ಜಾಣಗೆರೆ ವೆಂಕಟರಾಮಯ್ಯ ಅವರ ಆತ್ಮಕಥನ ‘ಅರ್ಥವಾಗದ ಲೋಕ‘
ಈ ಕೃತಿಯ ಕುರಿತ ಶ್ರೀನಿವಾಸ್ ಮೂರ್ತಿ ಅವರ ಒಂದು ಬರಹ ಇಲ್ಲಿದೆ.
-ಶ್ರೀನಿವಾಸ್ ಮೂರ್ತಿ
80ರ ದಶಕದಲ್ಲಿ ನಾನು ಪ್ರೈಮರಿ ಶಾಲೆಯಲ್ಲಿ ಇದ್ದಾಗಲೇ ಜಾಣಗೆರೆಯವರ ಅಭಿಮಾನಿ ಆಗಿದ್ದೆ ಬಹುಶಃ ಅವರ ಜಾಣಗೆರೆ ಪತ್ರಿಕೆಯು ಮತ್ತೆ ಯಾವುದು ಸ್ಪಷ್ಟವಾಗಿ ನೆನಪಿಲ್ಲ “ಒಂದು ಜೊನ್ನೆ ಬಾಡಿನ ಸಾರಿಗೆ ರಾತ್ರಿ ಇಡೀ ಕಾದಿದ್ದೆ” ಎನ್ನುವ ಶೀರ್ಷಿಕೆಯ ಲೇಖನ ಅವರ ಬಾಲ್ಯದ ದಿನಗಳಲ್ಲಿ ಊರ ದೇವರನ್ನು ಹೊತ್ತು ಬೇರೆ ಊರಿಗೆ ಪರ ಹರಿಸೇವೆ ಇತ್ಯಾದಿಗಳಿಗೆ ಹೋಗುವುದು ಅಲ್ಲಿ ಮಾಂಸದೂಟ ಇತ್ಯಾದಿಗಳನ್ನು ಸವಿಯುವ ಘಟನೆಗಳನ್ನು ಅದರಲ್ಲಿ ಚಿತ್ರಿಸಲಾಗಿತ್ತು ಅದು ನಮ್ಮಗಳ ಅನುಭವವು ಆದ್ದರಿಂದ ಅದು ನನಗೆ ಇಷ್ಟವಾಗಿತ್ತು ವಿಚಿತ್ರವೆಂದರೆ ಅವರ ಒಡನಾಟ ಸಾಧ್ಯವಾದದ್ದು 2010 ರಿಂದ ನಾನು ಸಮಗ್ರ ಕುವೆಂಪು ಸಾಹಿತ್ಯ ಅಧ್ಯಯನದ ನಂತರ ಕುವೆಂಪು ವಿಚಾರ ವೇದಿಕೆ ಹುಟ್ಟು ಹಾಕುವ ಕನಸಿನಲ್ಲಿ ನಮ್ಮೂರಿನಲ್ಲಿ ಒಂದು ಗುರುವಂದನೆ ಕಾರ್ಯಕ್ರಮ ಮಾಡಬೇಕೆಂದು ತೀರ್ಮಾನಿಸಿ, ಅವರನ್ನೇ ಅತಿಥಿಗಳಾಗಿ ಆಹ್ವಾನಿಸಲು ಕರೆಯಲು ಹೋದಾಗ ಅವರ ಪರಿಚಯ ಮಾಡಿಕೊಂಡೆ ನಂತರವೂ ನಿರಂತರ ಒಡನಾಟವನ್ನು ಸಹ ರೂಡಿಸಿಕೊಂಡೇ ಅವರ ಘನ ವ್ಯಕ್ತಿತ್ವಕ್ಕೆ ಮಾರು ಹೋದದ್ದಲ್ಲದೆ ಅವರ ಎಲ್ಲಾ ಕೃತಿಗಳನ್ನು ಓದುವ ಸದಾವಕಾಶ ಸಹ ಸಿಕ್ಕಿತು.
ಬೇಕಾದ್ದು ಬೇಡದ್ದು ಎಲ್ಲವನ್ನೂ ನೇರ ನೇರ ವದರಿ ಬಿಸಾಡುವ ನನ್ನಂಥ ಮಹಾ ಎಡಬಿಡಂಗಿಯನ್ನು ಅವರು ಸಂಭಾಳಿಸಿಕೊಂಡು ಬರುತ್ತಿರುವುದೇ ಅವರ ಘನ ವ್ಯಕ್ತಿತ್ವದ ಒಂದು ಉದಾಹರಣೆ ಎನ್ನಬಹುದು ಒಮ್ಮೆ ಸರ್ ರೊಟ್ಟಿ ತಿನ್ನಿಸೋದು ಕಡಿಮೆ ಮಾಡಿ ಪುಸ್ತಕದ ಗಾತ್ರ ಕಡಿಮೆ ಮಾಡಿ ಸರ್ ಇನ್ನೂ ಚೆನ್ನಾಗಿರುತ್ತೆ ಎಂದು ಕೇಳಿದ್ದೆ ಅವರ ಜೀವ ಜಲ, ಮಹಾಯಾನ, ಇತ್ಯಾದಿ ಯಾವುದೇ ಕೃತಿಗಳನ್ನು ನೋಡಿ ತಾಯಿ ಗಂಗಮ್ಮನಂತ ಒಂದು ಪಾತ್ರ ಇರುತ್ತದೆ ಅಲ್ಲಿ ಯಾರು ಹೋದರು “ರೊಟ್ಟಿ ಮಾಡುತ್ತಿದ್ದೇನೆ ತಿನ್ನುವಿರಂತೆ ಸ್ವಲ್ಪ ಇರಿ” ಸ್ವಲ್ಪ ಸ್ವಲ್ಪ ರೊಟ್ಟಿ ತಿಂದುಕೊಂಡು ಹೋಗಿ ಎನ್ನುವ ಮಾತುಕತೆಗಳು ರಾಗಿ ರೊಟ್ಟಿ ಉಚ್ಚಳ್ಳು ಚೊಟ್ಟಿ ಜೊತೆಗೆ ಈರುಳ್ಳಿ ಎಲ್ಲವನ್ನು ಸವಿದರು ಎನ್ನುವಂತ ನಿರೂಪಣೆಗಳು ಪುಟ ಪುಟಕ್ಕೂ ಪ್ರತಿ ಸನ್ನಿವೇಶಗಳಿಗೂ ಎಲ್ಲಾ ಅಧ್ಯಾಯಗಳಲ್ಲಿ ಇರುತ್ತಿದ್ದವು ಬಹುಶಃ ನಾವು ಕುವೆಂಪು ಭೈರಪ್ಪ ಇತ್ಯಾದಿ ಎಲ್ಲ ಮಹನೀಯರ ಪುಸ್ತಕಗಳನ್ನು ಓದಿ ಬೆಳೆಸಿಕೊಂಡ ವಿಮರ್ಶಾ ಪ್ರಜ್ಞೆ ಇರಬಹುದು ಆದರೆ ಜಾಣಗೆರೆಯವರು ಬೆಳೆದು ಬಂದ ದಾರಿ ಅವರಲ್ಲಿನ ಮಾತೃ ಸಹಜ ಅಂತಕರಣ ಇತ್ಯಾದಿಗಳನ್ನು ಗಮನಿಸಿದಾಗ ಇದು ಸಹಜ ಎನಿಸುತ್ತದೆ. ನನಗಂತೂ ಕನ್ನಡ ಸಾಹಿತ್ಯದಲ್ಲಿ ಕರುಣಾ ರಸಪ್ರಧಾನವಾದ ಗದ್ಯ ಬರೆಯುವುದರಲ್ಲಿ ಜಾಣಗೆರೆಯವರದೇ ಮೇಲುಗೈ ಎನ್ನಬಹುದು ಬೀಚಿಯವರ ಸಹಾಯಕರಾಗಿ ಕೆಲಸ ಮಾಡಿದರು ಸಹ ಇವರಲ್ಲಿ ಹಾಸ್ಯ ರಸ ಇಲ್ಲದಿರುವುದು ಸೋಜಿಗ ಎನ್ನಬಹುದು.
ಇತ್ತೀಚಿಗೆ ಗಾಂಧಿ ಭವನದಲ್ಲಿ ಬಿಡುಗಡೆಯಾದ ಅವರ ಆತ್ಮಕಥನ ಅರ್ಥವಾಗದ ಲೋಕ ಕೃತಿಯನ್ನು ನಾನು ಕೇವಲ ಎಂಟು ಗಂಟೆಗಳಲ್ಲಿ ಓದಿ ಮುಗಿಸಿದೆ ಬಿಡುಗಡೆಯ ದಿನವೇ ಸಂಜೆಯ ನಂತರ 3 ಗಂಟೆ ಮಾರನೇ ದಿನ ಭಾನುವಾರ 5 ಗಂಟೆ ಓದಿನ ಧ್ಯಾನವಾದಂತಾಯ್ತು ಬಿಡುಗಡೆಗೆ ಮುನ್ನವೇ ಒಂದು ಹೆಸರನ್ನು ಸೂಚಿಸಲು ಕೇಳಿದ್ದರು ನಾನು ಬೇಸಾಯಕ್ಕೆ ಸಂಬಂಧಪಟ್ಟಂತೆ ಒಂದು ಹೆಸರನ್ನು ಚಿಂತಿಸುತ್ತಿದ್ದೇ ನಾನು ಹೇಳುವ ಮುನ್ನವೇ ಅವರು ಅರ್ಥವಾಗದ ಲೋಕ ಎಂದು ಹೆಸರಿಟ್ಟಿದ್ದರು ಒಂದು ರೀತಿಯ ಜಿಜ್ಞಾಸೆ ತಾತ್ವಿಕ ಚಿಂತನೆ ಇದರಲ್ಲಿ ಇದೆ ಈ ಹೆಸರೇ ಸೂಕ್ತ ಎನಿಸಿತು ನನಗಂತೂ ಅರ್ಥ ಗಿರ್ಥಗಳು ಸೃಷ್ಟಿಕರ್ತನಾಗಿರಲಿ ವ್ಯರ್ಥ ಜಿಜ್ಞಾಸೆಯಲ್ಲಿ ಕಾಲಹರಣ ಏಕೆ ಬಾರಯ್ಯ ಮಮಬಂದು ಒಂದಾಗಿ ಜೀವ ಪದಗಳು ಮುಂದುವರೆಯುವ ಎನ್ನುವ ಕುವೆಂಪು ಸಾಲು ನೆನಪಾಯಿತು ಅದನ್ನು ಅವರ ಮುಂದೆ ಹೇಳಿದಾಗ ಆ ಹಾಡಿನ ಮೊದಲ ಚರಣ ಕೇಳಿದರು ನಾನು ಕಷ್ಟಪಟ್ಟು ನೆನಪಿಸಿಕೊಂಡು ಅವರ ಮುಂದೆ ಕುವೆಂಪುರ ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಮತ್ತೆ ಎನ್ನುವ ಹಾಡನ್ನು ರಾಗವಾಗಿ ಅವರ ಮನೆಯಲ್ಲಿ ಅವರ ಪರಿವಾರದ ಮುಂದೆಯೇ ಹಾಡಿದ್ದು ಸಹ ಒಂದು ಸುಮಧುರ ನೆನಪು.
ಪತ್ರಿಕೋದ್ಯಮ, ಸಾಹಿತ್ಯ, ಚಳುವಳಿ ಮೂರೂ ರಂಗಗಳಲ್ಲೂ ಸವ್ಯಸಾಚಿಯಾದ ಜಾಣಗೆರೆ ಅವರು 75 ವರ್ಷಗಳ ಸಮೃದ್ಧ ಬದುಕು ಹಾಗೂ 65 ಸಂವತ್ಸರಗಳ ಸಾರ್ಥಕ ಸಾಮಾಜಿಕ ಬದುಕಿನ ಎಲ್ಲ ನೋಟಗಳನ್ನು ಒಳಗೊಂಡ ಈ ಕೃತಿಯನ್ನು ರಚಿಸಿ ಸಣ್ಣವರ ದೊಡ್ಡತನಗಳನ್ನು ದೊಡ್ಡವರ ಸಣ್ಣತನಗಳನ್ನ ಚರಿತ್ರಾರ್ಹವಾದ ಕೆಲವು ದಾಖಲೆಗಳನ್ನ ದಾಖಲಿಸಿದ್ದಾರೆ.
ಅರಗಿಣಿ, ಮಾರ್ಧನಿ, ಜಾಣಗೆರೆ,ಕಾಜಾಣ, ಲಂಕೇಶ್, ಈ ಸಂಜೆ ಇತ್ಯಾದಿ ಹತ್ತಾರು ಪತ್ರಿಕೆಗಳನ್ನ ಕಟ್ಟಿ ಬೆಳೆಸಿ ಅಷ್ಟೇ ನಿರ್ಲಿಪ್ತತೆಯಿಂದ ಅಲ್ಲಿಂದ ಹೊರ ಬಂದದ್ದಲ್ಲದೆ ಕರವೇ, ಜೈ ಕರ್ನಾಟಕ, ಸಾಮಾನಮನಸ್ಕರ ಒಕ್ಕೂಟ ಇತ್ಯಾದಿ, ನಾನಾ ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದಲ್ಲದೆ ಕೆಲವು ಸಂಘಟನೆಗಳು ಹಳ್ಳ ಹಿಡಿದಾಗ ಅಷ್ಟೇ ನಿರ್ಲಿಪ್ತತೆಯಿಂದ ಹೊರಬಂದಿರುವುದು ಎಲ್ಲ ರಂಗಗಳು ಕಲುಷಿತಗೊಂಡ ಸಾಮಾಜಿಕ ವಾತಾವರಣದಲ್ಲಿ ಮಾರಾಟವಾಗದ ಹೋರಾಟಗಾರ ಎನ್ನುವುದನ್ನು ದೃಢಪಡಿಸಿದ್ದಾರೆ.
ಶಾಂತ ಸ್ಥಿತಪ್ರಜ್ಞ ಮನ ಇವರಿಗೆ ಹೇಗೆ ಸಿದ್ಧಿಸಿತು ಎಂದು ಒಮ್ಮೊಮ್ಮೆ ನನಗೂ ಅನ್ನಿಸಿದ್ದುಂಟು, ಇರುವ ಒಂದೇ ಶರ್ಟ್ ಒಗೆದು ಹಾಕಿದ್ದ ದಿವಸ ಅಕ್ಕನ ಜಾಕೆಟ್ ತೊಟ್ಟು ಶಾಲೆಗೆ ಹೋಗುವುದು, ಅಪ್ಪನಿಗೆ ಬಸ್ ಚಾರ್ಜ್ ಇಲ್ಲದೆ ಅಪ್ಪ ಬೆಂಗಳೂರಿನಿಂದ ನಡೆದುಕೊಂಡು ಊರಿಗೆ ಹೋಗುವುದು, ತಂದೆ-ತಾಯಿ ಕುಟುಂಬದ ಆಸರೆಯಾದ ಅಣ್ಣ ಎಲ್ಲರೂ ಕಣ್ಣೆದುರಿನಲ್ಲೇ ಅವಸಾನ ಕಂಡದ್ದು ಇತ್ತೀಚಿಗೆ ಎರಡು ವರ್ಷಗಳ ಹಿಂದೆ ಅವರ ಕೊನೆಯ ಕಿರಿ ತಮ್ಮ ಮತ್ತು ತಮ್ಮನ ಮಗ ಅಪಘಾತದಲ್ಲಿ ತೀರಿಕೊಂಡದ್ದು ಇತ್ಯಾದಿಗಳನ್ನು ಓದಿದಾಗ ಅಂತಕ್ಕರಣವೇ ಕಲಕಿದಂತಾಗುತ್ತದೆ , ಸ್ವರ್ಗಕ್ಕೆ ದಾರಿ ಇದೆ ಎಂದಾದರೆ ಅದು ನರಕವೇ ಎನ್ನುವ ಪ್ರಜ್ಞರ ಮಾತುಗಳು ನಾವು ಜಗತ್ತಿನಲ್ಲಿ ಪೆಟ್ಟು ತಿಂದಷ್ಟು ಬಲಿಷ್ಠರಾಗುತ್ತೇವೆ” ,” ಸುಖವು ದುಃಖದ ಕಿರೀಟವನ್ನು ಧರಿಸಿ ಬರುತ್ತದೆ ಯಾರಿಗೆ ಸುಖ ಬೇಕು ಅವರು ದುಃಖವನ್ನು ಸ್ವೀಕರಿಸಲೇಬೇಕು” ಎನ್ನುವ ವಿವೇಕಾನಂದರ ಮಾತಿನಂತೆ ಇವರ ಪ್ರಬುದ್ಧತೆ, ಪಕ್ವತೆ, ಶಾಂತತೆ, ಸ್ಥಿತಪ್ರಜ್ಞತೆ ಇತ್ಯಾದಿ ಒಳ್ಳೆಯ ಗುಣಗಳಿಗೆ ಸಂಕಷ್ಟಮಯ ಹೋರಾಟಮಯ ಬದುಕು ಕಾರಣ ಎನಿಸುತ್ತದೆ.
ಆದುದರಿಂದಲೇ ನಾನು ಸಹ ಇತ್ತೀಚೆಗೆ ಆತ್ಮಕಥನ ಪ್ರಕಾರವನ್ನೇ ಹೆಚ್ಚಾಗಿ ಓದಲು ಇಷ್ಟಪಡುತ್ತೇನೆ. ಏಕೆಂದರೆ ನಮ್ಮ ಬದುಕಿನಲ್ಲಿ ಎದುರಾಗುವ ಸಂಕಟಗಳಿಗೆ ಭಯಭೀತರಾಗುವ ಬದಲು ನಮ್ಮ ಪೂರ್ವಿಕರು ಹೇಗೆ ಇದರ ಹತ್ತರಷ್ಟು ಸಂಕಟಗಳನ್ನು ಎದುರುಗೊಂಡಿದ್ದರು ಸಂದಿಗ್ದಮಯ ಪರಿಸ್ಥಿತಿಗಳನ್ನು ಚಾಣಾಕ್ಷ ಬುದ್ಧಿಯಿಂದ ಹೇಗೆ ನಿಭಾಯಿಸಿದ್ದರು ಎನ್ನುವ ಧೈರ್ಯ ಮನೋಬಲ ನಮಗೆ ಲಭಿಸುತ್ತದೆ.
ಮಹಾ ಕವಿ ಕುವೆಂಪು ಅವರು ತಮ್ಮ ಆತ್ಮಕಥನದಲ್ಲಿ “ನನ್ನ ಪ್ರತಿಯೊಂದು. ಹಾಗು ಹೋಗುಗಳನ್ನು ಜಗನ್ಮಾತೆ ಹೆಗಲುಕೊಟ್ಟು ನಡೆಸಿದ್ದಾಳೆ” ಎನ್ನುವ ಮಾತುಗಳನ್ನು ಹೇಳಿದ್ದಾರೆ ಅದು ಪ್ರತಿಯೊಬ್ಬರ ಬದುಕಿನಲ್ಲೂ ಸತ್ಯವೇ ಅನಿಸುತ್ತದೆ. ಶ್ರೀಯುತರು ಹತ್ತಾರು ಕೆಲಸಗಳನ್ನು ಕಳೆದುಕೊಂಡು ರೋಡಿಗೆ ಬಂದಾಗ ಮತ್ತೇನು ತೋಚದಂತಹ ಸಂಕಟಮಯ ಪರಿಸ್ಥಿತಿ ಎದುರಾದಾಗ ಮತ್ತೇ ಎಲ್ಲಿಂದಲೋ ಸಹಾಯ ಹಸ್ತ ಚಾಚಿ ಬರುವುದಲ್ಲದೆ ಮತ್ತೊಂದು ಎತ್ತರಕ್ಕೆ ಏರಲು ಸಹಕಾರಿಯಾಗುತ್ತದೆ ಬಹುಶಃ ಇವರಿಗೆ ಸಿಗದೇ ಹೋದ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅವರು ಈ ಎತ್ತರಕ್ಕೆ ಬೆಳೆಯುತ್ತಿರಲಿಲ್ಲ ಎನಿಸುತ್ತದೆ, ಅದಕ್ಕೆ ದಾಸರು ಎಂದಿರುವುದು ಆದದ್ದಲ್ಲ ಒಳಿತೆ ಆಯಿತು ಎಂದು.
“ಯಾರ ಬದುಕು ಹೆಚ್ಚು ಹೆಚ್ಚು ಸಮಾಜಮುಖಿಯಾಗಿ ಇರುತ್ತದೆಯೋ ಅವರ ಬದುಕು ಅಷ್ಟೇ ಸುಂದರವೂ ಪರಿಪೂರ್ಣವೂ ಆಗಿರುತ್ತದೆ” ಎನ್ನುವ ವಿವೇಕಾನಂದರ ಮಾತಿನಂತೆ ಶ್ರೀಯುತ ಜಾಣಗೆರೆಯವರದು ಸಮೃದ್ಧವು ಸಂತುಷ್ಟವೂ ಸಾರ್ಥಕವೂ ಆದ ಸಮಾಜಮುಖಿ ಬದುಕು, ಗುರುವಿನ ಕರಣದೊಳಗಣ ಉಪಕರಣ, ಸಂತೆಯೊಳಗಣ ಸಂತ , ದೇಶ ಎಂಬ ಈಶನ ನಿಜ ಸೇವಕ, ಮಹನೀಯರ ಒಡನಾಟ ನಮಗೆ ಹೆಮ್ಮೆಯ ಕಾಯಕ.






0 Comments