ಕಾಡುವ ಕಥೆಗಳ ಗುಚ್ಚ

ಡಾ ಅರ್ಚನಾ ಆರ್
*
ಕಾಲ ಎಷ್ಟೇ ಬದಲಾಗುತ್ತಿದೆ, ಮನುಷ್ಯ ಸಮಾಜ ತೀವ್ರವಾಗಿ ಬದಲಾಗುತ್ತಿದೆ ಎಂದು ಎಷ್ಟೇ ಗೂಣಗಿದರೂ ಸಾಹಿತ್ಯ ವಲಯ ಮಾತ್ರ ತನ್ನ ಚಿಂತನಶೀಲ ಪ್ರಕ್ರಿಯೆಯನ್ನು ತಣ್ಣಗೆ ಮಾಡುತ್ತಲಿದೆ ಎಂಬುದಕ್ಕೆ ಹೊಸ ತಲೆಮಾರಿನ ಲೇಖಕರು ಸಾಕ್ಷಿ. ಇತ್ತೀಚೆಗೆ ಬ್ಲಾಗ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಕಥೆ, ಕಾವ್ಯ, ಲೇಖನಗಳನ್ನ ಕಂಡಾಗೆಲ್ಲಾ ಎಷ್ಟು ಚಂದದ ಬರಹಗಳು ಅನ್ನಿಸದೆ ಇರುತ್ತಿರಲಿಲ್ಲ. ಹಾಗೆ ನಾನು ಓದಿ ಇಷ್ಟಪಟ್ಟಿದ್ದು ನಾಗಶ್ರೀ ಅಜಯ್ ಅವರ ಕವಿತೆಗಳನ್ನ ಎಷ್ಟು ಚಂದದ ಪದ ಜೋಡಣೆ, ಭಾವ ತೀವ್ರತೆ ಎಂದು ಓದಿಕೊಳ್ಳುತ್ತಿದ್ದೆ.
ಇತ್ತೀಚೆಗೆ ಅವರ ಮೊದಲ ಕಥಾ ಸಂಕಲನ ‘ಕಡೆ ಹಾಯ್ವ ದೋಣಿ’ ಬಿಡುಗಡೆಯಾಗಿ ಕೈ ಸೇರಿತ್ತು. ಕಥಾ ಸಂಕಲನದ ಶೀರ್ಷಿಕೆ ಕಥೆಗಳ ಶೀರ್ಷಿಕೆ ಒಮ್ಮೆಲೆ ಆಕರ್ಷಣೀಯ ಎನಿಸಿದವು. ಈ ಸಂಕಲನದಲ್ಲಿ ಒಟ್ಟು 12 ಕತೆಗಳಿವೆ ಒಂದೊಂದು ಭಿನ್ನವಾದ ಕಥಾ ಹಂದರ ವನ್ನು ಒಳಗೊಂಡ ಕಥೆಗಳಾಗಿವೆ. ಇವು ಹೊಸ ಪೀಳಿಗೆಯ ಭರವಸೆಯ ಬರಹಗಾರರಲ್ಲಿ ನಾಗಶ್ರೀ ಅಜಯ್ ಅವರನ್ನು ಒಬ್ಬರನ್ನಾಗಿಸಿವೆ . ಸಾಹಿತ್ಯ ವಲಯದಲ್ಲಿ ಸದಾ ಹಸಿರಾಗಿರುವ ಧೀಮಂತ ಬರಹಗಾರರ ಕೃತಿಗಳನ್ನು ಓದುವ ಪರಿಪಾಠದಿಂದ ಕೊಂಚ ಬಿಡುವು ಮಾಡಿಕೊಂಡು ಈ ಕಾಲದ ಲೇಖಕರ ಚಿಂತನೆಗಳನ್ನು ಓದೋಣ ಎನ್ನಿಸುವ ಭಾವ ಮೊಳೆಯಬೇಕಿದೆ.
ಅದಕ್ಕೆ ಪೂರಕವೆಂಬತೆ ನಾಗಶ್ರೀ ಅಜಯ್ ಅವರ ‘ಕಡೆ ಹಾಯ್ವ ದೋಣಿ ‘ಕಥಾಸಂಕಲನದ ಕಥೆಗಳಿವೆ ‘ಶಮಿ ಶಮಯತತೇ ಪಾಪಂ’ನಿಂದ ಹಿಡಿದು ‘ಕಾರ್ಯ ಕಾರಣ’ದವರೆಗಿನ ಎಲ್ಲಾ ಕಥೆಗಳು ನಮಗೇ ಅರಿವಿಲ್ಲದಂತೆ ಓದಿಸಿಕೊಂಡು ಹೋಗುತ್ತವೆ. ಪ್ರತಿ ಕಥೆಯು ಒಂದೊಂದು ಭಾವ ಜಗತ್ತಿನ ಅನುಭವ ಮಾಡಿಕೊಡುತ್ತದವೆ . ‘ಶಮಿ ಶಮಯತೇ’ ಯ ಶಮಿತಾ,’ಹೆಜ್ಜೆ ಮೂಡದ ಹಾದಿ’ಯ ರಂಜಿತಾ, ಕಾಂಟ್ರಾ ದ ‘ಮಂಜಣ್ಣ’, ‘ಗತ್ಯಂತರ’ದ ‘ಕಾವ್ಯ, ಕಾಮಾಕ್ಷಿ, ‘ಮೀ ಟೂ ‘ಕತೆಯ ಸ್ಮಿತಾ-ಮನಸ್ವಿ, ಭಿನ್ನದ ಶರಧಿ,ಕಾರ್ಯಕಾರಣದ ಹೇಮಾವತಿ… ಹೀಗೆ ಎಲ್ಲಾ ಪಾತ್ರಗಳು ಓದಿದ ನಂತರವೂ ಕಾಡುವಂತವು.
ಈ ಪಾತ್ರಗಳಿಗೆ ಅನ್ವಯಿಸುವ ಈ ಕಾಲದ ಸಂದಿಗ್ದತೆಗಳು ಕಥೆಯಲ್ಲಿ ಹದವಾಗಿ ಬೆರೆತಿವೆ.ಇಡೀ ಕಥಾಸಂಕಲನದಲ್ಲಿ ನಾಗಶ್ರೀ ಅವರು ಕಥೆಯನ್ನು ಪ್ರಸ್ತುತ ನಾಗರಿಕ ಜಗತ್ತಿನ ತಲ್ಲಣವನ್ನ ಅನಾವರಣಗೊಳಿಸುತ್ತಾ, ಅನೇಕ ಗೊಂದಲಗಳು,ಸಂಘರ್ಷಗಳು,ವೈವಾಹಿಕ ಬದುಕಿನ ಸಮಸ್ಯೆಗಳ ಕುರಿತು ಗಂಭೀರವಾದ ಪ್ರಶ್ನೆಗಳನ್ನೆತ್ತಿದ್ದಾರೆ. ಹಾಗೂ ಬದುಕಿನಲ್ಲಿ ಕನಿಷ್ಠ, ಸ್ನೇಹ, ಪ್ರೀತಿಗೂ ಹಂಬಲಿಸುವ ಮಾನವ ಸಹಜ ಅಭಿಪ್ಸೆಗಳನ್ನು ಕಥೆಯ ಬಂಧಕ್ಕೆ ಒಳಪಡಿಸಿರುವ ರೀತಿ ನಿಜಕ್ಕೂ ಸೊಗಸಾಗಿದೆ.
ಹೊಸಕಾಲದ ಬದುಕಿನ ಅನಾವರಣದೊಂದಿಗೆ ಬದುಕಿನ ಗಂಭೀರತೆಯನ್ನು ಅವರ ಕಥೆಗಳಲ್ಲಿ ಕಾಣಬಹುದು’ ಶಮಿ ಶಮಯತೇ ಪಾಪಂ’ ಕಥೆಯಲ್ಲಿ ಮಾಧ್ಯಮ ಜಗತ್ತಿನ ಕ್ರೈಂ ಸ್ಟೋರಿಗಳ ಹಿನ್ನಲೆ ಮತ್ತು ಕಥೆಯ ಕೊನೆಯಲ್ಲಿ ಹೇಗೆ ಹೆಣ್ಣಿನ ಚಾರಿತ್ರ್ಯ ವನ್ನ ತನ್ನಿಷ್ಟದಂತೆ ಹರಣ ಮಾಡುವ ಜಗತ್ತಿನ ಅನಾವರಣ ಮಾಡಿದ್ದರೇ,’ಹೆಜ್ಜೆ ಮೂಡದ ಹಾದಿ ಕತೆ’ಯಲ್ಲಿ ರಿಯಾಲಿಟಿ ಶೋಗಳ ಅಬ್ಬರಕ್ಕೆ ಪ್ರತಿಭೆ ಅರಳದು, ಮಕ್ಕಳ ಮುಗ್ಧತೆಯ ನಾಶವಾಗುವುದನ್ನು ವಿವರಿಸಿದ್ದಾರೆ. ಈ ಕಥೆಗಳಲ್ಲಿನ ಅನುಭವಗಳು ಗಂಭೀರವಾದ ಸಾಮಾಜಿಕ ಚಿಂತನೆಯುಳ್ಳ ವಾಗಿವೆ. ‘ಮುಖಾಮುಖಿ’,’ ಗತ್ಯಂತರ ‘,’ಭಿನ್ನ’ ಎಲ್ಲವೂ ಪ್ರಸ್ತುತ ಸಮಾಜದ ಅನಾಗರಿಕ ಅಸಹ್ಯಗಳನ್ನ ಬೆಳಕಿಗೆ ತರುತ್ತವೆ. ಕಾಂಟ್ರಾ ದ ‘ಮಂಜಣ್ಣ’ನ ಪಾತ್ರ, ‘ಪಾರ್ಲರ್ ತಿಥಿ’ಯಲ್ಲಿನ ಮುಗ್ಧ ಆಚರಣೆಗಳು ಕಥೆ ಮುಗಿದ ಮೇಲು ಕನವರಿಸುವಂತಿವೆ.

ಈ ಎಲ್ಲಾ ಕಥೆಗಳು ಹೊಸ ಕಾಲದ ಬಿಕ್ಕಟ್ಟನ್ನು ಅಭಿವ್ಯಕ್ತ ಪಡಿಸುತ್ತಾ ನಾವು ಕಾಣದ ಅಥವಾ ಕಂಡು ಸುಮ್ಮನಾಗುವ ಹತ್ತು ಹಲವು ಸಂಗತಿಗಳನ್ನ ನಾಗಶ್ರೀ ಅವರು ಕಥೆಯ ಸ್ವರೂಪಕ್ಕೆ ತಂದಿರುವುದು ನಿಜಕ್ಕೂ ಓದಿದ ಪ್ರತಿಯೊಬ್ಬರನ್ನ ಕಾಡುವಂತಿದೆ. ನನ್ನ ಈ ಬರಹದುದ್ದಕ್ಕೂ ‘ಹೊಸ ಕಾಲ’ ಎಂಬುದನ್ನ ಪದೇಪದೇ ಬಳಸಿದ್ದೇನೆ ಕಾರಣವಿಷ್ಟೇ ಕನ್ನಡದ ಮೇರು ಕವಿಗಳ ಕೃತಿಗಳನ್ನ ಪದವಿ ತರಗತಿಗಳಿಗೆ ಬೋಧಿಸುವ ನನಗೆ ಮಾತಿಗೆ, ಬರಹಕ್ಕೆ ಸ್ಪೂರ್ತಿ ನನ್ನ ವಿದ್ಯಾರ್ಥಿ ಮಿತ್ರರ ಪ್ರಶ್ನೆಗಳೇ ಆಗಿರುತ್ತವೆ. ಅವರು ಕಾಲಕ್ಕೆ ತಕ್ಕಂತೆ ಪಠ್ಯ ವಿಲ್ಲ ಎಂದು ಗೊಣಗುವುದನ್ನ ಕೇಳಿದಾಗಲೆಲ್ಲ ಇಂದಿನ ಪೀಳಿಗೆ ಯಾಕೆ ಹೀಗೆ ಅನ್ನಿಸಿದ್ದೂ ಇದೆ ಆದರೆ ನಾಗಶ್ರೀ ಅವರ ‘ಕಡೆ ಹಾಯ್ವ ದೋಣಿ’ಯಂತ ಕಥೆಗಳೇನಾದರೂ ಪಠ್ಯವಾಗಿದ್ದರೆ ಎಷ್ಟು ಪ್ರಸ್ತುತ ಅಲ್ವಾ? ಇಂದಿನ ಯುವ ಪೀಳಿಗೆಯವರ ಹಲವಾರು ಸಂದಿಗ್ದತೆಗಳು ಇಲ್ಲಿ ಅಭಿವ್ಯಕ್ತವಾಗಿವೆ ಮತ್ತೆ ಅವುಗಳನ್ನ ಎಷ್ಟು ಭಾವ ತೀವ್ರವಾಗಿ ಲೇಖಕಿ ಮನಮುಟ್ಟುವಂತೆ ಹೇಳಿದ್ದಾರೆ.
ನನಗೇನಾದರೂ ಇಂತಹ ಕಥೆಗಳನ್ನ ವಿದ್ಯಾರ್ಥಿಗಳಿಗೆ ತಲುಪಿಸುವ ಅವಕಾಶ ದೊರಕಿದ್ದರೆ ಇಂದಿನ ಪೀಳಿಗೆಗೆ ಎಷ್ಟು ಹತ್ತಿರವಾಗ ಬಲ್ಲದು ಎಂದು ಎನಿಸಿದ್ದು ಸುಳ್ಳಲ್ಲ.
ಈ ಸಂಕಲನದ ಶೀರ್ಷಿಕೆ, ಮುಖಪುಟ ಎಲ್ಲವೂ ಆಕರ್ಷಕ ಕನ್ನಡ ಕಥಾ ಜಗತ್ತಿಗೆ ಇದೊಂದು ಅಪರೂಪದ ಕೊಡುಗೆ ಇಲ್ಲಿ ಕಥೆಗಾರ್ತಿಯ ತಾಳ್ಮೆ, ಕಥೆ ಹೇಳುವ ಶೈಲಿ, ಪರಂಪರೆಯನ್ನು ಮೀರದೆ, ಆಧುನಿಕತೆಯನ್ನು ಮರೆಯದೆ ಹದವಾದ ಬದುಕಿನ ಸಾಧ್ಯತೆ, ಸವಾಲುಗಳನ್ನ ಅಭಿವ್ಯಕ್ತಿಸಿರುವುದು ಎಲ್ಲವೂ ಆಕರ್ಷಕವೆನಿಸುವಂತಿದೆ.






0 Comments