ಪೋಸ್ಟ್ ಕೋವಿಡ್ ಕಥೆಗಳು…

ರೂಪಾ ಮಂಜಪ್ಪ ನರಸಾಪುರ 

ಬೆಳಿಗ್ಗೆ ಎದ್ದೇಳೋದು, ನಿದ್ದೆಗಣ್ಣಲ್ಲಿ ಬಚ್ಚಲುಮನೆ ಕಡೆ ಕುಡಿದವರಿಗಿಂತ ಬಲು ಜೋರಾಗಿ ಜೋಲಿ ಹೊಡೆಯುತ್ತಾ ಹೋಗಿ..ಬೇಕೋ ಬೇಡವೋ ಎನ್ನುವಹಾಗೆ ಹಲ್ಲುಜ್ಜಿ, ಮುಖ ಒರೆಸಿಕೊಳ್ಳುತ್ತಾ ಹೋಗಿ ಫ್ಲಾಟ್ ನ ಬಾಗಿಲು ತೆಗೆದು.. ಎಷ್ಟು ಬೆಳಕಾಗಿದೆ ಅಂತಾ ಲೆಕ್ಕಾಚಾರ ಹಾಕಿ, ಆಫೀಸ್ ಟೈಮಿಂಗ್ಸ್ ನೆನಪಾಗಿ ಬಚ್ಚಲು ಮನೆಗೆ ಹೋಗಿ ಒಂದು ತಂಬಿಗೆ ನೀರು ತಲೆಯ ಮೇಲೆ ಬಿದ್ದ ಕೂಡಲೇ, ಇದ್ದ ಬದ್ದ ಜವಾಬ್ದಾರಿಗಳೆಲ್ಲಾ ಓಡಿಕೊಂಡು ಬಂದು ಈ ಬುರುಡೆ ಒಳಗೆ ಕೂತುಬಿಟ್ಟರೆ, ಅಷ್ಟೇ ಅಲ್ಲಿಂದ ಶುರು ಜಂಜಾಟ, ಕೆಲ್ಸ, ಆಫೀಸ್, ಮನೆ, ಮಕ್ಳು etc etc ಇದೆಲ್ಲದರ ಮಧ್ಯೆ ಮತ್ತೆ ನೆಮ್ಮದಿಗೆ ನಾವು ನೆನಪಾಗೋದು ರಾತ್ರಿ ನಿದ್ದೆಯಲ್ಲಿ.. ಬೆಳಗಾದರೆ ಮತ್ತದೇ ಓಡುತ್ತಿರುವ 5G ಪ್ರಪಂಚ..

ನಮ್ಮದೇ ಬದುಕಿನ ಜಂಜಡಗಳ ಮಧ್ಯೆ, ಸುತ್ತ ಇರುವವರು ಯಾರು ನಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂದು ನೋಡುವಷ್ಟು ಪುರುಸೊತ್ತಿಲ್ಲ, ಪುರುಸೊತ್ತಿದ್ದಾಗ ನೋಡಬೇಕು ಎಂದರು ಅವರೇ ಇರುವುದಿಲ್ಲ.ಚಿಕ್ಕಂದಿನಿಂದಲೂ ಕಾಡಿದ ಮತ್ತು ಈಗಲೂ ಕಾಡುತ್ತಿರುವ ಏಕೈಕ ವಿಷಯವೆಂದರೆ ಈ ಬದುಕು ಮತ್ತು ಸಾವು.. ಜೊತೆಗೆ ಈ ಓಡುತ್ತಿರುವ ಜಗತ್ತು.

ಜನ ಯಾಕೆ ಸಾಯ್ತಾರೆ? ಸತ್ತ ಮೇಲೆ ಎಲ್ಲಿಗೆ ಹೋಗ್ತಾರೆ ಅನ್ನೋ ಕುತೂಹಲ ಹಾಗೆ ಎಲ್ಲದ್ದಕ್ಕೂ ದಾರಿ ಹುಡುಕುವ ನಾವುಗಳು ಸತ್ತವರನ್ನು ಹುಡುಕುವ ದಾರಿ ಕಂಡು ಹಿಡಿಯಲು ಸಾಧ್ಯವಿಲ್ಲ ನೋಡಿ, ಇದ್ದಿದ್ದರೆ ಅದು ಇನ್ನೊಂದು ದೊಡ್ಡ ತಲೆ ನೋವಾಗುತ್ತಿತ್ತು. ಎಂದೋ ಎಲ್ಲೋ ಯಾರದೋ ಒಬ್ಬರ ಭೂಮಿಯ ಋಣ ತೀರಿದಾಗ, ಇನ್ಯಾರೋ ಆಗ ತಾನೇ ಹೆಜ್ಜೆ ಇಡುತ್ತಾರೆ.. ಎಲ್ಲರಿಗೂ ಗೊತ್ತು ಈ ಬದುಕು ಶಾಶ್ವತ ಇಲ್ಲ ಎಂದು.ಆದರೂ ಒಬ್ಬರನ್ನೊಬ್ಬರು ಹತ್ತಿರವಿದ್ದೇ ನೋಡುವಷ್ಟು, ಪ್ರೀತಿಯಿಂದ ಮಾತನಾಡುವಷ್ಟು ತಾಳ್ಮೆಯಿಲ್ಲ ಬದಲಿಗೆ ದ್ವೇಷ, ಸ್ವಾರ್ಥ.. ಎಲ್ಲವೂ ತನಗೆ ಬೇಕೆನ್ನುವ ದುರಾಸೆ.

ಭೂಮಿಯೇನೋ ಅವರಪ್ಪನ ಆಸ್ತಿ ಎನ್ನುವಂತೆ, ಅದು ಬೇಕು ಇದು ಬೇಕು ಅಂತ ಅತೀ ವಿಜ್ಞಾನಕ್ಕೆ ಕೈ ಹಾಕಿ ಹೊಸ ಹೊಸ ಆವಿಷ್ಕಾರ ಮಾಡಲು ಓಡ್ತಿರೋ ಜನ. ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಬದುಕು ನೆನೆಸಿಕೊಂಡರೆ ಒಮ್ಮೆ ಭಯವಾಗುತ್ತದೆ.

ಅದಿರಲಿ ಬರೀ ಈ ಮೂರು ವರ್ಷಗಳ ಹಿಂದಿದ್ದ ಬದುಕು ಈಗಿಲ್ಲ, ಕೋವಿಡ್ ಮುಂಚೆಗಿಂತ, ಕೋವಿಡ್ ನಂತರದ ಈಗಿನ ದಿನಗಳಲ್ಲಿ ಜನ ಸ್ವಲ್ಪ ಜಾಸ್ತಿಯೇ ಎಚ್ಚೆತ್ತುಕೊಂಡಿದ್ದಾರೆ, ಯಾವಾಗ ಏನಾದರೂ ಆಗಬಹುದು ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಎಂದಿಗೂ ಜೊತೆಯಾಗಿರುತ್ತಾರೆ ಎಂದುಕೊಂಡಿದ್ದ ಎಷ್ಟೋ ಆತ್ಮೀಯರು ಹೇಳದೆ ಕೇಳದೆ ಕೋವಿಡ್ ಕಾರಣ ಹೇಳಿ ಹೋಗಿಬಿಟ್ಟಿದ್ದಾರೆ, ಹೀಗೂ ಬದುಕು ಬೀದಿಗೆ ಬರಬಹುದ ಎನ್ನುವ ಅರಿವು ಕೆಲವರಿಗಾದರೆ, ಎಂತಹ ಸ್ಥಿತಿ ಬಂದರು ಎದುರಿಸಿ ನಿಲ್ಲುತ್ತೇವೆ ಎನ್ನುವವರು ಇನ್ನೊಂದೆಡೆ. ನಿನ್ನೆ ಇದ್ದವರು ಮರುದಿವಸ ಮಾಯವಾದದ್ದು ಮತ್ತೊಂದು ಕಡೆ.

ಆ ದಿನ ಯಾವುದೋ ಕೆಲಸದ ನಿಮಿತ್ತ ಬಸವನಗುಡಿಗೆ ಹೋಗಬೇಕೆಂದು ಓಲಾ ಬುಕ್ ಮಾಡಿದೆ, ಯುವರ್ ರೈಡ್ ಕ್ಯಾನ್ಸಲ್ಡ್ ಅಂತ ಒಂದೆರಡು ಬಾರಿ ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು ಓಲಾದವರು, ಮೂರನೇ ಬಾರಿ ಮತ್ತೆ ಬುಕ್ ಮಾಡಿದೆ, ಪುಣ್ಯಕ್ಕೆ ಆಕ್ಸೆಪ್ಟ ಮಾಡಿದ ಓಲಾ ಅಣ್ಣಾ ತಕ್ಷಣ ಕಾಲ್ ಮಾಡಿ, ಮೇಡಂ ಎಲ್ಲಿದೀರಾ? ಅಲ್ಲಿಗೆ ಬರ್ತೀನಿ ಹೇಳಿ ಅಂದ್ರೂ..

ನಾನು ನನ್ನ ಅಡ್ರೆಸ್ ಹೇಳಿದೆ, ಐದು ನಿಮಿಷದಲ್ಲಿ ಬಂದು ಪಿಕ್ ಮಾಡಿದ್ರು, ಯಾವ್ ಕಡೆ ಮೇಡಂ ಅಂತ ಕೇಳಿದ್ರು, ನಾನು ಬಸವನಗುಡಿ ಹೋಗ್ಬೇಕು ಅಂತಾ ಹೇಳಿ ದಾರಿಬದಿಯಾ ಅಂಗಡಿಗಳ ಸಾಲು ಅಲ್ಲಿಯ ಜನರನ್ನು ನೋಡುತ್ತಾ ಕೂತಿದ್ದೆ, ತಕ್ಷಣ ಮಾತು ಶುರು ಮಾಡಿದ ಡ್ರೈವರ್ ಅಣ್ಣಾ..

ಏನ್ ಮೇಡಂ ಇದು ಕೋವಿಡ್ ಬಂದು, ಲೈಫ್ ಅನ್ನೋದು ಸುಮಾರು ಜನರ ಬದುಕನ್ನ ಮೂರಾಬಟ್ಟೆ ಮಾಡ್ಬಿಡ್ತು. ಪಾಪ ಎಷ್ಟೊಂದ್ ಜನ ಒದ್ದಾಡಿಬಿಟ್ರು ಕೋವಿಡ್ ನಲ್ಲಿ. ಮತ್ತೇನ್ ಮೇಡಂ ನೀವೇನು ಕೆಲ್ಸ ಮಾಡ್ತಿದೀರಾ? ಎಲ್ಲಿ ಏನು ಅಂತ ವಿಚಾರಿಸತೊಡಗಿದ. ನಾನು ಐಟಿ ಕಂಪನಿಯೊಂದ್ರಲ್ಲಿ ಕೆಲ್ಸ ಮಾಡ್ತಿದೀನಿ ಅಂತ ಹೇಳ್ತಿದ್ದ ಹಾಗೆ.. ಓಲಾದವ – ಅಯ್ಯೋ ಮೇಡಂ ಹೌದ, ಒಳ್ಳೆದಾಯ್ತು ಬಿಡಿ.. ಈ ಕೋವಿಡ್ ನಲ್ಲಿ ಯಾರಾದ್ರೂ ಮನೇಲಿದ್ದು ಆರಾಮಾಗಿದ್ರು ಅಂದ್ರೆ ಅದು ಐಟಿ ಅವ್ರೆ ಅನ್ಸತ್ತೆ ಅಲ್ವಾ..

ಹಾಗೇನಿಲ್ಲ ಸರ್ ಎಂದೆ ನಾನು..
ಓಲಾದವ: ಅಯ್ಯೋ ಮೇಡಂ ನನ್ನ ಲೈಫ್ ಮುಗ್ದೆ ಹೋಯ್ತು ಅಂದ್ಕೊಂಡಿದ್ದೆ ಲಾಕ್ಡೌನ್ ಅಲ್ಲಿ.
ಬಟ್ ದೇವ್ರು ಏನೊ ಒಂದೂ ದಾರಿ ತೋರ್ಸಿದ.
ನೀವೇನ್ ಕೆಲ್ಸ ಮಾಡ್ತಿದ್ರಿ ಮುಂಚೆ ಅಂತಾ ಆಶ್ಚರ್ಯವಾಗಿ ಕೇಳಿದೆ.
ಓಲಾದವ : ನಾನು ನಿಮ್ಮ ತರ ಓದ್ಕೊಂಡಿದೀನಿ ಮೇಡಂ, ಡಿಪ್ಲೋಮ ಆಗಿದೆ ಒಂದು ದೊಡ್ಡ ಹೋಟೆಲ್ ನಲ್ಲಿ ಹತ್ತು ವರ್ಷದಿಂದ ಮ್ಯಾನೇಜರ್ ಕೆಲ್ಸ ಮಾಡ್ತಿದ್ದೆ. ಕೋವಿಡ್ ಬಂದ್ಮೇಲೆ ಕೆಲ್ಸದಿಂದ ತೆಗ್ದ್ ಬಿಟ್ರು.. ಅಂತ ಹೇಳಿದ.
ಹೌದಾ ಹತ್ತು ವರ್ಷದಿಂದ ನೀವು ಕೆಲ್ಸ ಮಾಡ್ತಿದ್ರು ಅದ್ಹೇಗೆ ಸಡನ್ ಆಗಿ ಕೆಲ್ಸದಿಂದ ತೆಗೆದ್ರು..

ಅದೇ ಮೇಡಂ, ಈ ಕೋವಿಡ್ ಮಾಯೆ.. ಎಂತಾ ನಂಬಿಕಸ್ತರಿಗೂ ಪೇಪರ್ ಕೊಟ್ಟು ಮನೆಗೆ ಕಳ್ಸೋಕೆ ಕುಮಕ್ ಕೊಡ್ತು ನೋಡಿ, ನಮ್ದು ಹಾಗೆ ಆಗಿದ್ದು ಅಂತ ಹೇಳಿ ಸುಮ್ಮನಾದರೂ ಬಿಡದೆ ನಾನು, ಸರಿ ಮತ್ತೆ, ಕೋವಿಡ್ ಲಾಕ್ಡೌನ್ ಅಲ್ಲಿ ಹೇಗ್ ಮಾಡಿದ್ರಿ ಜೀವನ, ಕೆಲ್ಸ ಬೇರೆ ಇರ್ಲಿಲ್ಲ ಅಂದ್ರಿ..

ಮೇಡಂ ಒಂದೂ ಕೆಲ್ಸ ಹೋದ್ರೆ ಏನಂತೆ, ಎಷ್ಟೋ ಜನ ಬೀದೀಲಿ ಊಟ ಇಲ್ದೆ ಸಾಯ್ಲಿಲ್ವ, ಅವರಷ್ಟು ದೇವ್ರು ನಂಗೆ ಕಷ್ಟ ಕೊಟ್ಟಿಲ್ಲ ಹಾಗೆ ಕೈಕಾಲು ಕಿತ್ಕೊಂಡಿಲ್ಲ, ದುಡ್ಕೊಂಡ್ ತಿನ್ನೋ ಧೈರ್ಯ ಅಂತು ಇದೆ.. ಮ್ಯಾನೇಜರ್ ಆಗಿ ಕೆಲ್ಸ ಮಾಡಿ ಎಕ್ಸ್ಪೀರಿಯೆನ್ಸ್ ಏನೊ ಇರ್ಬೋದು, ಹಾಗಂತ ಬೇರೆ ಕೆಲ್ಸ ಮಾಡ್ಬಾರ್ದು ಅಂತಿದ್ಯಾ? ಕೆಲ್ಸದಿಂದ ಕಿತ್ತಾಕಿದ್ರಲ್ಲ ಅಂತ ನಾನೇನು ಸುಮ್ನೆ ಕೂರ್ಲಿಲ್ಲ, ಅಲ್ಪ ಸ್ವಲ್ಪ ಇದ್ದಿದ್ದು ಸೇವಿಂಗ್ಸ್ ಅಲ್ಲಿ ಆಟೋ ತಗೊಂಡೆ, ಸ್ವಂತ ದುಡಿಮೆ ಮಾಡೋಕೆ ಶುರು ಮಾಡ್ದೆ.

ಮೊದ್ಲೆಲ್ಲಾ ಮೇಲಿನವ್ರು ಹೇಳಿದಂಗೆ ಕೇಳ್ಕೊಂಡ್ ಇರ್ಬೇಕಿತ್ತು ಆದ್ರೆ ಈಗ ನಾನೇ ರಾಜ ಇಷ್ಟ ಬಂದಂಗೆ ಬದುಕ್ತಿದೀನಿ.. ಮೂರು ಹೊತ್ತಿನ ಊಟ ಸಾಕು ಮೇಡಂ ನೆಮ್ಮದಿಯಾಗಿ ಇರೋಕೆ.

ಆಸ್ತಿ ಮಾಡಿ ಏನ್ ಮಾಡ್ಲಿ, ಇವಾಗ್ ನೋಡ್ತಿಲ್ವ ಕೋಟಿ ಕೋಟಿ ಇದ್ದೋರ್ ಕೂಡ ಹೇಳ್ದೆ ಕೇಳ್ದೆ ಟೈಮ್ ಆದ ತಕ್ಷಣ ಹೆಂಗೆ ಎಲ್ಲಾ ಬಿಟ್ಟು ಹೋಗ್ತಿದಾರೆ. ಬಿಡಿ ಮೇಡಂ ಹೋಗ್ಲಿ ಹೇಳಿದ್ರೆ ದೊಡ್ಡ ಕಥೆಗಳು ಎಲ್ಲಾ.

ಅವ್ರ್ ಮಾತುಗಳನ್ನ ಕೇಳ್ತಾ ಕೇಳ್ತಾ, ಎಷ್ಟು ನಿಜ ಅಲ್ವಾ ಅನ್ಸ್ತು, ನಮ್ಮ ಬದುಕಲ್ಲಿರೋ ಕಷ್ಟಗಳೇ ಹೆಚ್ಚು ಅಂತ ತಲೆ ಮೇಲೆ ಕೈಯಿಟ್ಟು ಕೂರೊ ನಮಗಳಿಗೆ, ಆಗಾಗ ಪಾಠ ಹೇಳೋಕೆ ಅಂತಾನೆ ಈ ರೀತಿಯ ವ್ಯಕ್ತಿಗಳು ಸಿಗ್ತಾರೆ ಅಂದ್ಕೊಂಡೆ ಅಷ್ಟ್ರಲ್ಲಿ ಡೆಸ್ಟಿನೇಷನ್ ರೀಚ್ ಆಗಿದ್ವಿ.
ಅರೆ ಅಣ್ಣಾ, ಅಲ್ಲೇ ಲೆಫ್ಟ್ ತಗೊಂಡು ಸರ್ಕಲ್ ಹತ್ರಾ ಇಳ್ಸಿ ಎಂದೆ. ಒಹ್ ಸರಿ ಮೇಡಂ ಎಂದು ಮುಂದೆ ಹೋಗಿ ಸ್ಟಾಪ್ ಮಾಡಿದ್ರು.. ಥ್ಯಾಂಕ್ಸ್ ಅಣ್ಣಾ ಖುಷಿ ಆಯ್ತು ನಿಮ್ಮನ್ನ ಭೇಟಿ ಮಾಡಿ ಅಂತ ಹೇಳಿ ಆಟೋ ಇಳಿದೆ.

ಭಾರವಾಗಿದ್ದ ಮನಸು ಒಂಥರಾ ತಿಳಿಯಾಗಿತ್ತು, ಏನೇನೋ ಯೋಚನೆಗಳನ್ನ ತಲೆಯಲ್ಲಿ ತುರುಕಿ ಒದ್ದಾಡುವ ನಮ್ಮಂತೋರಿಗೆ, ಮೂರು ಹೊತ್ತಿನ ಊಟ, ಹಾಕೋಕೆ ಬಟ್ಟೆ, ಇರೋಕೆ ಒಂದು ನೆರಳು ಸಾಕಪ್ಪ ಅನ್ನೋ ಕಾನ್ಸೆಪ್ಟ್ಯೆ ಸರಿ ಅನ್ಸ್ತು.ತಿಳಿಯಾಗಿದ್ದ ಮನಸು, ಬಸವನಗುಡಿಯ ಗಾಂಧಿಬಜಾರ್ನಲ್ಲಿ ಖುಷಿಯಿಂದ ಹೆಜ್ಜೆಗಳನ್ನ ಇಟ್ಟು ಮುಂದೆ ಹೋಗೋಕೆ ಹುರಿದುಂಬಿಸಿತ್ತು…. ಬದುಕಿಗೆ ಮೂಲ ಅವಶ್ಯಕತೆ ಏನೇನು ಎಂದು ನೆನಪು ಮಾಡಿದ ಆಟೋ ಅಣ್ಣನ ಧೈರ್ಯ, ದೃಢ ನಿರ್ಧಾರ, ಬದುಕುವ ಹುಮ್ಮಸ್ಸು.. ನಾವೇ ಮಾಡಿಕೊಂಡಿರುವ ಕಮಿಟ್ಮೆಂಟ್ ಗಳ ಭಾರವನ್ನೆಲ್ಲ ಕರಗಿಸಿ ಬಿಟ್ಟಂತಾಗಿ.. ಮನಸು ಮತ್ತು ಹೆಗಲು ಎರಡು ತುಸು ಹಗುರಾಗಿತ್ತು..

‍ಲೇಖಕರು Admin

April 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: