ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 172
ಲಂಡನ್ ನಲ್ಲಿ ನಾವು ನೋಡಿದ ಮತ್ತೊಂದು ಅದ್ಭುತ ರಂಗಪ್ರಯೋಗ “ಅಲ್ಲಾದ್ದೀನ್”. ಇದೂ ಸಹಾ ಹಲವಾರು ವರ್ಷಗಳಿಂದ ಪ್ರದರ್ಶನ ಕಾಣುತ್ತಿರುವ ನಾಟಕ. ‘ಸಾವಿರದೊಂದು ರಾತ್ರಿಗಳು’— ಅರಾಬಿಕ್ ಭಾಷೆಯಲ್ಲಿರುವ ಜನಪ್ರಿಯ ಜನಪದ ಕಥೆಗಳ ಗುಚ್ಛ…’ಅರೇಬಿಯನ್ ನೈಟ್ಸ್’ ಎಂದೇ ಇದು ಹೆಚ್ಚು ಜನಪ್ರಿಯವಾಗಿರುವಂಥದ್ದು. ಸಿಂದಬಾದನ ಕಥೆ, ಅಲ್ಲಾದ್ದೀನನ ಕಥೆ, ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರ ಕಥೆ….ಇವೆಲ್ಲಾ ಈ ಸಂಗ್ರಹದಲ್ಲಿರುವ ಅತ್ಯಂತ ಜನಪ್ರಿಯ ರಮ್ಯ ರಂಜಕ ಕಥೆಗಳು. ಡಿಸ್ನಿ ಥಿಯೇಟ್ರಿಕಲ್ ಪ್ರೊಡಕ್ಷನ್ಸ್ ಅವರು ಪ್ರಖ್ಯಾತ ನಿರ್ದೇಶಕ ಥಾಮಸ್ ಶುಮಾಕರ್ ಅವರ ನಿರ್ದೇಶನದಲ್ಲಿ ಅಲ್ಲಾದೀನನ ಕಥೆಯನ್ನು ನಾಟಕರೂಪಕ್ಕೆ ಅಳವಡಿಸಿ ರಂಗದ ಮೇಲೆ ತಂದಿದ್ದಾರೆ. ನಿಜಕ್ಕೂ ರಂಗದ ಮೇಲೆ ಒಂದು ಮಾಯಾಲೋಕವನ್ನೇ ಸೃಷ್ಟಿಸಿಬಿಡುತ್ತಾರೆ ನಿರ್ದೇಶಕರು ಹಾಗೂ ರಂಗತಂಡದವರು.

ಚಲನಚಿತ್ರಗಳಲ್ಲಿ ಅದ್ಭುತ ರಮ್ಯ ದೃಶ್ಯಗಳನ್ನು ನೋಡಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಅದೇ ಬಗೆಯ ಅದ್ಭುತ ಮಾಯಾಲೋಕ ರಂಗದ ಮೇಲೆ ನಿಮ್ಮ ಕಣ್ಣೆದುರಿಗೇ ತೆರೆದುಕೊಂಡು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿಬಿಡುತ್ತದಲ್ಲಾ, ಅದು ವರ್ಣನಾತೀತ. ದೃಶ್ಯದಿಂದ ದೃಶ್ಯಕ್ಕೆ ಕ್ಷಣಮಾತ್ರದಲ್ಲಿ ಬದಲಾಗುವ ಅದ್ಭುತ ರಂಗಸಜ್ಜಿಕೆ…ಇದ್ದಕ್ಕಿದ್ದಂತೆ ರಂಗದ ತಳಭಾಗದಿಂದ ಧುತ್ತೆಂದು ಜಿಗಿದು ಬಂದು ನಿಲ್ಲುವ ಪಾತ್ರಗಳು…ನೀಲಾಗಸದಿಂದ ಧರೆಗಿಳಿದು ಬರುವ ಕಿನ್ನರರು…ಯಕ್ಷರ—ಮಾಂತ್ರಿಕರ ದಂಗುಬಡಿಸುವ—ದಿಗ್ಮೂಢರನ್ನಾಗಿಸುವ ಚಮತ್ಕಾರಗಳು…ಒಂದು ಸಣ್ಣ ಲೋಪವೂ ಕಣ್ಣಿಗೆ ಬೀಳದಂತಹ ಪರಿಪೂರ್ಣತೆ…ಸಂಗೀತ—ನಟವರ್ಗದವರ ನಡುವಣ ಅದ್ಭುತ ಸಮನ್ವಯ…ದೋಷರಹಿತ ಪಕ್ವ ಅಭಿನಯ…ಒಂದರೆಚಣವೂ ಬೇಸರಕ್ಕೆ ಅವಕಾಶವಿಲ್ಲದ ನಾಗಾಲೋಟದ ಪ್ರಸ್ತುತಿ…ಓಹ್! ನಿಜಕ್ಕೂ ಮನಸೂರೆಗೊಂಡ ಪ್ರದರ್ಶನವದು. ಅದರಲ್ಲೂ ನೀಲಾಕಾಶದಲ್ಲಿ ಮಾಯಾಕಾರ್ಪೆಟ್ ಮೇಲೆ ಕುಳಿತು ಅಲ್ಲಾದ್ದೀನ್ ತನ್ನ ಗೆಳತಿಯೊಂದಿಗೆ ಮೇಲೆ—ನಮ್ಮ ತಲೆಯ ಮೇಲ್ಭಾಗದಲ್ಲೇ ಗಾಳಿಯಲ್ಲಿ ವಿಹರಿಸುವ ದೃಶ್ಯವಂತೂ ಎಲ್ಲ ಕಲ್ಪನೆಗಳನ್ನೂ ಮೀರಿದ್ದು. ರಂಗಭೂಮಿಯ ಸರ್ವಸಾಧ್ಯತೆಗಳನ್ನೂ ಅದ್ಭುತವಾಗಿ ಬಳಸಿಕೊಂಡು ಅತ್ಯಪೂರ್ವ ಅನುಭವ ನೀಡುವ ಈ ನಾಟಕ ಈಗ ಲಂಡನ್ ನ ಮತ್ತೊಂದು ಪ್ರೇಕ್ಷಣೀಯ ಸ್ಥಳ!
ಇನ್ನೂ ಹಲವಾರು ನಾಟಕಗಳು ಹಾಗೂ ಅಪೇರಾಗಳು ಲಂಡನ್ ನಲ್ಲಿ ಕೆಲವಾರು ವರ್ಷಗಳಿಂದ ನಡೆಯುತ್ತಿದ್ದರೂ ಸಮಯಾಭಾವ ಹಾಗೂ ಟಿಕೇಟ್ ಗಳು ದೊರಕದ ಕಾರಣಗಳಿಗಾಗಿ ನಮಗೆ ನೋಡಲಾಗಲಿಲ್ಲ.
ನಾವು ಹವ್ಯಾಸಿ ತಂಡಗಳವರು ಇಲ್ಲಿ ಕಷ್ಟಪಟ್ಟು ಜನ — ಧನಗಳನ್ನು ಹೊಂದಿಸಿಕೊಂಡು ತಿಂಗಳುಗಟ್ಟಲೆ ತಾಲೀಮು ನಡೆಸಿ ನಾಟಕಗಳನ್ನು ಮಾಡುತ್ತೇವೆ; ಆದರೆ ಎಷ್ಟೋ ಒಳ್ಳೆಯ ನಾಟಕಗಳೂ ಕೂಡಾ ಕೆಲವೇ ಕೆಲವು ಪ್ರದರ್ಶನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ನೂರೋ ಇನ್ನೂರೋ ಪ್ರದರ್ಶನಗಳಾಗಿಬಿಟ್ಟರೆ ಅದೇ ದೊಡ್ಡ ದಾಖಲೆಯಾಗಿಬಿಡುತ್ತದೆ. ಹಿಂದೆ ವೃತ್ತಿರಂಗಭೂಮಿಯಲ್ಲಿ ತಾಂತ್ರಿಕವಾಗಿಯೂ ಶ್ರೇಷ್ಠಮಟ್ಟದ ಅದ್ಭುತ ಪ್ರದರ್ಶನಗಳಾಗಿರುವುದರ ಬಗ್ಗೆ ನಾವೆಲ್ಲರೂ ಕೇಳಿರುವುದುಂಟು..ಕೆಲವೊಂದು ಪ್ರದರ್ಶನಗಳನ್ನು ನೋಡಿರುವುದೂ ಉಂಟು. ಆದರೆ ಎಷ್ಟೋ ಬಾರಿ ವೃತ್ತಿರಂಗಭೂಮಿಯವರಿಗೆ ಸಿಗಬೇಕಾದಷ್ಟು ಪ್ರೋತ್ಸಾಹ—ಉತ್ತೇಜನಗಳು ಸಿಗದೆ ಹತಾಶರಾಗಿ ಕಂಪನಿಗಳೇ ಮುಚ್ಚಿಹೋಗಿರುವುದಕ್ಕೂ ನಾವು ಸಾಕ್ಷಿಯಾಗಿದ್ದೇವೆ. ನಮ್ಮಲ್ಲೂ ನಾವು ಹೊರದೇಶಗಳಲ್ಲಿ ಕಾಣುವಂತಹ ಪ್ರೇಕ್ಷಕ ಸಂಸ್ಕೃತಿ ಬೆಳೆಯಬಾರದೇ? ನಾಟಕಗಳಿಗೆ ಮುಗಿಬಿದ್ದು ಪ್ರೇಕ್ಷಕರು ಬರಬಾರದೇ? ನಾಡ ತುಂಬಾ ಇರುವ ಅನೇಕ ಕೋಟ್ಯಾಧಿಪತಿಗಳಲ್ಲಿ ಯಾರಿಗಾದರೂ ಸದ್ಬುದ್ಧಿ ಬಂದು ಅಗಾಧ ರಂಗಪ್ರೀತಿ ಬೆಳೆದು ಕೆಲ ಸುಸಜ್ಜಿತ ರಂಗಮಂದಿರಗಳನ್ನು ನಿರ್ಮಿಸಿ ಒಂದಷ್ಟು ಅದ್ಭುತ—ಅರ್ಥಪೂರ್ಣ ನಾಟಕಗಳನ್ನು ಪ್ರಾಯೋಜಿಸಬಾರದೇ? ಸಾಮರಸ್ಯದ ಸುಂದರ ರಂಗತಂಡಗಳು ನಿರುಮ್ಮಳವಾಗಿ ರಂಗಚಟುವಟಿಕೆ ನಡೆಸಿಕೊಂಡು ಹೋಗಲು ಅವಕಾಶವಾಗಬಾರದೇ?….
ಇವೆಲ್ಲಾ ಅಲ್ಲಾದ್ದೀನ್ ನಾಟಕ ನೋಡಿದಾಗ ನನ್ನ ಮನದಂಗಳದಲ್ಲಿ ಇಣುಕಿ ಕಾಡಿದ ‘ರೆ’ ಸಾಮ್ರಾಜ್ಯದ ಕನಸುಗಳು!!
ಸುಮಾರು ಒಂದು ತಿಂಗಳ ಕಾಲ ಲಂಡನ್ ನಗರದ ಮುಖ್ಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮುದ್ದು ಮಗಳು ರಾಧಿಕಾಳೊಂದಿಗೆ ಹಿತವಾಗಿ ಒಂದಷ್ಟು ಸಮಯ ಕಳೆದು ಭಾರವಾದ ಹೃದಯದೊಂದಿಗೆ ಬೆಂಗಳೂರಿಗೆ ಮರಳಿದೆವು. ಇಲ್ಲಿ ಮನದ ಭಾರವನ್ನು ಇಳಿಸಲು ಮಗರಾಯ ಅನಿರುದ್ಧನ ಜೊತೆಯಿದ್ದುದರಿಂದ ತೀರಾ ಕಷ್ಟವಾಗಲಿಲ್ಲವೆನ್ನಿ. ಏನೇ ಆದರೂ ಮಕ್ಕಳಿಂದ ಬಹು ಸಮಯ ದೂರವಿರುವುದು ನಿಜಕ್ಕೂ ಕಷ್ಟ ಕಷ್ಟ!!

ಈ ಸಮಯದಲ್ಲಿ ನಾನು ಅಭಿನಯಿಸಿದ ಒಂದು ಮುಖ್ಯ ಚಿತ್ರ “ಯಜಮಾನ”. ಬಿ. ಸುರೇಶ ಹಾಗೂ ಶೈಲಜಾ ನಾಗ್ ಅವರ ನಿರ್ಮಾಣದ ಈ ಚಿತ್ರದ ನಾಯಕ ನಟ ದರ್ಶನ್. ಚಿತ್ರವನ್ನು ಪ್ರಸಿದ್ಧ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಹಾಗೂ ಪೊನ್ ಕುಮಾರನ್ ಅವರು ನಿರ್ದೇಶಿಸಿದ್ದರು. ನನ್ನದು ಒಬ್ಬ ನ್ಯಾಯಾಧೀಶನ ಪಾತ್ರ. ಪಾತ್ರಕ್ಕೆ ಸೀಮಿತ ಹರಹಿದ್ದರೂ ಸ್ವಾರಸ್ಯಕರವಾಗಿತ್ತು. ಪಕ್ಕಾ ಕಮರ್ಷಿಯಲ್ ಚಿತ್ರವೇ ಆಗಿದ್ದರೂ ಆ ಚೌಕಟ್ಟಿನಲ್ಲಿಯೇ ಅರ್ಥಪೂರ್ಣ ಸಂದೇಶಗಳನ್ನು ಬಹು ಜಾಣ್ಮೆಯಿಂದ ದಾಟಿಸುವ ಪ್ರಯತ್ನ ಮಾಡಿದ್ದರು ಬಿ.ಸುರೇಶ್. ಮೆಗಾಸ್ಟಾರ್ ದರ್ಶನ್ ಚಿತ್ರವಾದುದರಿಂದ ಅಪಾರ ಜನಪ್ರೀತಿಯನ್ನು ಗಳಿಸಿಕೊಳ್ಳುವುದರಲ್ಲಿ ಸಂದೇಹವೇ ಇರಲಿಲ್ಲ. ಸಹಜವಾಗಿಯೇ ನಮಗೂ ಒಂದಿಷ್ಟು ಹೆಚ್ಚಿನ ಜನಪ್ರಿಯತೆಯನ್ನು “ಯಜಮಾನ”ರು ತಂದುಕೊಟ್ಟರೆಂಬುದರಲ್ಲಿ ಸಂಶಯವೇ ಇಲ್ಲ! ಜೊತೆಗೆ ಕಥಾನಾಯಕ ದರ್ಶನ್ ಅವರ ಪರವಾಗಿ ತೀರ್ಪು ನೀಡುವ ಜಡ್ಜ್ ಪಾತ್ರವಾದ್ದರಿಂದ ಅಭಿಮಾನಿ ಬಳಗದಿಂದ ಕೊಂಚ ಹೆಚ್ಚಿನ ಮೆಚ್ಚುಗೆಯೇ ದೊರೆಯಿತು!
ಎಂ ಆರ್ ಕಮಲ ಅವರು ಈ ದಿನಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಲೇಖಕಿಯರಲ್ಲಿ ದೊಡ್ಡ ಹೆಸರು. ಬರಹಗಾರ್ತಿ, ಭರತನಾಟ್ಯ ಪ್ರವೀಣೆ, ವೀಣಾವಾದಕಿ…ಹೀಗೆ ಬಹುಮುಖ ಪ್ರತಿಭೆಯ ಸಾಧಕಿ ಎಂ ಆರ್ ಕಮಲ. ವೈವಿಧ್ಯಮಯ ಬರಹ ಲೋಕ ಎಂ ಆರ್ ಕಮಲ ಅವರದು. ಕವಿತೆಯಾಗಲೀ ಪ್ರಬಂಧವಾಗಲೀ ಲಘುಧಾಟಿಯ ಬರಹಗಳೇ ಆಗಲೀ ಕಮಲ ಅವರ ಲೇಖನಿ ಲೀಲಾಜಾಲವಾಗಿ ಪ್ರವಹಿಸಿ ಮುದಗೊಳಿಸುತ್ತದೆ. “ಇವರ ಬರಹಗಳು ಸಾಹಿತ್ಯ, ಸಮಾಜ ಶಾಸ್ತ್ರೀಯ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ದೃಷ್ಟಿಗಳಿಂದ ಮಹತ್ವ ಪಡೆದಿವೆ”.
ಕಮಲ ಅವರ ಪತಿ ರಮೇಶ್, ಮಗ ಆಕರ್ಷ್, ಮಗಳು ಸ್ಪರ್ಶ—ಹೀಗೆ ಇಡೀ ಕುಟುಂಬವೇ ನಮಗೆ ತುಂಬಾ ಆತ್ಮೀಯರಾದವರು. ಆಕರ್ಷ್ ಹಾಗೂ ಸ್ಪರ್ಶ ಕನ್ನಡ ಸಾಂಸ್ಕೃತಿಕ—ಮಾಧ್ಯಮಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಹೆಸರಾಗಿರುವವರು. ಕುಟುಂಬದವರ ಸಾಧನೆಗಳಿಗೆ ಸದಾ ಸ್ಫೂರ್ತಿಯ ಸೆಲೆಯಾಗಿ ನಿಂತು ಉತ್ತೇಜಿಸಿ ಅವರ ಗೆಲುವಿನಲ್ಲಿ ಸಂಭ್ರಮಿಸುವ ರಮೇಶ್ ಸರಳ ಸಜ್ಜನ ಸಹೃದಯಿ.
ಕಮಲ ಅವರು ಅವರ ಮನೆಯ ಅಂಗಳದಲ್ಲಿ—ಅಂಗಳ ಅನ್ನುವುದಕ್ಕಿಂತ ಬಾಲ್ಕನಿಯಲ್ಲಿ ‘ಮಾತು ಕತೆ’ ಎನ್ನುವ ಕಾರ್ಯಕ್ರಮವನ್ನು (ಬಹುಶಃ) ತಿಂಗಳಿಗೊಂದಾವರ್ತಿ ನಡೆಸುತ್ತಿದ್ದರು. ಯಾರಾದರೂ ಕಲಾವಿದರನ್ನೋ ಸಾಹಿತಿಗಳನ್ನೋ ಅಥವಾ ಇತರ ಕ್ಷೇತ್ರಗಳ ಸಾಧಕರನ್ನೋ ಆಹ್ವಾನಿಸಿ ಒಂದು ಆತ್ಮೀಯ ಮಾತುಕತೆಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದರು. ಅತಿಥಿಗಳ ಒಂದು—ಒಂದೂವರೆ ತಾಸಿನ ಮಾತಿನ ನಂತರ ನೆರೆದ ಸಹೃದಯರೊಂದಿಗೆ ಒಂದು ಅರ್ಥಪೂರ್ಣ ಚರ್ಚೆ ನಡೆಯುತ್ತಿತ್ತು. ನಂತರ ಎಲ್ಲರೂ ಒಟ್ಟಿಗೆ ಊಟಮಾಡಿ ನಿರ್ಗಮಿಸುತ್ತಿದ್ದೆವು. ಪುಟ್ಟ ವೇದಿಕೆಯೇ ಆದರೂ ಸಾಂಸ್ಕೃತಿಕ ವಲಯದಲ್ಲಿ ‘ಮಾತುಕತೆ’ ದೊಡ್ಡ ಹೆಸರು ಮಾಡಿತ್ತು. ಕಮಲ ಅವರು ಆಗಸ್ಟ್ ತಿಂಗಳ ಮಾತುಕತೆಯನ್ನು ನಡೆಸಿಕೊಡಲು ನನ್ನನ್ನು ಆಹ್ವಾನಿಸಿದರು. ಅಂದಿನ ಸಭೆಗೆ ಆಗಮಿಸಿದ್ದವರಲ್ಲಿ ಶ್ರೇಷ್ಠ ಕತೆಗಾರ ಕೇಶವ ಮಳಗಿ, ಪ್ರಸಿದ್ಧ ಸಾಹಿತಿ ಹೆಚ್.ಎಸ್. ಸತ್ಯನಾರಾಯಣ, ಪ್ರಸಿದ್ಧ ಸಾಹಿತಿ—ಪತ್ರಕರ್ತ—ಮಾಧ್ಯಮ ರಿಪು ಹೀಗೆ ಏನೆಲ್ಲಾ ಆಗಿರುವ ಜಿ.ಎನ್. ಮೋಹನ್ ಮೊದಲಾದವರಿದ್ದರು. ಅಂದು ನಾನು ನನ್ನ ಬಾಲ್ಯದಿಂದ ಮೊದಲುಗೊಂಡು ಸಂಸರ ಕುರಿತ ಬಿಂಬ ಚಿತ್ರದವರೆಗಿನ ನನ್ನ ರಂಗಭೂಮಿ—ಕಿರುತೆರೆ—ಸಿನೆಮಾ ಕ್ಷೇತ್ರಗಳ ಪ್ರಯಾಣದ ಹೆಜ್ಜೆಗುರುತುಗಳನ್ನು ಸಂಕ್ಷಿಪ್ತವಾಗಿ ಸುಮಾರು ಒಂದೂವರೆ ತಾಸಿನಷ್ಟು ಸಮಯ ಸಹೃದಯರೊಂದಿಗೆ ಹಂಚಿಕೊಂಡಿದ್ದೆ. ಹಾಗೆ ಒಂದು ರೀತಿಯಲ್ಲಿ ಸ್ವಾವಲೋಕನ ಮಾಡಿಕೊಳ್ಳಲು ಅಂಥ ಚಂದದ—ಸುಸಂಸ್ಕೃತ ಸಹೃದಯರ ಸಮಕ್ಷಮದ ವೇದಿಕೆಯೊಂದನ್ನು ನೀಡಿದ್ದಕ್ಕೆ ಎಂ ಆರ್ ಕಮಲ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು ಸಲ್ಲಲೇಬೇಕು. ನನಗೆ ನೆನಪಿರುವ ಮಟ್ಟಿಗೆ ಜಿ.ಎನ್. ಮೋಹನ್ ಅವರು ಈ ಮಾತುಕತೆಯ ನೇರಪ್ರಸಾರವನ್ನು ಫೇಸ್ ಬುಕ್ ಮುಖಾಂತರ ಏರ್ಪಡಿಸಿದ್ದರು. ಅವರ ‘ಬಹುರೂಪಿ’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷಿತಾ ಅವರು ಈ ನೇರ ಪ್ರಸಾರದ ಹೊಣೆ ಹೊತ್ತು ಸೊಗಸಾಗಿ ನಿರ್ವಹಿಸಿದ್ದರು. ಹಾಗಾಗಿ ಕಾರ್ಯಕ್ರಮ ಸಾವಿರಾರು ಜನರನ್ನು ತಲುಪಲೂ ಸಾಧ್ಯವಾಯಿತು.
ಈ ‘ಮಾತುಕತೆ’ ಮುಗಿದ ಒಂದೆರಡು ದಿನಗಳಲ್ಲೇ ಜಿ.ಎನ್. ಮೋಹನ್ ಅವರಿಂದ ಕರೆ ಬಂದಿತು. “ನಿಮ್ಮ ಮಾತುಕತೆ ಕಾರ್ಯಕ್ರಮ ನನಗೆ ತುಂಬಾ ಇಷ್ಟವಾಯಿತು. ನಂಜು ,ಕೊಂಕು, ಕುಹಕಗಳಿಲ್ಲದ ನಿಮ್ಮ ನೇರ ನಿರೂಪಣೆ ನನಗೆ ತುಂಬಾ ಹಿಡಿಸಿತು. ನಮ್ಮ ‘ಅವಧಿ’ ಅಂತರ್ಜಾಲ ಪತ್ರಿಕೆಗೆ ನಿಮ್ಮ ಅನುಭವಗಳನ್ನು ಆತ್ಮಕಥನದ ರೀತಿಯಲ್ಲಿ ಬರೆದುಕೊಡಲು ಸಾಧ್ಯವೇ? ರಂಗಕರ್ಮಿಯೊಬ್ಬನ ಜರ್ನಿಯ ದಾಖಲೆಯಾಗಿ ಇದು ಉಳಿಯುತ್ತದೆ” ಎಂದು ಮೋಹನ್ ಅವರು ಹೇಳಿದಾಗ ನನಗೆ ಆಶ್ಚರ್ಯವಾಗಿಹೋಯಿತು. ನನ್ನ ಆತ್ಮಕಥೆಯೇ?! ಆ ಕುರಿತಾಗಿ ನಾನೆಂದೂ ಯೋಚಿಸಿರಲೂ ಇಲ್ಲ…ನಾನು ಆತ್ಮಕಥನ ಬರೆದುಕೊಳ್ಳುವಂಥ ಸಾಧಕನೆಂದು ಎಂದು ನನಗೆ ಭಾಸವೂ ಆಗಿರಲಿಲ್ಲ! ಕೇವಲ ನನ್ನ ಒಂದಷ್ಟು ಮುಖ್ಯವೆನಿಸುವ ಅನುಭವಗಳನ್ನು ದಾಖಲಿಸುವ ಯತ್ನ ಮಾಡಬಹುದೇನೋ ಎಂದು ತಡವರಿಸುತ್ತಾ ಹೇಳಿದೆ. “ಆಯಿತು..ಅದನ್ನೇ ಮಾಡಿಕೊಡಿ..ಆದರೆ ಈ ಅನುಭವಗಾಥೆ ನಿಮ್ಮ ಬಾಲ್ಯದಿಂದಲೇ ಆರಂಭವಾಗಲಿ” ಎಂದೊಂದು ಪಟ್ಟು ಹಾಕಿದರು ಮೋಹನ್! ಈ ಕುರಿತಾಗಿ ಯೋಚಿಸಿ ಫೋನ್ ಮಾಡುತ್ತೇನೆ ಎಂದು ಹೇಳಿ ಆ ಕ್ಷಣ ಬಚಾವಾಗಿಬಿಟ್ಟೆ.
ಆದರೆ ಈ ಮೋಹನ್ ಸಾಧಾರಣದವರಲ್ಲ! ಒಬ್ಬ ಉತ್ಸಾಹೀ ರಂಗಕರ್ಮಿಯಾಗಿ ನನಗೆ ಮೊದಲು ಪರಿಚಿತರಾದವರು. ನನ್ನ ‘ಬ್ರಹ್ಮಚಾರಿ ಶರಣಾದ ‘ ನಾಟಕಕ್ಕೆ ಪ್ರಜಾವಾಣಿ ಪತ್ರಿಕೆಯಲ್ಲಿ ಸೊಗಸಾದ ವಿಮರ್ಶೆ ಬರೆದಿದ್ದರು. ಮುಂದೆ ಮಾಧ್ಯಮ ಹಾಗೂ ಸಂವಹನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಆ ಕ್ಷೇತ್ರಗಳಲ್ಲಿ ಸೃಜನಶೀಲವಾಗಿ ತೊಡಗಿಕೊಂಡವರು. ತಿರು ಶ್ರೀಧರ್ ಅವರು ಹೇಳುವಂತೆ, “ಕಿರುತೆರೆಯಲ್ಲಿ ಈ ಟಿವಿಯನ್ನು ಸಾಂಸ್ಕೃತಿಕ ಮೆರುಗಿನ ವಾಹಿನಿಯಾಗಿ ಬೆಳಗಿಸಿದ್ದ ರೂವಾರಿ ಕೂಡಾ ಅವರೇ ಆಗಿದ್ದರು.” ಕನ್ನಡದ ಹೆಸರಾಂತ ಬಹುರೂಪಿ ಪ್ರಕಾಶನದ ಸಾರಥ್ಯ ವಹಿಸಿ ನಡೆಸುತ್ತಿರುವ ಮೋಹನ್ ಅವರು ವಾಸ್ತವವಾಗಿಯೇ ‘ಬಹುರೂಪಿ’!! ಜೊತೆಗೆ ಕಾವ್ಯ, ಚಿಂತನೆ, ಅಂಕಣ, ಪ್ರವಾಸ, ಮಾಧ್ಯಮ ಮೊದಲಾದ ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ನಡೆಸಿ ತಮ್ಮ ಅರ್ಥಪೂರ್ಣ ಕೃತಿಗಳಿಂದ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವವರು ಮೋಹನ್. “ನನ್ನೊಳಗಿನ ಹಾಡು” ಎನ್ನುವ ಇವರ ಪ್ರವಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಪುರಸ್ಕಾರ ಸಂದಿದೆ. ಇತ್ತೀಚೆಗೆ ನಾಟಕ ಅಕಾಡಮಿಯ ಪುರಸ್ಕಾರದ ಗರಿಯೂ ಇವರ ಮುಡಿಗೇರಿದೆ! 2007 ರಲ್ಲಿ ಇವರು “ಅವಧಿ” ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದರು. ‘ಅವಧಿ’—’ಕನಸುಗಳ ಬೆಂಬತ್ತಿದ ನಡಿಗೆ’. ಅನೇಕ ಉದಯೋನ್ಮುಖ ಬರಹಗಾರರಿಗೆ ವೇದಿಕೆಯನ್ನು ನೀಡಿ ಪ್ರೋತ್ಸಾಹಿಸುತ್ತಾ ಅವರು ಸಾಹಿತ್ಯಕ್ಷೇತ್ರದಲ್ಲಿ ನೆಲೆಯೂರಲು ನೆರವಾಗುತ್ತಿರುವ ಚಿಮ್ಮುಹಲಗೆ ಅವಧಿ ಎಂದರೆ ತಪ್ಪಾಗಲಾರದು.
ಇಂಥದೊಂದು ಜನಪ್ರಿಯ ಹಾಗೂ ಶ್ರೇಷ್ಠ ಗುಣಮಟ್ಟದ ‘ಅಂತರ್ಜಾಲ ಅವಧಿ’ಗೆ ನನ್ನ ಆತ್ಮಕಥನವನ್ನು ಅಂಕಣ ರೂಪದಲ್ಲಿ ಬರೆದುಕೊಡಲು ಕೇಳುತ್ತಿದ್ದಾರೆ!!! ಬರೇ ಕೇಳುವುದಷ್ಟೇ ಅಲ್ಲ, ಪದೇ ಪದೇ ಫೋನ್ ಮಾಡಿ ‘ತಮ್ಮದು ಹಾರಿಕೆಯ ಮಾತಲ್ಲ, ಗಂಭೀರ ಪ್ರಸ್ತಾವನೆ’ ಎಂದು ಸ್ಪಷ್ಟ ಪಡಿಸುತ್ತಿದ್ದಾರೆ!
ನನ್ನದೇ ಕಾರಣಗಳಿಗೆ ನಿರ್ಧರಿಸಲು ಸಮಯ ತೆಗೆದುಕೊಂಡರೂ ಮೋಹನ್ ಅವರ ಆತ್ಮೀಯ ಒತ್ತಾಯಕ್ಕೆ ಶರಣಾಗಿ ಅಂಕಣ ಬರೆಯಲು ಒಪ್ಪಿಕೊಂಡೆ. ಅಂಕಣ ಪ್ರಕಟವಾಗಲು ಆರಂಭವಾದದ್ದು 27 ಮೇ 2021. ಇಂದು ಪ್ರಕಟವಾಗುತ್ತಿರುವುದು 172 ನೆಯ ಕಂತು! ಇಷ್ಟು ದೂರದ ಹಾದಿ ಸವೆದಿದೆಯಲ್ಲಾ ಎಂದು ನನಗೇ ಆಶ್ಚರ್ಯವಾಗುತ್ತದೆ..ಚಿವುಟಿ ನೋಡಿಕೊಳ್ಳುವಂತಾಗುತ್ತದೆ!!!






ಅದ್ಭುತ ಸಾರ್