ವೈ ಎಂ ಯಾಕೊಳ್ಳಿ ‘ಮರುಳನ ಶಾಯಿರಿ‌ಲೋಕ’

ಮರುಳುಗೊಳಿಸುವ ‘ಮರುಳನ ಶಾಯಿರಿ‌ಲೋಕ

ಡಾ ವೈ ಎಂ ಯಾಕೊಳ್ಳಿ

ಈಚೆಗೆ ಬಹಳ ಜನರು ಗಜಲ್, ಹನಿಗವಿತೆ, ಹೈಕು ಎಂದು ಕವಿತೆಗಳ ಪ್ರಯೋಗ ಮಾಡುವಾಗ ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು ಮರುಳನ ಶಾಯಿರಿಗಳು ಪುಸ್ತಕದ ಮೂಲಕ ಕನ್ನಡ ಓದುಗರ ಗಮನ ಸೆಳೆದಿದ್ದಾರೆ. ಕಿರು ಪದ್ಯ, ಚುಟುಕು, ಹೈಕು, ಗಜಲ್ ಇತ್ಯಾದಿ‌ ಕಾವ್ಯ‌ ಪ್ರಕಾರಗಳಲ್ಲಿ ಸದಾ ಉತ್ಸಾಹದಿಂದ ಕೃತಿ ರಚಿಸುತ್ತಿದ್ದ ಈ ಕವಿ ಈಚಿನ ದಿನಗಳಲ್ಲಿ ಶಾಯಿರಿಗಳಿಗೊಲಿದದ್ದು ವಿಶೇಷವಾಗಿದೆ. ಕನ್ನಡದಲ್ಲಿ ಅಪರೂಪಕ್ಕೊಮ್ಮೆ ಬರುವ ಕಾವ್ಯ ಪ್ರಕಾರ ಶಾಹಿರಿ, ಇಟಗಿ ಈರಣ್ಣ, ಎಚ್.ಭಿಕ್ಷಾವರ್ತಿಮಠ  ಅಸಾದುಲ್ಲಾಬೇಗ್, ದಿವಂಗತ ಡಾ ಅಶೋಕ ಸಮಗಂಡಿ ಮೊದಲಾದವರು ಶಾಯಿರಿಗಳನ್ನು ಬರೆದದ್ದುಂಟು. ಆದರೆ ತುಂಬ‌ ಪ್ರಸಿದ್ಧರಾದವರು ಇಟಗಿ ಈರಣ್ಣನವರೇ.

ಈಗ ಮರುಳಸಿದ್ದಪ್ಪ ದೊಡಮನಿಯವರು ಮರುಳನ ಶಾಯಿರಿಗಳನ್ನು ಪ್ರಕಟಿಸಿದ್ದಾರೆ. ಶಾಹಿರಿ ಎಂದರೇನೆ ಪ್ರೇಮದ ಭಾಷೆ. ಅಲ್ಲಿ ಗಂಡು ತನ್ನವಳ ಬಣ್ಣಿಸಿ ಆನಂದಿಸುವುದೇ ಹೆಚ್ಚು.ಅವಳ ಮೈಯ ಅಂದ ಚಂದ, ಪ್ರೇಮದ  ಸಿರಿಯನ್ನು ಬಣ್ಣಿಸಿ ಸಂತೋಷ ಪಡುವುದೆ ಕವಿಯ ಉದ್ದೇಶ. ಆದರೆ ಅಲ್ಲಿ ಕವಿಯ ಚತುರತೆ ಕವಿತೆಯಾಗಬೆಕು, ಅವನ ಪ್ರೇಮದ ಭಾವಗಳು ಎಲ್ಲಿಯೂ  ಚರ್ವಿತಚರ್ವಣವಾಗಬಾರದು.

ಅವನ ಹೆಸರೇ ಹೇಳುವಂತೆ ಆತ ಶಾಯರ್. ಅವನ ಪ್ರೇಮ ದುಂಬಿದ ಮಾತುಗಳೇ ಶಾಯಿರಿಗಳು. ಮರುಳಸಿದ್ದಪ್ಪನವರು ಶಾಯಿರಿ ಕುರಿತೇ ತಮ್ಮ ಕವಿಯ ಮಾತಿನಲ್ಲಿ ಹೇಳಿರುವ ಮಾತುಗಳು ಹೀಗಿವೆ ಶಾಯಿರಿ ಇದರ ಸಾರವು ಹಲವು ಬಗೆಯದು. ಕೆಲವೇ ಸಾಲುಗಳಲ್ಲಿ ವ್ಯಕ್ತವಾಗುವ ಒಲವಿನ ಪರಿಯಂತೂ ಅನುಪಮ. ಶಾಯಿರಿ ಸಾಹಿತ್ಯದ ವಿಷಯ ವೈವಿಧ್ಯಮಯವಾದುದು” ಎಂದಿದ್ದಾರೆ. ಶಾಯಿರಿಯ ವಸ್ತು ಹಲವು ತೆರನಾದದ್ದಾದರೂ ಅಲ್ಲಿ ರಾಜ‌ಮರ್ಯಾದೆ ಇರುವದು ಒಲವಿಗೇನೆ. ಪ್ರೀತಿಯ ವಿಷಯವನ್ನು ಬಿಟ್ಟು ಬರೆಯಲ್ಪಟ್ಟ ಶಾಯಿರಿಗಳು ಕಡಿಮೆಯೆ.

೬೨ ಪುಟಗಳಲ್ಕಿ ೧೩೪ ಶಾಯಿರಿಗಳು ಈ ಸಂಕಲನ ದಲ್ಲಿವೆ. ಪ್ರೇಮದ ನವಿರುಭಾವ, ನೋವಿನ ನವಿರು ಎಳೆಗಳು, ತನ್ನವಳ ಸೌಂದರ್ಯ ಚಿತ್ರ ಇಲ್ಲಿ ಶಾಯಿರಿಗಳಾಗಿವೆ. ಎಲ್ಲಿಯೇ ಬರೆಯಲ್ಪಡಲಿ ಅಲ್ಲಿ ಪ್ರೇಮಿಯ ನೋವು ನಲಿವಿನ ಚಿತ್ತಾರವಿರದಿರೆ ಅದು ಶಾಯಿರಿ ಹೇಗಾದೀತು? ತನ್ನ ಪ್ರೇಮದ ನಶೆಯಲ್ಲಿ ತೊದಲದ ಕವಿ ಶಾಯರ್ ಹೇಗೆ ಆದಾನು? ಆತ ಹೇಳಿ ಕೇಳಿ ಪ್ರೇಮದ ಅಮಲು ತುಂಬಿದವನು. ಅವನಿಗೆ ಪ್ರೇಮದ ಬಣ್ಣನೆ ಬಿಟ್ಟು ಬೇರೇನೂ ತಿಳಿಯದು. ಆಕೆ ಎಂದರೆ ಅವನಿಗೆ ಬದುಕಿನ ಗೆಲುವು ತುಂಬುವ ಸಂಗಾತಿ.

ಆಕಿ ನಕ್ಕಳಂದ್ರ ಸ್ವರ್ಗ ಸಿಕ್ಕಂಗೈತಿ ಆಕಿ ನಗಿಯಾಗ ಪ್ರೀತಿ ತುಂಬಿ ತುಳಕತೈತಿಆಕಿ‌ನಕ್ಕಳಂದ್ರ ಮನಸು ತುಂಬಿ ಬರತೈತಿಆಕಿ ನಗಿಯಾಗ ಸಾವುಗೆಲ್ಲುವ ಸತ್ಯ ತುಂಬೈತಿ ಆಕೆಯ ಪ್ರೀತಿ ಅವನಿಗೆ ಬರೀ ಸುಖವನ್ನೇನೂ ಇತ್ತಿಲ್ಲ. ದುಃಖವೂ ಬಂದಿದೆ.ಆದರದನ್ನೂ ಆತ ಸಂಭ್ರಮಿಸುವ ವ್ಯಾಮೋಹಿ. ಈ ಹುಚ್ಚು ವ್ಯಾಮೋಹವಿರದಿರೆ ಅದು ಶಾಯಿರಿ ಹೇಗಾದೀತು? 

ನಿನ್ನ ಎದಿಯಾಗ ಚುಚ್ಚಿದನಿನ್ನ ಕಣ್ಣಿನ ಬಾಣ ರಕ್ತಸಿಕ್ತವಾಗೈತಿ ಬಾಣಕ್ಕ ಹತ್ತಿದ ನೆತ್ತರನೂನಿನ್ನ ಪ್ರೀತಿಗೆ ಹಾತೊರಿಯಾಕ ಹತ್ತೈತಿ
ಇಲ್ಲಿಯ ಎಲ್ಲ ಶಾಯಿರಿಗಳ ಭಾಷೆ ಉತ್ತರ ಕರ್ನಾಟಕದ ವಿಶೇಷ ಭಾಷೆ. ಅದರಲ್ಲೂ ಆಡುಮಾತಿನ ದ್ವನಿ, ವ್ಯಂಗ್ಯ, ವಿಡಂಬನೆಯೇ ಶಾಯಿರಿಗಳ ವಿಶಿಷ್ಟ ಶಕ್ತಿ. ಒಂದೋಂದು ಶಾಯರಿ  ಓದಿದೊಡನೆಯೆ ವಾವ್ ಎಂಬ ಪದ ನಿಮ್ಮ ತುಟಿಯಂಚಿನಲ್ಲಿ ಬಂದು ಕವಿಯ ವಿಶಿಷ್ಟ ಕವಿತ್ವ ಮನಸು ಗೆಲ್ಲುತ್ತದೆ. ಹರೆಯದ ಹುಚ್ವು‌ ಮೋಡಿಯೇ ಕವಿಯಿಂದ ಶಾಯಿರಿ ಬರೆಯಲು ಹಚ್ಚಿದೆ.ಈ ವಯಸ್ಸಲ್ಲಿ ಬಂದ ಪ್ರೀತಿಯ ವಿಷ ನೆತ್ತಿಗೇರಿ ಸಾವಿನತ್ತಲೂ ದೂಡಬಹುದು. ಆದರೆ  ಅದನ್ನು ಗಮನಿಸಲಾರ ಪ್ರೀತಿ ಅನ್ನು ವಿಷ ಕುಡದೀನಿಸಾಯಾಕ ಒದ್ದಾಡಾಕ ಹತ್ತೇನಿನೀ ಬಂದ್ರ ನಾಕು ದಿನ ಬದುಕತೆನಿಇಲ್ಲಂದ್ರ ಸಾವಿನ ಕೂಡ ಮಲಗತೆನಿ ಇದು ಅವನ ನಿರ್ದಾರವೂ ಹೌದು,  ಆತ ಎಂತಹ ಪ್ರೀತಿಯ ಹುಚ್ಚನೆಂದರೆವಾದರಲ್ಲಿ ಸಾವು ಬ಼ಮದರೂ ಅವನಿಗೆ ಸಹ್ಯವೇ? “ನಿನ್ನ ಚಿಂತಿ‌ಮಾಡಿ ಮಾಡಿ ನಾ ಎಷ್ಟ ಸೊರಗಿನಿ‌ನೋಡು, ನಿನ್ನ ಚಿಂತ್ಯಾಗ ನಾನು ಚಿತೆಗೆರಿನಿ ಬಿಡು” ಎನ್ನುವ ಹುಚ್ಚು‌ ಪ್ರೀತಿ ಅವನದು. ಏಕೆಂದರೆ‌ ಇದು ಹರೆಯದ ಮಾತು. “ಹರೆ ಬಂದ್ರ ಅದು ಖರೆನೆ ಹೇಳತೈತಿ” ಹರೆಯ ಬದುಕಿನ‌ ಮುಖ್ಯ ಭಾಗವೂ ಹೌದು. ಅದಿಲ್ಲದೇ ಬದುಕಿಲ್ಲ. ಹರೆಯವನ್ನು ಸರಿಯಾಗಿ ಬಳಸಿಕೊ಼ಳ್ಳುವ ಜಾಣ್ಮೆಯೂ ಬೇಕು. ಅದನ್ನೇ‌ ಕವಿ ಹರೆ ಬಂದ್ರ ಒಂಚೂರು ಜೋಲಿ ಹೊಕ್ಕೈತಿನಾವು ಜ್ವಾಕಿಲೆ ನಡೆದರೆ ಬಾಳೆವು ಚಂದಕ್ಕೈತಿ ಎನ್ನುತ್ತಾನೆ ಈ ಹರೆಯವೆಂಬ ದುಮ್ಮಿಕ್ಕಿ ಹರಿಯುವ ನದಿಯ ನೀರನ್ನು ಆಣೆಕಟ್ಟು ಕಟ್ಟಿ ಸಂಗ್ರಹಿಸಿದರೆ ವರಿಷವೆಲ್ಲ ಬೆಳೆವ ಬೆಳೆಗೆ ಬೇಕಾದ ನೀರಾಗಿಸಬಹುದು. ದುಮ್ಮಿಕ್ಕುವ ಶಕ್ತಿಗೆ ವಿದ್ಯುಚ್ಚಕ್ತಿ ಯಾಗಿಸಲೂಬಹುದು ಬ಼ಳಸುವ ಜಾಣ್ಮೆ ಬೇಕು ಎನ್ನುತ್ತಾನೆ.

ಪ್ರೀತಿ ಅನೇಕ ಸಲ ಅವನ ನೋವಿಗೆ ಕಾರಣವಾಗಿದೆ ಯಾದರೂ ಅದು ಬರೀ ಕೊಲ್ಲುವ ಪ್ರೀತಿಯಷ್ಟೇ ಅಲ್ಲ ಕಾಯುವ ರಕ್ಷೆಯೂ ಆಗಬಲ್ಲುದು. ಅದನ್ನೇ ಕವಿ ನಿನ್ನ ಪ್ರೀತಿ ಮನಸು ತುಂಬಿದ್ರ ಸಾಕುಈ ಜೀವಾ ಕುಣದಾಡತೈತಿ ಪ್ರೀತಿ ಬೆಳಕು ಬಿದ್ರ ಇನ್ನೂ ಗಟ್ಟಿಯಾಕ್ಕೈತಿ
ಹೀಗೆ ಪ್ರೀತಿ ಸುಡುವ ಕೆಂಡವಾಗದೆ ಬೆಳಗುವ  ಬೆಳಕಾದ ಸಂದರ್ಭವೂ ಇದೆ. ಬರೀ ಅವಳ‌ ನೆನಪೇ‌ ಕತ್ತಲೆಯನ್ನು ದೂಡುತ್ತದೆ. ಇನ್ನು ಸಾಕ್ಷಾತ್ ಅವಳೇ ಬಂದರೆ ಹೇಗಿರಬೇಡ? ಕವಿ ಕಲ್ಪನೆಯಲ್ಲೇ ಊಹಿಸಿ ಸಂತೋಷ ಪಡುತ್ತಾನೆ.

ಅವಳ ಸೌಂದರ್ಯ ವರ್ಣನೆಯೇ ಶಾಯಿರಿಯ ಪ್ರಧಾನ ಭಾಗ ಅವಳ ಕಣ್ಣು ಮೂಗು ಹೀಗೆ ಒಂದೊಂದು  ಅಂಗ ಬಣ್ಣನೆಯೂ ಅವನಿಗೇ ವಿಶೇಷವೇ ಅವಳ‌ ನಡಿಗೆ ನವಿಲಿನಂತೆ. ಹುಡುಗರಲ್ಲಿ ಮಾತ್ರವಲ್ಲ. ಮುದುಕರಲ್ಲೂ ಅದು “ತೆಲಿ ಕೆಡಿಸುವಂಥದು” ಅವಳ ಕೂದಲು ಹಾರುತ್ತ ಅವಳ‌ ಕೆನ್ನೆ ಸ್ಪರ್ಶಿಸಿದ್ದು ಕವಿಗೆ ಅಸೂಯೆ ಮೂಡಿಸಿದೆ. ಆಕೆ ಆಕೂದಲಿಗೆ ಕೊಟ್ಟ ಸದರ ಕವಿಗೆ ಹೆಚ್ಚು ಅನ್ನಿಸಿದ್ದೂ ಉಂಟು. ಅಂತೆಯೇ ಆತ ಆಕೆಗೆ
ನಿನ್ನ‌ ಮುಂಗುರುಳು ಎಷ್ಟು ಚಂದಮುಖದ ಮ್ಯಾಗ ಹಾರ್ಯಾಡತಾವು ಅವುಕ ಸಲಿಗೆ ಕೊಟ್ಟಿ ಅಂತ ಕಾಣತೈತಿಎಲ್ಲೆಂದರಲ್ಲಿ ನಿನ್ನ ಗಲ್ಲಕ್ಕ ಮುತ್ತಿಡತಾವು ಎನ್ನುತ್ತಾನೆ ಉತ್ತರ ಯಾರು ಕೊಡುವವರು?). ಅವ಼ಳೇ ಉತ್ತರಿಸಬೇಕಲ್ಲವೇ?

ಇಟಗಿಈರಣ್ಣನವರಂತಹ‌ ಪ್ರಸಿದ್ದರ ಶಾಯಿರಿಗಳು ನಾಲ್ಕು ಸಾಲಲ್ಲಿ ಇರುವದನ್ನು ನೋಡುತ್ತೇವೆ ಆದರೆ ಮರುಳ ಸಿದ್ದಪ್ಪನವರು ಬಹಳಷ್ಟು ಸಲ ನಾಲ್ಕೇ ಸಾಲಿಗೆ ಶಾಯಿರಿ ಸೀಮಿತಗೊಳಿಸುವರಾದರೂ ಅದು ಒಮ್ಮೊಮ್ಮೆ ಏಳೆಂಟು ಸಾಲಿಗೂ ವಿಸ್ತರಿಸುವದುಂಟು.

ಇಡೀ ಕವನ ಸಂಕಲನದ ತುಂಬ ತುಂಬಿರುವುದು ಪ್ರೀತಿಯೇ. ಒಂದೇ ಒಂದು ಪದ್ಯ ಬೆಳಕಿನ ಅಚ್ಚರಿ ಕುರಿತು ಬರೆದದ್ದು ಬಿಟ್ಟರೆ ಇಡೀ ಸ಼ಂಕಲನ ಪ್ರೇಮಮಯವೇ. ಕವಿಯನ್ನು ಯಾರೋ‌ ಕೇಳಿದರಂತೆ ನೀವು ಏಕೆ ಹೀಗೆ ಬರೀ ಪ್ರೀತಿಯ ಬಗ್ಗೆ ಬರಿತೀರಿ? ಅದಕ್ಕೆ ಕವಿ ಹೇಳಿದ ಉತ್ತರ
ನೀವ್ಯಾಕರಿ ಬರಿ ಪ್ರೀತಿಮ್ಯಾಲಶಾಯರಿ ಬರಿತಿರಿ ಅಂತಾರಎದಿ ತುಂಬ ಪ್ರೀತಿ ಐತಿ ಅನ್ನೂದುಗೊತ್ತಿಲ್ಲದ ಅವರು ಮಾತಾಡತಿರತಾರ
ಕವಿ ಪ್ರೀತಿಯ ರಾಯಭಾರಿ. ಪ್ರೀತಿಯನ್ನೇ ಬಿತ್ತಿ ಪ್ರೀತಿಯನ್ನೇ ಬೆಳೆದಿದ್ದಾನೆ. ಅವನ ಪ್ರೀತಿಯ ಹೊಳೆಯೊಳಗೆ ಮಿಂದು ನಾವೂ ಕ್ಷಣ ಹೊತ್ತು ಪ್ರೀತಿಯ ಅಮೃತದ ಸವಿ ಉಣ್ಣಬೇಕಷ್ಠೇ. ಬದುಕಿನ ಉತ್ಸಾಹವನ್ನು ಹೆಚ್ಚಿಸುವ ಈ‌ ಮಧುರ ಸಾಲುಗಳು ಓದುಗರಲ್ಲಿಯೂ ಅವರ ಯೌವನವನ್ನು ನೆನಪಿಸುವ ಸಾಲುಗಳು. ಏಕೆಂದರೆ ಹರೆಯವೆಂಬುದು ಜೀವನದೊಂದು ವಯದ ಭಾಗವಲ್ಲ. ಅದು ಜೀವನೋತ್ಸಾಹಕ್ಕೆ ಸಂಬಂಧಿಸಿದ್ದು .ಪ್ರೀತಿಗೆ ಮುಪ್ಪಿಲ್ಲ. ಅನುಭವಿಸುತ್ತ ಸಾಗುವ ಗುಣ ಬೇಕಷ್ಟೇ! ಪ್ರೇಮ ಪ್ರೀತಿಯ ಪಲಕುಗಳನ್ನು ಮನ ದಣಿಯೆ ಸವಿಯಬೇಕು. ನಮ್ಮನ್ನೂ‌ ಮರುಳುಗೊಳಿಸುವ ಈ‌ ಮರುಳನ ಶಾಯಿರಿಗಳ ಲೋಕದೊಳಗೆ ವಿಹರಿಸಬೇಕು.

‍ಲೇಖಕರು Admin

April 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: