ನಿಮ್ಮ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಬೇಕಾಗಿದೆಯಾ?

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

ಮಾಮೂಲಿಯಾಗಿ ಕ್ರೊಸಾಂಟ್ ಒಂದು ಇದ್ದುಬಿಟ್ಟರೆ ನಮಗೆ ಸಾಕು. ಅದು ನಮ್ಮೂರಿನ ಪಫ್‌ನಂಥ ತಿನಿಸು. ಒಳಗೆ ತರಕಾರಿ ಇರುವುದಿಲ್ಲವಷ್ಟೇ. ಆದರೆ ಒಂದರೊಳಗೆ ನಟ್ಸ್, ಇನ್ನೊಂದರೊಳಗೆ ಚಾಕಲೇಟ್…

ಹೀಗೇ ನಾನಾ ವಿಧ ಇರುವುದರಿಂದ ಎಲ್ಲವನ್ನೂ ತಿಂದರೆ ಸಾಕು ಹೊಟ್ಟೆ ತುಂಬಿ ಬಿಡುತ್ತದೆ. ಆದರೆ ಇಲ್ಲಿ ಕ್ರೊಸಾಂಟ್ ಸುಳಿವೇ ಇರಲಿಲ್ಲ. ನನ್ನ ಗಂಡ ಉರಿದುಕೊಳ್ಳುತ್ತಾ ವೇಟ್ರೆಸ್ ಅನ್ನು ವಿಚಾರಿಸಿದರೆ ‘ಸಾರಿ ಸರ್ ನಾವಿಲ್ಲಿ ಕ್ರೊಸಾಂಟ್ ಇಡುವುದಿಲ್ಲ’ ಅಂದುಬಿಟ್ಟಳು.

ಕ್ರೊಸಾಂಟ್ ಇಲ್ಲವೇ! ಹಾಗಿದ್ದರೆ ಇನ್ನು ಮೂರು ದಿನ ಬೆಳಗೆದ್ದು ಸೌತೆಕಾಯಿ, ಟೊಮೊಟೋಗಳಲ್ಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾ ಎಂದು ಅಳು ಬರುವಂತಾಗಿ ಹೋಯಿತು. ಒಂಟಿ ಕಣ್ಣಲ್ಲಿ ಅಳುತ್ತ ಏನೇನು ತಿಂದರೂ ಬಾವಿಯೊಳಗೆ ಕಲ್ಲು ಬಿದ್ದಂತೆ ಅನ್ನಿಸುತ್ತಿತ್ತು, ಇದ್ದಿದ್ದನ್ನೇ ತಿಂದು ಅರೆಹೊಟ್ಟೆಯಲ್ಲಿ ಹೊರಡುವಾಗ ನನ್ನ ಗಂಡ ಆ ವೇಟ್ರೆಸ್ ಅನ್ನು ಕರೆದು ‘ನೋಡಿ ನಾಳೆಗೆ ನಮಗೆ ಕ್ರೊಸಾಂಟ್ ಬೇಕೇ ಬೇಕು. ನಮಗಿಲ್ಲಿ ಏನೂ ಇಲ್ಲ ತಿನ್ನಲು. ಈ ತರಕಾರಿ ತಿಂದರೆ ಬೇಗ ಹಸಿವಾಗಿಬಿಡುತ್ತದೆ. ಅರ್ಥವಾಯಿತೇ? ನಾಳೆಗೆ ಕ್ರೊಸಾಂಟ್ ಬೇಕೇ ಬೇಕು’ ಎಂದು ಎಗರಾಡಿದ.

ಅವಳು ಸುಮ್ಮನೆ ತಲೆಯಾಡಿಸಿದಳು. ನನ್ನ ಗಂಡ ‘ನೋಡು ಕ್ರೊಸಾಂಟ್ ಇಡಲ್ಲ ಅಂದ್ಲು. ಬಯ್ದ ಮೇಲೆ ಹೇಗೆ ದಾರಿಗೆ ಬಂದ್ಲು ನೋಡು!’ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ.

ನಾವು ತಿಂಡಿ ಮುಗಿಸಿ ಮೇಲೆ ಬರುವುದರಲ್ಲಿ ರಿಸೆಪ್ಷನ್‌ನಲ್ಲಿದ್ದ ಹೆಣ್ಣು ಮಗಳು ‘ಮಧ್ಯಾಹ್ನದ ವೇಳೆಗೆ ಈ ಫ್ಲೋರ್‌ನ ರೂಮುಗಳು ಖಾಲಿಯಾಗುತ್ತವೆ. ಒಂದು ಮೂರು ದಿನಕ್ಕೆ ಎರಡು ರೂಮ್‌ಗೆ ಒಟ್ಟು 12 ಸಾವಿರ ಹೆಚ್ಚು ಖರ್ಚು ಬೀಳುತ್ತದೆ. ಪರವಾಗಿಲ್ಲವಾ?’ ಎಂದಳು. ಅರೆಕ್ಷಣ ಹೊಟೆ ಉರಿಯಿತು. ಆದರೆ ಆ ರೂಮ್‌ನಲ್ಲಿ ಉಳಿಯುವುದು ನಮ್ಮಿಂದ ಅಸಾಧ್ಯ ಅನ್ನಿಸಿ ಹಾಳಾಗಿಹೋಗಲಿ, ಅತ್ಲಾಗೆ ಮಾಡಿ ಎಂದೆವು. 

‘ನೀವು ಬಂದ್ ಅಮೇಲೆ ಶಿಫ್ಟ್ ಮಾಡುವುದಾ, ಇಲ್ಲವಾದರೆ ನೀವು ಹೂ ಎಂದರೆ ನಾವೇ ಮಾಡುತ್ತೇವೆ’ ಎಂದಳು. ‘ನಾವು ಪ್ಯಾಕಿಂಗ್ ಮಾಡಿಲ್ಲ ಕಣಮ್ಮಾ. ಬಂದು ಮಾಡಬೇಕಷ್ಟೇ ಈಗ ಸಮಯವಿಲ್ಲ’ ಎಂದೆವು. ಅವಳು ‘ನೀವೇನೂ ಪ್ಯಾಕ್ ಮಾಡಬೇಕಾದ ಅಗತ್ಯವಿಲ್ಲ. ನಮ್ಮವರೇ ಪ್ಯಾಕ್ ಮಾಡುತ್ತಾರೆ’ ಅಂದಳು. ಒಪ್ಪಿಗೆ ನೀಡಿ ಅರ್ಧ ದಿನದ ವಾಕಿಂಗ್ ಸಿಟಿ ಟೂರ್‌ಗೆ ಓಡಿದೆವು.

ಹಿಂದಿನ ದಿನ ಶುರುವಾದ ಮಳೆ ಇನ್ನೂ ಹನಿಯುತ್ತಲೇ ಇತ್ತು. ಹೋಟೆಲ್ಲಿನಿಂದ ಹೊರಬಂದರೆ ಪ್ರಶಾಂತ ರಸ್ತೆ ಕಾಣಿಸಿತು. ರಾತ್ರಿ ಬಂದಾಗ ಕತ್ತಲಾಗಿದ್ದರಿಂದ ಹೇಗಿದೆ ಎಂದು ಗೊತ್ತಾಗಿರಲಿಲ್ಲ. ಈಗ ನೋಡಿದರೆ ಅದು ಒಂದು ರೆಸಿಡೆನ್ಷಿಯಲ್ ಬಡಾವಣೆ. ಒಂದೇ ಒಂದು ನರಪ್ರಾಣಿಯ ಸುಳಿವಿಲ್ಲದ ರಸ್ತೆ. ವಾಹನಗಳಂತೂ ಇಲ್ಲವೇ ಇಲ್ಲ.

ರಾತ್ರಿ ಬೇರೆ ಹೋಟೆಲ್‌ಗೆ ಹೋಗುತ್ತೇನೆ ಎಂದು ವೀರಾವೇಶದಿಂದ ಆವಾಜ಼್ ಹಾಕಿದ್ದೆನಲ್ಲ, ಅದನ್ನೇನಾದರೂ ಸಾಧಿಸಲು ಹೋಗಿದ್ದರೆ ಬಲು ಕಷ್ಟವಾಗುತ್ತಿತ್ತು ಭಾರತಿ, ಆ ರಾತ್ರಿಯಲ್ಲಿ ಆ ಭಾರದ ಲಗೇಜನ್ನು ಹೊತ್ತು ಹೋಟೆಲ್‌ನಿಂದ ಹೊರಬಿದ್ದಿದ್ದರೆ ಈ ಪುಟ್‌ಪಾತ್ ಮೇಲೆ ಮಲಗಬೇಕಿತ್ತು ಎಂದುಕೊಂಡೆ.

ಟ್ಯಾಕ್ಸಿ ನಮಗಾಗಿ ಕಾಯುತ್ತಿತ್ತು. ನಮ್ಮ ಹೋಟೆಲ್ಲಿನ ಆ ಹುಡುಗ ನಾವು ಹೋಗಬೇಕಾದ ಜಾಗವನ್ನು ಹೇಳಿರಬೇಕು ಎಂದು ನಿಶ್ಚಿಂತರಾಗಿ ಕುಳಿತೆವು. ಆದರೆ ನಮ್ಮಪ್ಪ ಇದ್ದಾರಲ್ಲ, ಅವರು ಜಗತ್ತಿನಲ್ಲೇ ಅತ್ಯಂತ ದೊಡ್ಡ ಅನುಮಾನ ಪಿಶಾಚಿ! ಯಾರಿಗೂ ಬಾರದ ಅನುಮಾನವೆಲ್ಲ ಅವರಿಗೆ ಬರುತ್ತಿರುತ್ತದೆ. ಹಾಗಾಗಿ to err on safer side ಎನ್ನುವ ಮೂಲಮಂತ್ರದ ಅವರು ಮತ್ತೆ ಮತ್ತೇ ಅದನ್ನೇ ಕೇಳುತ್ತಲೇ ಇರುತ್ತಾರೆ ಅನುಮಾನ ಪರಿಹಾರ ಮಾಡಿಕೊಳ್ಳಲೋಸುಗ.

ಅವತ್ತೂ ಹಾಗೆಯೇ ಗಂಟಲು ಸರಿಮಾಡಿಕೊಳ್ಳುತ್ತ ‘ಈಗಾಆಆಆಆಆಆಆ ಮತ್ತೆ ನಾವು ಹೋಗ್ತಿರೋದು ಆ ಹೋಟೆಲ್ ತಾನೇ?’ ಎಂದು ಯಾವುದೋ ಹೋಟೆಲ್ಲಿನ ಹೆಸರು ಹೇಳಿದರು. ಅದು ನಮ್ಮ ಪಿಕಪ್ ಪಾಯಿಂಟ್. ಮುಂದೆ ನಡೆದಿದ್ದನ್ನು ಹೇಳಿದ ನಂತರ ನಮ್ಮಪ್ಪನಿಗೆ ಹೀಗೆ ಕೇಳಲು ಯಾವುದೋ ಆರನೆಯ ಇಂದ್ರಿಯ ಪ್ರೇರೇಪಿಸಿದೆ ಎಂದೆಲ್ಲ ಭ್ರಮೆಗೆ ಬೀಳಬೇಡಿ.

ನಮ್ಮಪ್ಪನಿಗೆ ಆ ಆರನೆಯ ಇಂದ್ರಿಯದ ಗೊಡವೆಯೇ ಇಲ್ಲ! ಅವರ ಐದು ಇಂದ್ರಿಯಗಳೇ ಓವರ್ ಟೈಮ್ ಮಾಡಿ ಸಾಕಷ್ಟು ಇಂಥ ಅನುಮಾನಗಳನ್ನು ಹುಟ್ಟಿಸುತ್ತಲೇ ಇರುವುದರಿಂದ, ಇದು ಅವರ ಮಾಮೂಲು ಕತೆಯಷ್ಟೇ! ನಮ್ಮಪ್ಪ ಕೇಳಿದ್ದಕ್ಕೆ ಆ ಡ್ರೈವರ್ ಮಹಾಶಯ ತಲೆಯಾಡಿಸಿದರು ಮೂಗಬಸವನಂತೆ. ನಮ್ಮಪ್ಪನಿಗೆ ನೆಮ್ಮದಿಯಾಯ್ತು… ನಮಗೂ! ಅವರಿಗೆ ನೆಮ್ಮದಿಯಾಗಿಬಿಟ್ಟರೆ ನಮಗೆಲ್ಲ ನೆಮ್ಮದಿಯೇ!

ಅಷ್ಟಾದ ಮೇಲೆ ನಾನು ನೆಮ್ಮದಿಯಿಂದ ಕಿಟಕಿಯಿಂದ ಹೊರಗೆ ನೋಡುತ್ತ ಕುಳಿತೆ. ಕ್ರಾಕೋವ್ ನಗರ ಅತ್ಯಂತ ಸುಂದರವಾಗಿತ್ತು. ವ್ರೋಟ್ಜ಼್ವಾದಂತೆ ಇಲ್ಲಿಯೂ ವಾಹನಗಳ ಹಾರ್ನ್ ಸದ್ದಿಲ್ಲ. ಎಲ್ಲೆಲ್ಲೂ ಮೌನ ಮತ್ತು ಶಾಂತಿ. ನಮ್ಮ ಊರಿಗಿಂತ ತುಂಬ ಭಿನ್ನವಾಗಿದ್ದರೂ ಅದೇಕೋ ನಮ್ಮ ಬೆಂಗಳೂರಿನಲ್ಲಿಯೇ ಎಲ್ಲೋ ಹೋಗುತ್ತಿದ್ದೇವೆ ಅನ್ನುವಷ್ಟು ಪರಿಚಿತ ಭಾವ.

ಬೆಳಗ್ಗೆ ಕೆಲಸಕ್ಕೆ ಹೋಗುವ ಜನಸಂದಣಿ. ಆದರೆ ನಮ್ಮೂರಿನ ಮಾಲಿನ್ಯವಿಲ್ಲ, ಟ್ರಾಫಿಕ್ ಜಾಮ್ ಇಲ್ಲ. ಆದರೂ ತುಂಬ ಆಪ್ತವೆನಿಸುತ್ತಿದ್ದುದು ಯಾಕೆ ಎಂದು ಅರ್ಥವೇ ಆಗಲಿಲ್ಲ. ಕಿಟಕಿಯಾಚೆ ಕಂಡದ್ದನ್ನು ಮನಸ್ಸಿಗೆ ತುಂಬಿಸಿಕೊಳ್ಳುತ್ತ ಹೋದೆ. ಎಂಟು ಹತ್ತು ನಿಮಿಷ ಕಳೆದ ನಂತರ ನಮ್ಮ ಪಿಕಪ್ ಪಾಯಿಂಟ್ ಬಂದಿತು.

ಟ್ಯಾಕ್ಸಿ ಬಿಲ್ 18 ಜ಼್ಲಾಟಿ ಎಂದು ತೋರಿಸುತ್ತಿತ್ತು. ಅಂದರೆ ಸರಿಸುಮಾರು ನಮ್ಮ ದೇಶದ 360 ರೂಪಾಯಿ. ಅಂದರೆ ತಲಾ 90 ರೂಪಾಯಿ ಖರ್ಚು. ಯೂರೋಪ್‌ ಅತ್ಯಂತ ದುಬಾರಿ. ಮುಟ್ಟಿದ್ದಕ್ಕೆಲ್ಲ ರಾಶಿ ರಾಶಿ ತೆತ್ತು ಅಭ್ಯಾಸವಾದ ನಮಗೆ ಇದು ಪರವಾಗಿಲ್ಲ ಕೈಗೆಟಕುವಂತಿದೆ ಅನ್ನಿಸಿತು. ಆ ಹೋಟೆಲ್ ಒಳನುಗ್ಗಿದರೆ ನಮ್ಮಂತೆಯೇ ಕಾಯುತ್ತ ಕುಳಿತ ಒಂದಿಷ್ಟು ಪ್ರವಾಸಿಗರಿದ್ದರು. ಅಲ್ಲಿದ್ದ ರಿಸೆಪ್ಷನ್‌ನಲ್ಲಿ ನಮ್ಮ ಹೆಸರು ಹೇಳಿ ಲಿಸ್ಟ್‌ನಲ್ಲಿ ನೋಡಿ ಎಂದರೆ ನಮ್ಮ ಹೆಸರೇ ಇಲ್ಲ!

ನಮಗೆಲ್ಲ ಆತಂಕ ಶುರುವಾಯಿತು. ಇದು ಹೇಗೆ ಸಾಧ್ಯ ಎಂದು ಯೋಚಿಸುವುದರಲ್ಲೇ ನಮ್ಮಪ್ಪನೆನ್ನುವ ಅನುಮಾನ ಜೀವಿ ‘ಇಲ್ಲಿ ಈ ಹೆಸರಿನ ಇದೊಂದೇ ಹೋಟೆಲ್ ತಾನೇ ಇರುವುದು’ ಎಂದರು. ಅವರು ಕೂಲಾಗಿ ‘ಇಲ್ಲ ಇನ್ನೂ ಎರಡು ಮೂರು ಇದೆ’ ಅಂದರು!

ಓಹ್… ಅಂದರೆ ನಮ್ಮ ಹೆಸರು ಇಲ್ಲಿ ಇಲ್ಲ ಅಂತಾದರೆ ಬೇರೆಯ ಹೋಟೆಲ್ ಇರಬೇಕೇನೋ ಅಂದುಕೊಳ್ಳುತ್ತ ಗಾಭರಿ ಬಿದ್ದೆವು. ಅವರಲ್ಲಿ ಈ ಅನುಮಾನ ಹೇಳಿದರೆ ಅವರು ಅದಕ್ಕೂ ಶಾಂತವಾಗಿ ‘ಇರಬಹುದು ಅನ್ನಿಸುತ್ತದೆ! ನಿಮ್ಮ ಪಿಕಪ್ ಪಾಯಿಂಟ್ ಅದರಲ್ಲಿ ಯಾವುದಾದರೂ ಇರಬೇಕೆನೋ’ ಎಂದರು.

ನಾವಿಲ್ಲಿ ಕಾಣದ ದೇಶದಲ್ಲಿ ದಿಕ್ಕೆಟ್ಟವರಂತೆ ನಿಂತೆವು. ಅರೆ! ಇಷ್ಟು ಸುಲಭಕ್ಕೆ ಹೇಳುತ್ತಿದ್ದಾರಲ್ಲ! ನಾವೀಗ ಆ ಬೇರೆಯ ಅದೇ ಹೆಸರಿನ ಹೋಟೆಲ್ ತಲುಪುವುದು ಹೇಗೆ? ಅದೆಷ್ಟು ದೂರದಲ್ಲಿದೆ? ನಡೆದು ಹೋಗಬಹುದಾ? ಅಥವಾ ಮತ್ತೆ ಟ್ಯಾಕ್ಸಿ ಮಾಡಿಕೊಳ್ಳಬೇಕೇ? ಈ ಮಳೆಯಲ್ಲಿ ಅಲ್ಲಿಗೆ ತಲುಪುವ ಬಗೆ ಹೇಗೆ? ತಡವಾಯಿತೆಂದು ಅವರು ಅಲ್ಲಿಂದ ಹೊರಟು ಬಿಟ್ಟಿದ್ದರೆ? ಹೀಗೆ ನಮ್ಮೊಳಗಿನ ಆತಂಕವನ್ನೆಲ್ಲ ಅವರ ಮುಂದೆ ಹೊರಹಾಕುತ್ತಿದ್ದರೆ ಅವರು ಶಾಂತವಾಗಿ ‘ಇರಿ ನೋಡೋಣ ಗಾಬರಿಯಾಗಬೇಡಿ. ಇನ್ನೇನು ಆ ಟ್ರಾವೆಲ್ಸ್‌ನವರು ಬರುತ್ತಾರೆ. ಅವರಲ್ಲಿ ಎಲ್ಲ ವಿಚಾರಿಸಬಹುದು’ ಎಂದರು.

ಆದರೆ ಅದು ಹೇಗಾಗುತ್ತದೆ… ಗಾಬರಿ ನಮ್ಮ ಮನೆದೇವ್ರು! ನಾವು ಪ್ಯಾನಿಕ್ ಆಗಿ ‘ಆಗ ವಿಚಾರಿಸಿ ಎಂತ ಮಾಡುವುದು? ಅವರು ಹೌದು, ಬೇರೆ ಕಡೆಗೆ ನೀವು ಹೋಗಬೇಕಿತ್ತು ಅಂದುಬಿಟ್ಟರೆ ಆಗ ಅಲ್ಲಿಗೆ ಹೋಗಿ ಸೇರುವುದರಲ್ಲಿ ಆ ಟೀಮ್ ಕೂಡಾ ಹೋಗಿ ಆಗಿರುತ್ತದಲ್ಲವಾ?’ ಹೀಗೆ ಥರಾವರಿಯಾಗಿ ಅಯ್ಯೋ ಅಯ್ಯೋ ಅಂತ ಎದೆ ಬಡಿದುಕೊಂಡು ಕೇಳಲು ಶುರು ಮಾಡಿದೆವು.

ಅವರು ‘ಅದೇ ಹೇಳಿದೆನಲ್ಲ, ಅವರು ಬರುವವರೆಗೆ ಸುಮ್ಮನಿರಿ’ ಅಂದವರೇ ಉಳಿದವರ ಹೆಸರು ಟಿಕ್ ಮಾಡಿಕೊಳ್ಳಲು ಶುರು ಮಾಡಿದರು. ಟಿಕ್ಕಾಗದ ನಾವು ಪ್ಯಾದೆಗಳಂತೆ ನಿಂತೇ ಇದ್ದೆವು…

ಐದು ಸುದೀರ್ಘ ನಿಮಿಷಗಳು ಕಳೆಯುವುದರಲಿ ಒಬ್ಬಳು ಬಂದು ತಾನು ಅವತ್ತಿನ ಟ್ರಾವೆಲ್ ಗೈಡ್ ಎಂದು ಪರಿಚಯಿಸಿಕೊಂಡಳು. ನಾವು ಆಸರೆ ಸಿಕ್ಕಂತೆ ಅವಳತ್ತ ಓಡಿದೆವು. ಅವಳು ಮಾತನಾಡುತ್ತಿರುವುದರಲ್ಲೇ ಬಸ್ಸೊಂದು ಹೋಟೆಲ್ ಮುಂದೆ ನಿಂತಿತು. ಆಕೆ ಲಿಸ್ಟ್ ಹಿಡಿದು ಒಬ್ಬೊಬ್ಬರ ಹೆಸರಾಗಿ ಕರೆಯಲಾರಂಭಿಸಿದಳು. ನಾವು ಅವಳ ಬಳಿ ಹೋಗಿ ಹೀಗೀಗಾಗಿದೆ … ಈಗ ನಮ್ಮದೇನು ಗತಿ ಎಂದೆವು.

ಅವಳು ಚಕಚಕನೆ ಬೇರೆ ಲಿಸ್ಟ್ ನೋಡಿ ‘ಓಹ್ ನಿಮ್ಮದು ಆ ಹೋಟೆಲ್ ಬಳಿ’ ಎಂದು ಉದ್ಗಾರ ತೆಗೆದಳು. ಮತ್ತೆ ನಮ್ಮ ಗತಿ ಏನು ಈಗ ಎಂದು ಅಂಡು ಸುಟ್ಟ ಬೆಕ್ಕಿನಂತೆ ಹಾರಾಡುವುದರಲ್ಲಿ ಅವಳು ‘ನೋಡೋಣ ಇರಿ. ಆ ಹೋಟೆಲ್‌ನಿಂದ ಹೊರಡುವುದೂ ನಮ್ಮದೇ ಏಜೆನ್ಸಿಯ ಬುಕ್ಕಿಂಗೇ. ಏನೋ ಒಂದು ಪರಿಹಾರ ಹುಡುಕೋಣ’ ಎಂದಳು.

ಒಂಥರಾ ಜೀವಸಂಚಾರ… ಮುಳುಗುವವರಿಗೆ ಹುಲ್ಲುಕಡ್ಡಿ ಸಿಕ್ಕಿದಂತಾಯಿತು. ಕಾಯುತ್ತ ನಿಲ್ಲುವಾಗಲೇ ಅಲ್ಲಿ ಕಾಯುತ್ತ ಇದ್ದವರೆಲ್ಲ ಒಬ್ಬೊಬ್ಬರಾಗಿ ಬಸ್ ಸೇರಿದರು. ಅದಾದ ನಂತರ ಎಲ್ಲೆಲ್ಲಿಗೋ ಕರೆ ಮಾಡಿ ಅವರ ಭಾಷೆಯಲ್ಲಿ ಮಾತನಾಡಲು ಶುರು ಮಾಡಿದಳು. ಒಂದೇ ಒಂದು ಇಂಗ್ಲಿಷ್ ಪದವಿಲ್ಲದ ಆ ಮಾತುಕತೆಯಲ್ಲಿ ನಮಗೆ ಏನೆಂದರೆ ಏನೂ ಅರ್ಥವಾಗಲಿಲ್ಲ.

ನಮ್ಮ ಹೋಟೆಲ್ ಹುಡುಗನೂ ಹೀಗೆ ಕಾಲ್ ಮಾಡುವಾಗ ನಮ್ಮದೇ ಬಗ್ಗೆ ವಿಚಾರಿಸುತ್ತಿದ್ದಾನೆ ಎಂದುಕೊಂಡಿದ್ದೆವಲ್ಲ ಪೆದ್ದುಪೆದ್ದಾಗಿ, ಈಗಲೂ ಹಾಗಾಗಬಾರದು ಎಂದುಕೊಂಡು ಮಧ್ಯೆ ಮಧ್ಯೆ ಏನಾಯ್ತು ಎಂದು ಕೇಳಲಾರಂಭಿಸಿದೆವು. ಅವಳು ಇರಿ ಅನ್ನುವಂತೆ ಕೈಸನ್ನೆ ಮಾಡುತ್ತಾ ಕರೆಗಳನ್ನು ಮಾಡುತ್ತಲೇ ಹೋದಳು.

ಹಾಗೆ ಮಾಡುತ್ತ ಮಾಡುತ್ತ ಅವಳು ‘ನಾವೇನ್ಮಾಡಣ ಸೋಮಿ ನಿಮ್ಮ ಹೆಸರು ಇಲ್ದಿದ್ರೆ’ ಎನ್ನುತ್ತ ಓಡಿ ಹೋಗಿಬಿಟ್ಟರೆ ಎನ್ನುವ ಆತಂಕದಲ್ಲಿ ನಾವು ಜಾತ್ರೆಯಲ್ಲಿ ಅಮ್ಮನ ಸೆರಗು ಹಿಡಿದು ನಡೆವ ಮಕ್ಕಳ ಹಾಗೆ ಅವಳು ಮೂರು ಹೆಜ್ಜೆ ಅತ್ತ ನಡೆದರೆ, ನಾಲ್ಕು ಹೆಜ್ಜೆ ಇತ್ತ ನಡೆದರೆ ಅವಳ ಜೊತೆಗೇ ನಡೆದಾಡಲಾರಂಭಿಸಿದೆವು.

ಒಂದೈದು ನಿಮಿಷ ಹಾಗೇ ಕಳೆಯುವುದರಲ್ಲಿ ಮಳೆ ಬೇರೆ ಜೋರಾಯ್ತು! ತಥ್ ಇದೊಂದು ಬಾಕಿಯಿತು ಶಿವಾ ಎಂದು ಬಯ್ದುಕೊಂಡೆವು. ಆಕೆ ಇದ್ದಕ್ಕಿದ್ದಂತೆ ‘ಆ ಟೀಮ್ ಹೊರಟುಬಿಟ್ಟಿದೆಯಂತೆ’ ಅಂದಳು. ಆಂಡವಾ ಇನ್ನೇನು ಗತಿ ಎಂದುಕೊಳ್ಳುವುದರಲ್ಲೆ ಆ ಆಂಡವ ಅವಳಿಗೆ ಒಳ್ಳೆಯ ಬುದ್ದಿ ಕೊಟ್ಟೇ ಬಿಟ್ಟನೇನೋ ಎನ್ನುವಂತೆ ನಡೆಯಿರಿ. ನಮ್ಮ ಬಸ್ಸನ್ನೇ ಹತ್ತಿ. ಹೇಗೂ ಸೀಟ್ ಖಾಲಿ ಇದೆ’ ಎಂದಳು.

ಅಬ್ಬ ಎಂತ ದಯಾಮಯಿ ನೀನು! ಎಂದುಕೊಳ್ಳುತ್ತ ಬಸ್ಸನ್ನೇರಿದೆವು. ನಮಗಾಗಿ ಅವರನ್ನೆಲ್ಲ ಕಾಯಿಸಿದ್ದರಿಂದ ಬಸ್‌ನಲ್ಲಿ ಕುಳಿತಿದ್ದವರಿಗೆಲ್ಲ ಮೈ ಉರಿದಿದ್ದಿರಬೇಕು. ನಾವು ಹತ್ತಿದಾಗ ನಮ್ಮನ್ನು ವಿಲನ್‌ಗಳ ರೀತಿ ನೋಡುತ್ತಿದ್ದರು. ‘ಸಾಯಲಿ ಹೋಗಿ, ನಮ್ಮದೇನು ತಪ್ಪಿಲ್ಲ ಇದರಲ್ಲಿ. ನಿಮಗೆ ಒಳ್ಳೆಯವರಾಗಿ ಸಾಧಿಸುವುದೇನಿದೆ? ನಿಮ್ಮ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಬೇಕಾಗಿದೆಯಾ?’ ಎಂದುಕೊಳ್ಳುತ್ತ ಸೀಟಿಗೆ ಹೋಗಿ ಕುಕ್ಕರಿಸಿದೆ.

। ಮುಂದಿನ ವಾರಕ್ಕೆ ।

‍ಲೇಖಕರು ಬಿ ವಿ ಭಾರತಿ

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: