ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಸ್ಮತಿಪಟಲದ ಮೇಲೆ ಅಚ್ಚಳಿಯದೆ ಮೂಡಿದ ‘ವೈಜಯಂತಿಪುರ’

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ -2

ಕೃತಿ –‘ವೈಜಯಂತಿಪುರ’

ಲೇಖಕರು – ಸಂತೋಷಕುಮಾರ ಮೆಹಂದಳೆ

ಪ್ರಕಾಶನ – ಸಾಹಿತ್ಯ ಲೋಕ

ಬೆಲೆ – ₹429

ಕನ್ನಡದ ಮೊದಲ ಅರಸು ಮನೆತನೆವಾದ ಕದಂಬ ವಂಶದ ಅರಸ ಮಯೂರಶರ್ಮನ ವೀರೋಚಿತ ಬದುಕಿನ ಕಥಾವಸ್ತು ಒಳಗೊಂಡ ಕಾದಂಬರಿ ಇದಾಗಿದೆ. ಕೌಮುದೀಪುರ, ಚೈದಿಲಿಪುರ, ಜಯಂತಿಪುರ, ವನವಾಸಿ,ಬನವಾಸಿ ಆಗಿ ಹೆಸರು ಆದದ್ದು ,ಮಯೂರ ವರ್ಮ ನಿಂದ ಮಯೂರಶರ್ಮ ಆದ ಬಗೆ ಈ ಎಲ್ಲದರ ಅಮೂಲಾಗ್ರ ಸಂಗತಿಗಳನ್ನು ಲೇಖಕರು ಸಮರ್ಪಕವಾಗಿ ಕಟ್ಟಿ ಕೊಟ್ಟಿದ್ದಾರೆ.

ಮಯೂರ ಎಂಬ ಬಾಲಕ ಕಂಚಿ ಪಟ್ಟಣಕ್ಕೆ ಶಿಕ್ಷಣ ಪಡೆಯಲು ಹೋಗಿ, ಅಲ್ಲಿ ಅವಮಾನಿತನಾಗಿ ಮರಳಿ ಬಂದು ಸೈನ್ಯ ಸಂಘಟನೆ ಮಾಡಿ,ಪಲ್ಲವರನ್ನು ಸೋಲಿಸಿ ಕನ್ನಡ ನೆಲದಲ್ಲಿ ಮೊದಲ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಪಡೆದ ಮಯೂರನ ಯಶೋಗಾಥೆಯ ಬದುಕನ್ನು ಮೂರುನೂರು ಪುಟ ಗಳಷ್ಟು ವಿಸ್ತರಿಸಿ ವರ್ಣಿಸಿದ ಪರಿ ನೋಡಿದರೆ ಲೇಖಕನ ಆಲೋಚನಾ ಕ್ರಮ,ವಿಷಯ ಸಂಗ್ರಹಣೆಯಲ್ಲಿ ಪಟ್ಟ ಪರಿಶ್ರಮ ಜೊತೆಗೆ ಕನ್ನಡದ ಅರಸು ಮನೆತನದ ಅಸ್ತಿತ್ವ,ಅಸ್ಮಿತೆಯ ಉಳಿಸುವಿಕೆಯ ಕಾಳಜಿ, ಕಕ್ಕುಲಾತಿ ಎದ್ದು ಕಾಣುತ್ತದೆ.

ಮಯೂರ ತನ್ನ ಅಜ್ಜನಾದ ವೀರಶರ್ಮನ ಜೊತೆಗೆ ಕುಂತಳ ನಾಡಿನಿಂದ,ಪಲ್ಲವರ ಕಂಚಿ ನಾಡಿಗೆ ಹೆಚ್ಚಿನ ಅದ್ಯಯನ ಮಾಡಲು ಬಂದಾಗ ಆತನ ಅಪ್ರತಿಮ ಜಾಣತನ, ಕುಶಾಗ್ರಮತಿ, ಚಾಕಚಕ್ಯತೆಯು ಆತನಿಗೆ ಮುಳುವಾಗಿ ಪರಿಣಮಿಸಿ ಪಲ್ಲವರ ಸಾಮ್ರಾಜ್ಯದಿಂದ ಹೊರಬರಬೇಕಾಯಿತು. ಈ ಸಂಗತಿ ಪಲ್ಲವ ಅರಸ ಶಿವಸ್ಕಂದವರ್ಮ ನಿಗೆ ತಿಳಿದಿತ್ತು. ಆದರೆ ಮಯೂರನ ತೀವ್ರ ಬೆಳವಣಿಗೆ ಯಾರಿಗೂ ಸಹಿಸದಾಗದೆ ಹೊರಹಾಕುವುದೆ ಸರಿ ಎಂದು ಭಾವಿಸಿದ್ದರು. ಆದರೆ ಅವನಿಗಾದ ಅಪಮಾನದ ಈ ಸಣ್ಣ ಕಿಡಿ ಮುಂದೆ ದೊಡ್ಡ ಜ್ವಾಲೆಯಾಗಿ ಪರಿಣಮಿಸುತ್ತದೆ ಎಂದು ಯಾರು ಭಾವಿಸಿರಲಿಲ್ಲ.

ಮಯೂರ ಅಲ್ಲಿಂದ ಮರಳಿ ಕುಂತಳ ನೆಲಕ್ಕೆ ಬಂದು, ತಂದೆ ಬಂಧುಸೇನನ ನೆರವು ,ಅಜ್ಜ ವೀರಶರ್ಮ ಅಮಾತ್ಯನ ಸ್ಥಾನದಲ್ಲಿ ನಿಂತು ಅನೇಕ ವನವಾಸಿಗಳ, ಕಾಡುಗೊಂಡರ, ಬುಡಕಟ್ಟು ಜನರ ನೆರವಿನಿಂದ ನೂರಕ್ಕೂ ಹೆಚ್ಚು ಸಾಮಂತರನ್ನು ಮಟ್ಟಹಾಕಿ, ಹನ್ನೆರಡು ಸಾವಿರ ಗ್ರಾಮಗಳನ್ನು ವಶಪಡಿಸಿಕೊಂಡ. ನಂತರ ತನ್ನ ಮೂಲ ಉದ್ದೇಶ ಪಲ್ಲವರ ನಿರ್ನಾಮವಾಗಿತ್ತು. ಅದರಂತೆ ಅವರ ಮೇಲೆ ಆಕ್ರಮಣ ಮಾಡಿದಾಗ ಪಲ್ಲವ ಅರಸ ಶಿವಸ್ಕಂದವರ್ಮ ಸೋತು ಶರಣಾಗತನಾದ. ಅವನ ವರ್ಮ ಎಂಬ ಅಂಕಿತ ತಾನು ಪಡೆದು ಮಯೂರಶರ್ಮ ಬದಲು ಮಯೂರವರ್ಮನಾದ. ತನಗಾದ ಅಪಮಾನಕ್ಕೆ ಪ್ರತಿಕಾರವನ್ನು ತೀರಿಸಿಕೊಂಡ. ಮುಂದೆ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಅನೇಕ ಜನಪರ ಕಾರ್ಯ ಮಾಡಿ ಕುಂತಳ ನೆಲದಲ್ಲಿ ಮೊದಲ ಸಾಮ್ರಾಜ್ಯ ಕಟ್ಟಿದ ಕೀರ್ತಿ ಪಡೆದ. ಅಶ್ವಮೇಧ ಯಾಗ ಮಾಡಿದ, ಅಗ್ರಹಾರಕ್ಕೆ ಅವಕಾಶ ಕಲ್ಪಿಸಿದ, ಶಶಾಂಕಮುದ್ರೆ ಯನ್ನು ವರಿಸಿ ಕಂಗವರ್ಮ ಎಂಬ ಮಗನನ್ನು ಪಡೆದು ಸುಖಿ ಸಾಮ್ರಾಜ್ಯ ಸ್ಥಾಪಿಸಿದ. ಅಭೀರರು ಎಂಬ ಸಾಮಂತರ ಹುಟ್ಟಡಗಿಸಿ, ಭರತಖಂಡದ ಮದ್ಯ ಭಾಗವನ್ನು ಪೂರ್ಣವಾಗಿ ಆವರಿಸಿದ.ಉತ್ತರದಲ್ಲಿ ಗುಪ್ತರು ಇದ್ದರೆ ದಕ್ಷಿಣದಲ್ಲಿ ಪಲ್ಲವರು, ಮದ್ಯದಲ್ಲಿ ತನ್ನದೇ ಅಸ್ತಿತ್ವ ಅಸ್ಮಿತೆ ಹೊಂದಿದ ವಿಶಾಲ ಸಾಮ್ರಾಜ್ಯದ ಅಧಿಪತಿಯಾಗಿ ತನ್ನ ೬೦ ನೇ ವರ್ಷದ ವರೆಗೆ ಆಳಿದ,ಜೊತೆಗೆ ಜನಹಿತಕಾರಿ ಕೆಲಸದ ಮೂಲಕ ತನ್ನ ಛಾಪನ್ನು ಅಚ್ಚಳಿಯದಂತೆ ಮೂಡುವಂತೆ ಮಾಡಿದ ಮಯೂರ ವರ್ಮ.

ಇಡೀ ಕಾದಂಬರಿಯು ಅನೇಕ ಮೂಲಾಧಾರಗಳ ಮೇಲೆ ರಚಿಸಿದ್ದು ,ಪ್ರತಿಪುಟಕ್ಕೂ ಅಡಿ ಟಿಪ್ಪಣಿ ನೀಡಲಾಗಿದೆ.ಲೇಖಕರು ಕ್ಷೇತ್ರಕಾರ್ಯ ಹಾಗು ಮಾಹಿತಿ ಸಂಗ್ರಹಣೆಗೆ ಹೆಚ್ಚು ಶ್ರಮವಹಿಸಿದ್ದು ಇಲ್ಲಿ ಎದ್ದು ಕಾಣುತ್ತದೆ. ಇತಿಹಾಸದ ಪಾತ್ರವನ್ನು ಕಾದಂಬರಿ ರೂಪದಲ್ಲಿ ತರುವಾಗ ಕಲ್ಪನೆ, ರಮ್ಯತೆ,ರೋಚಕತೆಗೆ ಹೆಚ್ಚು ಅವಕಾಶ ಇರುತ್ತದೆ. ಆದರೆ ಲೇಖಕರು ತಮಗೆ ದೊರೆತ ಆಧಾರದ ಮೇಲೆ ಕತೆ ಹೆಣೆದಿದ್ದು,ಹೆಚ್ಚಾಗಿ ಸೈನ್ಯ ಸಂಘಟನೆ ಮತ್ತು ಆಕ್ರಮಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇಡೀ ಕಾದಂಬರಿಯು ಯುದ್ಧದ ವರ್ಣನೆಯಿಂದ ಕೂಡಿದ್ದು, ರಣತಂತ್ರ, ರಣರಂಗದಲ್ಲಿ ಮಯೂರನ ಆಕ್ರಮಣಕಾರಿ ನಿಲುವು,ವಿರೋಧಿ ಸೈನಿಕರ ರುಂಡ ಚಂಡಾಡುವ ಸನ್ನಿವೇಶಗಳೇ ಕೃತಿಯ ಉದ್ದಕ್ಕೂ ವಿಜ್ರಂಬಿಸಿವೆ. ನಿರ್ದಯವಾಗಿ ಕೊಲ್ಲುವ ,ರಕ್ತದ ಓಕುಳಿ ಆಡುವ, ನರಹತ್ಯೆ ಮಾಡುವ ಸನ್ನಿವೇಶಗಳು ಬೆಚ್ಚಿಬೀಳಿಸುತ್ತವೆ.ರಕ್ತದ ರೊಣೆ ಮಯೂರನ ಅಲಗಿಗೆ ಮೆತ್ತಿದ್ದು ಪದೆ ಪದೆ ಉಲ್ಲೇಖಿಸಿದಾಗ ಓದುಗನಿಗೆ ರೇಜಿಗೆ ಆಗದೆ ಇರದು.

ಕಾದಂಬರಿಯಲ್ಲಿ ಯುದ್ಧದ ಬಾಷೆಯೇ ಹೆಚ್ಚು ಮಾತನಾಡಿದೆ.ಕೂಚು ಹೊರಡುವುದು, ಧರಾಶಾಯಿ ಆಗುವುದು, ರುಂಡ ಮುಂಡಗಳ ಚೆಂಡಾಟ ಮಾಡುವ ವರ್ಣನೆ ಓದಿದರೆ ಇದು ಅನಿವಾರ್ಯವೇ ಎಂಬ ಪ್ರಶ್ನೆ ಕಾಡುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ ಯುದ್ಧದ ಬಿಸಿಯನ್ನು ಎಲ್ಲರೂ ಅನುಭವಿಸುವಾಗ ಈ ಜೀವಹಿಂಸೆ ನ್ಯಾಯಯುತವೇ ಎಂಬ ಪ್ರಶ್ನೆ ಕಾಡುತ್ತದೆ.

ಒಟ್ಟು ಕಾದಂಬರಿ ಒಬ್ಬ ವೈದಿಕ ಬಾಲಕನ ಅಪಮಾನ,ಅವನು ಪ್ರತಿಕಾರಕ್ಕಾಗಿ ಶಪಥ ಮಾಡುವುದು, ಅದರ ಪರಿಣಾಮ, ನಂತರ ಸಾಮ್ರಾಜ್ಯ ಸ್ಥಾಪನೆ ಮಾಡಿ ಕುಂತಳಕ್ಕೆ ಅಸ್ತಿತ್ವ ತಂದದ್ದು ಎಲ್ಲವೂ ಸರಿ. ಆದರೆ ಅದರ ಹಿಂದಿನ ಸಾವು ನೋವು ಕಂಡಾಗ ಮನಮಿಡಿಯುತ್ತದೆ. ಇತಿಹಾಸದ ಪುಟಗಳನ್ನು ತಿರುವಿದಾಗ ಎಲ್ಲವೂ ಹೀಗೆ, ಒಬ್ಬರನ್ನು ಮೆಟ್ಟಿ ಇನ್ನೊಬ್ಬರು ಆಳ್ವಿಕೆ ಮಾಡುವುದು. ಸೀಮೆ, ಗಡಿಗಳ ಲೆಕ್ಕಾಚಾರ, ಆದರೆ ಯಾವ ರೇಖೆಗಳು ಸೀಮೆಗಳು ಶಾಶ್ವತವಿಲ್ಲ. ಕೋಟೆ ಕಟ್ಟಿ ಮೆರೆದವರೆಲ್ಲಾ ಏನಾದರು….. ಎಂಬ ಮಾತು ನೆನಪಾಗುತ್ತದೆ.

ಕನ್ನಡದಲ್ಲಿ ಅನೇಕ ಐತಿಹಾಸಿಕ ಕಾದಂಬರಿಗಳು ರಚನೆಯಾಗಿವೆ.
ಅದರಲ್ಲೂ ವ್ಯಕ್ತಿ ಕೇಂದ್ರಿತ ಕೃತಿಗಳಾದ ತ.ರಾ.ಸು.ರವರ ದುರ್ಗಾಸ್ತಮಾನ, ಸಿ.ಕೆ.ನಾಗರಾಜರಾವ್ ಅವರ ಪಟ್ಟಮಹಾದೇವಿ ಶಾನ್ತಲೆ, ಮಾಸ್ತಿಯವರ ಚಿಕ್ಕವಿರರಾಜೇಂದ್ರ, ಎಸ್.ಎಲ್ ಭೈರಪ್ಪನವರ ಆವರಣ, ಇತ್ತೀಚೆಗೆ ಬಂದ ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಎಲ್ಲವೂ ಸ್ಮತಿಪಟಲದ ಮೇಲೆ ಅಚ್ಚಳಿಯದೆ ಮೂಡಿವೆ. ಅದೇ ಜಾಡಿನಲ್ಲಿ ವೈಜಯಂತಿಪುರ ಕೂಡ ಮೂಡಿಬಂದಿದೆ ಎನ್ನಬಹುದು. ಆದರೆ ಲೇಖಕನು ಆಯ್ಕೆ ಮಾಡಿಕೊಂಡ ಪ್ರಕಾರ ಕಾದಂಬರಿ ಆದ ಕಾರಣ ವಸ್ತು ವಿನ್ಯಾಸದಲ್ಲಿ ಇನ್ನೂ ಏನೆಲ್ಲಾ ಸೃಜಿಸುವ ಅವಕಾಶವಿತ್ತು.

ಕಾದಂಬರಿಗೆ ದೊಡ್ಡ ಕ್ಯಾನ್ವಾಸ್ ಇರುವುದರಿಂದ ಯುದ್ಧ, ಅದರ ಸಿದ್ಧತೆ, ರಣರಂಗದ ದೃಶ್ಯಗಳ ವೈಭವಿಕರಣದ ಆಚೆಯೂ ಮಯೂರ ಪಾತ್ರವನ್ನು ಇನ್ನಷ್ಟು ಮಗ್ಗಲುಗಳಿಂದ ಕಾಣಬಹುದಿತ್ತು. ಆದರೆ ಇಲ್ಲಿ ಯುದ್ಧದ ವೈಭವೀಕರಣವೇ ಹೆಚ್ಚಾಗಿ ಕಂಡುಬರುವುದು.
ಇದೊಂದು ರೀತಿಯಲ್ಲಿ ಸಂಶೋಧನಾ ಮಹಾಪ್ರಬಂಧದಂತೆ ಮೂಡಿಬಂದಿದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಆದರೆ ಲೇಖಕನ ಇತಿಮಿತಿಯಲ್ಲಿ ೧೭-೧೮ನೇ ಶತಮಾನದ ಹಿಂದಿನ ಪಾತ್ರಕ್ಕೆ ಜೀವ ತುಂಬಿ ಕಾದಂಬರಿ ರಚಿಸುವುದು ಸಾಮಾನ್ಯ ಸಂಗತಿಯಲ್ಲ. ವೈಜಯಂತಿಪುರ ಕಾದಂಬರಿ ಒಂದೇ ಗುಕ್ಕಿನಲ್ಲಿ ಓದಿ ಅರಗಿಸಿಕೊಳ್ಳಲು ಕಷ್ಟ ಸಾಧ್ಯ. ಕಾರಣ ಸ್ಥಳನಾಮಗಳು,
ಸಾಮಂತರ ಹೆಸರುಗಳು, ಯುದ್ಧದ ಸನ್ನಿವೇಶ ಎಲ್ಲವೂ ಬೇಗನೆ ಓದುಗನಿಗೆ ದಕ್ಕುವುದಿಲ್ಲ.ಆದರೂ ಇತಿಹಾಸದಲ್ಲಿ ಮೂಡಿದ ಮೂರು ಸಾಲಿನ ಸಂಗತಿಗೆ ಮೂರುನೂರು ಪುಟದಷ್ಟು ಕತೆ ಹೆಣೆಯುವುದು ಸರಳವೇನಲ್ಲ. ಒಟ್ಟು ಅವರ ಬರವಣಿಗೆ ಕನ್ನಡ ನೆಲದ ಇತಿಹಾಸದ ಮೇಲೆ ಪ್ರಾಮಾಣಿಕವಾಗಿ ಬೆಳಕು ಚೆಲ್ಲುವ ಕಾರ್ಯ ಮಾಡಿದೆ ಅವರ ಕೃತತ್ವ ಶಕ್ತಿಗೆ ಶರಣು.

‍ಲೇಖಕರು Admin

6 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading