ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ –ಜಗತ್ತನ್ನೇ ತಲ್ಲಣಗೊಳಿಸಿದಂತಹ ವರ್ಷ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 173

2019ರ ಕೊನೆ ಹಾಗೂ 2020 ರ ಆರಂಭದಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದಂತಹ, ತಿಂಗಳು ತಿಂಗಳುಗಳ ಕಾಲ ನಿಷ್ಕ್ರಿಯಗೊಳಿಸಿದಂತಹ ಅನಿರೀಕ್ಷಿತ ಅಪಾಯ ಬಂದೆರಗಿಬಿಟ್ಟಿತು: ಕೊರೋನಾ—ಕೋವಿಡ್ 19 ಸಾಂಕ್ರಾಮಿಕ ಪಿಡುಗು! ಯಾವ ಪರಿಯಲ್ಲಿ ಈ ಪಿಡುಗು ಇಡೀ ಜಗತ್ತಿನಲ್ಲಿ ಹರಡಿಕೊಂಡು ಬಿಟ್ಟಿತೆಂದರೆ ಜಗತ್ತಿನ ಚಲನೆಯೇ ನಿಂತು ಸ್ತಬ್ಧವಾದಂತೆ ಭಾಸವಾಗತೊಡಗಿತು. ಸರ್ಕಾರಗಳು ಎಷ್ಟೇ ಮುತುವರ್ಜಿ ವಹಿಸಿದರೂ ಜನತೆ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪಾಲಿಸಿದರೂ ಕೊರೋನಾ ಮಾರಿ ತನ್ನ ಉಗ್ರ ಸ್ವರೂಪವನ್ನುತೋರಿ ಸಾವಿರಾರು ಪ್ರಜೆಗಳನ್ನು ಬಲಿ ತೆಗೆದುಕೊಂಡೇಬಿಟ್ಟಿತು. ಎಲ್ಲ ವ್ಯಾಪಾರ ವಹಿವಾಟುಗಳೂ ಬಂದ್ ; ಶಾಲಾ ಕಾಲೇಜ್ ಗಳು ಕಛೇರಿಗಳು ಬಂದ್ ; ಚಿತ್ರೋದ್ಯಮ ಬಂದ್ ; ಅಷ್ಟೇಕೆ, ಹೊರಗೆ ಚಲನವಲನವೇ ಬಂದ್! ಲಾಕ್ ಡೌನ್! ಸಾರ್ವಜನನಿಕರ ಮನೆಗಳೂ ಅವರವರ ಪಾಲಿಗೆ ಅಕ್ಷರಶಃ ಜೈಲ್ ಗಳಾಗಿ ಪರಿವರ್ತಿತವಾಗಿಬಿಟ್ಟಿದ್ದವು. ದಿನಗೂಲಿಗಳು, ಪ್ರತಿದಿನದ ದುಡಿಮೆಯ ಸಂಬಳವನ್ನೇ ನೆಚ್ಚಿಕೊಂಡವರ ಪಾಡಂತೂ ಹೇಳತೀರದು. ಕೊರೋನಾದ ವಿಷಮುಷ್ಠಿಗೆ ಸಿಲುಕಿ ಎಷ್ಟೋ ಸ್ನೇಹಿತರು , ಆತ್ಮೀಯರು, ಬಂಧುವರ್ಗದವರು ಕೊನೆಯ ದರ್ಶನಕ್ಕೂ ಅವಕಾಶವಿಲ್ಲದಂತೆ ನಿರ್ಗಮಿಸಿಬಿಟ್ಟರು. ಯಾವ ಕ್ಷಣದಲ್ಲಿ ಯಾರ ಅಂತ್ಯ ಬರುವುದೋ ಎಂಬ ಆತಂಕ ಪ್ರತಿಯೊಬ್ಬರ ಮನದಲ್ಲೂ ಮನೆ ಮಾಡಿಬಿಟ್ಟಿತ್ತು. ಆಗ ಪದೇ ಪದೇ ಕಾಡಿದ ಸಾಲುಗಳೆಂದರೆ ಬಿ.ಎಂ.ಶ್ರೀ. ಅವರ ಅಶ್ವತ್ಥಾಮನ್ ನಾಟಕದ ಸಾಲುಗಳು: “ಇಂದವನ್ ನಾಳೆ ನಾನ್ ಏನ್ ಪಾಡೋ ಆಳ ಬಾಳ್ , ಬೀಸುವ ಬಯಲ್ಗಾಳಿ ಪರಿದಡಂಗುವ ನೆಳಲ್”..
ಇಂದು ನಾನು..ನಾಳೆ ಅವನು..ಇದೇನು ಪಾಡಾಯ್ತು ಮನುಜನದು? ಬೀಸುವ ಗಾಳಿಯಂತೆ ಅನಿಶ್ಚಿತ.. ಸೂರ್ಯನ ಚಲನಾನುಸಾರ ಸರಿಯುವ ನೆರಳಿನಂತೆ ಕ್ಷಣಿಕ”….

ಉಸಿರಾಟದ ತೊಂದರೆಯೇ ಪ್ರಧಾನವಾದ ಈ ಖಾಯಿಲೆ ಜನಜೀವನದ ಉಸಿರನ್ನೇ ಉಡುಗಿಸುವಂತೆ ವ್ಯಾಪಿಸತೊಡಗಿದ್ದು ಮಾತ್ರ ಇತ್ತೀಚಿನ ವರ್ಷಗಳಲ್ಲೇ ಘಟಿಸಿದ ದೊಡ್ಡ ದುರಂತ. ಕೆಮ್ಮು ಬಂದರೊಂದು ಚಿಂತೆ…ಸೀನು ಬಂದರೊಂದು ಭಯ…ಮೈಬೆಚ್ಚಗಾದರೊಂದು ಆತಂಕ! ಕೊರೋನಾ ಸಾಂಕ್ರಾಮಿಕಕ್ಕೆ ಅವಿರತ ಪರಿಶ್ರಮದಿಂದ ವಿಜ್ಞಾನಿಗಳು ಔಷಧೀಯ ಲಸಿಕೆಯನ್ನು ಕಂಡುಹಿಡಿಯುವ ತನಕ ಯಾರಿಗೂ ಬದುಕಿನ ಯಾವ ಭರವಸೆಗಳೂ ಉಳಿದಿರಲಿಲ್ಲ. ಲಸಿಕೆ ಬಂದನಂತರವೂ ನಿಧಾನಗತಿಯ ಚೇತರಿಕೆಯಿಂದಾಗಿ ಜನಜೀವನ ಸಹಜ ಸ್ಥಿತಿಗೆ ಮರಳಲು ಸಾಕಷ್ಟು ಸಮಯವೇ ಹಿಡಿಯಿತು.
ನಮಗೆ ಈ ನಿಷ್ಕ್ರಿಯತೆಯ ಸಮಯದಲ್ಲಿ ಸಂಜೀವಿನಿಯಾಗಿ ಒದಗಿಬಂದದ್ದು ಹಲವಾರು ವರ್ಷಗಳಿಂದ ಸಂಗ್ರಹಿಸಿಕೊಂಡು ಬಂದಿದ್ದ ನಮ್ಮ ಪುಸ್ತಕ ಭಂಡಾರ ಹಾಗೂ ಡಿ ವಿ ಡಿ ಭಂಡಾರ ಹಾಗೂ OTT ವೇದಿಕೆಗಳ ಚಲನಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳು! ಒಂದಷ್ಟ ಸಮಯ ಘೋರವಾಗಿ ನರಳಿಸಿದ ನಂತರ ಕೊರೋನಾ ಮಾರಿ ನಿರ್ಗಮಿಸಿತಾದರೂ ಇನ್ನೂ ಅದರ ದುಷ್ಪರಿಣಾಮ ಪ್ರಭಾವದಿಂದ ಪಾರಾಗಿದ್ದೇವೆ ಎಂದು ಖಚಿತವಾಗಿ ಹೇಳಲಾಗುತ್ತಿಲ್ಲ. ಚಿಕ್ಕ ವಯಸ್ಸಿನವರಿಗೇ ಹೆಚ್ಚಾಗಿ ಘಟಿಸುತ್ತಿರುವ ಹೃದಯಾಘಾತಗಳು..

ಕ್ಷೀಣಿಸಿರುವ ಪ್ರತಿರೋಧ ಶಕ್ತಿ..ಪದೇ ಪದೇ ಕರೆಯದೇ ಬಂದೆರಗುವ ಶೀತ ಜ್ವರ ಬಾಧೆಗಳು..ಇವೆಲ್ಲವೂ ಕೊರೋನಾ ಉಳಿಸಿಹೋಗಿರುವ ಶೇಷ ಪ್ರಸಾದದಂತೆಯೇ ಭಾಸವಾಗುತ್ತಿದೆ…ಈ ಕೊರೋನಾ ವಿದಾಯ ಅಂತಿಮವಾಗಿಬಿಡಲಿ , ಮಾರಿ ಮತ್ತೆ ಇಣುಕದಿರಲಿ ಎಂಬುದೇ ಈಗಿನ ಮನದಳಲು ಅಷ್ಟೇ.

ಕೊರೋನಾ ಕ್ಷೀಣಿಸತೊಡಗಿದ ಸಮಯದಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಒದಗಿಬಂದಿತು. ಅವುಗಳಲ್ಲಿ ನಾನು ಪ್ರಮುಖ ಪಾತ್ರ ನಿರ್ವಹಿಸಿದ “ಜ್ಞಾನಗಂಗೆ”ಯೂ ಒಂದು. ಅಧ್ಯಾತ್ಮ ಜ್ಞಾನಶಾಖೆಯೊಂದರಲ್ಲಿ ಪ್ರಚಲಿತವಿರುವ ‘ಪಂಚ ಮಹಾಪಾತಕ’ಗಳ ಪರಿಕಲ್ಪನೆಯ ಸುತ್ತ ಚಿತ್ರಕಥೆಯನ್ನು ಜ್ಞಾನೇಶ್ವರ್ ಅವರು ಹೆಣೆದಿದ್ದರು. ಅವರದೇ ನಿರ್ಮಾಣ..ವಿನೋದ್ ಕುಮಾರ್ ಅವರ ನಿರ್ದೇಶನ. ಡಾ॥ಚಿನ್ಮಯರಾವ್ ಅವರ ಸಂಗೀತ ನಿರ್ದೇಶನವಿದ್ದ ಈ ಚಿತ್ರದಲ್ಲಿ ನನ್ನದು ಒಬ್ಬ ಬೋಧಕನ ಕೇಂದ್ರಪಾತ್ರ. ಶಂಖನಾದ ಅರವಿಂದ್ ಅವರು ಮತ್ತೊಂದು ಮುಖ್ಯಪಾತ್ರ ನಿರ್ವಹಿಸಿದ್ದರು. ಉಳಿದಂತೆ ಎಲ್ಲಾ ಹೊಸ ಕಲಾವಿದರ ದಂಡು. ಚಿತ್ರದ ಉದ್ದೇಶ ಒಳಿತಿದ್ದರೂ ನಿರೂಪಣೆಯಲ್ಲಿ ಬಿಗಿ ಇಲ್ಲದ ಕಾರಣಕ್ಕೆ ಬೀರಬೇಕಾದಷ್ಟು ಪರಿಣಾಮವನ್ನು ಚಿತ್ರ ಬೀರಲಿಲ್ಲ. ಏನೇ ಆದರೂ ಸದುದ್ದೇಶದ, ಸಾಮಾಜಿಕ ಕಳಕಳಿಯ ಒಂದು ಪ್ರಾಮಾಣಿಕ ಪ್ರಯತ್ನವಾಗಿತ್ತು ಜ್ಞಾನಗಂಗೆ.
ಸರಿಸುಮಾರು ಇದೇ ಸಮಯದಲ್ಲಿ ಟೋಟಲ್ ಕನ್ನಡ ಪುಸ್ತಕ ಮಳಿಗೆಯ ಮಾಲೀಕರಾದ ಲಕ್ಷ್ಮೀಕಾಂತ್ ಅವರು ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸುವ ವಿಡಿಯೋಗಳನ್ನು ಕೂಡಾ ಸಿದ್ಧಪಡಿಸುತ್ತಿದ್ದರು. ಒಂದು ದಿನ ನನಗೆ ಕರೆ ಮಾಡಿ,”ನಿಮ್ಮ ಪರಿಚಯವನ್ನು ಅತ್ಯಂತ ವಿವರವಾಗಿ ನಾಡ ಜನತೆಗೆ ಮಾಡಿಕೊಡಬೇಕೆನ್ನುವುದು ನಮ್ಮ ಅಪೇಕ್ಷೆ. ಸಹಕರಿಸುವಿರಾ?” ಎಂದು ಕೇಳಿದರು. ಆಗಲೆಂದು ಸಂತಸದಿಂದಲೇ ಒಪ್ಪಿಕೊಂಡೆ. ರಘು ನಾಡಿಗ್ ಅವರು—ಇವರು ಉತ್ತಮ ನಟರೂ ಬರಹಗಾರರೂ ಆಗಿದ್ದ ಕೃಷ್ಣಮೂರ್ತಿ ನಾಡಿಗರ ಸೋದರ—ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ವಿಸ್ತಾರವಾಗಿ ನನ್ನ ಬದುಕಿನ ವಿವಿಧ ಘಟ್ಟಗಳನ್ನೂ ಹೊರಳುಗಳನ್ನೂ ನನ್ನ ಕಾರ್ಯಕ್ಷೇತ್ರಗಳಲ್ಲಿ ನಾನು ಪಾಲ್ಗೊಂಡು ಮಾಡಿದ್ದ ಸಣ್ಣ ಪುಟ್ಟ ಸಾಧನೆಗಳನ್ನೂ ಪರಿಚಯಿಸಲು ನೆರವಾಗುವಂತಹ ಪ್ರಶ್ನಾವಳಿಯನ್ನೇ ರೂಪಿಸಿದ್ದರು. ಎರಡು ದಿನಗಳ ಈ ವಿಸ್ತೃತ ಸಂದರ್ಶನ ಅವರ ಸ್ಟುಡಿಯೋದಲ್ಲಿಯೇ ನಡೆಯಿತು. ಮುಂದೆ ಇದು ಆರೇಳು ಕಂತುಗಳಲ್ಲಿ ಯೂಟ್ಯೂಬ್ ನಲ್ಲಿ ಪ್ರಸಾರವಾದಾಗ ಅಪಾರ ಜನಪ್ರಿಯತೆಯನ್ನೂ ಗಳಿಸಿಕೊಂಡಿತು.

ಲಕ್ಷ್ಮೀಕಾಂತ್ ಅವರು ಮುಂದೆ ಚಿತ್ರನಿರ್ಮಾಣದಲ್ಲೂ ಆಸಕ್ತಿ ವಹಿಸಿ ಒಂದು ಚಿತ್ರವನ್ನು ನಿರ್ಮಿಸಿದರು. ಆ ಚಿತ್ರದ ಹೆಸರು: “ಪಂಪ—ಪಂಚಳ್ಳಿ ಪರಶಿವಮೂರ್ತಿ”.

ಕನ್ನಡ ಭಾಷೆ—ಸಂಸ್ಕೃತಿಗಳ ಬಗ್ಗೆ ಅಭಿಮಾನವನ್ನು ಹೊಂದಿದ್ದು ಅವುಗಳ ಸಂರಕ್ಷಣೆಗಾಗಿ ಹಪಹಪಿಸುತ್ತಿದ್ದ ಒಬ್ಬ ಪ್ರೊಫೆಸರ್ ನ ಬದುಕಿನ ಸುತ್ತ ಕಥೆಯನ್ನು ಹೆಣೆಯಲಾಗಿತ್ತು. ಆ ಪ್ರೊಫೆಸರರ ಕೊಲೆಯ ಪ್ರಯತ್ನ ಹಾಗೂ ಅದರ ಕಾರಣಗಳು, ಈ ದುಷ್ಕೃತ್ಯದ ಹಿಂದಿದ್ದ ಅಗೋಚರ ಶಕ್ತಿಗಳು…ಹೀಗೆ ಈ ಒಂದು ಕುತೂಹಲಕಾರೀ ರೋಚಕ ಕಥೆಯ ನಿರೂಪಣೆಯೊಂದಿಗೇ ಭಾಷೆಯ ಸಂರಕ್ಷಣೆ—ನಾಡು ನುಡಿಗಳ ಮೇಲಿನ ಪ್ರೇಮ ಹಾಗೂ ಬದ್ಧತೆಗಳ ಕುರಿತಾದ ಎಳೆಯೂ ಸೇರಿಕೊಂಡು ಒಂದು ಸ್ವಾರಸ್ಯಕರ ಚಿತ್ರಕಥೆ ಸಿದ್ಧವಾಗಿತ್ತು. ಕೀರ್ತಿಭಾನು, ಸಂಗೀತಾ ಶೃಂಗೇರಿ, ಕೃಷ್ಣಭಟ್ ,ಅರವಿಂದರಾವ್ ,ರಾಘವನಾಯಕ್ , ಪೃಥ್ವೀರಾಜ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು. ನಾನು ಮುಖ್ಯಮಂತ್ರಿಗಳ ಪಾತ್ರವನ್ನು ನಿರ್ವಹಿಸಿದ್ದೆ. ಹೆಸರಾಂತ ನಿರ್ದೇಶಕ ಎಸ್ ಮಹೇಂದರ್ ಅವರು ಚಿತ್ರವನ್ನು ನಿರ್ದೇಶಿಸಿದ್ದರು. ಹಂಸಲೇಖಾ ಅವರ ಸಂಗೀತ ಸಂಯೋಜನೆ. ತೀರಾ ದೊಡ್ಡಮಟ್ಟದ ಯಶಸ್ಸನ್ನು ಗಳಿಸದಿದ್ದರೂ ಒಂದು ಸರಳ ಸ್ವಚ್ಛ ಪ್ರಾಮಾಣಿಕ ಪ್ರಯತ್ನ ಎಂದು ಪತ್ರಿಕಾ ವಿಮರ್ಶೆಗಳು ಶ್ಲಾಘಿಸಿದವು.

ಈ ನಡುವೆ ಸಂಗೀತಾಭ್ಯಾಸಕ್ಕೆ ಹೆಚ್ಚು ಸಮಯವನ್ನು ನೀಡಲು ಸಾಧ್ಯವೇ ಆಗಿರಲಿಲ್ಲ. ಪ್ರೀತಿಯ ಅಕ್ಕ—ಗುರು ಶಾಮಲಾ ಭಾವೆ ಅವರು ಕೂಡಾ ಅನಾರೋಗ್ಯದಿಂದ ಹಾಸಿಗೆ ಹಿಡಿದುಬಿಟ್ಟಿದ್ದರು. ಕೋವಿಡ್ ಸೇರಿದಂತೆ ಹಲವು ಹತ್ತು ಕಾರಣಗಳಿಂದಾಗಿ ಹೋಗಿ ಅಕ್ಕನನ್ನು ನೋಡಿಬರಲೂ ಸಾಧ್ಯವಾಗಿರಲಿಲ್ಲ. ಒಂದು ರಾತ್ರಿ ಇದ್ದಕ್ಕಿದ್ದಂತೆ ಶಾಮಲಕ್ಕ ಕನಸಿನಲ್ಲಿ ಪ್ರತ್ಯಕ್ಷವಾಗಿಬಿಟ್ಟರು! “ಏನೋ ಅಪ್ಪಣ್ಣಾ, ಈ ಅಕ್ಕನ್ನಂತೂ ಮರೆತುಬಿಟ್ಟೆ…ಸಂಗೀತಾನೂ ಮರೆತೇಬಿಟ್ಟೆಯೇನೋ? ನೀನೇ ಬಿಟ್ಟು ಕೂತಿದೀಯಾ ಅಂದಮೇಲೆ ಇನ್ನು ಅದೆಲ್ಲಿ (ರಂಜಿನಿ!) ಅಭ್ಯಾಸ ಮಾಡುತ್ತೆ?” ಎಂದು ಬೇಸರ ಹಾಗೂ ನೋವಿನಿಂದ ಆಕ್ಷೇಪಿಸುತ್ತಿದ್ದಾರೆ! ಕನಸಿನಲ್ಲೂ ತೀರಾ ಸೊರಗಿದವರಂತೇ ಕಾಣುತ್ತಿದ್ದ ಅಕ್ಕನ ಸ್ವರೂಪವನ್ನು ನೋಡಿ ತುಂಬಾ ಸಂಕಟವಾಗಿಬಿಟ್ಟಿತು. ಏನಾದರೂ ಆಗಲಿ ಎಂದು ಅಂದೇ ಮಧ್ಯಾಹ್ನವೇ ರಂಜಿನಿಯೊಂದಿಗೆ ಶಾಮಲಕ್ಕನ ಮನೆಗೆ ಹೊರಟುಬಿಟ್ಟೆ. ಹಾಸಿಗೆಯ ಮೇಲೆ ನಿತ್ರಾಣವಾಗಿ ಮಲಗಿದ್ದ ಅಕ್ಕ ನಾವು ಹೋಗುತ್ತಿದ್ದಂತೆ ಸಂಭ್ರಮದಿಂದ ಎದ್ದು ಕೂತುಬಿಡುವುದೇ! “ಬಾರೋ ಅಪ್ಪಣ್ಣಾ..ಬಾ ರಂಜಿನಿ..ಈ ಅಕ್ಕನ ಮನೆ ದಾರೀನ ಮರೆತೇಬಿಟ್ಟರೇನೋ ಅಂದುಕೊಂಡಿದ್ದೆ…ಸಧ್ಯ ಬಂದ್ರಲ್ಲಾ! ಗಂಗಾ, ಮೊದಲು ಟೀ ಮಾಡು..ಸ್ವಾಮಿ ಅಣ್ಣಾ, ಆ ಪುಟ್ಟ ಹಾರ್ಮೋನಿಯಂ ಈ ಕಡೆ ಇಟ್ಟುಕೊಡಿ…ಇವು ಬಂದಾಗಲೇ ಇವಕ್ಕೆ ಕ್ಲಾಸ್ ತೊಗೊಂಡುಬಿಡಬೇಕು..ಇಲ್ಲದಿದ್ರೆ ಕೈಗೆ ಸಿಗೋಲ್ಲ” ಎಂದವರೇ ಸಂಗೀತ ಪಾಠ ಮಾಡಲು ಕುಳಿತುಬಿಟ್ಟರು! ನಮಗಂತೂ ಅವರ ಉತ್ಸಾಹ—ಲವಲವಿಕೆ ಕಂಡು ಒಂದೆಡೆ ಆಶ್ಚರ್ಯ..ಮತ್ತೊಂದೆಡೆ ದಿಗ್ಭ್ರಮೆ! “ಅಕ್ಕ, ನಾವೀಗ ಕ್ಲಾಸ್ ಗೇಂತ ಬಂದಿಲ್ಲ…ನಿಮ್ಮನ್ನ ಮಾತಾಡಿಸಿಕೊಂಡು ಹೋಗೋದಕ್ಕೆ ಬಂದಿದೀವಿ ಅಷ್ಟೇ…ನೀವು ಹುಷಾರಾದ ಮೇಲೆ ತಪ್ಪದೇ ಪಾಠಕ್ಕೆ ಬರ್ತೀವಿ..ಈಗ ಆಯಾಸ ಮಾಡಿಕೋಬೇಡಿ” ಎಂದು ನಾವು ಎಷ್ಟು ಹೇಳಿದರೂ ಅಕ್ಕ ಕೇಳಬೇಕಲ್ಲಾ! ಉಹೂಂ! ಪಾಠ ಶುರು ಮಾಡಿಯೇಬಿಟ್ಟರು. ಎಡಗೈ ಅಷ್ಟು ಸ್ವಾಧೀನವಿಲ್ಲದ್ದರಿಂದ ಸ್ವಾಮಿ ಅಣ್ಣನಿಗೆ ಮೀಟಲು ಹೇಳಿ ಬಲಗೈಯಿಂದ ಹಾರ್ಮೋನಿಯಂ ಮನೆಗಳ ಮೇಲೆ ಕೈಆಡಿಸುತ್ತಾ ಗುಣಕಲಿ ರಾಗದ “ಹೇ ಗೋವಿಂದ ಹೇ ಗೋಪಾಲ” ಹಾಡನ್ನು ಶುರುಮಾಡಿಯೇಬಿಟ್ಟರು! ಸಂಗೀತವನ್ನು ಕಲಿಸುವುದರಲ್ಲಿ, ತನ್ಮೂಲಕ ಬೆಳೆಸುವುದರಲ್ಲಿ ಅಪಾರ ಆಸಕ್ತಿ ಅಕ್ಕನಿಗೆ! ಅಂದು ಮನೆಗೆ ಮರಳಿದ ಮೇಲೆ ದೇವರ ಮುಂದೆ ಕುಳಿತು ನಾವು ಬೇಡಿಕೊಂಡಿದ್ದಿಷ್ಟೇ: “ನಮ್ಮ ಪ್ರೀತಿಯ ಶಾಮಲಕ್ಕನಿಗೆ, ಸಂಗೀತ ಶಾರದೆಗೆ ಇನ್ನಷ್ಟು ವರ್ಷಗಳ ಆರೋಗ್ಯವನ್ನೂ ಆಯುಷ್ಯವನ್ನೂ ಕರುಣಿಸು…ಇಷ್ಟುಬೇಗ ನಿನ್ನ ಆಸ್ಥಾನಕ್ಕೆ ನಮ್ಮ ಉಭಯಗಾನ ವಿದುಷಿಯನ್ನು ಕರೆಸಿಕೊಳ್ಳಬೇಡ”. ರಂಜಿನಿಗಂತೂ ಶಾಮಲಕ್ಕನ ನಿತ್ರಾಣದ ಅಸಹಾಯಕ ಸ್ಥಿತಿಯನ್ನು ನೆನೆನೆನೆದು ದುಃಖ ಉಕ್ಕಿಬರುತ್ತಿತ್ತು.

ಪ್ರಾರ್ಥನೆಗೆ ಅಪಾರ ಶಕ್ತಿಯಿದೆ ಅನ್ನುವುದೇನೋ ದಿಟ…ಆದರೆ ಎಲ್ಲ ಪ್ರಾರ್ಥನೆಗಳೂ ಈಡೇರಿಯೇಬಿಟ್ಟರೆ ಮನುಷ್ಯನನ್ನು ಹಿಡಿಯಲಾದರೂ ಆದೀತೇ?
ಮೇ 22, 2020. ಶಾಮಲಕ್ಕ ನಮ್ಮನ್ನೆಲ್ಲಾ ತೊರೆದು ಮರಳಿ ಬಾರದೂರಿಗೆ ಶಾಶ್ವತವಾಗಿ ಪ್ರಯಾಣ ಬೆಳೆಸಿಯೇಬಿಟ್ಟರು. ಕೊರೋನಾ ಪ್ರಭಾವ ಇನ್ನೂ ಕ್ಷೀಣಿಸಿರಲಿಲ್ಲವಾಗಿ ಆಪ್ತೇಷ್ಟರೆಲ್ಲರೂ ಅಂತಿಮದರ್ಶನಕ್ಕೂ ಬರಲಾಗಲಿಲ್ಲ. ಅಂತಿಮ ಕಾರ್ಯಗಳೂ ಅಷ್ಟೇ—ಮನೆಮಂದಿಯ ಮಟ್ಟಿಗೆ ಸೀಮಿತವಾಗಿಬಿಟ್ಟಿತು.

ರಂಗದ ಮೇಲೆ ದಶಕಗಳ ಕಾಲ ವಿಜೃಂಭಿಸಿದ ಸ್ವರ ಸಾಮ್ರಾಜ್ಞಿ ಸದ್ದಿಲ್ಲದೇ ಕಛೇರಿ ಮುಗಿಸಿ ತನ್ನ ಸ್ವರಸಂಪತ್ತಿನೊಂದಿಗೆ ನಾದಲೋಕದಲ್ಲಿ ಲೀನರಾಗಿಬಿಟ್ಟರು.

ನಮ್ಮ ವೈಯಕ್ತಿಕ ಬದುಕಿನಲ್ಲಿ ಸ್ವರ ಲಯಗಳ ಬಣ್ಣಗಳನ್ನು ತುಂಬಿದ ಶಾಮಲಕ್ಕನನ್ನು ಕಳೆದುಕೊಂಡದ್ದು ಒಂದು ಭರಿಸಲಾಗದ ನಷ್ಟ…
ಒಂದು ಅಪಸ್ವರದ ಮೀಟು.

‍ಲೇಖಕರು Admin

16 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading