ವಿಶೇಷ ಸಂದರ್ಶನ: ಡಿ ಎಸ್ ನಾಗಭೂಷಣ ಅವರೊಂದಿಗೆ ಟಿ ಅವಿನಾಶ್

‘ಭೌತವಾದವೇ ಭಾರತದ ಪ್ರಗತಿಪರತೆಯ ಸಮಸ್ಯೆ..’

ನಮ್ಮ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ನಡೆಗಳ ಬಗ್ಗೆ ಖಚಿತವಾಗಿ ಮಾತನಾಡುವ, ಆಳವಾಗಿ ಚಿಂತಿಸುವ, ನೇರವಾಗಿ ಬರೆಯುವ ಡಿ.ಎಸ್‍.ನಾಗಭೂಷಣ ಸಮಕಾಲೀನ ಸಂದರ್ಭದಲ್ಲಿ ಮುಖ್ಯ ಚಿಂತಕರಾಗಿದ್ದಾರೆ.

ಅವರ ಮಾತು-ಬರಹಗಳಲ್ಲಿ ವ್ಯಂಗ್ಯವಿದ್ದರೂ ಅಲ್ಲಿ ನಂಜಿಲ್ಲ.

ಅವರು ಸಂಪಾದಿಸುತ್ತಿರುವ ‘ಹೊಸ ಮನುಷ್ಯ’ ಸಮಾಜವಾದದ ಹಿನ್ನೆಲೆಯಲ್ಲಿ ಸಮಕಾಲೀನ ಭಾರತದ ವಿದ್ಯಮಾನಗಳ ವಿಶ್ಲೇಷಣೆಗೆ ಮುಖ್ಯ ವೇದಿಕೆಯಾಗಿದೆ.

ಟಿ.ಅವಿನಾಶ್: ನಿಮ್ಮ ಬರಹಗಳನ್ನು ನೀವು ನವ್ಯದ ಉತ್ತುಂಗದಲ್ಲಿ ಅಂದರೆ 1980 ರ ದಶಕದ ಕಾಲದಲ್ಲಿ ಪ್ರಾರಂಭ ಮಾಡಿದಿರಿ. ಇದರ ಜೊತೆಗೆ ದಲಿತ ಚಳುವಳಿಯೂ ಆ ಕಾಲಘಟ್ಟದಲ್ಲಿ ಪ್ರಾರಂಭವಾಗಿತ್ತು. ಆದರೆ ನಿಮ್ಮ ಬರಹಗಳು ಈ ಎರಡೂ ಚಳುವಳಿಗಳ ಪ್ರಭಾವದಿಂದ ಹೊರತಾಗಿವೆ. ಹೇಗೆ ನೀವು ನವ್ಯದ ಪ್ರಭಾವದಿಂದ ತಪ್ಪಿಸಿಕೊಂಡಿರಿ? ನಿಮ್ಮ ಬರಹಗಳ ಹಿನ್ನೆಲೆಯನ್ನು ಸ್ವಲ್ಪ ವಿವರಿಸಿ

ಡಿ ಎಸ್ ನಾಗಭೂಷಣ: ನನ್ನ ಸಾಹಿತ್ಯಾಸಕ್ತಿ ಶುರುವಾಗಿದ್ದು ಖಂಡಿತ ನವ್ಯದ ಉಚ್ಛ್ರಾಯದಲ್ಲಿಯೇ. ಅಂದರೆ 1960ರ ದಶಕದ ಕೊನೆಯಲ್ಲಿ. ಆದರೆ ಬರಹ  ಪ್ರಾರಂಭವಾಗಿದ್ದು- 1970ರ ದಶಕದ ಪ್ರಾರಂಭದಲ್ಲಿ. ಇದಕ್ಕಿಂತ ಮುಂಚೆ ನಾನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಅಲ್ಲಿ ಲಂಕೇಶ್ ಇದ್ದರು.  ಜಿ ಎಸ್ ಶಿವರುದ್ರಪ್ಪನವರ ನೇತೃತ್ವದ ಕನ್ನಡ ವಿಭಾಗ ನಡೆಸುತ್ತಿದ್ದ ವಾರ್ಷಿಕ ವಿಚಾರ ಸಂಕಿರಣಗಳಲ್ಲಿ ಹೆಚ್ಚಾಗಿ ನವ್ಯದ ಕುರಿತಾಗಿ ಬಿರುಸಿನ ಚರ್ಚೆ ನಡೆಯುತ್ತಿತ್ತು. 

ನಾನು ಗಣಿತಶಾಸ್ತ್ರದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಷೇತ್ರದಲ್ಲಿ ಒಲವನ್ನು ಹೊಂದಿದ್ದೆ. ಎಷ್ಟೆಂದರೆ  ತರಗತಿಗಳನ್ನು ತಪ್ಪಿಸಿಕೊಂಡು ಸಾಹಿತ್ಯದ ಗೋಷ್ಠಿಗಳಲ್ಲಿ ಕುತೂಹಲದಿಂದ ಭಾಗವಹಿಸುತ್ತಿದ್ದೆ. ನಮ್ಮ ಅಣ್ಣ ಒಬ್ಬರು ಸೆಂಟ್ರಲ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ಅಧ್ಯಾಪಕರಾಗಿದ್ದರಿಂದ ಮನೆಯಲ್ಲಿ ಲಂಕೇಶ್ ಅವರ ವ್ಯಕ್ತಿತ್ವದ ಕುರಿತು ಚರ್ಚೆ ನಡೆಯುತ್ತಿತ್ತು. ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಕೂಡ. ಆಗ ಲಂಕೇಶ್ ದೊಡ್ಡ ಲೇಖಕರಾಗಿಲ್ಲದಿದ್ದರೂ ‘ಸುಧಾ’ ಪತ್ರಿಕೆಯಲ್ಲಿ ಚುಟುಕುಗಳನ್ನು ಬರೆಯುತ್ತಿದ್ದರು.  ಅದು ನನ್ನನ್ನು ಬಹಳ ಸೆಳೆಯುತ್ತಿತ್ತು ಆಗತಾನೇ ಪ್ರಕಟವಾಗಿದ್ದ ಅವರ ‘ಪ್ರಸ್ತುತ’ ವಿಮರ್ಶಾ ಸಂಕಲನ ಮತ್ತು ‘ನಾನಲ್ಲ’ ಎಂಬ ಕಥಾಸಂಕಲನ ನನ್ನನ್ನು ಅಲುಗಾಡಿಸಿಬಿಟ್ಟಿತ್ತು.

ನನ್ನ ಕಜಿನ್ ಡಿ.ವಿ. ರಾಜಶೇಖರ ಆಗ ಕನ್ನಡ ವಿಭಾಗದ ವಿದ್ಯಾರ್ಥಿ. ಅವನ ಮೂಲಕ ಯು.ಆರ್ ಅನಂತಮೂರ್ತಿ ಅವರ ಸಾಹಿತ್ಯ-ಚಿಂತನೆ ಪರಿಚಯವಾದವು.  ಅದರಲ್ಲೂ `ಪ್ರಜ್ಞೆ ಮತ್ತು ಪರಿಸರ’ ನನ್ನನ್ನು ತೀರಾ ಪ್ರಭಾವಿಸಿ, ಹೊಸ ಲೋಕವೊಂದನ್ನು ತೆರೆಯಿತು. ಅನಂತಮೂರ್ತಿಯವರ ಪುಸ್ತಕ ವಿಶಾಲವಾದ ಆಕಾಶದಂತಿದ್ದರೆ, ಲಂಕೇಶರ ಕಥೆ ಮತ್ತು ವಿಮರ್ಶಾ ಪುಸ್ತಕಗಳು ಆ ಆಕಾಶದಲ್ಲಿ ಹಲವು ಬಗೆಯ ಆಕಾರಗಳನ್ನು ನಿರ್ಮಿಸಿದ್ದವು. 

ಗಣಿತ ಶಾಸ್ತ್ರವು ಸಹ ನನಗೆ ಫಿಲಾಸಫಿ ರೀತಿ ತೋರುತ್ತಿತ್ತು. ಅದು ಒಂದು ರೀತಿಯಲ್ಲಿ ಸ್ಟಡಿ ಆಫ್ ಸ್ಟ್ರಕ್ಚರ್ಸ್.  ಸಾಹಿತ್ಯವು ಕೂಡ ಅಂತಿಮವಾಗಿ ಇದೆ ಅಲ್ಲವೆ ಎಂದು ಸಹ ಅನಿಸತೊಡಗಿತ್ತು. ಏಕೆಂದರೆ ಸಾಹಿತ್ಯವೂ ಸಾಮಾಜಿಕ ರಚನೆಗಳ ವ್ಯವಸ್ಥೆಯನ್ನು ನಿರೂಪಿಸುತ್ತದೆ ಎನ್ನಿಸತೊಡಗಿತ್ತು.

ನವ್ಯ ಸಾಹಿತ್ಯ ನನ್ನನ್ನು ತೀವ್ರವಾಗಿ ಪ್ರಭಾವಿಸಿದ್ದು ನಿಜ. ಆದರೆ ಹಾಗೆಯೇ ಒಂದು ಬಗೆಯ ಅತೃಪ್ತಿಯೂ ನನ್ನನ್ನು ಕಾಡತೊಡಗಿತ್ತು.  ನವ್ಯ ಸಾಹಿತ್ಯ ಎಷ್ಟೇ ರೋಚಕವಾಗಿದ್ದರೂ ಅದು ನನ್ನ ಬದುಕಿನಿಂದ ಹೊರತಾಗಿದೆ ಎನಿಸಹತ್ತಿತು. ಇದರ ಜೊತೆಗೆ ಆ ಕಾಲಘಟ್ಟವು ಬಹಳ ರೋಚಕವೇ. ಬಹಳ ವೈಬ್ರಂಟ್ ಆದ ಕಾಲಘಟ್ಟ ಅದು. ಒಂದು ಕಡೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನ ವಿಚಾರ ಸಂಕಿರಣಗಳಲ್ಲಿ ಸಾಹಿತ್ಯದ ಕುರಿತಾಗಿ ತೀವ್ರವಾದ ಚರ್ಚೆಗಳು ತುರುಸಿನಿಂದ ನಡೆಯುತ್ತಿದ್ದವು.  ಮತ್ತೊಂದೆಡೆ, ಎಂ ಡಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ವಿರೋಧಿಯಾಗಿ ಯುವ ಸಮಾಜವಾದಿ ಚಳುವಳಿ ಪ್ರಾರಂಭವಾಗಿತ್ತು.

ಡಿ ಆರ್, ಸಿದ್ದಲಿಂಗಯ್ಯ ಮೊದಲಾದವರು ಇಲ್ಲಿದ್ದರು. ಅವರು ತೀರ ಅಸಾಂಪ್ರದಾಯಿಕ ಚಳುವಳಿಗಾರರಾಗಿದ್ದರು. ಒಂದು ಉದಾಹರಣೆ ನೀಡಬಹುದಾದರೆ, ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರೆ ಭದ್ರತಾ ವ್ಯವಸ್ಥೆಯನ್ನು ಬೇಧಿಸಿ ಅವರ ವಿರುದ್ಧ ಘೋಷಣೆ ಕೂಗುವುದು, ವಿಧಾನಸೌಧದ ಬಾಲ್ಕನಿಯಿಂದ ಕರಪತ್ರ ಎಸೆಯುವುದು, ಪಂಚತಾರಾ ಹೋಟೇಲಿನಲ್ಲಿ ತಿಂಡಿ ತಿಂದು ಉಡುಪಿ  ಹೋಟೆಲ್ ದರದ ಬಿಲ್ ಕೊಡುವುದು ಇತ್ಯಾದಿ. ಇಡೀ ವ್ಯವಸ್ಥೆಯನ್ನು ಗಾಬರಿಗೊಳಿಸುವ ಅವರ ವಿನೂತನ ಪ್ರಯತ್ನಗಳನ್ನು ನಾನು ಬಹಳ ಕುತೂಹಲದಿಂದ ಗಮನಿಸುತ್ತಿದ್ದೆ.

ನವ್ಯವು ಇದೇ ಕೆಲಸವನ್ನು ಭಿನ್ನವಾಗಿ ಮಾಡುತ್ತಿದೆಯಲ್ಲವೇ ಎಂದೆನಿಸುತ್ತಿತ್ತು. ಆದರೆ 1973 ರ ಕಲಾವಿದರ-ಬರಹಗಾರರ ಒಕ್ಕೂಟ ನಡೆಸಿದ ಚಾರಿತ್ರಿಕ ಸಮ್ಮೇಳನದಲ್ಲಿ ಕುವೆಂಪುರವರ ಮಾತು- `ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಲೇಖನ ನನ್ನನ್ನು ಅಲುಗಾಡಿಸಿತ್ತು. ಸಾಹಿತ್ಯವನ್ನು ಕುರಿತಾದ ನನ್ನ ನಂಬಿಕೆಗಳು ಅದರಲ್ಲೂ ನವ್ಯ ಸಾಹಿತ್ಯದ ಕುರಿತಾಗಿ ಅನುಮಾನಗಳು ಪ್ರಾರಂಭವಾದವು. ನಾನು ಬದುಕು ಮತ್ತು ಸಾಹಿತ್ಯವನ್ನು ಗ್ರಹಿಸುವ ರೀತಿಯಲ್ಲಿ ಬದಲಾವಣೆ ಆಯಿತು. ಸರಿಯಾಗಿ ಹೇಳುವುದಾದರೆ ನಾನು ತೇಜಸ್ವಿ ಅವರ ಅಭಿಮಾನಿಯಾದೆ.

ಅವರು ಹೇಳಿದಂತೆ ಕನ್ನಡ ಸಾಹಿತ್ಯ ಚರಿತ್ರೆ ಎಂದರೆ ವೈದಿಕ ಸಾಹಿತ್ಯ ಮೀಮಾಂಸೆಗೆ ಪರ್ಯಾಯ ಒದಗಿಸಿದ ಮತ್ತು ಶೂದ್ರಲೋಕದ ಮೂಕ ಅನುಭವಗಳ ಅಭಿವ್ಯಕ್ತಿಯ ಚರಿತ್ರೆಯೇ ಆಗಿದೆ ಎಂಬ ಅವರ ವ್ಯಾಖ್ಯಾನ ನನ್ನನ್ನು ತೀರಾ ಪ್ರಭಾವಿಸಿತು.  ಕುವೆಂಪು ಸಾಹಿತ್ಯ ಕೂಡ ನಾನು ಸಾಹಿತ್ಯವನ್ನು ನೋಡುವ ಕ್ರಮವನ್ನು ನಿರ್ಣಾಯಕವಾಗಿ ಬದಲಾಯಿಸಿತು.

ಆಗ `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಓದಿ ರೋಮಾಂಚಿತನಾಗಿದ್ದೆ. ಆದರೆ ನವ್ಯ ವಿಮರ್ಶೆ ಈ ಕಾದಂಬರಿಯನ್ನು ಸರಿಯಾಗಿ ಗ್ರಹಿಸಲಿಲ್ಲ. ಲಂಕೇಶ್‍ ಒಂದು ಕಡೆ ಮಾತ್ರ ಕುವೆಂಪು ಕಾದಂಬರಿಯನ್ನು ಕುರಿತಾಗಿ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಅನಂತಮೂರ್ತಿಯವರಂತೂ `ಅದಕ್ಕೆ ಕೇಂದ್ರವಿಲ್ಲ, ಅದು ವಿವರಗಳಲ್ಲಿ ಸೊಕ್ಕಿದೆ’ ಎಂದು ಹೇಳಿದಾಗ ನನಗೆ ನವ್ಯ ಸಾಹಿತ್ಯ ಕುರಿತ ಗ್ರಹಿಕೆಯ ಬಗ್ಗೆ ತೀವ್ರ ಅತೃಪ್ತಿ ಕಾಡಲು ಪ್ರಾರಂಭಿಸಿತು.

ಸಾಹಿತ್ಯ ಅಂದರೆ ಅದು ನಮ್ಮ ಅಸ್ತಿತ್ವವನ್ನು ಪೂರ್ತಿ ತೊಡಗಿಸಿಕೊಂಡು ನಮ್ಮ ನೆರೆಹೊರೆಯವರನ್ನೂ ಒಳಗೊಳ್ಳಬೇಕು ಎಂದು ಎನಿಸತೊಡಗಿದ್ದರಿಂದ ನಾನು ನವ್ಯದ ಪ್ರಭಾವದಿಂದ ನಿರ್ಣಾಯಕವಾಗಿ ದೂರ ಸರಿದೆ.

ಟಿ.ಅವಿನಾಶ್: ಸರ್, ನವ್ಯ ತನ್ನ ಮಿತಿಯ ನಡುವೆಯೂ ಮತ್ತು ಸಾಕಷ್ಟು ಭಿನ್ನಾಭಿಪ್ರಾಯದ ನಡುವೆಯೂ ಸಾಹಿತ್ಯದ ಕುರಿತಾದ ಶ್ರದ್ಧೆ ಮತ್ತು ಅನುಭವದ ತೀವ್ರತೆಯನ್ನು ಸೃಷ್ಟಿಸಿತು ಎಂಬ ವಾದವಿದೆ. ಇದನ್ನು ನೀವು ಒಪ್ಪುವಿರಾ?

ಡಿ ಎಸ್ ನಾಗಭೂಷಣ: ಖಂಡಿತ ಇದನ್ನು ನಾನು ಒಪ್ಪುವೆ. ಈಗಲೂ ಕೂಡ ನನ್ನ ಸಾಹಿತ್ಯದ ಕುರಿತಾದ ಆಸಕ್ತಿ ಪ್ರೀತಿ ನವ್ಯದಿಂದಲೇ ಬಂದದ್ದು. ನವ್ಯದ ತೀವ್ರತೆ ನನ್ನನ್ನು ಸೆಳೆದಿದೆ. ಅದು ಸಾಹಿತ್ಯವನ್ನು ಸಾವು-ಬದುಕಿನ ಪ್ರಶ್ನೆಯಂತೆ ನೋಡಿದೆ. ಸಾಹಿತ್ಯ ಎಂದರೆ ಅದು ನಿಮ್ಮ ವಿವೇಕದ ಉತ್ತುಂಗದಲ್ಲಿ ಸಂಭವಿಸುವ ಒಂದು ವಿಶೇಷ ವಿದ್ಯಮಾನ. ಆದರೆ ಅದರ ಮಿತಿಗಳು ಇದ್ದವಲ್ಲ, ಮುಖ್ಯವಾಗಿ ಅದರ ಕೇಂದ್ರ ಪ್ರಜ್ಞೆ ಎಂಬುದರ ವ್ಯಸನ, ಅದರ ಸ್ವೋಪಜ್ಞತೆ ಇತ್ಯಾದಿ ಅವು ನನ್ನನ್ನು ಬಾಧಿಸಿವೆ. 

ನವ್ಯ ಕಲಿತವರ ಸಾಹಿತ್ಯವಾಯಿತು. ನಿಮಗೆ ಸರಿಯಾದ ಸಿದ್ಧತೆ ಇಲ್ಲದಿದ್ದರೆ ಅದನ್ನು ಎಂಜಾಯ್ ಮಾಡಲು ಸಾಧ್ಯವೇ ಇಲ್ಲ.. ಆದರೆ ಇವತ್ತಿಗೂ ನವ್ಯದವರ ಭಾಷೆಯ ಕುರಿತಾದ ಸೂಕ್ಷ್ಮತೆ ಮತ್ತು ಅದನ್ನು ಸಾವಯವವಾಗಿ ಬಳಸುವುದು ನನ್ನನ್ನು ಆಕರ್ಷಿಸಿದೆ. ಅದರ ಶುದ್ಧ ಸಾಹಿತ್ಯ ಸಿದ್ಧಿ ಗಮನಾರ್ಹವಾದದ್ದು, ನನ್ನನ್ನು ಆಕರ್ಷಿಸಿದೆ.

ಅಡಿಗರು ಆ ಕಾಲದಲ್ಲಿಯೇ ಸಾವಯವ ಸಮಗ್ರೀಕರಣದ ಬಗ್ಗೆ ಮಾತನಾಡುತ್ತಿದ್ದರು. ಅದು ಸರಿ. ಆದರೆ ಅವರ ನುಡಿಗಟ್ಟು ನಮಗೆ ಪರಕೀಯವಾಗಿತ್ತು. ಆದರೆ ಬರಹಗಾರರ ಒಕ್ಕೂಟ ಸಾಹಿತ್ಯವನ್ನು ನಾಯಕ (ನಾಯಕಿ ಇಲ್ಲವೇ ಇಲ್ಲ!) ಕೇಂದ್ರೀಯತೆಯಿಂದ ಸಾಮಾಜಿಕ ವಿಕೇಂದ್ರೀಯತೆ ಎಡೆಗೆ ತೆಗೆದುಕೊಂಡು ಹೋಯಿತು.

ಮತ್ತೊಂದು ವಿಷಯ ಎಂದರೆ ನವ್ಯ ಸಾಹಿತ್ಯದ ಹರಿಕಾರರು ಇಂಗ್ಲೀಷ್ ಮೇಷ್ಟ್ರುಗಳು. ಅವರೆಲ್ಲಾ ಹಳ್ಳಿಯಿಂದ ನಗರದ ಕಡೆಗೆ ಬಂದವರು. ಲಂಕೇಶರ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಅಥವಾ ‘ನಾನಲ್ಲ’ ಓದಿದರೆ ಅಲ್ಲಿ ಹಳ್ಳಿಯ ಸುಳಿವೇ ಇಲ್ಲ. ಒಕ್ಕೂಟ ಸಮ್ಮೇಳನದ ನಂತರದ ‘ಉಮಾಪತಿಯ ಸ್ಕಾಲರ್‍ಶಿಪ್ ಯಾತ್ರೆ’ಯ ಮೂಲಕ ಅವರ ಹಳ್ಳಿಯ ಅನುಭವ ದಾಖಲಾಗತೊಡಗಿತು. ಅಂದರೆ ಅವರ ನವ್ಯ ಕೃತಿಗಳಲ್ಲಿ ಅವರ ಬೇರು ಮಟ್ಟದ ಅನುಭವದ ದಾಖಲೆಯೇ ಗೈರು ಹಾಜರಾಗಿತ್ತು.

ಅಡಿಗರ ಕಾವ್ಯದಲ್ಲಿ craftsmanship ಕಾಣುತ್ತದೆಯೇ ಹೊರತು ಅವರ ದೃಷ್ಟಿಕೋನ ನನ್ನದಲ್ಲ ಎಂದೆನಿಸತೊಡಗಿತ್ತು.  ಅವರಿಗೆ ನೆಹರು ಬಗ್ಗೆ ಅಸಮಾಧಾನ ಇತ್ತು. ರಾಜಕೀಯವಾಗಿ ಅವರು ನೆಹರೂ ನಂತರ ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು. ನೆಹರು ಸೃಷ್ಟಿಸಿದ ಆಧುನಿಕತೆಯ ಸುಖಗಳನ್ನು ಅನುಭವಿಸುತ್ತಲೇ ಈ ನವ್ಯದವರು ಅವರ ರಾಜಕೀಯವನ್ನು ಪ್ರಶ್ನಿಸತೊಡಗಿದ್ದರು!!. ಇದು ಬೌದ್ಧಿಕ ಲೋಕದ ಆತ್ಮವಂಚನೆಯೇ. ನವ್ಯದ ತೀವ್ರತೆ ಮತ್ತು ಒಂದು ಮಟ್ಟದ ರೋಚಕತೆಗೂ ಇಲ್ಲಿ ಕಾರಣವಿದ್ದಂತಿದೆ!

ಟಿ.ಅವಿನಾಶ್: ಸರ್, ನೀವು ಕನ್ನಡದ ಬಹುಮುಖ್ಯ ಲೇಖಕರ ಬಗ್ಗೆ ಸಾಕಷ್ಟು ಬರೆದಿದ್ದೀರಿ.  ಕುವೆಂಪು, ಕಾರಂತ, ಮಾಸ್ತಿ, ತೇಜಸ್ವಿ, ಅನಂತಮೂರ್ತಿ, ಲಂಕೇಶ …ಹೀಗೆ. ಇವರೆಲ್ಲರೂ ಇಪ್ಪತ್ತನೇ ಶತಮಾನದ ಆಧುನಿಕತೆಯ ಜೊತೆಗೆ ಗುದ್ದಾಡಿದವರು. ಆದರೆ ಸದ್ಯದ ಆಧುನಿಕೋತ್ತರ ಕಾಲಘಟ್ಟದಲ್ಲಿ ಇವರೆಲ್ಲರನ್ನು ಪುನರ್ ಅನ್ವೇಷಣೆ ಅಥವಾ ಪುನರ್ ಮಾಪನ ಮಾಡುವುದು ಹೇಗೆ?

ಡಿ ಎಸ್ ನಾಗಭೂಷಣ: ನೋಡಿ, ಒಂದು ದೃಷ್ಟಿಕೋನ ಎಂಬುದರಲ್ಲಿ ಎರಡು ಆಯಾಮ ಇರುತ್ತದೆ. ಅವು ಎಂದರೆ ಸದ್ಯ ಮತ್ತು ಶಾಶ್ವತ. ಒಳ್ಳೆಯ ಸಾಹಿತ್ಯ ಎರಡನ್ನೂ ಒಳಗೊಂಡಿರುವಂತದ್ದು. ಯಾವುದು ನಿತ್ಯಸ್ಥವು ಹಾಗೂ ಶಾಶ್ವತವು ಆಗಿರುತ್ತದೆಯೋ ಅವು ಬಹುಕಾಲ ಉಳಿಯುತ್ತದೆ. ಈ ದೃಷ್ಟಿಯಿಂದ ನೋಡಿದರೆ ನವ್ಯಸಾಹಿತ್ಯದ ಸಾಕಷ್ಟು ಭಾಗ ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತವೆ.  ಉದಾಹರಣೆಗೆ ಚಂದ್ರಶೇಖರ ಪಾಟೀಲರ ಅಥವಾ ಲಂಕೇಶರ ಅಸಂಗತ ನಾಟಕಗಳು ಇವತ್ತು ಎಲ್ಲಿವೆ?. ಅವತ್ತಿನ ಅವುಗಳ ಮೆರೆದಾಟ ರೋಚಕತೆ ಇವಾಗ ಹೊರಟುಹೋಗಿದೆ. ನೋಡಿ, ಆಧುನಿಕತೆ ಎಂಬುದು ನಾವು ಅನುಭವಿಸುವ ಒಂದು ಸಂವೇದನೆ. ಅದು ತಂದಿಟ್ಟ ರೋಚಕತೆ, ಸೃಷ್ಟಿಸಿದ ಮುಜುಗರ ಇವೆಲ್ಲವನ್ನು ಆ ಕಾಲದ ಕೃತಿಗಳು ಅನುಸಂಧಾನ ಮಾಡಿವೆ. ಆದರೆ ಆಧುನಿಕೋತ್ತರವಾದ ಎಂಬುದು ಏನಿದೆ. ಎಂಬುದು ನಿಜಕ್ಕಿಂತ ಹೆಚ್ಚಾಗಿ ಒಂದು ಬೌದ್ಧಿಕ ‘ರಚನೆ’.

ಟಿ.ಅವಿನಾಶ್:  ಸರ್, ಆಧುನಿಕೋತ್ತರವಾದ ಅಲ್ಲ. ಆಧುನಿಕೋತ್ತರ ಸ್ಥಿತಿ ಎಂದು ತಿಳಿದುಕೊಳ್ಳಿ. ಇವತ್ತಿನ ಹೊಸಬಗೆಯ ಸ್ಥಿತಿಯ ಹಿನ್ನೆಲೆಯಲ್ಲಿಯೇ ಮಾತನಾಡಿ. ನಮ್ಮ ದೊಡ್ಡ ಲೇಖಕರನ್ನು ನಮ್ಮವರಾಗಿ ಮಾಡಿಕೊಳ್ಳುವ ಬಗೆ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.

ಡಿ ಎಸ್ ನಾಗಭೂಷಣ: ಇದು ತೀರಾ ಇತ್ತೀಚಿನ ಬೆಳವಣಿಗೆ ಇದು. ನೋಡಿ, ನಮ್ಮ ದೊಡ್ಡ ಲೇಖಕರು ಮಾಸ್ತಿ, ಬೇಂದ್ರೆ, ಕುವೆಂಪು, ಡಿ ವಿ ಗುಂಡಪ್ಪ ಇವರೆಲ್ಲಾ ಎಲ್ಲಾ ಕಾಲಕ್ಕೂ ಸಲ್ಲುವವರೆ. ಕೆಲವು ಇರ್ರೆಲೆವೆಂಟ್ ಎನ್ನಿಸಬಹುದು. ದೇವನೂರರ ‘ದ್ಯಾವನೂರು’ ಕಥೆಗಳೇ ಇಂದು ‘ಪ್ರಾಚೀನ’ ಅನ್ನಿಸತೊಡಗಿವೆ-ಇವೊತ್ತಿಗೆ ಕನೆಕ್ಟ್ ಆಗಲು ಹೆಣಗುತ್ತಿವೆ. ಕುಸುಮಬಾಲೆ ಸೇರಿದಂತೆ ಅವುಗಳ ಶಿಲ್ಪ ಮಾತ್ರ ಉಳಿಯುವಂತಾಗಿದೆ-ಹೊಯ್ಸಳರ ಶಿಲ್ಪೊದಂತೆ! ಲಂಕೇಶರ ‘ನಾನಲ್ಲ’ ಕಥೆಗಳ ಥರದವು ಡಿವಿಜಿಯವರ ‘ಜ್ಞಾಪಕ ಚಿತ್ರಶಾಲೆ’ಯಂತಾಗಿವೆ.

ನಿಜ, ಅವುಗಳಿಗೆ ಅವುಗಳದ್ದೇ ಆದ ಮೌಲ್ಯಗಳವೆ. ಒಂದು ಉದಾಹರಣೆ ಕೊಡ್ತೀನಿ. ಲಂಕೇಶ್‍ರನ್ನು ಪ್ರಸಿದ್ಧಿಗೆ ತಂದ ಕಥೆಗಳ ಆವರಣವಾದ ಬೆಂಗಳೂರು- ಅಂದರೆ ಆ ಕಾಲದ ಬಸವನಗುಡಿ-ಗಾಂಧಿ ಬಜಾರ್, ಅಲ್ಲಿನ ಮಧ್ಯಮವರ್ಗದ ಮನೆ ಮಠ, ಜನಜೀವನ ಈಗ ಸಂಪೂರ್ಣ ಬೇರೆಯೇ ಆಗಿದೆ ಇನ್ ಫ್ಯಾಕ್ಟ್ ಅದು ಹೆಚ್ಚೂ ಕಡಿಮೆ ಇಲ್ಲವೇ ಆಗಿದೆ. ಹಾಗಾಗಿ ಆ ಕಥೆಗಿಂದ ಆ ಬೆಂಗಳೂರನ್ನು, ಅದರ ಮಧ್ಯಮ ವರ್ಗದ ಮೌಲ್ಯ-ಅಭಿರುಚಿಗಳನ್ನು ತೆಗೆದರೆ ಅಲ್ಲಿ ಕಥೆಗಳೇ ಇರುವುದಿಲ್ಲ.

ಆದರೆ ಕುವೆಂಪು, ಕಾರಂತ, ಡಿ. ವಿ ಗುಂಡಪ್ಪ, ವಿಶೇಷವಾಗಿ ಮಾಸ್ತಿ ಯಾವತ್ತಿಗೂ ನಿತ್ಯ ಎನಿಸುತ್ತಾರೆ. ಮಾಸ್ತಿ ಅವರ ನೂರು ಕಥೆಗಳಾಗಲೀ ಕುವೆಂಪು ಕಾದಂಬರಿಗಳಾಗಲೀ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ ಯಾವತ್ತು ನಿತ್ಯ. ಯಾವಾಗಲೂ ರೀಡಬಲ್ ಅವು. ಕಾರಣ, ಅವು ಸದ್ಯತನವನ್ನು ಹೆಚ್ಚು ನೆಚ್ಚದವುಗಳಾಗಿವೆ.. ಅವುಗಳ ಆವರಣ ಬದಲಾಗಿದ್ದರೂ, ಅವುಗಳ ಅಡಿಪಾಯ ಗಟ್ಟಿಗಿವೆ.

ತೇಜಸ್ವಿಯವರ ಕೃತಿಗಳ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದು. ಆದರೂ ಕರ್ವಾಲೋ ಬಹುದಿನಗಳ ಕಾಲ ಬಾಳುವ ಕೃತಿಯಾಗಬಹದು  ಮರು ಓದು ಮಾಡುವುದು ಎಂದರೇನು ಎಂಬುದು ಸ್ವಲ್ಪ ಗೊಂದಲಕಾರಿ….. ಮೊದಲ ಓದಿನ ನಂತರದ ಎಲ್ಲ ಓದುಗಳೂ ಮರುಓದುಗಳೇ. ಎಲ್ಲ ಕೃತಿಗಳಿಗೂ ಅವುಗಳದ್ದೇ ಆದ ಮೌಲ್ಯವಿದೆ. ಸಾಹಿತ್ಯ ಶಾಸ್ತ್ರವನ್ನು ಅಭ್ಯಾಸ ಮಾಡುವವರು ಪಂಪನಿಂದ ಹಿಡಿದು ಇವತ್ತಿನವರೆಗೆ ಎಲ್ಲ ಶ್ರೇಷ್ಠ ಸಾಹಿತ್ಯವನ್ನು ಅಗತ್ಯವಾಗಿ ಓದಲೇಬೇಕು. ಇದರಲ್ಲಿ ಕೆಲವನ್ನು ಭಾಸನ ‘ಪ್ರತಿಮಾ ನಾಟಕಂ’ನಲ್ಲಿ ಭರತ ಪ್ರತಿಮೆಗಳನ್ನು ನೋಡುವಂತೆ ಎಲ್ಲವನ್ನೂ ನೋಡುತ್ತಾ ಇಂದಿನ ಅಯೋಧ್ಯೆಯತ್ತ ಬರಬೇಕು!

ಟಿ.ಅವಿನಾಶ್: ಈ ಮಾತಿನ ಮುಂದುವರಿಕೆಯಾಗಿ ಹೇಳುವುದಾದರೆ… ಜಾಗತೀಕರಣೋತ್ತರ ಸಮಕಾಲೀನ ಕಾಲಘಟ್ಟದಲ್ಲಿ ಸಾಹಿತ್ಯ ಎಂಬ ಸಂಸ್ಥೆಗೆ ಇರುವ ‘‘Privilege’’ ಹೊರಟುಹೋಗಿದೆ. ನಮ್ಮ ಸಂಸ್ಕೃತಿಯನ್ನು ಕೇವಲ ಸಾಹಿತ್ಯದ ಮೂಲಕ ಮಾತ್ರ ನೋಡುವ ಕ್ರಮ ಸ್ವಲ್ಪ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಹೊಸಕಾಲದ ಲೇಖಕರುಗಳ ಕಾಳಜಿ, ಒಲವುಗಳ ಅನುಸಂಧಾನವನ್ನು ಹೇಗೆ ಅರ್ಥೈಸುತ್ತೀರಿ?  ಒಬ್ಬ ವಿಮರ್ಶಕರಾಗಿ ನಿಮ್ಮ ಒಲವಿನ ಹೊಸ ಲೇಖಕರು ಯಾರು?

ಡಿ ಎಸ್ ನಾಗಭೂಷಣ: ನಾನು ಸಾಹಿತ್ಯ ಓದಲಿಕ್ಕೆ ಆರಂಭ ಮಾಡಿದ ಕಾಲದಲ್ಲಿ ನನ್ನನ್ನು ಕಾಡುವ ಅನೇಕ ಲೇಖಕರಿದ್ದರು. ನನ್ನನ್ನು ಕಾಡಿದ ಕೊನೆಯ ಲೇಖಕ ಎಂದರೆ ಹೆಚ್ ಎಸ್ ಶಿವಪ್ರಕಾಶ….. ಅಂದರೆ ಸಾಹಿತ್ಯವನ್ನು ಪ್ರೀತಿಸುವ ವ್ಯಕ್ತಿಯಾಗಿ ನನ್ನನ್ನು ತಟ್ಟುವ ಮತ್ತು ಬದುಕಿನ ನಿರ್ಣಾಯಕ ಕ್ಷಣಗಳಲ್ಲಿ ಒಬ್ಬ ಸಾಹಿತಿ ನೆನಪಾಗಬೇಕಲ್ಲ…. ಅಂತಹ ಲೇಖಕ ಇತ್ತೀಚೆಗೆ ಸಿಕ್ಕೇ ಇಲ್ಲ….ಬಹುಶಃ ಶ್ರೀನಿವಾಸ ವೈದ್ಯರ ;ಹಳ್ಳ ಬಂತು ಹಳ್ಳ’ ನನ್ನನ್ನು ಕಾಡಿದ ಕೊನೆಯ ಕಾದಂಬರಿ.  ಅಮರೇಶ ನುಗಡೋಣಿ, ವೈದೇಹಿ ಮತ್ತು ಜಯಂತ ಕಾಯ್ಕಿಣಿ …..ನಾನು ಓದುತ್ತಿರುವ ಬಹಳ ಒಳ್ಳೆಯ ಕಥೆಗಾರರು ಅವರು.

ಟಿ.ಅವಿನಾಶ್: ಪ್ರಸ್ತುತ ವಿಮರ್ಶೆ, ಯಾಕೋ ಹೊಸ ಲೇಖಕರ ಬಗ್ಗೆ ಕುರುಡಾದಂತೆ ತೋರುತ್ತಿದೆಯಲ್ಲಾ…

ಡಿ ಎಸ್ ನಾಗಭೂಷಣ: ಸಮಕಾಲೀನ ಸಂದರ್ಭದಲ್ಲಿ ಒಳ್ಳೆಯ ವಿಮರ್ಶೆ ಹೆಚ್ಚು ಕಡಿಮೆ ಇಲ್ಲವೇ ಇಲ್ಲ…. ಬರೆಯುವವರೆಲ್ಲರೂ ಕೇವಲ ಸಾರಾಂಶ ಕೊಡುತ್ತಿದ್ದಾರೆ. ಇವತ್ತಿನ ವಿಮರ್ಶೆ ತೀರಾ ಸಾಮಾನ್ಯ… ಒಂದು ಕೃತಿ ಕೊಡುವ ರೋಮಾಂಚಕತೆಯನ್ನು ಅದರೆಲ್ಲ ಸಂಕೀರ್ಣ ಆಯಾಮಗಳಲ್ಲಿ ಅನಾವರಣ ಮಾಡುವ ಒಳ್ಳೆಯ ವಿಮರ್ಶೆ ನನಗೆ ಕಾಣುತ್ತಿಲ್ಲ. ಒಂದೋ ಬೈಯುವುದು ಇಲ್ಲ ತೀರಾ ಹೊಗಳುವುದು. ಇದೇ ನನಗೆ ಕಾಣುತ್ತಿದೆ.

ನೋಡಿ, ನಾನು ಸಾಹಿತ್ಯದ ಸಾಂಪ್ರದಾಯಿಕ ವಿದ್ಯಾರ್ಥಿ ಅಲ್ಲ… ಪಾಶ್ಚಿಮಾತ್ಯ ಚಿಂತಕರುಗಳಾದ ರೇಮಂಡ್ ವಿಲಿಯಮ್ಸ್, ಟಿ ಎಸ್ ಎಲಿಯಟ್ ಡೆರಿಡಾ, ಫೂಕೋ, ಸೈದ್ ಇವರನ್ನೆಲ್ಲ ಹವ್ಯಾಸಿಯಾಗಿ ಓದಿಕೊಂಡಿದ್ದೇನೆ… ಆದರೆ ಇವೆಲ್ಲವೂ ಸಾಹಿತ್ಯ ಕೃತಿಯನ್ನು ಓದಲು ಬೇಕಾಗುವ ಸಲಕರಣೆಯನ್ನು ನೀಡುವುದಿಲ್ಲ. ಹಾಗೆ ನೋಡಿದರೆ ನವ್ಯ ವಿಮರ್ಶೆ, ಅದರಲ್ಲೂ ಲಂಕೇಶ ಮತ್ತು ಅನಂತಮೂರ್ತಿ, ಒಂದು ಕೃತಿಯನ್ನು ಓದುವ ಕ್ರಮವನ್ನು ನನಗೆ ಕಲಿಸಿದ್ದಾರೆ. I should be thankful to Lankesh…….. ಲಂಕೇಶ್ ಕೃತಿಯನ್ನು ವಿಮರ್ಶಿಸುತ್ತಿರಲಿಲ್ಲ, ಅದರ ಸಾವಯವ ಗುಣವನ್ನು ಒಮ್ಮೆಲೆ ಗ್ರಹಿಸಬಲ್ಲವರಾಗಿದ್ದರು. ಅವರದು ಕಾಮನ್ಸೆನ್ಸ್ ವಿಮರ್ಶೆ.

ಈ ವಿಮರ್ಶಾ ಪರಿಕರಗಳೆಲ್ಲಾ ಸಾಹಿತ್ಯ ಕೃತಿಯನ್ನು ವಿಮರ್ಶಿಸಲು ಸ್ವಲ್ಪ ಅಲ್ಲಲ್ಲಿ ಸಹಾಯ ಮಾಡಬಹುದೇನೋ. ಆದರೆ ಅವು ಸಮಗ್ರವಾಗಿ ಗ್ರಹಿಸಲು ಅಡ್ಡಿಯನ್ನು ಉಂಟುಮಾಡುತ್ತವೆ. ಅನಲಿಟಿಕಲ್ ವಿಮರ್ಶೆ ಎಂಬುದು ಸಾಹಿತ್ಯ ಕೃತಿಗಳಿಗೆ ಅನ್ಯಾಯವನ್ನು ಮಾಡುತ್ತವೆ. ವಿಮರ್ಶೆ ಕೇವಲ ಪಾಂಡಿತ್ಯವಾದರೆ ಉಪಯೋಗವಿಲ್ಲ…. ನವ್ಯ ವಿಮರ್ಶೆ ಎಂಬುದು ಯಂತ್ರ ವಿಮರ್ಶೆ ಎನಿಸುತ್ತಿತ್ತು…..

ಟಿ.ಅವಿನಾಶ್: ಆದರೆ ಡಿ ಆರ್ ನಾಗರಾಜ ತರದವರು ಪೂರ್ವದ ಜ್ಞಾನಶಾಖೆಗಳ ಬಗ್ಗೆ ಒಲವಿದ್ದರೂ ಪಶ್ಚಿಮದ ಚಿಂತಕರುಗಳನ್ನು ಕನ್ನಡಕ್ಕೆ ತಂದರು. ಪಶ್ಚಿಮವನ್ನು ಎಷ್ಟೇ ಪ್ರಶ್ನೆ ಮಾಡಿದರೂ…ಆ ಚಿಂತಕರುಗಳನ್ನು ಮತ್ತು ಅವರ ಮೀಮಾಂಸೆಯನ್ನು ಒಳಗೊಳ್ಳುವ ವಿಮರ್ಶಾ ಕ್ರಮ ಕೊಟ್ಟರಲ್ಲವೇ?

ಡಿ ಎಸ್ ನಾಗಭೂಷಣ: ನಾನು ಡಿ ಆರ್ ಅವರ ಹಳೆಗಾಲದ ಸ್ನೇಹಿತನು ಹೌದು. ಆದರೆ ಡಿ.ಆರ್ ರದ್ದು ತೀರಾ ರಾಜಕೀಯ ನಿಲುವದು. ಸಾಹಿತ್ಯಕ್ಕಿಂತ ರಾಜಕೀಯ ಒಲವು ಇದ್ದವನು ಆತ….. ಶೂದ್ರ ಪತ್ರಿಕೆಯ ಹಿನ್ನೆಲೆಯ ಸಂಪಾದಕನಾಗಿ ಅದನ್ನು ಕೆಂಪು ಕಾಗದದಲ್ಲಿ ಮುದ್ರಿಸಿ ಕಮ್ಯೂನಿಸ್ಟ ಕ್ರಾಂತಿಯ ಪತ್ರಿಕೆಯನ್ನಾಗಿ ಮಾಡಿದ್ದ.’ವೈಷ್ಣವ ಜನತೋ’ ಎಂಬುದನ್ನು ನೆಪವಾಗಿ ಇಟ್ಟುಕೊಂಡು ಗಾಂಧಿಯನ್ನು ಕೆಟ್ಟ ವೈಷ್ಣವ ಎಂದು ಜರಿದಿದ್ದ, ಆತ ಬಂಡಾಯ ಸಾಹಿತ್ಯ ಸಂಘಟನೆಯ ರೂವಾರಿಗಳಲ್ಲೊಬ್ಬ..

ಅದರ ಆರಂಭದ ಸಭೆಗಳಿಗೆ ನಾನೂ ಹೋಗಿದ್ದೆ. ಆದರೆ ಅಲ್ಲಿ ಸಾಹಿತ್ಯಕ್ಕಿಂತ ಹೆಚ್ಚಾಗಿ ರಾಜಕೀಯ ಪ್ರಣಾಳಿಕೆ ಇತ್ತು….. ನವ್ಯದಲ್ಲೂ ಗುಂಪುಗಾರಿಕೆ ಇತ್ತು. ಆದರೆ ಅಲ್ಲಿ ಆತನಿಗಿಂತ ನಾನು ಚೆನ್ನಾಗಿ ಬರೆಯಬೇಕು ಎಂಬ ಕಾಂಪಿಟಿಷನ್ ಇತ್ತು. ಬಂಡಾಯದ ಕಾಲಘಟ್ಟದಲ್ಲಿನ ಘೋಷಣೆ, ‘ಖಡ್ಗವಾಗಲಿ ಕಾವ್ಯ’ವನ್ನು ನೀಡಿದ್ದೆ ಡಿ ಆರ್.  ಅಂದೇ ಡಿ ಆರ್‍ಗೆ  ನಾನು ಎಚ್ಚರಿಸಿದ್ದೆ `ಈ ಹೇಳಿಕೆಯ ಮೂಲಕ ನೀನು ಸಾಹಿತ್ಯವನ್ನು ರಾಜಕೀಯದ ಗೂಟಕ್ಕೆ ಕಟ್ಟಿದ ನಾಯಿಯನ್ನಾಗಿ ಪ್ರಯತ್ನಿಸುತ್ತಿದ್ದೀಯ’ ಎಂದು ಹೇಳಿದ್ದೆ.  ಖಡ್ಗವಾಗಲಿ ಕಾವ್ಯ ಎಂಬ ಈ  ಘೋಷಣೆ ಸಾಹಿತ್ಯಕ್ಕೆ ಅಪಚಾರ ಮಾಡುವಂಥದ್ದು. ಸಾಹಿತ್ಯ ಯುದ್ಧದ ಸಾಧನವಲ್ಲ. ಅದು ಜನರ ಸಾರ್ವತ್ರಿಕ ಪ್ರಜ್ಞೆಯನ್ನು ಹೆಚ್ಚಿಸುವ ಒಂದು ಮಾನವೀಯ ಚಟುವಟಿಕೆ, ಅದು ಬದುಕಿನ ಎಲ್ಲ ಸತ್ಯಗಳನ್ನೂ ಕಾಣಿಸಿಸಿ ಆಯ್ಕೆಯನ್ನು ಜನರಿಗೆ ಬಿಡುವ ಒಂದು ಮುಕ್ತ ಚಟುವಟಿಕೆ.

ಆದರೆ ಡಿ.ಆರ್ ಬಗೆಗಿನ ಮಾತಿಗೆ ಹೊರಳುವುದಾದರೆ ಆತ ಬೇಗ ಬದಲಾದ. ಬಂಡಾಯಕ್ಕೆ ವಿದಾಯ ಹೇಳಿ ಸಾಹಿತ್ಯ-ಸಂಸ್ಕೃತಿಗಳ ಗಂಭೀರ ಅಧ್ಯಯನಕ್ಕೆ ತೊಡಗಿಕೊಂಡ. ಕೊನೆವರೆಗೂ ಉಡಾಫೆ ಬಿಡಲಾಗದಿದ್ದರೂ, ಭಾರತೀಯ ಸಂಸ್ಕೃತಿ ಎಂಬುದರ ಪುನರನ್ವೇಷಣೆಯಲ್ಲಿ ಆತನ ಕೊಡುಗೆ ಬಹು ದೊಡ್ಡದು ಎಂದೇ ಹೇಳಬೇಕು. ಆದರೆ ನಾನು ಮೊದಲಿಂದಲೂ ವಾದಿಸುತ್ತಾ ಬಂದಿರುವಂತೆ ಆತನ ‘ವಿಸ್ಮೃತಿ’ ಮತ್ತು ಕಿರು ಸಂಪ್ರದಾಯಗಳ ಕುರಿತ ಕಥನವು ಒಕ್ಕೂಟ ಸಮ್ಮೇಳನದಲ್ಲಿ ತೇಜಸ್ವಿಯವರು ಕನ್ನಡ ಸಾಹಿತ್ಯದ ಬಗ್ಗೆ ಮಂಡಿಸಿದ್ದ ಹೊಸ ಒಳನೋಟವನ್ನು ಭಾರತೀಯ ಸಂಸ್ಕೃತಿಯ ನೆಲೆಗೆ ವಿಸ್ತರಿಸಿದ ಪ್ರಯತ್ನವಾಗಿತ್ತು.

ಜೊತೆಗೆ ಈ ಸಂಬಂಧದ ನನ್ನ ಇನ್ನೊಂದು ತಕರಾರೆಂದರೆ-ಇದನ್ನು ಹಿಂದೊಮ್ಮೆ ದಾಖಲಿಸಿದ್ದೇನೆ ಕೂಡ-ಬಹುತೇಕ ಅನಾತ್ಮವಾದಿಯಾದ=ಶ್ರಮಣಧಾರೆಯೆಂದು ಗುರುತಿಸಲಾಗುವ- ಈ ಸ್ಥಳೀಯ ಕಿರು ಸಂಪ್ರದಾಯಗಳನ್ನು ಕುರಿತ ಆತನ ಅಧ್ಯಯನ ಮತ್ತು ಪ್ರಸ್ತುತಿಯಲ್ಲಿ ಬಳಕೆಯಾಗಿರುವುದು ಅಖಿಲಭಾರತ ರಾಜಕಾರಣದ ಚೌಕಟ್ಟು ಮತ್ತು ಆತ್ಮವಾದಿ ದಾರ್ಶನಿಕ ನುಡಿಗಟ್ಟು. ನೀವು ಭಾರತೀಯ ಸಂಸ್ಕೃತಿಯಲ್ಲಿನ ಬಿರುಕು ಅಥವಾ ಅನ್ಯಾಯಗಳನ್ನು ಗಮನಿಸುವಾಗ ಆಧುನಿಕತೆಯನ್ನೂ ತಲಸ್ಪರ್ಶಿಯಾಗಿ ಮುಖಾಮುಖಿಯಾಗದಿದ್ದರೆ ಸಂಭವಿಸುವ ಲೋಪಗಳಿವು

ಟಿ.ಅವಿನಾಶ್: ದಲಿತ-ಬಂಡಾಯ-ನವ್ಯ ಎಂಬ ಕೆಟಗರಿಗಳು ಅಗತ್ಯವೇ?

ಡಿ ಎಸ್ ನಾಗಭೂಷಣ: ಸುಮ್ನೆ ಓದಲು ಖಂಡಿತಾ ಇಲ್ಲ. ಇದು ಬೇಕೂ ಇಲ್ಲ. ಈ ಬಗೆಯ ಬಳಕೆಗಳು ಅಕಾಡೆಮಿಕ್ ಪರಿಭಾಷೆಯವು.

ಟಿ.ಅವಿನಾಶ್: ನಿಮ್ಮ ಎಲ್ಲ ಲೇಖನ/ಪುಸ್ತಕ ಓದಿದ ಮೇಲೆ ಸಮಾಜವಾದಿ ಸಂಕಥನ ಕಟ್ಟಲು ಪ್ರಯತ್ನಿಸುತ್ತಿದ್ದೀರಿ. ಜಾಗತೀಕರಣೋತ್ತರ ಸಮಾಜದಲ್ಲಿ ಈ ಸಮಾಜವಾದಿ ಸಂಕಥನದ ಸ್ವರೂಪ ಏನು? ಯಾವಾಗಲಾದರೂ ನಿಮಗೆ ನೀವು ತೀರಾ ಒಬ್ಬಂಟಿ ಅನ್ನಿಸಿದೆಯಾ?

ಡಿ ಎಸ್ ನಾಗಭೂಷಣ: ನನ್ನಂತಹ ವಿಶ್ವವಿದ್ಯಾಲಯದ ಹೊರಗಿನವನಿಗೆ ಯಾವುದೇ ನಿರ್ದಿಷ್ಟ ರಾಹಜಕೀಯ ಅಥವಾ ಜಾತಿಯ ಗುಂಪಿನ ಬೆಂಬಲವಿಲ್ಲ. ಈ ಅರ್ಥದಲ್ಲಿ ನಾನು ಒಬ್ಬಂಟಿಯೇ. ನನ್ನನ್ನು ಫಾಲೋ ಮಾಡುವವರು ಕೆಲವರು ಇರಬಹುದು. ಸಾಹಿತ್ಯಕ್ಕೂ ರಾಜಕಾರಣಕ್ಕೂ ಸಂಬಂಧ ಇದೆ ಎನ್ನಿಸಿದ್ದು ನನ್ನ ಸಾಹಿತ್ಯದ ಆರಂಭದಲ್ಲೇ ಅನುಭವಕ್ಕೆ ಬಂದಿತು.

ಅಡಿಗರು ಲೋಹಿಯಾರನ್ನು ಅನುವಾದ ಮಾಡಿದ್ದರು. ಸುಬ್ಬಣ್ಣ ‘ರಾಜಕೀಯದ ಮಧ್ಯೆ ಬಿಡುವು’ ಅನುವಾದ ಮಾಡಿದ್ದರು. ಲೋಹಿಯಾ ಅವರಿಗೆ ‘ಸಂಸ್ಕಾರ’ ಬಹಳ ಇಷ್ಟವಾದ ಕಾದಂಬರಿ ಎಂದು ಕೇಳಿದ್ದೆ. ನನಗೆ ಲೋಹಿಯಾ ಅವರನ್ನು ಓದುತ್ತಿದ್ದಂತೆ ಅವರದ್ದು ಭಿನ್ನವಾದ ರಾಜಕಾರಣ ಎನ್ನಿಸತೊಡಗಿತ್ತು. 1975 ರಲ್ಲಿ ನಾನು ದೆಹಲಿಗೆ ಹೋದಾಗ ಕಿಶನ್ ಪಾಟ್ನಾಯಕ್  ಮತ್ತಿತರರ ಸಂಪರ್ಕ ಸಿಕ್ಕಿತ್ತು.. ಇದೇ ಸಂದರ್ಭದಲ್ಲಿ ಶರದ್ ಯಾದವ್ ಪರಿಚಿತರಾದರು.

ಲೋಹಿಯಾ ಜೊತೆಗೆ ಮಾರ್ಕ್ಸಿಸಂ ಓದಿನಲ್ಲಿ ತೊಡಗಿದೆ. ಆದರೆ ಮಾರ್ಕ್ಸಿಸಂ ಬಗ್ಗೆ ನನಗೆ ಯಾವಾಗಲೂ ಅನುಮಾನ ಇತ್ತು. ಅದು ಒಂದು ರೀತಿಯಲ್ಲಿ ಮನುಷ್ಯನನ್ನು ಚರಿತ್ರೆಯ ಒಂದು ಉತ್ಪನ್ನ ಎಂದು ಭಾವಿಸುತ್ತದೆ. ಇದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಮನುಷ್ಯನಿಗೆ ಒಂದು ಸ್ವಾತಂತ್ರ್ಯ ಇದೆ. ಲಂಕೇಶ್ ಹೇಳುವಂತೆ ಮನುಷ್ಯ ಒಂದು ಪವಾಡ. ಆತನಿಗೆ ಹಲವು ಬಗೆಯ ಸಾಧ್ಯತೆಗಳಿವೆ. ಮನುಷ್ಯ ಆತನೇ ಸೃಷ್ಟಿಸಿರುವ ಹಲವು ರಚನೆಗಳನ್ನು ಮೀರಬಲ್ಲ. He is not a slave of History. He is not a product of History. He can create History and damn it also.  ಚರಿತ್ರೆಗೆ ಚರಿತ್ರೆಯೇ ಇಲ್ಲದಿರಬಹುದು ಮತ್ತು ಮನಷ್ಯ ಚರಿತ್ರೆಯನ್ನು ಮೀರಬಹುದು ಎಂಬ ಲೋಹಿಯಾ ಅವರ ಮಾತುಗಳು ನನ್ನನ್ನು ಆಳವಾದ ಯೋಚನೆಗೆ ಹಚ್ಚಿದವು.

ಟಿ.ಅವಿನಾಶ್: ಸರ್,  ನೀವು ಹೀಗೆ ಹೇಳುವಾಗ ಒಂದು ವೈರುಧ್ಯ ನನಗೆ ಕಾಣಿಸುತ್ತಿದೆ. ನೀವು ಸಮಾಜವಾದಿ ಆದರ್ಶದ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ಬಂಡವಾಳದ ಪ್ರಭಾವ ಎಷ್ಟಿದೆ ಅಂದರೆ ಅದು ನಮ್ಮ ಮಾಧ್ಯಮವನ್ನು, ಆಡಳಿತವನ್ನು, ರಾಜಕೀಯವನ್ನು, ಸರ್ಕಾರಗಳನ್ನು, ಪಕ್ಷಗಳನ್ನು, ಆರ್ಥಿಕ ನೀತಿಗಳನ್ನು ನಿಯಂತ್ರಿಸುತ್ತಿದೆ. ಒಂದು ಕಡೆ ಸಮಾಜವಾದಿ ಆದರ್ಶವಿದ್ದರೆ ಮತ್ತೊಂದೆಡೆ ಬಂಡವಾಳದ ಶಕ್ತಿ ನಮ್ಮ ಕಲ್ಪನೆಗೂ ಮೀರಿದ್ದು. ಇಂತಹ ಸಂದರ್ಭದಲ್ಲಿ ಸಮಾನತೆಯ ಆದರ್ಶವನ್ನು ಕಟ್ಟುವುದು ಹೇಗೆ? ಇದರ ಅನುಸಂಧಾನದ ಆಯಾಮಗಳೇನು?

ಡಿ ಎಸ್ ನಾಗಭೂಷಣ: ನೋಡಿ ನೀವು ಹೇಳುವುದು ಸತ್ಯವೇ ಆಗಿದ್ದರೆ ಅದನ್ನು ನಿರಾಕರಿಸಲು ನಾವು ಹಲವು ತ್ಯಾಗಗಳನ್ನು ಮಾಡಲು ಸಿದ್ಧರಿರಬೇಕು.  ಆದರೆ ‘ತ್ಯಾಗ’ ಎಂಬುದೇ ಎಡಪಂಥೀಯರಿಗೆ ಒಂದು ಬಲಪಂಥೀಯ ಶಬ್ದವಾಗಿದೆ. ನಮ್ಮ ಆಧುನಿಕತೆಗೆ ವೇದಿಕೆ ಒದಗಿಸಿರುವ ಭೌತವಾದಿ ಬದುಕಿನ ದೃಷ್ಟಿಕೋನದ ನಂಬಿಕೆಗಳಿಂದಲೇ  ದೌರ್ಬಲ್ಯಗಳಿಂದಲೇ ಬಂಡವಾಳಕ್ಕೆ ಈ ಶಕ್ತಿ ಬಂದಿರುವುದು.

ನಾನು ಇತ್ತೀಚೆಗೆ ಹೆಚ್ಚು ಮಾತನಾಡುತ್ತಿರುವುದು ಗಾಂಧಿ ಬಗ್ಗೆ. ಅದರಲ್ಲೂ ಅವರು ಹಿಂದ್ ಸ್ವರಾಜ್ (1909)ಆಧುನಿಕತೆಯನ್ನು ತೀವ್ರವಾಗಿ ಪ್ರಶ್ನಿಸುತ್ತದೆ. ಇದರಲ್ಲಿ ಗಾಂಧಿ ಆಧುನಿಕತೆಯನ್ನು ವಸಾಹತುಶಾಹಿಯ ಉಪಕರಣ ಎಂದು ಕರೆದಿದ್ದಾರೆ. ಇದು ಒಂದು ಸರಿಯಾದ  ಡೆಫಿನಿಷನ್. ಇದನ್ನು ಪ್ರತಿರೋಧಿಸಲು ಮಾರ್ಕ್ಸಿಸಂ ಬಂತು.  ಮಾರ್ಕ್ಸಿಸಂ ಕೂಡ ನನ್ನ ಪ್ರಕಾರ ಪ್ರಭುತ್ವ ಬಂಡವಾಳವಾದವಾಗಿ ಬಂಡವಾಳವಾದದ ಇನ್ನೊಂದು ರೂಪ. ಇದು ಟೆಕ್ನಾಲಜಿ ಮತ್ತು ರಾಷ್ಟ್ರದ ಕಲ್ಪನೆಯ ಮೂಲಕ ವಿಸ್ತಾರಗೊಂಡಿತು.

ತಂತ್ರಜ್ಞಾನವನ್ನು ಮಾರ್ಕ್ಸಿಸಂ ವೈಜ್ಞಾನಿಕ ಕ್ರಾಂತಿ ಎಂದು ಕರೆಯುತ್ತದೆ.  ಮಾರ್ಕ್ಸಿಸಂನ ಸಮಸ್ಯೆ ಎಂದರೆ ಅದು ಯುರೋಪ್ ಕೇಂದ್ರಿತ ಜಗತ್ತನ್ನು ಕಟ್ಟಿಕೊಟ್ಟಿದೆ. ವಸಾಹತುಶಾಹಿ ಕುರಿತಾದ ಅದರ ಥಿಯರಿ ತೀರಾ ದುರ್ಬಲವಾಗಿದೆ. ಏನೇ ಆಗಲಿ ನಿಮ್ಮ ಪ್ರಶ್ನೆಗೆ ಮರಳಿ ಬರುವುದಾದರೆ ಜಾಗತೀಕರಣ ಎಂದರೆ ಬಂಡವಾಳಶಾಹಿಯ ಆತ್ಯಂತಿಕ ರೂಪ. ಅದು ಹಿಂಸೆಯನ್ನು ಸೃಷ್ಟಿಸುತ್ತಿದೆ.  ಎಲ್ಲ ಕೆಟ್ಟ ರಾಜಕಾರಣದ ಹೊರ ರೂಪ ಎಂದರೆ ಹಿಂಸೆ.  ಎಲ್ಲಾ ರೀತಿಯ ಹಿಂಸೆ. ಇದಕ್ಕೆ ಉತ್ತರ ಎಂದರೆ ಅಹಿಂಸೆ.  ಹೆಚ್ಚು ಹಿಂಸೆ ಸೃಷ್ಟಿಸುವುದಲ್ಲ. violence ಗೆ ಉತ್ತರ non-violence. ಇದನ್ನು ಗಾಂಧಿ ನೂರು ವರ್ಷಗಳ ಹಿಂದೆಯೇ ಮನಗಂಡಿದ್ದರು.

ಮನುಷ್ಯ ಭಗವಂತನ ಸೃಷ್ಟಿ. ಅವನು ಯಾವುದೇ ಪ್ರಜೆ ಅಲ್ಲ.  ಪ್ರಜೆ ನಂತರ ಬರುವುದು.  ಆತ ಯಾವುದೇ ನಿರ್ಬಂಧ ಇಲ್ಲದೆ ನಿರಾಳವಾಗಿ ಬಾಳಬೇಕು. ಆತನಿಗೆ ತನ್ನದೇ ಒಂದು ಇಂಟರ್ನಲ್ ಎಥಿಕ್ಸ್ ಲೋಕ ಇರಬೇಕು.  ಅದೇ ಸ್ವರಾಜ್ಯ. ಇದರ ಮುಖ್ಯ ಮಾನದಂಡ ಎಂದರೆ ಅವನು ತನ್ನ ನೆರೆಹೊರೆಯವರೊಂದಿಗೆ ಸಮರಸದಿಂದ ಬಾಳುವುದು. ಆ  ನೆರೆಹೊರೆ ಎನ್ನುವುದರಲ್ಲಿ ಪ್ರಾಣಿ-ಪಕ್ಷಿ ಗಿಡ ಮರ ಪರಿಸರ ಎಲ್ಲವೂ ಬರುತ್ತದೆ. ಯಾವುದೇ ಬಗೆಯ ಅಧಿಕಾರವನ್ನು ಆತನ ಮೇಲೆ ಹೇರಬಾರದು. Modern Nation-State ಸ್ವರಾಜ್ಯ ಅಂದರೆ ನೆರೆಹೊರೆಯ ಲೋಕ ಮತ್ತು ಅದರ ನಿರ್ವಹಣೆ.

ಟಿ.ಅವಿನಾಶ್: ಆದರೆ ಸಮಸ್ಯೆ ಎಂದರೆ, ಸರ್,  ನೀವು ಕೂಡ `ಹೊಸ ಮನುಷ್ಯ’ ಎಂಬ ಪತ್ರಿಕೆಯ ಸಂಪಾದಕರು. ಇವತ್ತಿನ ಮಾಧ್ಯಮಗಳು ಮತ್ತು ಪತ್ರಿಕೆಗಳು ನಮ್ಮ ಸಮುದಾಯದ ನಿಜವಾದ ಪ್ರಶ್ನೆಗಳನ್ನು ಮರೆಮಾಚಿ ಸುಳ್ಳು ಮತ್ತು ಅರ್ಧ ಸತ್ಯವನ್ನು ಉತ್ಪಾದಿಸುವ ಕೇಂದ್ರಗಳಾಗಿವೆ. ಇದನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು?

ಡಿ ಎಸ್ ನಾಗಭೂಷಣ: ಇವೆಲ್ಲವೂ ಬಂಡವಾಳಶಾಹಿಯ ಕಾರ್ಯಕ್ರಮಗಳು. ಆದ್ದರಿಂದ ಮಾಧ್ಯಮಗಳ ವಿಮರ್ಶೆ ಎಂಬುದು ಬಂಡವಾಳಶಾಹಿಯನ್ನು ವಿಮರ್ಶಿಸುವುದೇ ಆಗಿದೆ. ಏನಿಲ್ಲ ಈ ಚರ್ಚೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಇರಬೇಕು. ಹೆಚ್ಚು ಕೇಳುಗರನ್ನು ಸೃಷ್ಟಿಸಿಕೊಳ್ಳಬೇಕು

ಟಿ.ಅವಿನಾಶ್: ಸರ್ ಸ್ಪೇಸ್ ಇಲ್ಲ ಎಂದು ಹೇಳುತ್ತಾರಲ್ಲ……

ಡಿ ಎಸ್ ನಾಗಭೂಷಣ: ಹೌದು, ತುಂಬಾ ನಿರಾಶೆಯ ಕಾಲ. ಆದರೆ ನಾವು ಭ್ರಮನಿರಸನಗೊಂಡು ಕೆಲಸ ನಿಲ್ಲಿಸಿದರೆ ಪೂರ್ತಿ ಮುಳುಗಿ ಹೋಗುತ್ತೇವೆ. ಮುಖ್ಯವಾಗಿ ಮನುಷ್ಯನಲ್ಲಿ ನಂಬಿಕೆ ಇರಬೇಕು. ಆತ ಎಷ್ಟೇ ಕಷ್ಟವಾದರೂ ಆತನಲ್ಲಿ ಬದುಕುಳಿಯುವ ಸತ್ವದ ಪಸೆ ಇದ್ದೇ ಇರುತ್ತದೆ. ಇಲ್ಲಿ ಇನ್ನೊಂದು ಬಂಡವಾಳಶಾಹಿಯ ವಿರುದ್ಧ ವಾದಿಸುವ ಎಡಪಂಥೀಯರ ಚರಿತ್ರೆ, ಅವರ ನಡವಳಿಕೆಗಳು ತೀರಾ ನಿರಾಶಾದಾಯಕವಾಗಿದೆ. ಅವರು ನುಡಿದಂತೆ ನಡೆಯದಿರುವುದರಿಂದ ಅವರ ಮೇಲಿನ ನಂಬಿಕೆ ಹೊರಟು ಹೋಗಿದೆ. ಆದ್ದರಿಂದಲೇ ಬಲಪಂಥೀಯರು ಮೇಲೆ ಬಂದಿದ್ದಾರೆ.

ಇನ್ನೊಂದು ಸಮಸ್ಯೆ ಎಂದರೆ ನಮ್ಮದು ಪಾರಂಪರಿಕ ಸಮಾಜವಾಗಿದ್ದರಿಂದ, Modern Nation-State ಗೂ ಪರಂಪರೆಗೂ ಅಗಾಧ ಬಿರುಕು ಕಂಡುಬರುತ್ತಿದೆ.  ಭಾರತ 1947 ರಲ್ಲಿ ಉದ್ಭವವಾಗಿಲ್ಲ. ಅದರೊಳಗೊಂದು ಸಾಂಸ್ಕೃತಿಕ ಪರಂಪರೆ ಇದೆಯಲ್ಲ ಅದನ್ನು ಅರ್ಥೈಸಬೇಕಿದೆ. ನಾನು ಪೊಲಿಟಿಕಲ್ ಇಂಡಿಯಾ ಬಗ್ಗೆ ಮಾತನಾಡುತ್ತಿಲ್ಲ, ಕಲ್ಚರಲ್ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದೇನೆ. ಭಾರತ ಎಂದರೆ ಪಶ್ಚಿಮದ ಅನುವಾದ ಅಲ್ಲ. ನೀವು ಸಾಕ್ರಟಿಸ್‍ನಿಂದ ಫ್ರಾಂಜ್ ಫ್ಯಾನನ್, ಫುಕೊವರೆಗೆ  ಓದುತ್ತೀರಾ. ಆದರೆ ಅಭಿನವ ಗುಪ್ತ ಅಥವಾ ನಾಗರ್ಜುನನನ್ನು ಅಥವಾ ಆರ್ಯಕೀರ್ತಿ, ಬೋಧಿಧರ್ಮರನ್ನು ಓದುವುದಿಲ್ಲ.

ನಮ್ಮ ದರ್ಶನಗಳ ಹೆಮ್ಮೆಗಳಾದ ಪ್ರತೀತ ಸಮುತ್ಪಾದ ತತ್ವ  ಮತ್ತು ಅನೇಕಾಂತವಾದ ನಮ್ಮ ಚಿಂತಕರಲ್ಲಿ ಹೆಚ್ಚಿನ ಜನಕ್ಕೆ ಗೊತ್ತೇ ಇಲ್ಲ. ಕೊನೆಗೆ ದಲೈಲಾಮಾನನ್ನು ಓದುವುದಿಲ್ಲ. ಪೂರ್ವದ ಜ್ಞಾನಶಾಖೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಇವತ್ತು ಎಡ್ವರ್ಡ್ ಸೈಯಿದ್ ಹೇಳುವುದನ್ನು ಬುದ್ಧ ಬಹಳ ಹಿಂದೆಯೇ ಹೇಳಿದ್ದ. Truth is just a construct ಅಂತ ಹೇಳಿದ- ಪಶ್ಚಿಮವನ್ನು ಓದಿಕೊಂಡಂತೆ ಪೂರ್ವವನ್ನು ಅರಿತಿಲ್ಲ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕಿದೆ.

ಟಿ.ಅವಿನಾಶ್: ನೀವು ಹೇಳುವುದರಲ್ಲಿ ಒಂದು ಅಪಾಯ ಇದೆ. ಇತ್ತೀಚೆಗೆ ನಮ್ಮ ಪರಂಪರೆಯನ್ನು ಅನಗತ್ಯವಾಗಿ ವಿಜೃಂಭಿಸುವ ಒಂದು ರಾಜಕೀಯ ಪ್ರಯತ್ನ ಕಂಡುಬರುತ್ತಿದೆ. ಅಂದರೆ ನಮ್ಮಲ್ಲಿ ಎಲ್ಲವೂ ಇತ್ತು. ಮತ್ತು ನಮ್ಮದೇ ಅತಿ ಶ್ರೇಷ್ಟ ಎಂಬ ವಿಜೃಂಭಣೆ ಕಂಡುಬರುತ್ತಿದೆ. ಇದಕ್ಕೆ ಪ್ರತಿಯಾಗಿ ಯಾರಾದರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಅವರನ್ನು ಬಂಧಿಸುವ ಮತ್ತು ಅವರ ವಿಚಾರಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ನಮ್ಮ ಸಂವಿಧಾನಿಕ ಸಂಸ್ಥೆಗಳು ಕೈ ಜೋಡಿಸುತ್ತಿರುವ ವಿದ್ಯಮಾನವನ್ನು ನೀವು ಗಮನಿಸಿರಬಹುದು…

ಡಿ ಎಸ್ ನಾಗಭೂಷಣ: ನನ್ನ ಪ್ರಕಾರ ಇದು ಸದ್ಯದಲ್ಲಿ ನಿಂತಿರುವ ಒಂದು ಪ್ರಶ್ನೆ. ನಾವು ಆಧುನೀಕತೆಯ ಹೆಸರಿನಲ್ಲಿ ನಮ್ಮಲ್ಲಿರುವ ಎಲ್ಲವನ್ನು ಖಂಡಿಸುವುದನ್ನು ರೂಢಿಸಿಕೊಂಡಿದ್ದರ ಪ್ರತಿಕ್ರಿಯೆಯಾಗಿ ಇದು ಬಂದಿದೆ.

ಟಿ.ಅವಿನಾಶ್: ಎಲ್ಲವೂ ನಮ್ಮಲ್ಲಿತ್ತು ಎಂಬುದು…

ಡಿ ಎಸ್ ನಾಗಭೂಷಣ: ಹಾಂ ಎಲ್ಲವೂ ನಮ್ಮಲ್ಲಿತ್ತು ಎಂಬ ಪ್ರತಿಕ್ರಿಯೆ ಈಗ ರೂಪುಗೊಂಡಿದೆ. ಆದರೆ ಇಂದಿನ ಕೆಟ್ಟ ಬೆಳವಣಿಗೆ ಎಂದರೆ ನಿಧಾನವಾಗಿ ಎಡಪಂಥೀಯರು ಕಂಗೆಟ್ಟು ಅವರ ಕಣ್ಣುಗಳು ಮಂಜಾಗತೊಡಗಿವೆ. ರಾಮಮಂದಿರ ಕಟ್ಟುತ್ತೇವೆ ಎಂದರೆ, ಮೊದಲಿನಂತೆ ಹಾರಾಡದೆ, ಆಗಲಿ ಬಿಡಿ ಎಂದು ಹೇಳುವುದನ್ನು ಕಲಿತಿದ್ದಾರೆ. ಇದೊಂದು ಹೊಸ ವಿದ್ಯಮಾನ.

ಟಿ.ಅವಿನಾಶ್: ಸರ್, ಹಾಗಲ್ಲ. ಮುಖ್ಯವಾಗಿ ಮಾನವ ಹಕ್ಕು ಹೋರಾಟಗಾರರು, ಪ್ರಗತಿಪರರನ್ನು ಬಂಧಿಸಿ ಅವರ ಧ್ವನಿಯನ್ನು ಹತ್ತಿಕ್ಕುವ ಇಲ್ಲವಾಗಿಸುವ ಪ್ರಯತ್ನ ನಡೆಯುತ್ತಿದೆಯಲ್ಲ…‌

ಡಿ ಎಸ್ ನಾಗಭೂಷಣ: ಇದು ಬಹಳ ಖಂಡನೀಯ ಇದನ್ನು ನಾವು ಖಂಡಿಸಲೇಬೇಕು. ಆದರೆ ಹೀಗಾಗಲು ಕಾರಣ ಏನು ಎಂಬುದನ್ನು ನಾವು ಕಂಡುಕೊಳ್ಳಬೇಕಿದೆ. ಈ ಬಗೆಯ ಬಲಪಂಥೀಯತೆ ಎಂಬುದು ಬಂಡವಾಳಶಾಹಿಯ ಒಂದು ಕಾರ್ಯಾಚರಣೆಯು ಹೌದು. ನೋಡಿ ಪ್ರಶಾಂತಭೂಷಣ ಅವರ ಪ್ರಕರಣ ಇರಬಹುದು ಅಥವಾ ಸಿಎಎ ವಿರುದ್ಧದ ಹೋರಾಟ ಇರಬಹುದು ಅವೆಲ್ಲವೂ ಜನಸಾಮಾನ್ಯರ ಚಳವಳಿ ಆಗಿದ್ದವು. ಈ ಬ್ರಾಂಡೆಡ್ ಎಡಪಂಥೀಯರ ಮೂಲಕ ಹೋರಾಟ ಸಾಧ್ಯವಿಲ್ಲ. ಅವರ ಭಾಷೆಯೇ ಜನಸಾಮಾನ್ಯರನ್ನು ತಲುಪುತ್ತಿಲ್ಲ. ಇಂಗ್ಲಿಷ್ ಮಾಧ್ಯಮದ ವ್ಯಾಮೋಹವೂ ಕೂಡ ಆಧುನೀಕತೆಯ ಮೋಹಗಳಲ್ಲೊಂದು…

ಟಿ.ಅವಿನಾಶ್: ‘ಹೊಸ ಮನುಷ್ಯ’ ಒಂದು ಕಿರುಪತ್ರಿಕೆಯ ಸಂಪಾದಕರಾಗಿ ಅಥವಾ ಪರ್ಯಾಯ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ನಿಮಗೆ ನೀವು ಎದುರಿಸಿದ ಸವಾಲಿನ ಸ್ವರೂಪ ಏನು?

ಡಿ ಎಸ್ ನಾಗಭೂಷಣ: ನನಗೆ ನನ್ನ ವಿಚಾರ ಹೇಳಿಕೊಳ್ಳಲು ವೇದಿಕೆಯೇ ಇರಲಿಲ್ಲ. ವಿಶ್ವವಿದ್ಯಾಲಯದ ಗುಂಪುಗಳ ಮಧ್ಯೆ ನಾನು ಕಳೆದುಹೋಗುವ ಆತಂಕದಲ್ಲಿದ್ದೆ,. ನನ್ನ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶವು ಇರಲಿಲ್ಲ. ಆದರೆ ನಾನು ನಾನೊಬ್ಬ ಸಾಹಿತಿ ಮತ್ತು ನನಗೆ ಮುಖ್ಯವಾದುದನ್ನು ಹೇಳುವ ಸಾಮರ್ಥ್ಯವಿದೆ ಎಂದು ನಂಬಿದ್ದೆ. ದೇವನೂರು ಮಹಾದೇವ, ಕೆ ಎಂ ಶಂಕರಪ್ಪ ತರಹದವರು ನನ್ನ ವಿಶಿಷ್ಟ ವಿಚಾರಶೀಲತೆಯನ್ನು ಗುರುತಿಸಿದ್ದರು. ಪ್ರಧಾನ ಲಹರಿಯ ಪತ್ರಿಕೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯವಲಯಗಳಲ್ಲಿ ಇರುವ ಗುಂಪುಗಳು ನನಗೆ ಅಡ್ಡಿ ಉಂಟು ಮಾಡುತ್ತಿದ್ದವು. ನನ್ನ ಪ್ರಗತಿಪರತೆಯ ರೂಪವೇ ಬೇರೆ ಇತ್ತು. ನಾನೊಬ್ಬ ಗಾಂಧಿಯನ್ ಸಮಾಜವಾದಿ. ಲೋಹಿಯಾರಿಗಿಂತಲೂ ಹೆಚ್ಚು ಒಲವು ಗಾಂಧಿಯತ್ತ.

ಟಿ.ಅವಿನಾಶ್: ಸರ್ ನೀವು ಅನಾರ್ಕಿಸ್ಟಾ?

ಡಿ ಎಸ್ ನಾಗಭೂಷಣ: ಗಾಂಧಿಯನ್ನು ನೀವು ಅನಾರ್ಕಿಸ್ಟ್ ಎನ್ನುವುದಾದರೆ ನಾನೂ ಕೂಡಾ ಅನಾರ್ಕಿಸ್ಟ್. ಅನಾರ್ಕಿಸ್ಟ್ ಎಂಬುದನ್ನು ಇಲ್ಲಿ ನಾನು ಪಾಸಿಟಿವ್ ಆಯಾಮದಲ್ಲಿ ಹೇಳುತ್ತಿದ್ದೇನೆ. ಅನಾಕಿಸ್ಟ್ ಎಂದರೆ ಅರಾಜಕತಾವಾದಿ ಎಂದಲ್ಲ. ಅದರ ನಿಜವಾದ ಅರ್ಥ ಅನಧಿಪತ್ಯವಾದಿ ಎಂದು.

ಟಿ.ಅವಿನಾಶ್: ಸರ್,  ನಿಮ್ಮೆಲ್ಲ ಬರಹಗಳಲ್ಲಿ ಒಂದು ರೀತಿಯ ಪ್ರಖರತೆ, ಮೊನಚು, ಖಚಿತತೆ ಇರುವ ಹಾಗೆ ವ್ಯಂಗ್ಯ ಹಾಗೂ ಕಹಿ ಕೂಡಾ ಇದೆ. ಶತೃಗಳನ್ನು ಕಲ್ಪಿಸಿಕೊಂಡು ಬರೆಯುತ್ತೀರಿ. ಯು.ಆರ್ ಅನಂತಮೂರ್ತಿಯವರು ಒಮ್ಮೆ ನಿಮ್ಮ ಬರಹಗಳಲ್ಲಿ ಕಾಷಾಯದ ಗುಣ ಇದೆ ಎಂದು ಹೇಳಿದ್ದರು. ನಿಮಗೆ ಎಂದಾದರೂ ಈ ವ್ಯಂಗ್ಯ ಮತ್ತು ಕಲ್ಪಿತ ಶತೃಗಳನ್ನು ಹೊರತು ಪಡಿಸಿ ಬರೆಯಬೇಕು, ಇದು ನನ್ನ ಪರಿಕರ ಅಲ್ಲ ಎಂದೆನಿಸಿದೆಯೇ?

ಡಿ ಎಸ್ ನಾಗಭೂಷಣ: ನೋಡಿ ಇದು ಬಹಳ ವೈಯಕ್ತಿಕ ಮತ್ತು ಮುಖ್ಯವಾದ ಪ್ರಶ್ನೆ. ನಾನು ಸಾಹಿತ್ಯವಲಯದಲ್ಲಿ ತುಂಬಾ ಕಹಿಯನ್ನು ಅನುಭವಿಸಿದ್ದೇನೆ. ನನ್ನ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿತ್ತು. ಹಾಗಾಗಿ ವ್ಯಂಗ್ಯದ ಮೊರೆ ಹೋಗುತ್ತಿದ್ದೆ. ಆದರೆ ಇತ್ತೀಚಿನ ವರುಷಗಳಲ್ಲಿ ನಾನು ವ್ಯಂಗ್ಯವನ್ನು ಬಿಟ್ಟಿದ್ದೇನೆ. ಚುರುಕುತನಕ್ಕೆ ವ್ಯಂಗ್ಯ ಬಳಸುತ್ತೇನೆಯೇ ಹೊರತು ವೈಯಕ್ತಿಕ ನೆಲೆಯಲ್ಲಿ ಅಲ್ಲ. ಮೊನಚು ನನ್ನ ಬರಹದಲ್ಲಿ ಇನ್ನೂ ಇದೆ. ನನ್ನದು ಒಂಟಿ ಧ್ವನಿ. ಆದ್ದರಿಂದ ಅದು ಅಗತ್ಯವೂ ಕೂಡಾ ಹೌದು. ನನ್ನ ಪತ್ರಿಕೆಯ ಮೂಲಕ ನನ್ನ ಧ್ವನಿ ಕರ್ನಾಟಕದಲ್ಲಿ ಕೇಳುತ್ತಿದೆ ಎಂದು ಭಾವಿಸಿದ್ದೇನೆ. ನನಗೆ ಅನೇಕ ಶತೃಗಳ ಜೊತೆಗೆ ಅಪಾರ ಮಿತ್ರರೂ ಇದ್ದಾರೆ. ಪತ್ರಿಕೆಗೆ ಮನ್ನಣೆ ಇದೆ. ಕರ್ನಾಟಕದ ಅತ್ಯುತ್ತಮ ಮನಸ್ಸುಗಳು ಇಂದು ನಮ್ಮ ಪತ್ರಿಕೆಯನ್ನು ಓದುತ್ತಿದ್ದಾರೆ ಮತ್ತು ಅದರಲ್ಲಿ ಬರೆಯುತ್ತಿದ್ದಾರೆ,

ಟಿ.ಅವಿನಾಶ್: ಕೊನೆಯದಾಗಿ, ನಿಮ್ಮ `ಗಾಂಧಿ ಕಥನ’ ಪುಸ್ತಕ ಜನಮನ್ನಣೆ ಗಳಿಸಿದೆ . ಆದರೆ ಅದರಲ್ಲಿ ವಿಮರ್ಶೆ ಕಡಿಮೆ ಇದೆ. ಒಂದು ರೀತಿಯ ನ್ಯೂಟ್ರಲ್ ನೆಲೆಯಿಂದ ಗಾಂಧಿಯ ಕಥನವನ್ನು ನಿರೂಪಿಸಿದ್ದೀರಿ. ಏಕೆ ಹೀಗೆ? ಅದರ ಅಗತ್ಯವೇನಿತ್ತು?

ಡಿ ಎಸ್ ನಾಗಭೂಷಣ: ಗಾಂಧಿಯಷ್ಟು ವಿಮರ್ಶೆಗೆ ಒಳಗಾದ ಮತ್ತೊಬ್ಬ ಮನುಷ್ಯನಿಲ್ಲ. ನಾನು ಗಾಂಧಿಯನ್ನು ವಿಮರ್ಶೆಗೆ ಒಳಪಡಿಸಿದರೆ ಅವರನ್ನು ಯಾವ ನೆಲೆಯಲ್ಲಿ ವಿಮರ್ಶಿಸಬೇಕು ಎಂಬ ಪ್ರಶ್ನೆ ಇದೆ. ಏಕೆಂದರೆ ಗಾಂಧಿ ಭೂಮಿಯಷ್ಟೇ ಸಮಗ್ರನಾದ ಮನುಷ್ಯ.. ಹಾಗಾಗಿ ಇಂದಿನ ಪರಿಸ್ಥಿತಿಯಲ್ಲಿ ಅವರನ್ನು ಅವರಿದ್ದ ಹಾಗೆ ಸಮಗ್ರವಾಗಿ ಜನರ ಮುಂದೆ ಇಟ್ಟು ಜನವೇ ತೀರ್ಮಾನಿಸಲಿ ಎಂದು ಬಿಟ್ಟಿದ್ದೇನೆ.

ಸತ್ಯ ಎಂದರೆ ನಮ್ಮ ಬಹಳಷ್ಟು ಜನಕ್ಕೆ ಗಾಂಧಿಯ ಶೇ. 10ರಷ್ಟು ಪರಿಚಯವೂ ಇರಲಿಲ್ಲ ಎಂಬುದು ಈ ಕೃತಿಯನ್ನು ಓದಿದ ಜನ ನನಗೆ ಕರೆ ಮಾಡಿ ಹೇಳುತ್ತಿರುವುದರಿಂದ ಗೊತ್ತಾಗುತ್ತಿದೆ. ಗಾಂಧಿಯ ಸತ್ಯ ತಿಳಿಯುವುದೆಂದರೆ ಅವರನ್ನು ಹೆಚ್ಚೆಚ್ಚು ಓದಿ ತಿಳಿಯುವುದು. ಇಲ್ಲಿ ಹೇಳಬೇಕಾಶದ ಮುಖ್ಯ ಮಾತೆಂದರೆ, ಗಾಂಧಿಯನ್ನು ವಿಮರ್ಶಿಸಲು ನಾನು ಯಾರು, ಎಷ್ಟರವನು?

‍ಲೇಖಕರು Avadhi

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Mallikarjuna Hosapalya

    ನಾನು ಇಷ್ಟಪಟ್ಟು ಓದುವ ಲೇಖಕರಲ್ಲೊಬ್ಬರು ಡೀಎಸ್ಸೆನ್. ಸಂದರ್ಶನ ಚೆನ್ನಾಗಿದೆ.

    ಪ್ರತಿಕ್ರಿಯೆ
  2. KRV

    Hatsoff for staying afloat with your own brains and hearts, DSN. Ofcourse, its not about originality for the glory of originality but rather to avoid blind borrowings. We love you for it, and are being benefitted profoundly from your this nature.

    ಪ್ರತಿಕ್ರಿಯೆ
  3. Sumathi

    ಅವಿನಾಶ್ ತುಂಬಾ ಆತ್ಮೀಯ ಮಾತುಕತೆ ನೀಡಿದ್ದೀರಿ. ಚಿಂತನಾರ್ಹ ಸಂಗತಿಗಳಿವೆ.
    ನಾಗಭೂಷಣ ಅವರ ಮಾತಿನ ಲಹರಿ ಹೊಸ ವ್ಯಾಖ್ಯಾನ ಮತ್ತು ಹೊಳಹು ಗಳನ್ನು ನೀಡಿದೆ.
    Thanku avadhi

    ಪ್ರತಿಕ್ರಿಯೆ
  4. ನೂತನ ದೋಶೆಟ್ಟಿ

    “ಸಾಹಿತ್ಯ ಯುದ್ಧದ ಸಾಧನವಲ್ಲ. ಅದು ಜನರ ಸಾರ್ವತ್ರಿಕ ಪ್ರಜ್ಞೆಯನ್ನು ಹೆಚ್ಚಿಸುವ ಒಂದು ಮಾನವೀಯ ಚಟುವಟಿಕೆ, ಅದು ಬದುಕಿನ ಎಲ್ಲ ಸತ್ಯಗಳನ್ನೂ ಕಾಣಿಸಿಸಿ ಆಯ್ಕೆಯನ್ನು ಜನರಿಗೆ ಬಿಡುವ ಒಂದು ಮುಕ್ತ ಚಟುವಟಿಕೆ.”….
    ಮಾನವೀಯತೆಯಿಂದ ವಿಮುಖವಾಗುತ್ತಿರುವ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಅದನ್ನು ನೆನಪಿಸಿದ್ದೀರಿ.
    ಮುಕ್ತ ಮನದ ಮಾತುಗಳು …

    ಪ್ರತಿಕ್ರಿಯೆ
  5. ನರಸಿಂಹಮೂರ್ತಿ. ಆರ್

    ಸಂದರ್ಶನ ಇಷ್ಟವಾಯಿತು. ನಾಗಭೂಷಣ ತಮ್ಮ ಅಭಿಪ್ರಾಯಗಳನ್ನು ಎಂದಿನಂತೆ ಸ್ಪಷ್ಟ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ನಾಗಭೂಷಣ ಹಾಗೂ ಸಂದರ್ಶಕ ಅವಿನಾಶ್ ಇಬ್ಬರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: