ಅತುಲಾ ನೃತ್ಯ ಪಯಣದ ಸಂಭ್ರಮ…

ಶಿವಾನಿ ಹೊಸಮನಿ

 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ  ಕುಮಾರಿ ಅತುಲಾ ಚಂದ್ರಶೇಖರ್ ಅವರ ನೃತ್ಯ ಪಯಣ ಕಾರ್ಯಕ್ರಮವು ಅತ್ಯಂತ ಸುಂದರವಾಗಿ ಮೂಡಿಬಂತು. ನಾಟ್ಯಾಂಜಲಿ ನೃತ್ಯ ಶಾಲೆಯ ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಶ್ರೀಯುತ ಅಶೋಕ್ ಕುಮಾರ್ ಅವರ ಶಿಷ್ಯೆಯಾದ ಕುಮಾರಿ ಅತುಲಾ ಚಂದ್ರಶೇಖಲ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನೃತ್ಯದೆಡೆಗೆ ಅತೀವ ಆಸಕ್ತಿ ಹೊಂದಿದ್ದು ತಮ್ಮ 9ನೇ ವಯಸ್ಸಿನಲ್ಲಿಯೇ ರಂಗಪ್ರವೇಶವನ್ನು ಸಂಪನ್ನಗೊಳಿಸಿದ್ದರು. ನಂತರ ಅತ್ಯಂತ ಆಸಕ್ತಿಯಿಂದ ಕಲಿಕೆಯನ್ನು  ಮುಂದುವರೆಸಿ   ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಳ್ಳುತ್ತಾ  ನೃತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಹಂಬಲ ಹೊತ್ತು, ತಮ್ಮ 10 ವರ್ಷಗಳ ನೃತ್ಯ ಪಯಣವನ್ನು ನೃತ್ಯ ಕ್ಷೇತ್ರದ ವಿದ್ವಾಂಸರು, ಬಂಧುಗಳು, ಸ್ನೇಹಿತರು, ಹಲವಾರು ಕ್ಷೇತ್ರಗಳ ಸಾಧಕರ ಸಮ್ಮುಖದಲ್ಲಿ ಎಲ್ಲರ ಹಾರೈಕೆಯೊಂದಿಗೆ ಅತ್ಯಂತ ವಿಭಿನ್ನವಾಗಿ ನೃತ್ಯ ಕಾರ್ಯಕ್ರಮವನ್ನು ನೀಡುವುದರ ಮೂಲಕ ಸಂಭ್ರಮವನ್ನು ಆಚರಿಸಿಕೊಂಡರು. 

ಪ್ರಥಮ ಪೂಜೆಗೆ ಪಾತ್ರನಾದ ವಿಶಿಷ್ಟ ರೂಪಿಯಾದಂತಹ ಗಜಮುಖ, ಮಂಗಳಕರ,  ವಿಘ್ನನಿವಾರಕನಾದಂತಹ ಗಣೇಶನ ಸ್ತುತಿಯೊಂದಿಗೆ ಕಲಾವಿದೆ ತನ್ನ ನೃತ್ಯ ಪ್ರಸ್ತುತಿಯನ್ನು ಆರಂಭಿಸಿದರು. ಪಾರ್ವತಿಯ ಪ್ರೀತಿಯ ಪುತ್ರ, ಮೋದಕ ಪ್ರಿಯನಾದಂತಹ ಆದಿದೇವನ ವರ್ಣನೆಯನ್ನು ಭಕ್ತಿಪೂರ್ವಕವಾದ ಅಭಿನಯ ಹಾಗು ಸುಂದರ ಭಂಗಿಗಳ ಮೂಲಕ ವರ್ಣಿಸಿದರು. ದೇವತೆಗಳು ಹಾಗು  ಋಷಿಗಳಿಂದ ಪೂಜಿಸಲ್ಪಟ್ಟ, ನಾಗಾಭರಣನಾದ, ರಾಮದಾಸ ಹಾಗು ಆಂಜನೇಯರಿಂದ ಆರಾಧಿಸಲ್ಪಟ್ಟ, ಗಣನಾಯಕನ ಮನಮೋಹಕ ಚಿತ್ರಣವನ್ನು ಕಲಾವಿದೆ ತಮ್ಮ ಖಚಿತ ಹಸ್ತ ಮುದ್ರೆಗಳು, ಪಾದಭೇದಗಳು ಹಾಗೂ ಚಲನೆಗಳೊಂದಿಗೆ ನೀಡಿದರು. 

ಜಯ ದುರ್ಗೆ ದೇವಿ ಸ್ತುತಿಯು ಸರ್ವಶಕ್ತಳಾದಂತಹ ಆದಿಶಕ್ತಿಯ ಸ್ತುತಿಯಾಗಿತ್ತು. ಪ್ರಕೃತಿಯೆಂಬ ಬ್ರಹ್ಮಾಂಡದ ಸೃಷ್ಟಿ ಆ ತಾಯಿಯಿಂದ, ಉಮೆ, ಗೌರಿ, ಲಕ್ಷ್ಮಿ, ದುರ್ಗೆ, ಕಾಳಿ, ಚಾಮುಂಡಿ  ಇವೆಲ್ಲವು ಆ ಅನಂತ ಶಕ್ತಿಯ ವಿವಿಧ ನಾಮಗಳು.ಶಂಕರಿಯಾಗಿ ಶುಭವನ್ನು ನೀಡಿ ಕಾಳಿಯಾಗಿ ರೌದ್ರಾವತಾರವನ್ನು ತಳೆದು ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ  ಮಾಡುವ ಪರಾಶಕ್ತಿಯ ದಿವ್ಯರೂಪವನ್ನು ತಮ್ಮ ಮನೋಹರ ಹಾಗು ಪರಿಪಕ್ವ ಅಭಿನಯದ ಮೂಲಕ ದೈವೀಕ ಅನುಭೂತಿ ನೀಡಿದರು.

ನೃತ್ಯ ಕಾರ್ಯಕ್ರಮದ ಕೇಂದ್ರ ಭಾಗ ವರ್ಣ. ವಿದ್ವಾನ್  ಲಾಲ್ಗುಡಿ ಜಯರಾಮನ್ ಅವರು ರಚಿಸಿದಂತಹ ಚಾರುಕೇಶಿ ರಾಗದ ಇನ್ನುಂ ಎನ್ ಮನಂ ಶ್ರೀಕೃಷ್ಣನ ಪ್ರೀತಿಗಾಗಿ ಹಾತೊರೆಯುತ್ತಿರುವ ನಾಯಕಿ, ಬಾಲ್ಯದಲ್ಲಿ ತನ್ನ ಜೊತೆ ಕೂಡಿ ಆಡಿದ ಕೃಷ್ಣ ಈಗ ತನ್ನ ಮೇಲೆ ಭಾವನೆಯೇ ಇಲ್ಲದಂತೆ ವರ್ತಿಸುತ್ತಿದ್ದಾನೆ ಎಂದು ಆಕೆಯ ದುಗುಡ ವ್ಯಕ್ತಪಡಿಸುತ್ತಾಳೆ. ನೋಟ, ಗಾಳಿ, ಸ್ಪರ್ಶ ಎಲ್ಲೆಲ್ಲೂ ಅವನದ್ದೇ ಛಾಯೆ ಕಾಣುವ, ಎಲ್ಲೆಡೆ ಕೊಳಲಿನ ಗಾನ ಕೇಳುತ್ತಾ ಆತನಿಗೆ ಕಾಯುತ್ತಿರುವ ನಾಯಕಿಯಾಗಿ ಅತುಲಾ ಅವರು ನರ್ತಿಸಿ ಅಭಿನಯಿಸಿದರು. ಕಲಾವಿದೆಯು ತಮ್ಮ ಅಂಗಶುದ್ಧಿ, ಖಚಿತ ನೃತ್ತ, ಅಡವುಗಳು, ಹಸ್ತಪಾದ ಸಮಾಯೋಗಗಳೊಂದಿಗೆ ನುರಿತ ಪ್ರಸ್ತುತಿ ನೀಡಿದರು. ಅಲ್ಲದೆ ಕಲಾವಿದೆಯು ಪ್ರಬುದ್ಧ ಅಭಿನಯ, ಸಂಚಾರಿಗಳ ಕ್ರಿಯಾತ್ಮಕ ಪ್ರಸ್ತುತಿಯೊಂದಿಗೆ ಎಲ್ಲರ ಗಮನ ಹಿಡಿದಿಟ್ಟುಕೊಂಡರು. ಚುರುಕು ಜತಿಗಳು, ಆಕರ್ಷಕ ಕಣ್ಚಲನೆಗಳು, ನಾಯಕಿಯ ತೊಳಲಾಟವನ್ನು ಕೊಳಲನ್ನು ಹಿಡಿದು ಬಿಂಬಿಸಿದ ಪರಿ ಎಲ್ಲವೂ ಮನಸ್ಸೂರೆಗೊಳುವಂತಿದ್ದವು. 

ಹೃದಯದ ಭಾವವು ಶಬ್ಧ ರೂಪವನ್ನು ಪಡೆದು, ಸೃಷ್ಟಿಯಾದ  ನುಡಿರತ್ನಗಳೇ ಆಭಂಗಗಳು,  ಅಭಂಗಗಳಿಗೆ ಕಡೆಯಿಲ್ಲ, ಭಕ್ತರು ಪಂಡರಾಪುರದ ದೇವಾಲಯಗಳಿಗೆ ತೀರ್ಥಯಾತ್ರೆ ಹೋಗುವ ಅವಧಿಯಲ್ಲಿ ಹಾಡುತ್ತಾರೆ. ಭಕ್ತಿ ಪರವಶತೆಯೇ ಜೀವಾಳವಾದ, ದೇವರ ವರ್ಣನೆ ಪಾರಮಾರ್ಥಿಕ ಅರ್ಥವನ್ನು ನೀಡುವ ಆಭಂಗವನ್ನು ಅತ್ಯಂತ ವಿಶಿಷ್ಟವಾಗಿ ಪ್ರದರ್ಶಿಸಲಾಯಿತು. ಸಂತ ಏಕನಾಥರ ನನ್ನ ತವರುಮನೆಯೇ ಪಂಡರಾಪುರ ಎಂಬ ಸಾಲುಗಳುಳ್ಳ, ಭಕ್ತ ಹಾಗೂ ಭಗವಂತನ ಅನ್ಯೋನ್ಯತೆಯನ್ನು ಸ್ವಾರಸ್ಯಕರವಾಗಿ ವರ್ಣಿಸುವ ಈ ಆಭಂಗವನ್ನು ಕಲಾವಿದೆಯ ಚೈತನ್ಯಪೂರ್ಣವಾಗಿ ಭಕ್ತಿ ಪರಾಕಾಷ್ಟತೆಯೊಂದಿಗೆ ನರ್ತಿಸಿದರು. 

ದೇವಸ್ಥಾನಕ್ಕೆ ಭಕ್ತರು ತೆರಳುವಾಗ ಮಾಡುವ ಸಂತಸದ ನೃತ್ಯದ ಸೊಗಡನ್ನು ಈ  ನೃತ್ಯಬಂಧದಲ್ಲಿ ಅತ್ಯಂತ ಸೂಕ್ತವಾಗಿ ಅಳವಡಿಸಲಾಗಿತ್ತು. ಈ ಆಭಂಗದ ನೃತ್ಯ ಸಂಯೋಜನೆಯನ್ನು ವಿದುಷಿ ಅದಿತಿ ಅಶೋಕ್ ಅವರು ಮಾಡಿದ್ದು ಪ್ರಾದೇಶಿಕ  ನೃತ್ಯವನ್ನು  ಸಮ್ಮಿಳಿತಗೊಳಿಸಿದ್ದು ಪ್ರೇಕ್ಷಕರನ್ನು ವಿಠ್ಠಲನ ಭಕ್ತಿಯಲ್ಲಿ ಲೀನಗೊಳಿಸಿತು. ಇಲ್ಲಿ ಕವಿಯು ಕೃಷ್ಣ ರುಕ್ಮಿಣಿಯನ್ನು ತನ್ನ ತಂದೆ ತಾಯಿಯಾಗಿ , ಪುಂಡರೀಕನನ್ನು ತನ್ನ ಸಹೋದರನಾಗಿ, ಚಂದ್ರಭಾಗಾ ನದಿಯನ್ನು ಸಹೋದರಿಯಾಗಿ ವಿವರಿಸಿದ್ದಾರೆ. ಈ ಸುಂದರ ನೃತ್ಯ ವೈಖರಿಯು ಮನಸ್ಸಿಗೆ ಮುದ ನೀಡಿತು. ಈ ಆಭಂಗವು ರಾಗ ಮಿಶ್ರ ಯಮನ್‌ನಲ್ಲಿ ನಿಬದ್ಧವಾಗಿತ್ತು. 

ಶಿವ ಸ್ತುತಿ ನೃತ್ಯದ ಆದಿದೈವ ಶಿವ ಕೈಲಾಸವಾಸಿ, ಭಕ್ತರ ಭಯವನ್ನು ನಿವಾರಿಸುವ ಅಭಯಂಕರನ ವಿಶಿಷ್ಟ ರೂಪವನ್ನು ಒಳಗೊಂಡಿತ್ತು. ಚರ್ಮಾಂಬರಧರ, ಭಸ್ಮಭೂಷಣ , ಚಂದ್ರಶೇಖರ, ಮುಕ್ಕಣ್ಣನ ರುದ್ರರಮಣೀಯ ರೂಪಗಳನ್ನು ಕಲಾವಿದೆಯು ಮನೋಜ್ಞ ಭಂಗಿಗಳು, ಉತ್ಪ್ಲವನಗಳು, ಕ್ಲಿಷ್ಟಕರ ಜತಿಗಳೊಂದಿಗೆ ಸಾದರ ಪಡಿಸಿದರು. ಸಾರಂಗಧರ, ಗಂಗಾಧರ, ಅರ್ಧನಾರೀಶ್ವರ, ನೀಲಕಂಠನಿಗೆ ನಮಿಸಿ, ಸಲಹು ಎಂದು ಬೇಡಿಕೊಂಡು ಆತನ ತಾಂಡವವನ್ನು ಹೊಗಳುತ್ತಾ, ಮಾರ್ಕಂಡೇಯನನ್ನು ಸಲಹಿದ ಪ್ರಸಂಗ, ಕಂದರ್ಪಹರನಾದ ಸಂಗತಿಯನ್ನು ಹೇಳುತ್ತಾ, ನನಗೆ ಮೋಕ್ಷವನ್ನು ಕರುಣಿಸು ಎಂದು ಕಲಾವಿದೆಯು ಅತ್ಯಂತ ಪ್ರಬುದ್ಧತೆಯಿಂದ ಪ್ರಸ್ತುತಪಡಿಸಿದರು. ಈ ಕೃತಿಯು ರಾಗ ಸುಮನಸರಂಜನಿ ಆದಿ ತಾಳದಲ್ಲಿದ್ದು ವಿದ್ವಾನ್ ಕಾರ್ತಿಕ್ ಹೆಬ್ಬಾರ್ ಅವರ ರಚನೆಯಾಗಿತ್ತು. 

ಕವಿ ಶೀಯುತ  ಡಿ.ವಿ. ಗುಂಡಪ್ಪನವರು ರಚಿಸಿರುವ ಅಂತಃಪುರ ಗೀತೆಯಲ್ಲಿ ಬೇಲೂರು ದೇವಸ್ಥಾನದ ಶಿಲಾಬಾಲಿಕೆಯರು ಮತ್ತು ಶ್ರೀ ಚೆನ್ನಕೇಶವ ಸ್ವಾಮಿ ಜೀವಾತ್ಮ ಪರಮಾತ್ಮರಾಗುತ್ತಾರೋ ಅಂತಹ ಒಂದು ಗೀತೆಯನ್ನು ಕಲಾವಿದೆ ಸಾದರ ಪಡಿಸಿದರು. ಬೇಲೂರು ದೇವಾಲಯದ ಮದನಿಕೆಯರಲ್ಲಿ ಒಬ್ಬಳಾದ ಶುಕಭಾಷಿಣಿಯ ವಿಶಿಷ್ಟ ವರ್ಣನೆಯನ್ನು ಹೊಂದಿದೆ. ಮದನಿಕೆಯು ಗಿಳಿಯನ್ನು ತನ್ನ ಸಖಿಯೆಂದು ಭಾವಿಸಿ, ಆತ್ಮೀಯವಾಗಿ ತನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಾಳೆ. ಕವಿ ಕೇಳುತ್ತಾರೆ – ಏನೇ ಶುಕಭಾಷಿಣಿಯೇ ನಿನ್ನ ನೆಚ್ಚಿನ ಸಖಿ ಗಿಳಿಗೆ ಏನು ಅರಹುತ್ತಿರುವೆ, ಯಾರನ್ನು ಹೊಗಳುತ್ತಾ, ಯಾರನ್ನು ತೆಗಳುತ್ತಾ, ಏನು ಚಿಂತೆ, ಏನು ನಿನ್ನ ಸಂತಸ, ಯಾವ ಕಾಂತನಿಗೆ ಸಂತಸದ ವಾರ್ತೆಯನ್ನು ಕಳುಹುತ್ತಿರುವೆಯೇ ಎಂದು ಕೇಳಿ ಚೆನ್ನಕೇಶವನಿಗೆ ನಿನ್ನ ಸಂದೇಶವನ್ನು ತಲುಪಿಸಲು ಇನ್ನಾರು ಸಿಗಲಿಲ್ಲವೇ ಎಂದು ಕೇಳುತ್ತಾರೆ. ಚೈತನ್ಯದ ಚಿಲುಮೆಯಾಗಿ ನರ್ತಿಸಿದ ಕಲಾವಿದೆಯ ನೃತ್ತಾಮೋದದ ಮನೋಲ್ಲಾಸದ ಭಂಗಿಗಳು, ಸ್ಫುಟವಾದ ಕಲ್ಪನೆಗಳು, ಹಸನ್ಮುಖ ಅಭಿನಯ ಮನಸ್ಸೆಳೆದವು.  ಬೇಹಾಗ್ ರಾಗ ಆದಿ ತಾಳದಲ್ಲಿದ್ದ ಸುಶ್ರಾವ್ಯ ಸಂಗೀತವೂ  ನೃತ್ಯಕ್ಕೆ ಕಳೆ ಕಟ್ಟಿತು.

ಕೊನೆಯ ಪ್ರಸ್ತುತಿ ದೇಶ್ ರಾಗದ ತಿಲ್ಲಾನವು  ವೈವಿಧ್ಯಪೂರ್ಣ ಲಯವಿನ್ಯಾಸ ಮತ್ತು ಸುಂದರ ಶೊಲ್ಲುಕಟ್ಟುಗಳ ನಿರೂಪಣೆಯೊಂದಿಗೆ ಕೊಡಿದ್ದು ಚರಣದಲ್ಲಿ ಮಂದಸ್ಮಿತನಾದ ಮುರಳಿ ಮೋಹನನ ನಗು, ನಾದ, ಎಲ್ಲೆಡೆ ತುಂಬಿದೆ, ಚರಾಚರಗಳು ಮಂತ್ರಮುಗ್ಧವಾಗಿವೆ, ಆನಂದ ರಸ ಹರಿಯುತ್ತಿದೆ, ರಾಗ,  ಭಾವ,  ಭಕ್ತಿ ಸಮ್ಮಿಲನವಾಗಿರುವ ಅಪೂರ್ವ ಕ್ಷಣವಿದು ಎಂದು ಶ್ರೀಕೃಷ್ಣನ ಸ್ತುತಿ ಇತ್ತು.  ಈ ಮೂಲಕ ತಮ್ಮ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಸಮಾಪ್ತಿಗೂಳಿಸಿದರು.

ಸಂಗೀತ ವಿದ್ವಾಂಸರುಗಳಾದ ವಿದ್ವಾನ್ ರಘುರಾಂ ಆರ್ ಅವರು ಗಾಯನದಲ್ಲಿ, ಮೃದಂಗದಲ್ಲಿ ವಿದ್ವಾನ್ ಭವಾನಿಶಂಕರ್ ಅವರು ವೇಣು ವಾದನದಲ್ಲಿ ವಿದ್ವಾನ್ ಎಚ್.ಎಸ್ ವೇಣುಗೋಪಾಲ್ ಅವರು, ವಯೋಲಿನ್ ನಲ್ಲಿ ವಿದ್ವಾನ್ ಪ್ರಾದೇಶ್ ಆಚಾರ್ ಅವರು ಹಾಗೂ ರಿದಮ್ ಪ್ಯಾಡ್ ನಲ್ಲಿ ವಿದ್ವಾನ್ ಶ್ರೀ ಅರುಣ್ ಕುಮಾರ್ ಅವರು, ಸುಮಧುರವಾದ ನಿರೂಪಣೆಯಲ್ಲಿ ಡಾ. ಕೆ.ಎಸ್.ಚೈತ್ರಾ ಅವರು ಹಾಗೂ ಕಾರ್ಯಕ್ರಮದ ಎಲ್ಲಾ ನೃತ್ಯಗಳ ನೃತ್ಯ ಸಂಯೋಜನೆ ಮಾಡಿ ನಟುವಾಂಗವನ್ನು ನಿರ್ವಹಿಸಿದ ಕರ್ನಾಟಕ ಕಲಾಶ್ರೀ ಗುರು ಶ್ರೀ ಅಶೋಕ್ ಕುಮಾರ್ ಅವರು ಹಾಗು ವಿದುಷಿ ಅದಿತಿ ಅಶೋಕ್ ಅವರು ಸಂಪೂರ್ಣ ರಸಪ್ರಾಪ್ತಿಗೆ ಪೂರಕವಾದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ನಾಡಿನ ಪ್ರಖ್ಯಾತ ನೃತ್ಯಗಾರ್ತಿ ಕಲಾಮಂಡಲಂ ಶ್ರೀಮತಿ ಉಷಾ ದಾತರ್ ಅವರು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಕ್ರೀಡಾಪಟು ಶ್ರೀ ಪ್ರತೀಕ್ ರಾಜಾ ಅವರು ಹಾಗು ಅಥ್ಲೆಟಿಕ್ ಕೋಚ್ ಹಾಗು ಏಷ್ಯನ್ ಮೆಡಲಿಸ್ಟ್ ಆಗಿರುವಂತಹ ಶ್ರೀಮತಿ ಬಿಂದು ರಾಣಿ ಅವರು ಉಪಸ್ಥಿತರಿದ್ದು  ಆತ್ಮೀಯ ನುಡಿಗಳಿಂದ ಕಲಾವಿದೆಗೆ ಶುಭ ಹಾರೈಸಿದರು.

‍ಲೇಖಕರು Admin

April 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: