ಭಾವೈಕ್ಯದ ಹಾಡು ತಂದ ಜಂಗಮ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ನಾನು ಪ್ರತಿ ದಿನ ಬೆಳಿಗ್ಗೆ ಎದ್ದು ಸೂರ್ಯನ್ನ ಕಾಣುವ ಮೊದಲೇ ಅಪಾರ್ಟ್ಮೆಂಟ್ ನ ಕೆಳ ಮೂಲೆಯಿಂದ ಗುರುಬಸಪ್ಪನ ತತ್ವ ಪದ ಕೇಳುತ್ತಿರುತ್ತದೆ. ಬಾಲ್ಕನಿಯಿಂದ ಸ್ವಲ್ಪ ಮುಂದೆ ಎಟುಕಿ ನೋಡಿದರೆ ಸ್ವಚ್ಛ ಮಿಂದು, ಬಗಲಲ್ಲಿನ ಜನಿವಾರಕ್ಕೆ ಕಟ್ಟಿದ ಲಿಂಗವನ್ನ ಬಿಡಿಸಿ ಅಂಗೈಯಲ್ಲಿ ಹಿಡಿದು, ಅದಕ್ಕೆ ನೀರು ಹೊಯ್ದು, ಹಾಸಿದ ಚಾದರದ ಮೇಲೆ ಕೂತಿರುವ ರೀತಿಗೆ ಥೇಟು ಬಸವಣ್ಣನೇ ಮಣಿಪಾಲದಲ್ಲಿ ಕೂತು ಕಲ್ಯಾಣದ ಹಾಡು ಹಾಡುತ್ತಿರುವಂತಿರುತ್ತದೆ.

ತನ್ನ ತಾತ ಮುತ್ತಾತರ ಕಾಲದಿಂದಲೂ ಜಂಗಮರಾಗಿ ಊರೂರು ಅಲೆಯುತ್ತಿದ್ದ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ಗುರು ಬಸಪ್ಪನೂ ಪೂಜೆ, ಪುನಸ್ಕಾರ, ಭಿಕ್ಷಾ ಅಂತಲೇ ಬೂದಿಹಾಳದಲ್ಲಿ ಬದುಕಿದ್ದವನು. ಅಲ್ಲಿ ಭಿಕ್ಷಾ ಹಾಕುವವರು  ಊರು ಬಿಟ್ಟ ಮೇಲೆ ಅವರ ದಾರಿಯನ್ನೇ ಹಿಡಿದು ಅಲೆಯುತ್ತ ಅಲೆಯುತ್ತಾ ಸದ್ಯಕ್ಕೆ ಮಣಿಪಾಲದಲ್ಲಿ ಸ್ಥಾವರನಾಗಿದ್ದಾನೆ.  ಆದರೆ ಅಲ್ಲಿಂದ ತಂದ ಬಸವ ತತ್ವದ ಪದವನ್ನು ಎಡೆಬಿಡದೆ ಇಲ್ಲಿಯೂ ಹಾಡುತ್ತಾನೆ.

ನಮಗೆ ದೊರಕಿದ ಈ ಬಾಳು ದುರ್ಲಭವೋ…

ಮಾನವ ಜನ್ಮದಿ ಹುಟ್ಟಿ ಬರುವುದು ದುರ್ಲಭವೋ… 

ಕೊಟ್ಟನೋ ಗುರು ಎಮಗೆ ಇದ ಮಾಡಿದ ಫಲದಿಂದ…

ಇದರೊಳು ನಾ-ನೀನೆಂಬುದು  ಬೇಡವೋ…                             

ಗುರು ಬಸಪ್ಪ ತನಗೆ ಬುದ್ದಿ ಬರುವ ಮೊದಲೇ ಗುರುಮಠ ಸೇರಿ ಜಂಗಮ ದೀಕ್ಷೆ ಹೊಂದಿದವನು. ಬೂದಿಹಾಳದ ಮನೆ ಮನೆಯಲ್ಲೂ ಒಳ್ಳೆಯದು , ಕೆಟ್ಟದ್ದು, ಸುಖ, ದುಃಖ, ಎಲ್ಲಕ್ಕೂ ಅವನಿರುತ್ತಿದ್ದ. ಮದುವೆ, ಮುಂಜಿ, ಹುಟ್ಟು, ಸಾವು, ದೇವರು, ದಿಂಡರಿಗೆ ಸಂಬಂದಿಸಿದ ಕರ್ಮಗಳೆಲ್ಲ ಅಲ್ಲಿ ಅವನದ್ದೇ. ಅದೇ ಭಿಕ್ಷಾನ್ನದ ಪ್ರೀತಿಯಲ್ಲಿ ಬದುಕುತ್ತಿದ್ದ ಜಂಗಮನ ಕೈ, ಮಣಿಪಾಲದಲ್ಲಿ ಕಲ್ಲು, ಮಣ್ಣಿನ ಅಡಿಗೆ, ಸಿಕ್ಕ ಸಿಕ್ಕ ಕೆಲಸಗಳ ಜೊತೆಗೆ ಹೊಂದಿಕೊಳ್ಳುತ್ತಿದೆ.

ಊರು ಬಿಟ್ಟು ಪರವೂರಿಗೆ ಬಂದಿದ್ದರೂ ತನ್ನೂರಿನ ಮೇಲು ಕೀಳೆನ್ನದ ಒಟ್ಟಾಗಿ ಬದುಕುವ ಭಾವದಲ್ಲೇ ಅವನಿರುವುದು. ಅವನಿಗೆ ಇಲ್ಲಿ ಎದುರಾಗುವ ಎಲ್ಲರೂ ಒಂದೇ. ” ಅವ್ರಿಗ್ ನಾವ್ ಒಪ್ಗಿ ಆಗ್ತಿವೋ ಇಲ್ಲೋ, ನಮಗಂತೂ ಎಲ್ಲರೂ ಒಂದೇ ಅದರೀ. ಇರೋ ಮೂರ್ ದಿನ ಏನ್ ಭ್ಯಾದ ಮಾಡೋದು ತಿಳಿವಲ್ದು” ಎಂದು ಬಸವ ತತ್ವದ ಸಾಧಕನಂತೆ ನುಡಿಯುತ್ತಾನೆ.

ಮಣಿಪಾಲಕ್ಕೆ ಕಾಲಿಟ್ಟು ಜಂಗಮನಾಗಿಯೇ ಬದುಕಲು ಆಗುತ್ತಾ? ಅವನನ್ನೇ ಕಾದಿದ್ದು ಭಿಕ್ಷಾನ್ನ ಹಾಕಲಿಕ್ಕೆ ಈ ದೊಡ್ಡ ಊರಲ್ಲಿ ಅವನ ಜಂಗಮತ್ವದ ಅಸ್ತಿತ್ವವೇ ಇಲ್ಲ. “ನನ್ ತರನ ಮೊದ್ಲು ಬಂದಿಷ್ಟು ಮಂದಿ, ಇಲ್ಲಿ ಮನಿ ಮನಿಗ್ ಭಿಕ್ಷಾನ್ನಕ್ ಅಡ್ಡಾಡಿ ಸೋತ್ ಹೋಗ್ಯಾರ. ನಂಗಂತೂ ಇಲ್ಲಿ ಗುರು ಮಠನೂ ಇಲ್ಲ, ನಾವಿಲ್ಲಿಗ್ ಅಜ್ಜರೂ ಅಲ್ಲ ನೋಡವ್ವ. ಕೂಲಿ ಬಿಟ್ ಬೇರೇನಾದ್ರೂ ದಾರಿ ಅದೇ ಅಂತೀರೇನ್ರೀ?” ಎಂದು ನೇರವಾಗಿ ಹೇಳಿದ.

ನಾನು ಕಾಲೇಜಿಗೆ ತಯಾರಾಗಿ ಬರುವ ಹೊತ್ತಿಗೆಲ್ಲ ಸೈಕಲ್ ತುಳಿದು ಗುರು ಬಸಪ್ಪ ಉಡುಪಿ ಬಸ್ ಸ್ಟಾಂಡ್ ಸೇರಿ ಬಿಡುತ್ತಾನೆ. ಅಲ್ಲಿ ತನ್ನಂತೆಯೇ ಕೆಲಸ ಹುಡುಕಿ ಬರುವ ಎಲ್ಲರೊಂದಿಗೆ ಕೂಡಿ, ಚಾ ಕುಡಿದು ಅವತ್ತಿನ ದುಡಿಮೆಗೆ ತಯಾರಾಗಿ ನಿಲ್ಲುತ್ತಾನೆ.

ಬೆಳಿಗ್ಗೆ ಬಸ್ ಸ್ಟಾಂಡ್ ನಲ್ಲಿ ಉದ್ದಕ್ಕೂ ನಿಂತರೆ ಕೆಲಸಗಾರರ ಅವಶ್ಯಕತೆ ಇರುವವರು ಬಂದು ಅವರ ಕೆಲಸಕ್ಕೆ ರೇಟು ನಿಗದಿ ಮಾಡಿ ಆ ದಿನಕ್ಕೆ ಖರೀದಿ ಮಾಡುತ್ತಾರೆ.

“ನಮ್ಮ ಊರಲ್ಲಿ ನನ್ನ ‘ಅಜ್ಜಾರೆ’ ಅಂತೆಲ್ಲ ಪ್ರೀತಿಯಿಂದ ಮಾತಾಡಿಸ್ತಾರೆ. ನಾವೂನೂ ಬಡವ, ಬಲ್ಲಿದ, ಆ ಜಾತಿ, ಈ ಜಾತಿ, ಅಂತೆಲ್ಲ ನೋಡದೆ ಎಲ್ಲರ ಮನೆಯ ಖುಷಿ ದುಃಖದಲ್ಲೂ ಒಂದಾಗಿ ಇರೋರು. ಆದರೆ ಈ ಊರಲ್ಲಿ ಮಾತ್ರ ನಾವು ಮಷೀನುಗಳಂತೆ. ನಮ್ಮೋರು ಅಂತ ಪರಿಚಯ, ಪ್ರೀತಿ ಎಲ್ಲಿ?

ದಿನ ಬೆಳಿಗ್ಗೆ ಹತ್ತಿರದ ಮೂಲೆ ಮೂಲೆಯಿಂದ ಎದ್ದು ಉಡುಪಿ ಬಸ್ ಸ್ಟಾಂಡ್ ನಲ್ಲಿ ನನ್ನಂತೆ ಕೆಲಸ ಅರಸುವ ಪರದೇಶಿಗಳು ನೆರೆದರೆ, ಅದೊಂತರ ಸಂತೆ. ಆ ಸಂತೆಯಲ್ಲಿ ನನ್ನ ಗುರುತು ಹಿಡಿಯುವ ಅವಶ್ಯಕತೆ ಯಾರಿಗೂ ಇಲ್ಲ. ನನಗೆ ಅವರ್ಯಾರೋ. ಅವರಿಗೆ ನಾನ್ಯಾರೋ ” ಎನ್ನುವಾಗ ಊರನ್ನು ಮೀರಿದ್ದರೂ ತನ್ನ ಸಮುದಾಯ ಜೀವನದ ರೂಡಿಯನ್ನು ಮೀರಿಲ್ಲ ಎನ್ನಿಸುತ್ತಾನೆ.

ಮಣಿಪಾಲ ಲಕ್ಷಾಂತರ ಜನಸಂಖ್ಯೆಯ ಊರು. ಇಲ್ಲಿ ಬೆಳಿಗ್ಗೆ ಇಂದ ಸಂಜೆವರೆಗೂ ಯಾಂತ್ರಿಕವಾಗಿ ಓಡಾಡುವುದೇ ದಿನಚರಿ. ರಾತ್ರಿಗಳೂ ಬೆಳಗಿನಷ್ಟೇ ಬಿರುಸು. ರಾತ್ರಿ ಹಗಲಿಗಿರುವಷ್ಟೇ ಸಾಮ್ಯತೆ ಇಲ್ಲಿ ಎಲ್ಲರ ಬದುಕುಗಳ ಮದ್ಯೆ ಇಲ್ಲ. ಅಷ್ಟು ಜನರನ್ನ ಒಡಗೂಡಿಸಿಕೊಂಡಿದ್ದರೂ ನಾನು ನೀನು ಎಂಬ ಅಂತರದ ಗೆರೆ ಇದ್ದೆ ಇದೆ.

ಬಸಪ್ಪನ ಬಾಯಿಂದ ಬರುವ ಹಾಡೆಲ್ಲವೂ ಈ ಅಂತರಗಳನ್ನು ಮೀರುವ ಗುರಿಯಿಟ್ಟುಕೊಂಡಿದ್ದರೂ ಅವ ಮಾತ್ರ ಈ ಊರಿಗೆ ಬಂದು ಅದೇ ಬಿರುಕಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಸಂಬಳ ಕೊಡುವಷ್ಟು ಹೊತ್ತು ಕೂಲಿ ಮಾಡುವವರಾಗಿರುವುದಷ್ಟೇ ಅವರ ಗುರುತು. ಮತ್ತೆ ಮಾರನೇ ದಿನ ಹೊಸ ಮಾಲಕ. ಇವರು ಮಾತ್ರ ಸ್ಥಿರ ಗುರುತಿಲ್ಲದ ಕೂಲಿಯವರು. ತನ್ನೂರಿನ ಜೊತೆಗೆ ಬಿಟ್ಟು ಬಂದ ಹೆಸರು, ಕಾಯಕ, ಆಚರಣೆ, ಸಮುದಾಯ ಎಲ್ಲವನ್ನೂ ಯಾರೂ ಗುರುತಿಸದ ಈ ಊರಿನಲ್ಲಿ ಬಸಪ್ಪ ಅತಿಯಾಗಿ ನೆನಪಿಸಿಕೊಳ್ಳುತ್ತಾನೆ. 

ಊರಲ್ಲಿ ಹೆಗಲಿಗೆ ಜೋಳಿಗೆ, ಕೈಯಲ್ಲಿ ಕೋಲು, ಹಣೆಗೆ ವಿಭೂತಿ, ಕಾಲಲ್ಲಿ ಗೆಜ್ಜೆ, ಬಾಯಲ್ಲಿ ಬದುಕಿನ ಪದವಿದ್ದರೆ ಆ ದಿನಕ್ಕಾಗುವಷ್ಟು ಬೇಳೆ ಕಾಳು ಹೇಗಾದರೂ ಆಗುತ್ತದೆ. ಇಲ್ಲಿ ದಿನ ದಿನವೂ ಹೊಸ ದುಡಿಮೆಯ ಸಾಧನಗಳಿಗೆ ಒಗ್ಗಿಕೊಳ್ಳಬೇಕು. ಗುರು ಮಠದಲ್ಲಿ ಕಲಿತ ಪದ, ಅಪ್ಪ ಅಜ್ಜರಿಂದ ಕಲಿತ ಹಾಡು ಎಲ್ಲವೂ ಇವುಗಳೆಲ್ಲದರ ಮದ್ಯೆ ಮರೆತೇ ಹೋಗುತ್ತದೆ.

ಜಂಗಮರಾಗಿ ಬದುಕುವುದು ಕುಟುಂಬಕ್ಕೆ ತಾಗಿದ್ದು. ಆದರೆ ಇದ್ದಷ್ಟೇ ಇರಲಿ ಬದುಕಿಗೆ, ಅನ್ನೋದನ್ನ ಮೀರಿ ಜೀವನದ ಅವಶ್ಯಕತೆ ಇಲ್ಲಿ ತಂದಿಟ್ಟಿದೆ. ಇಲ್ಲೂ ನಾನು ಜಂಗಮನೇ. ಉಡುವ ಬಟ್ಟೆ, ಕಾಯಕ ಬೇರೆ ಆಗಬಹುದು ಆದರೆ ಬಗಲಲ್ಲಿನ ಗುರು ನಡೆಸಿಕೊಡುತ್ತಾನಷ್ಟೆ ಎನ್ನುತ್ತಾ ನಂಬಿಕೆಯ ಮಾತನಾಡುತ್ತಾನೆ.

“ನಾವ್ ನಂಬ್ ಕೊಂಡವರ್ ಯಾವ್ ಕಾಲಕ್ ಊರ್ ಬಿಟ್ರೋ ನಾನೂ ಅವ್ರ್ ಹಿಂದೇನಾ ಇಲ್ಲಿಗ್ ಬಂದ್ ಕುಂತಿವ್ನ್ ನೋಡ್ರಿ. ನಮ್ ಬಸವಣ್ಣನ್ ಪದ ನನ್ ನಾಲಗೀ ಮೆಲನೇ ಕೊನಿ ಆಗ್ತದೇನೋ. ಹೊಟ್ಟಿ ಹೊತ್ಕಂಡ್ ಊರ್ ಬಿಡೋವಾಗ ಇವೆಲ್ಲ ಎಲ್ ಹೊಳಿತಾವು? ಸದ್ಯಕ್ ನನ್ನ ಅಣ್ಣ ತಮ್ಮಂದ್ರು ಊರೋಳಗ್ ಹಾಡ್ಕೊಂಡು ತಿರುಗ್ತಾರಾ ಅದ್ರ ಅವ್ರ ಮಕ್ಕಳೆಲ್ಲ ನನ್ ಮಕ್ಳ ಬೆನ್ ಹಿಡ್ಕೊಂಡ್ ಈ ಕಡಿನ ಬರ್ಲಿಕ್ ಹತ್ತರ” ಎಂದು ಮಾತು ಮುಗಿಸಿದ.

ಕರೆಂಟ್ ಹೊಡೆದು ಕಾಲು ಸುಟ್ಟುಕೊಂಡು ಮಲಗಿದ್ದ ದಿನ ಮಾತ್ರ ನನ್ನ ಹತ್ತಿರ ಗೋಳಾಡಿ ಅತ್ತು ಬಿಟ್ಟ. ತಿರುಗುವ ತನಗೆ ಬಗಲ ಲಿಂಗ ಮತ್ತು ನಡೆಯುವ ಕಾಲಿಲ್ಲದೆ ಜೀವನವೇ ಉಂಟಾ? ಅನ್ನುವಾಗ ಇವತ್ತಲ್ಲ ನಾಳೆ ತನ್ನ ಸಮುದಾಯವನ್ನ ಸೇರಿಕೊಳ್ಳಲೇ ಬೇಕಲ್ಲ ಎಂಬುದು ಬಸಪ್ಪನ ನಂಬಿಕೆ ಎಂಬುದು ಅರ್ಥವಾಗುತ್ತಿತ್ತು.

ಅವರ ಕಥೆಗಳನ್ನು ಕೇಳಿ ಕರುಣೆ ತೋರಿಸುವುದು, ಆಗೊಮ್ಮೆ ಈಗೊಮ್ಮೆ ಅವರ ವಿಷಯದಲ್ಲಿ ಧಾರಾಳಿಗರಗುವುದೆಲ್ಲವೂ ನಮಗೆ ಗಳಿಗೆಗಳಷ್ಟೇ, ಅವನಂತೆ ಎಲ್ಲವನ್ನೂ ಒಳಗೊಳ್ಳುವ ತತ್ವಕ್ಕೆ ನಾವಿನ್ನೂ ಬಹಳ ದೂರವಿದ್ದೇವೆ.

ನಿರ್ಮಲವಾದ ಮನಕೆ ಕರ್ಪುರದಾರತಿ…

ಜನನ ಮರಣ ರಹಿತ ಜಂಗಮಗೆ ಬೆಳಗೀರೋ…

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಒಳ್ಳೆ ಬರಹ ಸುಷ್ಮಿತಾ ಮೇಡಂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: