ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಕ್ಷಕರ ಸಿಳ್ಳೆ ಅಥವಾ ಮೆಚ್ಚುಗೆಯ ಪ್ರತಿಕ್ರಿಯೆ ಅತಿರೇಕವಲ್ಲ..

ನಾರಾಯಣ ಯಾಜಿ

*

ಜಾಗತಿಕ ರಂಗಭೂಮಿಯ ದಿನವಾದ ಮಾರ್ಚ್ 27 ರಂದು ಪ್ರೇಕ್ಷಕರು ಪ್ರದರ್ಶನದ  ನಡೆಯುವಲ್ಲಿ ಮೌನಗೊಂಬೆಯಾಗಿರಬೇಕೆ ಎನ್ನುವ ಚರ್ಚೆ ಸಾಮಾಜಿಕ ಜಾಲ ತಾಣದಲ್ಲಿ ನಡೆಯಿತು. ನಾಟಕ ಎನ್ನುವುದರ ಹುಟ್ಟೇ ಜನಸಾಮಾನ್ಯರಿಗಾಗಿ ಎನ್ನುವುದನ್ನು ಮರೆಯಕೂಡದು. ಭರತಮುನಿ ಅದಕ್ಕಾಗಿಯೇ ಇದನ್ನು ಐದನೆಯ ವೇದ ಎಂದು ಕರೆದಿದ್ದು.  ರಂಗಭೂಮಿಯ ಇತಿಹಾಸದಲ್ಲಿ ಆಡಿದ ಮೊದಲ ನಾಟಕ “ಸಮುದ್ರ ಮಥನ” ದಲ್ಲಿ ಅದನ್ನು ನೋಡಿದ ದೈತ್ಯರು ಸಿಟ್ಟಿಗೆದ್ದು ಕೂಗಾಡಿದರು ಎನ್ನುವ ವಿವರಣೆ ಬರುತ್ತದೆ. ಆ ಕ್ಷಣದ ಪ್ರತಿಕ್ರಿಯೆ ಬಹಳ ಮುಖ್ಯ. ನಂತರ ಬ್ರಹ್ಮ ಅವರನ್ನು ಸಮಾಧಾನಿಸಿದ. ಆತನೇ ಇದಕ್ಕೆ ವೇದದ ಸ್ಥಾನವನ್ನು ಕಲ್ಪಿಸಿದ ಎನ್ನುವ ಹಿನ್ನೆಲೆಯಲ್ಲಿ ಪ್ರೇಕ್ಷ್ಕರ ಪಾಲ್ಗೊಳ್ಳುವಿಕೆಯ ಅರಿವಾಗುತ್ತದೆ.   ಗಂಭೀರವಾಗಿ ಪ್ರೇಕ್ಷಕ ಕುಳಿತಿದ್ದರೆ ನಾಟಕಕಾರನಿಗೆ ಆತನ ಭಾವನೆ ತಿಳಿಯುವ ಬಗೆಯಾದರೂ ಹೇಗೆ ಎನ್ನುವದು ಬಹಳ ಮುಖ್ಯ.  ಪ್ರೇಕ್ಷಕ ರಂಗಭೂಮಿಯ ಅವಿಭಾಜ್ಯ ಅಂಗ. ಕಾಳಿದಾಸ ಸಹ ತನ್ನ ಮೊದ “ನಾಟಕ ಮಾಲವಿಕಾಗ್ನಿ ಮಿತ್ರ”  ಪಂಡಿತ ವಲಯದ ನಿರಾಸಕ್ತಿಯನ್ನು ಟೀಕಿಸುತ್ತಾ ಆಡಿದ ಮಾತು ಬಹಳ ಪ್ರಸಿದ್ಧ

ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ |

ಸಂತಃ ಪರೀಕ್ಷಾನ್ಯತರದ್ಭಜಂತೇ ಮೂಢಃ ಪರಪ್ರತ್ಯಯನೇಯಬುದ್ಧಿಃ ||

“ಹಳೆಯದು ಎಂಬ ಕಾರಣಕ್ಕಾಗಿಯೇ ಎಲ್ಲವೂ ಒಳ್ಳೆಯದು ಅಥವಾ ಸರಿಯಾದುದು ಎಂದು ಹೇಳಲಾಗದು. ಹಾಗೆಯೇ, ಹೊಸದಾಗಿ ರಚನೆಯಾದ ಕಾವ್ಯ ಎಂಬ ಕಾರಣಕ್ಕೆ ಅದು ದೋಷಪೂರಿತ ಅಥವಾ ಕೀಳು ಎಂದು ತಿರಸ್ಕರಿಸಬಾರದು. ಗುಣಗ್ರಾಹಿಗಳು ಎರಡನ್ನೂ ಸರಿಯಾಗಿ ಪರೀಕ್ಷಿಸಿ, ಗುಣ-ದೋಷಗಳನ್ನು ವಿವೇಚಿಸಿ, ಅದರಲ್ಲಿ ಯಾವುದು ಶ್ರೇಷ್ಠವೋ ಅದನ್ನು ಸ್ವೀಕರಿಸುತ್ತಾರೆ. ಮೂರ್ಖನಾದವನು ಸ್ವಂತ ಆಲೋಚನೆ ಮಾಡದೆ,  ಲೋಕದ ಮಾತಿಗೆ ಮರುಳಾಗಿ ತನ್ನ ನಿಲುವನ್ನು ತಳೆಯುತ್ತಾನೆ.”

 ಈ ಹಿನ್ನೆಲೆಯಲ್ಲಿ ಪ್ರೇಕ್ಷಕನ ಪಾತ್ರವನ್ನು ಒಮ್ಮೆ ವಿವೇಚಿಸೋಣ ಅನಿಸಿತು.  ರಂಗಭೂಮಿ ಎಂಬುದು ಕೇವಲ ಕಲೆ ಪ್ರದರ್ಶನದ ಸ್ಥಳವಲ್ಲ; ಅದು ಮಾನವ ಅನುಭವಗಳ ಜೀವಂತ ಸಂಗಮ. ಇಲ್ಲಿ ಕಲಾವಿದ ಮತ್ತು ಪ್ರೇಕ್ಷಕ ಎರಡೂ ಪಾತ್ರಧಾರಿಗಳು. ಕಲಾವಿದ ಕಲೆಯನ್ನು ಸೃಷ್ಟಿಸುತ್ತಾನೆ. ಪ್ರೇಕ್ಷಕ ಅದನ್ನು ಅದನ್ನು ಅನುಭವಿಸುತ್ತಾನೆ. “ವಿಭಾವಾನುಭಾವವ್ಯಭಿಚಾರಿಸಂಯೋಗಾತ್ ರಸನಿಷ್ಪತ್ತಿಃ”  ಈ ಅನುಭವದ ಮಥನದ ನಡುವೆ ಹುಟ್ಟುವುದೇ “ರಸ”. ಈ ರಸಾನುಭವವೇ ಕಲೆ ಜೀವಂತವಾಗಿರುವುದಕ್ಕೆ ಮೂಲ. ಆದ್ದರಿಂದಲೇ “ಕಲೆ ಜೀವಂತವಾಗಿರಬೇಕಾದರೆ ಅದು ಜನರ ನಡುವೆ ಇರಬೇಕು” ಎನ್ನುವ ಮಾತು ರಂಗಭೂಮಿಯ ಮೂಲ ನಿರ್ವಚನವಿರುವುದೇ ಇದರಲ್ಲಿ.  

ಸಂಸ್ಕೃತ ನಾಟಕಕಾರ ಭವಭೂತಿ  ಪಂಡಿತ ನೆಂದು ಖ್ಯಾತನಾದವ. ಆ ಕಾಲದಲ್ಲಿ ನಾಟಕಗಳನ್ನು ಸಾಮಾನ್ಯವಾಗಿ ಕುಲೀನರು ಅಥವಾ ರಾಜರ ಆಸ್ಥಾನದಲ್ಲಿ ಆಡುತ್ತಿದ್ದರು. ನೋಡುವ ಪ್ರೇಕ್ಷಕರು ಪ್ರಬುದ್ಧರಾಗಿರುತ್ತಿದ್ದರು. ಅವರು ಮೆಚ್ಚಿದರೆ ಮಾತ್ರ ಕಲೆಗೆ ಮಾನ್ಯತೆ ಸಿಗುತ್ತಿತ್ತು.  ಅವರ ಜೀವನದ ಸನ್ನಿವೇಶ ಈ ಮಾತಿಗೆ ಒಂದು ರೂಪಕವಾಗಿ ಕಾಣಿಸುತ್ತದೆ. ಪಂಡಿತ ಸಭೆಯಲ್ಲಿ ತನ್ನ ಕೃತಿಗಳಿಗೆ ತಕ್ಕ ಮಾನ್ಯತೆ ಸಿಗಲಿಲ್ಲವೆಂಬ ನಿರಾಶೆಯಿಂದ, ತನ್ನ ಮಾಲತಿ ಮಾಧವ  ನಾಟಕವನ್ನು ಜನಸಾಮಾನ್ಯರ ನಡುವೆ ಜಾತ್ರೆಯಲ್ಲಿ  ಪ್ರದರ್ಶಿಸಿದನೆಂಬ ಪರಂಪರೆ ಪ್ರಸಿದ್ಧ. ಇತಿಹಾಸದ ದೃಷ್ಟಿಯಿಂದ ಇದು ನಿಖರ ಸತ್ಯವೋ ಅಲ್ಲವೋ ಎಂಬುದು ವಿವಾದಾತ್ಮಕವಾಗಿದ್ದರೂ ಅದರ ಒಳನೋಟ ಮಹತ್ವದ್ದಾಗಿದೆ. ಭವಭೂತಿಯ ಈ ಕಾರ್ಯವು ಕಲೆ ಪಂಡಿತರ ವಲಯದಲ್ಲಿ ಸೀಮಿತವಾಗದೇ ಜನರ ಅನುಭವವಾಗಬೇಕು ಎಂಬ ನಂಬುಗೆಯಲ್ಲಿ ಮಹತ್ವದ್ದಾಗಿದೆ. 

ರಂಗಭೂಮಿ ಎನ್ನುವುದು ಗಾಜಿನ ಮನೆಯಲ್ಲಿ ಪ್ರದರ್ಶಿಸುವ ವಸ್ತುವಲ್ಲ; ಅದು ಜನರ ನಡುವೆ ಸಂಭವಿಸುವ ಒಂದು ಸಂವೇದನೆ. ಭಾರತೀಯ ರಂಗಭೂಮಿಯ ಇತಿಹಾಸವನ್ನು ಗಮನಿಸಿದರೆ, ನಾಟಕಗಳು ಆರಂಭದಲ್ಲಿ ಕೇವಲ ವಿದ್ವತ್ ಸಭೆಗಳಿಗೆ ಅಥವಾ ರಾಜಾಸ್ಥಾನದ ಶಿಸ್ತಿಗೆ ಸೀಮಿತವಾಗಿದ್ದವು. ಆದರೆ, ಭವಭೂತಿ ಈ ಸಂಪ್ರದಾಯವನ್ನು ಮುರಿದು ತನ್ನ ‘ಮಾಲತೀಮಾಧವ’ ನಾಟಕವನ್ನು ಜನಸಾಮಾನ್ಯರ ನಡುವೆ, ಜಾತ್ರೆಯಂತಹ ಮುಕ್ತ ಪರಿಸರದಲ್ಲಿ ಪ್ರದರ್ಶಿಸಿದ್ದ. ಇದಕ್ಕೆ ಕಾರಣ ಆತನ ನಾಟಕಗಳ ಕುರಿತು ಪಂಡಿತ ವರ್ಗ ತೋರಿದ ಅನಾದರ. ಅದರ ಪ್ರತಿಭಟೆನಾರ್ಥವಾಗಿ ಆತನ ಪ್ರಸಿದ್ಧ ಮಾತು ಹೀಗಿದೆ.

ಯೇ ನಾಮ ಕೆಚಿದಿಹ ನಃ ಪ್ರಥಯಂತ್ಯವಜ್ಞಾಂ

ಜಾನಂತಿ ತೇ ಕಿಮಪಿ ತಾನ್ ಪ್ರತಿನೈಷ ಯತ್ನಃ।

ಉತ್ಪತ್ಸ್ಯತೇ ಮಮ ತು ಕೋಪಿ ಸಮಾನಧರ್ಮಾ

ಕಾಲೋ ಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವೀ॥

“ಇಲ್ಲಿ ಕೆಲವರು ನನ್ನನ್ನು ಅರ್ಥಮಾಡಿಕೊಳ್ಳದೇ ತಿರಸ್ಕರಿಸುತ್ತಾರೆ. ಅವರನ್ನು ಮನವರಿಕೆ ಮಾಡಲು ನಾನು ಪ್ರಯತ್ನಿಸುವುದಿಲ್ಲ. ಏಕೆಂದರೆ, ಕಾಲ ಅನಂತವಾಗಿದೆ; ಭೂಮಿ ವಿಶಾಲವಾಗಿದೆ.  ಒಂದು ದಿನ ನನ್ನ ಕೃತಿಯನ್ನು ಅರ್ಥಮಾಡಿಕೊಳ್ಳುವವರು ಖಂಡಿತವಾಗಿ ಹುಟ್ಟುತ್ತಾರೆ.”

ಸ್ಪಂದನೆಯೇ ಕಲೆಯ ಜೀವಾಳ:

ಜಾತ್ರೆಯಂತಹ ಜಾಗದಲ್ಲಿ ನಾಟಕ ನಡೆಯುವಾಗ ಪ್ರೇಕ್ಷಕರಿಂದ ಸಿಳ್ಳೆ, ಮೆಚ್ಚುಗೆಯ ಉದ್ಗಾರಗಳು ಬರುವುದು ಸಹಜ ಮಾತ್ರವಲ್ಲ, ಅದು ಕಲೆಯ ಜೀವಂತಿಕೆಯ ಕುರುಹು. ಭಾಗವತರ ಹಾಡು ಮನಸ್ಸನ್ನು ಮುಟ್ಟಿದಾಗ ಪ್ರೇಕ್ಷಕನು ಅದನ್ನು ತನ್ನದೇ ಶೈಲಿಯಲ್ಲಿ ಸಂಭ್ರಮಿಸುತ್ತಾನೆ. ಇದನ್ನು ‘ಅತಿರೇಕ’ ಎಂದು ಕರೆಯುವ ಬದಲು, ಕಲೆಯು ಪ್ರೇಕ್ಷಕನ ಅಂತರಂಗವನ್ನು ಮುಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿ ನೋಡಬೇಕು.

ರಸಾನುಭವ ಮತ್ತು ಹದ:

ಪ್ರತಿಭೆ ಮತ್ತು ರಸಾನುಭವವು ಕೇವಲ ಪಂಡಿತರ ಸ್ವತ್ತಲ್ಲ. ಭವಭೂತಿಯು ಪಂಡಿತರ ಅವಹೇಳನವನ್ನು ಲೆಕ್ಕಿಸದೆ ಜನಸಾಮಾನ್ಯರತ್ತ ಮುಖ ಮಾಡಿದ್ದೇ ಈ ಕಾರಣಕ್ಕಾಗಿ. ರಂಗಭೂಮಿಯಲ್ಲಿ ಯಾವುದೂ ಅತಿಯಾಗಬಾರದು ಎಂಬುದು ನಿಜ, ಆದರೆ ಪ್ರೇಕ್ಷಕನ ನೈಜ ಸ್ಪಂದನೆಯನ್ನು ಹತ್ತಿಕ್ಕುವುದು ರಸಭಂಗಕ್ಕೆ ದಾರಿಯಾಗುತ್ತದೆ.

ಸಮಾನಧರ್ಮಿಯ ಹುಡುಕಾಟ:

ಭವಭೂತಿಯು ಹೇಳಿದಂತೆ, ‘ಉತ್ಪತ್ಸ್ಯತೇ ಮಮ ತು ಕೋಪಿ ಸಮಾನಧರ್ಮಾ’ “ನನ್ನ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಮಾನಮನಸ್ಕರು ಎಲ್ಲೋ ಇದ್ದೇ ಇರುತ್ತಾರೆ. ಆ ಸಮಾನಮನಸ್ಕರು ಇಂದು ಸಿಳ್ಳೆ ಅಥವಾ ಮೆಚ್ಚುಗೆಯ ಮೂಲಕ ತಮ್ಮ ಸಮ್ಮತಿಯನ್ನು ಸೂಚಿಸುತ್ತಿದ್ದಾರೆ ಅಷ್ಟೆ. ಕಲಾವಿದ ಮತ್ತು ಪ್ರೇಕ್ಷಕರ ನಡುವಿನ ಈ ಸಾಮರಸ್ಯವೇ ರಂಗಭೂಮಿಯ ಸಾರ್ಥಕತೆ”.

ಈ ವಿಚಾರವನ್ನು ಆಧುನಿಕ ಕಾಲದಲ್ಲಿ ಅಮೇರಿಕದ ನಟ ಮತ್ತು ರಂಗಭೂಮಿ ಚಿಂತಕ Willem Dafoe ಮತ್ತೊಂದು ಭಾಷೆಯಲ್ಲಿ ಪುನರುಚ್ಚರಿಸುತ್ತಾನೆ ಅವರ ವಿಶ್ವ ರಂಗಭೂಮಿ ದಿನದ ಸಂದೇಶದಲ್ಲಿ ರಂಗಭೂಮಿಯನ್ನು “ಜೀವಂತ ಉಸಿರುಳ್ಳ ಪ್ರತಿರೋಧ” ಎಂದು ಕರೆಯುತ್ತಾರೆ. ಡಿಜಿಟಲ್ ಯುಗದಲ್ಲಿ ಮಾನವನು ಪರದೆಗಳ ಹಿಂದೆ ಒಂಟಿಯಾಗುತ್ತಿರುವಾಗ, ರಂಗಭೂಮಿ ಮಾತ್ರ ಮಾನವರನ್ನು ಒಂದೇ ಸ್ಥಳದಲ್ಲಿ, ಒಂದೇ ಕ್ಷಣದಲ್ಲಿ, ಒಂದೇ ಅನುಭವದಲ್ಲಿ ಒಂದಾಗಿಸುತ್ತದೆ. ಈ ಸಹಭಾಗಿತ್ವವೇ ರಂಗಭೂಮಿಯ ವೈಶಿ ಷ್ಟ್ಯವಾಗಿದೆ. ಹಾಗಾಗಿ  ಪ್ರೇಕ್ಷಕರ ಪಾತ್ರ ಅತ್ಯಂತ ಮುಖ್ಯವಾಗುತ್ತದೆ. ರಂಗಭೂಮಿ ಒಂದು ದಿಕ್ಕಿನ ಸಂವಹನವಲ್ಲ; ಅದು ಪರಸ್ಪರ ಕ್ರಿಯೆ. ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರಿಂದ ತಕ್ಷಣದ ಪ್ರತಿಕ್ರಿಯೆ ಚಪ್ಪಾಳೆ, ಮೆಚ್ಚುಗೆಯ ಕೂಗು, ಕೆಲವೊಮ್ಮೆ ಸಿಳ್ಳೆ ಇವೆಲ್ಲವೂ ಈ ಸಂವಾದದ ಅಂಗಗಳೇ. ಭಾರತೀಯ ರಂಗಭೂಮಿಯ ಪರಂಪರೆಯಲ್ಲಿ, ವಿಶೇಷವಾಗಿ ಯಕ್ಷಗಾನ, ಹರಿಕಥೆ, ಭಾಗವತಾರಾಧನೆ ಮುಂತಾದ ರೂಪಗಳಲ್ಲಿ, ಪ್ರೇಕ್ಷಕರ ಸ್ಪಂದನೆ ಸಹಜ ಮತ್ತು ಅಗತ್ಯ.

ಈ ಹಿನ್ನೆಲೆಯಲ್ಲಿಯೇ ಪ್ರೇಕ್ಷಕರ ಸಿಳ್ಳೆ ಅಥವಾ ಮೆಚ್ಚುಗೆಯ ಪ್ರತಿಕ್ರಿಯೆ ಅತಿರೇಕವಲ್ಲ; ಅದು ರಂಗಭೂಮಿಯ ಸಹಜ ಭಾಗ. ಭಾಗವತರ ಹಾಡಿಗೆ ಯಾರೋ ಮೆಚ್ಚುಗೆ ಸೂಚಿಸುವುದು ರಸಭಂಗವಾಗುವುದಿಲ್ಲ; ಅದು ರಸದ ಸ್ವಾಭಾವಿಕ ಅಭಿವ್ಯಕ್ತಿ. ಆದರೆ ಅವರು ಸೂಚಿಸುವ ಮುಖ್ಯ ಅಂಶ ಯಾವುದೂ ಅತಿಯಾಗಬಾರದು; ಎಲ್ಲವೂ ಹದದಲ್ಲಿ ಇರಬೇಕು. ಇಲ್ಲಿಯೇ ರಂಗಭೂಮಿಯ ಸೂಕ್ಷ್ಮ ಸೌಂದರ್ಯ ಅಡಕವಾಗಿದೆ. ಪ್ರೇಕ್ಷಕರ ಪ್ರತಿಕ್ರಿಯೆ ರಸವನ್ನು ಗಾಢಗೊಳಿಸಬೇಕು; ಅದನ್ನು ತುಂಡರಿಸಬಾರದು. ಅತಿಯಾದ ಗದ್ದಲ, ನಿಯಂತ್ರಣವಿಲ್ಲದ ಸ್ಪಂದನೆ, ಕಲಾವಿದರ ಅಭಿನಯದ ಲಯವನ್ನು ಭಂಗಪಡಿಸಿದರೆ, ಅದು ಕಲೆಗೇ ವಿರೋಧಿಯಾಗುತ್ತದೆ. ಹೀಗಾಗಿ, ಪ್ರತಿಕ್ರಿಯೆ ಅಗತ್ಯವಾದರೂ ಅದು ಸಂಯಮಿತವಾಗಿರಬೇಕು.

ಈ ವಿಚಾರವನ್ನು ಭಾರತೀಯ ಕಾವ್ಯಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಅಭಿನವ ಗುಪ್ತ ವಿವರಿಸಿದ  ಸಾಧಾರಣೀಕರಣ ತತ್ತ್ವ ಇಲ್ಲಿ ಪ್ರಸ್ತುತವಾಗುತ್ತದೆ. ನಾಟಕದಲ್ಲಿ ಪ್ರೇಕ್ಷಕರು ತಮ್ಮ ವೈಯಕ್ತಿಕ ಭಾವನೆಗಳನ್ನು ಮರೆತು ಸಾಮಾನ್ಯ ಮಾನವೀಯ ಅನುಭವದಲ್ಲಿ ಒಂದಾಗುತ್ತಾರೆ. ಈ ಸ್ಥಿತಿಯಲ್ಲಿ ಅವರ ಪ್ರತಿಕ್ರಿಯೆಯೂ ವೈಯಕ್ತಿಕ ಅತಿರೇಕವಾಗಿರದೆ, ಸಮೂಹದ ರಸಾನುಭವಕ್ಕೆ ಹೊಂದಿಕೊಂಡಿರಬೇಕು.

ಹೀಗಾಗಿ, ರಂಗಭೂಮಿ ಜೀವಂತವಾಗಿರಲು ಜನರ ನಡುವೆ ಇರಬೇಕು; ಜನರ ನಡುವೆ ಇದ್ದಾಗ ಪ್ರೇಕ್ಷಕರ ಸ್ಪಂದನೆ ಅನಿವಾರ್ಯ. ಆದರೆ ಆ ಸ್ಪಂದನೆ ಹದವನ್ನು ಮೀರಿ ರಸವನ್ನು ಭಂಗಪಡಿಸಬಾರದು. ಭವಭೂತಿ ಜನರತ್ತ ರಂಗಭೂಮಿಯನ್ನು ತಂದ ರೀತಿಗೂ “Willem Dafoe” ಆಧುನಿಕ ರಂಗಭೂಮಿಯ ಕುರಿತು ಹೇಳಿದ ಆಶಯಕ್ಕೂ ಒಂದೊಕ್ಕೊಂದು ಹೋಲಿಕೆಯಾಗುತ್ತದೆ. “ರಂಗಭೂಮಿ ಜೀವಂತ ಸಂವಾದ; ಆ ಸಂವಾದದಲ್ಲಿ ಉತ್ಸಾಹವೂ ಬೇಕು, ಸಂಯಮವೂ ಬೇಕು.

‍ಲೇಖಕರು avadhi

28 March, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading