‘ನೀರು ಮತ್ತು ಪ್ರೀತಿ’ ಎಂಬ ಬೊಂಬಾಟ್ ಬುಕ್

ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ.

ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದಬೊಂಬಾಟ್ ಪುಸ್ತಕವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ.

ಅಗ್ರಹಾರಕೃಷ್ಣಮೂರ್ತಿಯವರ ನೀರು ಮತ್ತು ಪ್ರೀತಿ ಕಾದಂಬರಿಗೆ ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಕಾದಂಬರಿ ಕೆಲವೇ ಗಂಟೆಗಳಲ್ಲಿ ಓದಿ ಮುಗಿಸಬಹುದಾದಂತಹ ಕಿರುಕಾದಂಬರಿ. ಇದು ಮೇಲ್ನೋಟಕ್ಕೆ ಒಂದು ಪ್ರೇಮ ಕಥೆಯ ರೀತಿ ಕಂಡರೂ ಇದರಲ್ಲಿರುವ ಚಿತ್ರಣ ನಮ್ಮ ಮುಂದೆ ಬೇರೊಂದು ಲೋಕವನ್ನೇ ತೆರೆದಿಡುತ್ತದೆ. ಇಂತಹ ಉತ್ತಮ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿರುವುದು ಅತಿಶಯೋಕ್ತಿಯೇನಲ್ಲ. ಈ ಕಾದಂಬರಿಗೆ ಆ ಎಲ್ಲಾ ಅರ್ಹತೆಗಳು ಇವೆ. 

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಆಗತಾನೇ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿಗೆ ಬಿ.ಎಸ್ಸಿ. ಮಾಡಲು ಸೇರಿದ್ದೆ. ನನಗೆ ಸಾಹಿತ್ಯ ಓದುವ ಮತ್ತು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕೆಂಬ ಹುಚ್ಚು ಸ್ವಲ್ಪ ಹೆಚ್ಚೇ ಇತ್ತು. ಆಗ ನಮ್ಮ ಕಾಲೇಜಿಗೂ ಶಿವಮೊಗ್ಗ ಕೇಂದ್ರ ಗ್ರಂಥಾಲಯಕ್ಕೂ ಸ್ವಲ್ಪ ದೂರವಿದ್ದರೂ ಅಲ್ಲಿಗೆ ಹೋಗಿ ಪುಸ್ತಕ ಓದುವ ಅಭ್ಯಾಸ ವಿಟ್ಟುಕೊಂಡಿದ್ದೆ. ಆ ಕಾರಣದಿಂದ ತುಂಗಾನದಿಯ ಎಡ ಭಾಗದ ಅಂದರೆ ನಗರದ ಮುಖ್ಯಭಾಗದಲ್ಲಿ ಗ್ರಂಥಾಲಯ, ತುಂಗಾನದಿಯ ಎಡ ಭಾಗದಲ್ಲಿ ಅಂದರೆ ವಿದ್ಯಾನಗರದಲ್ಲಿದ್ದ ನಮ್ಮ ಕಾಲೇಜಿಗೂ ನನ್ನ ಓಡಾಟ ಹೆಚ್ಚಾಯಿತು.

ಕೆಲವೊಮ್ಮೆ ನಮ್ಮ ಸಂತೇಕಡೂರಿನಿಂದ ನೇರವಾಗಿಯೇ ಗ್ರಂಥಾಲಯಕ್ಕೆ ಹೋಗಿದ್ದು ಉಂಟು. ಆಗ ಆ ಗ್ರಂಥಾಲಯದಲ್ಲಿ ನನಗೆ ಪುಸ್ತಕಗಳ ಜೊತೆಗೆ ಲಂಕೇಶ್ಪತ್ರಿಕೆ ಮತ್ತು ಹಾಯ್ಬೆಂಗಳೂರು ಓದುವ ಅಭ್ಯಾಸವಿತ್ತು. ಆಗ ಲಂಕೇಶ್ಪತ್ರಿಕೆಯಲ್ಲಿ ಕೆಲವು ಲೇಖಕರ ಹೆಸರುಗಳು ಸಾಮಾನ್ಯವಾಗಿ ಮತ್ತು ನಿರಂತರವಾಗಿ ಕಾಣುತ್ತಿದ್ದವು ಎಂದು ನೆನಪು. ಅವುಗಳಲ್ಲಿ ಕೆಲವು ನನಗೆ ಇಂದಿಗೂ ನೆನಪಿವೆ. ಆ ಹೆಸರುಗಳಲ್ಲಿ ಕೆಲವು ನಟ ರಾಜ್ಹುಳಿಯಾರ್, ಶೂದ್ರಶ್ರೀನಿವಾಸ್, ಅಗ್ರಹಾರಕೃಷ್ಣಮೂರ್ತಿ, ರಹಮತ್ತರೀಕೆರೆ ಮತ್ತು ಮೊಗಳ್ಳಿ ಗಣೇಶ್ ಇನ್ನು ಹಲವು. ಇವುಗಳಲ್ಲದೇ ಹಿರಿಯರಾದ ಸುಮತೀಂದ್ರ ನಾಡಿಗರ ಹೆಸರು ಕಾಣುತಿತ್ತು.

ಲಂಕೇಶರ ಮರಣಾನಂತರ ಇಲ್ಲಿರುವ ಹಲವು ಲೇಖಕರ ಹೆಸರುಗಳನ್ನು ನಾನು ಆಗಾಗ ಕೇಳುತ್ತಿದ್ದೆ. ಅದರಲ್ಲಿ ರಹಮತ್ತರೀಕೆರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದು ಹೆಚ್ಚು ಜನಪ್ರಿಯರೂ ಆದರು. ಸುಮತೀಂದ್ರ ನಾಡಿಗರು ಸಂಪೂರ್ಣ ಅಜ್ಞಾತವಾಗಿದ್ದರು ಎಂದು ಅನಿಸುತ್ತದೆ. ಜೊತೆಗೆ, ಅಗ್ರಹಾರ ಕೃಷ್ಣಮೂರ್ತಿಯವರ ಹೆಸರನ್ನು ನಾನು ಎಲ್ಲಿಯೂ ನೋಡಲಿಲ್ಲ ಮತ್ತು ಕೇಳಲಿಲ್ಲ. ಇದಕ್ಕೆ ಒಂದು ಕಾರಣ ನಾನು ಸಾಹಿತ್ಯದಿಂದ ಸ್ವಲ್ಪ ವಿಮುಖನಾಗಿ ವಿಜ್ಞಾನಕ್ಕೆ ಹೆಚ್ಚು ಹೊತ್ತು ಕೊಟ್ಟಿದ್ದು ಎಂದು ಹೇಳಬಹುದು. ಇನ್ನೊಂದು ಸ್ವಲ್ಪ ಕಾಲ ನಾನು ಕನ್ನಡನಾಡಿನಿಂದ ದೂರ ಇದ್ದದ್ದು ಇರಬಹುದು.

ಕಳೆದ ವರ್ಷ ನಾನು ಅಂಕುರ್‌ ಬೇಟಗೇರಿಯವರ “ಮಾಳವಿಕಾ ಮತ್ತು ಇತರೆ ಕತೆಗಳು” ಎಂಬ ಕಥಾ ಸಂಕಲನ ಓದುತ್ತಿದ್ದೆ. ಅದರ ಮುನ್ನುಡಿ ಬರೆದಿದ್ದು ಇದೆ ಅಗ್ರಹಾರ ಕೃಷ್ಣಮೂರ್ತಿಯವರು. ನನಗೆ ಒಂದು ರೀತಿ ಆಶ್ಚರ್ಯವಾಗಿ ಇದೇನು ಅಗ್ರಹಾರ ಕೃಷಮೂರ್ತಿ ಎಂಬ ಸಮಕಾಲೀನ ಕನ್ನಡ ಸಾಹಿತ್ಯದ ಮುಖ್ಯ ಲೇಖಕರಲ್ಲಿ ಒಬ್ಬರಾದ ಇವರನ್ನೇ ಮರೆತು ಬಿಟ್ಟಿದ್ದೀನಲ್ಲ ಎಂದು ಅನಿಸಿತು. ತಕ್ಷಣವೇ ಅವರ ಪುಸ್ತಕಗಳನ್ನು ಓದಬೇಕು ಎಂದು ಕೊಂಡು ಅಂತರ್ಜಾಲದಲ್ಲಿ ಹುಡುಕಿದಾಗ ಅವರು ಬರೆದಿರುವುದು ತೀರಾ ಕಡಿಮೆ ಸಾಹಿತ್ಯ ಎಂದು ತಿಳಿಯಿತು.

ಅದರಲ್ಲಿ ಮುಖ್ಯವಾಗಿ ಅವರ ಸ್ವಂತ ಜಿಲ್ಲೆಯಾದ ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ಬರೆದಿರುವ ’ಬೆಳ್ದಿಂಗ್ಳಪ್ಪನಪೂಜೆ” ಮತ್ತು ಅವರ ಕಾದಂಬರಿ “ನೀರುಮತ್ತುಪ್ರೀತಿ”ಯ ಬಗ್ಗೆ ತಿಳಿಯಿತು. ಅದನ್ನು ಅಂಗಡಿಗಳಲ್ಲೂ ಮತ್ತು ಆನ್ಲೈನಿನಲ್ಲೂ ತರಿಸಿಕೊಳ್ಳಲು ಎಷ್ಟು ಹುಡುಕಿದರೂ ಎಲ್ಲಿಯೂ ಸಿಗಲಿಲ್ಲ. ಕಾರಣ ಅದರ ಮರು ಮುದ್ರಣವನ್ನು ಯಾರು ಮಾಡಿರಲಿಲ್ಲ. ಆ ಕಾದಂಬರಿ ಓದಬೇಕೆಂಬ ನನ್ನ ಆಸೆ ಅಲ್ಲಿಗೆ ನಿಂತಿತ್ತು.

ಇತ್ತೀಚೆಗೆ ಅಗ್ರಹಾರ ಕೃಷ್ಣಮೂರ್ತಿಯವರು ಬೇರೊಂದು ಕಾರಣಕ್ಕೆ ಮತ್ತೇ ಸುದ್ದಿಯಾದಾಗ ಇನ್ನು ಅವರ ಕಾದಂಬರಿ ಓದಲಿಲ್ಲವಲ್ಲ ಎಂದು ಅಂದುಕೊಳ್ಳುವಷ್ಟರಲ್ಲಿ ಗೆಳತಿ ಅಕ್ಷತಾ ಹುಂಚದಕಟ್ಟೆಯವರು ತಮ್ಮ ಅರ್ಹನಿಶಿ ಪ್ರಕಾಶನದ ಮೂಲಕ ಈ ಕಾದಂಬರಿಯನ್ನು ಮತ್ತೇ ಪ್ರಕಟಿಸಿದಾಗ ಅದನ್ನು ಕೊಂಡು ಓದುವಂತಾಯಿತು. ಸಮಕಾಲೀನ ಲೇಖಕರ ಒಂದು ಕೃತಿಯನ್ನಾದರೂ ಓದಲೇ ಬೇಕು ಎಂದು ನಿಯಮ ಹಾಕಿಕೊಂಡಿರುವ ನನಗೆ ಇವರ ಕಾದಂಬರಿಯನ್ನು ಕೊನೆಗೂ ಓದಿದಂತಾಯಿತು. ಅಗ್ರಹಾರ ಕೃಷಮೂರ್ತಿಯವರು ಸ್ವಲ್ಪ ಮನಸು ಮಾಡಿದ್ದರೆ ಈ ಕೃತಿ ಕನಿಷ್ಠ ಹತ್ತು ಸಲವಾದರೂ ಮರು ಮುದ್ರಣಗೊಳ್ಳುತಿತ್ತು ಎಂಬ ಭಾವನೆ ಈಗ ನನಗೆ ಮೂಡಿದೆ.

ಇದರ ಬೆನ್ನುಡಿಯನ್ನು ಖ್ಯಾತ ವಿಮರ್ಶಕಿ ಎಂ. ಎಸ್. ಆಶಾದೇವಿಯವರು ಮತ್ತು ಖ್ಯಾತ ಲೇಖಕರಾದ ಎಸ್. ದಿವಾಕರ್‌ ಅವರು ಬರೆದಿದ್ದಾರೆ.

ಈ ಕಾದಂಬರಿಯ ಕಥಾ ವಸ್ತು ಒಂದು ಪ್ರೇಮ ಕತೆಯಾದರೂ ಇಲ್ಲಿ ಕಥಾ ನಾಯಕಿ ಪರಂಪರಾಗತವಾಗಿ ಬಂದ ಸಂಪ್ರದಾಯಕ್ಕೆ ವಿರುದ್ಧವಾಗಿ ಬಂಡಾಯ ಏಳುವುದನ್ನು ಕೊನೆಯಲ್ಲಿ ಕಾಣಬಹುದು. ಕಾದಂಬರಿಯ ಕಾಲ ಅರವತ್ತರ ದಶಕ ಅಥವಾ ಎಪ್ಪತ್ತರ ದಶಕದ ಉತ್ತರಾರ್ಧ ಎಂದು ಹೇಳಬಹುದು. ಕನ್ನಡದಲ್ಲಿ ಪ್ರೇಮ ಕಾದಂಬರಿಗಳಿಗೆ ಬರವಿಲ್ಲ ಇದರಲ್ಲಿ ಅಂತ ವಿಶೇಷ ಏನು ಎಂದು ಕೇಳಬಹುದು. ಇದರ ಕಥಾ ನಾಯಕಿ ಆ ಕಾಲಕ್ಕೆ ಕ್ರಾಂತಿಕಾರಕ ಎಂಬ ನಿಲುವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಸೇರುವುದು ಈ ಕಾದಂಬರಿಯನ್ನು ತುಂಬಾ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಈ ಕಾದಂಬರಿಯನ್ನು ಸ್ತ್ರೀ ಸ್ವಾತಂತ್ರ್ಯದ ದೃಷ್ಟಿಕೋನದಿಂದಲೂ ನೋಡಬಹುದು.

ಇಲ್ಲಿನ ಕಥಾ ನಾಯಕಿ ಮತ್ತು ಕಥಾ ನಾಯಕ ಇಬ್ಬರು ಸಹಪಾಠಿಗಳು. ಇಬ್ಬರೂ ಹಳ್ಳಿಯಿಂದ ಬೆಂಗಳೂರಿಗೆ ಬಂದು ಕಾಲೇಜಿನಲ್ಲಿ ಓದುತ್ತಿರುತ್ತಾರೆ. ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದವರು. ಆಕಸ್ಮಿಕವಾಗಿ ಅವರ ಪ್ರೇಮ, ಕಥಾ ನಾಯಕನ ಚಿಕ್ಕ ರೂಮಿನಲ್ಲಿ ಆರಂಭವಾಗುತ್ತದೆ. ಹಾಗೆ ಆರಂಭವಾದ ಪ್ರೇಮ ಯಾವುದೇ ಅಡೆತಡೆ ಇಲ್ಲದೇ ಸಾಗುತ್ತಿರುವಾಗ ತಮ್ಮ ಕಾಲೇಜಿನ ಬೇರೊಂದು ವಿಷಯಕ್ಕೆ ಸಂಬಂಧಪಟ್ಟ ಅಧ್ಯಾಪಕನೊಬ್ಬನ ಪಾಠವನ್ನು ಕೇಳಲು ಕಥಾ ನಾಯಕಿ ಆಕಸ್ಮಿಕವಾಗಿ ಆಸೆ ಪಡುತ್ತಾಳೆ. ಆದರೆ ಅವಳ ಆ ಚಿಕ್ಕ ಆಸೆ ಅವಳ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಅದು ಮತ್ತೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ಇನ್ನೇನೂ ಅವಳ ಬದುಕೇ ಮುಗಿದು ಹೋಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಕಾದಂಬರಿ ಬೇರೆ ತಿರುವುನ್ನು ಪಡೆದು ಕೊಳ್ಳುತ್ತದೆ.

ನೀರು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಹಾಗೆಯೇ ಪ್ರೀತಿಯೂ ಕೂಡ ಮನುಷ್ಯನ ಮೂಲಭೂತ ಅವಶ್ಯಕತೆಯೇ ಆಗಿದೆ. ಪ್ರೀತಿಯಿಲ್ಲದಿದ್ದರೆ ಭೂಮಿಯ ಮೇಲೆ ಮಾನವನ ವಿಕಾಸ ಅಷ್ಟೇ ಅಲ್ಲ ಯಾವ ಜೀವಿಯ ವಿಕಾಸವೂ ಆಗುತ್ತಿರಲಿಲ್ಲ. ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪನವರ ಒಂದು ಕವನದ ಸಾಲುಗಳು ಇಲ್ಲಿ ಮುಖ್ಯವೆನಿಸುತ್ತವೆ. ಅವು ಈ ರೀತಿ ಇವೆ “ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ?”

ಸೃಷ್ಟಿಯ ಪ್ರತಿಯೊಂದು ಚರಾಚರ ವಸ್ತುವಿನ ಇರುವಿಕೆಗೂ ಪ್ರೀತಿ ತುಂಬಾ ಮುಖ್ಯ. ವೈಜ್ಞಾನಿಕವಾಗಿ ನೋಡುವುದಾದರೆ ಈ ಪ್ರೀತಿ, ಪ್ರೇಮ ಮತ್ತು ಲೈಂಗಿಕ ಆಸಕ್ತಿ ಎಲ್ಲವೂ ಮನುಷ್ಯರ ದೇಹದಲ್ಲಿರುವ ಹಾರ್ಮೋನುಗಳ ಹತೋಟಿಯಲ್ಲಿರುತ್ತವೆ ಎಂದು ಹೇಳಬಹುದು. ಈ ಹಾರ್ಮೋನುಗಳ  ಕಾರ್ಯಕ್ಕೂ ನೀರೇ ಮೂಲಾಧಾರ. ಆಗಾಗಿ ನೀರಿಗೂ ಪ್ರೀತಿಗೂ ಅವಿನಾಭಾವ ಸಂಬಂಧ.

ಶಿವರುದ್ರಪ್ಪನವರ ಅದೇ ಕವನದಲ್ಲಿ ಇನ್ನು ಮುಂದಿನ ಸಾಲುಗಳಲ್ಲಿ  “ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ ನರಳುವ ಪಾಡು ತಪ್ಪೀತು ಹೇಗೆ?  ನಮ್ಮ ನಿಮ್ಮ ಮನಸ್ಸು ಮರು ಭೂಮಿಯಾಗದ ಹಾಗೆ ತಡೆಗಟ್ಟುವುದು ಹೇಗೆ?” ಎಂಬ ಸಾಲುಗಳು ಬರುತ್ತವೆ. ಈ ಕಾದಂಬರಿಗೆ ಈ ಪದ್ಯದ ಸಾಲುಗಳು ತುಂಬಾ ಅನ್ವಯವಾಗುತ್ತವೆ. ಜಾತಿ, ಭಾಷೆ ಮತ್ತು ಬಣ್ಣಗಳ ಗೋಡೆ ಅಡ್ಡಬಂದರೂ ಕೊನೆಗೆ ಇಲ್ಲಿ ಪ್ರೀತಿಯೇ ಗೆಲ್ಲುತ್ತದೆ.

ಕಾದಂಬರಿಯಲ್ಲಿ ಯಮುನತ್ತೆ ಎಂಬ ವೃದ್ಧ ವಿಧವೆಯ ಪಾತ್ರ ಬರುತ್ತದೆ. ಆ ಪಾತ್ರ ಜಲಜಳನ್ನು ಮತ್ತು ಅವಳ ಪ್ರೇಮದ ಆಟಗಳನ್ನು ವಿಚಿತ್ರವಾಗಿ ನೋಡುವ ದೃಷ್ಟಿಯಲ್ಲಿ ಆ ಕಾಲದ ಅಥವಾ ಇಂದಿಗೂ ಅನ್ವಯವಾಗುವ ಎಂ. ಕೆ. ಇಂದಿರಾರವರ ಫಣಿಯಮ್ಮರಂತಹ ಭಾರತೀಯ ವಿಧವೆಯರ ಶೋಚನೀಯ ಸ್ಥಿತಿಯನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಒಂದು ಕಡೆ ಬದುಕಿನ ಎಲ್ಲಾ ಸುಖಗಳನ್ನು ಕಳೆದುಕೊಂಡ ಯಮುನತ್ತೆ ಇನ್ನೊಂದು ಕಡೆ ಭೂಮಿಯ ಸುಖವೆಲ್ಲಾ ನನಗೋಸ್ಕರವೇ ಇರುವುದು ಅದನ್ನು ಪಡೆದೇ ತೀರುತ್ತೇನೆ ಎಂದು ಸದಾ ಓಡುತ್ತಿರುವ ಕಥಾ ನಾಯಕಿ ಜಲಜ. ಈ ಎರಡು ಪಾತ್ರಗಳ ಮುಖಾ ಮುಖಿಯಲ್ಲಿ ಆಧುನಿಕತೆ ಮತ್ತು ಪುರಾತನ ಭಾರತದ ಮಹಿಳೆಯರ ಸ್ವಾತಂತ್ರ್ಯವನ್ನು ಮುಖಾ ಮುಖಿಯಾಗಿಸಿರುವುದನ್ನು ಕಾಣಬಹುದು.

ಪ್ರೀತಿಯನ್ನು ಪಡೆಯುವುದಕ್ಕೋಸ್ಕರವೇ ಹುಟ್ಟಿರುವ ಜಲಜ. ಪ್ರೀತಿಯ ಕಾರಂಜಿಯೇ ಆಗಿರುವ ಕಥಾ ನಾಯಕ ಗೋಪಾಲ. ಇಲ್ಲಿ ಜಲಜ ಎಂಬ ಪದದ ಅರ್ಥವೇ ನೀರಿನಿಂದ ಹುಟ್ಟಿದವಳು ಎಂದು. ಇನ್ನೊಂದು ಅರ್ಥದಲ್ಲಿ ನೀರಿನಲ್ಲಿ ಹುಟ್ಟಿದುದು, ತಾವರೆ ಅಥವಾ ಕಮಲ ಎಂದು ಅರ್ಥೈಸಬಹುದು.  ಕಾದಂಬರಿಯ ಕೊನೆಯಲ್ಲಿ ಜಲಜಳ ತಂದೆ ಕೃಷ್ಣಸ್ವಾಮಿಯವರು ಬೆಣ್ಣೆ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಮಗಳು ಎಷ್ಟೇ ಆಧುನಿಕಳಾಗಿ ಯೋಚಿಸಿ ಸಂಪ್ರದಾಯಕ್ಕೆ ಬಂಡಾಯವೆದ್ದು ಯಾರೋ ಕಟ್ಟಿದ ತಾಳಿ ಒಂದು ಹೆಣ್ಣನ್ನು ಬದುಕಿನ ಕೊನೆಯತನಕ ಬಂಧಿಸಲು ಸಾಧ್ಯವಿಲ್ಲ ಎಂಬುದನ್ನು ತನ್ನ ಬಿಡುಗಡೆಯ ಮೂಲಕ ಸಾಧ್ಯವಾಗಿಸಿಕೊಂಡರೆ ತಂದೆ ಅದನ್ನೇ ತನ್ನ ಬದುಕಿನ ಕೊನೆ ಎಂದು ಕೊಳ್ಳುತ್ತಾರೆ. ಒಬ್ಬರಿಗೆ ಬಂಧನ ಇನ್ನೊಬ್ಬರಿಗೆ ಬಿಡುಗಡೆ ಇದು ಬದುಕಿನ ವಿಪರ್ಯಾಸ.

ಇಲ್ಲಿ ಯುಸಿ (you see) ಎಂಬ ಇಂಗ್ಲಿಷ್ಪದವನ್ನು ತರಗತಿಯಲ್ಲಿ ಪುನರಾವರ್ತಿಸಿ ಹಾಸ್ಯಕ್ಕೊಳಗಾಗುವ ಅಧ್ಯಾಪಕನೊಬ್ಬನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅವನೇ ಕಾದಂಬರಿಯ ಮುಖ್ಯ ತಿರುವು ಕೂಡ.

ಈ ಕಾದಂಬರಿ ತುಂಬಾ ಚೆನ್ನಾಗಿದೆ, ಓದುಗರನ್ನು ಕುತೂಹಲಕಾರಿಯಾಗಿ ಅಚ್ಚರಿ ಮೂಡಿಸುತ್ತದೆ. ಕಾದಂಬರಿಯ ಕಲಾತ್ಮಕತೆ ತುಂಬಾ ಸೊಗಸಾಗಿದೆ. ಸಾಮಾನ್ಯವಾಗಬಹುದಾದ ಕತೆಯೊಂದನ್ನು ಅ ಸಾಮಾನ್ಯವಾದ ರೀತಿಯಲ್ಲಿ ಹೇಳಿರುವುದರಲ್ಲಿ ಕೃಷ್ಣಮೂರ್ತಿಯವರು ತುಂಬಾ ಯಶಸ್ವಿಯಾಗಿದ್ದಾರೆ.

ಸುಮಾರು ಹತ್ತೊಂಬತ್ತು ವರ್ಷಗಳ ನಂತರ ಕಾದಂಬರಿ ಮರು ಮುದ್ರಣಗೊಂಡು ಮತ್ತೇ ಸುದ್ದಿಯಲ್ಲಿರುವುದು ಕಾದಂಬರಿಯ ಗಟ್ಟಿತನವನ್ನು ತೋರಿಸುತ್ತದೆ. ಅಗ್ರಹಾರ ಕೃಷ್ಣಮೂರ್ತಿಯವರು ಈಗ ನಿವೃತ್ತರಾಗಿದ್ದಾರೆ. ಅವರಿಗೆ ಹೆಚ್ಚು ಸಮಯವಿದೆ. ಇನ್ನು ಹೆಚ್ಚು ಹೆಚ್ಚು ಕೃತಿಗಳನ್ನು ಬರೆಯಲು ಮನಸು ಮಾಡಿದರೆ ಅವರಿಂದ ಇನ್ನು ಒಳ್ಳೆಯ ಕೃತಿಗಳು ಮೂಡಿ ಬರಬಹುದು.

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: