎಂದಿಗೂ ಊಹಿಸಿರದ ಪ್ರಶ್ನೆಗಳ ಸುರಿಮಳೆಗಳನ್ನೆ ಹರಿಸಿಬಿಟ್ಟರು. ಆಗ ಜೂನಿಯರ್ ವಕೀಲರಿಗೆ ಅನಿಸಿದ್ದು, ನ್ಯಾಯಮೂರ್ತಿಗಳು ಈಗಾಗಲೇ ಎಲ್ಲಾ ದಾಖಲೆಗಳನ್ನು ಮತ್ತು ಪ್ಲೀಡಿಂಗ್ಸ್ ಗಳನ್ನೂ ಓದಿಕೊಂಡು ನಾನು ಯೋಚಿಸಿಯೇ ಇರದ ಆಧಾರಗಳೂ, ಮತ್ತು ಅಂಶಗಳನ್ನು ಎತ್ತುತ್ತಿದ್ದಾರೆ ಎಂಬುದನ್ನು ನೋಡಿ ಆಶ್ಚರ್ಯವಾಯಿತು.

ತಮ್ಮ ವಿರುದ್ಧವಾಗಿ ಯಾವ ದಿಕ್ಕಿನಿಂದ ವಾದದ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂಬುದು ಹಿರಿಯ ವಕೀಲರಿಗೂ ತಿಳಿಯಲಿಲ್ಲ. ಅವರು ತಮ್ಮ ಕಕ್ಷಿದಾರನ ಪರವಾಗಿದ್ದ ವಾದಗಳನ್ನು ಸಮರ್ಥಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದರು. ಆದರೆ, ಅದ್ಯಾವುದೂ ನ್ಯಾಯಾಧೀಶರಿಗೆ ಪರಿಣಾಮಕಾರಿಯಾಗಿದೆ ಎಂದು ಎನಿಸಲೇ ಇಲ್ಲ.

ಜೂನಿಯರ್ ತಲೆಯಲ್ಲಿ ಘಟಿಸುತ್ತಿದ್ದ ಸಂಭವನೀಯತೆ ಹೇಗಿತ್ತೆಂದರೆ, ಕುದುರೆಯ ರೇಸ್ ಒಂದರಲ್ಲಿ ಪ್ರೇಕ್ಷಕನೊಬ್ಬ ತಾನು ಬೆಟ್ಟಿಂಗ್ ಕಟ್ಟಿದ ಕುದುರೆ ಎಲ್ಲ ಎಲ್ಲೆ ಮೀರಿ, ಓಡಿ ಪಂದ್ಯವನ್ನು ಗೆಲ್ಲುತ್ತಿರುವುದನ್ನು ಕಂಡು ಹೇಗೆ ಖುಷಿಪಡುತ್ತಾನೆಯೋ ಥೇಟ್ ಹಾಗೇ ಇತ್ತು. ಮಾನವನ ಸಹಜ ಪ್ರವೃತ್ತಿಯಂತೆ, ಬಹುತೇಕ ಚಿಯರ್ ಮಾಡಲು ನಿರ್ಧರಿಸಿದ್ದರು!!
ನ್ಯಾಯಾಧೀಶರ ನಿರಂತರ ವಾದದ ಪೆಟ್ಟಗಳಿಂದ ತತ್ತರಿಸಿದ್ದ ಎದುರುದಾರರ ಹಿರಿಯ ವಕೀಲರನ್ನು ನೋಡಿ, ಜೂನಿಯರ್ ವಕೀಲರಿಗೆ ತಾನೂ ಒಂದೆರಡು ವಾದಗಳಿಂದ ಏಟುಗಳನ್ನು ನೀಡಬಹುದಲ್ಲವೇ ಎಂದು ಅನ್ನಿಸಿತು.

ಹಾಗಾಗಿ ಅವರು ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಲು ಎದ್ದು ನಿಂತರು.

“ಮೈಲಾರ್ಡ್, ನಾನು ಪೂರಕವಾದ ಅಂಶಗಳನ್ನು ಸೇರಿಸಬಹುದೇ?”
“ಖಂಡಿತವಾಗಿಯೂ ಇಲ್ಲ!” ಎಂದು ನ್ಯಾಯಾಧೀಶರು ಗರ್ಜಿಸಿದರು.

ನಿರೀಕ್ಷಿಸಿರದ ಉತ್ತರಕ್ಕೆ ಜೂನಿಯರ್ ವಕೀಲರು ದಿಗ್ಭ್ರಮೆಗೊಂಡು, ತಮಗೂ ಒಂದು ಏಟು ಬಿದ್ದಂತೆಯೇ ಎನಿಸಿ, ತಮ್ಮ ಆಸನದಲ್ಲಿ ಭದ್ರವಾದರು!

ಪುನಃ, ಹಿರಿಯ ವಕೀಲರ ವಾದದಲ್ಲಿ ಯಾವುದೇ ಹುರುಳಿಲ್ಲದಂತೆ ಮಾಡಿದ ಮೇಲೆ, ನ್ಯಾಯಮೂರ್ತಿಗಳು ಅರ್ಜಿಯನ್ನು ಪುರಸ್ಕರಿಸಿ ತಮ್ಮ ಅದೇಶವನ್ನು ಉಕ್ತಲೇಖನ ನೀಡಲು ಪ್ರಾರಂಭಿಸಿದಾಗ, ಹೋರಾಟವೇ ಇಲ್ಲದೆ ಅನಾಯಾಸವಾಗಿ ಯುದ್ಧದಲ್ಲಿ ಜಯಗಳಿಸಿದೆನೆಂಬ ಉತ್ಸಾಹದಲ್ಲಿದ್ದ ಜೂನಿಯರ್ ವಕೀಲರು, ಉಕ್ತಲೇಖನದ ನಡುವೆ ಮಾತನಾಡುವ ವಿಫಲ ಪ್ರಯತ್ನಮಾಡಿದರು.

“ಮೈಲಾರ್ಡ್ ದಯವಿಟ್ಟು ಈ ಪುಟವನ್ನೊಮ್ಮೆ ನೋಡಬಹುದು” ಎಂದರು. ಅಷ್ಟೆ!!
ಈ ಬಾರಿ ನ್ಯಾಯಾಧೀಶರು ಈಟಿಯಿಂದ ತಿವಿಯಲ್ಪಟ್ಟ ಹೋರಿಯಂತೆ ವಕೀಲರ ಕಡೆ ಮುಖ ಮಾಡಿ ನೋಡಿದರು.

ಆ ನಂತರ ಅವರು ಅತ್ಯಂತ ತೀಕ್ಷ್ಣವಾಗಿ ಮಾತೊಂದನ್ನು ಹೇಳಿದರು. ಅವರು ಹೇಳಿದ ಮಾತು ಜೂನಿಯರ್ ವಕೀಲರಿಗೆ ಕೇವಲ ಆ ಹೊತ್ತಿಗೆ ಮಾತ್ರ ಸುಮ್ಮನಾಗಿಸಿದ್ದಲ್ಲದೇ, 30 ವರ್ಷಗಳ ನಂತರವೂ ನೆನಪಿಟ್ಟುಕೊಳ್ಳುವಂತೆ ಮಾಡಿತ್ತು. ಆಗಾಗ ಅವರು ನನಗೆ ಹೇಳುತ್ತಿದ್ದಿದ್ದೇ ಇದಕ್ಕೆ ನೈಜ ಸಾಕ್ಷಿ.

ದಿವಂಗತ ನ್ಯಾಯಮೂರ್ತಿ ಜಿ.ಎನ್. ವೈದ್ಯ ಅವರು ಆ ಜೂನಿಯರ್ ವಕೀಲರಿಗೆ ಹೇಳಿದ್ದು ಇಷ್ಟು: “ಯಾವಗಲೂ ಈ ಮಾತನ್ನು ನೆನಪಿಟ್ಟುಕೊ ಮಿಸ್ಟರ್ ಯಂಗ್ ಮ್ಯಾನ್. ಯಾವಾಗ ನ್ಯಾಯಾಲಯವು ನಿನ್ನ ಪರವಾಗಿರುತ್ತದೆಯೋ, ಆಗ ಮೌನವೇ ನಿನ್ನ ಅತ್ಯುತ್ತಮ ವಾದವಾಗಬೇಕು!” ಈ ಘಟನೆಯನ್ನು ನೆನಪಿಸಿಕೊಂಡು ಹೇಳುವ ಹೊತ್ತಿನಲ್ಲಿ ವಕೀಲರ ಕಣ್ಣಾಲೆಗಳಲ್ಲಿ ನೀರೂರಿದ್ದವು.
ವಕೀಲ ವೃತ್ತಿಯ ಶ್ರೇಷ್ಠತೆಯನ್ನೂ, ಹಿರಿಮೆ-ಗರಿಮೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ, ನ್ಯಾಯಾಧೀಶರು ತಮ್ಮ ನ್ಯಾಯಾಲಯವನ್ನು ಒಂದು ತರಗತಿಯಂತೆ ಬಳಸಿಕೊಂಡು ಅವಕಾಶಸಿಕ್ಕಾಗಲೆಲ್ಲ ಜೂನಿಯರ್ ವಕೀಲರಿಗೆ ಕಾನೂನಿನ ಶಿಷ್ಟಾಚಾರಗಳನ್ನು ಕಲಿಸುತ್ತಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಇಂದಿಗೂ ಜೂನಿಯರ್ ವಕೀಲರುಗಳು ಅವರನ್ನು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ಹೇಳುವುದನ್ನು ಮರೆಯಲ್ಲಿಲ್ಲ.

ನ್ಯಾಯಾಧೀಶರು ಓದಿದ ಕರ್ನಾಟಕದಲ್ಲಿನ ಧಾರವಾಡದ ಕಾಲೇಜೊಂದು ಪ್ರತಿ ವರ್ಷ ಅವರ ಸ್ಮರಣಾರ್ಥವಾಗಿ ವಾರ್ಷಿಕ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಈ ನಿಟ್ಟಿನಲ್ಲಿ ಅನೇಕ ಕಾನೂನು ತಜ್ಞರು ಉಪನ್ಯಾಸಕರಾಗಿ ಭಾಗವಹಿಸಿ ನ್ಯಾಯಮೂರ್ತಿಗಳ ಕೊಡುಗೆಗಳನ್ನು ಶ್ಲಾಘಿಸುತ್ತಿದ್ದಾರೆ.

‍ಲೇಖಕರು Admin

1 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading