ಬೆಳಗ್ಗೆ ಫೋಟೋ ಕ್ಲಿಕ್.. ಸಂಜೆ ಪುಸ್ತಕದಲ್ಲಿ..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

ಸ್ವ್ಯಾನ್ ಪ್ರಿಂಟರ್ಸ್ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಒಮ್ಮೆ ಅಂಕಿತ ಪುಸ್ತಕದಿಂದ ಪ್ರಕಟಿಸಿದ ವಿಶ್ವೇಶ್ವರ ಭಟ್ ಅವರ “ನೂರೆಂಟುಮಾತು 10” ಪುಸ್ತಕ ಮುದ್ರಣದ ಸಮಯ. ಅಂತಿಮವಾಗಿ ಪುಸ್ತಕ ಮುದ್ರಣಕ್ಕೆ ಕೊಟ್ಟು ಹಾಗೆ ಮಾಡಿ, ಹೀಗೆ ಮಾಡಿ' ಅಂತ ಹೇಳಿ ಯಾವಾಗ ಸಿಗುತ್ತೆ’ ಎಂದಾಗ ಒಂದು ಸಮಯ ಹೇಳಿದೆ. “ಹೂ, ಓಕೆ… ನಾನು ಅಂದು ಬೆಳಗ್ಗೆ ಮೈಸೂರಿಗೆ ಹೋಗುತ್ತಿದ್ದೇನೆ, ಅಂದು ಪುಸ್ತಕ ಬೇಕೇ ಬೇಕು” ಎಂದರು ಭಟ್ ಸರ್.

ಮುಂದೆ, ನಾನು ಹೇಳಿದ್ದ ಸಮಯಕ್ಕೆ ಸರಿಯಾಗಿ ಕರೆಮಾಡಿ, `ಪುಸ್ತಕ ಕಳುಹಿಸಿದ್ದೀರಾ’ ಎಂದಾಗ …ನಾನು ಯಥಾ ಪ್ರಕಾರ ನನ್ನ ಚಾಳಿಯಂತೆ, “ಇಲ್ಲ ಸರ್, ಮಷೀನ್ ಪ್ರಾಬ್ಲಮ್ ಆಗಿದೆ, ಇನ್ನೂ ಒಂದು ಘಂಟೆ ಆಗುತ್ತೆ” ಎಂದೆ. ಮುಂದೆ ಒಂದು ಗಂಟೆ.. ಎರಡು ಗಂಟೆ ಆದರೂ ಮಷೀನ್ ರೆಡಿ ಆಗಲೇ ಇಲ್ಲ. ಅಷ್ಟರಲ್ಲಿ ಮೂರು ನಾಲ್ಕು ಬಾರಿ ಕರೆ ಮಾಡಿ ಪುಸ್ತಕದ ಬಗ್ಗೆ ವಿಚಾರಿಸಿದರು.

ಬೆಳಗ್ಗೆ 10 ಗಂಟೆಗೆ ಸಿಗಬೇಕಾಗಿದ್ದ ಪುಸ್ತಕ ಮಧ್ಯಾಹ್ನ 1 ಗಂಟೆಗೆ ರೆಡಿಯಾಯಿತು. ಎಲ್ಲಿಗೆ ಕಳಿಸಬೇಕು ಎಂದು ಕೇಳಲು ಸರ್‍ಗೆ ಎಷ್ಟು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲೇ ಇಲ್ಲ. ಪುಸ್ತಕ ತಡವಾಗಿದ್ದಕ್ಕೆ ಕೋಪಗೊಂಡಿದ್ದಾರೆಂದು ತಿಳಿದು, ಕಡೆಗೆ ಅವರ ಆಪ್ತ ಸಹಾಯಕ ರವಿಚಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, “ಇಲ್ಲ, ಸರ್ ಬೇಸರವಾಗಿ ಮೈಸೂರಿಗೆ ಹೊರಟೇಬಿಟ್ಟರು” ಎಂದರು.

ರವಿಚಂದ್ರ ಅವರನ್ನೇ ರಿಕ್ವೆಸ್ಟ್ ಮಾಡಿ, ಭಟ್ ಸರ್‍ಗೆ ಮೈಸೂರಿನಲ್ಲಿ ಎಲ್ಲಿ ಕಾರ್ಯಕ್ರಮ, ಯಾವ ಹೋಟೆಲಿನಲ್ಲಿ ಉಳಿದಿದ್ದಾರೆ ಎಂಬುದನ್ನು ತಿಳಿದುಕೊಂಡು….. ಒಂದು ಕಾರ್‍ನಲ್ಲಿ ಪುಸ್ತಕವನ್ನು ಮೈಸೂರಿಗೆ ಕಳಿಸಿ, ಅಲ್ಲಿ ನನ್ನ ಸ್ನೇಹಿತ ಶಿವು ಸಹಾಯದಿಂದ ಹೋಟೆಲ್ ಹುಡುಕಿಸಿ, ರಿಸೆಪ್ಷನ್‍ಗೆ ಹೋಗಿ ವಿಚಾರಿಸಿ, ರೂಮ್ ಬಾಯ್ ಕೈಯಲ್ಲಿ ಪುಸ್ತಕಗಳನ್ನು ಭಟ್ ಸರ್‍ಗೆ ತಲುಪಿಸಲಾಯಿತು.

ಹೊಸ ಪುಸ್ತಕ ಕೈ ಸೇರಿದ ತಕ್ಷಣ ಪುಸ್ತಕ ತಡವಾಗಿದ್ದಕ್ಕೆ ನಮ್ಮ ಮೇಲಾಗಿದ್ದ ಬೇಸರವನ್ನೆಲ್ಲ ಮರೆತು “….ಪುಸ್ತಕ ತಡವಾದರೂ ಚೆನ್ನಾಗಿ ಪ್ರಿಂಟ್ ಆಗಿದೆ, ಇಂದು ಇಲ್ಲಿ ನಡೆಯುತ್ತಿರುವ ಒಂದು ವಿಶೇಷ ಸಭೆಯಲ್ಲಿ, ಈ ಪುಸ್ತಕ ಅರ್ಪಣೆ ಆಗಿರುವವರ ಮುಂದೆ ಔಪಚಾರಿಕವಾಗಿ ಬಿಡುಗಡೆ ಮಾಡಿಸಬೇಕಿತ್ತು. ಸರಿಯಾದ ಸಮಯಕ್ಕೆ ಸಿಕ್ಕಿದೆ. ಇಲ್ಲಿವರೆಗೆ ಬಂದು ನನ್ನ ಹುಡುಕಿ ಪುಸ್ತಕ ತಲುಪಿಸಿದ್ದು ಖುಷಿಯಾಯ್ತು” ಅಂತ ಒಂದು ಮೆಸೇಜ್ ಕಳಿಸಿದರು…

ಇನ್ನೊಮ್ಮೆ `ಬಾನಯಾನ’ ಪುಸ್ತಕ ಮುದ್ರಣದ ಸಮಯ…. ಕೊನೆ ಹಂತದ ಪುಸ್ತಕ ವಿನ್ಯಾಸಕ್ಕಾಗಿ ಪುಸ್ತಕ ಬಿಡುಗಡೆ ಹಿಂದಿನ ದಿನ ರಾತ್ರಿ ವಿಶ್ವೇಶ್ವರ ಭಟ್ ಅವರು ಮತ್ತು ಪ್ರಕಾಶ್ ಕಂಬತ್ತಳ್ಳಿ ಅವರು ನಮ್ಮ ಕಚೇರಿ ಕಂಪ್ಯೂಟರ್ ಮುಂದೆ ಕೂತು ಫೋಟೋ ಪುಟಗಳ ವಿನ್ಯಾಸ ಮಾಡಿಸುತ್ತಿದ್ದರು. ಕೊನೆಯಲ್ಲಿ ಅವರು ಪುಸ್ತಕದ ಮೂಲ ಲೇಖಕರ ಜೊತೆ ಇರೋ ಫೋಟೋ ಹಾಕಬೇಕು ಅನ್ಕೊಂಡು, ಮೂಲ ಲೇಖಕರಾದ ಕ್ಯಾಪ್ಟನ್ ಗೋಪಿನಾಥ್ ಜೊತೆ ಅವರದು ಒಂದು ಫೋಟೋವನ್ನು ಎಷ್ಟು ಹುಡುಕಿಸಿದರೂ ಸಿಗಲೇ ಇಲ್ಲ.

ಕೊನೆಗೆ “ಗೋಪಿನಾಥ್ ಅವರು ಬೆಳಗ್ಗೆ ಹತ್ತುಗಂಟೆಗೆ ಸಿಗುತ್ತಾರೆ, ಆಗ ಫೋಟೋ ತೆಗೆಸಿಕೊಟ್ಟರೆ ಪರವಾಗಿಲ್ಲವಾ..?” ಎಂದರು. “ಪರವಾಗಿಲ್ಲ ಕೊಡಿ ಸರ್ ಸೇರಿಸೋಣ” ಎಂದಾಗ… ಸಂಜೆ ಪುಸ್ತಕದ ಬಿಡುಗಡೆ ಇರುತ್ತದೆ, ಎಚ್ಚರ..!!!…ಆಗಲಿ ಏನೂ ತೊಂದರೆಯಿಲ್ಲ, ಬೆಳಗ್ಗೆ ಬೇಗ ಫೋಟೋ ಕೊಡಿ ಎಂದಾಗ … ಬೆಳಗ್ಗೆ 10.30 ಕ್ಕೆ ಫೋಟೋ ಕೊಟ್ಟರು. ಫೋಟೋ ಸೇರಿಸಿ ಪುಸ್ತಕ ಮುದ್ರಣ ಮಾಡಿ ಸಂಜೆ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ಧ ಮಾಡಿದೆವು.

ಪುಸ್ತಕ ಬಿಡುಗಡೆ ಆದ್ಮೇಲೆ ವೇದಿಕೆ ಮೇಲೆ ನನ್ನ ಕರೆದು ಸನ್ಮಾನಿಸಿ, ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಮುದ್ರಣ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂಬುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ ಎಂದು ಪುಸ್ತಕ ತೆರೆದು, “ನೋಡಿ ಇವತ್ತು ತೆಗೆದ ಫೋಟೋನು ಈ ಬುಕ್ಕಲ್ಲಿ ಸೇರಿದೆ, ಇವರೇ ಮುದ್ರಕರು” ಎಂದು ನನ್ನನ್ನು ಅವರಿಗೆ ಪರಿಚಯಿಸಿದರು….

ವಿಶ್ವೇಶ್ವರಭಟ್ಟರು ಸುವರ್ಣ ನ್ಯೂಸ್ ಚಾನೆಲ್‍ನ ಸಂಪಾದಕರಾಗಿದ್ದ ಸಮಯದಲ್ಲಿ… ನಮಗೆ ಗಣ್ಯರೊಬ್ಬರು ದೊಡ್ಡ ಮೊತ್ತದ ಪ್ರಿಂಟಿಂಗ್ ಹಣವನ್ನು ಮೂರು ವರ್ಷವಾದರೂ ಕೊಡದೆ ಆಟ ಆಡಿಸುತ್ತಿದ್ದರು. ದೊಡ್ಡ ಮೊತ್ತವಾದ್ದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೆವು. ಒಂದು ದಿನ ರಾತ್ರಿ ಸುವರ್ಣ ನ್ಯೂಸ್ ಚಾನೆಲ್‍ನಲ್ಲಿ ಒಬ್ಬರು ಇದೇ ರೀತಿ ಅನೇಕ ಜನರಿಗೆ ಮೋಸ ಮಾಡಿದ ಬಗ್ಗೆ ಪ್ರಸಾರವಾಗುತ್ತಿತ್ತು.

ನಾನು ಅದನ್ನು ನೋಡಿ, ನನಗೆ ಹಣ ಕೊಡಬೇಕಾದವರ ಮೊಬೈಲ್ ಗೆ, “ಸುವರ್ಣ ನ್ಯೂಸ್ ನೋಡಿ” ಎಂದು ಒಂದು ಸಂದೇಶ ಕಳಿಸಿದೆ. ಅವರು ತಕ್ಷಣ ಕರೆ ಮಾಡಿ “ನಮ್ದು ಇದೇ ರೀತಿ ಮಾಡಿಸ್ತೀ ಏನಪ್ಪಾ” ಎಂದರು. ನಾನು ಹಿಂದೆ ಮುಂದೆ ಯೋಚಿಸದೆ ಹೂಂ ಅಂದುಬಿಟ್ಟೆ. ತಕ್ಷಣ ಅವರು ಕರೆ ಕಟ್ ಮಾಡಿದರು. ಬೆಳಗ್ಗೆ 7.00 ಗಂಟೆಗೆ, ಅವರ ಕಡೆ ಲೋಕಸಭಾ ಸದಸ್ಯರಿಂದ ಭಟ್ ಸರ್ ಕರೆ ಮಾಡಿಸಿ, ಈ ವಿಷಯದ ಬಗ್ಗೆ ವಿಚಾರಿಸಿದ್ದಾರೆ. (ನಾನು ಈ ವಿಷಯದ ಬಗ್ಗೆ ಭಟ್ ಸರ್‍ ಗೆ ತಿಳಿಸಿರಲೇ ಇಲ್ಲ) ಭಟ್ ಸರ್,” ಸ್ವ್ಯಾನ್ ಕೃಷ್ಣಮೂರ್ತಿ ನಮ್ಮ ಹುಡುಗ, ನಿಮ್ಮ ಕಡೆಯಿಂದ ತಪ್ಪಾಗಿದ್ದು ಅವನಿಗೆ ಮೋಸ ಆಗುತ್ತಿದೆ ಎಂದರೆ ನಾವು ಅವನ ಪರ ನಿಲ್ಲುತ್ತೇವೆ” ಎಂದು ಅವರಿಗೆ ಸ್ವಲ್ಪ ಜೋರಾಗಿ ಹೇಳಿಬಿಟ್ಟಿದ್ದಾರೆ.

ನಂತರ ಭಟ್ಟರು ನನಗೆ ಕರೆ ಮಾಡಿ “ಇಷ್ಟು ದಿನ ಆದರೂ ನನಗೆ ನೀನು ಈ ವಿಷಯ ಯಾಕೆ ತಿಳಿಸಲಿಲ್ಲ” ಎಂದು ಬೈದರು. ಈ ಘಟನೆ ನಡೆದು ಸುಮಾರು ಒಂದು ಗಂಟೆ ಸಮಯ ಕಳೆಯುವುದರೊಳಗೆ, ಆ ಗಣ್ಯ ವ್ಯಕ್ತಿ ಬಾಕಿ ಮೊತ್ತವನ್ನು ನಮಗೆ ತಲುಪಿಸಿದರು. ನಮಗಾದ ತೊಂದರೆಯನ್ನು ಬಾಯಿಬಿಟ್ಟು ಹೇಳಿಕೊಳ್ಳದಿದ್ದರೂ, ಹಣ ಹಿಂದಿರುಗಿ ಬರುವಂತೆ ಸಹಾಯಮಾಡಿ ಎಂದು ಮೊರೆಯಿಡದಿದ್ದರೂ ಸಂದರ್ಭವನ್ನು ಸೂಕ್ಷ್ಮವಾಗಿ ಅವಲೋಕಿಸಿ ಅರ್ಥಮಾಡಿಕೊಂಡು ಪರೋಪಕಾರಕ್ಕೆ ಮುಂದಾದದ್ದು ವಿಶ್ವೇಶ್ವರ ಭಟ್ ಅವರ ದೊಡ್ಡಗುಣ.

ಖ್ಯಾತ ಬರಹಗಾರ, ಪತ್ರಿಕಾರಂಗದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿದ, ಯುವಕರನ್ನು ಹೆಚ್ಚು ಹೆಚ್ಚು ಸೆಳೆಯುವ, ಶಿಸ್ತು ಮತ್ತು ಸಮಯಪಾಲನೆಗೆ ಇನ್ನೊಂದು ಹೆಸರಾದ, ವಿಶಿಷ್ಟ ಸಂಪಾದಕ ವಿಶ್ವೇಶ್ವರ ಭಟ್ ಸರ್ ಬಳಿ ದೊಡ್ಡ ಪುಸ್ತಕ ಭಂಡಾರವೇ ಇದೆ. ಅವರು ಓದುವುದು ಹಾಗೂ ಬರೆಯುವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಅಷ್ಟೇ ಪ್ರಾಮುಖ್ಯತೆ ಪುಸ್ತಕ ವಿನ್ಯಾಸ ಮತ್ತು ಮುದ್ರಣಕ್ಕೂ ಕೊಡುತ್ತಾರೆ.

ಅವರು ಪುಸ್ತಕವನ್ನು ಮುದ್ರಣಕ್ಕೆ ಕೊಟ್ಟು ಸುಮ್ಮನೆ ಕೂರುವವರೇ ಅಲ್ಲ. ಪದೇ ಪದೇ ಕರೆ ಮಾಡಿ ಪುಸ್ತಕದ ಗುಣಮಟ್ಟ ಚೆನ್ನಾಗಿರಬೇಕು, ಲ್ಯಾಮಿನೇಷನ್ ಈ ತರ ಮಾಡಿ, ಪೇಪರ್ ಆ ತರ ಬಳಸಿ, ಬೈಂಡಿಂಗ್ ಇತ್ಯಾದಿ ಬಗ್ಗೆ ತಲೆ ಕೆಡಿಸ್ಕೋತಾರೆ, ನಮ್ಮ ತಲೆಗೂ ಕೆಲಸ ಕೊಡುತ್ತಾರೆ. ಮುದ್ರಣಾಲಯದಿಂದ ಹೊರಬರುವ ಮೊದಲ ಪ್ರತಿಯನ್ನು ನೋಡಲು ಕಾತರದಿಂದ ಕಾಯುತ್ತಿರುತ್ತಾರೆ.

ಅದು ರಾತ್ರಿ ಎಷ್ಟೇ ಸಮಯವಾಗಲಿ ಪುಸ್ತಕ ನೋಡಿಯೇ ಮನೆಗೆ ಹೋಗುವುದು. ಕೆಲವು ಬಾರಿ ಕುತೂಹಲ ಹೆಚ್ಚಾಗಿ ಮೊದಲ ಪ್ರತಿ ನೋಡಲು ಮುದ್ರಣಾಲಯಕ್ಕೇ ಬಂದದ್ದುಂಟು. ಒಂದು ಬಾರಿಯಂತೂ ನಾವು ಪುಸ್ತಕ ರೆಡಿಮಾಡಿ ಅವರ ಕಚೇರಿಗೆ ತೆಗೆದುಕೊಂಡು ಹೋದಾಗ ರಾತ್ರಿ 1 ಗಂಟೆ. ಅಲ್ಲಿವರೆಗೆ ಕಾದು ಪುಸ್ತಕ ನೋಡಿಯೇ ಮನೆಗೆ ಹೋಗಿದ್ದು.

ಮೊದಲ ಪ್ರತಿ ಅವರ ಕೈಗೆ ಸಿಕ್ಕಾಗ, ಅವರು ಪುಸ್ತಕವನ್ನು ಮಿಣುಕು ಕಣ್ಣಿನಿಂದ ನೋಡುತ್ತಾ, ಅದನ್ನು ಸವರುತ್ತಾ, ಹಿಂದೆ ಮುಂದೆ ತಿರುವುತ್ತಾ ಎಷ್ಟು ಸಂಭ್ರಮ ಪಡುತ್ತಾರೆ ಎಂದರೆ… ಹಸುವು ಕರು ಹಾಕಿದ ತಕ್ಷಣ ತನ್ನ ಕರುವನ್ನು ಮುದ್ದಿಸುವ ಹಾಗೆ! ಹಾಗೆಯೇ ಮುದ್ರಣದ ಬಗ್ಗೆ ಎರಡು ಒಳ್ಳೆಯ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳುವುದನ್ನೂ ಮರೆಯುವುದಿಲ್ಲ…

ಯುವಕರನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸುವ ವಿಶ್ವೇಶ್ವರ ಭಟ್ ಅವರ 80 ಪುಸ್ತಕಗಳಲ್ಲಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನಾವೇ ಮುದ್ರಿಸಿರುವುದು ನಮ್ಮ ಹೆಗ್ಗಳಿಕೆ.

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: