ದೇವರಾಜ ಹುಣಸಿಕಟ್ಟಿ ಅವರ ‘ಹಕೀಮನೊಬ್ಬನ ತಕರಾರು’
‘ನಲ್ಬೆಳಗು’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ.
-ನಾಮದೇವ ಕಾಗದಗಾರ
ಕನ್ನಡ ಕಾವ್ಯ ಪರಂಪರೆಯಲ್ಲಿ ಶಬ್ದಗಳನ್ನು ಪೋಣಿಸುವುದು ಸುಲಭ, ಆದರೆ ಆ ಶಬ್ದಗಳ ಮೂಲಕ ಸಮಾಜದ ನಾಡಿಮಿಡಿತವನ್ನು ಹಿಡಿದು ಅದಕ್ಕೆ ಚಿಕಿತ್ಸೆ ನೀಡುವುದು ಸಾಹಸದ ಕೆಲಸ. ಈ ಸಾಹಸಕ್ಕೆ ಕೈಹಾಕಿದವರು ರಾಣೇಬೆನ್ನೂರಿನ ಕವಿ ದೇವರಾಜ ಹುಣಸಿಕಟ್ಟಿ. ಅವರ ‘ಹಕೀಮನೊಬ್ಬನ ತಕರಾರು’ ಕವನ ಸಂಕಲನವು ಕೇವಲ ಅಕ್ಷರಗಳ ಗುಚ್ಛವಲ್ಲ; ಇದು ಒಬ್ಬ ಸೂಕ್ಷ್ಮ ಮನಸ್ಸಿನ ಹಕೀಮನೊಬ್ಬ(ವೈಧ್ಯ) ಸಮಾಜವೆಂಬ ರೋಗಗ್ರಸ್ತ ದೇಹಕ್ಕೆ ಮಾಡುತ್ತಿರುವ ಅಕ್ಷರ ಚಿಕಿತ್ಸೆ.
ಡಾ. ಎಚ್.ಎಲ್. ಪುಷ್ಪ ಅವರ ಮುನ್ನುಡಿ ಮತ್ತು ಪುರುಷೋತ್ತಮ ಬಿಳಿಮಲೆಯವರ ಬೆನ್ನುಡಿಗಳು ಈ ಸಂಕಲನದ ಗಂಭೀರತೆಯನ್ನು ಎತ್ತಿಹಿಡಿದಿವೆ. ಒಬ್ಬ ಶಿಕ್ಷಕನಾಗಿ ಸಮಾಜವನ್ನು ಹತ್ತಿರದಿಂದ ಕಂಡ ದೇವರಾಜ ಅವರು, ತಮ್ಮ ೭೦ ಕವಿತೆಗಳ ಮೂಲಕ ನಮ್ಮೆದುರು ಒಂದು ಕನ್ನಡಿಯನ್ನು ಹಿಡಿದಿದ್ದಾರೆ. ಈ ಕನ್ನಡಿ ನಮ್ಮ ಮುಖದ ಮೇಲಿನ ಕಲೆಗಳನ್ನು ತೋರಿಸುವುದರ ಜೊತೆಗೆ, ಅವುಗಳನ್ನು ತೊಳೆದುಕೊಳ್ಳುವ ದಾರಿಯನ್ನೂ ಸೂಚಿಸುತ್ತದೆ.
ಸಂಕಲನದ ಶೀರ್ಷಿಕೆಯೇ ಸೂಚಿಸುವಂತೆ, ಇಲ್ಲಿ ಕವಿ ಒಬ್ಬ ಹಕೀಮನಾಗಿ ಕಾಣಿಸಿಕೊಳ್ಳುತ್ತಾರೆ. ಹಕೀಮನ ಕೆಲಸ ಕೇವಲ ರೋಗವನ್ನು ಗುರುತಿಸುವುದಲ್ಲ, ಅದರ ಮೂಲವನ್ನು ಅರಿತು ಗುಣಪಡಿಸುವುದು. ದೇವರಾಜ ಅವರು ತಮ್ಮ ಸುತ್ತಲಿನ ಲೋಕದ ಬೂಟಾಟಿಕೆ, ಅನ್ಯಾಯ ಮತ್ತು ಕಂದಕಗಳನ್ನು ಕಂಡಾಗ ಸುಮ್ಮನಿರಲಾರದೆ ‘ತಕರಾರು’ ಎತ್ತುತ್ತಾರೆ. ಈ ತಕರಾರು ವೈಯಕ್ತಿಕವಲ್ಲ, ಇದು ಮನುಷ್ಯತ್ವದ ಉಳಿವಿಗಾಗಿ ನಡೆಸುವ ಬೌದ್ಧಿಕ ಸಂಘರ್ಷ. ಈ ಹಕೀಮನ ತಕರಾರುಗಳು ನ್ಯಾಯಯುತವಾಗಿವೆ ಮತ್ತು ಅಷ್ಟೇ ಅನಿವಾರ್ಯವಾಗಿವೆ. ಓದುಗರು ಈ ಕವಿತೆಗಳ ಒಳಗೆ ಇಳಿದಷ್ಟೂ ತಮ್ಮದೇ ಬದುಕಿನ ಹೊಸ ಆಯಾಮಗಳನ್ನು ಕಂಡುಕೊಳ್ಳುವುದರಲ್ಲಿ ಸಂಶಯವಿಲ್ಲ.
ಇAದಿನ ಕಾಲಘಟ್ಟದಲ್ಲಿ ‘ಸಾಮರಸ್ಯ’ ಎನ್ನುವುದು ಕೇವಲ ವೇದಿಕೆಯ ಭಾಷಣದ ಸರಕಾಗಿದೆ. ಆದರೆ ದೇವರಾಜ ಅವರ ಕವಿತೆಯಲ್ಲಿ ಸಾಮರಸ್ಯವು ಹಳ್ಳಿಯ ಮಣ್ಣಿನ ಘಮಲನ್ನು ಹೊಂದಿದೆ. “ಟೋಪಿಗೆ ಬೆವರ ನನ್ನ ಹೆಗಲಿಗಂಟಿ, ನನ್ನ ಟವಲ್ ಅವನ ಸೊಂಟಕ್ಕೆ ಅಂಟಿ” ಎನ್ನುವ ಸಾಲುಗಳು ಯಾವುದೇ ಧರ್ಮದ ಗಡಿಗಳನ್ನು ಮೀರಿ ನಿಲ್ಲುತ್ತವೆ. ಇಲ್ಲಿ ಸಾಮರಸ್ಯ ಎಂದರೆ ಕೇವಲ ಒಟ್ಟಿಗೆ ಇರುವುದಲ್ಲ, ಒಬ್ಬರ ನೋವಿನಲ್ಲಿ ಇನ್ನೊಬ್ಬರು ಬೆವರುವುದು. ಹಳ್ಳಿ ಮನುಷ್ಯನ ಮುಗ್ಧತೆಯ ಮೂಲಕ ಅವರು ಸಮಾಜಕ್ಕೆ ಕೇಳುವ ಪ್ರಶ್ನೆ “ಸಾಮರಸ್ಯಕ್ಕೆ ಹೆಸರಿಡುವುದು ಮುಖ್ಯವೋ ಅಥವಾ ಮನುಷ್ಯನಾಗಿ ಬದುಕುವುದು ಮುಖ್ಯವೋ?” ಎಂಬುದು ಓದುಗನನ್ನು ದೀರ್ಘಕಾಲ ಕಾಡುತ್ತದೆ.
ಸಂಕಲನದ ಮತ್ತೊಂದು ಮಗ್ಗುಲು ಬದುಕಿನ ಕರಾಳ ವಾಸ್ತವಗಳು. ‘ಬಚ್ಚಿಟ್ಟ ಕನಸಿನ ಪಿಟಾರ’ದಲ್ಲಿ ತಾಯಿಯೊಬ್ಬಳ ತ್ಯಾಗವನ್ನು ಚಿತ್ರಿಸಿರುವ ರೀತಿ ಅನನ್ಯ. ಮನೆಯ ಅಡುಗೆ ಕೋಣೆಯ ಸಣ್ಣ ಸಣ್ಣ ಡಬ್ಬಗಳಲ್ಲಿ ಅಡಗಿಸಿಟ್ಟ ಅವಳ ಆಸೆಗಳು ಮಕ್ಕಳ ಭವಿಷ್ಯಕ್ಕಾಗಿ ಹೇಗೆ ಕರಗಿ ಹೋಗುತ್ತವೆ ಎಂಬುದು ಕರುಣಾಜನಕ. ಅದೇ ರೀತಿ ‘ಚಪ್ರಾಸಿಯೊಬ್ಬನ ರಶೀದಿ ಚೀಟಿ’ಯಲ್ಲಿ ಕವಿ ವ್ಯವಸ್ಥೆಯ ಕ್ರೂರತೆಯನ್ನು ಎತ್ತಿ ತೋರಿಸುತ್ತಾರೆ. ಶ್ರಮಜೀವಿಯೊಬ್ಬನು ತನ್ನ ಇಡೀ ಬದುಕನ್ನು ಧಾರೆ ಎರೆದರೂ, ಕೊನೆಗೆ ಅವನ ಅಸ್ತಿತ್ವ ಯಾರದೋ ಹೆಸರಿನ ರಶೀದಿ ಚೀಟಿಯಾಗಿ ಮಾತ್ರ ಉಳಿಯುತ್ತದೆ ಎನ್ನುವ ಕಹಿಸತ್ಯ ವ್ಯವಸ್ಥೆಯ ಅಣಕದಂತಿದೆ.
ದೇವರಾಜ ಅವರ ಕಾವ್ಯದ ಶಕ್ತಿ ಇರುವುದು ಅವರು ಬಳಸುವ ರೂಪಕಗಳಲ್ಲಿ. ವಿಶ್ವಾಸ ಮತ್ತು ನಂಬಿಕೆಯನ್ನು ಅವರು ಇಂದಿನ ಕಾಲದ ಬಿಪಿ ಮತ್ತು ಶುಗರ್ ಕಾಯಿಲೆಗಳಿಗೆ ಹೋಲಿಸುತ್ತಾರೆ. ವಿಶ್ವಾಸದ ಏರಿಳಿತಗಳು ಬದುಕಿನ ಸಮತೋಲನವನ್ನು ಹೇಗೆ ತಪ್ಪಿಸುತ್ತವೆ ಎಂಬುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ವಿವರಿಸುವುದು ಹೊಸತನದಿಂದ ಕೂಡಿದೆ. ಕನ್ನಡಿಯಂತೆ ಒಡೆದ ವಿಶ್ವಾಸವನ್ನು ಅಂಟಿಸಲು ಸಾಧ್ಯವಿಲ್ಲವೆಂಬ ಎಚ್ಚರಿಕೆ ನಮಗೆ ನಮ್ಮ ಸಂಬAಧಗಳ ಮೌಲ್ಯವನ್ನು ನೆನಪಿಸುತ್ತದೆ.
‘ಚಿಟ್ಟೆ ಹಾರುವ ಸಮಯ’ದಂತಹ ಕವಿತೆಗಳಲ್ಲಿ ಕವಿ ಅತ್ಯಂತ ರಮ್ಯವಾಗಿ ಕವಿತೆಯ ಹುಟ್ಟನ್ನು ವಿವರಿಸುತ್ತಾರೆ. ನಗರದ ಯಾಂತ್ರಿಕ ಬದುಕಿನಲ್ಲಿ ಕಳೆದುಹೋದ ಮನುಷ್ಯನಿಗೆ ಪ್ರೀತಿ ಮತ್ತು ಕವಿತೆ ಮಾತ್ರ ಹೊಸ ದೃಷ್ಟಿಯನ್ನು ನೀಡಬಲ್ಲವು. ವಿರಹದ ಬೆಂಕಿಯಲ್ಲಿ ಬೆಂದಾಗ ಮಾತ್ರ ಸುಂದರವಾದ ಕವಿತೆಗಳೆಂಬ ಚಿಟ್ಟೆಗಳು ಹಾರಲು ಸಾಧ್ಯ ಎಂಬ ತಾತ್ವಿಕತೆ ಇಲ್ಲಿ ಅಡಗಿದೆ. ಹಳ್ಳಿಯ ಮುಗ್ಧತೆ ಮತ್ತು ನಗರದ ಕಾಂಕ್ರೀಟ್ ಒಣತನದ ನಡುವಿನ ಕಂದಕವನ್ನು “ಒಂದು ಇಂಚು ಮಳೆ”ಯಂತಹ ಅದ್ಭುತ ರೂಪಕಗಳ ಮೂಲಕ ಚಿತ್ರಿಸಲಾಗಿದೆ. ಗ್ರಾಮೀಣ ಮತ್ತು ನಗರದ ಸಂಘರ್ಷಗಳು ಎದ್ದು ಕಾಣುವಂತಿವೆ. ಚಪ್ರಾಸಿ, ತಾಯಿ, ಮತ್ತು ಹಳ್ಳಿ ಮನುಷ್ಯನ ಅಸಹಾಯಕತೆಯನ್ನು ಪ್ರತಿಭಟನೆಯ ರೂಪಕ್ಕೆ ತಿರುಗಿಸುವುದು ದೇವರಾಜ ಅವರ ಕಾವ್ಯಧರ್ಮವಾಗಿದೆ. ಧ್ವನಿಹೀನರ ಧ್ವನಿಯಾಗಿದೆ.
ಈ ಸಂಕಲನದಿAದ ಮನುಷ್ಯ ತನ್ನ ಒಳಗಿನ ಧ್ವನಿಯನ್ನು ಕೇಳಿಸಿಕೊಳ್ಳಬೇಕಾದ ಅಗತ್ಯತೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ. ನೋವಿನ ನಡುವೆಯೂ ಬದುಕನ್ನು ಪ್ರೀತಿಸುವ ಮತ್ತು ಹೊಸ ಭರವಸೆಯನ್ನು ಹುಡುಕುವ ಆಶಾವಾದ ಸಿಗುತ್ತದೆ ಎಂದು ಹೇಳಬಹುದು.
ಒಟ್ಟಾರೆಯಾಗಿ, ಓದುಗರಲ್ಲಿ ಗಂಭೀರವಾದ ಚಿಂತನೆಯನ್ನು ಪ್ರಚೋದಿಸುತ್ತಾ, ಬದುಕಿನ ವಾಸ್ತವತೆಯನ್ನು ಅರಿಯಲು ಪ್ರೇರೇಪಿಸುವ ‘ಹಕೀಮನೊಬ್ಬನ ತಕರಾರು’ ಕವನ ಸಂಕಲನವು ಬದುಕಿನ ಕಹಿಯನ್ನು ಉಣ್ಣುತ್ತಲೇ ಸವಿಯನ್ನು ಹಂಚುವ ಪ್ರಯತ್ನ. ಇಲ್ಲಿನ ಕವಿತೆಗಳು ಪ್ರತಿಭಟಿಸುತ್ತವೆ, ಪ್ರೀತಿಸುತ್ತವೆ ಮತ್ತು ಮುಖ್ಯವಾಗಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡಲು ಪ್ರೇರೇಪಿಸುತ್ತವೆ. ಹಕೀಮನ ಮದ್ದಿನಂತೆ ಈ ಕವಿತೆಗಳು ಓದುಗರ ಮನಸ್ಸಿನ ಗಾಯಗಳಿಗೆ ಮುಲಾಮಾಗಬಲ್ಲವು. ವರ್ತಮಾನದ ತಲ್ಲಣಗಳಿಗೆ ಕವಿಯೊಬ್ಬ ಸ್ಪಂದಿಸುವ ಪರಿಯನ್ನು ಅನಾವರಣಗೊಳಿಸುತ್ತದೆ. ಈ ಕೃತಿಯ ಎಲ್ಲ ಕವಿತೆಗಳಲ್ಲಿ ಕೇವಲ ವೈಯಕ್ತಿಕ ನೋವುಗಳಿಲ್ಲ, ಬದಲಾಗಿ ಸಮಷ್ಟಿಯ ಸಂಕಟಗಳಿವೆ. ಹಳ್ಳಿಯ ದೇಸೀ ಸಂವೇದನೆಯಿAದ ಹಿಡಿದು ಆಧುನಿಕ ಬದುಕಿನ ಯಾಂತ್ರಿಕತೆಯವರೆಗೆ ಎಲ್ಲವನ್ನೂ ಕವಿ ದೇವರಾಜ ಹುಣಸಿಕಟ್ಟಿ ಅವರು ಮನುಷ್ಯತ್ವದ ಒರೆಗಲ್ಲಿಗೆ ಹಚ್ಚಿ ನೋಡಿದ್ದಾರೆ. ಇಲ್ಲಿ ತಾಯಿಯ ತ್ಯಾಗವಿದೆ, ಶ್ರಮಿಕನ ಅಸಹಾಯಕತೆಯಿದೆ, ಸಾಮರಸ್ಯದ ಹಂಬಲವಿದೆ ಮತ್ತು ಪ್ರೀತಿಯ ನವಿರಾದ ಸ್ಪರ್ಶವೂ ಇದೆ. ಕವಿಯು ಒಬ್ಬ ‘ಹಕೀಮ’ನಂತೆ ಸಮಾಜದ ನಾಡಿಮಿಡಿತವನ್ನು ಹಿಡಿದು, ನೈತಿಕ ಅಧಃಪತನದ ವಿರುದ್ಧ ಅಕ್ಷರರೂಪದ ಚಿಕಿತ್ಸೆಯನ್ನು ನೀಡುತ್ತಾ ಹೋಗುತ್ತಾರೆ.
ಕೊನೆಯದಾಗಿ ಹೇಳುವುದಾದರೆ, ದೇವರಾಜ ಹುಣಸಿಕಟ್ಟಿ ಅವರ ಈ ತಕರಾರುಗಳು ಕೇವಲ ಪ್ರತಿಭಟನೆಯ ಧ್ವನಿಗಳಲ್ಲ, ಅವುಗಳು ಸುಪ್ತವಾಗಿರುವ ಮನುಷ್ಯನ ವಿವೇಕವನ್ನು ಬಡಿದೆಬ್ಬಿಸುವ ಆಪ್ತ ಕರೆಯಲ್ಲಿವೆ. ಬದುಕಿನ ಗಾಯಗಳಿಗೆ ಅಕ್ಷರದ ಮುಲಾಮು ಹಚ್ಚುತ್ತಲೇ, ಆ ಗಾಯಗಳು ಮರುಕಳಿಸದಂತೆ ನೋಡಿಕೊಳ್ಳುವ ಹಕೀಮನ ಜವಾಬ್ದಾರಿಯನ್ನು ಈ ಕೃತಿ ಸಮರ್ಥವಾಗಿ ನಿಭಾಯಿಸಿದೆ. ಸಂಕಲನದ ಪ್ರತಿ ಸಾಲೂ ಓದುಗನನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತದೆ. ಈ ಹಕೀಮನ ಚಿಕಿತ್ಸೆಯು ಕೇವಲ ಓದಿ ಮುಗಿಸುವ ಪುಸ್ತಕವಲ್ಲ, ಅದು ಓದುಗನ ಎದೆಯೊಳಗೆ ಸದಾ ಗುನುಗುವ, ಸಮಾಜದ ಅಂಕುಡೊAಕುಗಳನ್ನು ತಿದ್ದಲು ಪ್ರೇರೇಪಿಸುವ ಒಂದು ನಿರಂತರ ಪ್ರಕ್ರಿಯೆ. ಮನುಷ್ಯತ್ವದ ಉಸಿರು ಜೀವಂತವಾಗಿರುವವರೆಗೂ ಈ ‘ತಕರಾರು’ಗಳು ಪ್ರಸ್ತುತವಾಗಿರುತ್ತವೆ ಮತ್ತು ಪ್ರತಿಯೊಬ್ಬ ಚಿಂತನಶೀಲ ಓದುಗನನ್ನೂ ಕಾಡುತ್ತಲೇ ಇರುತ್ತವೆ.






0 Comments