ಜಿ ಎನ್ ನಾಗರಾಜ್ ಅಂಕಣ- ಅಜ್ಜಿ, ಅಜ್ಜಂದಿರ ಅರಿವಿನ ಮುಂದಿನ ಹೆಜ್ಜೆ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

6

ಅಜ್ಜಿ, ಅಜ್ಜಂದಿರ ಅರಿವಿನ ಮುಂದಿನ ಹೆಜ್ಜೆ : ಮತ್ತೊಂದು ಅರಿವಿನ ಸ್ಫೋಟ.

ಅಜ್ಜಿ,ಅಜ್ಜಂದಿರಿಂದಾದ ಅರಿವಿನ ಸ್ಫೋಟ ಮುಂದೆ ಹಲ ಹಲವು ಅರಿವಿನ ಸ್ಫೋಟಗಳಿಗೆ ನಾಂದಿ ಹಾಡಿತು.‌ ಇಲ್ಲಿಯವರೆಗೆ ಮಾನವರ ಉಗಮದ ಇತಿಹಾಸದಲ್ಲಿ ಗುರುತು ಹಿಡಿಯಬಹುದಾದ ಗುಣಾತ್ಮಕ  ಬದಲಾವಣೆಗಳನ್ನು ಕಾಣಲು ಹತ್ತಾರು ಲಕ್ಷ ವರ್ಷಗಳ ಕಾಲದ ಹಲ ಹಲವು ಸಣ್ಣ ಸಣ್ಣ ಬೆಳವಣಿಗೆಗಳು‌ ಅಗತ್ಯವಾಗಿದ್ದವು.‌ ಆದರೆ ಕ್ರಿ.ಪೂ. 70,000-30,000 ವರ್ಷಗಳ ಘಟ್ಟದಲ್ಲಾದ ಅರಿವಿನ ಸ್ಫೋಟ ಮಾನವರ ಬೆಳವಿಗೆಗೆ ಹಾಕಿದ ಭದ್ರ ಅಡಿಪಾಯದ ಆಧಾರದ ಮೇಲೆ ಮುಂದೆ ಬಹಳ ವೇಗವಾಗಿ ಮಾನವರ ಬದುಕು ಕೆಲವೇ ಸಾವಿರ ವರ್ಷಗಳ ಅಂತರದಲ್ಲಿ ಹಂತದಿಂದ ಹಂತಕ್ಕೆ ಬೆಳವಣಿಗೆಯಾಗಲಾರಂಭಿಸಿತು.‌

ಮಾನವರ ಆಹಾರ ಲಭ್ಯತೆ ಹೆಚ್ಚುವುದರ ಜೊತೆಗೆ ಸಾವು ನೋವುಗಳ ಪ್ರಮಾಣ ಸ್ವಲ್ಪ ತಗ್ಗಿದ್ದರಿಂದ ಅವರ ಆಯಸ್ಸು 20- ವರ್ಷದಿಂದ 40 ವಯಸ್ಸಿನಷ್ಟು ದುಪ್ಪಟ್ಟಾದದು ಮೊದಲ ಬಾರಿಗೆ ಮಾನವ ಶಿಶುಗಳು ಅಜ್ಜಿ, ಅಜ್ಜಂದಿರನ್ನು ನೋಡಲು ಸಾಧ್ಯವಾದುದರ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಲಾಗಿದೆ. ‌ಇದು ಮಾನವರು ಆಹಾರವಾಗಿ ಬಳಸುತ್ತಿದ್ದ ಬೇಟೆಯ ಪ್ರಾಣಿಗಳು ಮತ್ತು ಗಿಡ, ಮರಗಳ ಬೆಳವಣಿಗೆಯ ಸ್ವರೂಪವನ್ನು, ವಿವಿಧ ಋತುಗಳಲ್ಲಿ‌ ಅವುಗಳ ಲಭ್ಯತೆ, ಬದಲಾವಣೆಗಳನ್ನು ಗಮನಿಸಲು ಸಾಧ್ಯವಾಯಿತು.

ಈ ಅವಲೋಕನದಿಂದ ಸಂಗ್ರಹಿಸಿದ ಮಾಹಿತಿ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಾ ಪ್ರಕೃತಿಯ ಬಗೆಗಿನ ಅರಿವು , ಇಂದಿನ ಭಾಷೆಯಲ್ಲಿ ಹೇಳುವುದಾದರೆ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರಗಳ ಜ್ಞಾನ ಹೆಚ್ಚಾಗತೊಡಗಿತು. ಈ ಅರಿವಿನ ಫಲವೇ ಸಸ್ಯಗಳಿಂದ ಸಂಗ್ರಹಿಸಿದ ಬೀಜಗಳನ್ನು ಬಿತ್ತಿ ಬೆಳೆ ಮಾಡುವುದನ್ನು ಕಂಡುಕೊಂಡದ್ದು. ಹಾಗೂ ಬೇಟೆಯಲ್ಲಿ ಹತವಾದ ಪ್ರಾಣಿಗಳ ಮರಿಗಳನ್ನು ಸಾಕಲಾರಂಭಿಸಿದ್ದು.‌
ಇದು ಒಂದು ಕಡೆ ಮಾನವರ ಬೆಳವಣಿಗೆಯ ಮೇಲೆ ಮತ್ತೊಂದು ಕಡೆ ಈ ಸಸ್ಯ, ಪ್ರಾಣಿಗಳ ಬೆಳವಣಿಗೆಯ ಮೇಲೆ ಗಣನೀಯ ಪರಿಣಾಮವನ್ನುಂಟು ಮಾಡಿತು. ‌

ಮತ್ತೊಂದು ದೊಡ್ಡ ನೆಗೆತ :
ಇಲ್ಲಿಯವರೆಗೆ ಪ್ರಕೃತಿಯಲ್ಲಿ ಸಸ್ಯ, ಪ್ರಾಣಿಗಳ ಬೆಳವಣಿಗೆ, ವಿಕಾಸಗಳು ಪ್ರಕೃತಿಯ ವಿವಿಧ ಪ್ರಕ್ರಿಯೆಗಳ ಮೇಲೆ‌ ಮಾತ್ರ ಅವಲಂಬಿಸಿದ್ದುವು.‌ ಪ್ರಕೃತಿಯ ವಿವಿಧ ಅಂಗಗಳ  ಪ್ರಭಾವದಲ್ಲಿ ಜೀವ ವಿಕಾಸ ನಡೆಯುತ್ತಿತ್ತು. ಇದನ್ನು ನೈಸರ್ಗಿಕ ಆಯ್ಕೆ (natural selection), ಇದೇ ಜೀವ ವಿಕಾಸ, ವಿವಿಧ ಸಸ್ಯ, ಪ್ರಾಣಿ ಪ್ರಬೇಧಗಳು, ವೈವಿಧ್ಯತೆಯ ಮೂಲ ಕಾರಣ ಎಂದು ಡಾರ್ವಿನ್  ಗುರುತಿಸಿದ್ದಾರೆ.

ಆದರೆ ಮಾನವರು ಸಸ್ಯ, ಮರಗಳ ಬೀಜಗಳನ್ನು ಬಿತ್ತಲು, ಪ್ರಾಣಿಗಳನ್ನು ಸಾಕಲು ಆರಂಭಿಸಿದ್ದು ಮನುಷ್ಯರು ಬೆಳೆಸಲಾರಂಭಿಸಿದ ಪ್ರತಿ ಸಸ್ಯ, ಪ್ರಾಣಿಗಳಲ್ಲಿಯೂ ಹೊಸ ಪ್ರಬೇಧಗಳು, ಸಂಕುಲಗಳು, ತಳಿಗಳು ಉಗಮವಾಗಲು ಕಾರಣವಾಯಿತು. ಈ ಪ್ರಕ್ರಿಯೆ ವಿಶ್ವ ಇತಿಹಾಸದಲ್ಲಿ ಮಾನವರ ಆಯ್ಕೆ ಎಂಬ ಹೊಸ ಹಂತವನ್ನು ಉದ್ಘಾಟಿಸಿತು.

ಇಂದಿನ ಮುಖ್ಯ ಆಹಾರದ ಬೆಳೆಗಳನ್ನು ಅವುಗಳ ಕಾಡು ರೂಪಗಳೊಂದಿಗೆ ತುಲನೆ ಮಾಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.
ಯಾರಾದರೂ ಕಾಡು ಬಾಳೆಕಾಯಿ, ಕಾಡು ಮಾವಿನ ಹಣ್ಣನ್ನು ನೋಡಿದ್ದೀರಾ ? ನಿಮ್ಮ ಮನೆಗಳ ಸುತ್ತಲೂ ಅಲ್ಲಲ್ಲಿ ಇರಬಹುದಾದ ವಿವಿಧ ಹುಲ್ಲುಗಳ ಬೀಜಗಳನ್ನು. ಅವುಗಳಿಗೂ ನಾವು ಇಂದು  ಆಹಾರವಾಗಿ ಬಳಸುವ ಬಾಳೆ, ಮಾವು, ಭತ್ತ, ಗೋಧಿಗಳಿಗೂ ಹೋಲಿಸಿ ನೋಡಿ.
ಕಾಡುಬಾಳೆಯ ಕಾಯಿ ಎಂದರೆ ಬಾಳೆಹಣ್ಣಿನ ಆಕಾರದ ಕಾಯಿ ತುಂಬಾ  ಮೆಣಸಿನ ಗಾತ್ರಕ್ಕಿಂತ ಸ್ವಲ್ಪ ದಪ್ಪನೆಯ ಕರಿ  ಬೀಜಗಳಿಂದ ತುಂಬಿ ,ಈ ಬೀಜಗಳಿಗೆ ಅಂಟಿಕೊಂಡಂತೆ ತಿರುಳು ಅಲ್ಲೊಂದಿಷ್ಟು,ಇಲ್ಲೊಂದಿಷ್ಟು. ಬಾಯಿಗಿಟ್ಟರೆ ಬರೀ ಬೀಜಗಳೇ ಬಾಯ್ತುಂಬಾ. ಈ ರೀತಿಯ ಬಾಳೆಯ ಗಿಡಗಳಲ್ಲಿ ಯಾವುದೋ ಕೆಲವು ಬೀಜವಿಲ್ಲದೆ ಇದ್ದವನ್ನು ಗುರುತಿಸಿ ಅವುಗಳನ್ನು ಬೆಳೆಸಲಾರಂಭಿಸಿದ ಮಾನವರು ಸಾವಿರಾರು ವರ್ಷಗಳ ಕಾಲದಲ್ಲಿ ಈಗಿನ ರೂಪ ತಂದು ಹತ್ತು ಸಾವಿರ ವರ್ಷಗಳ ಹಿಂದೆ ಬೆಳೆಯಲಾರಂಭಿಸಿದರು. ಹಾಗೆಯೇ ಕಾಡು ಮಾವು, ಬಹಳ ಸಣ್ಣ ಸಣ್ಣ ಹಣ್ಣುಗಳ ತುಂಬಾ ನಾರು. ಅವುಗಳ ಮಧ್ಯೆ ಒಂದಿಷ್ಟು ತಿರುಳು.‌ ಬಾಯಲ್ಲಿ ಕಚ್ಚಿದರೆ ಆ ನಾರಿನೊಳಕ್ಕೆ ಸಿಕ್ಕಿಕೊಂಡ ಹಲ್ಲುಗಳನ್ನು ಬಿಡಿಸಿಕೊಳ್ಳಲು ಹತ್ತಾರು ನಿಮಿಷ ಹೆಣಗಾಡಬೇಕು. ಇನ್ನು ಹುಲ್ಲಿನ ಬೀಜಗಳು ಬಹು ಸಣ್ಣ, ಕಣ್ಣಿಗೆ ಕಾಣದಷ್ಟು. ಒಣಗಿದೊಡನೆ ಬಿರಿತು ಇಲ್ಲವೇ ಸಿಡಿದು ಗಾಳಿಯಲ್ಲಿ ತೇಲಿಕೊಂಡು ದೂರ ಸಾಗುವಷ್ಟು ಹಗುರ. ಹೀಗೆ ಸಾಗಿ ದೂರ ದೂರ ಎಲ್ಲೆಲ್ಲೋ ಬಿದ್ದು, ಅನುಕೂಲ ದೊರೆತೊಡನೆ ಮೊಳೆತು ಬೆಳೆಯಲು ಸೂಕ್ತವಾದ ರೂಪವದು.

ಇಂತಹುದೇ ರೂಪದಲ್ಲಿದ್ದವು ಗೋಧಿ, ಭತ್ತಗಳು. ಬೀಜ ಮಾಗಿ ಒಣಗಿದೊಡನೆ ಮಾನವರ ಕೈಗೆ ಸಿಗದಂತೆ ಬಿರಿತು ಗಾಳಿಯಲ್ಲಿ ತೇಲಿ ಹೋಗುತ್ತಿದ್ದವು. ಮಾನವರು ಇವುಗಳಲ್ಲಿ ಸ್ವಲ್ಪ ದಪ್ಪಗಿದ್ದ ಕೆಲವು ಬೀಜಗಳನ್ನು‌ ಆರಿಸಿ ಬೆಳೆಯುತ್ತಾ ಬೆಳೆಯಿಂದ ಬೆಳೆಗೆ ಹೆಚ್ಚು ಹೆಚ್ಚು ದಪ್ಪನೆ ಬೀಜಗಳನ್ನು‌ ಹಾಗೂ ಸಿಡಿದು ಹಾರಿ ಹೋಗದ ತೆನೆಗಳನ್ನು ಆರಿಸುತ್ತಾ ಸಾವಿರಾರು ವರ್ಷ ಕಾಲದಲ್ಲಿ ಈಗಿನ ಗೋಧಿ, ಭತ್ತಗಳ ಪ್ರಬೇಧಗಳನ್ನು ರೂಪಿಸಿದರು.

ಸಸ್ಯಗಳನ್ನು ಬೆಳೆಗಳಾಗಿ ರೂಪಿಸಿದ ಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಸಸ್ಯಗಳಿಂದ ಆಹಾರ ಸಂಗ್ರಹಣೆಯಲ್ಲಿ ಹೆಚ್ಚಾಗಿ ತೊಡಗಿದ್ದ ಮಹಿಳೆಯರು .‌ಅವರ ಸೂಕ್ಷ್ಮ ಅವಲೋಕನ ಈ ಸಸ್ಯಗಳ ಬೆಳವಣಿಗೆಯ ವಿವಿಧ ಹಂತ ಹಾಗೂ ಅವುಗಳ ಬೆಳವಣಿಗೆಯ ಅಗತ್ಯಗಳನ್ನು ಗುರುತಿಸಿ ಕೃಷಿಗೆ ಒಗ್ಗಿಸಿತು.‌

ಇಂದಿನ ಇರಾಕ್ ಮತ್ತು ನೆರೆಯ ದೇಶಗಳಲ್ಲಿ ಹರಿಯುವ ಯೂಫ್ರೆಟೀಸ್, ಟೈಗ್ರಿಸ್ ನದಿಗಳು, ಈಜಿಪ್ಟ್‌ನ ನೈಲ್ ನದಿ, ಭಾರತ ಉಪಖಂಡದ ಸಿಂಧೂ ನದಿ, ಚೀನಾದ ಹಳದಿ ನದಿ ಮತ್ತು ಯಾಂಗ್ಟ್ಸೆ ನದಿ ಬಯಲುಗಳು, ಮೆಕ್ಸಿಕೊದ ಸರೋವರಗಳ ತಟಗಳು, ದ. ಅಮೇರಿಕದ ಪೆರುವಿನ ಶಿಖರಗಳು ಇಂದು ಮಾನವರು ಬೆಳೆಯುವ ಮುಖ್ಯ ಬೆಳೆಗಳನ್ನು ಕೃಷಿಗೆ ಒಗ್ಗಿಸಿದ ತಾಣಗಳು. ಈ‌ ತಾಣಗಳಲ್ಲಿ ಮೊದಲ ಕೃಷಿಕರು ತಮ್ಮ ವಿವಿಧ ಅಗತ್ಯಗಳನ್ನು ಪೂರೈಸುವಂತೆ ಪ್ರತಿ ಬೆಳೆಯಲ್ಲಿಯೂ ವಿವಿಧ ತಳಿಗಳನ್ನು ರೂಪಿಸಿಕೊಂಡರು.‌ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ತಳಿಗಳು ರೂಪುಗೊಂಡವು. ಸಾವಿರಾರು ವರ್ಷಗಳ ಕಾಲದ ಅವಧಿಯಲ್ಲಿ ರೂಪುಗೊಂಡ ಈ ತಳಿಗಳು ತೀರಾ ಇತ್ತೀಚಿನವರೆಗೆ ಮಾನವ ಸಮುದಾಯದ ಆಹಾರದ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯ ಪಡೆದಿದ್ದವು.

ಪ್ರಾಣಿಗಳು ಸಾಕಣೆಗೊಳಗಾಗುವ ಪ್ರಕ್ರಿಯೆಯಲ್ಲಿ  ಮೇಲೆ ಇಂತಹ ಮಾನವ ಆಯ್ಕೆ ಪ್ರಕ್ರಿಯೆಗೆ ಒಳಗಾದವು. ಇಂದು ಕೂಡಾ ದನಗಳಲ್ಲಿ ಸ್ವಲ್ಪ ಹೆಚ್ಚು ಮೂಲ ಸ್ವಭಾವವನ್ನು ಉಳಿಸಿಕೊಂಡ ಹಳ್ಳಿಕಾರ್, ಅಮೃತಮಹಲ್ ತಳಿಗಳನ್ನು ನೋಡಿದರೆ ದನಗಳ ಅಂದಿನ ಸ್ವರೂಪ ಹೇಗಿರಬಹುದು ಎಂದು ಊಹಿಸಿಕೊಳ್ಳಬಹುದು. ಮಾಂಸಾಹಾರಿ ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಕ್ರಮಣಕಾರಿಯಾಗಿರುತ್ತಿದ್ದ ಸಸ್ಯಾಹಾರಿ ಪ್ರಾಣಿಗಳಲ್ಲಿ ಕೆಲವು ಮಾನವರ ಪಳಗಿಕೆಗೆ ಒಗ್ಗಿಕೊಂಡವು. ಮೊತ್ತ ಮೊದಲು ಸಾಕು ಪ್ರಾಣಿಯನ್ನಾಗಿ ಮಾಡಿಕೊಂಡದ್ದು ಸ್ವತಃ ಮಾಂಸಾಹಾರಿ ಪ್ರಾಣಿಯಾಗಿದ್ದ ತೋಳಗಳನ್ನು.‌ ಮನುಷ್ಯನ ಬೇಟೆಯ ಸಹಚರನಾಗಿ ಪಳಗಿಸಿಕೊಂಡದ್ದು ನಂತರ ಕುರಿ ಸಾಕಾಣಿಕೆ ಮೊದಲಾದ ಪಶು ಸಂಗೋಪನೆಗೆ, ಮನೆ, ಹೊಲಗಳನ್ನು ಕಾಯಲು ಮತ್ತಿತರ ಕೆಲಸಗಳಿಗೆ ಒದಗಿತು.‌ ಮುಂದೆ ಕುರಿ,ಮೇಕೆಗಳನ್ನು ಪಳಗಿಸಿಕೊಳ್ಳಲಾಯಿತು.‌ ಆರೂಚ್ ಎಂಬ ಪ್ರಾಣಿಯಿಂದ ದನಗಳ ವಿವಿಧ ಪ್ರಬೇಧಗಳು ರೂಪುಗೊಂಡವು. ಇವೆಲ್ಲವೂ ತಮ್ಮ ಆಕ್ರಮಣಕಾರಿತನವನ್ನು  ಬಿಟ್ಟುಕೊಡುವಂತೆ ಮಾನವರ ಆಯ್ಕೆ ಮತ್ತು ಸಾಕಾಣಿಕೆ ಪರಿಣಾಮ ಬೀರಿತು. ಅವುಗಳ ಗಾತ್ರವೂ ತಗ್ಗುತ್ತಾ ಹೋಯಿತು. ದನಗಳು, ಎಮ್ಮೆಗಳು ತಮ್ಮ ಕರುಗಳ ಅಗತ್ಯಕ್ಕೆ ಹೊರತಾಗಿ  ಹತ್ತಾರು ಲೀಟರ್ ಹಾಲು ಕೊಡುವಂತೆ ರೂಪಿಸಿಕೊಳ್ಳಲಾಯಿತು ಎಂಬುದು ಒಂದು ಚೋಜಿಗದ ಸಂಗತಿಯೇ ! ಈ ಪಳಗಿಸಿಕೊಳ್ಳುವ ಕ್ರಿಯೆಯಲ್ಲೂ ಮುಖ್ಯ ಪಾತ್ರ ಮಹಿಳೆಯರದೇ. ಬೇಟೆಗಾರರು ಕೊಂದ ತಮ್ಮ ತಾಯಂದಿರನ್ನು ಹಿಂಬಾಲಿಸಿದ, ಮುದ್ದು ಮುದ್ದಾಗಿ ಕಾಣುತ್ತಿದ್ದ ಮರಿಗಳನ್ನು ಮುದ್ದು ಮಾಡಿ ಬೆಳೆಸಿ ಅವುಗಳ ಮನುಷ್ಯರ ಸಹವಾಸಕ್ಕೆ ಒಗ್ಗಿಕೊಳ್ಳುವಂತೆ ಮಾಡಿದರು.‌ ನಂತರ ಪಶು ಸಂಗೋಪನೆಯ ಕಲೆಯಲ್ಲಿ ಕೆಲ ಬುಡಕಟ್ಟುಗಳು ಪರಿಣತಿ ಪಡೆದುಕೊಂಡರು.

ಹೀಗೆ ವಿಶ್ವಾದ್ಯಂತ ಸಾಕು ಪ್ತಾಣಿಗಳ ವಿಶಿಷ್ಟ ತಳಿಗಳನ್ನು ರೂಪಿಸಿಕೊಂಡದ್ದು ಆ ಪ್ರಾಚೀನ ಪರಂಪರಾಗತ ಪಶು ಸಂಗೋಪನಾ ಸಮುದಾಯಗಳ ಕೊಡುಗೆ.

ಮಾನವರ ಈ ಅರಿವು ಒಂದು ಬುಡಕಟ್ಟಿನ ತಲೆಮಾರಿನಿಂದ ತಲೆಮಾರಿಗೆ ಪ್ರವಹಿಸುತ್ತಾ ಬಂದವು. ಅದೇ ರೀತಿ ವಿವಿಧ ಪ್ರದೇಶಗಳ ಬುಡಕಟ್ಟುಗಳು ಅಲೆಮಾರಿ ಜೀವನ, ವಲಸೆಗಳು, ವ್ಯಾಪಾರ,ವ್ಯವಹಾರಗಳ ಬೆಳವಣಿಗೆ, ಸಂಪರ್ಕ ಸಾಧನಗಳ ಬೆಳವಣಿಗೆಗಳ ಜೊತೆಗೆ ಬುಡಕಟ್ಟುಗಳಿಂದ ಬುಡಕಟ್ಟುಗಳಿಗೆ ಕೂಡಾ ಪ್ರವಹಿಸಿದವು. ಒಂದು ಕಡೆಯ ಶೋಧ, ಪದ್ಧತಿಗಳ ಅರಿವು ಕೆಲ ಸಮಯದ ನಂತರ ಮತ್ತೊಂದು ಪ್ರದೇಶದ ಸಮುದಾಯಗಳಿಗೆ ದಕ್ಕಿತು. ಹೀಗೆ ಪರಸ್ಪರ ಕೊಡು ಕೊಳ್ಳುವಿಕೆಯಲ್ಲಿ ಮನುಷ್ಯರ ಅರಿವು ಮತ್ತಷ್ಟು ವ್ಯಾಪಕಗೊಂಡಿತು. ಮತ್ತಷ್ಟು ವೇಗದ ಬೆಳವಣಿಗೆ ಕಂಡಿತು. ಅರಿವಿನ ಸ್ಫೋಟಗಳು ಮತ್ತಷ್ಟು ಕಡಿಮೆ ಅವಧಿಯಲ್ಲಿಯೇ ಕಾಣಲಾರಂಭಿಸಿದವು. ಕಲ್ಲಿನ ಆಯುಧಗಳನ್ನು ಮಾಡುವಾಗ ಕಂಡ ಖನಿಜಗಳ ಅರಿವು ಲೋಹ ಯುಗಗಳಿಗೆ- ತಾಮ್ರ ಯುಗ, ಕಂಚಿನ ಯುಗ, ಕಬ್ಬಿಣದ ಯುಗಗಳಿಗೆ ಒಂದಾದ ಮೇಲೊಂದರಂತೆ ಕೆಲವೇ  ನೂರು ವರ್ಷಗಳ ಅಂತರದಲ್ಲಿ ಸಂಭವಿಸಿದವು.

ಪ್ರಕೃತಿಯ ಬಗೆಗಿನ ಮಾನವರ ಅರಿವು, ಪ್ರಕೃತಿಯ ಸಂಪತ್ತು, ಶಕ್ತಿಗಳನ್ನು ತಮ್ಮ ಬದುಕಿಗೆ ಬಳಸಿಕೊಳ್ಳುವ ಶಕ್ತಿ ಒಂದೊಂದು ಅರಿವಿನ ಸ್ಫೋಟದೊಂದಿಗೆ ಹಲವು ಪಟ್ಟು ಹೆಚ್ಚಾಗುತ್ತಾ ಹೋಯಿತು. ಅದು ಈಗ ತಳೆದಿರುವ ವಿರಾಟ್ ರೂಪ ಮತ್ತದರ ಸಾಧಕ, ಬಾಧಕಗಳನ್ನು ಮುಂದೆ ಆಯಾ ಕಾಲಘಟ್ಟದ ಬೆಳವಣಿಗೆಯ ವಿವರಗಳೊಂದಿಗೆ ಚರ್ಚಿಸೋಣ.

ಇಲ್ಲಿಯವರೆಗಿನ ಮಾನವರ ಉಗಮ, ಬೆಳವಣಿಗೆ, ಅರಿವಿನ ಸ್ಫೋಟಗಳ ಇತಿಹಾಸ ನಮಗೆ ತಿಳಿಸಿಕೊಡುವ ಅರಿವಿನ ತತ್ವಗಳೇನು? ಅಂದಿನ ಮಾನವರ ಅರಿವಿನ  ಮಿತಿಗಳೇನು ? ಅವುಗಳ ಪರಿಣಾಮಗಳೇನು ?

ಇದು ಈ ಮಾಲೆಯ ದೃಷ್ಟಿಯಿಂದ ಮುಖ್ಯವಾಗಿ ವಿಶ್ಲೇಷಿಸಬೇಕಾದ ವಿಷಯ. ಅದು ಮುಂದಿನ ಸಂಚಿಕೆಯಲ್ಲಿ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

April 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: