ಚಂದ್ರಕಾಂತ ಕುಸನೂರರ ಯಾತನಾ ಶಿಬಿರ

ಪ್ರಸನ್ನ ಸಂತೇಕಡೂರು

ಯಾತನಾ ಶಿಬಿರ ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಕಾಂತ ಕುಸನೂರರ ಪ್ರಖ್ಯಾತ ಕಾದಂಬರಿ. ಈ ಕಾದಂಬರಿಗೆ ೧೯೭೫ರಲ್ಲಿಯೇ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಇವರ ಅಸಂಗತ ನಾಟಕಗಳಿಗೆ ೧೯೭೨ರಲ್ಲಿಯೇ ನಾಟಕ ಅಕಾಡೆಮಿಯ ಪ್ರಶಸ್ತಿಯೂ  ಸಿಕ್ಕಿದೆ. ಕನ್ನಡದಲ್ಲಿ  ಇತರೆ ಅನೇಕ ನಾಟಕಗಳನ್ನು ರಚಿಸಿದ್ದಾರೆ.

ಆ ಕಾರಣದಿಂದ ಇವರು ರಂಗಕರ್ಮಿಗಳು ಕೂಡ ಆಗಿದ್ದರು. ಇವರು ಜನಿಸಿದ್ದು ೧೯೩೧ರಲ್ಲಿ ಕಲಬುರ್ಗಿ ಜಿಲ್ಲೆಯ  ಕುಸನೂರಲ್ಲಿ. ಇವರು ಬಹಳ ಕಾಲ ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು ಮತ್ತು  ಅಲ್ಲಿಯೇ “ರಂಗ ಮಾಧ್ಯಮ”ಎಂಬ ನಾಟಕ ಸಂಸ್ಥೆಯ ಸ್ಥಾಪಿಸಿದ್ದರು‌.

ಆ ನಂತರ ಸುಮಾರು ವರ್ಷಗಳ ಕಾಲ ಬೆಳಗಾವಿಯಲ್ಲಿ ನೆಲೆಸಿದ್ದರು.  ಜೊತೆಗೆ ಯು. ಆರ್. ಅನಂತಮೂರ್ತಿಯವರ ಸಂಸ್ಕಾರ ಮತ್ತು ಆಲನಹಳ್ಳಿ ಶ್ರೀಕೃಷ್ಣರ ಕಾಡು ಕಾದಂಬರಿಗಳನ್ನು ಹಿಂದಿ ಭಾಷೆಗೆ ಅನುವಾಡಿಸಿದ್ದಾರೆ. ಸಂಸ್ಕಾರ ಕಾದಂಬರಿಯ ಅನುವಾದಕ್ಕಾಗಿ ಭಾರತ ಸರಕಾರದ ಮತ್ತು ಉತ್ತರ ಪ್ರದೇಶದ ಹಿಂದಿ ಪ್ರತಿಷ್ಠಾನದ ಬಹುಮಾನ ಪಡೆದಿದ್ದಾರೆ. ಹಿಂದಿ ಭಾಷೆಯಲ್ಲಿ ಪ್ರಕಟವಾಗಿರುವ ಇವರ ಕಥಾಸಂಕಲನ “ರೇಷಮ್ ಕಿ  ಗುಡಿಯಾ” ಸಂಕಲನಕ್ಕೆ ಭಾರತ ಸರಕಾರದ ಬಹುಮಾನ ಕೂಡ ಲಭಿಸಿದೆ.

ಇವರ ನಾಟಕಗಳು ಹೆಚ್ಚು ಜನಪ್ರಿಯವಾಗಿವೆ. ಅವುಗಳಲ್ಲಿ ಮುಖ್ಯವಾದವು ಆನಿ ಬಂತಾನಿ, ರಿಹರ್ಸಲ್,ರತ್ತೋ ರತ್ತೋ ರಾಯನ ಮಗಳೇ, ವಿದೂಷಕ, ಹಳ್ಳಾ ಕೊಳ್ಳಾ ನೀರು, ಮತ್ತು ದಿಂಡಿ. ನಂದಿಕೋಲು ಇವರ ಕವನ ಸಂಕಲನ. ಕಾದಂಬರಿಗಳಲ್ಲೂ ಕುಸನೂರರು ಹೆಚ್ಚು  ಜನಪ್ರಿಯರೆಗಳಿಸಿದ್ದಾರೆ. ಆ ಕಾದಂಬರಿಗಳು ಈ ಕೆಳಗಿನಂತಿವೆ.

ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ಕೆರೂರು ನಾಮ ಮತ್ತು  ಚರ್ಚ್ ಗೇಟ್.

ಕತೆಗಾರರಾಗಿಯೂ ನಾಡಿನಾದ್ಯಂತ ಕುಸನೂರರು ಕನ್ನಡನಾಡಿನಲ್ಲಿ ಚಿರಪರಿಚಿತರಾಗಿದ್ದಾರೆ.  ತುಕ್ಕಪ್ಪಾ ಮಾಸ್ತರ ಇವರ ಪ್ರಖ್ಯಾತ ಕಥಾಸಂಕಲನ.

ಯಾತನಾ ಶಿಬಿರ ಉತ್ತರ ಕರ್ನಾಟಕದ ಅದರಲ್ಲೂ ಹೈದರಬಾದ್ ಕರ್ನಾಟಕ ಅಂದರೆ ಇಂದಿನ ಕಲ್ಯಾಣ ಕರ್ನಾಟಕ ಭಾಗದ ಹಳ್ಳಿಯ ಬದುಕಿನ ಚಿತ್ರಣವನ್ನು ತುಂಬಾ ಮನೋಜ್ಞವಾಗಿ ರಚಿಸಿರುವ ಕಾದಂಬರಿ. ಇದು ರಾವ್ ಬಹದ್ದೂರರ ಗ್ರಾಮಾಯಣ, ಆಲನಹಳ್ಳಿ ಶ್ರೀಕೃಷ್ಣರ ಕಾಡು, ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ  ದಶಾವತಾರಗಳು, ಗೋರೂರರ ಭೂತಯ್ಯನ ಮಗ ಅಯ್ಯು ನೆನಪಿಸುವ ಕಾದಂಬರಿ.  ಇಲ್ಲಿನ ಜನಜೀವನ ಅಷ್ಟೇ ಸುಂದರವಾಗಿ ಮೂಡಿಬಂದಿದೆ.

ಈ ಕಾದಂಬರಿಯ ಆರಂಭದಲ್ಲಿ ಅಧ್ಯಾಪಕನೊಬ್ಬ ಚಂದನಕೇರಿ ಎಂಬ ಹಳ್ಳಿಗೆ ವರ್ಗಾವಣೆ ಆಗಿ ಬರುವ ಮೂಲಕ ಆರಂಭವಾಗುತ್ತದೆ. ಅವನು ಆ ಊರಿನ ದುರಂತವನ್ನು ಕಣ್ಣಾರೆ ನೋಡಿ ಮುಂದೆ ಎಂದೂ ಈ ಊರಿಗೆ ಬರುವುದು ಬೇಡ ಎಂದು ನಿರ್ಧರಿಸಿ ಹಿಂತಿರುಗಿ ಹೋಗುವ ಮೂಲಕ ಕಾದಂಬರಿ ಮುಕ್ತಾಯವಾಗುತ್ತದೆ. ನಡುವೆ ಸಹಭಾಳ್ವೆಯಿಂದ ಬದುಕುತ್ತಿದ್ದ ಹಳ್ಳಿಯಲ್ಲಿ ಹೇಗೆಲ್ಲಾ ಬದಲಾವಣೆಗಳಾಗುತ್ತವೆ. ಮೊದಲು ಕ್ಷಾಮ ಆಮೇಲೆ ಕಾಲರ ರೋಗ ಆ ಊರನ್ನು ಹೇಗೆ ಬಲಿ ತೆಗೆದುಕೊಳ್ಳುತ್ತದೆ ಎಂದು ಕಾಣಬಹುದು.

ಇಲ್ಲಿನ ಎಲ್ಲಾ ಪಾತ್ರಗಳು ತುಂಬಾ ಸುಂದರವಾಗಿ ಮೂಡಿಬಂದರೂ ಕೃಷ್ಣಾ ದೀಕ್ಷಿತನ ಪಾತ್ರ ಹೆಚ್ಚು ಕಾಡುತ್ತದೆ. ತನ್ನ ಹಳ್ಳಿಯ ದುರಂತ ತನ್ನ ವೈಯುಕ್ತಿಕ ಬದುಕಿನ ದುರಂತವನ್ನು ಕಣ್ಣಾರೆ ನೋಡುವ ದೀಕ್ಷಿತ ಒಬ್ಬ ಸ್ಥಿತಪ್ರಜ್ಞಕರ್ಮ ಯೋಗಿಯ ರೀತಿ ಕಾಣುತ್ತಾನೆ. ಅವನು ತನ್ನ ಬದುಕಿನ ಅಸ್ತಿತ್ವವನ್ನು ಪ್ರಶ್ನೆ ಮಾಡಿಕೊಂಡು ಜಾತಿ ಧರ್ಮಗಳನ್ನು ಮೀರಿದ ಒಬ್ಬ ಮಹಾಮಾನವನಾಗಿ ಕಾಣುತ್ತಾನೆ. ಇದೆ ರೀತಿಯ ಪಾತ್ರ ಆಲನಹಳ್ಳಿ ಶ್ರೀಕೃಷ್ಣರ ಭುಜಂಗಯ್ಯನದು.

ಯಾತನಾ ಶಿಬಿರಕ್ಕೆ ಮುನ್ನುಡಿ ಬರೆದವರು ಖ್ಯಾತ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರು. ಕುರ್ತಕೋಟಿಯವರು ಕಾದಂಬರಿಯ ಮೀತಿಗಳನ್ನು ತಿಳಿಸಿದ್ದರೂ ಕಾದಂಬರಿ ತನ್ನ ಗಟ್ಟಿತನದಿಂದ ಸರಳತೆಯಿಂದ ಅಪಾರ ಯಶಸ್ಸುಗಳಿಸಿರುವುದು ಅದರ ಮಹತ್ವತೆಯನ್ನು ತೋರಿಸುತ್ತದೆ.

ಇದರ ಪ್ರಕಾಶಕರು ಮನೋಹರ ಗ್ರಂಥಮಾಲೆಯವರು. ಆ ನಂತರವೂ ಕಾದಂಬರಿ ಗುಲ್ಬರ್ಗ ವಿಶ್ವವಿದ್ಯಾನಿಲಯಕ್ಕೆ ಪಠ್ಯ ಪುಸ್ತಕವಾಗಿತ್ತು.

ಕುಸನೂರರು ಅದೆಷ್ಟೂ  ಪ್ರತಿಭಾವಂತರಾಗಿದ್ದರೆಂದರೆ ಇವರಿಗೆ  ಒಂದೇವರ್ಷದಲ್ಲಿ ಲಲಿತಕಲಾ ಅಕಾಡಮಿ, ನಾಟಕ ಅಕಾಡಮಿ, ಸಾಹಿತ್ಯ ಅಕಾಡಮಿಗಳಿಂದ ಪ್ರಶಸ್ತಿಗಳು ಬಂದಿವೆ. ಜೊತೆಗೆ  ಕಾಯಕ ಸನ್ಮಾನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ದೊರೆತಿವೆ.

ಇವರಿಗೆ ದೊರೆತಿರುವ ಇನ್ನಿತ್ತಿರ ಪ್ರಶಸ್ತಿಗಳು ಈ ರೀತಿ ಇವೆ.

೧೯೭೫ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.
೧೯೭೨ರಲ್ಲಿ  ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿದೆ.
೨೦೦೬ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.
2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

ಇಷ್ಟೆಲ್ಲಾ ಸಾಧನೆ ಮಾಡಿರುವ ಚಂದ್ರಕಾಂತ ಕುಸನೂರರಿಗೆ ಕನ್ನಡ ಸಾಹಿತ್ಯದಲ್ಲಿ ಸಿಗಬೇಕಾದ ಇನ್ನು ಹೆಚ್ಚು ಮಹತ್ವ ಸಿಕ್ಕಿಲ್ಲವೇನೋ ಎಂದು ಅನಿಸುತ್ತದೆ.

‍ಲೇಖಕರು Avadhi

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: