-ದತ್ತು ಕುಲಕರ್ಣಿ ಸಿಡ್ನಿ
ಹೀಗೆ ಒಂದು ದಿನ ಕವಿತೆ ಬರೆಯಬೇಕೆಂದು ಕುಳಿತಾಗ
ಎದೆಯ ಕಿಸೆಯಿಂದ ಹಲವು ಶಬ್ದಗಳು
ತುಳುಕಾಡಿ ಹೊರ ಚೆಲ್ಲಿದವು.
ಅಜ್ಜಿ ಕಿವಿಯಲ್ಲಿ ಉಸಿರಿದ ಶಬ್ದ
ಅಪ್ಪ ಜೋರಾಗಿ ಬೈದ ಬೈಗುಳ
ಅಮ್ಮನ ಅಂತ ಕರಣದ ಜೋಗುಳ
ಹೆಂಡತಿಯ ಮಧುರ ಸಲ್ಲಾಪ
ಗೆಳೆಯರ ಒಣ ಹರಟೆ
ಮಗಳ ಮುದ್ದು ಆಲಾಪ
ಎಲ್ಲವನ್ನು ಎದುರಿಗೆ ಹರಡಿಕೊಂಡು
ಹೊಂದಿಸತೊಡಗಿದೆ.
ಒಂದರ ಪಾದ
ಇನ್ನೊಂದರ ತಲೆ
ಒಂದರ ಹೊಟ್ಟೆ
ಇನ್ನೊಂದರ ಬೆನ್ನು
ಒಂದರ ಕೈ
ಇನ್ನೊಂದರ ಕಾಲು
ಹಾಗುವ ಹಾಗೆ ಜೋಡಿಸಿಟ್ಟೆ.
ಬರಿ.. ಪದಬಂಧವಾಯಿತು.
ಛೇ. ಅಂದುಕೊಂಡು
ಹಿಂದೆ ಸರಿದು ಕೈಕಟ್ಟಿ ಕುಳಿತೆ.
ಅಷ್ಟರಲ್ಲಿ
ನೋಡ ನೋಡುತ್ತಿರುವ ಹಾಗೆ
ಪದಗಳಿಗೆ ಭಾವ ಕೊಂಡಿಗಳು
ಚಿಗುರತೊಡಗಿದವು
ಮತ್ತೆ ಪದಬಂಧದಲ್ಲಿ
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
ಈ ಮೂಲೆಯಿಂದ ಆ ಮೂಲೆಗೆ
ಸೇರಿಕೊಂಡ ಕೊಂಡಿಗಳಿಂದ
ಭಾವ ಹರಿಯಲು ಸುರವಿಟ್ಟುಕೊಂಡು
ಅಜ್ಜಿಯ ಮಾತು
ಆತ್ಮ ಸಂಗಾತದಂತೆ
ಅಪ್ಪನ ಬೈಗಳ
ದಾರಿದೀಪದಂತೆ
ಅಮ್ಮನ ಜೋಗುಳ
ಅಕಾಲ ನಿದ್ದೆಯಿಂದ ಎಚ್ಚರಿಸಿದಂತೆ
ಹೆಂಡತಿಯ ಸಲ್ಲಾಪ
ವರ್ತಮಾನದ ಸಾಹಚಾರ್ಯದಂತೆ
ಗೆಳೆಯರ ಹರಟೆ
ಜೀವಸೆಲೆಯಂತೆ
ಮಗಳ ಆಲಾಪ
ಮುಂಬರುವ ಕಾಲದ ನಾದದಂತೆ
ಕೇಳಿಸಿ
ಹಾಗೆ ಇದ್ದ ಪದಬಂಧ
ಹೀಗೆ ಕವಿತೆಯಾಯಿತು.






0 Comments