ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಓದಿದ ‘ಬಿಸಿ ಬಿಸಿ ಬಾತು’

ಮತ್ತೆ ಮತ್ತೆ  ಚಪ್ಪರಿಸಬೇಕೆನ್ನುವ ಪದ್ಯಗಳ ಸಂಕಲನ -ಬಿ ಸಿಬಿಸಿ ಬಾತು

ಗುಂಡುರಾವ್ ದೇಸಾಯಿ

*

” ದೇವರ ಪೆಪ್ಪರಮೆಂಟೇನಮ್ಮ

ಗಗನದೊಳಲೆಯುವ ಚಂದಿರನು ?

ಎಷ್ಟೇ ತಿಂದರು ಖರ್ಚೆ ಆಗದ

ಬೆಳೆಯುವ ಪೆಪ್ಪರಮೆಂಟಮ್ಮಾ !”

ಎನ್ನುವ ಕುವೆಂಪು ಅವರ ಕವಿತೆಯಂತೆ ಕುಕ್ಕುಂದಾ ಅವರ ಮಕ್ಕಳ ಕವಿತೆಯ ವ್ಯಾಮೋಹಕ್ಕೆ ಒಳಗಾದರೆ ಮತ್ತೆ ಮತ್ತೆ ಓದಬೇಕು ಎನಿಸದೆ ಇರದು. ಪೇಪರಮೆಂಟನ್ನು ಚೀಪಿದ ಮೇಲೆಯೂ ಅದರ ಸವಿ ಉಳಿಯುವ ಹಾಗೆ ಓದಿದ ನಂತರವೂ ಆ ಗುಂಗಿನಲ್ಲಿ ಹೊರಬರದಂತೆ ಕಾವ್ಯ ರಚಿಸುವಲ್ಲಿ ನಿಸ್ಸೀಮರು, ಹಾಸ್ಯ, ವ್ಯಂಗ್ಯ ಕೊನೆಯಲ್ಲಿ ನೀಡುವ ಪಂಚ್ ನಿಂದಾಗಿ ಮನಸ್ಸಿಗೆ ಮುದ ನೀಡುತ್ತವೆ.

“ಚಂದಾ‌ಮಾಮಾ ಬಾಬಾ ಅಂದೆ

ಭೂಮಿಗಿಳಿದು ಬಂದ

ಬೆನ್ನಿಗೊಂದು ಬ್ಯಾಗ್ ಹಾಕಿ

ಸ್ಕೂಲಿಗೂನು ಬಂದ’

ಬಂದ ಮೇಲೆ‌ಆಗುವ ಕತೆ ಕೇಳಿ

ಮಿಸ್ ಗೆ ಕೈಗೆ ಸಿಕ್ಕ ಚಂದ್ರ

” ಅ ಆ ಇ ಈ ಉ ಊ’ ಎಲ್ಲ‌

ಮೊದ್ಲೆ ಬರ್ದುಬಿಟ್ಟ

ಹೋಹೋ ಹೋಹ್ಹೋ ಅಂತ

ಭಾರಿ ಮೆರ್ದುಬಿಟ್ಟ”

ಮುಂದೆನಾಯ್ತು ನೋಡಿ

” ಮಿಸ್ ಬಂದು‌ ಹೇಳಿ ಬಿಟ್ರು

ಬರಿಯೋ ನೂರು ಸಾರಿ

ಇವನು ಹೇಳಿ ಹೊರಟುಬಿಟ್ಟ

ಐಯ್ಯಾಮ್ ವೆರಿ ಸಾರಿ’

ಹೀಗೆ ಮಕ್ಕಳಿಗೆ ಮದನೀಡುವ ಇವರ ಕವಿತೆಗಳು

ಸಣ್ಣದಾಗಿ‌ಮಕ್ಕಳ‌ಮನಸದ ಭಾವಗಳನ್ನು ವ್ಯಂಗ್ಯವಾಗಿ ವಿಡಂಬಿಸುತ್ತಾರೆ.

“ಅಮ್ಮ ಒಬ್ರು ಆಂಟಿ ಜೊತೆ

ಹರಟೆ ಹೊಡಿತಾರರ

ಅಪ್ಪ ಅಂತು‌ನಾಯಿ‌ ಹಿಡ್ದು

ವಾಕ್ ಹೊರಡ್ತಾರೆ’ ಅಂತ ಎಲ್ಲರೂ ಏನು ಮಾಡುತ್ತಾರೆ ಎಂದು ಹೇಳುತ್ತಾ

” ಹಗಲು ರಾತ್ರಿ ನಂಗೆ ಮಾತ್ರ

ಓದು ಅಂತಾರೆ

ಎಲ್ರು ಸೇರಿ‌ಸುಮ್ನೆ ನನ್ನ

ತಲೆತಿಂತಾರೆ’

ಎನ್ನುತ್ತಾ

” ದೊಡ್ಡೋರಂತ ದೊಡ್ಡೋರೆಲ್ಲ

ಯಾಕೆ ಇರ್ತಾರೆ?

ಸಣ್ಣೋರಂತ ಸಣ್ಣೋರ್ನೆಲ್ಲ

ಸಣ್ಣಮಾಡ್ತಾರೆ”

ಎನ್ನುವ ಮೂಲಕ ಮಗುವಿನ ನಿಜಭಾವ ವ್ಯಕ್ತಪಡಿಸುತ್ತಾರೆ.

“ಹೋಂ ವರ್ಕ ಹೋಂ ವರ್ಕ ಏನ್ಮಾಡೋದು

ಕಸಾ ಗುಡ್ಸಿ ಮನೇನೆಲ್ಲಾ ಸ್ವಚ್ಛ ಇಡೋದು

ಹಿತ್ತಲ ಗಿಡಕ ನೀರ್ಬಿಟ್ಟು ತಂಪು ಮಾಡೋದು

ಎಣ್ಣೆ ಹಚ್ಚಿ ಹೆಂಚಿನ ಮೇಲೆ‌ದೋಸೆ ಹುಯ್ಯೋದು

ಡಬ್ಬಿ ತೆಗ್ದು ಉಂಡಿ ತಿಂದು ಗಪ್ಪ ಮಾಡೋದು’

ಕೊನೆಯಲ್ಲಿ

ಹೋಂವರ್ಕ್ ಹೋಂ ವರ್ಕ್ ಏನ್ಮಾಡೋದು

ಅಜ್ಜಾಜ್ಜಿನ ಗೋಳಾಡ್ಸಿ ಸುಮ್ನೆ ಕಾಡೋದು’

ಎಂದು‌ ಮಕ್ಕಳ ಮನಸ್ಸನಿನ ಹೋಂವರ್ಕ್ ನ ಪರಿಭಾಷೆಯನ್ನು ಬಯಲು ಮಾಡುತ್ತಾರೆ.

‘ಇರ್ವೆಗೆ ನೆಗಡಿ ಬಂದ್ರೆ

ಮೂಗು ಹೇಗೆ ಒರ್ಸೋದು?

ಮೈ ತಿಂಡಿ ಬಿಟ್ರೆ ಹೇಗಪ್ಪಾ ತುರ್ಸೋದು?”

” ಸಂಡೇ ನೀನು ಕರ್ದಾಗೆಲ್ಲ ಬಾರಪ್ಪಾ ಬಾರೋ

ವಾರಕ್ಕೊಮ್ಮೆ ಬರ್ತಿಯಲ್ಲ ಯಾಕಪ್ಪ ಹೀರೋ”

“ಕಾಡಿಗೆ ಹೋಗೊ ರಾಮ ಸೀತೆ

ಈಗೆಲ್ಲ? ಈಗೆಲ್ಲಿ?

ಒಂದು ವೇಳೆ ಇದ್ರು ಅನ್ಕೋ

ಕಾಡೆಲ್ಲಿ ? ಕಾಡೆಲ್ಲಿ?'”

“ಛಳಿ ಛಳಿ’ ಎಂದು ನಡುಗತಲಿತ್ತು

ವೂಲನ್ ಸ್ವೇಟರು

ಸೆಕೆ ಸೆಕೆ ಎಂದು ಬೆವರುತಲಿತ್ತು

ಫ್ರಿಡ್ಜಿನ ಕವರು”

“ಯಾಕೋ ನಮ್ಗೆ ಹೀಗನಿಸುತ್ತೆ

ಸ್ಕೂಲೇ ಇರ್ಬಾರ್ದು

ಸ್ಕೂಲ್ ಇದ್ರನೂ

ತಲೆನೋವಂತ ಮಿಸ್ಸೇ ಬರ್ಬಾರ್ದು”

“ಸೋನಪಾಪಡಿ

ಸೋನ ಪಾಪಡಿ

ತಂದವರ್ಯಾರು

ಊರಿಗೆ ಸುದ್ದಿ ಹೇಳ್ತಿದ್ರಲ್ಲ

ಅಮ್ಮನ ಫ್ರೆಂಡು”

ಹೀಗೆ ಅಂತ ಅನೇಕ ಚಂದದ, ಕವಿತೆಗಳು, ಪ್ರಾಸ ಪದಗಳು ಅವರ ಸಂಕಲನದ ಬತ್ತಳಕೆಯಲ್ಲಿ ಕಾಣುವ ನಗೆ ಬಾಣಗಳು. ಡುಂಡಿರಾಜ ಹನಿಗವಿತೆಯ ಸಾಮ್ರಾಟರಾದರೆ ಕುಕ್ಕುಂದಾ ಅವರು ಮಕ್ಕಳ ಕಾವ್ಯ ಸಾಹಿತ್ಯದ ನಗೆ ಸಾಮ್ರಾಟರೆಂದರೆ ತಪ್ಪೆನಿಲ್ಲ ಎನಿಸುತ್ತದೆ. ಶ್ರೀನಿವಾಸ ಉಡುಪ ಅವರ ನಂತರ ಸಶಕ್ತವಾಗಿ ಮಗುವಾಗಿ ವಿನೋದ‌ ವಿಡಂಬನೆಯೊಂದಿಗೆ  ಬರೆಯುತ್ತಿರುವ ಕುಕ್ಕುಂದಾ ಅವರದು ವಿಭಿನ್ನ ಮಾರ್ಗ.

ಇಂತಹ ಕವಿತೆಗಳನ್ನು ‘ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಗಿನಾ ನದಿ ತೀರದ ‘ಕುಕ್ಕುಂದಾ’ ಗ್ರಾಮದವರರು. ಸಣ್ಣ ಮಕ್ಕಳಿಗೆ ಪಾಠ ಮಾಡುವ ಮೇಷ್ಟ್ರು ಎಂದು ಭಾವಿಸಿದವರೆ ಹೆಚ್ಚು. ಅವರು ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಇಲೆಕ್ಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಂಯೋಜಿತ ಪ್ರಾಧ್ಯಾಪಕರು.

ಶಿಶುಕಾವ್ಯದಲ್ಲಿ ಬಾಲ್ಯದಿಂದಲೂ ಆಸಕ್ತಿ ತಳೆದಿರುವ ಅವರು ತಮ್ಮ ಸಹಜ-ರಮ್ಯ-ವಿಶಿಷ್ಟ ಕಾವ್ಯ ಪ್ರಯೋಗಗಳಿಂದ ಕಾವ್ಯಾಸಕ್ತರ ಗಮನ ಸೆಳೆದವರು; ಮಕ್ಕಳ ಸಾಹಿತ್ಯಾಸಕ್ತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ‘ಸಂಧ್ಯಾ’ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡವರು. ಅವರ ಕವಿತೆಗಳು ಕರ್ನಾಟಕ ಮತ್ತು ಮಹಾರಾಷ್ಟದ ಪಠ್ಯಪುಸ್ತಕಗಳಲ್ಲಿ ಮತ್ತು ಶಿಶುಗೀತೆಯ ಅಲ್ಬಂಗಳಲ್ಲಿ ಸೇರಿವೆ; ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಆಕಾಶವಾಣಿಯಲ್ಲಿಯೂ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರಗೊಂಡಿವೆ. ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಹಲವು ಬಾರಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ ೨೦೧೨ನೇ ಸಾಲಿನ ‘ನಾ ಡಿಸೋಜಾ’ ಪುರಸ್ಕಾರ, ಸೇಡಂನ ಮುನ್ನೂರು ಪ್ರತಿಷ್ಠಾನದ ೨೦೧೩ನೇ ಸಾಲಿನ ‘ಅಮ್ಮ’ ಪುರಸ್ಕಾರ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ೨೦೨೦-೨೧ ನೇ ಸಾಲಿನ  ಗೌರವ ಪ್ರಶಸ್ತಿ ಇವರಿಗೆ ಸಂದಿವೆ. ಜಿ.ಬಿ.ಹೊಂಬಳ ಮೊದಲಾದ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಈ ಕೃತಿಗೆ 2024ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ನಗುವಿನ ಅಲೆ ಎಬ್ಬಿಸುವ ವಾಸ್ತವ ಮಕ್ಕಳ ಕವಿತೆಗಳಿಗೆ ಮಾತ್ರ ತಮ್ಮ ಪರಿಧಿ ಯನ್ನು ಸೀಮಿತಗೊಳಿಸಿಕೊಂಡಿರುವ  ಕುಕ್ಕುಂದಾ  ಅವರಿಂದ ಮಕ್ಕಳ ಕತೆಗಳು, ಕಾದಂಬರಿಗಳು ಬರಲಿ ಎನ್ನುವ ಆಶಯ ನಮ್ಮದು.

‍ಲೇಖಕರು avadhi

28 March, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading