ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿಲಿ ಹೈಮೋವಿಚ್ ಜೊತೆ ಪ್ರತಿಭಾ ನಂದಕುಮಾರ್ ಮಾತುಕತೆ

ಪ್ರತಿಭಾ ನಂದಕುಮಾರ್

ಗಿಲಿ ಅವರ ಕವನಗಳು ಮಾನವ ಸಂಬಂಧಗಳು, ಸ್ಥಳಾಂತರ, ಯುದ್ಧದ ಆತಂಕ ಮತ್ತು ಪ್ರಕೃತಿಯ ಒರಟು ಸೌಂದರ್ಯವನ್ನು (ವಿಶೇಷವಾಗಿ ಮರುಭೂಮಿಯ ಭೂದೃಶ್ಯ) ಚಿತ್ರಿಸುವ ಭಾವನಾತ್ಮಕ ರಚನೆಗಳಾಗಿವೆ. ಅವರ ಕವನಗಳು ಇಸ್ರೇಲ್‌ನ ಸಂಕೀರ್ಣ ಪರಿಸ್ಥಿತಿಯನ್ನು ಮಾನವೀಯ ದೃಷ್ಟಿಕೋನದಿಂದ ಜಗತ್ತಿಗೆ ಪರಿಚಯಿಸುತ್ತವೆ.

ಇಸ್ರೇಲ್‌ನ ಸಂಘರ್ಷಮಯ ಜೀವನ ಮತ್ತು ಅಲ್ಲಿನ ಅಸ್ತಿತ್ವದ ಬಗ್ಗೆ ಇರುವ ಕವನಗಳ Promised Lands (2020) ಇವರ ಪ್ರಸಿದ್ಧ ಕವನ ಸಂಕಲನಗಳಲ್ಲಿ ಒಂದು. ಅದಕ್ಕೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.  ಹೀಬ್ರೂ ಭಾಷೆಯಲ್ಲಿ ಆರು ಪುಸ್ತಕಗಳನ್ನು ಮತ್ತು ಇಂಗ್ಲಿಷ್‌ನಲ್ಲಿ ಹಲವು ಚಾಪ್‌ಬುಕ್‌ಗಳನ್ನು (chapbooks) ಪ್ರಕಟಿಸಿದ್ದಾರೆ.

ಇಸ್ರೇಲ್‌ನ ಜೆರುಸಲೆಮ್‌ನಲ್ಲಿ ಬೆಳೆದವರು. ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಾಹಿತ್ಯ ಹಬ್ಬಗಳಲ್ಲಿ ಭಾಗವಹಿಸಿದ್ದಾರೆ.

ಇಟಲಿಯ ‘I colori dell’anima’ ಮತ್ತು ಇತರ ಅಂತರಾಷ್ಟ್ರೀಯ ಕವನ ಸ್ಪರ್ಧೆಗಳಲ್ಲಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಗಿಲಿ ಹೈಮೋವಿಚ್ (Gili Haimovich) ಅಂತರಾಷ್ಟ್ರೀಯ ಮಟ್ಟದ ಇಸ್ರೇಲಿ-ಕೆನಡಿಯನ್ ಕವಯಿತ್ರಿ, ಲೇಖಕಿ ಮತ್ತು ಅನುವಾದಕಿ. ಹೀಬ್ರೂ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುತ್ತಾರೆ. ಬೆಂಗಳೂರಿಗೆ ಒಂದು ಸಾಹಿತ್ಯೋತ್ಸವಕ್ಕೆ ಬಂದಿದ್ದಾಗ ಅವರ ಪರಿಚಯವಾಯಿತು. ನಾನು ಕನ್ನಡಕ್ಕೆ ಅನುವಾದಿಸಿದ ಅವರ ಕವನಗಳನ್ನು ಅವಧಿಯಲ್ಲಿ ಎರಡು ಸಲ ಪ್ರಕಟಿಸಲಾಗಿದೆ.

ನಿನ್ನೆ ಅವರು ಆನ್ ಲೈನ್ ನಲ್ಲಿ ಚಾಟ್ ಮಾಡುತ್ತಾ ಇಸ್ರೇಲ್ ನ ಸ್ಥಿತಿ ಬಗ್ಗೆ ಹೇಳುತ್ತಿದ್ದರು. ಅವರು ಹಂಚಿಕೊಂಡ ಸಂಗತಿಗಳು ಇವು:

“ಬಾಂಬ್ ಶೆಲ್ಟರ್‌ಗಳಲ್ಲಿ ಅಡಗಿಕೊಳ್ಳುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ, ನಾವು ಇನ್ನೂ ಹೇಗೋ ನಿಂತಿದ್ದೇವೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಗಾಬರಿಯಿಂದ ಶೆಲ್ಟರ್‌ಗಳ ಕಡೆಗೆ ಓಡುತ್ತಿದ್ದೇವೆ, ಅಥವಾ ಕೆಲವೊಮ್ಮೆ ಜಿಗಿಯುತ್ತಿದ್ದೇವೆ; ಒಬ್ಬ ಮಗುವಂತೂ ಹಳೆಯ ಗಾಯದಿಂದಾಗಿ ಪ್ಲ್ಯಾಸ್ಟರ್ (cast) ಹಾಕಿಸಿಕೊಂಡು ಕುಂಟುತ್ತಲೇ ಓಡಬೇಕಿದೆ. ನಮ್ಮ ಕಟ್ಟಡದಲ್ಲಿ ಸರಿಯಾದ ಶೇಲ್ಟರ್ ಇಲ್ಲದ ಕಾರಣ ನಾವು ಅಲ್ಲಿಂದ ಇಲ್ಲಿಗೆ ಓಡಿ ಬರಬೇಕಾಯಿತು, ಹಾಗಾಗಿ ನಾವು ಅಲ್ಲಿಲ್ಲದಿದ್ದರೂ ಎಲ್ಲೋ ಒಂದು ಕಡೆ ಅಡಗಿಕೊಳ್ಳುತ್ತಿದ್ದೇವೆ. ಟೆಲ್ ಅವಿವ್ ಮತ್ತು ರಾಮತ್ ಗಾನ್‌ನಲ್ಲಿ ನಾವು ವಾಸಿಸುವ ಜಾಗದ ಹತ್ತಿರವೇ ಕ್ಷಿಪಣಿಗಳು ಬಿದ್ದವು. ನನ್ನ ಇನ್ನೊಂದು ಮಗುವಿನ ಇಬ್ಬರು ಸ್ನೇಹಿತರ ಪಕ್ಕದಲ್ಲೇ ಕ್ಷಿಪಣಿ ಅಥವಾ ಅದರ ಚೂರುಗಳು (shrapnel) ಬಿದ್ದಿವೆ. ಅದೃಷ್ಟವಶಾತ್, ನಾವು ಮನೆಯಿಂದ ತಪ್ಪಿಸಿಕೊಂಡು ಬರುವಾಗ ಯಾವುದೇ ಸೈರನ್ ಸದ್ದು ಕೇಳಿಸಲಿಲ್ಲ. ಆದ್ದರಿಂದ ನಾವು ಹೇಗೋ ಇಲ್ಲಿಗೆ ಬಂದು ಸೇರಿದೆವು, ಹೇಗಾದರೂ ಮಾಡಿ ಇದನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೇವೆ. ಮಕ್ಕಳನ್ನು ಮತ್ತು ತಂದೆತಾಯಿಯರನ್ನು ಹೈರಾಣಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಸದಾ ಆತಂಕ, ಭೀತಿ ಮತ್ತು ಸುಸ್ತು—ಈಗಾಗಲೇ ಸೈರನ್‌ಗಳು  ಸದಾ ಕಾಲ ಕೂಗುತ್ತಿವೆ ಎಂದು ಅನ್ನಿಸುತ್ತಿದೆ.

ಇವತ್ತು ಸ್ವಲ್ಪ ನಿಶ್ಯಬ್ದವಾಗಿದೆ, ಆದರೂ ನಾವು ಎಚ್ಚರಿಕೆಯಿಂದಿದ್ದೇವೆ. ಈಗಾಗಲೇ ಎರಡು ಬಾರಿ ಶೆಲ್ಟರ್‌ಗೆ ಹೋಗಿ ಬಂದಿದ್ದೇವೆ. ಸಮಯವನ್ನು ಹೇಗೋ ಕಳೆಯುವುದರಲ್ಲೇ ನಾವು ಮಗ್ನರಾಗಿದ್ದೇವೆ, ಕೆಲವೊಮ್ಮೆ ಮನಸ್ಸನ್ನು ಬೇರೆಡೆ ಸೆಳೆಯುವ ವಿಚಾರಗಳನ್ನು ಹುಡುಕುತ್ತೇವೆ. ಇನ್ನು ಕೆಲವು ಸಮಯದಲ್ಲಿ ತಿನ್ನಲು, ಸ್ನಾನ ಮಾಡಲು ಅಥವಾ ಮಲಗಲು ಕೂಡ ಪುರುಸೊತ್ತಿರುವುದಿಲ್ಲ; ಬರೀ  ಎಲ್ಲರೂ ವೇಗವಾಗಿ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳುವುದೇ ಗುರಿಯಾಗಿದೆ.

ಇವತ್ತು ವಸಂತ ಕಾಲದ ಮೊದಲ ದಿನ ಬಾಂಬ್ ಆಶ್ರಯ ತಾಣದಲ್ಲಿ (shelter) ಆರಂಭವಾಯಿತು. ಬೆಳಿಗ್ಗೆ ಸುಮಾರು 8:30ಕ್ಕೆ ಸೈರನ್ ಮೊಳಗಿತು, ಅದಕ್ಕೂ ಮೊದಲು ಮುಂಜಾನೆ 3:15ಕ್ಕೆ, ಮತ್ತು ಅದಕ್ಕೂ ಹಿಂದೆ ರಾತ್ರಿ 9:30ಕ್ಕೆ ಸೈರನ್ ಕೇಳಿಬಂದಿತ್ತು. ಈ ಅನುಭವ ಇರುವವರಿಗೆ ಮಾತ್ರ ನನ್ನ ಹಿಂದಿರುವ ಈ ಸಿಮೆಂಟ್ ಗೋಡೆ ಪರಿಚಯವಿರಬಹುದು; ಇದು ಇಲ್ಲಿನ ಬಾಂಬ್ ಶೆಲ್ಟರ್‌ಗಳ ವಿಶಿಷ್ಟ ಗುರುತು. ನಾವು ಆರಾಮವಾಗಿದ್ದೇವೆ, ತೀರಾ ಅದ್ಭುತ ಎಂದು ಹೇಳಲಾಗದಿದ್ದರೂ, ಇನ್ನೂ ನಡೆಯುತ್ತಿದ್ದೇವೆ, ಶೆಲ್ಟರ್‌ಗೆ ಓಡುತ್ತಿದ್ದೇವೆ, ಹೇಗೋ ನಿಭಾಯಿಸುತ್ತಿದ್ದೇವೆ. ಈ ಸೈರನ್ ಮತ್ತು ಎಚ್ಚರಿಕೆಗಳ ನಡುವೆಯೂ ನಾನು ಸ್ನಾನ ಮಾಡಲು ಸಾಧ್ಯವಾಯಿತು ! ನನ್ನ ತಂದೆತಾಯಿ ವಾಸಿಸುವ ನಗರದಲ್ಲಿ ಸಾಕಷ್ಟು ಹಾನಿಯಾಗಿದೆ. ಆದರೆ ಅವರು ಅಲ್ಲಿಲ್ಲ. ನನ್ನ ತಾಯಿಗೆ ಶಸ್ತ್ರಚಿಕಿತ್ಸೆಯಾಗಬೇಕಿತ್ತು, ಆದ್ದರಿಂದ ಅವರು ಈಗ ಭೂಗತ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿದ್ದಾರೆ; ಅಲ್ಲಿ ರಾಕೆಟ್‌ಗಳು ರೋಗಿಗಳನ್ನು ತಲುಪಲು ಸಾಧ್ಯವಿಲ್ಲ. ಯುದ್ಧದ ಸಮಯದಲ್ಲಿ ಜನರನ್ನು ಸುರಕ್ಷಿತವಾಗಿಡಲು ಇಸ್ರೇಲಿ ವೈದ್ಯಕೀಯ ಕ್ಷೇತ್ರ ಕಂಡುಕೊಂಡ ಅದ್ಭುತ ಆವಿಷ್ಕಾರವಿದು. ನಾನು ಅಲ್ಲಿಗೆ ಅವರನ್ನು ನೋಡಲು ಹೋದಾಗ, ರಾಕೆಟ್‌ಗಳ ಅಥವಾ ಅವುಗಳ ಸ್ಫೋಟದ ಸದ್ದು ಕೇಳಿಸುವುದಿಲ್ಲ. 21 ದಿನಗಳ ಹಿಂದೆ ಅದು ಪಾರ್ಕಿಂಗ್ ತಾಣವಾಗಿತ್ತು ಎಂಬುದನ್ನೇ ಮರೆಯಬಹುದು; ಅಷ್ಟು ಚೆನ್ನಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಲಾಗಿದೆ ಮತ್ತು ಸಿಬ್ಬಂದಿ ತುಂಬಾ ದಯಾಳುಗಳಾಗಿದ್ದಾರೆ, ಬಹುಶಃ ಯುದ್ಧದ ನೋವು ಮತ್ತು ಅನಾನುಕೂಲತೆಯನ್ನು ಮರೆಸಲು ಅವರು ಶ್ರಮಿಸುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ನಾವು ಮರುಭೂಮಿಗೆ ಸ್ವಲ್ಪ ಸಮಯದ ವಿಶ್ರಾಂತಿಗಾಗಿ ಹೋಗಿ ಬಂದಿದ್ದೆವು. ಅಲ್ಲಿ ಸೈರನ್ ಇಲ್ಲ, ರಾಕೆಟ್‌ಗಳಿಲ್ಲ; ಕೇವಲ ವಿಶಾಲವಾದ ಮರುಭೂಮಿಯ ಸೌಂದರ್ಯ ಮತ್ತು ‘ರಾಮನ್ ಕ್ರೇಟರ್’ (Ramon Crater) ಇದೆ. ಈ ಭೂರೂಪವು ವಿಶ್ವದ ಅತಿದೊಡ್ಡ ‘ಸವಕಳಿ ವೃತ್ತ’ (erosion cirque) ಎನಿಸಿಕೊಂಡಿರುವ ಅದ್ಭುತ ವಿದ್ಯಮಾನ ಮತ್ತು ಇಸ್ರೇಲ್‌ನ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನ. ಅಲ್ಲಿನ ಪುಟ್ಟ ಪಟ್ಟಣದ ಕಟ್ಟಡಗಳ ಸುತ್ತಲೂ ಶಾಂತವಾಗಿ ಅಲೆದಾಡುವ ಐಬೆಕ್ಸ್ (ಕಾಡು ಆಡು) ಪ್ರಾಣಿಗಳು ಮನಸೆಳೆಯುತ್ತವೆ. ನಾನು ಜೆರುಸಲೆಮ್ ಮತ್ತು ಅದರ ಸುತ್ತಲಿನ ಅರಣ್ಯ ಪ್ರದೇಶದವಳಾದರೂ, ಈ ಮರುಭೂಮಿಯ ದೃಶ್ಯವೇ ನನ್ನ ಮನಸ್ಸಿಗೆ ಹೆಚ್ಚು ಹತ್ತಿರವಾದುದು ಎಂದು ನನಗೆ ಯಾವಾಗಲೂ ಅನಿಸುತ್ತದೆ. ನನ್ನ ಬರವಣಿಗೆ ಏನನ್ನು ಹುಡುಕುತ್ತದೆಯೋ ಅದಕ್ಕೆ ಇದು ಹಿಡಿದ ಕನ್ನಡಿ: ಬರಿದಾದ, ಕನಿಷ್ಠವಾದ (minimalist), ಮೃದುವಾದ ಮತ್ತು ಆದಿಮ ಸೌಂದರ್ಯ.

ನಮ್ಮ ಕವನಗಳ ಅನುವಾದಗಳ ನಿನ್ನ ಪುಸ್ತಕಕ್ಕೆ ಪ್ರತಿಕ್ರಿಯೆ ಹೇಗಿದೆ?

ಇವತ್ತು ನೀನು ಯುದ್ಧ ಬೇಡಾ ಶಾಂತಿ ಬೇಕು ಅನ್ನುವ ಕಾರ್ಯಕ್ರಮದಲ್ಲಿ ಕವನ ಓದಿದ ಫೋಟೋ ಹಾಕಿದ್ದಿಯಾ.

ಇದು ನನಗೆ ಬಹಳ ಅರ್ಥಪೂರ್ಣವಾಗಿದೆ. ಕವಿತೆಯು ನಿಜಕ್ಕೂ ಶಾಂತಿ, ಸಹಾನುಭೂತಿ ಮತ್ತು ಪರಸ್ಪರ ತಿಳುವಳಿಕೆಯನ್ನು ತರುವ ಒಂದು ಮಾರ್ಗವಾಗಿದೆ. ಈ ಬಾರಿ ಪರಿಸ್ಥಿತಿ ತುಂಬಾ ಜಟಿಲವಾಗಿದೆ; ಅನೇಕ ಇರಾನಿಯನ್ನರು ಇಸ್ಲಾಮಿಕ್ ಆಡಳಿತದಿಂದ (Islamic Regime) ಬಿಡುಗಡೆ ಪಡೆಯಲು ಈ ಯುದ್ಧವನ್ನು ಬಯಸಿದ್ದರು. ಆದರೆ ಇದು ಸರಿಯಾದ ದಾರಿಯೇ ಎಂಬುದು ನನಗೆ ತಿಳಿದಿಲ್ಲ. ನಾವೆಲ್ಲರೂ ಗಡಿಗಳ ಆಚೆಗೂ ಸಂಕಷ್ಟ ಅನುಭವಿಸುತ್ತಿದ್ದೇವೆ, ರಾಕೆಟ್‌ಗಳಿಂದ ತಪ್ಪಿಸಿಕೊಳ್ಳಲು ನಮ್ಮ ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದೇವೆ.

ಹೌದು! ನಮ್ಮಂತೆ ಅನೇಕರಿಗೆ ಸ್ವಂತ ಮನೆಯಲ್ಲಿ ಯಾವುದೇ ಸುರಕ್ಷಿತ ಶೆಲ್ಟರ್ ಇಲ್ಲ. ಪ್ರತಿ ಬಾರಿಯೂ ನಾವು ಅಡಗಿಕೊಳ್ಳಲು ಬೇರೆ ಕಟ್ಟಡಕ್ಕೆ ಓಡಬೇಕಾಗುತ್ತದೆ. ಆಹಾರದ ಸ್ಥಿತಿ ಅಷ್ಟೊಂದು ಕೆಟ್ಟದಾಗಿಲ್ಲ, ಕೆಲವೊಮ್ಮೆ ಸ್ವಲ್ಪ ಕೊರತೆಯಿರುತ್ತದೆ ಅಷ್ಟೆ; ಆದರೆ ಅದನ್ನು ಪಡೆಯಲು ಹೊರಹೋಗುವುದು ಅಪಾಯಕಾರಿ. ಶಾಲೆ ಮತ್ತು ಕೆಲಸಗಳು ಬಹುತೇಕ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಾಧ್ಯವಿರುವವರು ಮಾತ್ರ ಆನ್‌ಲೈನ್ ಮೂಲಕ ಕೆಲಸ ಮಾಡುತ್ತಿದ್ದಾರೆ.

ಇಂದು ನಮಗೆ 7 ಬಾರಿ ಸೈರನ್ ಕೇಳಿಸಿತು. ನಿನ್ನೆ ಹಗಲು ಮತ್ತು ರಾತ್ರಿ ಹಲವಾರು ಬಾರಿ ಸೈರನ್ ಮೊಳಗಿದ್ದರಿಂದ ಯಾರೂ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಕ್ಷಿಪಣಿ ವಿರೋಧಿ ವ್ಯವಸ್ಥೆ (Anti-missile system) ಇದೆ, ಅದು ನಮ್ಮನ್ನು ಉಳಿಸಬೇಕಿದೆ. ಆದರೆ ಅದು ಯಾವಾಗಲೂ ಯಶಸ್ವಿಯಾಗುತ್ತಿಲ್ಲ; ಈಗ ಕೇವಲ ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲದೆ, ಕ್ಲಸ್ಟರ್ ಬಾಂಬ್‌ಗಳು (cluster bombs) ಕೂಡ ದಾಳಿ ಮಾಡುತ್ತಿವೆ. ಒಂದು ರಾಕೆಟ್ ಬಂದಾಗ ಕೆಲವೊಮ್ಮೆ 10 ಕಡೆಗಳಲ್ಲಿ ಸ್ಫೋಟ ಸಂಭವಿಸುತ್ತದೆ. ನಮ್ಮ ಪಕ್ಕದಲ್ಲೇ ಇಂತಹ ಹಲವು ಸ್ಫೋಟಗಳು ನಡೆದಿವೆ.

ನೀವುಗಳು ನಮ್ಮ ಬಗ್ಗೆ ತೋರಿಸುತ್ತಿರುವ ಸಹಾನುಭೂತಿ ಸಮಾಧಾನ ನೀಡಿತು. ನಾನು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ. ಇಂತಹ ಕಷ್ಟದ ಸಮಯದಲ್ಲಿ ಕವಿತೆಯು ಮನಸ್ಸಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಲಿ ಎಂದು ಹಾರೈಸುತ್ತೇನೆ.”

*

ದಿ ಪ್ರಾಮಿಸ್ಡ್ ವೇಸ್ಟ್‌ಲ್ಯಾಂಡ್ (ವಾಗ್ದಾನ ಮಾಡಿದ ಬಂಜರು ಭೂಮಿ)

ಗಿಲಿ ಹೈಮೋವಿಚ್ (Gili Haimovich)

*

ನಾನು ನಿನ್ನನ್ನು ನೀರಿನಿಂದ ಹೊರಕ್ಕೆಳೆಯುತ್ತಿದ್ದೇನೆ,

ನಿನ್ನದೇ ಆದ ದುಃಖದಿಂದ ಹೊರತಂದಂತೆ.

ರಕ್ಷಿಸಲ್ಪಡುವುದು ಸಾರ್ಥಕವಾದುದು ಎಂದು

ನಾವು ನಂಬುವುದಿಲ್ಲ,

ಅದು ನಿನ್ನನ್ನು ನಿನ್ನ ಬದುಕಿನ ಬಹುಪಾಲು ಸಮಯ

ನೀರಿನಿಂದ ದೂರವಿರಿಸುತ್ತದೆ ಎಂದು ತಿಳಿಯುವ ಮೊದಲೇ.

ನೀನು ಎರಡನೇ ಬಾರಿಗೆ ಅದನ್ನು ಎದುರಿಸಿದಾಗ,

ನೀರನ್ನು ಸೀಳಿಕೊಂಡೇ ಹೋಗಬೇಕಾಗುತ್ತದೆ.

ಮೋಸೆಸ್, ಮರುಭೂಮಿಯು ವಿಶಾಲ, ವನ್ಯ ಮತ್ತು ಬಂಜರು,

ಅದೆಷ್ಟು ಮುಕ್ತವಾಗಿದೆ ಎಂದರೆ ಅದನ್ನು ತಲುಪಲು ಅಸಾಧ್ಯ,

ಅಲ್ಲಿ ವಿಶ್ರಾಂತಿಗಾಗಿ ತಾಣಗಳಿಲ್ಲ,

ಅಡಗಿಕೊಳ್ಳಲು ಜಾಗವಿಲ್ಲ,

ಆತ್ಮೀಯತೆಗೂ ಅವಕಾಶವಿಲ್ಲ.

ಕಪ್ಪು ಸುಂದರ ಮರಳು ದಿಬ್ಬಗಳ ಆಲಿಂಗನವು

ಒರಟಾಗಿರುತ್ತದೆ.

ಮರಳು ನಿನ್ನ ಕಣ್ಣಿಗೆ ಬಿದ್ದರೆ

ನೀನು ಕಣ್ಣೀರು ಹಾಕುತ್ತೀಯಾ.

ಅವುಗಳ ನಾಲಗೆಗಳು ತೃಪ್ತಿಯ ಬದಲು ಶುಷ್ಕತೆಯನ್ನು ತರುತ್ತವೆ

ಮತ್ತು ದೃಢವಾಗಿ ನುಗ್ಗುತ್ತವೆ

ಈಗಾಗಲೇ ಏನನ್ನೂ ನೀಡಲಾಗದ ಈ ಭೂಮಿಯೊಳಗೆ.

ವಾಗ್ದಾನಗಳು ಈಡೇರದೆ ಇರುವುದೇ ಲೇಸು ಎಂದು

ನಿನಗೆ ಅರ್ಥವಾಗುವುದು ಆಗಲೇ,

ಮತ್ತು ನೀನು ಅಲ್ಲಿಗೆ ಪ್ರವೇಶಿಸುವುದಿಲ್ಲ.

**

‍ಲೇಖಕರು avadhi

24 March, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading