ಭುವನೇಶ್ವರಿ ಹೆಗಡೆ ಅಂಕಣ- ನನಗೆ ‘ದೊಡ್ಡ’ ಹುಚ್ಚೇ ಹಿಡಿದಿತ್ತು

ಮೂರು ದಶಕದ ಕಾಲ ಪೊರೆದ ಕೆಂಪು ಕೋಟೆ

2

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿದತ್ತವಾಗಿದ್ದ ನಮ್ಮೂರಿನ ದೊಡ್ಡ ಬೆಟ್ಟ, ದೊಡ್ಡ ಅಡಿಕೆ ತೋಟ, ದೊಡ್ಡ ಮನೆ, ದೊಡ್ಡ ಎತ್ತರದ ಅಡಿಕೆ ಅಟ್ಟ…ಹೀಗೆ ಒಂದು ಬಗೆಯ ‘ದೊಡ್ಡ’ ಹುಚ್ಚೇ ಹಿಡಿದಿತ್ತು ಎನಿಸುತ್ತದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (ಅದೂ ದೊಡ್ಡ ಕ್ಯಾಂಪಸ್ ದೊಡ್ಡಕಟ್ಟಡ) ಅರ್ಥ ಶಾಸ್ತ್ರದಲ್ಲಿ ಎಂ.ಎ. ಮುಗಿಸಿ ಒಂದು ವರ್ಷದಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ನೇಮಕಾತಿ ಆರ್ಡರ್ ಬಂದಾಗ ಊರವರೆಲ್ಲಾ ನಮ್ಮ ಮನೆಯಂಗಳದಲ್ಲಿ ನೆರೆದಿದ್ದರು. ‘ಮಂಗಳೂರಲ್ಲಿ ಕೆಲಸ ಆಯ್ತಂತಲ್ಲ ತಂಗೀ ದೊಡ್ಡ ಮಂಗಳೂರಾ, ಚಿಕ್ಕ ಮಂಗಳೂರಾ?’ಎಂದು ಮುಗ್ಧವಾಗಿ ಪ್ರಶ್ನಿಸಿದ್ದರು. ‘ದೊಡ್ಡ ಮಂಗಳೂರೇಯಾ’ ಎಂದುತ್ತರಿಸಿದ್ದೂ ಆಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯನ್ನು ಯಕ್ಷಗಾನ ಮೇಳಗಳ ಮೂಲಕ ಮಾತ್ರ ಅರಿತ ನನ್ನ ಹಳ್ಳಿಯವರು ‘ಏನೂ ಹೆದರಡ. ಮಂಗಳೂರು ಸುರತ್ಕಲ್ ಅಲ್ಲೆಲ್ಲ ಒಳ್ಳೆಯ ಮೇಳಗಳಿದ್ದ, ಗುರುತಿನ ಭಾಗವತರೂ ಬೇಕಾದಷ್ಟು ಜನ ಇದ್ದ. ಗೋಪಾಲಣ್ಣನ ಊರಿನವಳು ಎಂದು ಪರಿಚಯ ಮಾಡಿಕೋ ಎಂದು ಒಂದೆರಡು ಯಕ್ಷಗಾನ ಭಾಗವತರ ಹೆಸರನ್ನು ಹೇಳಿದರು ಊರಿನ ಹಿರಿಯರು. ‘ನಾನೇನು ಆಟ ನೋಡಲು ಹೋಗುತ್ತಿದ್ದೇನೆಯೆ? ನೌಕರಿ ಮಾಡಲು ಹೋಗುತ್ತಿದ್ದೇನೆ ಗೋಪಾಲಣ್ಣ’ ಎಂದು ಹೇಳಿ ಅವರೆಲ್ಲರ ಆಶೀರ್ವಾದ ತೆಗೆದುಕೊಂಡು ಹೊರಟಿದ್ದೆ.

೧೯೮೫, ಫೆಬ್ರವರಿ ೨೮ ರಂದು ಮಂಗಳೂರಿನ ಸರ್ಕಾರಿ ಕಾಲೇಜಿಗೆ ಅಪಾಯಿಂಟ್‌ಮೆಂಟ್ ಲೆಟರ್ ಹಿಡಿದು ಒಳ ಹೊಕ್ಕಾಗ ಅಚ್ಚರಿಯಿಂದ ಬಾಯಿ ಕಟ್ಟಿ ಹೋಯಿತು. ನೋಡುತ್ತೇನೆ ನನ್ನ ‘ದೊಡ್ಡ’ ಕನಸೇ ಮೈವೆತ್ತು ಬಂದಂತೆ ನಿಂತಿದೆ, ನೂರು ವರ್ಷಕ್ಕೂ ಹಳೆಯದಾದ ಕಾಲೇಜು ಕೆಂಪುಕೋಟೆ! ಸಾಮಾನ್ಯ ಸರ್ಕಾರಿ ಕಟ್ಟಡಗಳಿಗಿಂತ ಭಿನ್ನವಾದ, ಮೂರು ಪಟ್ಟು ಎತ್ತರವಿರುವ ಕಟ್ಟಡ. ದೊಡ್ಡ ದೊಡ್ಡ ಬಾಗಿಲುಗಳು, ಅದಕ್ಕಿಂತ ಅಗಲವಾದ ಕಿಡಕಿಗಳು, ಎತ್ತಾನೆತ್ತರ ಛಾವಣಿಯ ಕೊಠಡಿಗಳು, ಮೇಲೆ ಬಿಸಿ ಗಾಳಿ ಹೋಗಲು ಗವಾಕ್ಷಿಗಳಿರುವ ವಿಶಾಲಹಾಲ್ಗಳು ಮತ್ತು ಕ್ಲಾಸುರೂಮುಗಳು, ಅರಮನೆಯ ವಿನ್ಯಾಸವನ್ನು ನೆನಪಿಸುವ ಉದ್ದಾನುದ್ದ ಕಾರಿಡಾರ್‌ಗಳು, ಪಾವಟಿಗೆಗಳು, ಹೊರಾಂಗಣದ ತುಂಬ ನೆರಳು ಹರಡಿ ನಿಂತ ದೊಡ್ಡ ದೊಡ್ಡ ಮರಗಳು… ‘ಲವ್ ಎಟ್ ಫಸ್ಟ್ ಸೈಟ್’ ಎನ್ನುತ್ತಾರಲ್ಲ ಹಾಗೆ ಆಗಿ ಹೋಯ್ತು.

ಅಪಾಯಿಂಟ್ಮೆಂಟ್ ಲೆಟರ್ ಹಿಡಿದು ಪ್ರಾಂಶಪಾಲರ ಕಚೇರಿಯೊಳಗೆ ಹೊಕ್ಕಿದ್ದೆವು. ಸುಬ್ರಾಯ ಕಾರಂತರೆಂಬ ಗಣಿತ ಪ್ರಾಧ್ಯಾಪಕರಾಗಿದ್ದ ಪ್ರಾಂಶುಪಾಲರು ಕುರ್ಚಿಯಲ್ಲಿ ಕೂತಿದ್ದರು . ದಕ್ಷಿಣ ಕನ್ನಡ ಜಿಲ್ಲೆಯ ತೀಕ್ಷ್ಣ ಬುದ್ಧಿವಂತಿಕೆಯ ಕಣ್ಣುಗಳು. ಊರು ಕೇರಿ ವಿವರಗಳನ್ನೆಲ್ಲ ಕೇಳಿ ಘಟ್ಟದವರು ಕರಾವಳಿಗೆ ಬಂದು ಉದ್ಯೋಗ ಮಾಡುವುದು ಅಷ್ಟರಲ್ಲೇ ಇದೆ ಎಂಬರ್ಥದ ನೋಟದಲ್ಲಿ ನನ್ನನ್ನೊಮ್ಮೆ ಆಪಾದ ಮಸ್ತಕವಾಗಿ ನೋಡಿ ‘ವರ್ಷದ ಕೊನೆಯಲ್ಲಿ ನೇಮಕಾತಿ ಪತ್ರ ಹಿಡಿದು ಬಂದಿದ್ದೀರಿ. ಇಲ್ಲೇ ಇರುವವರೋ ಅಥವಾ ಟ್ರಾನ್ಸ್ ಫರಿಗೆ ಅರ್ಜಿ ಹಾಕಿಯೇ ಬಂದಿದ್ದೀರೋ?’ಎಂದು ಖಾರವಾಗಿ ಕೇಳಿದರು.

ಕಾರಂತ ಹೆಸರಿನವರುಗಳೆಲ್ಲ ಖಾರಂತರೇ ಆಗಿರುತ್ತಾರಿರಬೇಕು, ಮೊದಲು ನೇಮಕಾತಿ ದಾಖಲೆಯಾಗಲಿ ನಂತರ ಉಳಿದ ವಿಚಾರ ಎಂದು ಸುಮ್ಮನೆ ಮಾತಾಡದೆ ಕುಳಿತೆ. ಎಲ್ಲೋ ಘಟ್ಟದ ದಡ್ಡ ಪ್ರಾಣಿ ಇರಬೇಕು ಎಂದುಕೊಂಡು ಹೆಚ್ಚು ಮಾತು ಬೆಳೆಸದೆ ರಿಪೋರ್ಟ್ ಮಾಡಿಸಿಕೊಂಡರು. ಆಫೀಸಿನಲ್ಲಿ ಇದ್ದ ಸೀತಕ್ಕ ಎಂಬ ಸರಳ ಸಮರ್ಥ ಮಹಿಳೆಯೊಬ್ಬರನ್ನು ಕರೆದು ‘ಇವರು ಹೊಸದಾಗಿ ಬಂದಿದ್ದಾರೆ. ಕಾಲೇಜನ್ನು ಪರಿಚಯಿಸಿ’ ಎಂದು ಕಳಿಸಿಕೊಟ್ಟರು.

ಇಡೀ ಆಫೀಸಿನಲ್ಲಿ ಸೀತಕ್ಕ ಎಂದರೆ ಮನೆಯ ಹಿರಿಯಕ್ಕನಂತೆ ಇದ್ದವರು ಎಂದು ಕ್ರಮೇಣ ನನಗೆ ತಿಳಿಯಿತು. ‘ತೂಲೆ ಪೊಸ ಲೆಕ್ಚರ್ ಬೈದೇರ್. ಆರ್ ಉತ್ತರ ಕನ್ನಡ ಜಿಲ್ಲೇದಾರ್ಗೆ.. ‘ ಎಂದು ತುಳುವಿನಲ್ಲಿ ಆಫೀಸಿನವರಿಗೆ ಪರಿಚಯಿಸಿಕೊಟ್ಟರು. ತುಳು ಭಾಷೆ ನನಗೆ ಹೊಸದು. ಕಣ್ಣು ಪಿಳುಕಿಸಿದೆ. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಭೂಗೋಳ ಶಾಸ್ತ್ರದ ಮುಖ್ಯಸ್ಥರಾದ ಡಾ ಎಸ್ ಎಸ್ ಹೂಗಾರ್ ಎಂಬವರು ನನ್ನನ್ನು ಪರಿಚಯಿಸಿಕೊಂಡರು.

‘ರಡ್ಡು ಜನಾಲಾ ಗಟ್ಟದಕ್ಲಾದ್ ಎಡ್ಡೆ ಆಂಡು ಅತ್ತೇ ಸರ್?’ (ಇಬ್ಬರೂ ಘಟ್ಟದ ಮೇಲಿನವರಾಗಿ ಒಳ್ಳೇದಾಯ್ತು ಅಲ್ವಾ ಸರ್?) ಎಂದು ಸೀತಕ್ಕ ಹೇಳುತ್ತಿದ್ದ ಹಾಗೆ ನಗುತ್ತಾ ‘ಬನ್ನಿ ಬನ್ನಿ ಅರ್ಥಶಾಸ್ತ್ರ ವಿಭಾಗಕ್ಕೆ ಕರೆದೊಯ್ಯುತ್ತೇನೆ’ ಎಂದು ನನ್ನ ಮುಂದಿನ ಬದುಕನ್ನು ಕಟ್ಟಿಕೊಡಲಿರುವ ಅರ್ಥಶಾಸ್ತ್ರದ ಕೊಠಡಿಗೆ ಕರೆದುಕೊಂಡು ಹೋದರು. ಹೂಗಾರ ಸರ್ ಅವರ ಊರಾದ ಧಾರವಾಡದ ಭಾಷೆಯ ಸರಳತೆ, ಮನೆಯ ಹಿರಿಯರಂತಿದ್ದ ಚಹರೆ, ನಗು ಮಾತುಗಳಿಂದಾಗಿ ಕಾಲೇಜಿನಲ್ಲಿ ಎಲ್ಲರಿಗೂ ಬೇಕಾದವರಾಗಿರುವ ಜನ ಎಂಬ ಸಂಗತಿ ತಿಳಿಯಿತು.

ಅವರ ವೃತ್ತಿಯ ಕೊನೆಯ ತನಕವೂ ನನಗೆ ಹಿರಿಯಣ್ಣನಂತೆ ಮಾರ್ಗದರ್ಶನ ಮಾಡಿದ ಹೂಗಾರ ಅವರು ಎಲ್ಲದಕ್ಕೂ ‘ಎಸ್ ಎಸ್’ ಎಂದು ಹೇಳುವ ಆತ್ಮೀಯರಾಗಿದ್ದರು. ಡ್ಯೂಟಿ ರಿಪೋರ್ಟ್, ಸರ್ವೀಸ್ ರಜಿಸ್ಟರ್, ಅಟೆಂಡೆನ್ಸ್ ಬುಕ್, ವರ್ಕ್ ಡೈರಿ,ನೋಟ್ಸು, ಅಸೈನ್ಮೆಂಟು, ಸ್ಯಾಲರಿ ಸ್ಲಿಪ್ ಇತ್ಯಾದಿ ನನ್ನ ನೌಕರಿ ಸಂಬಂಧಿತ ಪರಿಕಲ್ಪನೆಗಳನ್ನು ಪರಿಚಯಯ ಮಾಡಿಸಿಕೊಟ್ಟರು.

ಅರ್ಥಶಾಸ್ತ್ರ ವಿಭಾಗದ ಒಳಹೋದಾಗ ಸರಕಾರಿ ಕಾಲೇಜೊಂದರ ಟಿಪಿಕಲ್ ಮರದ ಉಪಕರಣಗಳಿಂದ ತುಂಬಿದ್ದ ಗಾಳಿ ಬೆಳಕು ಧಾರಾಳವಾಗಿದ್ದ ಎತ್ತರದ ಗವಾಕ್ಷಿಗಳಿದ್ದ ಕೋಣೆಯೊಂದರಲ್ಲಿ ಮೂವರು ಪ್ರಾಧ್ಯಾಪಕರು ಕುಳಿತಿದ್ದರು. ಒಬ್ಬರು ಮಾಧವನ್ ನಂಬಿಯಾರ್, ವಿಭಾಗ ಮುಖ್ಯಸ್ಥರು. ಇನ್ನೊಬ್ಬರು ವಿಲ್ಸನ್ ಶೆಫರ್ಡ್, ಕಾಲೇಜಿನ ಎನ್ನೆಸ್ಸೆಸ್ ಮುಖ್ಯಸ್ಥರು. ಮತ್ತೊಬ್ಬರು ವಯಸ್ಸಿನಲ್ಲಿ ಕಿರಿಯರಾಗಿದ್ದ ಡಾ ರಾಧಾಕೃಷ್ಣ ಅವರು.

ನಾಲ್ಕನೆಯವಳಾಗಿ ಮೊದಲ ಬಾರಿಗೆ ಮಹಿಳಾ ಅಭ್ಯ ರ್ಥಿಯಾಗಿ ನಾನು ಅಲ್ಲಿಗೆ ಎಂಟ್ರಿ ತಗೊಂಡಿದ್ದೆ. ವಿಭಾಗ ಮುಖ್ಯಸ್ಥರಾದ ಮಾಧವನ್ ನಂಬಿಯಾರ್ ಅವರು ನೋಡಲು ಅಮರೀಶ್ ಪುರಿಯಂತೆ ಕಾಣುತ್ತಿದ್ದರು. ಕ್ರಮೇಣ ಅವರು ಹೋದಲ್ಲಿ ಬಂದಲ್ಲಿ ವಿದ್ಯಾರ್ಥಿಗಳು ಹಿಂದಿನಿಂದ ‘ಮೊಗ್ಯಾಂಬೋ ಖುಷ್ ಹುವಾ’ ಎಂದು ಹೇಳಿಕೊಳ್ಳುತ್ತ ಓಡಾಡುತ್ತಿದ್ದುದು ಗೊತ್ತಾಗಿತ್ತು. ಹಿರಿಯರಾದ ನಂಬಿಯಾರರು ಇದರಿಂದ ಚೂರೂ ಬೇಸರಿಸದೆ ಮಕ್ಕಳಲ್ಲವಾ ಎಂದು ಖುಷಿಯಿಂದಲೇ ನಕ್ಕು ಕ್ಷಮಿಸಿ ಬಿಡುತ್ತಿದ್ದರು.

ವಿಲ್ಸನ್ ಶೆಫರ್ಡ್ ನಾನು ನೋಡಿದ ಗತ್ತಿನ ಅಧ್ಯಾಪಕರಲ್ಲಿ ಒಬ್ಬರು. ಮಿಲಿಟರಿಯಲ್ಲಿದ್ದು ಬಂದವರಾದ್ದರಿಂದ ಶಿಷ್ಟಾಚಾರಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಅವರು ಇಂಗ್ಲಿಷ್, ಸಂಸ್ಕೃತ, ಕನ್ನಡ, ಸೈಕಾಲಜಿ ಫಿಲಾಸಫಿ ಹೀಗೆ ಎಲ್ಲ ವಿಷಯಗಳ ಬಗೆಗೂ ಆಸಕ್ತಿಯಿಂದ ಚರ್ಚಿಸಬಲ್ಲವರಾಗಿದ್ದರು. ಎದುರು ಕುಳಿತವರ ಮಾತುಗಳನ್ನು ಅವರು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ರೀತಿ, ಮುಖಭಾವ ಅಪರೂಪದ್ದಾಗಿರುತ್ತಿತ್ತು, ಅನುಕರಣೀಯವಾಗಿತ್ತು. ಇದೇ ಕಾರಣಕ್ಕಿರಬಹುದು ಅವರನ್ನು ಹುಡುಕಿಕೊಂಡು ವಿಭಾಗಕ್ಕೆ ಬರುವ ಮಕ್ಕಳ ಸಂಖ್ಯೆ ಅಧಿಕವಾಗಿತ್ತು.

ಮಲೆಯಾಳಂ ಮಾತೃಭಾಷೆಯ ವಿಲ್ಸನ್ ಅವರು ಕೇರಳ ಭಾಗದಿಂದ ಬರುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶಕರಾಗಿದ್ದರು.ಅವರ ಮಲಯಾಳಂ ಮಿಶ್ರಿತ ಕನ್ನಡ ಕೇಳುವುದೇ ಒಂದು ಸೊಗಸಾಗಿತ್ತು ಅದ್ಭುತವಾದ ಇಂಗ್ಲಿಷ್ ಉಚ್ಚಾರಣೆ, ವಿದ್ಯಾರ್ಥಿಗಳ ಜತೆಗಿನ ಸ್ನೇಹ ಇವೆಲ್ಲವೂ ಅರ್ಥಶಾಸ್ತ್ರ ವಿಭಾಗಕ್ಕೆ ವಿಜ್ಞಾನದ ವಿದ್ಯಾರ್ಥಿಗಳನ್ನು ಆಕರ್ಷಿಸಿ ಸದಾ ನಮ್ಮಲ್ಲೊಂದು ಅನೌಪಚಾರಿಕ ಚರ್ಚಾ ಕೂಟವೋ ಸಂತೋಷ ಕೂಟವೋ ನಡೆದೇ ಇರುವಂತೆ ಭಾಸವಾಗುತ್ತಿತ್ತು. ಹೊಸದಾಗಿ ಬಂದು ಸೇರಿದ ನನಗೆ ಅರ್ಥ ಶಾಸ್ತ್ರ ವಿಭಾಗದಲ್ಲಿ ಸ್ನೇಹ ಉತ್ಸಾಹದ ಸಂಚಲನವನ್ನೇ ಉಂಟು ಮಾಡುವ ಅಪೂರ್ವ ತಾಣವೊಂದು ನಿರ್ಮಾಣಗೊಂಡಿತ್ತು. ಮಲೆಯಾಳಿ ವಿದ್ಯಾರ್ಥಿನಿಯರು ಏಕವಚನ ಬಹುವಚನಗಳ ವ್ಯತ್ಯಾಸ ತಿಳಿಯದೆ ಹೊರಡುವಾಗ ‘ಥ್ಯಾಂಕ್ಯೂ ಮೇಡಂ ನಾವಿನ್ನು ಬರುತ್ತೇವೆ ನೀನೂ ಮನೆಗೆ ಹೊರಡು’ ಎನ್ನುತ್ತಿದ್ದವು.

ಆಗಿನ್ನೂ ಸೆಮಿಸ್ಟರ್ ಪದ್ಧತಿ ಬಂದಿರಲಿಲ್ಲ. ಫೆಬ್ರವರಿ ತಿಂಗಳಲ್ಲಿ ಹೆಚ್ಚಿನೆಲ್ಲಾ ಪಾಠಗಳು ಮುಗಿದು ಮಾರ್ಚಿನಲ್ಲಿ ರಿವಿಶನ್ ಕ್ಲಾಸುಗಳುಮಾತ್ರ ಬಾಕಿ ಇದ್ದವು. ಒಂದೆರಡು ವಾರ ಅಷ್ಟೆ. ಪಾಠ ಮಾಡಲಿಕ್ಕೇನೂ ಇಲ್ಲ. ಕ್ಲಾಸಿಗೆ ಹೋಗಿ ಪ್ರಶ್ನೆ ಉತ್ತರ ಅಂತ ಸಮಯ ಕಳೆದು ಬನ್ನಿ ಎಂದು ವಿಭಾಗ ಮುಖ್ಯಸ್ಥರು ಹೇಳಿದ್ದರು. ಹೊಸ ಅಧ್ಯಾಪಕರಿಗೆ ಆಗುವ ಮೊದಲ ತರಗತಿಗಳ ಭಯವೇ ಉಂಟಾಗಲು ಆಸ್ಪದವಿರಲಿಲ್ಲ. ನಾನು ಕ್ಲಾಸಿಗೆ ಹೋಗಿ ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡು, ‘ಪರೀಕ್ಷಾ ಭಯಹೋಗಲಾಡಿಸಿಕೊಳ್ಳುವುದು ಹೇಗೆ? ಪರೀಕ್ಷೆಯ ಮುಂಚಿನ ದಿನ, ಪರೀಕ್ಷೆಯ ದಿನಗಳಲ್ಲಿ ವಹಿಸಬೇಕಾದ ಜಾಗ್ರತೆ, ಆಹಾರ, ನಿದ್ದೆ, ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಾಗ ಒಂದು ಕ್ಷಣ ದೀರ್ಘ ಉಸಿರು ತಗೊಂಡು ನಿಧಾನಕ್ಕೆ ಉತ್ತರಿಸಿ…’ ಹೀಗೆಲ್ಲ ಆಪ್ತ ಸಮಾಲೋಚನೆಯ ಧಾಟಿಯಲ್ಲಿ ಮಾತಾಡತೊಡಗಿದೆ. ಕಣ್ಣರಳಿಸಿ ಕೇಳುವ ವಿದ್ಯಾರ್ಥಿ ಲೋಕದ ನಾಡಿ ಬಡಿತ ಕೈಗೆ ಸಿಕ್ಕಿತ್ತು. ‘ವಿದ್ಯಾರ್ಥಿ ಸ್ನೇಹಿ’ ಉಪನ್ಯಾಸಕಿಯಾಗುವ ಆತ್ಮ ವಿಶ್ವಾಸ ಹುಟ್ಟಿತ್ತು.

ಮಾರ್ಚ ತಿಂಗಳು ಮಂಗಳೂರಿನಲ್ಲಿ ಅಗಾಧ ಸೆಕೆ, ಧಾರಾಕಾರ ಬೆವರು. ಮಧ್ಯಾಹ್ನದ ಲಂಚ್ ಅವರ‍್ನಲ್ಲಿ ನಮ್ಮ ಅರ್ಥಶಾಸ್ತ್ರ ವಿಭಾಗದ ಮುಂದಿರುವ ಕಾರಿಡಾರಿನಲ್ಲಿ ಆರ್ಟ್ಸ, ಸೈನ್ಸ, ಕಾಮರ್ಸ್ ಎಲ್ಲ ವಿದ್ಯಾರ್ಥಿಗಳೂ ಸೇರಿ ಮಾತು ನಗು ನಡೆಸುತ್ತ ಒಂದರ್ಧ ಗಂಟೆ ಕೋಲಾಹಲವೆಬ್ಬಿಸಿ ಬೆಲ್ಲಾದಾಗ ಕ್ಲಾಸಿಗೆ ಹೋಗುತ್ತಿದ್ದರು. ನಾನು ಬುತ್ತಿ ತಂದಿದ್ದನ್ನು ತಿಂದು ಮುಗಿಸುವುದಕ್ಕೂ ಮಕ್ಕಳ ಕಲರವ ಪ್ರಾರಂಭವಾಗುವುದಕ್ಕೂ ಸರಿಯಾಗುತ್ತಿತ್ತು. ಕುತೂಹಲ ತಡೆಯಲಾರದೆ ಒಂದು ದಿನ ವಿಭಾಗದ ಹೊರಬಂದು ‘ಏನ್ರಪ್ಪ ದಿನಾ ಇಲ್ಲಿ ಬಂದು ನಿಂತು ಹೀಗೆ ಬೊಬ್ಬೆ ಹೊಡೀತಿರ್ತೀರಲ್ಲ ಏನಿದೆ ಇಲ್ಲಿ?’ ಎಂದು ಕೇಳಿದೆ. ವಿದ್ಯಾರ್ಥಿಗಳು ‘ನೀವೂ ಬನ್ನಿ ಇಲ್ಲಿ ಗೊತ್ತಾಗುತ್ತೆ ಮೇಡಂ’ ಅಂದರು. ಹೋಗಿ ನಿಂತೆ.

ಆಕಾಶದಿಂದ ಯಾರೋ ‘ದೊಡ್ಡ ಫ್ಯಾನು’ ಇಟ್ಟು ರಭಸದ ಗಾಳಿಯನ್ನು ಹಾಯಿಸುತ್ತಿದ್ದಾರೋ ಎಂಬಂತಿದ್ದ ಗಾಳಿಯು ಎರಡು ಕಟ್ಟಡಗಳ ನಡುವಿನ ಈ ಓಣಿಯಲ್ಲಿ ಸುಂಯೆಂದು ಹಾದು ಹೋಗುತ್ತಿತ್ತು. ಸಮುದ್ರದಿಂದ ನೇರವಾಗಿ ಬೀಸಿ ಬರುವ ‘ತೆಂಕಣಗಾಳಿ’ ಸೋಂಕುವ ಪರಿ ನೋಡಿ ದಿಗ್ಭ್ರಾಂತಳಾದೆ. ಮರು ದಿನದಿಂದ ಆ ಮಕ್ಕಳ ಕಲರವದಲ್ಲಿ ನಾನೂ ಸೇರಿಕೊಂಡು ‘ಗಾಳಿಯ ಸಖ್ಯ’ ಬೆಳೆಸಿಕೊಂಡೆನಷ್ಟೇ ಅಲ್ಲ ಇಂಡೋಗಾಥಿಕ್ ಶೈಲಿಯ ಈ ಭವ್ಯ ಕಟ್ಟಡದ ಮೂಲೆ ಮೂಲೆಗಳನ್ನು ಪರಿಚಯಿಸಿಕೊಂಡು ಸಣ್ಣ ವೈಶಿಷ್ಟ್ಯಗಳನ್ನೂ ಪಟ್ಟಿ ಮಾಡಿ ಸವಿಯತೊಡಗಿದೆ.

ಬ್ರಿಟಿಷ್ ಕಾಲದ ಪ್ರಾಂಶುಪಾಲರುಗಳು ಹೊರಗೆ ಕಾರಿನಿಂದಿಳಿದು ಯಾರಿಗೂ ಕಾಣದಂತೆ ಪ್ರಾಂಶುಪಾಲರ ಕೊಠಡಿಗೆ ಹೋಗುವ ಮಾರ್ಗವಿತ್ತಂತೆ. ಇನ್ನೊಂದು ಅಪೂರ್ವ ಶೈಲಿಯಲ್ಲಿ ನಿರ್ಮಿತಗೊಂಡ ಮೇಲಕ್ಕೆ ಎರಡೂ ಕಡೆಗಳಲ್ಲಿ ಬಾಲ್ಕನಿಯನ್ನು ಹೊಂದಿದ ಅಕಾಡೆಮಿ ಹಾಲ್ ಎಂಬ ವಿಶಾಲ ಸಭಾಂಗಣ. ಇಲ್ಲಿ ನಡೆಯುತ್ತಿದ್ದ ಶೇಕ್ಸ್ ಪಿಯರ್ ನಾಟಕೋತ್ಸವ ಊರ ಹಬ್ಬದಂತೆ ಇರುತ್ತಿತ್ತಂತೆ. ವಿದ್ಯಾರ್ಥಿ ಗಳೇ ಏರ್ಪಡಿಸುತ್ತಿದ್ದ ಅಣಕು ಸಂಸತ್ತಿನ ಕಲಾಪಗಳನ್ನು ವೀಕ್ಷಿಸಲು ಮಂಗಳೂರು ನಗರದ ಹಿರಿಯ ವಕೀಲರುಗಳು, ನ್ಯಾಯಾಧೀಶರು ಸಹಾ ಬಂದು ಬಾಲ್ಕನಿಯಲ್ಲಿ ಕೂಡುವ ಕಾಲ ಇತ್ತಂತೆ. ಅಂದಿನ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹಾಗಿತ್ತು ಎಂಬುದನ್ನು ಕಾಲೇಜಿನ ಇತಿಹಾಸ ಬಲ್ಲವರು ತಿಳಿಸುತ್ತಿದ್ದರು.

೧೯೮೫ ಜೂನ್ ನಿಂದ ತೊಡಗಿ ೨೦೧೭ ಮೇ ತನಕ ಅಖಂಡ ಮೂರು ದಶಕಗಳ ಕಾಲ ಈ ಕೆಂಪು ಕಟ್ಟಡದಲ್ಲಿ ಉಪನ್ಯಾಸಕಿಯಾಗಿ ಬದುಕಿನ ಬಹುಮೂಲ್ಯ ಸಮಯವನ್ನು ಇಲ್ಲಿಯೇ ಕಳೆದು ನಿವೃತ್ತಳಾಗುತ್ತೇನೆ ಎಂದು ನಾನಾಗ ಕನಸಿನಲ್ಲಿಯೂ ಎಣಿಸಿರಲಿಲ್ಲ. ‘ಕನಸಿಗಿಂತ ಚಂದದ ನನಸು’ ಅದು. ವರ್ಷದಿಂದ ವರ್ಷಕ್ಕೆ ನವ ನವೀನ ಅನುಭವಗಳು.

ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ನೇಮಕವಾಗಿ ಬರುವ ಹೊಸ ಸಹೋದ್ಯೋಗಿಗಳು, ಅವರ ಸ್ನೇಹ, ಪ್ರಾಧ್ಯಾಪಿಕೆಯರ ಜತೆಗಿನ ಚೇಷ್ಟೆ ಮಾತುಗಳು ಸಮಯ ಹೋಗಿದ್ದು ತಿಳಿಯದ ದಿನಚರಿ. ಕಾಲೇಜಿನ ನನ್ನ ಪ್ರೀತಿಯ ತಾಣಗಳಲ್ಲಿ ಅಂದು ಕಾಲೇಜಿನ ಪ್ರವೇಶವಾಗುತ್ತಲೇ ಎದುರಾಗುವ ಲೈಬ್ರರಿ ಒಂದಾಗಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಾಸುದೇವ ಶರ್ಮಾ

    ಓಹೋ! ಅದೆಷ್ಟು ಸೊಗಸು ಈ ಪರಿಚಯ. ನಾನು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕಲಿತವನು. ನೀವು ನಿಮ್ಮ ಕಾಲೇಜಿನ ಕಟ್ಟಡದ ಬಗ್ಗೆ ಹೇಳುವಾಗ ನಾನು ನನ್ನ ಕಾಲೆಜು ಸುತ್ತಿ ಬಂದೆ. ಚೆನ್ನಾಗಿದೆ ಆರಂಭ.

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಅನುಭವಗಳು ಎಷ್ಟು ಭಿನ್ನ!! ಮೊನ್ನೆ ಓದಿದ ಹಿರಿಯ ಲೇಖಕಿಯೋರ್ವರ ಆತ್ಮಕಥೆಯಲ್ಲಿ ಅವರು ಪಾಠ ಮಾಡಿದ ಮೊದಲ ಕಾಲೇಜಿನ ನರಕದರ್ಶನದ ಅನುಭವವಿದೆ. ಇಲ್ಲಿ ತಮ್ಮ ಕಾಲೇಜಿನ ಭವ್ಯ ಕಟ್ಟಡವನ್ನೂ‌ ಒಂದು ಜೀವಿತ ಪಾತ್ರದಂತೆ ವರ್ಣಿಸಿರುವ ಉಲ್ಲಾಸದ ಅನುಭವವಿದೆ. ಲೇಖನ ಮಾಲೆ ಪ್ರಫುಲ್ಲವಾಗಿದೆ. ಆ ಕಾಲೇಜಿನಲ್ಲಿ ನಾನೂ ಓದಬೇಕಿತ್ತು ಅನಿಸುವಂತೆ:)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: