-ಚೀ ಜ ರಾಜೀವ
ಪ್ರೀತಿಯ ಜಂಬೆ ಸಾರ್,
ಅದೊಂದು ದಿನ
ನೀವು ಫೋನಾಯಿಸಿದ್ದಿರಿ…
ಉಭಯ ಕುಶಲೋಪರಿ
ಮುಗಿದ ಬಳಿಕ ಮಾತು
‘ಪ್ರಿಯ ಗಾಂಧಿ’ ಪುಸ್ತಕದೆಡೆಗೆ
ಮಾತು ಹೊರಳಿತು
ನೀವೆಂದಿರಿ:
“ನೀವು ಏನು ಬೇಕಾದರೂ ಬರೆಯಿರಿ,
ಅವರ ಕುರಿತ ಟೀಕೆ-ಟಿಪ್ಪಣಿಯೇ ಆಗಲಿ,
ತಕರಾರು,ನಿರಾಕರಣೆಯೇ ಇರಲಿ…
ಆದರೆ, ‘ಪ್ರೀತಿಯ ಬಾಪು’ ಎಂದಿರುವಿರಲ್ಲಾ,
ಅದು ನನಗೆ ತುಂಬಾ ಇಷ್ಟವಾಯಿತು!”
ಪ್ರೀತಿಯ ಇನ್ನೊಂದು
ಅರ್ಥವೇ ಗಾಂಧಿ!
ಆತ ಕಲಿಸಿದ್ದು ಅದನ್ನೇ ಅಲ್ಲವೇ ?
ಅದೆಂಥಾ
ವ್ಯಾಖ್ಯಾನ ಸರ್ ನಿಮ್ಮದು?
ಗಾಂಧಿಯನ್ನು ಕೆಲವರು
ನಾಟಕದಲ್ಲಿ ಚಿತ್ರಿಸಿದರು
ಬಹುತೇಕರು ಮಾತನಾಡಿದರು,
ನಮ್ಮಂಥವರು ಬರೆದೆವಷ್ಟೆ…
ಆದರೆ, ನೀವು ಅವರನ್ನು
ಬದುಕಲು ಪ್ರಯತ್ನಿಸಿದಿರಿ!
ಗಾಂಧಿ ಎಂದರೆ ನಿಮಗೆ
ಯಾವಾಗಲೂ ಸಿದ್ಧಾಂತವಾಗಿರಲಿಲ್ಲ,
‘ಗಾಂಧಿವಾದ’ ಅಂದರೆ ನೀವು ಮಂದಸ್ಮಿತರಾಗುತ್ತಿದ್ದಿರಿ…
ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ
ಶಿಸ್ತು, ಮಾನವೀಯತೆ…
ರಂಗದಲ್ಲಿ ಮಾತ್ರವಲ್ಲ
ಬದುಕಲ್ಲಿ ಗಾಂಧಿಯನ್ನು ಜೀವಂತವಾಗಿಟ್ಟಿದ್ದಿರಿ.
ಅದೆಂಥಾ ಸಹಜ ಬದುಕು
ನಿಮ್ಮದು ಸರ್ ?
ನಿಮ್ಮನ್ನು ಮರೆಯುವುದಿಲ್ಲ
ಹೋಗಿ ಬನ್ನಿ






0 Comments