ಕಾಫಿಯ ಕಪ್ ಹೇಳಿದ್ದು!
ಶಾಂತಾಕುಮಾರಿ
*
ಬದುಕು ನಿಂತಲ್ಲೇ ನಿಂತಾಗ
ಕೈಯ್ಯಲ್ಲೊಂದು ಕಾಫಿಯ ಕಪ್ ಹಿಡಿದು
ನಮ್ಮೆದುರಲ್ಲಿ ಕುಳಿತುಕೊಳ್ಳುತ್ತದೆ!
ಓಡು ಎಂದಲ್ಲ ಸ್ವಲ್ಪ ನಿಲ್ಲು ಕೇಳು
ಅಂತ ಪಿಸುಗುಟ್ಟುವ ಹಾಗೆ!
ಬದುಕು ಇದೀಗ ಆರಂಭ ಎನಿಸುವಂತೆ
ಹೃದಯದ ಬಡಿತ ಆಲಿಸು
ನಿನ್ನೊಳಗೊಂದು ಕಾಡಿದೆ, ಹಕ್ಕಿಗಳ ಹಾಡಿದೆ
ಹರಿವ ನದಿ ಇದೆ ಅಗಾಧ ಕಡಲಿದೆ
ಮುಗ್ದ ಝರಿಯಂತಹ ದುಬದುಬೆ ಇದೆ!
ಬದುಕು ನಿಂತಾಗ ಕೆಲದಿನಗಳು
ಹಳೆಯ ಸಂಗೀತದ ಪ್ಲೇಲಿಸ್ಟ್ ನಂತೆ
ಹಾಡು ಮುಂದಕ್ಕೆ ಹೋಗದಿರಬಹುದು
ಆದರೂ ಅವೇ ಪುನರಾವರ್ತನೆಗಳ ನಡುವೆ ನಮ್ಮ
ಆತ್ಮ ಸ್ವಂತ ನಡಿಗೆಯ ಬೀಟ್ ಹಿಡಿಯಬಹುದು!
ಬದುಕು ನಿಂತರೆ ಆ ನಿಲುವಿನಲ್ಲಿಯೂ
ಒಂದು ಕಾವ್ಯವಿದೆ
ದಾರಿಯ ತಿರುವಿನಲ್ಲಿ ಕಳೆದು ಹೋದ
ಚಿನ್ನದ ಕ್ಷಣಗಳು ಫಳಫಳನೆ ಹೊಳೆಯುತ್ತದೆ
ಮತ್ತೆ ಜೀವನವ ರೂಪಿಸುವ ಋತುಗಳಾಗುತ್ತವೆ
ನಿಂತಿರುವುದೂ ಜೀವನವೇ ಮರುಳೇ
ನಿನಗೆ ನೀನು ಸಿಗುವ ದೊಡ್ಡ ಅವಕಾಶವಿದು
ಬ್ರಹ್ಮಾಂಡದ ಶಕ್ತಿಯೇ ಹಿಡಿದು ಒಡಲನ್ನು ಅಲುಗಿಸಿ
ಕತ್ತಲ ಆಕಾಶ ನಮ್ಮೊಳಗಿನ ನೀಲಿಗೆ ಕೈಹಾಕಿ
ನನ್ನಷ್ಟೇ ಅಗಾಧವಿದೆ ನಿನ್ನೊಳಗೂ ಎನ್ನುತ್ತದೆ
ಕಾಫಿಯ ಕಪ್ ಕೆಳಗಿಟ್ಟಂತೆ ಹೇಳುತ್ತದೆ
ನಿಂತಿದ್ದಕ್ಕೆ ಕಾರಣವೂ ಬೇಡ ವಿಷಾದವೂ ಬೇಡ
ಮತ್ತೆ ಸಾಗುವ ಕ್ಷಣ ಬಂದಾಗ ನೆಲವೇ
ನಿನ್ನ ಪಾದಗಳನ್ನು ಎತ್ತಿ ದಾಟಿಸುತ್ತದೆ
ಅಲ್ಲಿಯವರೆಗೆ ನಿಲ್ಲುವ ನಿಶ್ಯಬ್ದವೇ ನಿನ್ನ ಕವಿತೆ!






0 Comments