ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಓದಿದ ‘ಹುಲಿಮನೆ ಆಟ’


ಓದುಗರನ್ನು ಆಡಿಸುವ ಹುಲಿ ಮನೆ ಆಟ

– ಗುಂಡುರಾವ್ ದೇಸಾಯಿ

*

‘ದಿನಾ ದಿನಾ ದೇವರು ಗುಡಿ ಗುಂಡಾರ ಅಂತ ಬಂದ್ರೆ ಎಲ್ಲಿಂದ ತರಾದು, ರಕ್ಕೇನು ಗಿಡಕ್ಕುದ್ರಾತಾವೇನು?ಮೊನ್ನೆ ಗುಡಿ ಕಟ್ಟುತ್ತೀವಿ ಅಂದ್ರಿ, ಎಕರೆಗೀಟ್ ಕೊಟ್ಟಿವಿ, ಓಪನಿಂಗ್ ಅಂದ್ರಿ, ಪುರಾಣಅಂದ್ರಿ, ಈಗ ದೇವರು ಮಾಡ್ತೀವಿ ಅಂತ ಬಂದೀರಿ. ಹೆಂಡ್ರು ಮಕ್ಕಳನ್ನ ಒತ್ತಿಟ್ಟು ಕೊಡಬೇಕು ನೋಡಪ್ಪ ನಿಮಗ ‘ ಎನ್ನುವ ಬೀರಪ್ಪನ ಮಾತುಗಳು ಎಲ್ಲಾ ಸಮುದಾಯಗಳಲ್ಲಿ ದೇವರ ಹೆಸರಿನಲ್ಲಿ ಆರ್ಥಿಕವಾಗಿ ಹಿಂದುಳಿದವರ ಮೇಲೆ ಮಾಡುತ್ತಿರುವ ಶೋಷಣೆಗೆ ಪ್ರಮುಖ ನಿದರ್ಶನವಾಗಿದೆ. ಬೀರಣ್ಣ ಹೇಳುವ ಹಾಗೆ ‘ರಕ್ಕ ಇದ್ದೋರ್ದು ಒಂದು ಕುಲ ಇಲ್ದೋರ್ದು ಒಂದು ಕುಲ’ ಎನ್ನುವುದು ವಾಸ್ತವ ಸತ್ಯವಾಗಿದೆ.

ಇದು ರಾಯಚೂರು ಜಿಲ್ಲೆಯ ಪ್ರತಿಭಾವಂತ ಕಥೆಗಾರ ಶರಣಬಸವ ಕೆ ಗುಡಿದಿನ್ನಿ ಅವರ ‘ಹುಲಿಮನೆ ಆಟ’ ಕಥಾಸಂಕಲದ ‘ಅಂಗಾಲ ಕಣ್ಣವರು’ ಕಥೆಯಲ್ಲಿ ಬರುವ ಮಾತು. ಈಗಾಗಲೇ ‘ಧಣಿರಭಾವಿ’ ‘ಏಳು ಮಲ್ಲಿಗೆ ತೂಕದವಳು’ ಎರಡು ಪ್ರಮುಖ ಕಥಾಸಂಕಲನಗಳ ಮೂಲಕ ಕಥಾ ಸಾಹಿತ್ಯದಲ್ಲಿ ಗಟ್ಟಿ ಹೆಜ್ಜೆಗಳನ್ನು ಇಟ್ಟಿರುವ ಮಿತ್ರ ಶರಣಬಸವ ಕೆ.ಗುಡದಿನ್ನಿಯವರ ಮೂರನೇ ಕಥಾ ಸಂಕಲನ ‘ಹುಲಿ ಮನೆ ಆಟ’ ಯಾವುದೇ ಮುನ್ನುಡಿ ಬೆನ್ನುಡಿ ಅನಿಸಿಕೆಗಳಿಲ್ಲದೆ ಹೊರಬಂದಿರುವ ಕಥೆಗಾರನ ಆತ್ಮವಿಶ್ವಾಸದ ಕಥಾ ಸಂಕಲನ. ಇಲ್ಲಿಯ ಒಂಬತ್ತು ಕಥೆಗಳು ಭಿನ್ನ ಕಥಾ ಹೊಂದಿರುವ ಕಥೆಗಳಾಗಿವೆ. ಕಥೆಗಳ ಓದು ಹುಲಿ ಮನೆ ಆಟದಂತೆ ಪಾತ್ರಗಳ ವಿಶ್ಲೇಷಣೆ ಗೆ ಸವಾಲಾಗಿ ನಿಲ್ಲುತ್ತದೆ. ಗುಡುದಿನ್ನಿ ಯವರ ಹೆಚ್ಚುಗಾರಿಕೆ ಇರುವುದು ತನ್ನ ಸುತ್ತಲೂ ನಡೆಯುವ ಘಟನೆಗಳನ್ನು ಕಥನವಾಗಿಸುವ,ತನ್ನ ಬದುಕಿನ ಸಂಗತಿಗಳನ್ನು ಬಳಸಿಕೊಂಡು ರಾಯಚೂರಿನ ಭಾಷೆಯನ್ನು ಸಶಕ್ತವಾಗಿ ದುಡಿಸಿಕೊಳ್ಳುವ ಕಲೆಗಾರಿಕೆಯಲ್ಲಿ. ವಿಭಿನ್ನ ಕಥಾ ವಸ್ತು, ನಿರೂಪಣ ಶೈಲಿ, ಜನಸಾಮಾನ್ಯರ ಮಾತುಗಳನ್ನು ಯಥಾವತ್ತಾಗಿ ಬಳಸಿಕೊಳ್ಳುವಿಕೆಯಿಂದ ಕಥೆಗಳು ಜೀವಂತಿಕೆಯನ್ನು ಪಡೆಯುತ್ತವೆ. ಪಾತ್ರಗಳು ಮೂಲಕ ಮಾತಾಡಿಸುವ ವೈಚಾರಿಕ ಚಿಂತನೆ ಬೆರಗು ಮೂಡಿಸುತ್ತದೆ.

ಕೆಲ ಕಥೆಗಳ ಪಾತ್ರಗಳು ಆಪ್ತತೆಯನ್ನು ತಂದು ಕೊಟ್ಟರೆ, ಬಹುತೇಕ ಕಥೆಗಳ ಪಾತ್ರಗಳು ಮನಸ್ಸನ್ನು ತಲ್ಲಣಗೊಳಿಸಿ ಭಾರವಾಗಿಸುತ್ತವೆ.

ಗ್ರಾಮೀಣ ಬದುಕಿನ ಕಷ್ಟಗಳು ಸಂವೇದನೆಗಳು ಶೋಷಣೆ, ಪ್ರತಿರೋಧವಾಗಿ ತಮ್ಮ ಆಲೋಚನೆಗಳನ್ನು ಆಪ್ತವಾಗಿ ಕಟ್ಟಿಕೊಡುವ ಶಕ್ತಿಯನ್ನು ಅವರ ಜೀವನಾನುಭವ ದಕ್ಕಿಸಿ ಕೊಟ್ಟಿದೆ.

ಅಂಗಾಲ ಕಣ್ಣವರು ಕಥೆಯ ಬೀರಪ್ಪ, ಹುಲಿ ಮನೆ ಆಟದ ಶಿವರಾಜಪ್ಪ ಮೇಷ್ಟ್ರು, ನನಗೆ ರೆಕ್ಕೆಗಳಿಲ್ಲ ಕಥೆಯ ಸಿದ್ದಪ್ಪ ಮೇಷ್ಟ್ರು ಪಾತ್ರಗಳು ವಿಭಿನ್ನ ಯೋಚನೆ ಯಿಂದ ಸೆಳೆದರೆ

ಗುಲಾಬಿ ಬಣ್ಣದ ಬೂಟಿನ ಸಾಂತವ್ವ, , ಬಿಜ್ಜಮ್ಮನ ಕೆರೆ ಯ ಹುಸೇನವ್ವ, ಶಿಲುಬೆ ಕತೆಯ ಲಕ್ಷ್ಮಿ ಕಾಡುತ್ತಾರೆ , ದಿಟ್ಟೆ ಅಹಲ್ಯಾ ಇಷ್ಟವಾಗುತ್ತಾಳೆ . ಮಗುವಿನ ಲೋಕದಲ್ಲಿ ಸ್ವಗತದಂತೆ ಅರಳಿದ ಸೈಕಲ್ ಕತೆ ವಿಭಿನ್ನ ಎನಿಸುತ್ತದೆ.

‘ಪ್ರೀತಿಯ ಹೊರತಾಗಿ ಯಾವ ಬೆಳಕು ಎದೆಯ ಬೆಳಗಲಾರದು’ ಎಂಬ ಭಾವದ ಶರಣಬಸವ ಕೆ ಗುಡುದಿನಿಯವರು ನೆಚ್ಚಿನ ನಾಯಿ ಟಾಮಿಯ ಹೆಸರಿನಲ್ಲಿ ಪ್ರಕಾಶನವನ್ನು ಆರಂಭಿಸಿ ಈ ಕೃತಿಯನ್ನು ಹೊರ ತರುತ್ತಿದ್ದಾರೆ. 84 ಪುಟದ 150 ರೂಪಾಯಿ ಬೆಲೆಯ ಹುಲಿಮನೆ ಆಟಕ್ಕೆ ಡಿ.ಕೆ ರಮೇಶ್ ಅವರು ಚಂದದ ಮುಖಪುಟವನ್ನು ಮಾಡಿದ್ದಾರೆ. ಕ್ರಿಕೆಟನ್ನು ಕಥೆಗಳಷ್ಟೇ ಪ್ರೀತಿಸುವ, ಮಕ್ಕಳ ಮೇಲೆ ಅಪಾರ ಭರವಸೆ ಇಟ್ಟಿರುವ ಶರಣಬಸವ ಅವರು ಅರ್ಪಣೆಯಲ್ಲಿ ಹೇಳಿಕೊಂಡಿರುವಂತೆ ಆರೋಗ್ಯಕ್ಕೆ ತೊಂದರೆ ಕೊಡುವ ಜೀರೋಡಾಲ್ – ಪಿ ಮಾತ್ರೆಯ ದಾಸರಾಗದೆ ಬದುಕಿನಲ್ಲಿ ಬರುವ ನೋವುಗಳನ್ನು ಕಥೆಗಳನ್ನು ಬರೆಯುತ್ತಾ ಕಳೆದುಕೊಳ್ಳಲಿ ಎಂದು ಆಶಿಸಿ ಸಂಕಲನದ ಯಶಸ್ಸಿಗೆ ಶುಭ ಕೋರುವೆ

‍ಲೇಖಕರು avadhi

21 March, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading