ಪಂಚರ್ ಷಾಪ್

ಆರ್.‌ ಪವನ್‌ ಕುಮಾರ

ವಿಸ್ತಾರವಾದ ಬಯಲಿನ ಹಿಗ್ಗು, ತಗ್ಗುಗಳ ನಡುವೆ ಅಲ್ಲಲ್ಲಿ ನಿಂತ ಬೃಹದಕಾರದ ವಿದ್ಯುತ್ ಸ್ಥಾವರಗಳ ಏಕಚಿತ್ತದಿಂದ ನೋಡುತ್ತಿದ್ದ ಬಾಬು. ಅವುಗಳ ಗಾತ್ರ, ಆಕಾರವೇ ವಿಶೇಷವಾಗಿತ್ತು. ಕಾಲುಗಳ ನೆಲಕ್ಕೆ ಊರಿದಂತೆ, ಕೈಗಳ ಚಾಚಿ ಮುಂಗೈ ಬಳಿ ಬಗ್ಗಿಸಿದಂತೆ, ತ್ರಿಕೋನಾಕರದ ತಲೆ ಹೊತ್ತು ನಿಂತ ಈ ವಿದ್ಯುತ್ ಕಂಬಗಳ ಕುತ್ತಿಗೆಗೆ ವೈರ್ ಗಳನ್ನು ಬಿಗಿದು ಮತ್ತೊಂದಕ್ಕೆ ಆಧಾರ ಕೊಟ್ಟಿದ್ದೂ.

ದೃಷ್ಟಿ ಸಾಧ್ಯವಾಗುವ ತನಕ ಕಣ್ಣು ಹರಿಸಿದರೆ ಇಂಥವೆ ಕಂಬಗಳು ಗೋಚರವಾಗುತ್ತಿದ್ದವು. ಬಾಬುವಿಗೆ ಸಣ್ಣ, ಸಣ್ಣ ಕಬ್ಬಿಣದ ತುಂಡುಗಳ ಒಟ್ಟುಗೊಡಿಸಿದಂತೆ ಮಾಡಿರುವ ಈ ವಿದ್ಯುತ್ ಆಕೃತಿಗಳ ನೋಡುವುದೆಂದರೆ ಏನೋ ಖುಷಿ. ಇವು ಅವನ ಕಣ್ಣಿಗೆ ವಾಮನಾಕರದಿಂದ ಬೆಳದು ನಿಂತು ನೆಲ, ಮುಗಿಲುಗಳ ಅಳೆಯುವಂತೆ ಕಾಣುತ್ತಿದ್ದವು.

ಈ ವಿದ್ಯುತ್ ಸ್ಥಾವರಗಳಲ್ಲಿ ಬಾಬುವಿಗೆ ಒಂದು ಮನುಷ್ಯ ರೂಪ ಕಾಣುತ್ತಿತ್ತು. ಅದು ಅವನ ಕಲ್ಪನೆಯ ವಿಶಾಲ ಕೋನವನ್ನು ತೋರಿಸುತ್ತ ಬಯಲಿಗೆ ಅಂಟಿಕೊಂಡ ಇವುಗಳ ಸ್ಥಿತಿಗೆ ಬೇಸರವೆನಿಸಿತ್ತು. ಈ ಸ್ಥಾವರಗಳು ಈ ಬಯಲಿನ ತುಂಬಾ ಅಡ್ಡಾಡುವಷ್ಟು ಸಶಕ್ತವಾಗಿವೆ ಎಂಬುದು ಬಾಬುವಿನ ನಂಬಿಕೆ. ಹಗ್ಗದ ಗಾತ್ರದಲ್ಲಿ ಎಳೆದ ವೈರಗಳಲ್ಲಿ ಕೀಲೋವ್ಯಾಟ್‍ನಷ್ಟು ವಿದ್ಯುತ್ ಪ್ರವಾಹಿಸುತ್ತ ಮುಂದಿನ ಊರುಗಳ ತಲುಪುವುದು ಎನ್ನುವ ವಾಸ್ತವ ಅವನಿಗೆ ಅಚ್ಚರಿಯಾಗಿತ್ತು.

ಇಲ್ಲಿಂದ ಸುಮಾರು ಕೀಲೋಮೀಟರ್‍ ಗಳ ದೂರದಲ್ಲಿರುವ ದೊಡ್ಡ ವಿದ್ಯುತ್ ಉತ್ಪಾದಕ ಘಟಕದಿಂದ ಇತರೆಡೆಗಳಿಗೆ ವಿದ್ಯುತ್ ಸಾಗಿಸಲು ಅನುಕೂಲವಾಗುವಂತೆ ಮಾಡಿಕೊಂಡ ಈ ಗಾತ್ರದ ಪವರ್ ಟವರ್‍ ಗಳು ಸಾಮಾನ್ಯವಾಗಿದ್ದವು. ಈ ಬಯಲನ್ನೆ ಅಂಕುಡೊಂಕಾಗಿ ಸೀಳಿಕೊಂಡ ಕಪ್ಪು ಬಣ್ಣದ ರಸ್ತೆಯು ಅಷ್ಟೇ ಬಾಬುವಿನ ಕಣ್ಣಿಗೆ ಚಾಚಿಕೊಂಡ ರಾಕ್ಷಸನ ನಾಲಿಗೆಯಂಥೆ ಕಾಣುತ್ತ ಅದರ ಮೇಲೆ ಓಡಾಡುವ ವಾಹನಗಳು ರಾಕ್ಷಸನ ಹೊಟ್ಟೆ ತುಂಬಿಸಲು ಬರುವ ಆಹಾರ ಸಾಮಾಗ್ರಿಗಳೆಂದು ಭಾವಿಸಿದ್ದ.

ಎಷ್ಟು ತಿಂದರು ಜೀರ್ಣಿಸಿಕೊಂಡು ನಾಲಿಗೆ ಚಾಚಿ ಕುಳಿತ ಈ ರಾಕ್ಷಸನ ಹಸಿವು ಇನ್ನೂ ನೀಗಿಲ್ಲವೆಂಬುದು ಅವನ ಅನಿಸಿಕೆ. ಇನ್ನೂ ನಿಂತ ಈ ಗಾತ್ರದ ವಿದ್ಯುತ್ ಸ್ಥಾವರಗಳು ರಾಕ್ಷಸನ ಉಪಉತ್ಪನ್ನವಾಗಿದ್ದು, ಅವನ ಕಾವಲಿಗೆ ನಿಂತು ಪಹರೆ ನಡೆಸುವ ಕಾರ್ಯ ಮಾಡುತ್ತಿವೆ ಎಂದುಕೊಂಡ.

ಹೀಗೆ ಬಾಬು ತನ್ನ ಮನಸ್ಸಿಗೆ ಬಂದಿದ್ದೆಲ್ಲವನ್ನೂ ಓತಪ್ರೋತವಾಗಿ ಹರಿ ಬಿಡುತ್ತ ಕುಳಿತಿದ್ದ. ಇದರಿಂದ ಸಮಯದ ಜತೆಗೆ ಅವನ ದೇಹ ಮತ್ತು ಮನಸ್ಸಿಗೆ ಆದ ನೋವು ಕೊಂಚ ಕಡಿಮೆಯಾಗುತ್ತಿತ್ತು. ತನ್ನ ಈ ಕಲ್ಪನಾಶಕ್ತಿಯೊಂದೇ ತನ್ನೆಲ್ಲ ದುಖಃ, ದುಗುಡಗಳ ಕಳೆದು ಜೀವ ಚೈತನ್ಯ ತುಂಬಬಹುದೆಂಬ ಆಗಾಧ ನಂಬಿಕೆ ಅವನಿಗೆ. ಆ ಕಾರಣವಾಗೆ ಈ ವಿಶಾಲ ಬಯಲಿನೊಂದು ಮೂಲೆಗೆ ಪುಟ್ಟ ಬಿಂದುವಿನಂತೆ ಕುಳಿತವನು ಚಾಚಿಕೊಂಡ ರಸ್ತೆ, ನಿಂತ ವಿದ್ಯುತ್ ಸ್ಥಾವರಗಳನ್ನು ಮನ ಬಂದಂತೆ ಕಲ್ಪಿಸಿಕೊಂಡು ಅನ್ವೇಷಣೆ ನಡೆಸುತ್ತಿದ್ದ.

ಏಟು ಸ್ವಲ್ಪ ಬಲವಾಗೆ ಬಿದ್ದರಬೇಕು ಅದಕ್ಕೆ ನೋವಿನ್ನೂ ಶಮನಗೊಳ್ಳದೆ ಬಾಬುವನ್ನು ಬಾಧಿಸುತ್ತಿತ್ತು. ಭುಜವನ್ನೂ ಅತ್ತಿತ್ತ ಹೊರಳಿಸುವಂತಿರಲಿಲ್ಲ. ನೋವಿಗೆ ಚೀರಿಕೊಳ್ಳಬೇಕೆನಿಸುತ್ತಿತ್ತು. ಮನುಷ್ಯತ್ವವನ್ನೆ ಮರೆತವನಂತೆ ಅವನ ಪಂಚರ್ ಷಾಪಿನ ಮಾಲೀಕ ನಬೀ ಕೈಗೆ ಸಿಕ್ಕ ರಿಂಚ್‍ನಲ್ಲೆ ಬಾಬುವಿಗೆ ಬಾರಿಸಿ ಕಳುಹಿಸಿದ್ದ.

ಈ ಏಟು, ನೋವು, ಬೈಗುಳ, ಅವಮಾನಗಳು ಬಾಬುವಿನ ಬದುಕಿನಲ್ಲಿ ಹೊಸದಾಗಿರಲ್ಲಿಲ್ಲ. ಹೈವೇ ರಸ್ತೆಯ ಬದಿಗೆ ಯಾವುದೋ ಶವದ ಪೆಟ್ಟಿಗೆಯಂಥೆ ಬಿದ್ದ ಈ ಪಂಚರ್ ಷಾಪಿನ ಅಂಗಡಿಗೆ ಕೆಲಸಕ್ಕೆಂದು ಸೇರಿದಾಗಿನಿಂದ ಇದು ಸಾಮಾನ್ಯವಾಗಿತ್ತು. ಮೂರು ಭಾಗಕ್ಕೂ ಕೂಡಿಸಿದ್ದ ಸವೆದ ತಲಾ ಒಂದು ಅಡಿ ಅಗಲದ ನಾಲ್ಕು ಹಲಗೆಗಳು, ಅವುಗಳ ನೆತ್ತಿ ಮೇಲೆ ಒಗೆದ ತಗಡೀನ ಶೀಟು, ಬಾಗಿಲೆಂಬುದಕ್ಕೆ ಒಂದು ಚಿಲಕ ಸೇರಿ ಅದೊಂದು ಪೆಟ್ಟಿ ಅಂಗಡಿ ಎನಿಸಿಕೊಳ್ಳುವಷ್ಟು ಯೋಗ್ಯವಾಗಿತ್ತು.

ಹೊರಗಡೆಗೆ ಒಣಗಿದ ತೆಂಗಿನ ಗರಿ ಬಿದ್ದ ಮುರಕಲು ಚಪ್ಪರ ಎಷ್ಟೋ ವರ್ಷಗಳಿಂದ ನಿಂತು ಸಾಕಾದಂತೆ ಸೊಂಟ ಮುರಿದುಕೊಂಡು ಬಾಗಿತ್ತು. ಅದರ ಎಡ, ಬಲಗಳಲ್ಲಿ ಭಾರೀ ಗಾತ್ರದ ಟೈರ್‍ ಗಳು ತಮ್ಮ ಆಕಾರಕ್ಕೆ ಅನುಸಾರವಾಗಿ ಒಂದರ ಮೇಲೊಂದು ಕುಳಿತು ವಿಜೃಂಭಿಸುತ್ತಿದ್ದವು. ದೊಡ್ಡ ಬಕೆಟ್‍ನ ತುಂಬಾ ಕೊಳಕು ನೀರು ಬಳಕೆಗೆ ಸೂಕ್ತವಲ್ಲದೆ ಹೋದರು ಬಳಕೆಗೆ ಕಾಯುತ್ತಿತ್ತು.

ಸೈಕಲ್ ಟೈರ್‍ ನಿಂದ ಆರಂಭವಾಗಿ ಟ್ರಕ್ಕ ಟೈರ್‍ ತನಕ ಒಂದೊಂದು ಚಿತ್ರ, ವಿಚಿತ್ರ ಟೈರ್‍ ಗಳು ಕಿತ್ತು, ಹರಿದು, ಸವೆದು, ಬಿಸಿಲು, ಮಳೆಗೆ ಒಣಗುತ್ತ ಬಿದ್ದಿದ್ದವು. ಇವುಗಳು ಈ ಪಂಚರ್ ಷಾಪಿಗೆ ತಿಲಕವಿಟ್ಟು ಶೋಭಿಸುವಂತಿದ್ದ ಕಾರಣ ಇವುಗಳ ರಾಶಿ ಏರುತ್ತಿತ್ತೆ ಹೊರತು ಇಳಿದ ಉದಾಹರಣೆಯಿಲ್ಲ. 5 ಅಡಿ ಮುಂದೆ ನಡೆದರೆ ಸ್ವಚ್ಛಂದವಾದ ಕಪ್ಪು ಬಣ್ಣದ ರಸ್ತೆ.

ಅದರ ಮೇಲೆ ಬಿಡುವಿರದಂತೆ ಅತ್ತಿಂದಿತ್ತ ವಿನಾಕಾರಣವೂ, ಸಕಾರಣವೂ ಓಡಾಡುವ ಲೆಕ್ಕವಿಲ್ಲದಷ್ಟು ವಾಹನಗಳು. ಅವುಗಳ ಟೈರ್‍ ಗಳಿಗೆ ಭರ್ಜರಿ ಓಟದ ನಡುವೆ ಗಂಟಲಿಗೆ ಸಿಲುಕವ ಮೊಳೆ, ಚೂಪು ಕಲ್ಲುಗಳಿಂದ ಆಗುವ ಪಂಚರ್‍ ಗೆ ಏಕೈಕ ಆವಾಸ ಸ್ಥಾನವೆಂದರೆ ನಬೀಯ ಪಂಚರ್ ಷಾಪ್.

ಇದಕ್ಕೆ ಹಗಲು, ರಾತ್ರಿಯ ವ್ಯತ್ಯಾಸವೇ ಇರಲಿಲ್ಲ. ಯಾರು, ಯಾವ ಹೊತ್ತಿನಲ್ಲಿ ಬಂದು ಎಬ್ಬಿಸಿದರು ನಬೀ ಕೆಲಸಕ್ಕೆ ಸಿದ್ಧವಾಗಿರುತ್ತಿದ್ದ. ಅವನು ಇಲ್ಲಿ ಪಂಚರ್ ಷಾಪ್ ಇಟ್ಟಿದ್ದೆ ಜನಗಳ ಸೇವೆಗೆಂಬಂತೆ ಒಂದು ಕಾಸು ಹೆಚ್ಚಿಗೆ ಪಡೆಯುವ ಮೂಲಕ ಕೆಲಸ ಮುಗಿಸುತ್ತಿದ್ದ. ನಬೀ ಪಂಚರ್ ಷಾಪ್‍ನ ಸುತ್ತಮುತ್ತ ಬರೀ ಬಟಾಬಯಲು ಮುಂದಿನ ಹತ್ತು, ಹಿಂದಿನ ಏಳು ಕಿಲೋಮೀಟರ್‍ ಹೊರತು ಬೇರೆ ಯಾವುದೇ ಪಂಚರ್ ಷಾಪ್‍ಗಳು ಇರದ ಕಾರಣ ನಬೀ ಇದರ ನಡುವೆ ಏಕಚಕ್ರಧಿಪತಿಯಾಗಿದ್ದ.

ಅವನಿಗೂ ಬದುಕಿನಲ್ಲಿ ಮನೆ, ಊರುಗಳೆಲ್ಲವು ಬೇಸರ ತರಿಸಿದ್ದ ಕಾರಣ ಬಂದು ಇಲ್ಲಿ ನೆಲೆಯೂರಿದ್ದ. ಕೈಯಲ್ಲಿ ಕಲಿತ ಮಹಾವಿದ್ಯೆಯಂತೆ ಪಂಚರ್ ಹಾಗೂ ಸಣ್ಣ-ಪುಟ್ಟ ಮೈಕಾನಿಕ್ ಕೆಲಸವಿತ್ತು. ಇನ್ನೊಬ್ಬರ ಕೈ ಕೆಳಗೆ ಇರಲು ಇಚ್ಛಿಸದೆ ಸ್ವಾತಂತ್ರನಾಗಬೇಕೆಂಬ ಅವನ ಬಹುದಿನಗಳ ಕನಸನ್ನು ಈ ಪಂಚರ್ ಷಾಪ್ ಅಂಗಡಿ ನನಸು ಮಾಡಿತ್ತು. ಹಲವರಿಗೆ ಈ ಹೈವೇ ಬದಿಯ ಶೆಡ್‍ನಂತ ಪಂಚರ್ ಷಾಪ್ ಹಳೇಯ ಇಂಗ್ಲಿಷ್ ಸಿನಿಮಾಗಳಲ್ಲಿ ಕಾಣುವ ಯಾವುದೋ ನಿರ್ಜನ ಪ್ರದೇಶದ ಮೂರುಕು ಸೆಟ್‍ನಂತೆ ಕಾಣುತ್ತಿತ್ತು.

ನಬೀಯ ಈ ಪಂಚರ್ ಷಾಪ್‍ಗೆ ಅಂಥಾ ಬಂಡವಾಳದ ಅವಶ್ಯಕತೆಯಿರಲಿಲ್ಲ. ಅವನು ಹೇಳಿಕೊಳ್ಳುವ ಸ್ಥಿತಿವಂತನಾಗಿರಲಿಲ್ಲವಾದ್ದರಿಂದ ಪಂಚರ್ ಷಾಪ್‍ನ ವ್ಯಾಪಾರವನ್ನೆ ಅವಲಂಬಿಸಿದ್ದ. ನಬೀಯ ವಯಸ್ಸಾಗಲೇ 45ರ ಮೇಲೆ ದಾಟಿತ್ತು. ವ್ಯಕ್ತಿತ್ವದಲ್ಲಿ ತೀರ ಸಿಡುಕತನದವನಾಗಿದ್ದು, ತಾಳ್ಮೆ ಎಂಬುದು ಅವನಿಗೆ ಗೊತ್ತೇ ಇರಲಿಲ್ಲ. ಈ ಸಲುವಾಗಿಯೂ ಏನೋ ಅವನು ತನ್ನ ಹೆಂಡತಿ, ಮಕ್ಕಳು, ಸಂಸಾರಗಳಿಂದ ತುಂಬಾ ದೂರ ಸರಿದು ಬಂದಿದ್ದ. ಕೋಪ ಆ ಕ್ಷಣಕ್ಕೆ ಏರುತ್ತಿತ್ತಾದರು ಅದರ ಪರಿಣಾಮಗಳು ಮಾತ್ರ ಕಡಿಮೆಯಿರಲಿಲ್ಲ.

ಬಂದ ಗಿರಾಕಿಗಳೊಂದಿಗೆ ತಂಟೆ, ತಕರಾರು ಮಾಡಿಕೊಳ್ಳುತ್ತಿದ್ದ. ತನ್ನ ವ್ಯಕ್ತಿತ್ವಕ್ಕೆ ಅಂಟಿದ್ದ ಕೋಪವೆನ್ನುವ ಕಪ್ಪು ಕೊಳೆಯನ್ನು ಅವನಿಂದ ತೊಳೆದುಕೊಳ್ಳಲಾಗಲಿಲ್ಲ. ಬಿಡುವಾದಗೆಲ್ಲ ಕುಳಿತು ಅನೇಕ ಬಾರಿ ಚಿಂತಿಸುತ್ತಿದ್ದ. ತನ್ನ ಕೋಪ, ಸಿಟ್ಟಿಗೆ ಏನೆಲ್ಲಾ ಕಾರಣಗಳೆಂದು. ಆದರೆ, ಅವೆಲ್ಲದ್ದಕ್ಕೂ ಉತ್ತರವಾಗಿ ಸಿಕ್ಕಿದ್ದು ಅಸಹಾಯಕತೆ. ಇದರಿಂದಲೆ ಅವನು ಹೆಚ್ಚು ವ್ಯಾಘ್ರಗೊಳ್ಳುತ್ತಿದ್ದ.

ಬದುಕಿನಲ್ಲಿ ಏನು ಮಾಡಲಾಗದ ಸ್ಥಿತಿಗೆ, ತಾನು ಅಂದುಕೊಂಡಂತೆ ಬದುಕಲಾಗದೆ ಹೋಗಿದ್ದಕ್ಕೆ ಪ್ರತಿಯೊಂದರಲ್ಲೂ ತನಗೆ ಹಿನ್ನಡೆ, ಮೋಸ, ವಂಚನೆಗಳು ಕಾಡುವ ಬಗೆಗೆ ನಬೀ ರೋಸಿ ಹೋದವನಂತಿದ್ದ.

ಅವನ ಬಾಲ್ಯದಿಂದ ಇಲ್ಲಿಯತನಕ ಅವನ ಬಾಳಿನ ಪೂರ ಇವುಗಳೆಲ್ಲವು ತುಂಬಿಕೊಂಡೆ ಅವನ ಜರ್ಜರಿತನಾಗಿಸಿದ್ದವು. ಹೆಂಡತಿಯೊಂದಿಗಿನ ಕಲಹಕ್ಕೂ ಇದೇ ಕಾರಣವಾಗಿ ಅವಳನ್ನು ಮನಃಪೂರ್ವಕವಾಗಿ ಸಾಯುವಂತೆ ಚೆಚ್ಚಿ ಅಲ್ಲಿಂದ ಓಡಿ ಬಂದಿದ್ದ. ಅದೇ ಕೊನೆ ಇಂದಿಗೆ ಅದೆಷ್ಟು ವರ್ಷಗಳಾಗಿ ಹೋಯಿತೋ ಅತ್ತ ತಲೆ ಹಾಕಿರಲಿಲ್ಲ.

ಅವನ ಎರಡು ಪುಟ್ಟ ಮಕ್ಕಳ ಬಗ್ಗೆಯು ಕುರುಣೆ ಇಲ್ಲದವನಂತೆ ತನ್ನಿಡಿ ಭೂತಕಾಲವನ್ನು ಬಿಗಿಯಾಗಿ ಬಿಗಿದು ಗಂಟುಕಟ್ಟಿ ಪೆಟ್ಟಿಗೆಯೊಂದರೊಳಗೆ ತುಂಬಿ ಬೀಗ ಜಡಿದು ಬದುಕುತ್ತಿದ್ದ. ಯಾರೊಂದಿಗೂ ಕೆಲಸದ ಹೊರತು ಹೆಚ್ಚು ಮಾತುಕತೆಯಿಲ್ಲ.

ಬಂದವರು ಎಷ್ಟೇ ನಯವಾಗಿ ವರ್ತಿಸಿದರು ನಬೀಯ ವರ್ತನೆಯಲ್ಲಿ ಅದೇ ಗುಣ ಮುಂದುವರಿದಿತ್ತು. ಒಳ್ಳೆ ನುರಿತ ಕೆಲಸಗಾರನಂತೆ ಟೈರ್ ಗಳ ಎದೆ ಸೀಳಿ ಹೃದಯದಂತಿದ್ದ ಟ್ಯೂಬ್‍ಗಳ ತೆಗೆದವನೇ ಗಾಳಿ ತುಂಬಿ ನೀರಿಗೆ ಅದ್ದಿ ಗುಳ್ಳೆಗಳ ಹುಡುಕುತ್ತಿದ್ದ. ನೀರಿನ ಬುಳುಬುಳು ಶ್ಯಬ್ದಕ್ಕೆ ಕಡ್ಡಿ ಚುಚ್ಚಿ ಮತ್ತೊಂದು, ಮಗದೊಂದು ಎಂಬಂತೆ ಸೂಕ್ಷ್ಮವಾಗಿ ನೋಡುತ್ತಿದ್ದ. ಹೆಚ್ಚು ಪಂಚರ್ ಸಿಕ್ಕಿದಷ್ಟು ತನಗೆ ಲಾಭವೆಂದು ಅವನ ಅನಿಸಿಕೆಯಾಗಿತ್ತು.

ಹೆಚ್ಚು ಪ್ಯಾಚ್ ಬಿದ್ದ ಟ್ಯೂಬ್‍ಗಳನ್ನು ಬದಲಿಸುವಂತೆ ಮಾಲೀಕರಿಗೆ ಸೂಚಿಸಿ, ತಾನೇ ಎಮರ್ಜೆನ್ಸಿಗೆಂದು ಅಂಗಡಿಯೊಳಗೆ ಸ್ಟಾಕ್ ಇಟ್ಟುಕೊಂಡ ಟ್ಯೂಬಗಳ ಅವರಿಗೆ ಹಾಕಿಸುವಂತೆ ಕೇಳಲೂ ಕೆಲವರು ಸಮ್ಮತಿ ಸೂಚಿಸಿದರೆ, ಇನ್ನೂ ಕೆಲವರು ಈ ಟ್ಯೂಬ್‍ಗಳ ಗುಣಮಟ್ಟದ ಮೇಲೆ ವಿಶ್ವಾಸವಿರದಂತೆ ಸದ್ಯಕ್ಕೆ ಬರೀಯ ಪಂಚರ್ ಸಾಕೆಂದು ಬಿಡುತ್ತಿದ್ದರು. ಅವರ ಈ ಅನುಮಾನಕ್ಕೆ ನಬೀಗೆ ಪಂಚರ್ ಹಾಕದೆ ಕಳಿಸಬೇಕೆಂಬ ಹುಚ್ಚು ನಿರ್ಧಾರ ಬರುತ್ತಿತ್ತಾದರು ಅದು ತೀರ ಸಣ್ಣತನವೆಂದು ಬಿಟ್ಟು ಬಿಡುತ್ತಿದ್ದ.

ನಬೀಯ ಗಳಿಕೆಯಲ್ಲವು ಅವನ ಹೊಟ್ಟೆ, ಬಟ್ಟೆಗೆ ನೇರವಾಗಿ ಒಂದಷ್ಟು ಉಳಿದರೆ ಅಂಗಡಿಗೆ ಬೇಕಾದ ಸಾಮಾಗ್ರಿಗಳನ್ನು, ಮಳೆ ಬಂದರೆ ಅಲ್ಲಲ್ಲಿ ಸೂರುವ ಅಂಗಡಿಯ ರಿಪೇರಿಯನ್ನು ಮಾಡಿಸುತ್ತಿದ್ದ. ವಿಮಲ್ ಚಟ ಅವನಿಗೆ ಸರಿಯಾಗಿ ಅಂಟಿಕೊಂಡಿತ್ತು. ಕೆಲಸದ ನಡುವೆ ಬಾಯಿಗೆ ಹಾಕಿ ಜಿಗಿದು ಉಗಿಯದೆ ಹೋದರೆ ಸಮಾಧಾನವಿರುತ್ತಿರಲಿಲ್ಲ. ಜೇಬಿನಲ್ಲಿ ವಿಮಲ್‍ನ ದೊಡ್ಡ ಸ್ಟಾಕ್ ಇದ್ದು, ಆಗಾಗ ಕೇಳಿದವರಿಗೆ ಉದಾರವಾಗಿ ನೀಡುತ್ತಿದ್ದ.

ಹೈವೇ ರಸ್ತೆಯ ಬದಿಗೆ ಬಿದ್ದ ಹೆಸರಿಲ್ಲದ, ಅಸ್ತವ್ಯಸ್ಥವಾಗಿ ಮೊಬೈಲ್ ನಂಬರ್ ಬರೆದುಕೊಂಡ ಈ ಬಡಕಲು ಪಂಚರ್ ಷಾಪ್ ವರ್ಷಗಳು ಕಳೆದರು ಏನಂಥಾ ಅಭಿವೃದ್ಧಿ ಕಂಡಿರಲಿಲ್ಲ. ನಬೀಗೆ ಈ ರಸ್ತೆ, ಓಡಾಡುವ ವಾಹನಗಳು, ಅವುಗಳ ಸರ್‍ಬರ್ ಸದ್ದು ಅದೆಷ್ಟು ಅಭ್ಯಾಸವಾಗಿತ್ತೆಂದರೆ ಇವುಗಳ ತೀವ್ರತೆಯಲ್ಲೂ ನಡುರಾತ್ರಿಯಲ್ಲಿ ಗೊರಕೆ ತಗೆದು ನಿದ್ರೆ ಹೋಗುತ್ತಿದ್ದ.

ಇಂಥಾ ವ್ಯಕ್ತಿತ್ವದವನ ಬಳಿ 6 ತಿಂಗಳ ಹಿಂದೆ ಕೆಲಸಕ್ಕೆಂದು ಬಂದವನೆ 23ರ ಪ್ರಾಯದ ಹುಡುಗ ಬಾಬು. ಮೊದಲಿಗೆ “ಹ್ಹೇ ನನ್ಗೆ ಕೆತ್ತಕ್ಕಿಲ್ಲ, ನಿನ್ಗೆಲ್ಲಿ ಕೆರೆಯೋಕ್ಕೆ ಕೊಡ್ಲೀ ಹೋಗೋಲೇ” ಎಂದು ಹೊರಗಟ್ಟಿದ್ದ ನಬೀ. ಆದರೆ, ಏಕಕಾಲಕ್ಕೆ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥನಾಗಿ ಊರು, ಮನೆ, ಸಂಬಂಧಿಕರಿಲ್ಲದೆ ಬೀದಿಪಾಲಾದ ಈ ಹುಡುಗನ ಚಿಂತಾಜನಕ ಕತೆ ಪರಿಚಿತನೊಬ್ಬ ನಬೀಗೆ ವಿವರಿಸಲು ಅವನ ಕಟುಕು ಹೃದಯದಲ್ಲೂ ಕುರುಣೆಯೆಂಬ ಸೆಲೆ ಹೊಕ್ಕಿತ್ತು.

ಬಂದ ನೆರೆಯ ಪರಿಣಾಮ ತನ್ನ ಪಾಲಕರ ಕಳೆದುಕೊಂಡು ಹೊಟ್ಟೆಪಾಡಿಗಾಗಿ ಮೈಲಿಗಳಾಚೆಯಿಂದ ಅನ್ನ ಹುಡುಕಿ ಬಂದ ಹುಡುಗ ಬಾಬುವನ್ನು ದಿಟ್ಟಿಸಿ ನೋಡಲು ಅವನ ಅವತಾರವೇ ಬಲ್ಲವರು ಹೇಳುವಂತೆ ದರಿದ್ರ ನಾರಾಯಣನ ರೂಪದಲ್ಲಿತ್ತು. ತೊಗಟೆ ಸಿಗದ ಕಡ್ಡಿಯಂತಾ ದೇಹ, ಗುಳಿ ಬಿದ್ದ ಕಣ್ಣುಗಳಲ್ಲಿ ಬದುಕಿನ ಬಗ್ಗೆ ವಿಶ್ವಾಸ ತುಂಬಿದ ಹೊಳಪಿತ್ತು.

ಬಂದವನು “ನೋಡು ಸಾಬಣ್ಣ ಹುಡ್ಗನೀಗೇನು ಸಂಬಳ ಬೇಡ. ಎರಡು ಹೊತ್ತು ಊಟ ಹಾಕಿ ಕೆಲ್ಸ ಕಲಿಸು ಸಾಕು. ಹ್ಹೇಂಗೋ ಪಾಯಗೊಂದ್ ಬದುಕಾಯ್ತದೆ” ಎಂದು ಹೇಳಲೂ ನಬೀಗೆ ಸಂಬಳ ಬೇಡವೆಂದಿದ್ದೆ ವರದಂತೆ ಪರಿಣಮಿಸಿ ಜೊತೆ ಇರಲೂ ಅನುಮತಿ ಕೊಟ್ಟ. ಬಾಬುವಿಗೆ ಮನೆ, ಮಠಗಳೆಂಬ ಯಾವುದೇ ಹಂಗಿರದ ಕಾರಣ ಅವನ ಪಾಲಿಗೆ ಪಂಚರ್ ಷಾಪ್‍ನ ಪೆಟ್ಟಿ ಅಂಗಡಿಯೇ ಸಕಲವು ಆಗಿತ್ತು. ಊಟ, ತಿಂಡಿಗೆ ನಬೀಯ ಹಳೇ ಮೋಟಾರ್ ಸೈಕಲ್ ಏರಿ ಪಕ್ಕದ ಹಳ್ಳಿಯ ಶೆಡ್ಡು ಹೋಟಲ್‍ಗೆ ಅಥವಾ ಬಾಯಿ ಕೆಟ್ಟರೆ ಸ್ವಲ್ಪ ರುಚಿಗೆ ಹೈವೇ ಡಾಬಕ್ಕೆ ಹೋಗಿ ತಿಂದು ನಬೀಗೆ ಪಾರ್ಸಲ್ ತರುತ್ತಿದ್ದ.

ಸ್ನಾನ ಇತರೆಗಳಿಗೆ ಅಷ್ಟು ದೂರದಲ್ಲಿ ಬೋರ್‍ವೆಲ್ ನೀರೊಂದು ಉಪಯುಕ್ತವಾಗಿತ್ತು. ನಬೀ ಹೆಚ್ಚು ಮಾತುಗಾರನಾಗಿರಲಿಲ್ಲ. ಕೆಲಸಕ್ಕೆ ಎಷ್ಟು ಬೇಕೋ ಅಷ್ಟನ್ನು ಆಡಿ ಉಳಿಕೆ ಸಮಯ ನಿದ್ರೆಯಲ್ಲೋ ಅಥವಾ ಟೈರ್, ಗೇರ್‍ವೀಲ್‍ಗಳ ದುರಸ್ಥಿ ಕಾರ್ಯದಲ್ಲೂ ತೊಡಗಿರುತ್ತಿದ್ದ. ಇಂಥಾ ಸಮಯದಲ್ಲಿ ಬಾಬು ಅವನ ಪಕ್ಕವೇ ಇರಬೇಕಿತ್ತು. ಬೇಕಾದ ಸಣ್ಣ-ಪುಟ್ಟ ಸ್ಪೆನಾರ್, ನಟ್ಟು, ಬೋಲ್ಟುಗಳ ಸಪ್ಲೈ ಮಾಡುತ್ತ ಕೆಲಸವ ಗಮನವಿಟ್ಟು ನೋಡಿಕೊಂಡು ಎರಡನೇ ಬಾರಿಗೆ ನಬೀ ಜಾಗದಲ್ಲಿ ಬಾಬುವಿಗೆ ಅವಕಾಶವಿರುತ್ತಿತ್ತು.

ಅಲ್ಲಿ ಯಾಮಾರಿದರೆ ಬಾಬುಗೆ ನಬೀಯಿಂದ ಸಿಕ್ಕದ್ದರಲ್ಲಿ ಹೊಡೆತ ಜೋರಾಗಿರುತ್ತಿತ್ತು. ಕೆಲವು ಸಾರಿ ಈ ಏಟಿಗೆ ಬಾಬುವಿನ ಮಂದತನ ನಬೀಗೆ ಚೂರು ಇಷ್ಟವಾಗುತ್ತಿರಲಿಲ್ಲ. ಹೇಳಿದ ಕೆಲಸವನ್ನೆ ಗಂಟೆಗಟ್ಟಲೆ ಮಾಡುತ್ತಾನೆಂದು ವಿಮಲ್ ತುಂಬಿಕೊಂಡ ಬಾಯಿಯಲ್ಲೆ ಬೈಯುತ್ತಿದ್ದ. ವ್ಯಾಪಾರ ಕಮ್ಮಿಯಾದಷ್ಟು ಆರಾಮಾವಾಗಿರುತ್ತಿದ್ದ ನಬೀ ಕೆಲಸ ಏರಿದಂತೆ ಅದರ ಒತ್ತಡಕ್ಕೆ ಸಿಡಿಮಿಡಿಗೊಳ್ಳುತ್ತಿದ್ದ. ಅವನ ದೇಹದಲ್ಲಿ ಶಕ್ತಿ ಕುಂದುತ್ತ ದೊಡ್ಡ ಗಾಡಿಗಳು ಪಂಚರ್ ಆದರೆ ಅವುಗಳ ನಿಭಾಯಿಸುವುದೆ ಕಷ್ಟವಾಗಿ ತೋರುತ್ತಿತ್ತು.

ಬಾಬುವಿಗೆ ಈ ಪಂಚರ್ ಷಾಪ್ ಅಂಗಡಿಯೇ ಬದುಕಿನಲ್ಲಿ ಹೊಸ ಅನುಭವವಾಗಿತ್ತು. ಅದರಲ್ಲೂ ಮಾಲೀಕ ನಬೀಯ ಸಿಡುಕುತನದಿಂದ ಅವನು ಸಾಕಷ್ಟು ಕಂಗಲಾಗುತ್ತಿದ್ದ. ಅಂಥಾ ಚೂಟಿ ಇರದ ಹುಡುಗ ಬಾಬು ನಬೀ ಹೇಳಿ ಕೊಟ್ಟಿದ್ದನ್ನು ಕಲಿಯಲು ನಿಧಾನಿಸುತ್ತಿದ್ದ. ಇದು ನಬೀಗೆ ರೇಗು ತರಿಸಲು ಅವನ ಕಿರುಚಾಟಕ್ಕೆ ಈ ಹುಡುಗ ಇನ್ನಷ್ಟು ತಳಮಳಗೊಂಡು ಎಡವಟ್ಟು ಮಾಡುತ್ತಿದ್ದ.

ಬಂದ ಗಿರಾಕಿಗಳ ಮುಂದೆಯೇ ನಬೀ ಬಾಬುಗೆ ಜಿಗಿದ ವಿಮಲ್‍ನ್ನು ನೆಲಕ್ಕೆ ಉಗಿದು “ಹೊಟ್ಟೆಗೆ ಏನ್ ತಿಂತೀಯಾ ಬೇಕೂಫ್ ನಿಮಿಷದ ಕೆಲ್ಸನಾ ಗಂಟೆ ಮಾಡ್ತೀಯಾ” ಎಂದು ತಲೆಗೆ ಮೊಟಕುತ್ತಿದ್ದ. ಈ ಎಲ್ಲಾ ನೋವು, ಅವಮಾನಗಳಿಂದ ಬಾಬು ಕದಲುವಂತಿರಲಿಲ್ಲ. ಅವನಿಗೆ ಕೆಲಸ ಕಲಿಯಲು ಅಂಥಾ ಅಸ್ಥೆಯಿರದೆ ಹೋದರು ಈ ಹೈವೇ ಏರಿಳಿತದ ರಸ್ತೆ ಹಿಂದೆ, ಮುಂದೆ ಚಾಚಿಕೊಂಡ ವಿಶಾಲ ಬಯಲು ಅದರ ನಡುವೆ ನಿಂತ ದೊಡ್ಡ ವಿದ್ಯುತ್ ಸ್ಥಾವರಗಳು, ಪುಟ್ಟ ಜೋಪಾಡಿಯಂಥಾ ಪಂಚರ್ ಷಾಪ್ ಎಲ್ಲ ತೀವ್ರವಾಗಿ ಮನಸ್ಸಿಗೆ ಹತ್ತಿರವಾಗಿ ಬಿಟ್ಟಿದ್ದವು.

ತನ್ನ ಬದುಕಿನಲ್ಲಿ ಹಿಂದೆಂದೂ ಕಂಡಿರದ ಒಂದು ಅಪೂರ್ವ ದೃಶ್ಯದಂತೆ ಇವೆಲ್ಲವು ಭಾಸವಾಗಿ ಯಾವುದೋ ಕಲಾಕೃತಿಯನ್ನು ಆಳವಾಗಿ ಅಭ್ಯಸಿಸುವಂತೆ ವೀಕ್ಷಿಸುತ್ತಿದ್ದ. ಇವುಗಳನ್ನು ಬಿಟ್ಟ ಕಣ್ಣಿನಿಂದ ನೋಡಿದಷ್ಟು ಬಾಬುವಿನ ಮನಸ್ಸಿಗೆ ಏನೋ ಆನಂದ. ಈ ರಸ್ತೆ, ಓಡಾಡುವ ವಾಹನಗಳು, ನಿಂತ ವಿದ್ಯುತ್ ಸ್ಥಾವರ ಅವುಗಳಿಗೆ ಜೋತು ಬಿದ್ದು ತೊನೆದಾಡುವ ಎಲೆಕ್ಟ್ರಿಕ್ ವೈರ್ ಗಳು, ಕಡ್ಡಿ ಪೆಟ್ಟಿಗೆ ಆಕಾರದ ತನ್ನ ವಾಸಸ್ಥಾನ ಪಂಚರ್ ಷಾಪ್ ಸೇರಿದಂತೆ ಬಾಬುವಿನ ತಲೆಯಲ್ಲಿ ಚಿತ್ರ, ವಿಚಿತ್ರ ವಿಶೇಷ ವಿನ್ಯಾಸದ ಕತೆಗಳು, ಚಿತ್ರಗಳು ಹುಟ್ಟುತ್ತಿದ್ದವು.

ಅವುಗಳನ್ನೂ ಖಾಲಿ ಕುಳಿತಾಗ ಕಿಸೆಯಿಂದ ತೆಗೆವ ನೇರಳ ಹಣ್ಣಿನಂತೆ ತೆಗೆದು ಬಾಯಿ ಚಪ್ಪರಿಸುತ್ತ ಖುಷಿ ಪಡುತ್ತಿದ್ದ. ನಬೀಯಿಂದ ತಿಂದ ಹೊಡೆತ, ಬೈಗುಳಗಳೆಲ್ಲವು ಈ ಕಲ್ಪನಾವಿಲಾಸದಲ್ಲಿ ಕರಗಿ ನೀರಾಗಿ ಮಾಯಾವಾಗಿ ಬಿಡುತ್ತಿದ್ದವು. ರಾತ್ರಿಯ ವೇಳೆ ವಾಹನಗಳ ಭರಾಟೆಯನ್ನು ಲೆಕ್ಕಿಸದೆ ನಬೀ ನಿದ್ರೆಗೆ ಹೋದರೆ ಬಾಬು ಇದನ್ನು ಹಿನ್ನಲೆ ಸಂಗೀತದಂತೆ ಭಾವಿಸಿಕೊಂಡು ವಿದ್ಯುತ್ ಸ್ಥಾವರಗಳ ಬೃಹದಕಾರಕ್ಕೆ ಜೀವ ಬಂದು ಅವು ಮನುಷ್ಯರಂತೆ ನಡೆಯುತ್ತ ವಿಶಾಲ ಬಯಲಿನ ಪೂರಾ ಕೈ, ಕಾಲುಗಳ ಬಿಡಿಸಿಕೊಂಡು ಆಟವಾಡುತ್ತಿದ್ದವು.

ದೂರದ ಊರಿನ ಸಣ್ಣ ದೀಪಗಳೆಲ್ಲವು ಬಿಟ್ಟ ಕಣ್ಣಿನಲ್ಲಿ ಈ ವಿದ್ಯುತ್ ಸ್ಥಾವರಗಳ ಆಟ ನೋಡತ್ತಿರುವಂತ್ತಿತ್ತು. ಕುತ್ತಿಗೆಗೆ ಬಿಗಿದ ವೈರಗಳನ್ನು ಒಂದನೊಂದು ಎಳೆದು, ಬೀಳಿಸಿ, ಎದ್ದು ಕಬ್ಬಡ್ಡಿ, ಪುಟ್‍ಬಾಲ್‍ನಂತ ಆಟಗಳನ್ನು ಆ ಸ್ಥಾವರಗಳು ಮುಲಾಜಿಲ್ಲದೆ ಆಡುವಾಗ ಆ ಆಟಕ್ಕೆ ಮನಸೋತ ಬಾಬು ಚಪ್ಪಾಳೆ ತಟ್ಟಿ ಕೇಕೆ ಹಾಕುತ್ತಿದ್ದ.

ಈ ಚಪ್ಪಾಳೆ, ಕೇಕೆಗೆ ಎಚ್ಚರಾದ ನಬೀ “ಯಾಕೋ ಏನಾಯ್ತು ನಿದ್ರೆ ಬರಲ್ಲಿಲ್ವಾ” ಎಂದರೆ ಬಾಬುವಿಗೆ ತನ್ನ ಕಲ್ಪನೆಯನ್ನು ನಬೀಗೆ ವರ್ಣಿಸಿ ಹೇಳಲೂ ಪದಗಳು ನಾಲಿಗೆ ತುದಿಯಲ್ಲಿದ್ದವಾದರು ಭಯದಿಂದ “ಇಲ್ಲ ಈಗ ಬಂತು” ಎಂದು ಮುಸುಕೆಳೆದು ಮಲಗುತ್ತಿದ್ದ. ಆದರೆ, ಈ ಮಸುಕನ್ನ ಆ ವಿದ್ಯುತ್ ಸ್ಥಾವರದ ಮನುಷ್ಯಾಕೃತಿಗಳು ಎಳೆದು ಮತ್ತೆ ಬಾಬುವನ್ನು ತಮ್ಮ ಆಟಕ್ಕೆ ಪ್ರೇಕ್ಷಕರಾಗಿಸಿಕೊಳ್ಳುತ್ತಿದ್ದವು.

ದಿನ ಕಳೆದಂತೆ ಬಾಬುವಿನ ದೇಹದ ಮೇಲೆ ನಬೀ ಹೊಡೆದು ಮಾಡಿದ ಗಾಯದ ಕಲೆಗಳು ಹೆಚ್ಚಾಗುತ್ತಿದ್ದವು. ಇಷ್ಟು ದಿನಗಳ ಕಾಲ ತನ್ನ ಕೋಪ, ಸಿಟ್ಟು, ಅಸಹಾಯಕತೆಗೆ ವಸ್ತು ಒಂದು ಸಿಗದೆ ಹತಾಶೆಗೊಂಡವನಿಗೆ ನಿಷ್ಪಾಪಿ ಬಾಬು ಸಿಕ್ಕಿ ಹೈರಾಣಾಗಿದ್ದ. ಅವನಿಗೆ ಹಿಡಿದು ಹೊಡೆಯುವುದೆಂದರೆ ನಬೀಗೆ ಏನೋ ತೃಪ್ತಿ.

ಕೆಲಸ ಕಲಿಸುವ ನೆಪದಲ್ಲಿ ಬಾಬುವನ್ನು ಹಿಂಡುವುದರಲ್ಲಿ ಅವನು ನಿಸ್ಸೀಮನಾಗಿ ಹೋಗಿದ್ದ. ನಬೀ ಒಳಗೆ ಉರಿಯುತ್ತಿರುವ ಯಾವ, ಯಾವುದೋ ಸಂಕಟಕ್ಕೆ ಬಾಬು ಸೂಕ್ತ ವಸ್ತುವಿನಂತೆ ಸಿಕ್ಕು ದಹನಗೊಳ್ಳುತ್ತಿದ್ದ. ರಸ್ತೆಯಲ್ಲಿ ಸಗಣಿಯೊಳಗೆ ಮೊಳೆಗಳ ಹಾಕಿ ಚಕ್ರಗಳ ಅದರ ಮೇಲೆ ಸರಿಯುತ್ತಲೆ ಪಂಚರ್ ಮಾಡಿಸುವ ಹಳೇ ವಿಧಾನವನ್ನೆ ನಬೀ ವ್ಯಾಪಾರ ಕಮ್ಮಿಯಾಗಲು ಬಾಬುವಿನ ಮೂಲಕ ಮಾಡಿಸುತ್ತಿದ್ದ. ಬಾಬು ಯಾರಿಗೂ ಗುರುತು ಸಿಗದಂತೆ ದನದ ಸಗಣಿ ಸಂಗ್ರಹಿಸಿ ಅದನ್ನು ರಸ್ತೆಗಳ ಮೇಲೆ ಚೆಲ್ಲಿ ಅದರೊಳಗೆ ಮೊಳೆ ಅಡಗಿಸಿ ಬರಬೇಕಿತ್ತು.

ಇದು ತುಂಬಾ ಸೂಕ್ಷ್ಮ ಹಾಗೂ ನಿಗೂಢ ಸಂಗತಿಯಾಗಿದ್ದು, ಹೈವೇ ರಸ್ತೆಗಳಲ್ಲಿ ಪಂಚರ್ ಆದ ಟೈರ್‍ಗಳ ಮಾಲೀಕರು ಈ ಕೃತ್ಯ ಮಾಡಿದವರಿಗೆ ಬಾಯಿಗೆ ಬಂದಂತೆ ಬೈಯುತ್ತ ನಬೀಯ ಚಪ್ಪರದ ನೆರಳಿನಲ್ಲಿ ಸುಧಾರಿಸಿಕೊಳ್ಳುತ್ತಿದ್ದರು. ನಬೀ ಆಗೆಲ್ಲಾ ಗಂಭೀರನಾಗಿ ತನ್ನ ಕೆಲಸ ಮುಗಿಸುವ ಹೊರತು ಬೇರೆಯದಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಕೆಲವರ ಅನುಮಾನದ ಕಣ್ಣುಗಳು ನಬೀಯನ್ನು ಗುಮಾನಿಯಿಂದ ನೋಡಲೂ ಅವನಿಗೆ ಇರಿಸುಮುರಿಸಾಗಿತ್ತು.

ನಂತರದ ದಿನಗಳಲ್ಲಿ ಈ ಕೀಳು ಕೃತ್ಯವನ್ನು ಬಿಡುವ ಮನಸ್ಸಾದರೂ ವ್ಯಾಪಾರಕ್ಕೆ ಪೂರಕವಾಗಿ ಇಷ್ಟು ಚಂದವಾದ ರಸ್ತೆಗಳು ಬೇರೆನನ್ನೂ ಒದಗಿಸುವಂತಿರಲಿಲ್ಲ. ಬಾಬು ತಕ್ಕ ಮಟ್ಟಿಗೆ ನಬೀಯಿಂದ ಗುರುದೀಕ್ಷೆ ಪಡೆದವನಂತೆ ಗ್ರೀಸ್ ತುಂಬುವ, ಗಾಳಿ ತುಂಬುವ, ಪಂಚರ್ ಟೈರ್ ಬಿಚ್ಚುವ, ನೆಟ್ಟು, ಬೋಲ್ಟ್ ಗಳ ಉಲ್ಟಾ ಎರಡು ಸ್ಪೆನಾರ್‍ಗಳ ಹಿಡಿದು ಟೈಟ್ ಮಾಡುವ ಕೆಲಸಗಳ ಕಲಿತ್ತಿದ್ದ.

ಕೆಲಸದ ಸಮಯದಲ್ಲಿ ನಬೀಯ ಭಯದಿಂದಾಗಿ ಹೆಚ್ಚು ಜಾಗರೂಕನಾಗಿರುವ ಬಾಬು ಬಿಡುವುದಾಗ ಮತ್ತೇದೆ ವಿದ್ಯುತ್ ಸ್ಥಾವರ, ರಸ್ತೆ, ಬಯಲುಗಳ ಕಡೆ ಮುಖ ಮಾಡಿ ಕುಳಿತು ಬಿಡುತ್ತಿದ್ದ. ದಿನಕ್ಕೊಂದು ಹೊಸ ರೀತಿಯಲ್ಲಿ ಅಲ್ಲೊಂದು ಮಾಯಾಜಾಲವೇ ತೆರೆದುಕೊಂಡಂತೆ ಅದರೊಳಗೆ ಬಾಬು ತಲ್ಲೀನನಾಗಿರುತ್ತಿದ್ದ. ಇದರಿಂದ ಅವನ ಪೂರ್ವದ ತಂದೆ, ತಾಯಿಗಳ ಕಳೆದುಕೊಂಡ ನೋವು ಸಂಪೂರ್ಣ ಮಾಸಿ ಹೋಗುತ್ತಿತ್ತು.

ಬಯಲಿನ ಅಲ್ಲಲ್ಲಿ ನಿಂತ ಅಷ್ಟು ವಿದ್ಯುತ್ ಸ್ಥಾವರಗಳಿಗೆ ಬಾಬು ಅಧಿಪತಿಯಾದಂತೆ ಅವುಗಳು ಇವನ ಎತ್ತಿ ಹೆಗಲೇರಿಸಿಕೊಂಡು ಮನುಷ್ಯ ಜಗತ್ತಿನಿಂದ ದೂರ ಉಳಿದ ವಸ್ತು, ವಾಹನಗಳ ಜಗತ್ತಿನಲ್ಲಿ ತೇಲಿಸುತ್ತಿದ್ದವು. ಹಿಂದೆಲ್ಲಾ ಇಂಥಾ ಕಲ್ಪನೆಯನ್ನು ಟಿ.ವಿ.ಯಲ್ಲೋ, ಸಿನಿಮಾದಲ್ಲೋ ಕಂಡವನಿಗೆ ಈಗ ಸ್ವಂತ ಅನುಭವಕ್ಕೆ ಬಂದಂತೆ ಈ ಮೂಲಕ ಏನನ್ನೂ ಪಡೆದುಕೊಂಡಂತೆ ಬೀಗುತ್ತಿದ್ದ. ಇವುಗಳ ಬಲವರ್ಧನೆಯಿಂದ ತನ್ನ ಕಾಡುವ ನಬೀಯನ್ನು ಮುಗಿಸಿ ಬಿಡಬೇಕೆಂದು ಬಾಬುವಿಗೆ ಅನಿಸುತ್ತಿತ್ತು. ಆದರೆ, ಅದು ವಾಸ್ತವಕ್ಕೆ ಇಳಿಯುತ್ತಲೆ ಇರಲಿಲ್ಲ.

ರಾತ್ರಿಯಾದರೆ ಸಾಕೆಂದುಕೊಂಡು ರಸ್ತೆಗಿಳಿಯುವ ಕೆಲವು ದೊಡ್ಡ ಟ್ರಕ್ಕುಗಳು ಉಬ್ಬಸ ಪಡುತ್ತ ಸಾಗುವುದನ್ನು ಕಂಡ ಬಾಬುಗೆ ಇವುಗಳ ಜತೆ ತಾನು ಎಲ್ಲಿಗಾದರು ಹೋಗಿ ಬಿಡಬೇಕೆಂದು ಯೋಚನೆಗಳು ಬರುತ್ತಿದ್ದವು. ಅದೆಷ್ಟು ಲಾರಿಗಳು, ಟ್ರಕ್ಕುಗಳು ಇವನ ತನ್ನೆಡೆಗೆ ಕೈ ಬೀಸಿ ಕರೆಯುತ್ತ ಕ್ಲೀನರ್, ಡ್ರೈವರ್‍ನ ಆಸೆ ತೋರಿಸುತ್ತಿದ್ದರು. ಬಾಬುಗೆ ಅವುಗಳೊಂದಿಗೆ ಹೊರಡಲು ಮನಸ್ಸಾಗಲಿಲ್ಲ. ನಬೀಯಿಂದ ಹೊಡೆತ ತಿಂದ ರಾತ್ರಿಗಳಲ್ಲಿ ಇಲ್ಲಿಂದ ಈಗಲೇ ಹೊರಟು ಬೆಳಕಿಗೆಲ್ಲ ಮಾಯಾವಾಗಬೇಕೆಂದುಕೊಂಡರು ಈ ಸ್ಥಳ ಮತ್ತು ವಾತಾವರಣಗಳೇಕೋ ಅವನ ಕಾಲ ಕೀಳಿಸಲಿಲ್ಲ.

ನಿದ್ರೆ ಹೋದ ನಬೀಯ ಮುಖ ಬಾಬುವಿನ ಕಣ್ಣಿಗೆ ಅದೆಷ್ಟು ನಿಸ್ತೇಜವಾಗಿ ಕಾಣುತ್ತಿತ್ತೆಂದರೆ ತನ್ನ ಹಿಂಸಿಸಿ, ಬೈದ ಆ ರಾಕ್ಷಸನೇ ಇವನು ಎನ್ನವಷ್ಟು ಅನುಮಾನ ಮೂಡಿಸುತ್ತಿತ್ತು. ನಬೀಯ ಕಣ್ಣುಗಳಲ್ಲಿ ಅವನಿಗೆ ಅರಿವಿಲ್ಲದೆ ನೀರಿನ ಸೆಲೆಗಳು ಹೊಡೆದು ಜಾರುತ್ತಿದ್ದವು. ಬದುಕಿನ ಅದೆಷ್ಟೋ ಕಹಿಸತ್ಯಗಳ ಹೊರಚೆಲ್ಲಲಾಗದೆ ಅಡಗಿಸಿಟ್ಟುಕೊಂಡವನಂತೆ ನಬೀ ಹೀಗೆ ತಾನೊಂದು ದಿನ ಹೆಣವಾಗಿ ಹೋಗುವ ಮುನ್ಸೂಚನೆಯ ನೀಡಿದ್ದ.

ಅವನ ಒರಟು, ಕೊಳೆ ತುಂಬಿದ ಕೈಗಳು ಎದೆ ಮೇಲೆ ಕುಳಿತು ಯಾರನ್ನೂ ಏನನ್ನೂ ಬೇಡುತ್ತಿದ್ದವು. ಬಾಬುವಿಗೆ ನಬೀಯ ಮೇಲಿನ ಕೋಪ, ದ್ವೇಷಗಳೆಲ್ಲ ಈ ಕ್ಷಣದಲ್ಲಿ ಸಡಿಲವಾಗಿ ಅವನ ಎಬ್ಬಿಸಿ ಇದಕ್ಕೆಲ್ಲಾ ಕಾರಣ ಕೇಳಬೇಕು ಎಂದುಕೊಳ್ಳುತ್ತಿದ್ದ. ಆದರೆ, ಎಚ್ಚರಗೊಂಡರೆ ನಬೀ ಮನುಷ್ಯನಾಗಿರುತ್ತಿರಲಿಲ್ಲವೆಂದು ಬಾಬುಗೆ ಅನುಭವದಿಂದ ತಿಳಿದಿತ್ತು. ಪೆಟ್ಟಿ ಅಂಗಡಿಯೊಳಗೆ ಮುಚ್ಚಿದ ಬಾಗಿಲಿನಿಂದ ಸಣ್ಣ ದೀಪ ಒಂದು ಉರಿದು ಹೋಗುತ್ತಿತ್ತು. ಒಳಗೆ ಎರಡು ಜೀವಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬದುಕಿನ ಕುರಿತು ಅಸಡ್ಡೆಯನ್ನು, ಅಸ್ಥೆಯನ್ನು ವಹಿಸಿದಂತಿದ್ದವು.

ಬಾಬುವಿಗೆ ಮುಂದೇನಾಗಬೇಕೆಂಬ ಸ್ಪಷ್ಟತೆಯಿರಲಿಲ್ಲ. ಈ ಕಾರಣಕ್ಕೆ ಅವನಿಗೆ ತೆರೆದ ಹೊಸ ಅವಕಾಶದ ದಾರಿಗಳೆಲ್ಲ ಶುರುವಿನಲ್ಲೆ ಮುಗಿದಂತೆ ಕಾಣುತ್ತಿದ್ದವು. ಯಾವುದೋ ಪುಟ್ಟ ಪೆಟ್ಟಿಗೆ ತೆರೆದರೆ ಬಾಬುವಿಗೆ ಅದರಲ್ಲಿ ಕೊಳೆ ಮೆತ್ತಿಕೊಂಡ ಸಾಕಷ್ಟು ಹೊಸ ನೋಟುಗಳು ಕಂಡವು. ಅದರ ಜೊತೆಗೆ ನಬೀಗೆ ಸಂಬಂಧಿಸಿದ ಹಲವು ವಸ್ತುಗಳು ತುಂಬಿಕೊಂಡು ಅಯೋಮಯವಾಗಿತ್ತು. ಎಷ್ಟು ನೋಡಿದರು, ಯೋಚಿಸಿದರು ಬಾಬುಗೆ ಏನೊಂದು ಅರ್ಥವಾಗಲಿಲ್ಲ.

ಎಲ್ಲವನ್ನು ತೆಗೆದು ನೋಡಿ ಅಲ್ಲೆ ಮುಚ್ಚಿಟ್ಟು ಹೊರಗೆ ಬಂದು ಕುಳಿತ. ದೂರದ ಆಕಾಶದಲ್ಲಿ ಕಂಡ ಎರಡು ನಕ್ಷತ್ರಗಳು ಬಾಬುಗೆ ತನ್ನ ಅಪ್ಪ, ಅಮ್ಮನ ಪತ್ರಿರೂಪದಂತೆ ನೆನಪಾಗಲು ಕಣ್ಣುಗಳಲ್ಲಿ ಅನಾಯಾಸವಾಗಿ ನೀರು ಹರಿಯಿತು. ಅವುಗಳಿಗೆ ಏನೇನೋ ಹೇಳಿಕೊಳ್ಳಲು ಇದೆಯೆಂದು ಬಾಯಿ ತೆರೆದು ಅಳುವಿನ ಗಂಟಲಿನಲ್ಲಿ ಒದರಿದ. ಆ ಅಳು, ಮಾತು, ನೋವಿನ ತೀವ್ರತೆಗಳೆಲ್ಲವೂ ಸರಿ ರಾತ್ರಿಯಲ್ಲಿ ವಾಹನಗಳ ಸದ್ದಿನೊಂದಿಗೆ ಕಲಸಿ ಹೋಗುತ್ತಲೆ ಬಾಬು ನಿದ್ರೆಗೆ ಜಾರಿದ.

ನಬೀ “ಬೋಳಿಮಗಾ ಬಂದು ಇಷ್ಟು ತಿಂಗಳಾದ್ರು ನೆಟ್ಟಿಗೆ ಒಂದು ಕೆಲ್ಸ ಕಲಿಲಿಲ್ಲ” ಎಂದು ಬೈಯುತ್ತಲೆ ಕೈಗೆ ಸಿಕ್ಕ ರಿಂಚ್‍ನಲ್ಲಿ ಬಾಬುವಿನ ಭುಜಕ್ಕೆ ಹೊಡೆದಿದ್ದೆ, ಕ್ಷಣ ನಿಲ್ಲದೆ ಬಾಬು ಅಲ್ಲಿಂದ ಓಡಿ ಬಂದಿದ್ದ. ಅವನಿಗೆ ಈ ಏಟಿಗಿಂತ ಹೆಚ್ಚು ನೋವು ತಂದಿದ್ದು ಆ ಹುಡುಗಿ ಇದನ್ನು ಕಂಡಿದ್ದು. ಪಂಚರ್ ಆದಾ ಕಾರಿನ ಜೊತೆ ಬಂದಿಳೀದ ಮುದ್ದು ಮುಖದ ಹುಡುಗಿ ಬಾಬುವಿಗೆ ಮೊದಲ ನೋಟದಲ್ಲೆ ಮೋಡಿ ಮಾಡಿದ್ದಳು. ಅವಳ ಸೌಂದರ್ಯ ಕಾಣುತ್ತಲೆ ತನ್ನ ಕೆಲಸದಲ್ಲಿ ಮೈ ಮರೆತವನು ಅವಳ ಕೃಪೆ ಬಯಸಿದಂತೆ ನೋಡುತ್ತಿದ್ದ.

ಇದು ನಬೀ ಗಮನಕ್ಕೆ ಬರುತ್ತಲೆ ಹೊಡೆತ ಬಿದ್ದಿತ್ತು. ಇಷ್ಟು ದಿನದ ನೋವು, ಯಾತನೆಗಳೆಲ್ಲವು ಒಂದೇ ಸಾರಿಗೆ ಭೋರ್ಗರೆವಂತೆ ಬಾಬು ಬಿಕ್ಕಿ ಬಿಕ್ಕಿ ಅಳುತ್ತ ಸಮಾಧಾನವಾಗಿದ್ದ. ಅವನನ್ನ ಈ ತುಂಬು ಹೃದಯದ ವಿದ್ಯುತ್ ಸ್ಥಾವರಗಳು ನೆಲದಿಂದ ಎತ್ತಿ ಮೇಲಕ್ಕೆಸದು ಸಣ್ಣ ಮಗುವಿನಂತೆ ಆಟವಾಡಿಸುತ್ತಿದ್ದವು. ಗೊತ್ತು, ಗುರಿಯಿರದೆ ಹೊರಟ ವಾಹನಗಳೆಲ್ಲವು ಮೊದಲ ಬಾರಿಗೆಂಬಂತೆ ಬಾಬುವಿನ ಬಳಿ ಬಂದು ತಮ್ಮ ಗುರಿ ಮತ್ತು ಗಮ್ಯವನ್ನು ತಿಳಿಸಿ ಹೋಗುತ್ತಿದ್ದವು. ಬಾಬುವಿಗೆ ಬಿದ್ದ ಏಟಿನ ಕಾರಣ ಭುಜದ ನೋವು ಕುಳಿತಲ್ಲೆ ಇನ್ನೆಲ್ಲೂ ಕದಲಿಸದಂತೆ ನಿದ್ರೆ ಮಾಡಿಸಿ ಬಿಟ್ಟಿತ್ತು.

ಈ ನೋವಿನ ಕನವರಿಕೆಯಲ್ಲೆ ಅವನ ಸ್ವಪ್ನದಲ್ಲಿ ಮನುಷ್ಯ ಆಕಾರದ ವಿದ್ಯುತ್ ಸ್ಥಾವರಗಳು ದಾಪುಗಾಲುಗಳ ಹಾಕುತ್ತ ಬಂದು ನಬೀ ಪಂಚರ್ ಷಾಪ್‍ನ್ನ ಒಂದೇ ಸಾರಿಗೆ ಮೆಟ್ಟಿ ಪುಡಿಪುಡಿ ಮಾಡಿದ್ದವು. ನಬೀ ಇದರ ಅಡಿಯಲ್ಲಿ ಅಕ್ಷರ ಸಹಃ ತಿಗಣಿಯಂತೆ ಆಗಿದ್ದ. ಅವನ ರಕ್ತಕಾರಿ ಬಿದ್ದ ದೃಶ್ಯ ಬಾಬುವಿನ ಕಣ್ಣಿಗೆ ಕಟ್ಟಿ ಬಿದ್ದಿತ್ತು.

ಪಂಚರ್ ಷಾಪ್‍ನ ಜಾಗದಲ್ಲಿ ಹೊಸದೊಂದು ಅತ್ಯುನ್ನುತ ನವ ವಿನ್ಯಾಸದ ಕಟ್ಟಡ ರೂಪುಗೊಂಡು ವಿದ್ಯುತ್ ಸ್ಥಾವರದ ಪುಟ್ಟ ಮರಿಗಳೆಲ್ಲವು ಅಲ್ಲಿ ಕೆಲಸಕ್ಕಿದ್ದವು. ಅಲ್ಲಿ ನರನೆಂಬುವನ ಸುಳಿವೇ ಇರಲಿಲ್ಲ. ಬರೀ ಯಂತ್ರಗಳು ಮತ್ತು ಅವುಗಳ ಸೆಣಸಾಟ ಮಾತ್ರ. ಇವುಗಳಿಗೆಲ್ಲ ತಿಲಕವಿಟ್ಟಂತೆ ಮಾಲೀಕನಾಗಿ ಬಾಬು ಕುಳಿತಿದ್ದ. ಅವನ ಪಕ್ಕಕ್ಕೆ ಅದೇ ಹುಡುಗಿ ಪಂಚರ್ ಹಾಕಿಸಲು ಬಂದಾಗ ತಾನು ಅತಿಯಾಗಿ ಮೆಚ್ಚಿ ನೋಡಿದ ಹುಡುಗಿ ಇವನ ಬೇಕು, ಬೇಡಗಳ ಕೇಳಲೂ ನಿಂತಿದ್ದಳು.

ಎಲ್ಲಾ ಕೆಲಸ, ಕಾರ್ಯಗಳು ಬಾಬುವಿನ ಕಿರುಬೆರಳಿನ ಆಜ್ಞೆಯಂತೆ ನಡೆಯುತ್ತಿದ್ದವು. ಈ ಯಂತ್ರಗಳೆಲ್ಲವು ಸೇರಿಕೊಂಡು ಹೊಸ, ಹೊಸ ಮನುಷ್ಯರ ಸೃಷ್ಟಿಸಿ ಮಾರುಕಟ್ಟೆಗೆ ಖರೀದಿಗೆ ಬಿಡುತ್ತ, ಮನುಷ್ಯರ ಕೆಟ್ಟ ತಲೆ ಬುರುಡೆ, ನಿಷ್ಕ್ರಯಗೊಂಡ ಮಿದುಳು, ಕೈ, ಕಾಲು ಇತರೆಗಳ ಕಿತ್ತು ಕಸಿ ಮಾಡಿ ಮನುಷ್ಯರನ್ನೆ ಬೇಕಾದಂತೆ ತಯಾರಿಸುತ್ತಿದ್ದವು.

ಬರೀ ಯಂತ್ರಗಳ ಜಗತ್ತಿನಲ್ಲಿ ಮನುಷ್ಯ ಕಿಲುಬು ಕಾಸಿಗೆ ಮಾರಾಟವಾಗುವ ಸ್ಥಿತಿಯನ್ನು ಬಾಬು ಕಂಡು ಹೊಟ್ಟೆ ಹಿಡಿದು ನಕ್ಕಿದ್ದ. ಯಂತ್ರಗಳು ಅವನ ಕಟ್ಟಾಜ್ಞೆಯಂತೆ ಪ್ರತಿಯೊಂದನ್ನು ರೂಪಿಸುತ್ತ ಅದಕ್ಕೆ ಅಧಿಕೃತ ಮುದ್ರೆಗೆ ಬಾಬುವನ್ನು ಕಾಯುತ್ತಿದ್ದವು. ಬಾಬು ಯಾವುದೋ ಗಾಢವಾದ ಚಿಂತೆಯಲ್ಲಿ ಮನುಷ್ಯನ ನರಕೋಶ ಒಂದನ್ನು ಅನ್ವೇಷಿಸುವಾಗ ಕೈಲ್ಲಿದ್ದ ಸೂಜಿಯಲ್ಲಿ ಆ ಕೋಶ ಒಂದಕ್ಕೆ ಚುಚ್ಚಲು ಅಲ್ಲಿಂದ ಛಲ್ಲನೆ ನೀರು ಚಿಮ್ಮಿ ಮುಖಕ್ಕೆ ಹಾರಿತು.

“ಲೋ ಮಗಾ ಕಣ್ಣು ಬಿಡೋ. ನೋಡೋಗೋ ಅಲ್ಲಿ ನಿಮ್ಮ ಯಾಜಮಾನ ನಬೀ ಸತ್ತೋಗವ್ನೇ” ಎಂದು ಮುಖಕ್ಕೆ ನೀರು ಚಿಮುಕಿಸಿದವ ಕೂಗುತ್ತಿದ್ದ. ಎಚ್ಚರಗೊಂಡ ಬಾಬುವಿಗೆ ಕನಸು ಮತ್ತು ವಾಸ್ತವದ ನಡುವಿನ ವ್ಯತ್ಯಾಸವೇ ತಿಳಿಯಲಿಲ್ಲ. ನಿಮಿಷಗಳು ಪರಿತಪಿಸಿ ನಿಧಾನವಾಗಿ ಪಂಚರ್ ಷಾಪ್ ಅಂಗಡಿಯತ್ತ ನೋಡಲು ಅಲ್ಲಿ ಜನ ತುಂಬಿಕೊಂಡಿದ್ದರು. ಇದೇನೆಂದು ಕುತೂಹಲದಲ್ಲೆ ಬಂದು ನೋಡಿದ ಬಾಬುಗೆ ಸತ್ತ ನಬೀಯ ದೇಹದ ದರ್ಶನವಾಯಿತು.

ಕ್ಷಣ ಗಾಬರಿ ಬಿದ್ದ ಅದು ಕನಸೋ, ಭ್ರಮೆಯೋ ಎಂಬ ಆತಂಕದಲ್ಲಿ ನಬೀಯ ಮುಖ ನೋಡಲು ಆಗಾಲೇ ಸ್ಥಳದಲ್ಲಿ ಹಾಜರಾಗಿದ್ದ ಪೊಲೀಸರು “ಹಾರ್ಟ್‍ಆಟ್ಯಾಕ್ ಕಣ್ರೀ ಮಲಗಿದ್ದಲೆ ಹೋಗ್ ಬಿಟ್ಟವ್ನೇ” ಎಂದು ಹೇಳಿದ್ದರು. ಬಾಬುಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಣ್ಣುಗಳು ನೀರಾಡಲೂ ನಬೀಯ ಪೆಟ್ಟಿಗೆಯಲ್ಲಿನ ವಸ್ತಗಳೆಲ್ಲವು ಚೆಲ್ಲಾಪಿಲ್ಲಿಯಾಗಿದ್ದವು.

ನಿಂತ ವಿದ್ಯುತ್ ಸ್ಥಾವರಗಳು, ಚಾಚಿದ ಬಯಲು, ನೆಲ ಅಪ್ಪಿಯೇ ಬೆಳೆದ ರಸ್ತೆ, ಬದಿಯ ಪಂಚರ್ ಷಾಪ್, ಗುಂಪುಗೂಡಿದ್ದ ಜನಗಳು ಎಲ್ಲವನ್ನು ತೇದಕಚಿತ್ತದಿಂದ ನೋಡುತ್ತಿದ್ದ ಬಾಬುಗೆ ಇಲ್ಲಿಂದ ಯಾವುದೇ ಹೊಸ ಅರ್ಥಗಳು ಹೊಳೆಯಲಿಲ್ಲ. ಗರ ಬಡಿದವನಂತೆ ಮುಂದಿನ ಕ್ರಿಯೆಗಳ ನೋಡುತ್ತ ನಿಂತ.

‍ಲೇಖಕರು Avadhi

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: