ವಿಮರ್ಶೆಯ ಬೆರಳ ಹಿಡಿದು ಮುನ್ನಡೆದರೆ..

      ರಾಜು ಎಂ ಎಸ್

 ಇವತ್ತಿನ ‘ ಗ್ಲೋಬಲ್ ವಿಲೇಜ್ ‘ ಎತ್ತ ಸಾಗುತ್ತಿದೆ, ಇದರ ಹೆಜ್ಜೆ ಜಾಡುಗಳನ್ನು ಹಿಡಿಯಲಾದೀತೇ?

ಕೋವಿಡ್ ಪ್ಯಾಂಡೆಮಿಕ್ ಸಂದರ್ಭದಲ್ಲಿ ತಮ್ಮ ತಮ್ಮ ಹಳ್ಳಿಯ ಮನೆ ಸೇರಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಅನೇಕರು ಅಟ್ಲೀಸ್ಟ್  ಸ್ಮಾರ್ಟ್ ಫೋನ್ ಮತ್ತು ಡೇಟಾವನ್ನು ಅಫೋರ್ಡ್ ಮಾಡಲಾರದಷ್ಟು ಹಿಂದುಳಿದಿದ್ದಾರೆ. ಆನ್ ಲೈನ್ ಶಿಕ್ಷಣದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ, ನಡೆಯುತ್ತಲೇ ಇವೆ. ಎಷ್ಟು ಜನ ವಿದ್ಯಾರ್ಥಿಗಳು ಝೂಮ್ ಆ್ಯಪ್ ಮೇಲೆ, ಡಿಸ್ಪ್ಲೇ ಸ್ಕ್ರೀನ್ ಮೇಲೆ ಹೆಬ್ಬೆರಳನ್ನುಜ್ಜುತ್ತಾ ಏಕಲವ್ಯರಾಗಲು ಸತತವಾಗಿ ಶ್ರಮಪಡುತ್ತಿದ್ದಾರೋ….

ಏಕಲವ್ಯ ಸಂತತಿ ರಸಬಳ್ಳಿಯಾಗಿ, ಅಂತರ್ಜಾಲ ಬಳಸಿ ಹಬ್ಬಲಿ. ಭಾರತದ ನೆಲದಲ್ಲಿ  ಫೆನಾಮಿನಲ್  ಆದ ಏಕಲವ್ಯನ ವ್ಯಕ್ತಿತ್ವವನ್ನು ಸಾಹಿತ್ಯಿಕವಾಗಿ ಕಟ್ಟಿಕೊಡಲು ಹೊಸ ಪರಿಭಾಷೆ, ಪರಿಕಲ್ಪನೆಗಳೇ ಬೇಕಾಗಬಹುದೇನೋ ಎನ್ನುವಂತಹ ಸಣ್ಣ  ಆಲೋಚನೆಯನ್ನು ಮುಂದಿಡುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಇಂದಿನವರೆಗೂ ಸಾಹಿತಿಗಳನೇಕರು ಏಕಲವ್ಯನನ್ನು ರೂಪಕ ಸಾಮಗ್ರಿಯಾಗಿಸಿ ಕನ್ನಡದಲ್ಲಿ ಒಂದು ಹದಿನೈದಿಪ್ಪತ್ತು ನಾಟಕಗಳನ್ನು ಬರೆದಿದ್ದಾರೆ.

 ‘ ಬೆರಳ್ಗೆ ಕೊರಳ್ ‘ – ಕುವೆಂಪು ;  ‘ಹೆಬ್ಬೆರಳು ‘ – ಗೋವಿಂದ ಪೈ ;  ‘ಏಕಲವ್ಯ ‘ – ಸಿದ್ದಲಿಂಗಯ್ಯ ; ‘ ಪರ್ಪಸ್ ‘ – ಟಿ.. ಪಿ. ಕೈಲಾಸಂ;   ‘ ಏಕಲವ್ಯ ಉವಾಚ ‘ – ಕೋಟಗಾನಹಳ್ಳಿ ರಾಮಯ್ಯ ರ ಆದಿಮ ತಂಡ ( ಮೂಲ: ಕುಲದೀಪ್ ಕುನಾಲ್ ); ‘  ಎಚ್ಚೆತ್ತ ಏಕಲವ್ಯ ‘ – ಮೇಘಮಿತ್ರ ;  ‘ ದಾರುಣ ಭಾರತ’ – ಹರಿಹರಪ್ರಿಯ; ‘ ಏಕಲವ್ಯ ‘  – ಕಾಶಿ ವಿಶ್ವನಾಥಶೆಟ್ಟಿ …

ಅಂಬೇಡ್ಕರ್ ವಿಚಾರಧಾರೆಯಿಂದ , ಮಾರ್ಕ್ಸ್ ವಾದದ ಚಿಂತನೆಗಳಿಂದ ಮತ್ತು ಲೋಹಿಯಾವಾದದಿಂದ ಪ್ರಭಾವಿತರಾದ ಸಿದ್ದಲಿಂಗಯ್ಯನವರು ಜಾತಿ, ವರ್ಗಗಳ ಅರ್ಥಪೂರ್ಣ ಹಿನ್ನೆಲೆಯಲ್ಲಿ ಏಕಲವ್ಯ ಪಾತ್ರದ ವ್ಯಾಖ್ಯಾನ ಮಾಡಿದ್ದಾರೆ.

ಮೊದಲ ದೃಶ್ಯದಲ್ಲೇ , ನಗರವು ಹೇಗೆ ಗ್ರಾಮ, ಪ್ರಕೃತಿ, ದೇಶೀಯತೆಯನ್ನು ನುಂಗಿಹಾಕುತ್ತದೆಂಬುದನ್ನು — ಮರಕಡಿಯುವವರೊಡನೆ ಬೇಡರ ಸಂಘರ್ಷವು ತಿಳಿಸುತ್ತದೆ. ಅದನ್ನು ದೃಶ್ಯಗಳಲ್ಲಿ, ಜಾತಿ-ಧರ್ಮದ ಹುಳುಕುಗಳನ್ನು;  ಅದನ್ನು ನಿರ್ವಹಿಸುವ ವ್ಯಕ್ತಿಗಳನ್ನು; ಶಾಸ್ತ್ರ-ಕಾನೂನನ್ನು ನುಡಿವ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಣಬಹುದು. ಬಿಲ್ವಿದ್ಯೆಯನ್ನು ತಮ್ಮ ಕುಲ ಪ್ರತಿಷ್ಠೆಗೆ, ರಾಜ್ಯ-ವೈಷಮ್ಯಗಳಿಗೆ ಬಳಸಿಕೊಳ್ಳಲು ಹವಣಿಸುವ, ಸೃಷ್ಟಿ ವಿನಾಶಕ ಹರಿವಿನೆಡೆಗೆ ಎಳೆಯುವ ಸಂಗತಿಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.

ಇಷ್ಟೆಲ್ಲಾ ಸಂದಿಗ್ಧತೆಗಳು ತಾರಕಕ್ಕೇರುವುದು, ಏಕಲವ್ಯನು ಕೊನೆಯ ದೃಶ್ಯದಲ್ಲಿ ” ನನ್ನದು, ಇಲ್ಲದವರ ಪರವಾದ ಹೋರಾಟ”, ಎನ್ನುವಾಗ. ವಿದ್ಯೆಯನ್ನು ಇಲ್ಲದವರ ಪರವಾಗಿ, ಅವರ ಏಳಿಗೆಗಾಗಿ ಬಳಸಬೇಕು — ದೇಶೀಯತೆಯನ್ನು ಬೆಳೆಸಲು;  ಪ್ರಕೃತಿಯನ್ನು ನಗರದ ಹೊಲಸು ಕೃತ್ರಿಮತೆಯಿಂದ ಬಚಾವು ಮಾಡಲು. ನಾಟಕ ಓದಿದ/ವೀಕ್ಷಿಸಿದ ಪ್ರತಿಯೊಬ್ಬನಿಗೂ,” ಕಲಿಯಲು, ಆಸೆಯೇ ಮೂಲ, ಹುಟ್ಟಲ್ಲ ಅಣ್ಣಂದಿರೆ!” ಎಂಬುದು ಅರ್ಥವಾಗುತ್ತದೆ.

ಸೂತಪುತ್ರ ಕರ್ಣ ಹಾಗೂ ನಿಷಾದ ಏಕಲವ್ಯನನ್ನು, ಸಿದ್ದಲಿಂಗಯ್ಯ ತಮ್ಮ ನಾಟಕದಲ್ಲಿ ಮುಖಾಮುಖಿಯಾಗಿಸುತ್ತಾರೆ.  ” ಏಕಲವ್ಯ, ನೀನು ದುರ್ಯೋಧನನ ಕಡೆಗೆ ಬಾ. ಅವನು ಪಾಂಡವರಂತಲ್ಲ .”  ಎಂದು ಕರ್ಣ ಆಹ್ವಾನಿಸಿದಾಗ, ಏಕಲವ್ಯ ಕರ್ಣನಿಗೆ ” ನೀನೀಗ ಅಂಗಾಧಿಪತಿ. ದುರ್ಯೋಧನ ನಿನ್ನನ್ನು ಒಪ್ಪಿಕೊಂಡಿದ್ದಾನೆ. ಆದರೆ ಸೂತಕುಲವನ್ನಲ್ಲ. ಕುರುಕ್ಷೇತ್ರ ಉಳ್ಳವರ ನಡುವಿನ ಕಚ್ಚಾಟ”, ಎಂದು ಹೊಸ ಅರ್ಥ ಕಾಣಿಸುತ್ತಾನೆ.

ಕರ್ಣನು ತನ್ನಂತಹ ಸೂತಕುಲದವರನ್ನು ಮೇಲೆತ್ತಲಾರದವನು. ಏಕಲವ್ಯನು ವಿದ್ಯೆ ಕಲಿತು ತನ್ನವರನ್ನು ಕಾಪಾಡಲು ಬದ್ಧನಾದವನು.

ವಿದ್ಯೆ ಎಂಬುದು ಸಮುದಾಯ ಮತ್ತು ಕಾಡಿನ ರಕ್ಷಣೆಗೆ ಎಂದು ನಂಬಿದವನು ಏಕಲವ್ಯ. ಮೇಲ್ವರ್ಗದವರ, ಉಳ್ಳವರ ಆಡಳಿತ ಮತ್ತು ಅಧಿಕಾರದಾಹಕ್ಕೆ ಹಾಗೂ ಹಿತಾಸಕ್ತಿಗೆ ನಾನು  ದಾಳವಾಗಲಾರೆ ಎಂಬುದನ್ನು ಏಕಲವ್ಯನ ಬಾಯಲ್ಲಿ ಹೇಳಿಸಿದ್ದಾರೆ ಸಿದ್ದಲಿಂಗಯ್ಯನವರು.

ಹರಿಹರಪ್ರಿಯ, ತಮ್ಮ ‘ ದಾರುಣ ಭಾರತ ‘ ದಲ್ಲಿ ರಾಜಶಾಹಿಯ ಕಪಿಮುಷ್ಟಿಯನ್ನು — ದ್ರೋಣನ ಅಸಹಾಯಕತೆಯನ್ನು, ಮನೋಜ್ಞವಾಗಿ ತಂದಿದ್ದಾರೆ. ಏಕಲವ್ಯ ಮತ್ತು ಪ್ರಭುತ್ವದ ವಿರುದ್ಧದ ಸಂಘರ್ಷವನ್ನು ಹಳ್ಳಿ-ಪಟ್ಟಣ ; ನಾಡು-ಕಾಡು ಮಧ್ಯದ ಹೋರಾಟವಾಗಿಸಿದ್ದಾರೆ.

ಕುನಾಲ್ ರವರ ಏಕಲವ್ಯ  ಧಿಡೀರನೆ ಪ್ರಶ್ನಿಸುತ್ತಾನೆ: ”  ನಾನು ಸ್ವಸಾಮರ್ಥ್ಯದಿಂದ ಬಿಲ್ವಿದ್ಯೆ ಕಲಿತಿದ್ದೇನೆ. ನನ್ನ ನೈಪುಣ್ಯತೆಗೆ ಪರಿಶ್ರಮವೇ ಕಾರಣ. ಜ್ಞಾನಾರ್ಜನೆಗೆ ಜಾತಿ-ಕುಲ, ಅಂತಸ್ತು ಅಡ್ಡಿಯಾಗಬೇಕಿಲ್ಲ. ಹಾಗಾಗಿ ನಾನೇಕೆ ಬೆರಳು ಕತ್ತರಿಸಿ ಕೊಡಬೇಕು? “

ದಲಿತ ಬಂಡಾಯ ಸಂವೇದನೆಯ, ಸಿದ್ದಲಿಂಗಯ್ಯನವರ ‘ ಏಕಲವ್ಯ ‘, ಪೋಸ್ಟ್-ಕೋವಿಡ್ ದಿನಗಳಲ್ಲೂ ಪ್ರಸ್ತುತ. ನಗರ-ಗ್ರಾಮ ಸಂಸ್ಕೃತಿಗಳ ನಡುವಿನ ತಿಕ್ಕಾಟ; ಆಧುನಿಕತೆ ಮತ್ತು ಜಾತಿ ಸಂಘರ್ಷಗಳಲ್ಲಿನ ವೈರುಧ್ಯಗಳು; ಜಾತಿ, ಕುಲದ ಹಂಗಿಲ್ಲದೇ ಕಲಿಕೆ ಎಲ್ಲರ ಹಕ್ಕು ಆಗಬೇಕೆನ್ನುವ ಧೋರಣೆಗಳು, ಇವೇ ನಾಟಕದ ತುಂಬಾ ಎದ್ದು ಕಾಣುವ ವಿಚಾರಗಳು.

ಇಂದಿನ ಸಮಕಾಲೀನ ಶೈಕ್ಷಣಿಕ ವಿದ್ಯಮಾನಗಳು; (ತಾಂತ್ರಿಕ&ಮಾನವಿಕ)ಉನ್ನತ ಶಿಕ್ಷಣವು ಕೇವಲ ಉಳ್ಳವರ ಸ್ವತ್ತಾಗುತ್ತಿರುವ ಅಪಾಯ; ಜ್ಞಾನದ ಗುತ್ತಿಗೆ ಹಿಡಿಯುತ್ತಿರುವ ಏಕಸ್ವಾಮಿತ್ವಗಳು; ಹೀಗೆ ಸ್ಥಳೀಯ ಸಂಕಷ್ಟಗಳ ಜೊತೆಗೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಪ್ರಶ್ನೆಗಳನ್ನೂ ನಾಟಕ, ನೋಡುಗರ/ಓದುಗರ  ಮನಸ್ಸಿನಲ್ಲಿ ಇಳಿಸುವಲ್ಲಿ ನಾಟಕ ಯಶಸ್ವಿಯಾಗುತ್ತದೆ. ಪ್ರಸ್ತುತ, ನಾವಿನ್ನೂ ೪ ಜಿ ಯುಗದ ಸ್ಲಗ್ಗಿಷ್ ಸ್ನೈಲ್ ಆಗಿದ್ದೇವೆ.

ಚೀನಾ ದೇಶವು ೫ ಜಿ ಹಾಗೂ ಅದಕ್ಕೂ ಮುಂದೆ ಕ್ರಮಿಸಿದೆ. ನಮಗಿರುವ ತುರ್ತು ಅಂದರೆ,— ʻ ಮಷಿನ್&ಮಾನವ ʼ ಐಕ್ಯ ಸಾಧನೆಗೆ ಬೇಕಿರುವ,  ʻ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ʼ  ಮತ್ತು ಮನುಷ್ಯನ ʻ ಸೈಬರ್-ಫಿಸಿಕಲ್ ಕಾಗ್ನಿಟಿವ್ ಮಾಡೆಲ್ ʼ ಗಳೆರಡನ್ನೂ ಇಂಟಿಗ್ರೇಟ್ ಮಾಡಬೇಕಾಗಿದೆ.  ಭವಿಷ್ಯದ ನಮ್ಮ ಏಕಲವ್ಯ, ʻ ರಿಯಲ್ ಟೈಮ್ ಸೈಬರ್ ಡಿಫೆನ್ಸ್ ಕೆಪೆಬಿಲಿಟೀಸ್ ʼ ಗಳನ್ನು ಅಳವಡಿಸಿಕೊಂಡಿರಬೇಕಾದ ಒಬ್ಬ  ಯೋಧ ಆಗಿ ತಯಾರಾಗಿರಬೇಕು ಎನ್ನುವುದು ಸದ್ಯದ ತುರ್ತು.

ಜಪಾನ್ ಮತ್ತು ಆಸ್ಟ್ರೇಲಿಯಾಗಳು ಈಗಾಗಲೇ ಈ ನಿಟ್ಟಿನಲ್ಲಿ ಮುನ್ನುಗ್ಗುತ್ತಿವೆ. ʻ ದಿ ಇಂಟರ್ನೆಟ್ ಆಫ್ ಬ್ಯಾಟಲ್ ಫೀಲ್ಡ್ ಥಿಂಗ್ ʼ   ಎನ್ನುವುದು ನಮ್ಮ ಸುತ್ತಮುತ್ತಲೆಲ್ಲಾ ಆವರಿಸಿದೆ. ಸೈಬರ್ ವಾರ್ ಫೇರ್ ಆಕ್ಟಿವಿಟಿಗಳು ಜರುಗುತ್ತಿವೆ ಈಗ. ಚೀನಾದ ಮಿಲಿಟರಿಯೇ ಹೊರಡಿಸಿದ ಪದಪುಂಜವೊಂದು ಇಂದು ಪ್ರಚಲಿತದಲ್ಲಿದೆ: “ ಸಿಸ್ಟಮ್ಸ್ ವಾರ್ ಫೇರ್”  !  ಈ ನಿಟ್ಟಿನಲ್ಲಿ ನೋಡಿದಾಗ, ಈ ಎಲ್ಲಾ ನಾಟಕಗಳು ನಮಗೆಲ್ಲ ಇನ್ಸ್ಪಿರೇಶನ್ ಆಗಬೇಕು. ಜಾತಿ, ಧರ್ಮಗಳೆನ್ನುವ ವರ್ಗ ಸಂಘರ್ಷಗಳೊಡನೆಯೇ, ಈ ʻ ಡಿಜಿಟಲ್-ವರ್ಗ ತಾರತಮ್ಯʼ ದ ಶೋಷಣೆಯ ವಿರುದ್ಧವೂ ನಮ್ಮ ಏಕಲವ್ಯರುಗಳು ಹೋರಾಡಬೇಕಿದೆ.

ದ್ರೋಣ ಪ್ರತಿಮೆಯ ಮೂಲಕ ಬಿಲ್ಲುವಿದ್ಯೆಯನ್ನು ಸಂಪಾದಿಸಿದ ಏಕಲವ್ಯನ ಬಲಗೈ ಹೆಬ್ಬೆರಳನ್ನು ದ್ರೋಣ, ವ್ಯವಸ್ಥೆಯ ಕುತಂತ್ರದ ಸಂಕೇತವೆಂಬಂತೆ ಗುರುದಕ್ಷಿಣೆಯಾಗಿ ಪಡೆಯುತ್ತಾನೆ. ಮತ್ತೆ ಇವತ್ತಿನ ಆನ್ಲೈನ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮುಂದೆ ಏನು ಕಾದಿದೆ?!

“  ಮತ್ತೆ ಮತ್ತೆ ಬರುತ್ತಾರೆ ಆಚಾರ್ಯ ದ್ರೋಣರು

ನಿಶ್ಯಬ್ಧದಲ್ಲಿ ಕೂತ ಏಕಲವ್ಯನ ಬಳಿಗೆ,

ಆಮೇಲೇನಾಗುತ್ತದೆ?

ನಿನಗೆ ಗೊತ್ತೇ ಇದೆ

ಈ ಚರಿತ್ರೆಯ ಚಕ್ರಗತಿಯೊಳಗೆ”

( ಜಿ ಎಸ್ ಶಿವರುದ್ರಪ್ಪ : ‘ ಚಕ್ರಗತಿ’ )

*************

‍ಲೇಖಕರು Avadhi

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Lata Ramesh Wali

    ಎಷ್ಟು ಅದ್ಭುತವಾಗಿ ಬರೆದಿದ್ದೀರಿ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಏಕಲವ್ಯರೇ.ಆದರೆ ಇಂದಿನ ತಂತ್ರಜ್ಞಾನ ಅರ್ಥೈಸಿಕೊಳ್ಳುವಲ್ಲಿ ಏಕಲವ್ಯನನ್ನು ಉದಾಹರಣೆಯಾಗಿಟ್ಟುಕೊಂಡು ಬರೆದದ್ದು ಇಷ್ಟವಾಯಿತು. ಅಭಿನಂದನೆಗಳು ಸರ್.

    ಪ್ರತಿಕ್ರಿಯೆ
  2. ಪ್ರದೀಪ ಬಳ್ಳಾರಿ

    ಈ ಲೇಖನ ತುಂಬಾ ಚನ್ನಾಗಿ ಮೂಡಿ ಬಂದಿದೆ. ಇಂದಿನ ಭಾರತಕ್ಕೆ ಏಕಲವ್ಯ ರ ಅವಶೈಕತೆ ಇದೆ. ದ್ರೋಣರ ಸಂತತಿ ಕೊನೆಗಾಣಬೇಕಿದೆ ಎಂಬ ಸಾರಾಂಶ ಹೊತ್ತ ಈ ಬರಹಕ್ಕೆ ಅಭಿನಂದನೆಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: