ಮಗುವಂತೆ ಕವಿತೆ..

ಡಾ.ಗೋವಿಂದ ಹೆಗಡೆ

ಮಗುವಂತೆ ಕವಿತೆ

ಕವಿತೆಗಳಲ್ಲಿ ಕೆಲವು
ಜುಳುಜುಳು ಹರಿವ ನದಿ
ಇಕ್ಕೆಲದ ದಡವ ತಟ್ಟುತ್ತ ತಬ್ಬುತ್ತ
ಇನ್ನು ಕೆಲವು ಜೋರಾಗಿ
ಸುರಿವ ಧಬಧಬೆ ಅಡಿಗ
-ಡಿಗೆ. ಕೆಲವು ನಡುವಲ್ಲೇ
ಮಡುವಾಗುವುದುಂಟು. ಕೆಲವು
ಸುಳಿ ಕಣ್ಣಲ್ಲಿ ಸಿಲುಕಿ ತಿರುತಿರುಗಿ
ತಿಗರಿ.

ಕೆಲವು ಕವಿತೆಗಳೆಂದರೆ ಬಿರುಗಾಳಿ ಸುಂಟರಗಾಳಿ ಇನ್ನು ಕೆಲವಕ್ಕೆ
ತರಗೆಲೆಯನ್ನೂ ಅಲುಗಿಸದಂಥ ಅಶಕ್ತಿ
ಏರಿಳಿತಗಳಿಲ್ಲದೆ ಒಂದೇ ಶ್ರುತಿಯಲ್ಲಿ ಸುರಿ
ವ ಮಳೆ ಕೆಲವು ಬರೀ ಬತ್ತಿದ ಹೊಳೆ

ಕಾವೇರಿಯಂತಹ ಹೆಣ್ಣು ಕವಿತೆ
ನಡೆದ ನೆಲಕೆಲ್ಲ ಎದೆಯುಣಿಸಿ
ಕೆಲವರೋ ಕಣ್ಣೀರ ಹೊಳೆ
ಬ್ರಹ್ಮಪುತ್ರಿಯರು. ಕೆಲವು ತುಂಬು ನೈಲ್
ಕೆಲವರು ಅಬ್ಬರದ ಅಮೆಜಾನ್

ಕೆಲವು ಕವಿತೆಗಳು ಕಬ್ಬು ಪ್ರತಿ ಪರ್ವ
ರಸೋದಯ ಕೆಲವು ಬಲಿತ ತುಪ್ಪರಿ ಕಾಯಿ
ಬರೀ ನಾರು ನೀರಸ
ಕೆಲವರ ಮೈತುಂಬ ಹೊಗಳಿಕೆ ತೆಗಳಿಕೆ
ಕೆಲವಕ್ಕೆ ನೀರಡಿಕೆ ಅಥವಾ ತೂಕಡಿಕೆ
ಬರೀ ಬಳಲಿಕೆ

ನಿತ್ಯ ಹಸುರಿನ ಕಾನು ಕೆಲವು ಹೊಕ್ಕು
ಕಳೆದುಕೊಳ್ಳಬಹುದು ತನ್ನ ತಾನು ಮತ್ತೆ
ಕೆಲವು ಎಲೆ ಉದುರಿಸಿ ಬೋಳು ಬೀಳು

ಕೆಲವು ಅಕಾಲದಲ್ಲಿ ಹುಟ್ಟಿ ಕಿರಲುವ
ಉಳಿವು ದುಸ್ತರವಾದ “ಪ್ರೀಮಿ”ಗಳು
ಎಷ್ಟೊಂದು ತಮಗೆ ತಾವೇ ಗಮ್ಯ
-ವೆಂಬ “ಚೀನೀ”ಗಳು
ಕೆಲವು ಕವಿತೆಗಳಲ್ಲಿ ಖಡ್ಗ ಈಟಿಗಳ
ಖಣಖಣತ್ಕಾರ ಕೋವಿ ತುಪಾಕಿಗಳ
ಆರ್ಭಟ ಕೆಲವು ಅಣುಬಾಂಬು
ಖಂಡಾಂತರ ಕ್ಷಿಪಣಿ ಕೆಲವು ಸದ್ದಿರದೆ
ದಾಳಿಯಿಡುವ ವೈರಸ್ಸು

ಸವಾಲು ಪ್ರತಿಸವಾಲು ಒಗಟು
ಕಗ್ಗಂಟು-ಎಲ್ಲ ನಂಟೂ ಇದೆ ಕವಿತೆಗೆ
ಮನುಷ್ಯನಂತೆ ಸೃಷ್ಟಿಯಂತೆ ಕವಿತೆ

ತೀರದ ಮೌನದಲ್ಲಿ ನಿಂತು ಕಾದಿರುವೆ
ಬೊಚ್ಚುಬಾಯಿ ತೆರೆದು ಅಬೋಧ ನಗುವ
ಮಗುಕವಿತೆ ತೇಲಿ ಬರುವುದಿದೆ

ಒಪ್ಪಂದ

ಮೊದಲ ಸಲ ಕಣ್ಣು ಬೆರೆತದ್ದೇನೋ
ಅಕಸ್ಮಾತ್ತಾಗಿ.ಆಮೇಲೆ ಮಾತ್ರ
ಅವಳ ಹೂಮೊಗದ ಸವಿ
-ನೋಟಕ್ಕೆ ಅವನ ಚಿಟ್ಟೆಗಣ್ಣು
ಮರಮರಳಿ ಬರುತ್ತ
ಆ ಮೊಗದಲ್ಲಿ ತುಸು ಹಾಸ
ಅರಳಿ ಈಗ
ಅವರಲ್ಲೊಂದು ಒಳಒಪ್ಪಂದವೇ
ನಡೆದಿದೆ- ಮಾತಿನ ಹಂಗೇನಿದೆ

ಅವನ ಹುರಿಮೈ ಚಂದದ ಮೀಸೆ
ನಗುವ ಕಣ್ಣುಗಳಿಗೆ
ಅವಳ ಎದೆಸೋತು ಕಂಪನ
ಅವನೋ ಚಾಲಾಕಿ-ದಿಟ್ಟಿದೋಣಿಯ
ಹಾಗೇ ಹಾಯಿಸಿ
ತುಂಬು ಎದೆ ತೋಳು ತೊಡೆಗಳ
ರೇವು ತಲುಪಿದ್ದಾನೆ
ಎದೆಯಲೀಗ ಸುನಾಮಿ

ಪೋಕ್ತನ ಹಾಗೆ ತನ್ನದೊಂದು
ವಿಸಿಟಿಂಗ್ ಕಾರ್ಡ್ ತೆಗೆದು
ಉದ್ದಕ್ಕೆ ಅವಳವರೆಗೂ ನಡೆದು
‘ ಮೇಡಂ, ನಮ್ಮ ಏ ಸಿ, ಕೂಲರ್, ಫ್ರಿಜ್
ಸೇಲ್ಸ್ ಎಂಡ್ ಸರ್ವಿಸ್ ನಿಮ್ಮ ಸೇವೆಗೇ!
ಒಮ್ಮೆ ಭೇಟಿ ಕೊಡಿ, ಒಂದು ಮಿಸ್ಡ್ ಕಾಲ್..
ಸಾಕು’ಎಂದು ಮರೆಯಾಗಿದ್ದಾನೆ

ಕೀಲಿಸಿಹೋದ ಅವಳ ಬೆವರಿದ ಅಂಗೈಯಲ್ಲಿ
ಕಾರ್ಡಲ್ಲ ಅಂಚೆ
ಕುಣಿಯುವ ಅಂಕಿಗಳು
ನಡುಗುವ ಬೆರಳು ಡವಡವ ಎದೆ
ಯಲ್ಲಿ ಕುಣಿವ ನವಿಲು

‍ಲೇಖಕರು Avadhi

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: