ಲಕ್ಷ್ಮಿಕಾಂತ್ ಇಟ್ನಾಳ್ ಅನುವಾದಿಸಿದ ಗುಲ್ಜಾರ್ ಕವಿತೆ

ವಿಳಾಸ

(ಏಕ್ ಪತಾ)

ಅನು: ಲಕ್ಷ್ಮೀಕಾಂತ ಇಟ್ನಾಳ

ಮೂಲ- ಗುಲ್ಜಾರ್ ಸಾಹಬ್

ಇಲ್ಲಿಂದ ಒಂದಿಷ್ಟು ಮುಂದೆ ನಡದರೆ
ಹರಿದ ಜಮಖಾನೆಯ ಮೇಲೆ
ಪೂರಾ ಹಲ್ಲಿಯ ಹಾಗೆ ಸೊರಗಿದಂಥ
ಮನುಷ್ಯನಂತಹ ಆಕೃತಿ ಸಿಗುವುದು
ಚೆಹರೆ ಮಾತ್ರ ಪೂರ್ತಿನೋಡಲಿಕ್ಕಾಗುದಿಲ್ಲ
ಬೋರಲು ಮಲಗಿ, ಭಿಕ್ಷಾ ಪಾತ್ರೆ ಇಟ್ಟುಕೊಂಡ
ಭಿಕ್ಷುಕನೊಬ್ಬ ಸಿಗುತ್ತಾನೆ, ಆದರಂವ ಎಂದೂ ಏನೂ ಬೇಡೂದಿಲ್ಲ
 
ಅಲ್ಲಿಂದ ಬಲಕ್ಕೆ ತಿರುಗಿ ಮುಂದ ಹೋದರ
ಅಂಗಡಿಗಳ ಉದ್ದುದ್ದ ಸಾಲುಗಳೇ ಸಿಗುತ್ತವೆ
ಶರಣಾರ್ಥಿಗಳು ಇವರೆಲ್ಲಾ…. !
ಎಲ್ಲವೂ ಕಟ್ಟಿಗೆಯ ಗೂಡಂಗಡಿಗಳೇ
ಆ ಅಂಗಡಿಗಳ ಹಿಂದೇನೇ, ಕೆಲವು ಇಂಚುಗಳಲ್ಲಿ ಹಿಗ್ಗಿದ ಜಾಗವೇ ಅವರ ನಿವಾಸ
ಇಲ್ಲಿಯವರ್ಯಾರೂ ಅಲ್ಲ ಇವರು !
ಮಸೀದಿಯಲ್ಲಿಯೇ ಇರಲಿಕ್ಕೆ ಹತ್ತಿದ್ದರು ಮೊದಲು, ಬಂದು ಬಂದು,
ಅಲ್ಲಿಂದ ಹೊರದಬ್ಬಲಾಯಿತು ಇವರನ್ನೆಲ್ಲಾ
ಅದು ದೇವರ ಮನೆ ಎಂದು,
ನೀವೇ ಹೇಳಿ, ದೇವರಿಗಾದರೂ ಅಷ್ಟೊಂದು ಸ್ಥಳವೆಲ್ಲಿದೆ ಇಲ್ಲಿ ?
ಇಲ್ಲಾ ಅಂದರೆ, ಇಡೀ ಜಗತ್ತಿಗೇ ಜಾಗ ಕೊಡುತ್ತ ಕೂಡಬೇಕಾದೀತು ಅವನು
ಅದೇ ಒಂದು ಉದ್ಯೋಗವೆಂದು !
 
ಅರೆ ಹಾಂ…!
ಆ ವಿಳಾಸದ ಬಗ್ಗೆ ಹೇಳುತ್ತಿದ್ದೆನಲ್ಲಾ
ಅದೇ ದಾರಿಯಲ್ಲಿ, ಈ ಅಂಗಡಿಗಳನ್ನು ದಾಟಿ ಮುಂದೆ ಹೋದರೆ,
ಆ ಮಸೀದಿ ಸಿಗುತ್ತದೆ,….. ಅದೇ ಈಗ ಹೇಳಿದೆನಲ್ಲಾ ಅದು,
ಅದು, ಆ ‘ದೇವಪುತ್ರ, ಅವಧೂತ ಸೈಯದ್ ವಲೀ ಖಾನ್’ ನ ಪವಿತ್ರ ಮಂದಿರ
ಅಲ್ಲಿಂದ ಮುಂದೆ ತುಸು ಎಡಕ್ಕೆ ತಿರುಗಿದ ಕೂಡಲೇ,……. ಒಂದು ಹತ್ತು ಹನ್ನೆರಡು ಹೆಜ್ಜೆಗಳಷ್ಟೇ,
ದೊಡ್ಡದೊಂದು ಹೊಲಸು ನಾರುತ್ತಿರುವ ತಿಪ್ಪೆಗುಂಡಿ ಕಾಣುವುದು, ……..ಅಲ್ಲೇ ಕಣ್ಮುಂದನ !
ಅಲ್ಲಿ ಹೊರಳುವುದಕ್ಕಿಂತ ಮೊದಲೇ, ಮೂಗಿಗೆ ದುರ್ವಾಸನೆ ಅಡರಿ ಬಿಡುತ್ತದೆ
ಅದು ಇಷ್ಟಿಷ್ಟ ಕಡಿಮೆ ಆದರೂ, ದಿನಾಲೂ ಅಷ್ಟಷ್ಟ ಹೆಚ್ಚು ಆಗುತ್ತಲೇ ಇರುತ್ತದೆ !
ಅದು ಈಗ ಆ ಭಾಗದೊಳಗೆಲ್ಲಾ
ಒಂದು ಗುರುತಿನ ಜಾಗವಾಗಿಯೇ ಗುರುತಿಸಿಕೊಂಡಿದೆ !
 
ಆದರೆ ನಿನಗೆ ಆ ಜಾಗದೊಳಗೇನೂ ನಿಲ್ಲುವ ಜರೂರತ್ ಏನಿಲ್ಲ
ಇನ್ನಷ್ಟು ಹೊತ್ತು ಸೀಧಾ ಹಾಗೆಯೇ ನಡೆಯುತ್ತಿರು
ಪುಸ್ತಕಗಳ ಬಾಜಾರ ಸಿಗುವುದು ಎದುರಿಗೆ
ಅಲ್ಲಿಯೇ ತುಕ್ಕುಹಿಡಿದಂತಹ ಹಳೆಯ ಛಾವಣಿಯ ಕೆಳಗೆ ಹಾದು ಬಂದರೆ
ಎಡಕ್ಕೆ ಕತ್ತಲು ಕತ್ತಲಿನಂತೆ ಇರುವ ಓಣಿ ತರಹದ್ದೊಂದು ಸಿಗುವುದು,
ಓಣಿ ಅಂದರೆ ……….ಓಣಿಯೂ ಅಲ್ಲಾ ಮತ್ತೆ
ಯಾಕಂದರೆ ಅಲ್ಲಿ ಕೆಲ ಬಡವರು ಮನೆಗಳ ತರಹ ಮಾಡಿಕೊಂಡಿದ್ದಾರೆ ಅಷ್ಟೆ
ಮನೆ ಅಂದರೆ ಮನೆ ಅಂತ ತಿಳಕೋಬೇಡ ಮತ್ತೆ …….. ಮನೆಗಳೂ ಅಲ್ಲಾ ಅವು,
ಯಾಕಂದರೆ ಅವುಗಳಿಗೆ ಬಾಗಿಲು, ಮತ್ತೆ ಕಿಟಕಿಗಳೇ ಇಲ್ಲಾ, ………..ಅಸಲು ಗೋಡೆಗಳೇ ಇಲ್ಲಾ
ಪರದೆ ಹಾಕಿಕೊಂಡಿದ್ದಾರೆಂದರೆ, …………ಅದೂ ಇಲ್ಲಾ
ಹಾದು ಹೋಗುವಾಗ ನಿನಗೆ ಬಹುಶ: ಹಾಗೆ ಅನ್ನಿಸಲಿ ಎಂದು ಅಷ್ಟೆ !
ಯಾವುದೋ ಒಂದು ಅಗ್ಗದ ಕಾದಂಬರಿಯ
ಬಟಾಬಯಲಿನಂತಿರುವ ಅಧ್ಯಾಯವೊಂದರ ಪುಟಗಳಲ್ಲಿ ಕಣ್ಣಾಡಿಸುವಂತೆ ಅಷ್ಟೆ !
 
ಹುಷಾರಾಗಿ ಮುಂದೆ ಸಾಗು, ಕಾಲುಗಳು ಜಾರುವ ಸಂಭವವಿದೆ ಅಲ್ಲಿ
ಅಡಿಗೆ ಮಾಡುತ್ತ, ……….ಉಣ್ಣುತ್ತ ಅಲ್ಲೇ ಇದ್ದಾರೆ ಆ ಜನವೆಲ್ಲಾ ,… ಏನೆಲ್ಲಾ ಮಾಡುತ್ತ
ಅದಕ್ಕಿಂತ ಹೆಚ್ಚಿಗೆ ಅಂದರೆ
ನೀನು ಅಪ್ಪಿ ತಪ್ಪಿ
ಯಾವುದೋ ಜೀವಂತ, ಬಿದ್ದುಕೊಂಡಿರುವ
ಥೇಟ್ ಶವದ ಹಾಗಿರುವುದರ ಮೇಲೆ
ಎಲ್ಲಿ ಹೆಜ್ಜೆ ಇಟ್ಟುಬಿಟ್ಟೀಯೋ ಎಂಬ ಭಯ
ಯಾಕಂದರೆ, ಒಬ್ಬರಿಲ್ಲಾ ಒಬ್ಬರು ಸಾಯುತ್ತಾರೆ,
ಸತ್ತರೆ ಇಬ್ಬರು ಹುಟ್ಟುತ್ತಾರೆ, ……ಆ ಓಣಿಯಲ್ಲಿ ದಿನಾಲೂ
ಸತ್ತೇ ಹುಟ್ಟುವವರು, ಹುಟ್ಟುತ್ತಲೇ ಸಾಯುವವರು ಈ ಲೆಖ್ಕದಲ್ಲಿಲ್ಲ ಮತ್ತೆ !
 
ಆ ಗಲ್ಲಿಯೊಳಗಿಂದ ಹೊರಬಂದ ಕೂಡಲೇ
ಕಣ್ಣು ಕುಕ್ಕುವಷ್ಟು ಛಾಯೆ ಬೀಳುವುದು
ಫಳ ಫಳ ಹೊಳೆವ ಬೆಳಕಿಂದು ಅದು
ಆಗ ಕೆಲಹೊತ್ತು ಏನೂ ಕಾಣುವುದಿಲ್ಲ…..ಕಣ್ಣಿಗೆ
ಸ್ವಲ್ಪ ಕಣ್ಣುಗಳನ್ನು ಕಿರಿದುಗೊಳಿಸಿ
ಆ ಕಡೆ ನೋಡಿದಾಗ
ಒಂದು ಚೌಕ ಕಣ್ಣಿಗೆ ಬೀಳುವುದು, ……ತೀರ ಹತ್ತಿರವೇ
ಅಲ್ಲಿಂದಂತೂ ಮಾರಳತೆಯಲ್ಲೇ ಇದೆ ಆ ರಾಜಮಾರ್ಗವೂ ಸಹ,……ನಿಲುಕದಷ್ಟು ಸಮೀಪ !
ಅಲ್ಲಿ ನಿನಗೆ ಎಲ್ಲಾ ‘ಪಿ.ಎಮ್’ಗಳ, ಎಲ್ಲಾ ‘ಜಿ.ಎಮ್’ ಗಳ ಬಂಗಲೆಗಳು ಸಿಗುವವು
ಅದೇ ರಾಜಮಾರ್ಗದ ಗುಂಟ
ಬಾಳ ಮುಂದ ಅಂದರ ಇನ್ನೂ ಮುಂದಕ್ಕ ಹೋದರ
ಈಗ ಕಟ್ಟಲಿಕ್ಕೆ ಹತ್ತಿರುವ ಹೊಸ ವಿಮಾನ ನಿಲ್ದಾಣ ಸಿಗುವುದು
 
ಹೌದು, ಅದೆಲ್ಲಾ ಸರಿ,
ಆದರೆ,……. ನಿನಗೆ ಯಾರನ್ನು ಭೇಟಿಯಾಗಬೇಕಿತ್ತು ಹೇಳು ?
 
ಇಲ್ಲಾ ! ಅದೇನೂ ನನಗೆ ಗೊತ್ತಿಲ್ಲ !
ನಿನ್ನದೇ ಮನೆಯ ವಿಳಾಸ ಕೇಳುತ್ತ
ಇಲ್ಲಿಗೆ ಬಂದಿರುವೆ ಏನೋ ಎಂದು ನಾನು ತಿಳಿದಿದ್ದೆ !
 

‍ಲೇಖಕರು G

January 15, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಇಟ್ನಾಳ್ ರವರೆ ಗುಲ್ಜಾರರು ನಿಮ್ಮನ್ನು ಆವರಿಸಿಬಿಟ್ಟಿದ್ದಾರೆ…ಮನಕ್ಕೊಪ್ಪುವ ‘ಭಾವಾಂತರ’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: