ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಋಣಮುಕ್ತತೆಯನ್ನು ಹಂಬಲಿಸಿ ಬಂದವಳು


ಸುಮಾರು ಒಂದು ವರ್ಷದ ಹಿಂದೆ ಒಂದು ಅಮಾವಾಸ್ಯೆಯ ದಿನ. ಪೇಶಂಟ್ ಗಳನ್ನು ನೋಡುವುದು ಬೇಗ ಮುಗಿದಿತ್ತು. ಅಮಾವಾಸ್ಯೆ, ಹುಣ್ಣಿಮೆ, ‘ಕರಿ’ ಮತ್ತು ಹಬ್ಬಗಳಂದು ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಎಲ್ಲರೂ ಆರೋಗ್ಯದಿಂದಿರಲು ದಿನವೂ ಹಬ್ಬಗಳಿರುವುದು ಒಳ್ಳೆಯದೇನೋ ಎಂದು ಹಲವು ಬಾರಿ ಯೋಚಿಸಿದ್ದೇನೆ…!! ನಾನು ನನ್ನ ಚೇಂಬರ್ ನಿಂದ ಇನ್ನೇನು ಹೊರಡಬೇಕು, ಆಗ ಸುಮಾರು ನಲವತ್ತು ವರ್ಷ ವಯಸ್ಸಿನ ಒಬ್ಬ ಹೆಂಗಸು ಬಂದಳು.
ತಲೆಯ ಮೇಲೆ ಒಂದಿಂಚಿನಷ್ಟೇ ಉದ್ದದ ಕರಿ ಬಿಳಿ ಮಿಶ್ರಿತ ಉರುಟಾದ ಕೂದಲು. ಹಣೆಯಲ್ಲಿ ಕುಂಕುಮವಿಲ್ಲ. ಹಿಂದೊಮ್ಮೆ ಸುಂದರಿಯಾಗಿರಬಹುದಾದ ಲಕ್ಷಣಗಳು. ಕೃಶ ಶರೀರ. ಕಣ್ಣಲ್ಲಿ ಕಾಂತಿಯೇನೋ ಇದೆ, ಆದರೆ, ಕಣ್ಣುಗಳು ಒಳಸೇರಿವೆ. ಮುಖದಲ್ಲಿ ಚಿಂತೆ, ಆತಂಕ, ನೋವು ತುಂಬಿದೆ. ಸಣ್ಣಗೆ ಬೆವರುತ್ತಿದ್ದಾಳೆ. ಸ್ವಲ್ಪ ಉಬ್ಬಸವೂ ಇದೆ. ಹಲವು ದಶಕ ವೈದ್ಯಕೀಯದಲ್ಲಿದ್ದ ನನಗೆ, ಅವಳು ತುಂಬ ಕಷ್ಟ ಅನುಭವಿಸುತ್ತಿದ್ದಾಳೆಂದು ತಿಳಿದುಕೊಳ್ಳಲು ತಡವಾಗಲಿಲ್ಲ. ಅವಳನ್ನು ಈ ಮೊದಲು ನೋಡಿದ್ದೇನೆ, ಎನಿಸತೊಡಗಿತ್ತು. ನನ್ನ ಚೇಂಬರ್ ಒಳಗೆ ಬರುತ್ತಲೇ ಎರಡೂ ಕೈಮುಗಿದು “ನಮಸ್ಕಾರ್ರೀ, ಸಾಹೇಬ್ರ. ನನ್ನ ಗುರ್ತ ಸಿಕ್ಕತೆನ್ರೀ” ಅಂದಳು. ದಿನಾಲು ನೂರಾರು ಪೇಶಂಟ್ ಗಳನ್ನು ನೋಡುತ್ತಿದ್ದರೂ ಬಹುತೇಕ ಜನ ನನಗೆ ನೆನಪಿರುತ್ತಾರೆ. ಹೆಸರು ನೆನಪಿಲ್ಲದಿದ್ದರೂ ವ್ಯಕ್ತಿಗಳನ್ನು ಮತ್ತೆ ಅವರ ಹಿಂದಿನ ರೋಗಗಳನ್ನೂ ತಕ್ಕ ಮಟ್ಟಿಗೆ ನೆನೆಪಿಟ್ಟಿರುತ್ತೇನೆ. ಅದೇಕೋ ಇವಳ ಬಗೆಗೆ ನೆನಪಾಗಲಿಲ್ಲ. ಆದರೂ ಅವಳು ಅಷ್ಟೊಂದು ಆಸೆ, ಭರವಸೆಯಿಂದ ಕೇಳುತ್ತಿರುವಾಗ ‘ನೆನೆಪಿಲ್ಲ’ ಎಂದರೆ ಅವಳಿಗೆ ಬೇಸರವಾದೀತೆಂದು, ಕುಳಿತುಕೊಳ್ಳಲು ತಿಳಿಸಿ, ಸುಮ್ಮನೆ
“ನಿನ್ನ ನೆನಪ ಐತೆವಾ ..ಹ್ಯಾಂಗ ಮರೀತೀನಿ..” ಅಂದೆ.
“ಅದss ಅಂತೀನ್ರಿ ಸಾಹೇಬ್ರ. ಅಷ್ಟ ದೊಡ್ಡ ಬಿಲ್ ಕೊಡಲಾರದ ಹೋದವನ ಹೇಣ್ತಿ, ನಾನು… ನನ್ನ ಹ್ಯಾಂಗ ಮರೀತೀರಿ, ಬಿಡ್ರೀ…” ಅಂದಳವಳು.
ನನ್ನ ದಿಗಿಲು ಈಗ ಹೆಚ್ಚಾಯಿತು. ಯಾವಾಗ ಯಾರು ನನ್ನ ಬಿಲ್ಲು ಕೊಡದೆ ಹೋದರು, ಎನ್ನುವುದು ನೆನಪಾಗುತ್ತಿಲ್ಲ. ಯಾಕೆಂದರೆ, ಬರೆಯುವ ಪ್ರತಿಯೊಂದು ಪುಟಕ್ಕೂ ‘ಮಾರ್ಜಿನ್’ ಇರುವ ಹಾಗೆ ನನ್ನ ಆಸ್ಪತ್ರೆಯ ಬಿಲ್ಲಿನಲ್ಲೂ ‘ರಿಯಾಯತಿ’ಯ ‘ಮಾರ್ಜಿನ್’ ಇಟ್ಟಿರುತ್ತೇನೆ. ಹಲವು ಬಾರಿ ಬರೆಯುವ ಸ್ಥಳಕ್ಕಿಂತ ‘ಮಾರ್ಜಿನ್’ ದೊಡ್ಡದಾಗಿಬಿಡುತ್ತದೆ…! ಇನ್ನೂ ಕೆಲವೊಮ್ಮೆ ಬಡರೋಗಿಗಳಿದ್ದಾಗಲೋ, ಅಥವಾ ‘ ನಮಗ ಬಿಲ್ ಕೊಡಾಕ ಆಗೂದಿಲ್ಲ ನೋಡ ..ಏನ್ ಮಾಡಾವ್ರೂ..?’ ಅನ್ನುವಂಥ ‘ಭೀಕರ’ ಜನ ಇದ್ದಾಗಲೋ, ಇಡೀ ಪುಟವೇ ‘ಮಾರ್ಜಿನ್’ ಆದ ಘಟನೆಗಳೂ ಇವೆ..!! ಹೀಗೆ ಅನೇಕ ಘಟನೆಗಳಿದ್ದದ್ದರಿಂದ ಇವಳ ಗಂಡನ ನೆನಪು ನನಗೆ ಸರಿಯಾಗಿ ಆಗಲಿಲ್ಲ. ಆದರೂ ಸಾವರಿಸಿಕೊಂಡು,
“ನನಗ ಪಕ್ಕಾ ನೆನಪಾಗೊಲ್ಲದು. ಹೋಗ್ಲಿ ಬಿಡವಾ ಅದನ್ನೇನ್ ಮಾಡೂದು. ನಿನ್ನ ತ್ರಾಸ ಏನು ಹೇಳು…” ಅಂದೆ.
ಅದಕ್ಕವಳು ಹಠ ಹಿಡಿದಂತೆ.. “ಇಲ್ರೀ . ಸಾಹೇಬ್ರ, ಅದನ್ನ ನಿಮಗ ನೆನಪ ಮಾಡಿಕೊಟ್ಟ ಮ್ಯಾಲನss ನನ್ನ ತೋರಸ್ಬೇಕಂತ ಬಂದೀನ್ರಿ..” ಎಂದು ಹೇಳಿ ತನ್ನ ಕಥೆ ಪ್ರಾರಂಭಿಸಿದಳು. ಅಮಾವಾಸ್ಯೆಯಾದ್ದರಿಂದ ನಾನೂ ಬಿಡುವಾಗಿದ್ದೆ. ಉಳಿದ ದಿನಗಳಲ್ಲಿ ಕಥೆ ಕೇಳುವುದಂತೂ ದೂರ, ಅವರ ಕಂಪ್ಲೇಂಟ್ ಕೂಡ ಸರಿಯಾಗಿ ಕೇಳಲು ಪುರುಸೊತ್ತಿರುವುದಿಲ್ಲ. ಯಾಕೆಂದರೆ ಎಲ್ಲರೂ ಒಳಗೆ ಬರಲು ಅವಸರ ಪಡುವವರೇ. ಅವಳೂ ಎಲ್ಲ ಹೇಳಬೇಕೆಂದೇ ಹಠ ಮಾಡಿದ್ದಳು. ಕೇಳಬೇಕೆಂದು ಕುಳಿತೆ…
“ಸಾಹೇಬ್ರ, ಎಂಟ ವರ್ಷದ ಹಿಂದ ನನ್ನ ಗಂಡಗ ಕಿಡ್ನೀ ಫೇಲ್ ಆಗಿ ಮೈಯೆಲ್ಲಾ ಬಾತು, ನಿಮ್ಮಲ್ಲಿ ಅಡ್ಮಿಟ್ ಮಾಡಿದ್ದೀವ್ರೀ…..”
ಅವಳು ಹೇಳಲು ಪ್ರಾರಂಭಿಸುವುದರೊಳಗೆ ನನಗೆಲ್ಲ ನೆನಪಾಗಿ ಹೋಯಿತು. ಹೌದು, ಇನ್ನೇನು ಸಾಯಲಿರುವ ಇವಳ ಗಂಡನನ್ನು ಇವಳು ಕರೆತಂದು ಅಡ್ಮಿಟ್ ಮಾಡಿದ್ದಳು. ಸುಮಾರು ಮೂವತ್ತೈದು ವಯಸ್ಸಿನವನಾದ ಅವನಿಗೆ ಯಾವುದೋ ಕಾರಣದಿಂದ ಮೂತ್ರಪಿಂಡಗಳು ನಿಷ್ಕ್ರಿಯವಾಗಿ, ಎಲ್ಲಾ ಆಸ್ಪತ್ರೆಗಳಲ್ಲೂ ತೋರಿಸಿ, ಇನ್ನೇನು ಬದುಕುವುದಿಲ್ಲವೆಂದಾದ ಮೇಲೆ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯಲೆಂದು ಅವರ ಊರಿಗೆ ಸಮೀಪದಲ್ಲಿದ್ದ ನನ್ನ ಆಸ್ಪತ್ರೆಗೆ ಬಂದಿದ್ದರು. ಅನೇಕ ಸಲ ಹೀಗಾಗುತ್ತದೆ. ಎಲ್ಲ ‘ಸ್ಪೆಷಾಲಿಟಿ’, ‘ಸುಪರ್ ಸ್ಪೆಷಾಲಿಟಿ’ ಆಸ್ಪತ್ರೆಗಳನ್ನು ಮುಗಿಸಿ, ಇನ್ನೇನು ಬದುಕುವುದಿಲ್ಲ, ಎನಿಸತೊಡಗಿದಾಗ ತಾಲೂಕಾ ಮಟ್ಟದ ಆಸ್ಪತ್ರೆಗಳಲ್ಲಿ ಅವರನ್ನು ತಂದು ಅಡ್ಮಿಟ್ ಮಾಡುತ್ತಾರೆ, ಮನೆಯಲ್ಲಿ ಸಾಯಬಾರದೆಂದು ಹಾಗೂ ಜನ ನಿಮಿತ್ಯಕ್ಕೆ ಹೆದರಿ. ನಾವೂ ನಮ್ಮ ಆಸ್ಪತ್ರೆಯಲ್ಲಿ ಸಾಧ್ಯವಿರುವ ಆರೈಕೆ ಮಾಡಿ “ಬೀಳ್ಕೊಡುತ್ತೇವೆ”. ಅಂತಹ “ಕೊನೆದಿನಗಳ ಕೇಸು” ಗಳಲ್ಲಿ ಇವಳ ಪತಿಯದೂ ಒಂದು. ಗಂಡನ ಜೊತೆಗೆ ಇವಳೊಬ್ಬಳೆ. ಜೊತೆಗೆ ಹತ್ತು ವರ್ಷದ ಒಬ್ಬ ಮಗ. ಇವಳಿಗೆ ತಂದೆ ತಾಯಿಯರಿಲ್ಲ. ಅವನ ತಂದೆ ತಾಯಿಯರು ಬರುವುದಿಲ್ಲ. ಯಾಕೆಂದರೆ ಇವರದು ಪಾಲಕರನ್ನು ಧಿಕ್ಕರಿಸಿ ಆದ ಪ್ರೇಮ ವಿವಾಹ. ಇವಳೊಬ್ಬಳೆ ಹಗಲು ರಾತ್ರಿಯೆನ್ನದೆ ಅವನನ್ನು ಉಪಚರಿಸಿದ್ದಳು, ಸಾಯುತ್ತಾನೆ ಎನ್ನುವುದನ್ನು ದಿನವೂ ನೆನೆಯುತ್ತ. ಅವಳ ಹಾಗೂ ಅವನ ಕಷ್ಟ ನನಗೆ ನೋಡಲಾಗುತ್ತಿರಲಿಲ್ಲ. ‘ಇನ್ನು ಕೆಲವು ದಿನಗಳಲ್ಲಿ ಸಾವು ಖಂಡಿತ’ ಎಂದು ಗೊತ್ತಿರುವವರ ಮನಸ್ಥಿತಿ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಅವನಿಗೆ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಾಗದೆ ವೈದ್ಯರಾದ ನಮಗೂ ಕೂಡ ಕೆಲವೊಮ್ಮೆ ಖಿನ್ನತೆ ಕಾಡುತ್ತದೆ. ಅವಳಂತೂ ನಿರ್ಲಿಪ್ತಳಾಗಿ ಅವನ ಸೇವೆ ಮಾಡಿಕೊಂಡಿದ್ದಳು. ‘ಮೂತ್ರಪಿಂಡ ಕಸಿ ಮಾಡಿದರೆ ಅವನು ಬದುಕುಳಿಯುವ ಸಂಭವ ಇದೆ, ಪ್ರಯತ್ನಿಸಬಾರದೇಕೆ’ ಎಂದು ನಾನು ಕೇಳಿದಾಗ ಆರ್ತಳಾಗಿ ನನ್ನೆಡೆ ನೋಡಿದ್ದಳು. ‘ಖರ್ಚು ಮಾಡುವವರು, ಮೂತ್ರಪಿಂಡ ದಾನ ಕೊಡುವವರು ಯಾರಿದ್ದಾರೆ’ ಎಂಬರ್ಥದಲ್ಲಿ.

ಹಾಗೆಯೇ ಹಗಲಿರುಳಿನ ಸೇವೆ ಸ್ವೀಕರಿಸಿದ ಅವನು ಹದಿನೈದು ದಿನ ನಮ್ಮ ಆಸ್ಪತ್ರೆಯಲ್ಲಿದ್ದು ಕೊನೆಯುಸಿರೆಳೆದ. ಅವಳು ಶಾಂತಳಾಗಿದ್ದಳು. ಅಳುವ ಮಗನನ್ನು ಎದೆಗಪ್ಪಿಕೊಂಡು ಶೂನ್ಯ ನೋಡುತ್ತಾ. ಅಂತಹ ದುಃಖದಲ್ಲೂ ‘ಆಸ್ಪತ್ರೆಯ ಬಿಲ್ ಎಷ್ಟಾಯಿತು’ ಎಂದು ಕೇಳಿ, ಇನ್ನೇನು ಕೊಡಬೇಕು, ಅಷ್ಟರಲ್ಲಿ ಅವಳ ಗಂಡನ ತಂದೆ ತಾಯಿ ಬಂದು ತಮ್ಮ ಮಗನ ದೇಹವನ್ನು ತಮಗೊಪ್ಪಿಸಬೇಕೆಂದು ಬೇಡಿಕೆಯಿಟ್ಟರು. ವಿಚಿತ್ರವೆಂದರೆ ಅವನು ಸಾಯುವುದು ಗೊತ್ತಿದ್ದೂ ಈ ಮೊದಲು ಯಾರೂ ಆಸ್ಪತ್ರೆಯ ಕಡೆಗೆ ಹಣಿಕಿಯೂ ನೋಡಿರಲಿಲ್ಲ. ಪ್ರೇಮವಿವಾಹದ ಒಂದು ಸಣ್ಣ ತಪ್ಪಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಶಿಕ್ಷೆಯೇ? ತಿರಸ್ಕಾರ ಈ ಮಟ್ಟದಲ್ಲೂ ಇರಲು ಸಾಧ್ಯ, ಎನ್ನುವುದನ್ನು ನಂಬಲು ಕಷ್ಟವಾಗುತ್ತದೆ. ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನ ಶವವನ್ನು ಕೊಡಲು ಇವಳು ಸುತಾರಾಂ ಒಪ್ಪಲಿಲ್ಲ. ಆದರೆ ಅವರು ಊರಿನ ಹಿರಿಯರನ್ನೆಲ್ಲ ಕೂಡಿಸಿ ರಂಪಾಟ ಮಾಡಿ, ಇವಳನ್ನು ಗದರಿ, ದೇಹವನ್ನು ತಾವೇ ತೆಗೆದುಕೊಂಡು ಹೋದರು. ಇದ್ದಾಗ ಮಗನೆಡೆಗೆ ಸುಳಿಯದ, ಅವನ ಆರೈಕೆಗೆ ದುಡ್ಡು ಕೊಡದ ಈ ಜನ ಸತ್ತಾಗ ತಮ್ಮ ಹಕ್ಕು ಸಾಧಿಸಲು ಬಂದಿದ್ದರು. ಆ ಗದ್ದಲದಲ್ಲಿ ಇವಳು ತನ್ನ ಮಗನನ್ನು ಕರೆದುಕೊಂಡು ಹೊರಟುಬಿಟ್ಟಿದ್ದಳು. ನಮ್ಮ ಹುಡುಗರು, ಕೂಡಿದ ಜನರೆದುರು ಆಸ್ಪತ್ರೆಯ ಬಿಲ್ಲಿನ ಪ್ರಸ್ತಾಪ ಇಟ್ಟಾಗ, ತಾವು ಅಡ್ಮಿಟ್ ಮಾಡಿಲ್ಲವೆಂದೂ , ಮಾಡಿದವರನ್ನೇ ಕೇಳಿರೆಂದೂ, ಹೇಳಿ ದೇಹವನ್ನು ತೆಗೆದುಕೊಂಡು ಹೊರಟು ಹೋಗಿದ್ದರು. ಇದೂ ಕೂಡ ಇಡೀ ಪುಟವೆಲ್ಲ “ಮಾರ್ಜಿನ್” ಆದ ಲಿಸ್ಟಿಗೆ ಸೇರಿಕೊಂಡುಬಿಟ್ಟಿತ್ತು. ಅನೇಕ ಬಾರಿ ಇಂಥ ಘಟನೆಗಳು ಸಂಭವಿಸಿವೆ. ಅದರಲ್ಲೂ ರೋಗಿ ಸತ್ತಾಗ, ಅವರನ್ನು ಕೊಂದವರ ನಾವೇ ಏನೋ ಎನ್ನುವ ರೀತಿ ವರ್ತಿಸಿ, ನಮ್ಮಡೆಗೆ ವಿಚಿತ್ರವಾಗಿ ನೋಡುತ್ತಾರೆ. ಆಸ್ಪತ್ರೆಯ ಬಿಲ್ ಕೇಳಿದಾಗ ಜಗಳ ಮಾಡದೆ ಆಮೇಲೆ ಬಂದು ಕೊಡುವುದಾಗಿ ಹೇಳಿ ಹೋದರೆ ನಮ್ಮ ಪುಣ್ಯ. ಬಹುತೇಕ ಜನ ಕೊಡುವುದೇ ಇಲ್ಲ.
ಮುಂದೆ ಅವಳು ನಿವೇದಿಸಿದ ಕತೆ ಮಾತ್ರ ಕರುಳು ಕಿವುಚುವಂಥದ್ದು. ಗಂಡ ಸತ್ತ ಮೇಲೆ ಅವನದೇ ಆಫೀಸಿನಲ್ಲಿ ಸಿಕ್ಕ ಒಂದು ಕೆಲಸದಿಂದ ತನ್ನ ಹೊಟ್ಟೆ ಬಟ್ಟೆ ಮತ್ತು ಇದ್ದ ಒಬ್ಬ ಮಗನ ಶಿಕ್ಷಣವನ್ನು ಹೇಗೋ ನಿಭಾಯಿಸುತ್ತಿರುವಾಗಲೇ, ಮುಂದಿನ ಒಂದೇ ವರ್ಷಕ್ಕೆ ಇವಳಿಗೆ ಸ್ತನದ ಕ್ಯಾನ್ಸರ್. ಕಷ್ಟಗಳು ಬಂದರೆ ಒಂದರ ಹಿಂದೊಂದರಂತೆ ಬರುತ್ತವೆ. ಪ್ರೀತಿಸಿದ ಗಂಡನಿಲ್ಲದ ಬದುಕು ದುಸ್ತರವೆನಿಸಿದರೂ ಮಗನ ಮುಖ ನೋಡುತ್ತ ಅವನ ಭವಿಷ್ಯ ಚಿಂತಿಸುತ್ತಾ ಕಾಲ ಕಳೆಯುತ್ತಿದ್ದ ಇವಳಿಗೆ ಕ್ಯಾನ್ಸರ್ ಎಂದು ಗೊತ್ತಾದಾಗ ದಿಕ್ಕು ತೋಚದಂತಾಗಿತ್ತು. ಗಂಡನ ಇನ್ಸುರನ್ಸ್ ನಿಂದ ಬಂದ ಹಣವೆಲ್ಲ ಇವಳ ಆಪರೇಶನ್ ಗೆ, ಆಪರೇಶನ್ ನಂತರದ ಕೀಮೋಥೆರಪಿ, ರೇಡಿಯೇಶನ್ ಥೆರಪಿಗೆ ಖರ್ಚಾಗಿಬಿಟ್ಟಿತು. ಇಷ್ಟೆಲ್ಲಾ ಆಗಿಯೂ ಎಷ್ಟು ದಿನ ಬದುಕುತ್ತಾಳೆನ್ನುವ ಭರವಸೆ ಇಲ್ಲ. ಒಂದು ವರ್ಷ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಳು. ಇವಳಿಗೆ ಮಗನದೇ ಆರೈಕೆ. ಅವನಿಗೆ ಇವಳ ಪ್ರೀತಿ. ಅವನೂ ತನ್ನ ಶಾಲೆಯ ಜೊತೆಗೆ ಸಣ್ಣ ಸಣ್ಣ ಕೆಲಸಗಳನ್ನು ಮಾಡಿ ಇವಳನ್ನು ಸಾಕಿದ.
ಹೀಗೆಯೇ ಕಷ್ಟಪಟ್ಟು ಒಂದು ವರ್ಷ ಕಳೆಯುವುದರೊಳಗೆ ಇವಳ ಆರೋಗ್ಯದಲ್ಲಿ ಒಂದಿಷ್ಟು ಸುಧಾರಣೆ. ಮತ್ತೆ ದುಡಿತ. ನಾಲ್ಕು ವರ್ಷ ಆತಂಕವಿಲ್ಲದ ಬದುಕು. ತಾಯಿ ಮಗನ ವಾತ್ಸಲ್ಯಮಯ ದಿನಗಳು, ಹೊತ್ತು ಹೋದದ್ದೇ ಗೊತ್ತಾಗದಂತೆ. ಐದನೇ ವರ್ಷಕ್ಕೆ ಕೆಟ್ಟ ಕಾಲ ಮತ್ತೆ ವಕ್ಕರಿಸಿಬಿಟ್ಟಿತ್ತು. ಇವಳಿಗೆ ಬೆನ್ನಲ್ಲೇನೋ ನೋವು, ತಲೆಯಲ್ಲಿ ಸಣ್ಣದೊಂದು ಗಂಟು, ನಡೆದರೆ ಆಯಾಸ. ಆಪರೇಶನ್ ಮಾಡಿದ ವೈದ್ಯರ ಹತ್ತಿರ ಹೋಗಿ ತಪಾಸಣೆ ಮಾಡಿಸಿದರೆ ಎದೆಯ ಕ್ಯಾನ್ಸರ್ ಎಲ್ಲ ಕಡೆ ‘ಬೀಜ’ಬಿತ್ತಿ ಹೋಗಿತ್ತು. ಅವೆಲ್ಲ ಈಗ ಬೆಳೆದು ದೊಡ್ಡವಾಗಿ ಇವಳಿಗೆ ಮರಣ ಶಾಸನ ಬರೆದು ಸಿದ್ಧಪಡಿಸಿದ್ದವು. ನೋವು ಕಡಿಮೆ ಮಾಡಲು ಮತ್ತೆ ಕೀಮೋ ಥೆರಪಿ, ರೇಡಿಯೇಶನ್ ಕೊಟ್ಟರೂ ಪ್ರಯೋಜನವಾಗಲಿಲ್ಲ. ಕೂದಲು ಉದುರಿದುವೇ ಹೊರತು ಗಂಟು ಕಡಿಮೆಯಾಗಲಿಲ್ಲ. ಅವಳ ಕೊನೆಗಾಲ ಸಮೀಪಿಸಿದಾಗ ತನ್ನ ಗಂಡನ ನೆನಪಾಗಿಯೋ ಏನೋ ನಮ್ಮ ಆಸ್ಪತ್ರೆಗೆ ಬಂದಿದ್ದಳು. ತನ್ನ ಗಂಡನ ಕೊನೆಯಾದ ಸ್ಥಳದಲ್ಲಿಯೇ ತಾನೂ ಕೊನೆಯಾದರೆ ಪ್ರೀತಿಸಿದ ಗಂಡನನ್ನು ಕೂಡುವ ಭರವಸೆ ಇತ್ತೇನೋ. ಹೀಗೆಲ್ಲ ನಾನು ಯೋಚಿಸುತ್ತಿರುವಾಗಲೇ ಅವಳು ಹೇಳಿದ ಮಾತು,
“ ಸಾಹೇಬ್ರ, ನನ್ನ ಗಂಡನ ಬಿಲ್ ಅವರ ಅವ್ವ ಅಪ್ಪ ಕೊಡಲಿಲ್ಲ, ಅಂತ ನನಗ ಆಮ್ಯಾಲ ಗೊತ್ತಾಯ್ತ್ರಿ. ನನ್ನ ಕ್ಷಮಾ ಮಾಡ್ರಿ. ನಾನss ಇನ್ನೊಮ್ಮಿ ಬಂದು ನಿಮ್ಮ ಕಡೆ ವಿಚಾರ ಮಾಡಬೇಕಾಗಿತ್ತು. ಈಗ ಆ ರೊಕ್ಕಾನೂ ತಗೊಳ್ರಿ. ಮತ್ತss ನಾ ಇನ್ನ ಭಾಳ ದಿನ ಉಳೆಂಗಿಲ್ಲ ಅಂತ ನನಗ ಗೊತ್ತೈತ್ರಿ. ನಾ ಸಾಯೋತನಕ ಇಲ್ಲೇ ನಿಮ್ಮ ದವಾಖಾನಿಯೊಳಗ ಇರತೀನ್ರೀ. ಅದಕ್ಕss ನನ್ನ ಬಿಲ್ಲನೂ ಅಡ್ವಾನ್ಸ್ ತಗೊಂಡ ಬಿಡ್ರೀ. ನಾನು ಯಾರ ರಿಣದಾಗೂ ‘ಇರ’ಬಾರದ್ರೀ….”
ನಾನು ಅವಾಕ್ಕಾಗಿ ಹೋದೆ. ಸಂಕಟವೂ ಆಯಿತು. ಇನ್ನು ಕೆಲ ದಿನಗಳಿಗೆ ಸಾಯುತ್ತೇನೆಂದು ಗೊತ್ತಿದ್ದೂ ಅವಳು ತೋರುತ್ತಿದ್ದ ಧೈರ್ಯ, ಋಣ ಮುಕ್ತಳಾಗಬೇಕೆಂಬ ಹಂಬಲ ನನ್ನನ್ನು ಮೂಕನನ್ನಾಗಿಸಿತು. ಮನೆತನಕ ಹೋದರೂ ಬಿಲ್ ಕೊಡದೆ ತಿರುಗಿ ಕಳಿಸುವ ಜನರಿರುವಾಗ, ಕೊನೆಗಾಲದಲ್ಲಿ ಹಳೆಯ ಬಾಕಿಯನ್ನಲ್ಲದೆ ಇನ್ನು ಮುಂದೆ ಆಗಬಹುದಾದ ಶುಲ್ಕವನ್ನೂ ತೆಗೆದುಕೊಳ್ಳಿರಿ, ಎಂದು ಹೇಳಿದ ಅವಳ ವ್ಯಕ್ತಿತ್ವದ ಬಗೆಗೆ ಗೌರವ ಮೂಡಿತು. ನನಗೆ ಮಾತು ಹೊರಡಲಿಲ್ಲ. ಇಂಥ ಜನರೂ ಇರುವರಲ್ಲ, ಅನ್ನಿಸಿತು. ಅವಳನ್ನು ಸಮಾಧಾನ ಮಾಡಲು “ ನಾ ಆಮ್ಯಾಲ ರೊಕ್ಕ ತಗೋತೀನಿ. ಅದನ್ನ ನಿನ್ನ ಮಗನ ಕಡೆ ಕೊಡು ..” ಎಂದು ಹೇಳಿ, ವಾರ್ಡ್ ಬಾಯ್ ನನ್ನು ಕರೆದು ಅವಳನ್ನು ಅಡ್ಮಿಟ್ ಮಾಡಬೇಕೆಂದು ತಿಳಿಸಿ, ಅವಳಿಗೆ ಅಗತ್ಯವಿರುವ ಔಷಧೋಪಚಾರ ಪ್ರಾರಂಭಿಸಿದೆ. ಆ ದಿನ ಪೂರ್ತಿ ಅವಳದೆ ಮುಖ ನನ್ನ ಕಣ್ಣ ಮುಂದೆ. ಅಂದಿನ ಅಮಾವಾಸ್ಯೆಯ ಊಟ ಸೇರಲಿಲ್ಲ…
ಮುಂದೆ ಅವಳು ಬದುಕಿದ ಸುಮಾರು ಹತ್ತು ಹನ್ನೆರಡು ದಿನ ನನ್ನ ಮನಸ್ಸನ್ನೆಲ್ಲ ಆವರಿಸಿಕೊಂಡುಬಿಟ್ಟಳು. ನನ್ನೆದುರಿಗೆ ಅವಳು ಕೊನೆಯುಸಿರೆಳೆಯುವಾಗ ಮತ್ತೊಮ್ಮೆ ತನ್ನ ಋಣದ ಬಗೆಗೆಯೇ ಮಾತಾಡಿದಳು. ತನ್ನ ಮಗನೆಡೆಗೆ ನೋಡುತ್ತಾ ಪ್ರಾಣ ಬಿಟ್ಟಳು. ಅವಳ ಕಷ್ಟಗಳೆಲ್ಲ ಕೊನೆ ಆದುವಲ್ಲ ಎಂದು ನನಗೆ ಸಮಾಧಾನವಾದರೂ ಇಂಥವಳು ಇನ್ನೂ ಬದುಕಿರಬೇಕಿತ್ತು, ಸಮಾಜಕ್ಕೆ ಒಂದು ಮಾದರಿಯಾಗಿ ಅನಿಸಿತು. ಮಗ ಅಳುತ್ತಿದ್ದ. ಅವನಿಂದ ಏನೂ ದುಡ್ಡು ತೆಗೆದುಕೊಳ್ಳಕೂಡದೆಂದೂ, ಅವನ ತಾಯಿಯ ಶವ ಮನೆಗೆ ಸಾಗಿಸಲು ಸಹಾಯ ಮಾಡಿರೆಂದೂ ನಮ್ಮ ಸಿಬ್ಬಂದಿಗೆ ತಿಳಿಸಿ ಹೊರನಡೆದೆ.
ಹೊರ ಹೋಗುವ ಮೊದಲು ಅವಳೆಡೆ ನೋಡಿದರೆ, ಅವಳ ಮುಖದಲ್ಲಿ ತೃಪ್ತಿಯ ಕಳೆಯಿತ್ತು. ತನ್ನ ಪ್ರೀತಿಯ ಗಂಡನನ್ನು ಸೇರುತ್ತೇನೆಂಬ ಭಾವವೋ, ಋಣ ಮುಕ್ತಳಾದೆನೆಂಬ ತೃಪ್ತಿಯೋ ಗೊತ್ತಾಗಲಿಲ್ಲ….
 
 
 

‍ಲೇಖಕರು G

January 15, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

20 ಪ್ರತಿಕ್ರಿಯೆಗಳು

  1. Dr.Ratna Kulkarni

    ಕಷ್ಟಗಳ ಸುರಿಮಳೆ ಜಡಿದರೂ ನಿಯತ್ತು ತೋರಿದ ಹೆಣ್ಣುಮಗಳ ಮನಮುಟ್ಟುವ ಕಥೆ.ವೈದ್ಯರ ಮಾನವೀಯತೆಗೆ ಸಲಾಂ.

    ಪ್ರತಿಕ್ರಿಯೆ
  2. Shantayya

    Dear Kubsad
    You have proved once again that truth is more fictious than fiction
    A responsible individual behaves more responsibly even during days of stress and strain
    Hats off to your narration
    I think patients requiring care during terminal illness need a modified treatment regimes
    Govt doesn’t think of this group of people
    Probably because they are not voters in next election
    Nothing teaches us like
    Poverty
    Hunger
    Disease
    Gd day
    Waiting for next episode

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಅಬ್ಬಬ್ಬಾ…ಕಷ್ಟಗಳು ಮನುಷ್ಯನಿಗಲ್ಲದೇ ಇನ್ನಾರಿಗೆ ಬರುತ್ತವೆ ಎನ್ನುತ್ತೇವೆ. ಆದರೆ ಕೇವಲ ಕಷ್ಟಗಳನ್ನೇ ಭರಿಸಲು ಬದುಕುವುದಾದರೆ …ಕೆಲವೊಮ್ಮೆ ಬದುಕು ಅದೆಷ್ಟು ಕ್ರೂರ, ಬರ್ಬರ…., ತಮ್ಮ ಯಾವುದೂ ತಪ್ಪು ಇರದೇ ಕೇವಲ ಶಿಕ್ಷೆ ಅನುಭವಿಸುವ ಆ ನಿರಪರಾಧಿ ಆತ್ಮಗಳಿಗೆ ನನ್ನ ಸಾಂತ್ವನ ನಮನ. ಎಂತಹ ಮನಕಲುಕುವ ಬರಹ ಡಾಕ್ಟರರೇ, ಸೀಧಾ ಎದೆಗೇ ಗುದ್ದಿದ್ದೀರಿ…ಧನ್ಯವಾದಗಳು

    ಪ್ರತಿಕ್ರಿಯೆ
  4. Dr. S.R . Kulkarni.

    Saheb,Your article very beautifully explains varieties of creations of God. I don’t know what pleasure he gets by doing so. I think such a principled lady must have been very sad death was making her son orphan. The most tragic role is Son. My God tender age,strong suffering. The artist has conveyed the same very beautifully. Always the photos have multiplied the seriousness of writings. I salute the artist.

    ಪ್ರತಿಕ್ರಿಯೆ
  5. HEMCHANDRA

    ‘DOCTOR DODDAVARO ATHAVA RUNA MUKTALADA HENNUMAGALU DODDAVALO’- EBBAROO GREAT.

    ಪ್ರತಿಕ್ರಿಯೆ
  6. mmshaik

    ee bhumiya baduku higiddarene chenda andare,prmaNikatege baddavaagirbeku…sir tamma barahagaLu chintanege hachhuttave..nice…

    ಪ್ರತಿಕ್ರಿಯೆ
  7. Upendra

    “ವೈದ್ಯೋ ನಾರಾಯಣೋ ಹರಿ” ಬಲವಾಗಿ ನಂಬುವಂತೆ ಮಾಡಿದ ವೈದ್ಯರೂ ಇದ್ದಾರೆ. ಇವರು ಪೂಜಾರ್ಹರು. ಇನ್ನು ಕೆಲವರು ಇದ್ದವರಿಂದ “ಸುಲಿದು”(‘ಪದಬಳಕೆಗೆ ಅಪಾರ್ಥ ಬೇಡ, ಇದು ಕುಹಕ ಅಲ್ಲ) ಇಲ್ಲದವರಿಗೆ ಉಚಿತ ಸೇವೆ ನೀಡುವವರೂ ಇದ್ದಾರೆ, ಇವರೂ ವಂದನಾರ್ಹರು.
    ಕೆಲವು ಆಸ್ಪತ್ರೆಗಳು (ಸಿಬ್ಬಂದಿ, ಮ್ಯಾನೇಜ್ಮೆಂಟ್ ನ ಅಣತಿಯ ಮೇರೆಗೆ) ನಿರ್ದಾಕ್ಷಿಣ್ಯವಾಗಿ ವರ್ತಿಸುವುದನ್ನು, ಬಾಯಿ ತೆರೆಯುವ ಮುನ್ನ ಮೆಡಿಕಲ್ ಇನ್ಸೂರೆನ್ಸ್ ಇದೆಯಾ ಎಂದು ಕೇಳುವುದನ್ನು ನೋಡಿದಾಗ “ಎಲ್ಲಾ ವ್ಯಾಪಾರ” ಅನ್ನಿಸಿದ್ದೂ ಇದೆ. ಅಂತಹ ಆಸ್ಪತ್ರೆಗಳಿಗೆ ಇದೊಂದು ಕಣ್ಣು ತೆರೆಸುವ ಮಾದರಿ ಬರಹ.
    ತಾಯಿ ಕೊಟ್ಟ ಹಣ ಮಗನಿಗೆ ಸೇರುತ್ತೆ ಅಂತ ನಾನು ಊಹಿಸಿದ್ದೆ, ಮುಂದಿನ ವಾಕ್ಯ ಓದುವ ಮುನ್ನ. ಹುಸಿಯಾಗಲಿಲ್ಲ…
    ನಿಮಗೆ ವೈದ್ಯ ವಿದ್ಯೆಯ ಜೊತೆಗೆ ಬರಹದಿಂದಲೇ ಭಾವುಕರ ಕಣ್ಣೀರಿಳಿಸುವ ವಿದ್ಯೆಯೂ ಲಭಿಸಿದೆ.
    ನಿಮಗೆ ನಮನ.

    ಪ್ರತಿಕ್ರಿಯೆ
  8. ಹನುಮಂತ ಹಾಳಿಗೇರಿ

    ಆಪ್ತ ಬರಹ ಸರ್. ಕಣ್ಣುಗಳು ತೇವವಾದವು.

    ಪ್ರತಿಕ್ರಿಯೆ
  9. ಅಕ್ಕಿಮಂಗಲ ಮಂಜುನಾಥ

    ಮನಸ್ಸಸನ್ನು ಕಲಕುವಂತಹ ಬರಹ.

    ಪ್ರತಿಕ್ರಿಯೆ
  10. ಕೆ ಎಸ್ ನವೀನ್

    ಎಂದಿನಂತೆ ಮನೋಜ್ಞವಾಗಿದೆ, ಸರ್. ಇವೆಲ್ಲವನ್ನು ಸೇರಿಸಿ ಪುಸ್ತಕ ಮಾಡಿರಿ. ಜನಕ್ಕೆ ಜೀವನದ ವಿವಿಧ ಮಗ್ಗುಲುಗಳನ್ನು ತೋರುವ ದೀವಿಗೆಯಾಗುತ್ತದೆ.
    ಗೌರವಾದರಗಳೊಂದಿಗೆ,
    ಕೆ ಎಸ್ ನವೀನ್

    ಪ್ರತಿಕ್ರಿಯೆ
  11. Ramakrishna

    ಓದಿ ದುಃಖವಾಯಿತು. ವಿಧಿ ಎಷ್ಟು ಕ್ರೂರಿ. ಇಷ್ಟೊಂದು ಕಷ್ಟಗಳು ಬಂದರೂ ಮೌಲ್ಯಗಳನ್ನು ಬಿಡದ ಆಕೆಗೆ ನಮನಗಳು. ಅವಳ ಮಗ ಎಲ್ಲಿದ್ದರೂ ಚೆನ್ನಾಗಿರಲಿ. ಇಂಥವರನ್ನು ಪರಿಚಯಿಸಿದ ನಿಮಗೂ ವಂದನೆಗಳು. ನೀವು ಇತರ ವೈದ್ಯರಿಗೆ ಮಾದರಿ.

    ಪ್ರತಿಕ್ರಿಯೆ
  12. Anonymous

    Being a responsible u responsibly responded hats up ur humanitarian duty
    Here that lady also shows loyalty towards her lovely husband

    ಪ್ರತಿಕ್ರಿಯೆ
  13. parameswarappa k

    Being responsible person u responded well humanitarianly hats up ur duty as a godly human being as a doctor Here that lady shows her perfect pure love towards her husband

    ಪ್ರತಿಕ್ರಿಯೆ
  14. ಕಿರಣ್

    “ಯಾವ ದಿನ ಮೊದಲ ವೈದ್ಯಕೀಯ ಸೀಟು ಹಣಕ್ಕೆ ಮಾರಾಟವಾಯಿತೋ, ಆ ದಿನವೇ ‘ಆರೋಗ್ಯಸೇವೆ’ಯು ‘ಆರೋಗ್ಯವ್ಯವಹಾರ’ವಾಗಿ ಬದಲಾಯಿತು” ಎಂಬ ಮಾತು ಕೇಳಿದ್ದೇನೆ.
    ಉಚಿತ ಸೇವೆ ಮಾಡುವುದು ಈ ಪ್ರಸ್ತುತದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸಾಧ್ಯವಿಲ್ಲ, ಸರ್. ಮಾಡಿದರೂ ಗುಟ್ಟಾಗಿ ಮಾಡಬೇಕು. ಒಂಚೂರು ಪ್ರಚಾರ ಸಿಕ್ಕಿದರೂ, ಕೆಲವೇ ದಿನಗಳಲ್ಲಿ ಆಸ್ಪತ್ರೆ ಮುಚ್ಚಬೇಕಾದೀತು!
    ಇದಕ್ಕೆ ಯಾರು ಹೊಣೆ? ಎರಡೂ ಕೈ ಸೇರಿದರೆ ಚಪ್ಪಾಳೆ!
    ಈ ವೈರುಧ್ಯಗಳ ಮಧ್ಯೆಯೂ ನೀವು ಈ ಮಾನವೀಯ ನೆಲೆಗಟ್ಟನ್ನು ಭಧ್ರವಾಗಿ ಉಳಿಸಿಕೊಂಡಿರುವುದಕ್ಕೆ ಅಭಿನಂದನೆಗಳು.
    ಇದಕ್ಕಾಗಿ ನೀವು ಅನುಭವಿಸಿರಬಹುದಾದ ಕಷ್ಟ-ನಷ್ಟಗಳ ಬಗ್ಗೆ ಮಾತನಾಡುವಷ್ಟು ಹಿರಿತನ ಬಂದಾಗ, ಅದಕ್ಕಾಗಿ ಮತ್ತೊಮ್ಮೆ ಅಭಿನಂದಿಸುವೆ!

    ಪ್ರತಿಕ್ರಿಯೆ
  15. sudha Manjunath

    hats off to u and that lady. yr narration is too good as usual. may her soul rest in peace n let her son come up in flying colours. namaskara

    ಪ್ರತಿಕ್ರಿಯೆ
  16. ಡಾ.ಶಿವಾನಂದ ಕುಬಸದ

    ಓದಿದ,ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: