ಹೊತ್ತು ಕಂದಲು ಮೂರು ಗಳಿಗೆ ಇರುವಾಗ ಅವರು ಭೇಟಿಯಾಗುತ್ತಾರೆ
ಇದು ಅವರ ನಿತ್ಯದ ರಿಚುಯಲ್, ಹಾಗಂತ ಅವರೇನು ಅಮರ ಪ್ರೇಮಿಗಳಲ್ಲ
ಸಾರ್ವಜನಿಕವಾಗಿ ಇದೊಂದು ನಿಷಿದ್ದ ಪ್ರೇಮ ಎಂದು ಪರಿಗಣಿಸಲಾಗಿದೆ
ಅವರಿವರ ಅಭಿಪ್ರಾಯಕ್ಕೆ ಅವರೇನು ತಲೆಕೆಡಿಸಿಕೊಂಡಂತೆ ಇಲ್ಲ
ಭೇಟಿಯಾಗಲೇ ಬೇಕೆಂಬ ನಿಯಮವಿಲ್ಲದಿದ್ದರೂ, ಈ ಭೇಟಿ ಅವರಿಗೆ ಚಿಕಿತ್ಸಕ ಕ್ರಿಯೆ,
ಸಂಜೆಗಳ ಮಾತಿನ ಸಂಧಿಯನ್ನು ಅವರು ತಪ್ಪಿಸುತ್ತಿರಲಿಲ್ಲ
ಅದೇ ಒಂಭತ್ತನೇ ತಿರುವಿನ ಹಾದಿಯಲ್ಲಿರುವ ಸಣ್ಣ ಪಾರ್ಕಿನ ಕಲ್ಲಿನ ಬೆಂಚೇ ಅಡ್ಡ
ಸಾಮಾನ್ಯವಾಗಿ ಅವನೇ ಮೊದಲು ಬಂದು ಕಾಯುತ್ತಾನೆ
ಕಾಟನ್ ಸೀರೆಯ ನೆರಿಗೆಗಳನ್ನು ಚಿಮ್ಮಿಸುತ್ತಾ ಬರುವ ಅವಳನ್ನು ನೋಡುವುದು
ಕೂಡಾ ಥೆರಪಿ ಎಂದೇ ಅವನು ಭಾವಿಸುತ್ತಾನೆ
ಬದುಕಿನ ಗೆರೆಗಳನ್ನು ತಾನೇ ಗೀರಿಕೊಂಡ ಅವಳ ರೀತಿ ರಿವಾಜುಗಳು ಅವನಿಗಿಷ್ಟ
ಅವರಿಬ್ಬರ ನಡುವಿನ ಗಾಢ ಕಾಳಜಿಯೇ ಅವರ ನಿರಂತರ ಭೇಟಿಯ ಗುಟ್ಟು
ಮುಗಿಯದ ಆಫೀಸ್ ಡೆಡ್ ಲೈನ್ ಗಳು. ಬಾಕಿ ಇರುವ EMI ಗಳು
ಈ ವರ್ಷವಾದರೂ ಸೈಟ್ ಕೊಳ್ಳಲೇಬೆಕೆಂಬ ಹೆಂಡತಿಯ ಹಟ
ಹೀಗೆ ಅವನು ಮಾತನಾಡುತ್ತಿದ್ದೆರೆ, ಅವಳು ಸುಮ್ಮನೆ ಮುಗುಳ್ನುಗುತ್ತಾಳೆ
ಆಗೆಲ್ಲ ಅವನಿಗೆ ಸಾಂತ್ವನದ ತೆಳುಪದರು ಒಳಗೆಲ್ಲಾ ಹಾಸಿದಂತಾಗುತ್ತದೆ
ಅವಳಿಗೆ ಬದುಕಿನ ಬಗ್ಗೆ ಅಂತ ದೂರುಗಳಿಲ್ಲ
ಉಡಾಫೆ ಗಂಡ, ಹಾಸಿಗೆ ಹಿಡಿದ ಅತ್ತೆ, ಮೆನೋಪಾಸ್ ಕಿರಿ ಕಿರಿ
ಅದ್ಯಾವುದರೂ ಬಗ್ಗೆಯೂ ತುಟಿ ಬಿಚ್ಚುವುದಿಲ್ಲ,
ಅವಳ ಬಕೆಟ್ ಲಿಸ್ಟಿನಲ್ಲಿರುವ ಸಣ್ಣ ಸಣ್ಣ ಆಸೆಗಳ ಬಗ್ಗೆ ಮಾತಾನಾಡುತ್ತಾಳೆ ಅಷ್ಟೇ
ಅವರಿಬ್ಬರ ಮಾತುಗಳಲ್ಲಿ ಸ್ತ್ರೀವಾದದ ಅಬ್ಬರವಾಗಲೀ
ಗಂಡಾಳ್ವಿಕೆಯ ಅರ್ಭಟವಾಗಲೀ ಇಲ್ಲ,
ಮಾತು ಮುಗಿದ ಮೇಲೆ ಮೂನ್ನೂರು ಮೀಟರ್ ದೂರದ
ಮೆಟ್ರೋ ಸ್ಟೇಷನ್ ಗೆ ಜೊತೆಯಾಗಿ ಹೆಜ್ಜೆ ಹಾಕುತ್ತಾರೆ
ಅವಳದು ಪರ್ಪಲ್ ಲೈನ್ ಮತ್ತು ಅವನದೂ ಗ್ರೀನ್ ಲೈನ್
ಹಳಿಗಳು ಎಂದೂ ಒಂದಾಗುವುದಿಲ್ಲ ಎಂಬ ಅರಿವಿದ್ದರೂ,
ಜೊತೆಯಾಗಿ ಸಾಗುವ ಖುಷಿಯೇ ಅವರ ಹೆಜ್ಜೆಗಳನ್ನು ಹಗುರಾಗಿಸಿದೆ.
‘8 AM’ ಮೆಟ್ರೋ ಸಿನಿಮಾ ನೋಡಿ ಬರೆದ ಕವಿತೆ






0 Comments