ಕಂಟೆಂಟೇ ಕಿಂಗ್..

ಚೇತನ ನಾಡಿಗೇರ್

ಲಾಕ್‌ಡೌನ್ ಮುಗಿದಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಆಗಸ್ಟ್ ಹೊತ್ತಿಗೆ ಚಿತ್ರಪ್ರದರ್ಶನ ಸಹ ಪ್ರಾರಂಭವಾಗಿ, ಮುಂದಿನ ಮೂರು ತಿಂಗಳೊಳಗೆ ಚಿತ್ರರಂಗ ಮತ್ತೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಆದರೆ, ಆ ನಂತರ ಎಲ್ಲವೂ ಸಲೀಸು, ಎಲ್ಲವೂ ಮಾಮೂಲಿಯಂತೆ ನಡೆದುಕೊಂಡು ಹೋಗುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ, ಸವಾಲಿರುವುದೇ ಇಲ್ಲಿ… ಕನ್ನಡ ಚಿತ್ರರಂಗದ ಮುಂದಿರುವ ದೊಡ್ಡ ಸವಾಲೇನು?- ಕನ್ನಡ ಚಿತ್ರಗಳು ಬಿಡುಗಡೆಯಾಗಬೇಕು, ಜನ ಚಿತ್ರಮಂದಿರದತ್ತ ಬಂದು ಚಿತ್ರಗಳನ್ನು ಪ್ರೋತ್ಸಾಹಿಸಬೇಕು, ಚಿತ್ರರಂಗ ಮೊದಲಿನಂತಾಗಬೇಕು…

ಹೀಗೆ ಚಿತ್ರರಂಗದವರು ತಮ್ಮ ಮುಂದಿರುವ ಹಲವು ಸವಾಲುಗಳ ಬಗ್ಗೆ ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ. ಹೌದು, ಜನ ಚಿತ್ರಮಂದಿರಗಳತ್ತ ಬಂದರೆ, ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಜನ ಮುಂಚಿನಷ್ಟು ಸಲೀಸಾಗಿ ಚಿತ್ರಮಂದಿರಗಳತ್ತ ಬರುವುದು, ಚಿತ್ರಗಳನ್ನು ನೋಡುವುದು ಸ್ವಲ್ಪ ಕಷ್ಟವೇ ಎಂದು ಅಂದಾಜಿಸಲಾಗುತ್ತಿದೆ. ಅದಕ್ಕೆ ಖಂಡಿತವಾಗಿಯೂ ಕರೊನಾ ಕಾರಣವಲ್ಲ ಎಂಬುದು ಗೊತ್ತಿರಲಿ. ಕರೊನಾ ನಂತರದ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗಿವೆ.

ಲಾಕ್‌ಡೌನ್‌ನಿಂದಾಗಿ ಜನ ಮನೆಯಲ್ಲಿ ಕುಳಿತು ಒಟಿಟಿಗಳಲ್ಲಿ ದೇಶ-ವಿದೇಶಗಳ ಚಿತ್ರಗಳನ್ನು ವೀಕ್ಷಿಸಿದ್ದಾರೆ. ವಿಭಿನ್ನ ಕಲ್ಪನೆಯ, ವಿಭಿನ್ನ ನೆಲೆಗಟ್ಟಿನ, ವಿಭಿನ್ನ ಶೈಲಿಗಳ ಚಿತ್ರಗಳನ್ನು ಅವರು ನೋಡಿದ್ದಾರೆ. ಒಂದೇ ತರಹದ ಚಿತ್ರಗಳನ್ನು ನೋಡಿ ಸುಸ್ತಾಗಿದ್ದವರು, ಬೇರೆ ಭಾಷೆಯ ಚಿತ್ರಗಳನ್ನು ನೋಡಿ, ಹೀಗೂ ಸಿನಿಮಾ ಮಾಡಬಹುದಾ ಎಂದು ಬೆರಗಾಗಿದ್ದಾರೆ. ಇದೆಲ್ಲದರಿಂದ ಅವರ ಅಭಿರುಚಿ, ಆಸಕ್ತಿ ಬದಲಾಗಿದೆ. ಹೀಗಿರುವಾಗ, ಅದೇ ಹಳೆಯ ಫಾರ್ಮುಲಾ ಚಿತ್ರಗಳು, ಯಾರಿಗೂ ರುಚಿ ಎನಿಸುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ, ಕನ್ನಡ ಚಿತ್ರಗಳನ್ನು ಬೇರೆಬೇರೆ ಭಾಷೆಯ ಚಿತ್ರಗಳಿಗೆ ಹೋಲಿಸಲಾಗುತ್ತಿದೆ.

ನಮ್ಮ ಚಿತ್ರಗಳು ಯಾವಾಗ ಆ ರೀತಿ ಮೂಡಿಬರುತ್ತದೆ ಎಂಬ ಹೋಲಿಕೆ ಶುರುವಾಗಿದೆ. ಹಾಗೆ ನೋಡಿದರೆ, ಈ ಹೋಲಿಕೆ ಎನ್ನುವುದು ಕನ್ನಡ ಚಿತ್ರರಂಗಕ್ಕೆ ಹೊಸದಲ್ಲ. ಪ್ರಮುಖವಾಗಿ, ಬಹಳ ವರ್ಷಗಳಿಂದ ಪ್ರೇಕ್ಷಕರ ವಲಯದಲ್ಲಿ ಕನ್ನಡ ಚಿತ್ರಗಳನ್ನು, ತೆಲುಗು-ತಮಿಳು ಚಿತ್ರಗಳ ಜತೆಗೆ ಹೋಲಿಸಲಾಗುತ್ತಿದೆ. ಅಲ್ಲಿರುವ ಅದ್ದೂರಿತನ, ಬಜೆಟ್, ಕಮರ್ಷಿಯಲ್ ಅಂಶಗಳು ನಮ್ಮಲ್ಲಿ ಯಾಕೆ ಇರುವುದಿಲ್ಲ ಎಂದು ತುಲನೆ ಮಾಡಲಾಗುತ್ತಿದೆ.

ಹಾಗಾಗಿ, ಚಿತ್ರರಂಗದವರು ಸಹ ಬೇರೆ ಭಾಷೆಗಳಿಗೆ ನಾವೇನು ಕಡಿಮೆ ಎಂದು ದೊಡ್ಡ ಬಜೆಟ್‌ನ ಚಿತ್ರಗಳತ್ತ ಹೆಚ್ಚುಹೆಚ್ಚು ಮುಖ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಕನ್ನಡ ಚಿತ್ರಗಳ ಬಜೆಟ್ ಮತ್ತು ಅದ್ದೂರಿತನ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಟಾರ್‌ಗಳ ಚಿತ್ರಗಳೆಂದರೆ, 40ರಿಂದ 50 ಕೋಟಿಯಾದರೂ ಬೇಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಒಂದೂವರೆ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ.

ಒಟಿಟಿಗಳಲ್ಲಿ ದೇಶ-ವಿದೇಶಗಳ ಸಿನಿಮಾಗಳನ್ನು ನೋಡಿಕೊಂಡಿರುವ ಜನ, ಚಿತ್ರವೊಂದಕ್ಕೆ ಬಜೆಟ್ ಅಷ್ಟೇ ಅಲ್ಲ, ಕಂಟೆಂಟ್ ಸಹ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಲ್ಲಿ ಅಷ್ಟು ಕಡಿಮೆ ಬಜೆಟ್‌ನಲ್ಲಿ ಅಷ್ಟೊಳ್ಳೆಯ ಚಿತ್ರಗಳನ್ನು ಮಾಡುವುದಕ್ಕೆ ಸಾಧ್ಯವಿದ್ದರೆ, ಇಲ್ಲೇಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ಸಹಜವಾಗಿಯೇ ಕೇಳಿಕೊಳ್ಳುತ್ತಿದ್ದಾರೆ.

ಪ್ರೇಕ್ಷಕರಿಗೆ ಈಗ ಬೇಕಾಗಿರುವುದು ಅದ್ದೂರಿತನ ಅಲ್ಲ, ಒಂದೊಳ್ಳೆಯ ಚಿತ್ರ ಮಾತ್ರ.ಈ ಹೊಸ ಬೆಳವಣಿಗೆಯು ಕನ್ನಡ ಚಿತ್ರರಂಗಕ್ಕೆ ವರವಾಗಲಿದೆ ಎನ್ನುತ್ತಾರೆ ನಿರ್ದೇಶಕ ಶಶಾಂಕ್. ‘ಮುಂಚೆ ಅದ್ದೂರಿತನದ ವಿಷಯದಲ್ಲಿ ಬೇರೆ ಭಾಷೆಯ ಚಿತ್ರಗಳ ಜತೆಗೆ ಹೋಲಿಸಲಾಗುತ್ತಿತ್ತು. ಆದರೆ, ಬಜೆಟ್ ಅಷ್ಟೇ ಅಲ್ಲ, ಕಂಟೆಂಟ್ ಬಹಳ ಮುಖ್ಯ ಎಂದು ಒಟಿಟಿ ಮೂಲಕ ಅರ್ಥವಾಗುತ್ತಿದೆ. ಚಿತ್ರಕ್ಕೆ ಹಲವು ಕೋಟಿ ರೂ.ಗಳ ಅವಶ್ಯಕತೆ ಇಲ್ಲ, ಒಂದು ಕೋಟಿಯಲ್ಲಿ ಮಾಡಿದರೂ ಚೆನ್ನಾಗಿ ಮಾಡಬಹುದು ಎಂಬುದು ಅರ್ಥವಾಗುತ್ತಿದೆ.

ಆ ನಿಟ್ಟಿನಲ್ಲಿ ಇದೊಂದು ವರ. ಇರುವ ಅವಕಾಶಗಳನ್ನು ಬಳಸಿಕೊಂಡು ಒಂದಿಷ್ಟು ಕಂಟೆಂಟ್ ಇರುವ ಚಿತ್ರಗಳನ್ನು ಮಾಡಬಹುದು. ಚೆನ್ನಾಗಿದ್ದರೆ ಬೇರೆ ರಾಜ್ಯಗಳಿಗೂ ರೀಚ್ ಆಗಬಹುದು’ ಎನ್ನುತ್ತಾರೆ. ಆದರೆ, ಇದಕ್ಕೆ ಕನ್ನಡ ಚಿತ್ರರಂಗ ಎಷ್ಟು ಸಿದ್ಧವಿದೆ? ಎಂಬ ಪ್ರಶ್ನೆ ಸಹಜ. ಕನ್ನಡದಲ್ಲಿ ಬಿಡುಗಡೆಯಾಗುವುದಕ್ಕೆ 100ಕ್ಕೂ ಹೆಚ್ಚು ಚಿತ್ರಗಳು ತಯಾರಿ ನಡೆಸಿವೆ. ಇನ್ನೊಂದು 100 ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.

ಈ ಮಧ್ಯೆ ಒಂದಿಷ್ಟು ಹೊಸ ಪ್ರಯೋಗಗಳು, ವಿಭಿನ್ನ ಕಂಟೆಂಟ್‌ಗಳಿರುವ ಸಿನಿಮಾಗಳು ಸಹ ಇವೆಯಾದರೂ, ಹೆಚ್ಚುಪಾಲು ಇರುವುದು ಅದೇ ಹಳೆಯ ಸರಕಿನ ಸಿನಿಮಾಗಳೇ. ಅವೆಲ್ಲ ಬಿಡುಗಡೆಯಾಗುವುದಕ್ಕೆ ಇನ್ನೆರೆಡು ವರ್ಷಗಳಾದರೂ ಬೇಕು. ಬೇರೆ ತರಹದ ಚಿತ್ರಗಳನ್ನು ನೋಡಿ ಹೊಸ ಹುರುಪಿನಲ್ಲಿರುವ ಪ್ರೇಕ್ಷಕರು, ಮತ್ತದೇ ಹಳೆಯ ಶೈಲಿಯ ಸಿನಿಮಾಗಳನ್ನು ನೋಡುತ್ತಾರಾ? ನೋಡಿ ಒಪ್ಪಿಕೊಳ್ಳುತ್ತಾರಾ? ಎಂಬುದು ಈಗಿರುವ ಪ್ರಶ್ನೆ.

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: