ಶೋಭಾ ಹಿರೇಕೈ ಹೊಸ ಕವಿತೆ- ಇನ್ನೆಷ್ಟು ಅಂತರ?

ಶೋಭಾ ನಾಯ್ಕ ಹಿರೇಕೈ ಕಂಡ್ರಾಜಿ

ಅಂಬೆಗಾಲಿಗೆ ಎದೆ ಕೊಟ್ಟ ಅಪ್ಪನಿಂದ
ಅಮೃತ ಚೀಪಲು ಮೊಲೆ ಕೊಟ್ಟ ಅವ್ವಳಿಂದ
ಕುಟುಂಬದ ಕರುಳೆಲ್ಲವ ಒಂದೆಡೆ ಸುತ್ತಿಟ್ಟ
ದೊಡ್ಡ ಕರುಳಿನ ದೊಡ್ಡ ಗಂಟನ್ನೇ…
ಬಿಚ್ಚಿಕೊಂಡು
ಹೇಗೋ ನುಸುಳಿಕೊಂಡು
ನಗರ ಸೇರಿ
ಅಂತರ ಕಾಪಾಡಿ ಕೊಂಡಿರಲಿಲ್ಲವೇ..
ಊರು ಕೇರಿ ಬಂಧು ಬಳಗಗಳಿಂದ.
ಊರ ದಾರಿಯಿಂದ.

ಅಕ್ಕ ಪಕ್ಕ, ಹಿಂದೆ ಮುಂದೆ
ಜೈಕಾರ ಕೂಗಿ
ಚಪ್ಪಾಳೆ ತಟ್ಟಿ
ಮಾತಿಗೊಂದಿಷ್ಟು ಸಿಳ್ಳೆ ಕೇಕೆ ಸಿಕ್ಕಿ
ಮುಂದಿನ ಕುರ್ಚಿ ಗಟ್ಟಿಯಾದ ಮೇಲೆ
ಅಂತರ ಕಾಪಾಡಿ ಕೊಂಡಿರಲಿಲ್ಲವೇ..
ಕುರ್ಚಿಗೇರಿಸಿದ ಕುರಿಗಳಿಂದ

ಅಂಗಳದ ತುದಿಗಿದ್ದ
ಹೂ ಕಟ್ಟೆ ಕಡಿಸಿ
ಗಡಿ ಗೋಡೆ ಎಬ್ಬಿಸಿ
ಬೀಗ ಸಿಕ್ಕಿಸಿ
‘ನಾಯಿ ಇದೆ ಎಚ್ಚರಿಕೆ’
ಎಂಬ ಫಲಕ ಜಡಿಸಿ
ಇಲಾಖೆಯ ಹೆಸರನ್ನು ಸೇರಿಸಿಯೇ…
ಹೆಸರು ಬರೆಸಿ
ಮಹಡಿ ಮೇಲಿನ್ನೆರಡು ಮಹಡಿ ಎದ್ದ ಮೇಲೆ
ಅಂತರ ಕಾಪಾಡಿ ಕೊಂಡಿರಲಿಲ್ಲವೇ..
ಮನೆಗೆ ಕಲ್ಲು ಕೆತ್ತಿದ ಜನಗಳಿಂದ?

ಅಂತರಂಗಕ್ಕೆ ಇಳಿಯಬೇಕಿದ್ದ ನಾವು
ಅಂತರಿಕ್ಷಕ್ಕೆ ಹಾರುತ್ತಿದ್ದೇವೆ
ಮಂಗಳನ ಮನೆಯಲ್ಲೊಂದು
ಖಾಯಂ ಜಾಗಕ್ಕೆ ಅರ್ಜಿ ಲಗತ್ತಿಸುತ್ತಿದ್ದೇವೆ
ಇಷ್ಟಿದ್ದೂ…
ಬೇಕೆ ಇನ್ನೂ… ಅಂತರ
ಇನ್ನೆಷ್ಟು ಅಂತರ?!!

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. ನಾಗರಾಜ್ ಹರಪನಹಳ್ಳಿ

    ಚೆಂದ ಕವಿತೆ..
    ಮನುಷ್ಯ ಮನುಷ್ಯರ ನಡುವಿನ ಅಂತರ ಚೆಂದ ಹಿಡಿದಿಡಲಾಗಿದೆ. ಶೋಭಾ ನಾಯ್ಕ ಹಿರೇಕೈ ಕವಿತೆಗಳ ವಿಶಿಷ್ಟ ಶೈಲಿ …ಈ ಕವಿತೆಯಲ್ಲಿ ಮುಂದುವರಿದಿದೆ

    ಪ್ರತಿಕ್ರಿಯೆ
  2. ಶ್ರೀಮತಿ .ವಿಜಯಾ .ಡಿ.ನಾಯ್ಕ . ಸಹ ಪ್ರಾಧ್ಯಾಪಕಿ. ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯ. ಕಾರವಾರ.

    ಕವಿತೆ ಚೆನ್ನಾಗಿದೆ. ವಸ್ತುವಿನ ಆಯ್ಕೆ ಪ್ರಸ್ತುತ. ಕವಿತೆಗೆ ಲಯವಿದೆ.
    ಕರೋನಾ ಅಂತರಕ್ಕಿಂತ , ಮನುಷ್ಯರ ನಡುವಿನ ಅಂತರವನ್ನು ವಿಷಾಧದಿಂದ ಧ್ವನಿಪೂರ್ಣವಾಗಿ ಹೇಳಲಾಗಿದೆ.

    ಪ್ರತಿಕ್ರಿಯೆ
    • Shobha naik

      ಮೇಡಂ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಕ್ಕೆ

      ಪ್ರತಿಕ್ರಿಯೆ
  3. G.N.Ranganatha Rao

    A moving,deeply appealing poem in the present day context.
    G.N.Ranganatha Rao

    ಪ್ರತಿಕ್ರಿಯೆ
    • Shobha naik

      ಸರ್ ಧನ್ಯವಾದಗಳು ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ

      ಪ್ರತಿಕ್ರಿಯೆ
    • Shobha naik

      ಸರ್ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಮತ್ತು ಪ್ರೋತ್ಸಾಹ ಕ್ಕೆ

      ಪ್ರತಿಕ್ರಿಯೆ
  4. ನಾಗರಾಜ್ ಹರಪನಹಳ್ಳಿ

    ಕವಿತೆ ಮನುಷ್ಯ ಕಟ್ಟಿಕೊಂಡ ಅಂತರವನ್ನು ವಿಷಾಧದಿಂದ ದಾಖಲಿಸುತ್ತದೆ. ಶೈಲಿ ಶೋಭಾ ನಾಯ್ಕರದ್ದೇ‌ . ಅಬ್ಬಲಿಗೆ ಕವಿತೆಗಳ ಮುಂದುವರಿಕೆ ಇಲ್ಲಿ ಸಹ ಕಾಣುತ್ತದೆ…

    ಪ್ರತಿಕ್ರಿಯೆ
    • Shobha naik

      ಮೇಡಂ ಧನ್ಯವಾದಗಳು. ನಿಮ್ಮ ಪ್ರೀತಿಗೆ ಪ್ರೋತ್ಸಾಹ ದ ರೀತಿಗೆ

      ಪ್ರತಿಕ್ರಿಯೆ
  5. ಶ್ರೀಮತಿ .ವಿಜಯಾ .ಡಿ.ನಾಯ್ಕ . ಸಹ ಪ್ರಾಧ್ಯಾಪಕಿ. ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯ. ಕಾರವಾರ.

    ಕವಿತೆ ಚೆಂದ.
    ವಸ್ತುವಿನ ನಿರ್ವಹಣೆ ಹಾಗೂ ಕವಿತೆಗೆ ಲಯ …ಈ ಕವಿತೆಯ ಗೆಲ್ಲಿಸಿದೆ.

    ಕರೋನಾ ತಂದ ಸೋಶಿಯಲ್ ಡಿಸ್ಟೆನ್ಸಗಿಂತ ಮನುಷ್ಯ ಸೃಷ್ಟಿಸಿಕೊಂಡ ಅಂತರವನ್ನು ಧ್ವನಿಪೂರ್ಣವಾಗಿ , ವ್ಯಂಗ್ಯವಾಗಿ ಈ ಕವಿತೆಯಲ್ಲಿ ಹೇಳಲಾಗಿದೆ. ‌

    ಪ್ರತಿಕ್ರಿಯೆ
  6. ಸಂಗೀತ ರವಿರಾಜ್

    ಅರ್ಥವತ್ತಾದ ಕವಿತೆ ಶೋಭಾವ್ರೆ
    ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: