ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಳೂರ ನಾರಾಯಣಸ್ವಾಮಿ ಹೊಸ ಕವಿತೆ-ರಂಜಾನ್ ತಿಂಗಳ ಒಂದು ಮಧ್ಯಾಹ್ನ!

ರಂಜಾನ್ ತಿಂಗಳ ಒಂದು ಮಧ್ಯಾಹ್ನ!

ಗೋಳೂರ ನಾರಾಯಣಸ್ವಾಮಿ

*

ಇರುವಾಗ ದನಿಯಾಗದೆ
ಸತ್ತ ಮೇಲೆ ಕೊಂಡಾಡಿಸಿಕೊಳ್ಳುವ
ವಿಖ್ಯಾತ ಕವಿಗಳ ಲಘುಬಗೆಯ ಪ್ರೇಮ;
ಕವಿತೆಗಳು ಇಂದು ಸತ್ತು ಹೋದವು!

ರಂಜಾನ್ ತಿಂಗಳ ಮಧ್ಯಾಹ್ನ
ಆಲಿಕಲ್ಲು ಮಳೆ ಬಂತೆಂದು
ಶಾಲೆಯಿಂದ ಹೊರಬರಲು
ಸಂಭ್ರಮದಿಂದ ಕೂಗಿದ ಮಕ್ಕಳು
ರೆಪ್ಪೆ ಮಿಟುಕಿಸುವಷ್ಟರಲ್ಲಿ ಬೆಂಕಿ;
ಉಂಡೆಗಳಾಗಿ ಚಲ್ಲಾಪಿಲ್ಲಿಯಾದವು!

ಆಗ
ಆಕಾಶವೂ ಹೊಗೆಯಾಡಿ
ಸೂರ್ಯನಿಗೂ ಗ್ರಹಣ ಹಿಡಿಯಿತು!

ಉಪವಾಸವಿದ್ದ ನೂರಾರು ಜೀವಗಳು
ತಮಗರಿವಿಲ್ಲದೆ ಇನ್ಯಾರದ್ದೋ ಅಹಂ-
ಕ್ಯಾನಕ್ಕೆ ರಾತ್ರಿ ನಕ್ಷತ್ರಗಳಾದವು;
ಅಪ್ಪ-
ಅವ್ವಂದಿರ ಶಾಶ್ವತ ದುಃಖಿಗಳಾದರು!

ಮಾನವೀಯ ಚಿಂತನೆಗಳ ಅಪ್ಪಟ
ಜೀವನ ಪ್ರೇಮಿಗಳೀಗ ಯಾವ
ಹೂವಿನ ತೋಟದಲ್ಲಿ ನೀರು
ಹಾಕುತ್ತಿದ್ದಾರೋ ನಾಕಾಣೆ!

ಗಂಟೆಗಟ್ಟಲೆ ಭಾಷಣ ಹೊಡೆಯುವ
ವಿಶ್ವ ಶ್ರೇಷ್ಠ ನಾಯಕರು ಯಾವ
ಇಫ್ತಾರ್ ಕೂಟದಲಿ ತಿಂದು ಗಂಟಲಲಿ
ಗೋಲಿಸೋಡ ಇಳಿಸಿ ತೇಗುತ್ತಿದ್ದಾರೊ!

ಅವರನ್ನೆಲ್ಲಾ ಬಿಡಿ,
ಈ ರೌರವ ನರಕ ನೋಡಿದ
ಮೇಲೆಯೂ ಮೌನ‌ ಮುರಿಯದ
ದೇಶಕಟ್ಟುವ ಕವಿಗಳ ನಡೆಯೂ
ಮಾನವ ಕುಲದ ಅಂತ್ಯದ ಸಂಕೇತ!

ಈ ದಿನ

ಜಗತ್ತಿನಲ್ಲಿರುವ ಕವಿಗಳೆ
ಬೀದಿಗಿಳಿದು ಯುದ್ಧ ನಿಲ್ಲಿಸಿರೆಂದು
ಜೋರಾಗಿ ಕೂಗಾಡೋಣ ಬನ್ನಿ.

ಶಾಂತಿ ಬಿತ್ತುವ ಮಾತಿನ
ಬಾಂಬುಗಳನ್ನು ಕಂಡು ಹಿಡಿಯೋಣ!
ಎರಡೂ ಕಡೆ ಬಿಸಾಡಿ
ಕೂಗು ಮಾರಿಗಳ ಬಾಯಿ ಮುಚ್ಚಿಸೋಣ!
ಮಾನವನೆದೆಯಲಿ ಸಮತೆಯ
ಪರಂಜ್ಯೋತಿ ಬೆಳಗಿಸೋಣ.

‍ಲೇಖಕರು avadhi

21 March, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading