ಬಿ ಡಿ ಜತ್ತಿ ಪಾಲಿಗೆ ಸಿಕ್ಕ ಬುತ್ತಿ- ಕಂಠಿ ಕೊರಳಿಗೆ ಬಿದ್ದ ಕಂಠೀಹಾರ

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ಹೊರಗೆ ಸಣ್ಣಗೆ ಮಳೆ
ಮಳೆಯ ಹೊಡೆತಕ್ಕೆ ಆವರಿಸಿದ ಗಾಳಿ ಮೈ, ಮನಸ್ಸುಗಳನ್ನು ಹೆಪ್ಪುಗಟ್ಟಿಸುತ್ತಿದೆ ಎಂಬ ಭಾವ ದಟ್ಟವಾಗುತ್ತಿದ್ದಂತೆಯೇ ಬಿಸಿ,ಬಿಸಿಯಾದ ಕಾಫಿ ಹೀರುತ್ತಾ ನಾನು ಅವರ ಮುಖ ನೋಡಿದೆ. ಅವರು ತಾವು ಕುಳಿತಿದ್ದ ಸೋಫಾದ ಹಿಂದಕ್ಕೊರಗಿ ಹೇಳತೊಡಗಿದರು.

ಅವರ ಹೆಸರು-
ಎಂ.ಪಿ.ನಾಡಗೌಡ

ಜನತಾಪರಿವಾರದ ಸಜ್ಜನ ನಾಯಕರ ಪೈಕಿ ಒಬ್ಬರಾದ ಎಂ.ಪಿ.ನಾಡಗೌಡ ಕರ್ನಾಟಕದ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಹೆಸರಾದವರು. ಅವತ್ತು ಪ್ರೆಸ್ ಕ್ಲಬ್ಬಿನಲ್ಲಿ ಕುಳಿತು ಅವರು ಮಾತನಾಡುತ್ತಿದ್ದಂತೆಯೇ ನಾನು ಸುಮ್ಮನೆ ಕೇಳುತ್ತಾ ಹೋದೆ.

ವಿಠ್ಠಲಮೂರ್ತಿ,ನಿಮಗೆ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಿದ ಬಿ.ಡಿ.ಜತ್ತಿ ಹಾಗೂ ಎಸ್.ಆರ್.ಕಂಠಿ ಬಗ್ಗೆ ಗೊತ್ತು. ಆದರೆ ಅವರು ಆ ಜಾಗಕ್ಕೆ ಹೇಗೆ ಬಂದು ಕುಳಿತರು ಗೊತ್ತಾ?ಅವರು ಹಾಗೆ ಕೇಳುತ್ತಿದ್ದಂತೆಯೇ ನಾನು ಉತ್ಸಾಹದಿಂದ: ಇಲ್ಲ ಸಾರ್‌, ಜತ್ತಿ ಹಾಗೂ ಕಂಠಿಯವರ ರಾಜಕೀಯ ಬದುಕು ಯಾವತ್ತೋ ಮೌನ ಕಣಿವೆಗೆ ಜಾರಿ ಹೋದಂತಿದೆ. ಅದೊಂಥರಾ ರಾಜಕಾರಣದ ಮಿಸ್ಸಿಂಗ್‌ ಲಿಂಕು ಎಂದೆ.

ನಾಡಗೌಡರು ಸಣ್ಣಗೆ ನಕ್ಕು ಹೇಳುತ್ತಾ ಹೋದರು.

ವಿಠ್ಠಲಮೂರ್ತಿ,ಕಡಿದಾಳ್‌ ಮಂಜಪ್ಪನವರು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದಾಗ ಅವರ ಜಾಗವನ್ನು ತುಂಬಿದವರು ನಿಜಲಿಂಗಪ್ಪ1956ರಲ್ಲಿ ಅವರು ಮುಖ್ಯಮಂತ್ರಿಯಾಗುತ್ತಾರಲ್ಲ?ಅದರ ಮರುವರ್ಷವೇ ವಿಧಾನಸಭೆಗೆ ಚುನಾವಣೆಗೆಗಳು ನಡೆಯುತ್ತವೆ.

1957ರ ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ಅದೇ ನಿಜಲಿಂಗಪ್ಪನವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತದೆ. ಆದರೆ ಒಂದೇ ವರ್ಷದಲ್ಲಿ ಅವರ ವಿರುದ್ಧ ಸ್ವಪಕ್ಷದ ಕೆಲ ನಾಯಕರು ಬಂಡಾಯವೇಳುತ್ತಾರೆ. ಸಾಹುಕಾರ್‌ ಚನ್ನಯ್ಯ,ಮಾರಿ ಮರಿಯಪ್ಪ,ಸಿದ್ಧವೀರಪ್ಪ ಸೇರಿದಂತೆ ಹೀಗೆ ಹಲವರು.

ಆಗೆಲ್ಲ ಬಂಡಾಯವೆಂದರೆ ಹೋಟೆಲುಗಳಲ್ಲಿ ಪ್ರತ್ಯೇಕ ಸಭೆ ಮಾಡುವುದೋ?ಬಲ ಪ್ರದರ್ಶನ ಮಾಡುವುದೋ?ಅಲ್ಲ,ಬದಲಿಗೆ ದಿಲ್ಲಿಯ ನಾಯಕರ ಜತೆಗಿನ ಸಂಪರ್ಕವನ್ನು ಬಳಸಿಕೊಂಡು ದೂರು ಹೇಳುವುದು.

ಹೀಗೆ ನಿಜಲಿಂಗಪ್ಪ ಅವರ ವಿರುದ್ದ ಅಸಮಾಧಾನದ ಧ್ವನಿಗಳು ಮೊಳಕೆಯೊಡೆದಾಗ ಪ್ರಧಾನಿ ನೆಹರೂ ಅವರಿಗಿಂತ ಮುಖ್ಯವಾಗಿ ಅವರ ಪಕ್ಕದಲ್ಲೇ ಇದ್ದ ಮತ್ತೊಬ್ಬ ನಾಯಕರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.ಅವರ ಹೆಸರು-
ಮೊರಾರ್ಜಿ ದೇಸಾಯಿ.

ಅಂದ ಹಾಗೆ ಮೊರಾರ್ಜಿ ದೇಸಾಯಿ ಈ ರಾಷ್ಟ್ರ ಕಂಡ ಬಹುದೊಡ್ಡ ನಾಯಕ.ಅವರಿಗೆ ನೆಹರೂ ಅವರ ನಂತರ ಈ ದೇಶದ ಪ್ರಧಾನಿಯಾಗಬೇಕು ಎಂಬ ಬಯಕೆ ಇರುತ್ತದೆ.ಆದರೆ ಅಂತಹ ದೊಡ್ಡ ಜಾಗವನ್ನು ಬಯಸುವವರು ಎಲ್ಲ ಹಂತಗಳಲ್ಲಿ ತಮ್ಮ ಶಕ್ತಿಯನ್ನು ಬೆಳೆಸಿಕೊಳ್ಳಬೇಕಲ್ಲ?

ಹೀಗಾಗಿ ಮೈಸೂರು ರಾಜ್ಯದಲ್ಲಿ ನಿಜಲಿಂಗಪ್ಪ ಅವರ ವಿರುದ್ಧ ಅಸಮಾಧಾನದ ಧ್ವನಿಗಳು ಏಳುತ್ತಿದ್ದಂತೆಯೇ ಮೊರಾರ್ಜಿ ದೇಸಾಯಿ ಅವರು ಪರ್ಯಾಯ ನಾಯಕನ ಹುಡುಕಾಟದಲ್ಲಿ ತೊಡಗುತ್ತಾರೆ.ಇಂತಹ ಟೈಮಿನಲ್ಲಿ ಅವರ ಕಣ್ಣಿಗೆ ಬೀಳುವವರು ಬಿ.ಡಿ.ಜತ್ತಿ.

ನಿಜಲಿಂಗಪ್ಪ ಅವರ ಸಮುದಾಯದವರೇ ಆದ,ಆ ಕಾಲಕ್ಕೆ ಶಕ್ತಿಯುತ ನಾಯಕರಾಗಿ ಮೇಲೆದ್ದು ನಿಂತಿದ್ದ ಬಿ.ಡಿ.ಜತ್ತಿ ಇದೇ ಕಾರಣಕ್ಕಾಗಿ ಮೊರಾರ್ಜಿ ದೇಸಾಯಿ ಅವರಿಗೆ ಹತ್ತಿರವಾಗುತ್ತಾ ಹೋಗುತ್ತಾರೆ.

ಮುಂದೆ ನಿಜಲಿಂಗಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ಸನ್ನಿವೇಶ ಸೃಷ್ಟಿಯಾಗುತ್ತದೆ.ಪಕ್ಷದ ಹೈಕಮಾಂಡ್‌ ನಿಜಲಿಂಗಪ್ಪ ಅವರಿಗೆ ಪರ್ಯಾಯ ನಾಯಕನನ್ನು ಆಯ್ಕೆ ಮಾಡಲು ಮುಂದಾದಾಗ ಸಹಜವಾಗಿ ಮೊರಾರ್ಜಿ ದೇಸಾಯಿ ಅವರ ಬೆಂಬಲ ಪಡೆದಿದ್ದ ಬಿ.ಡಿ.ಜತ್ತಿ ಫ್ರಂಟ್‌ ಲೈನಿಗೆ ಬರುತ್ತಾರೆ.

ಆದರೆ ಅವರಿಗೆ ವಿರೋಧ ಇರುವುದಿಲ್ಲ ಅಂತಲ್ಲ. ಖುದ್ದು ನಿಜಲಿಂಗಪ್ಪ ಅವರ ಬೆಂಬಲ ಪಡೆದ ಟಿ.ಸುಬ್ರಮಣ್ಯಂ ಅವರ ಹೆಸರು ಜತ್ತಿ ಹೆಸರಿನ ಎದುರು ನಿಲ್ಲುತ್ತದೆ. ಫೈನಲಿ, ಈ ಪೈಪೋಟಿಯಲ್ಲಿ ಬಿ.ಡಿ.ಜತ್ತಿ ಗೆಲ್ಲುತ್ತಾರೆ.1958 ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ.

ಹೀಗೆ ತಮ್ಮ ಜಾಗಕ್ಕೆ ಬಂದು ಕುಳಿತ ಜತ್ತಿ ಅವರ ಬಗ್ಗೆ ನಿಜಲಿಂಗಪ್ಪ ಅವರ ಬಣಕ್ಕೆ ಅಸಮಾಧಾನ ಇದ್ದುದು ಸಹಜ.ಆದರೆ ಏಕಾಏಕಿ ಜತ್ತಿ ಅವರನ್ನು ದುರ್ಬಲಗೊಳಿಸಲು ಬಯಸದ ಈ ಬಣ ಒಳಗಿಂದೊಳಗೇ ತನ್ನ ಶಕ್ತಿ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ.

1962 ರ ವಿಧಾನಸಭೆ ಚುನಾವಣೆಗಳು ಎದುರಾಗುವ ಕಾಲಕ್ಕೆ ಪ್ರಧಾನಿ ನೆಹರೂ ಬೆಂಬಲಿತ ನಾಯಕ ನಿಜಲಿಂಗಪ್ಪ ಅವರ ಬಣ ದೊಡ್ಡ ಮಟ್ಟದಲ್ಲಿ ಮೇಲೆದ್ದು ನಿಂತಿರುತ್ತದೆ.
ಚುನಾವಣೆಗಳು ಮುಗಿದ ನಂತರ ಪಕ್ಷದ ಶಾಸಕಾಂಗ ನಾಯಕನ ಜಾಗಕ್ಕೆ ಸ್ಪರ್ಧೆ ನಡೆದರೆ ನೋ ಡೌಟ್‌, ನಿಜಲಿಂಗಪ್ಪ ಅವರು ಗೆಲ್ಲುವುದು ನಿಶ್ಚಿತವಾಗಿರುತ್ತದೆ. ಆದರೆ ಅಂತಹ ಸ್ಪರ್ಧೆ ನಡೆಯಲು ಬಿಟ್ಟರೆ ತಾನೇ?ಹಾಗಂತ ಎದುರಾಳಿ ಗುಂಪು ಹೊಸದುರ್ಗ ಕ್ಷೇತ್ರದಲ್ಲಿ ನಿಜಲಿಂಗಪ್ಪ ಅವರು ಸೋಲುವಂತೆ ನೋಡಿಕೊಳ್ಳುತ್ತದೆ.

ಅಲ್ಲಿಗೆ ಬಿ.ಡಿ.ಜತ್ತಿ ಪಾಳೆಯದ ಕೈ ಮೇಲಾಗುತ್ತದೆ.ನಿಜಲಿಂಗಪ್ಪ ಅವರು ಗೆದ್ದಿದ್ದರೆ ತಾನೇ ಶಾಸಕಾಂಗ ನಾಯಕರಾಗಿ ಆಯ್ಕೆಯಾಗುವ ಪ್ರಶ್ನೆ?ಇವತ್ತು ಅವೆಲ್ಲ ಮುಖ್ಯ ವಿಷಯಗಳಲ್ಲ ವಿಠ್ಠಲಮೂರ್ತಿ. ಆದರೆ ಅವತ್ತಿನ ದಿನಗಳಲ್ಲಿ ನೈತಿಕ ರಾಜಕಾರಣಕ್ಕೆ ಬಹುದೊಡ್ಡ ಶಕ್ತಿ ಇತ್ತು.

ಹೀಗಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರುವುದಾಗಿ ನಿಜಲಿಂಗಪ್ಪನವರು ಪಟ್ಟು ಹಿಡಿದಿದ್ದರೆ ಆಟ ಬೇರೆಯಾಗುತ್ತಿತ್ತು. ಆದರೆ ಸೋತವರು ಸಿಎಂ ಆಗುವುದು ಹೈಕಮಾಂಡ್‌ಗೂ ಇಷ್ಟವಿರಲಿಲ್ಲ. ಸೋತ ನಂತರವೂ ಅಲ್ಲಿ ಕೂರುವ ಇಚ್ಚೆ ನಿಜಲಿಂಗಪ್ಪ ಅವರಿಗೂ ಇರಲಿಲ್ಲ.

ನಿಜಲಿಂಗಪ್ಪ ಅವರೇನೋ ವೈಯಕ್ತಿಕವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಅವರ ಬೆನ್ನಿಗಿದ್ದವರ ಗತಿ? ಅವರು ಪಟ್ಟು ಬಿಡಲಿಲ್ಲ. ಹೀಗಾಗಿ: ಸಾರ್‌, ನೀವೇನೋ ಅಂತಹ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ನಿಮ್ಮನ್ನು ನಂಬಿದ ನಾವೆಲ್ಲ ಇದ್ದೇವಲ್ಲ?ನಾವೇನು ಮಾಡಬೇಕು?ಎಂದು ಪ್ರಶ್ನಿಸತೊಡಗಿದರು.

ಅಷ್ಟೇ ಅಲ್ಲ,ನಿಜಲಿಂಗಪ್ಪನವರು ಉಪಚುನಾವಣೆಯಲ್ಲಿ ಗೆದ್ದು ಬರುವ ತನಕವಾದರೂ ಮುಖ್ಯಮಂತ್ರಿ ಹುದ್ದೆಯ ಮೇಲೆ ನಮ್ಮ ಬಣದವರು ಕೂರಬೇಕು ಎಂದು ಪಟ್ಟು ಹಿಡಿದರು.

ಅಂದ ಹಾಗೆ ಆ ಹೊತ್ತಿಗಾಗಲೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹತ್ತಿರವಾಗುತ್ತಿತ್ತು. ಹೀಗಾಗಿ ನಿಜಲಿಂಗಪ್ಪ ಬಣದಲ್ಲಿ ಪರ್ಯಾಯ ನಾಯಕನ ಆಯ್ಕೆಗಾಗಿ ಹುಡುಕಾಟ ಶುರುವಾಯಿತು. ಈ ಹಂತದಲ್ಲಿ ಹೊಸ ನಾಯಕನ ಹುಡುಕಾಟಕ್ಕೆ ಬಲ ನೀಡಿದವರು ಹಿರಿಯ ನಾಯಕರಾದ ಎಂ.ಪಿ.ಪಾಟೀಲ್ ಹಾಗೂ ಪಿ.ಎಂ.ನಾಡಗೌಡರು.

ಎಂ.ಪಿ.ಪಾಟೀಲ್ ಇದ್ದಾರಲ್ಲ?ಅವರು ಬಾಂಬೆ ಪ್ರೆಸಿಡೆನ್ಸಿ ಸರ್ಕಾರದಲ್ಲೂ ಮಂತ್ರಿಯಾಗಿ, ನಂತರ ಮೈಸೂರು ರಾಜ್ಯದ ಮಂತ್ರಿಯೂ ಆಗಿದ್ದವರು.

ಇನ್ನು ಪಿ.ಎಂ.ನಾಡಗೌಡರಂತೂ ಹೇಳಿ,ಕೇಳಿ ನಿಜಲಿಂಗಪ್ಪ ಅವರ ಪರಮಾಪ್ತರು. ಹೀಗೆ ಇಬ್ಬರೂ ಸೇರಿ ಒಂದು ಹೆಸರನ್ನು ನಿಜಲಿಂಗಪ್ಪ ಅವರ ಮುಂದಿಟ್ಟರು. ಹೆಸರು ನೋಡಿದ್ದೇ ತಡ, ನಿಜಲಿಂಗಪ್ಪ ಯಸ್ ಎಂದರು.
ಅವರ ಹೆಸರು-
ಎಸ್.ಆರ್.ಕಂಠಿ.

ಹೀಗೆ ಎಸ್.ಆರ್.ಕಂಠಿ ಅವರು ಸಿಎಂ ಹುದ್ದೆಯ ಎತ್ತರಕ್ಕೆ ನಡೆದುಕೊಂಡು ಬಂದಾಗಿನ ಸನ್ನಿವೇಶವನ್ನು ನೀವು ಖುದ್ದು ಕಂಠಿಯವರ ಪುತ್ರ ಮಹೇಂದ್ರ ಕಂಠಿ ಅವರ ಮಾತಿನಲ್ಲಿ ಕೇಳಬೇಕು ವಿಠ್ಠಲಮೂರ್ತಿ ಎಂದರು ನಾಡಗೌಡ.

ಸರಿ ಸಾರ್‌ ಎನ್ನುತ್ತಿದ್ದಂತೆಯೇ ಅವರ ಫೋನ್‌ ನಂಬರು ತೆಗೆದುಕೊಂಡು ಸಂಪರ್ಕ ಸಾಧಿಸಿಯೇ ಬಿಟ್ಟರು. ಸರಿ,ಲೈನಿಗೆ ಬಂದ ಮಹೇಂದ್ರ ಕಂಠಿ ಮುಂದಿನ ಕತೆ ವಿವರಿಸತೊಡಗಿದರು.

ವಿಠ್ಠಲಮೂರ್ತಿ,೧೯೬೨ ರ ಚುನಾವಣೆಯಲ್ಲಿ ನಿಜಲಿಂಗಪ್ಪ ಅವರು ಸೋತರಲ್ಲ?ಅವರಿಗೆ ತಮ್ಮ ಸೋಲಿನ ಸಣ್ಣ ಸುಳಿವು ಇತ್ತೇನೋ ಅನ್ನಿಸುತ್ತದೆ. ಹೀಗಾಗಿ ಅವರು ಒಂದು ವೇಳೆ ತಾವು ಸಿಎಂ ಆಗಲು ಸಾಧ್ಯವಾಗದಿದ್ದರೆ ತಮ್ಮ ಆಪ್ತರಾದ ಹೆಚ್.ಕೆ.ವೀರಣ್ಣಗೌಡರನ್ನಾದರೂ ಸಿಎಂ ಮಾಡಬೇಕು ಎಂದು ಬಯಸಿದ್ದರು.

ಆದರೆ ಚುನಾವಣೆಯಲ್ಲಿ ಹೆಚ್.ಕೆ.ವೀರಣ್ಣಗೌಡರೂ ಸೋಲುಂಡಿದ್ದರು. ಹೀಗಾಗಿ ನಿಜಲಿಂಗಪ್ಪ ಅವರಿಗೆ ಯೋಚನೆ ಶುರುವಾಯಿತು. ಅಷ್ಟರಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕೂಡಾ ಶಾಸಕಾಂಗ ನಾಯಕನ ಆಯ್ಕೆಗೆ ಅಂತ ಅವತ್ತು ಕೇಂದ್ರ ಗೃಹ ಸಚಿವರಾಗಿದ್ದ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಅವರನ್ನು ರಾಜ್ಯಕ್ಕೆ ಕಳಿಸಿತು.

ವರಿಷ್ಟರ ಸೂಚನೆಯಂತೆ ರಾಜ್ಯಕ್ಕೆ ಬಂದ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಅವರು: ಈ ಹಂತದಲ್ಲಿ ಪಕ್ಷದ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ, ಮಾತುಕತೆ ನಡೆಸಿ ಶಾಸಕಾಂಗ ನಾಯಕ ಯಾರಾಗಬೇಕು?ಅಂತ ನಿರ್ಧರಿಸೋಣ ಎಂದರು.

ಆದರೆ ಶಾಸ್ತ್ರಿಯವರ ಮಾತಿಗೆ ನಿಜಲಿಂಗಪ್ಪ ಅವರು ಒಪ್ಪಲಿಲ್ಲ. ವೈಯಕ್ತಿಕವಾಗಿ ಶಾಸಕರ ಜತೆ ಮಾತನಾಡಿ ಯಾರು ನಾಯಕ ಆಗಬೇಕು ಎಂದು ನಿರ್ಧರಿಸುವುದು ಬೇಡ, ಬದಲಿಗೆ ಶಾಸಕಾಂಗ ಸಭೆಯಲ್ಲಿ ವೋಟಿಂಗ್‌ ಆಗಲಿ, ಗೆದ್ದವರು ನಾಯಕರಾಗಲಿ ಎಂದುಬಿಟ್ಟರು.

ಅದು ಡೆಮಾಕ್ರಟಿಕ್‌ ವೇ ಕೂಡಾ ಆಗಿತ್ತು. ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರೂ ಈ ಮಾತನ್ನು ಒಪ್ಪಿದರು. ಆ ಹಂತದಲ್ಲಿ ನಿಜಲಿಂಗಪ್ಪ ಅವರು ಮೂರು ಆದ್ಯತೆಗಳನ್ನು ಮುಂದಿಟ್ಟುಕೊಂಡು ಮುಂದಿನ ನಾಯಕನನ್ನು ಹುಡುಕಿದರು.

ಮೊದಲನೆಯದು, ಚುನಾವಣೆಯಲ್ಲಿ ಗೆದ್ದ ನಾಯಕ, ಎರಡನೆಯದು, ಪಕ್ಷದಲ್ಲಿ ಹಿರಿತನ ಇರುವ ನಾಯಕ, ಮೂರನೆಯದು, ತಮಗೆ ನಂಬಿಕಸ್ಥರಾದ ನಾಯಕ. ಈ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ಹೊರಟಾಗ ಅವರ ಕಣ್ಣಿಗೆ ಕಾಣಿಸಿದ ಏಕೈಕ ಹೆಸರು ಎಸ್.ಆರ್.ಕಂಠಿ.

ಸರಿ,ಅಲ್ಲಿಗೆ ಶಾಸಕಾಂಗ ನಾಯಕನ ಆಯ್ಕೆಗೆ ಜಿದ್ದಾಜಿದ್ದಿಯ ಪೈಪೋಟಿ ಶುರುವಾಯಿತು. ಬಿ.ಡಿ.ಜತ್ತಿಯವರಿಗೆ ಹಳೆ ಮೈಸೂರು ಭಾಗದ ಬಹುತೇಕ ಶಾಸಕರು ಬೆಂಬಲ ನೀಡಿದರೆ,ಹಳೆ ಮೈಸೂರಿನ ಕೆಲವರು ಸೇರಿದಂತೆ ರಾಜ್ಯದ ಬಹುತೇಕರು ಎಸ್.ಆರ್.ಕಂಠಿಯವರಿಗೆ ಬೆಂಬಲ ನೀಡಿದರು.

ನೇರವಾಗಿ ಹೇಳಬೇಕೆಂದರೆ ನಿಜಲಿಂಗಪ್ಪ ಅವರನ್ನು ಯಾರು ವಿರೋಧಿಸುತ್ತಿದ್ದರೋ?ಅವರು ಬಿ.ಡಿ.ಜತ್ತಿಯವರ ಪರ ನಿಂತರು.ಉಳಿದವರು ನಿಜಲಿಂಗಪ್ಪ ಅವರು ಬೆಂಬಲಿಸಿದ ಎಸ್.ಆರ್.ಕಂಠಿಯವರನ್ನು ಬೆಂಬಲಿಸಿದರು.

ಮತದಾನ ನಡೆದು ಫಲಿತಾಂಶ ಬಂದಾಗ ಬಿ.ಡಿ.ಜತ್ತಿಯವರಿಗೆ ಐವತ್ತೆರಡು ವೋಟುಗಳು ಬಂದಿದ್ದವು. ಎಸ್.ಆರ್.ಕಂಠಿಯವರಿಗೆ ನೂರೈವತ್ತಕ್ಕೂ ಹೆಚ್ಚು ವೋಟುಗಳು ಬಂದಿದ್ದವು. ಬಹುಶ: ಅದು ನೂರಾ ಐವತ್ನಾಲ್ಕು ಎಂದು ನೆನಪು.

ಹೀಗೆ ಪರ್ಯಾಯ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಕಂಠಿ ಮುಖ್ಯಮಂತ್ರಿಯಾದರು. ಮುಂದಿನ ಕೆಲ ಕಾಲದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿಜಲಿಂಗಪ್ಪ ಅವರು ಗೆದ್ದು ಬಂದ ಮೇಲೆ ಸಿಎಂ ಹುದ್ದೆಯಿಂದ ಕೆಳಗಿಳಿದು ಅವರು ಮೇಲೇರಲು ಅವಕಾಶ ಮಾಡಿಕೊಟ್ಟರು.

ಹಾಗಂತ ಹೇಳಿ ಮಹೇಂದ್ರ ಕಂಠಿ ಅವರು ಮೌನವಾದಾಗ ಮತ್ತೆ ನನ್ನ ಬಳಿ ತಿರುಗಿ ಮಾತನಾಡಿದ ಎಂ.ಪಿ.ನಾಡಗೌಡರು: ನಿಜಲಿಂಗಪ್ಪ ಅವರಿಗಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಕಂಠಿ ಅವರು ಮುಂದೆ ವಿಧಾನಸಭಾಧ್ಯಕ್ಷರಾದರು. ಇದು ಜತ್ತಿ,ಕಂಠಿ ಯುಗದ ಕತೆ ಎಂದರು.

ನಾನು ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದಂತೆಯೇ: ನಿಮ್ಮ ಪೊಲಿಟಿಕಲ್‌ ಮಿಸ್ಸಿಂಗ್‌ ಲಿಂಕು ಇದೇ ಅಲ್ಲವಾ ವಿಠ್ಠಲಮೂರ್ತಿ?ಎಂದರು. ನಾನು ನಗು ಬೀರಿ:ಹೌದು ಸಾರ್‌ ಎಂದೆ.

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: