ಬೆಟ್ಟಯ್ಯನ ವೃತ್ತಾಂತ

ನಾನು ಕೆಲಸ ಮಾಡಿದ ಪಶು ಆಸ್ಪತ್ರೆಯೊಂದರಲ್ಲಿ ಬೆಟ್ಟಯ್ಯನೆಂಬ ಸಹಾಯಕನಿದ್ದ.

ಬೆಟ್ಟಯ್ಯ ನನಗಿನ್ನ ಸುಮಾರು ಇಪ್ಪತ್ತು ವರ್ಷದಷ್ಟು ದೊಡ್ಡವನಿದ್ದು ಯಾವಾಗಲೂ ಒಂದು ಖಾಕಿ ನಿಕ್ಕರು ಮತ್ತು ಅಂಗಿ ಹಾಕಿಕೊಂಡಿರುತ್ತಿದ್ದ. ಬಹಳ ವರ್ಷಗಳಿಂದ ಒಂದೇ ಸ್ಥಳದಲ್ಲಿದ್ದುದರಿಂದ ಇಡೀ ತಾಲ್ಲೂಕಿನಲ್ಲಿ ಪರಿಚಿತನಾಗಿದ್ದ. ಆಸ್ಪತ್ರೆಗೆ ಬಂದ ರೈತರನ್ನು ಚೆನ್ನಾಗಿ ಮಾತನಾಡಿಸುತ್ತ ಸ್ನೇಹದಿಂದಿರುತ್ತಿದ್ದ.

ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿಯೂ ಇಲ್ಲದಾಗ ರೈತರಿಗೆ ಟಿಂಚರ್, ಹತ್ತಿ, ಮುಲಾಮು, ಜಂತು ಔಷಧಿ ಇತ್ಯಾದಿ ಕೊಟ್ಟು ಕಳುಹಿಸುತ್ತಿದ್ದ. ಇದರಿಂದ ರೈತರು ಅನಾವಶ್ಯಕವಾಗಿ ಆಸ್ಪತ್ರೆಯ ಬಳಿ ಕಾದು ಕುಳಿತು ಸಮಯ ಹಾಳು ಮಾಡಿಕೊಳ್ಳುವುದು ತಪ್ಪುತ್ತಿತ್ತು.

ನಾನು ಚಿಕಿತ್ಸೆಗೆ, ವ್ಯಾಕ್ಸಿನೇಶನ್‌ಗೆ ಅಥವಾ ಇನ್ನಾವುದೇ ಕೆಲಸಕ್ಕೆ ಪ್ರವಾಸ ಹೋದರೂ ಬೆಟ್ಟಯ್ಯ ನನ್ನ ಜೊತೆ ಬೈಕಿನಲ್ಲಿರುತ್ತಿದ್ದ. ಎಲ್ಲಿಗೋದರೂ ಬೆಟ್ಟಯ್ಯನನ್ನು ಕರೆದೊಯ್ಯುತ್ತಿದ್ದೆ. ಆದರೆ ಮೆಕ್ಯಾನಿಕ್ ಶಾಪಿಗೆ ಅವನನ್ನು ಕರೆದುಕೊಂಡು ಹೋಗಲು ನನಗೆ ಭಯವಾಗುತ್ತಿತ್ತು. ಯಾಕೆಂದರೆ ಬೈಕಿನ ಮಡ್‌ಗಾರ್ಡ್, ಚೈನ್‌ಕೇಸ್, ಡಿಕ್ಕಿ ಎಲ್ಲಿ ತೂತು ಕಂಡರೂ ಅದಕ್ಕೆ ಸರಿಹೊಂದುವ ಒಂದೊಂದು ನೆಟ್ ಬೋಲ್ಟನ್ನು ತಿರುವಿಬಿಡುತ್ತಿದ್ದ.

ಬೇಡ ಎಂದರೂ ಕೇಳುತ್ತಿರಲಿಲ್ಲ. “ಗಾಡಿ ಬಿಗಿ ಬರುತ್ತೆ ಸಾರ್” ಎಂದು ನನಗೆ ಕಿವಿಯಲ್ಲಿ ಹೇಳುತ್ತಿದ್ದ. ಆದರೆ ಬೈಕು ಹೊರಟ ಕೂಡಲೆ ಆ ನೆಟ್ಟು ಬೋಲ್ಟುಗಳೆಲ್ಲ ಸಡಿಲವಾಗಿ ‘ಜಳ್ ಜಳ್’ ಎಂದು ಶಬ್ಧ ಮಾಡುತ್ತಿದ್ದವು! ಆಸ್ಪತ್ರೆಗೆ ವಾಪಸು ಬಂದ ಮೇಲೆ ವಿವಿಧ ನಂಬರಿನ ಸ್ಪಾಯನರ್ ಬಳಸಿ ಆ ನೆಟ್ಟು ಬೋಲ್ಟುಗಳನ್ನೆಲ್ಲ ತೆಗೆದುಹಾಕಬೇಕಾಗುತ್ತಿತ್ತು!

ಅನಕ್ಷರಸ್ಥನೂ, ಮುಗ್ಧನೂ ಆಗಿದ್ದ ಬೆಟ್ಟಯ್ಯನಿಗೆ ನನ್ನ ಹೆಸರನ್ನು ಹೇಳಲು ಬರುತ್ತಿರಲಿಲ್ಲ. ‘ಬಷೀರ್ ಸಾಹೇಬ್ರು’ ಎಂದು ಮಾತ್ರ ಹೇಳುತ್ತಿದ್ದ. ಮಿರ್ಜಾ ಬಷೀರ್ ಎಂದು ಒಂದೇ ಉಸಿರಿನಲ್ಲಿ ಹೇಳಲು ಅವನಿಗೆ ಕೊನೆಗೂ ಆಗಲಿಲ್ಲ! ಎಷ್ಟು ಸಲ ಹೇಳಿಕೊಟ್ಟರೂ ಅವನು ಹೆಲ್ಮೆಟ್‌ಗಳಿಗೆ ‘ತಲ್ಮೆಟ್ಟು’ ಎಂದೇ ಹೇಳುತ್ತಿದ್ದ.

ಬೆಟ್ಟಯ್ಯನ ಹೆಂಡತಿ ಸತ್ತು ಹೋಗಿ ಎಷ್ಟೋ ವರ್ಷಗಳಾಗಿದ್ದವು. ಆದರವನು ಮರು ಮದುವೆಯಾಗಿರಲಿಲ್ಲ. ಇದ್ದ ಒಬ್ಬ ಮಗ ಕಾಂತನನ್ನು ಬಹಳ ಮುದ್ದು ಮಾಡಿ ಬೆಳೆಸಿದ್ದ. ಪ್ರೀತಿ ಅತಿಯಾಗಿ ಕಾಂತ ಸ್ಕೂಲಿಗೆ ಎಂದೂ ಹೋಗಿರಲಿಲ್ಲ. ಓದು ಬರಹ ಅಂಕಿ ಸಂಖ್ಯೆಗಳೂ ಸಹ ಅವನಿಗೆ ತಿಳಿಯುತ್ತಿರಲಿಲ್ಲ. ಊರಿನ ಕೆಲವು ಹೋಟೆಲು ಅಂಗಡಿಗಳಲ್ಲಿ ಕಾಂತನು ಕೇಳಿದ್ದು ಕೊಡಬೇಕೆಂದೂ, ದುಡ್ಡನ್ನು ಅವನ ಬಳಿ ತೆಗೆದುಕೊಳ್ಳಕೂಡದೆಂದೂ, ತಾನೇ ಕೊಡುವೆನೆಂದೂ ಬೆಟ್ಟಯ್ಯ ತಾಕೀತು ಮಾಡಿದ್ದ! ಇದರಿಂದ ಕಾಂತ ಇನ್ನಷ್ಟು ಹಾಳಾಗಿದ್ದ.

ಕಾಂತನಿಗೆ ಇಪ್ಪತ್ತು ವರ್ಷದ ಮೇಲೆ ವಯಸ್ಸಾಗಿತ್ತು. ಅವನು ತೆಳ್ಳನೆಯ ಮತ್ತು ಗಿಡ್ಡ ದೇಹದವನಾಗಿದ್ದ. ಬುದ್ಧಿಮಾಂದ್ಯನಲ್ಲದಿದ್ದರೂ ಕೆಲವೊಮ್ಮೆ ಬಾಲಿಶವಾಗಿ ವರ್ತಿಸುತ್ತಿದ್ದ. ಹೇಳಿದ ಮಾತನ್ನೇ ಎರಡು ಮೂರು ಸಲ ಪುನರಾವರ್ತಿಸುತ್ತಿದ್ದ. ಮಾತು ಮಾತಿಗೆ ನಗುತ್ತಿದ್ದ ಮತ್ತು ನಕ್ಕಾಗ ಎರಡೂ ಕೈಗಳಿಂದ ಮುಖ ಮುಚ್ಚಿಕೊಳ್ಳುತ್ತಿದ್ದ.

ಅದು ನಿಷ್ಕಲ್ಮಶ ಮುಗ್ಧ ನಗುವಾಗಿದ್ದರೂ ಅವನ ಚಿಕ್ಕ ಗಾತ್ರ ಮತ್ತು ಪೆದ್ದುತನದಿಂದಾಗಿ ಹೊಸಬರಿಗೆ ಬುದ್ಧಿಮಾಂದ್ಯನ ನಗುವಿನಂತೆ ಕಾಣುತ್ತಿತ್ತು. ಇಷ್ಟಲ್ಲದೆ ಕಾಂತ ಮೂರು ತಿಂಗಳು ಆರು ತಿಂಗಳಿಗೊಮ್ಮೆ ಯಾರಿಗೂ ಹೇಳದೆ ಕೇಳದೆ ಊರಿನಿಂದ ನಾಪತ್ತೆಯಾಗುತ್ತಿದ್ದ! ಒಂದೆರಡು ತಿಂಗಳ ನಂತರ ತನ್ನಷ್ಟಕ್ಕೆ ತಾನೇ ಮತ್ತೆ ಪ್ರತ್ಯಕ್ಷನಾಗುತ್ತಿದ್ದ. ಆದಾಗ್ಯೂ ಬೆಟ್ಟಯ್ಯ ಬೈಯ್ಯುತ್ತಿರಲಿಲ್ಲ. ಯಾರಾದರೂ ಬುದ್ಧಿವಾದ ಹೇಳಿದರೆ “ಹೋಗ್ಲಿ ಬಿಡಿ. ತಾಯಿ ಕಾಣದ ಕೂಸು” ಎಂದು ಸುಮ್ಮನಾಗಿಸುತ್ತಿದ್ದ.

ಕಾಂತ ಒಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಒಂದು ಸ್ಟೂಲಿನ ಮೇಲೆ ಕುಳಿತಿದ್ದ. ಆಗತಾನೆ ಊಟ ಮಾಡಿ ಬಂದಿದ್ದ ಎಂದು ಕಾಣುತ್ತದೆ. ಆಸ್ಪತ್ರೆ ನಿಶ್ಯಬ್ಧವಾಗಿತ್ತು. ಆಗ ಇದ್ದಕ್ಕಿದ್ದಂತೆ ದಢಾರ್ ಎಂದು ಭಯಂಕರ ಶಬ್ಧವಾಯಿತು. ಮೌನವಾಗಿ ಬರವಣಿಗೆಯ ಕೆಲಸದಲ್ಲಿ ತೊಡಗಿದ್ದ ನಾನು, ಪಶು ಪರೀಕ್ಷಕರು, ಕಾಂಪೌಂಡರು ನಿಟ್ಟು ಬಿದ್ದೆವು.

ವಿಷಯ ಏನೆಂದರೆ ಕಾಂತ ತೂಕಡಿಸಿ ಸ್ಟೂಲಿನಿಂದ ಉರುಳಿ ತಗಡಿಯ ಕುರ್ಚಿಯ ಮೇಲೆ ಬಿದ್ದು, ಆ ಕುರ್ಚಿ ನೆಲಕ್ಕಪ್ಪಳಿಸಿತ್ತು. ಕನಿಷ್ಠ ಪಕ್ಷ ಮೂಗಲ್ಲಿ ರಕ್ತ ಸೋರುತ್ತದೆ ಅಥವಾ ಎರಡಾದರೂ ಹಲ್ಲು ಮುರಿದು ಹೋಗಿರುತ್ತದೆ ಎಂದು ನೋಡಿದರೆ ಕಾಂತನಿಗೆ ಏನೇನೂ ಆಗಿರಲಿಲ್ಲ! ಎದ್ದು ನಗುತ್ತ ಕುಳಿತಿದ್ದ!

ಬೆಟ್ಟಯ್ಯ ಅದೇ ಊರಿನ ದಾನಪ್ಪ ಎಂಬುವರ ಮನೆಯಲ್ಲಿ ಊಟ, ತಿಂಡಿ, ಸ್ನಾನ ಮಾಡುತ್ತಿದ್ದ. ಇನ್ನುಳಿದಂತೆ ಆಸ್ಪತ್ರೆಯೇ ಅವನ ಮನೆ. ರಾತ್ರಿ ನಿದ್ರೆಯೂ ಅಲ್ಲೇ. ಬೆಟ್ಟಯ್ಯ ಜಗಳಗಂಟನಾಗಲೀ, ಕುಡುಕನಾಗಲೀ, ಜೂಜುಕೋರನಾಗಲೀ, ದುಂದು ವೆಚ್ಚದವನಾಗಲೀ ಆಗಿರಲಿಲ್ಲ. ನಿಕ್ಕರು ಅಂಗಿ ಬಿಟ್ಟರೆ ವರ್ಷದಲ್ಲಿ ಮರ‍್ನಾಲ್ಕು ಬಾರಿ ಮಾತ್ರ ಬಿಳಿ ಲುಂಗಿ, ಶರ್ಟು ಉಟ್ಟು, ಹೆಗಲ ಮೇಲೆ ಟವಲ್ಲು ಹಾಕಿಕೊಂಡಿರುತ್ತಿದ್ದ. ಲುಂಗಿ ಉಟ್ಟಾಗ ಸಾಮಾನ್ಯವಾಗಿ ನನ್ನೆದುರು ಬರುತ್ತಿರಲಿಲ್ಲ. ಅವನಿಗೆ ಅಷ್ಟು ನಾಚಿಕೆ!

ಇಷ್ಟೆಲ್ಲಾ ಹೇಳಿದ ಮೇಲೆ ಬೇರೆ ಕೆಲವು ವಿಷಯಗಳಿವೆ. ನಮ್ಮ ಸಿಬ್ಬಂದಿವರ್ಗದಲ್ಲಿ ಎಂಟ್ಹತ್ತು ಜನರಿದ್ದರೂ ಅವರಲ್ಲೇ ಗುಂಪುಗಾರಿಕೆ ಇತ್ತು. ಯಾವುದೋ ಒಂದು ಕ್ಷುದ್ರ ಕಾರಣವಿಟ್ಟುಕೊಂಡು ಎರಡು ಬಣದವರು ಸೆಣಸುತ್ತಿದ್ದರು. ದಡ್ಡ ಮತ್ತು ಯಾವುದನ್ನೂ ಮಹತ್ವದ್ದೆಂದು ಪರಿಗಣಿಸದ ಬೆಟ್ಟಯ್ಯನನ್ನು ಯಾರೂ ತಮ್ಮ ಬಣಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.

ಸೇರಿಸಿಕೊಂಡರೂ ಅವನಿಗೆ ಯಾವುದೇ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ. ಎಡಬಿಡಂಗಿಯಂತೆ ನಡೆಸಿಕೊಳ್ಳುತ್ತಿದ್ದರು. ಬೆಟ್ಟಯ್ಯನ ಬಳಿ ಯಾವ ಗುಟ್ಟೂ ಹತ್ತು ನಿಮಿಷದ ಮೇಲೆ ನಿಲ್ಲುತ್ತಿರಲಿಲ್ಲ. ಇಂಥ ಬೆಟ್ಟಯ್ಯ ಎರಡೆರಡು ಬಾರಿ ಅಮಾನತ್ತಿಗೊಳಪಟ್ಟವನೆಂದೂ, ಅವನನ್ನು ಎಲ್ಲಿಡಬೇಕೋ ಅಲ್ಲಿಡಬೇಕೆಂದು ಸಿಬ್ಬಂದಿಯವರು ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದೆ.

ಅವನೊಮ್ಮೆ ವೀರ್ಯ ಸಂಗ್ರಹಣೆ ಮತ್ತು ಸಂಸ್ಕರಣಾ ಕೇಂದ್ರದಲ್ಲಿ ಕೆಲಸ ನಿರ್ವಹಿಸುವಾಗ ಅಮಾನತ್ತಾಗಿದ್ದ. ಇಂಥ ಕೇಂದ್ರಗಳಲ್ಲಿ ಅತ್ಯುತ್ತಮ ತಳಿಯ ಹೋರಿಗಳನ್ನು ಸಾಕಿರುತ್ತಾರೆ. ಇವುಗಳಿಂದ ಕೃತಕ ಯೋನಿ ಬಳಸಿ ವೀರ್ಯ ಸಂಗ್ರಹಿಸಿ ಸಂಸ್ಕರಿಸುತ್ತಾರೆ. ಹೋರಿಗಳಿಂದ ಒಂದು  ಸಲಕ್ಕೆ ಹೊರಬರುವ ವೀರ್ಯವನ್ನು ಸಂಸ್ಕರಿಸಿದರೆ ಸುಮಾರು ಇನ್ನೂರ ಐವತ್ತು ಹಸುಗಳ  ಗರ್ಭಧಾರಣೆ ಮಾಡಬಹುದು.

ಇಂಥ ಹೋರಿಗಳನ್ನು ಬಹಳ ಎಚ್ಚರಿಕೆಯಿಂದ, ಯಾವುದೇ ರೀತಿಯ ಸೋಂಕಾಗದಂತೆ ಸಾಕಿರುತ್ತಾರೆ. ಆದರೆ ಬೆಟ್ಟಯ್ಯ ಅಂಥ ಹೋರಿಗಳನ್ನು ಗ್ರಾಮದ ರೈತರ ಹಸುಗಳಿಗೆ ಹಾರಿಸಿ (cross ಮಾಡಿಸಿ) ದುಡ್ಡು ಮಾಡಿಕೊಂಡಿದ್ದನಂತೆ! ಮತ್ತೊಮ್ಮೆ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದಾಗ ಕೋಳಿಗಳನ್ನು ಮಾರಿಕೊಂಡಿದ್ದ ಎಂದು ಅಮಾನತ್ತಾಗಿದ್ದ. ಅವನ ಸೇವಾ ಪುಸ್ತಕದಲ್ಲಿ ಇದೆಲ್ಲವೂ ವಿವರವಾಗಿ ದಾಖಲಾಗಿತ್ತು.

ಅದು ಬಹಳ ಹಿಂದೆ ಬೆಟ್ಟಯ್ಯ ಕೆಲಸಕ್ಕೆ ಸೇರಿದ ಹೊಸದರಲ್ಲಿ ನಡೆದ ಸಂಗತಿಗಳಾಗಿದ್ದವು. ಒಮ್ಮೊಮ್ಮೆ ಪ್ರವಾಸದಲ್ಲಿ ಬೈಕ್ ಕೆಟ್ಟರೆ, ಕೆಟ್ಟ ಜಾಗದಲ್ಲಿಯೇ ಊಟ ನೀರು ಇಲ್ಲದೆ ಬದಲಿ ವ್ಯವಸ್ಥೆ ಆಗುವವರೆಗೂ ಗಂಟೆಗಟ್ಟಲೆ ಕಾದು ನಿಂತಿರುತ್ತಿದ್ದ ಬೆಟ್ಟಯ್ಯ ಇಂಥ ತಪ್ಪುಗಳನ್ನು  ಮಾಡಿರಬಹುದೆಂದು ನಂಬಲು ಸಾಧ್ಯವಾಗುತ್ತಿರಲಿಲ್ಲ.

ಈ ಅಮಾನತ್ತುಗಳ ವಿಷಯ ನಾನು ಒಂದು ಸಲವೂ ಬೆಟ್ಟಯ್ಯನೆದುರು ಪ್ರಸ್ತಾಪಿಸಲಿಲ್ಲ.

ಅಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಬಹಳ ಹೊತ್ತಾಗಿತ್ತು. ತುರ್ತುಚಿಕಿತ್ಸೆಗೆಂದು ಒಂದು ಹಳ್ಳಿಗೆ ಹೋದೆ. ಬೆಟ್ಟಯ್ಯ ಜೊತೆಗಿದ್ದ. ಆ ಸಂದರ್ಭದಲ್ಲಿ ನನಗೆ ದೂರದೂರಿಗೆ ವರ್ಗದ ಆದೇಶ ಬಂದು ಒಂದು ವಾರವಾಗಿತ್ತು. ಆದರೆ ಬದಲೀ ವೈದ್ಯ ಇನ್ನೂ ಬಂದಿರಲಿಲ್ಲ. ಯಾವುದೇ ಕ್ಷಣದಲ್ಲಿ ಬರಬಹುದಿತ್ತು. ಅವರು ಬಂದ ಗಳಿಗೆಯೇ ನಾನು ಆಸ್ಪತ್ರೆಯ ಪ್ರಭಾರ (ಛಾರ್ಜು) ಕೊಟ್ಟು ಜಾಗ ಖಾಲಿ ಮಾಡಬೇಕಾಗಿತ್ತು.

ಆದುದರಿಂದ ಆಸ್ಪತ್ರೆಯಲ್ಲಿದ್ದ ಎಲ್ಲ ಉಪಕರಣಗಳೂ (ಕತ್ತರಿ, ಪೋರ್ಸೆಪ್ಸ್, ಸೂಜಿ, ಸಿರಿಂಜ್, ಔಷಧಗಳು ಇತ್ಯಾದಿ) ಕುರ್ಚಿ, ಟೇಬಲ್ಲು, ಕಡತ, ವಹಿ ಮುಂತಾದ ಸಕಲ ಸಾಮಗ್ರಿಗಳನ್ನೂ ಹುಡುಕಿ ಒಂದು ಕಡೆ ಜೋಡಿಸಿ ಹೊಸಬರಿಗೆ ಕೊಡಲು ನಾನು ತಯಾರಿ ನಡೆಸಿದ್ದೆ. ನನಗೆ ವರ್ಗಾವಣೆ ಬೇಕಾಗಿರಲಿಲ್ಲ. ಅದೊಂದು ಶಾಪದಂತಿತ್ತು. ನಾನು ಮತ್ತು ಬೆಟ್ಟಯ್ಯ ಈ ಬೇಸರದಲ್ಲಿದ್ದೆವು. ಸಮಯ ಮಧ್ಯಾಹ್ನ ಒಂದು ಗಂಟೆಯ ಮೇಲಾಗಿತ್ತು. ನಮ್ಮಿಬ್ಬರದ್ದೂ ಊಟವಾಗಿರಲಿಲ್ಲ.

ಅಂದು ನಾನು ಚಿಕಿತ್ಸೆ ಕೊಡಬೇಕಿದ್ದ ಎತ್ತು ಬಹಳ ಎತ್ತರದ ಅಸಾಧಾರಣ ಗಾತ್ರದ್ದಾಗಿತ್ತು. ಎತ್ತಿಗೆ ತೀವ್ರತರವಾದ ಖಾಯಿಲೆಯೇನಾಗಿರಲಿಲ್ಲ. ಮೆಲುಕು ಹಾಕುತ್ತಿತ್ತು. ಮೂಗು ಹಸಿಯಿತ್ತು. ಶಾಂತವಾಗಿ ನಿಂತಿತ್ತು. ಆದರೆ ವಿಪರೀತ ಕೆಮ್ಮುತ್ತಿತ್ತು. ಒಣ ಕೆಮ್ಮು. ಐದಾರು ರೈತರು ಎತ್ತನ್ನು ಬಿಗಿ ಹಿಡಿದಿದ್ದರು. ಹಿಂದಿನ ಕಾಲುಗಳನ್ನು ಬಳಸಿ ದಪ್ಪನೆಯ ನೂಲಿನ ಹಗ್ಗವನ್ನು ಒಬ್ಬನು ಹಿಡಿದು ನಿಂತಿದ್ದ. ಕಾಲುಗಳನ್ನು ಸುಲಭವಾಗಿ ಝಾಡಿಸದೆ ಇರಲು ಹಾಗೆ ಮಾಡಿದ್ದ.

ಎತ್ತಿನ ಮಾಲೀಕ ಅಂಗಡಿ ಆನಂದಪ್ಪ ಮೂಗುದಾರ ಹಿಡಿದು ಎತ್ತಿನ ಮೈ ಕೆರೆಯುತ್ತಾ ಮಾತನಾಡಿಸುತ್ತಿದ್ದ. ಎತ್ತಿಗೆ ಜ್ವರ ಸೈತ ಇರಲಿಲ್ಲ. “ಏನೂ ಆತಂಕಪಡಬೇಕಿಲ್ಲ” ಎಂದು ಆನಂದಪ್ಪನಿಗೆ ಹೇಳಿ ಇಂಜೆಕ್ಷನ್ ಕೊಡಲು ತಯಾರಾದೆ. ಎತ್ತಿನ ಕತ್ತಿನ ಸಮದಲ್ಲಿ ಸೂಜಿ ಹಿಡಿದು ನಿಂತಿದ್ದೆ. ನನ್ನ ಹಿಂದೆ ಬೆಟ್ಟಯ್ಯ ಇದ್ದ. ಅವನ ಹಿಂದೆ ನಾಲ್ಕಾರು ಜನ ಹೀಗೆ ಹಲವಾರು ರೈತರು ಮೈಯೆಲ್ಲಾ ಕಣ್ಣಾಗಿ ನಿಂತಿದ್ದರು.

ಎಲ್ಲರೂ ಎತ್ತಿಗೆ ಸಮಾಧಾನಿಸಲು ವಿವಿಧ ರೀತಿಯಲ್ಲಿ ಮಾತನಾಡಿಸುತ್ತಾ ಬಾಯಿಂದ ವಿವಿಧ ರೀತಿಯ ಶಬ್ಧಗಳನ್ನು ಹೊರಡಿಸುತ್ತಿದ್ದರು. ದಿನವೂ ನೂರಾರು ಪಶುಗಳಿಗೆ ಇಂಜೆಕ್ಷನ್ ನೀಡುತ್ತಿದ್ದಂತೆ ಈ ಎತ್ತೂ ಒಂದು ಎಂಬಂತೆ ನಾನು, ಬೆಟ್ಟಯ್ಯನೂ ಭಾವಿಸಿದ್ದೆವು. ನಾನು ಇಂಜೆಕ್ಷನ್ ಸೂಜಿ ಎತ್ತಿನ ಕತ್ತಿಗೆ ಚುಚ್ಚಿದೆ.

ಆ ಕ್ಷಣದಲ್ಲಿ ಎತ್ತು ಒಂದೆರಡು ಅಡಿಯಷ್ಟು ಮುಂದೆ ಸರಿದದ್ದೇ ಎಡಗಡೆ ನಿಂತಿದ್ದ ನಮ್ಮ ಕಡೆಗೆ ತನ್ನ ಎಡಗಾಲನ್ನು ಎಷ್ಟು ರಭಸವಾಗಿ ಬೀಸಿತೆಂದರೆ ನಮ್ಮೆಲ್ಲರಿಗೆ ‘ರಪ್ ಎಂಬ ಶಬ್ದ ಕೇಳಿಸಿತೇ ವಿನಃ ಏನೂ ಕಾಣದಷ್ಟು ಮತ್ತು ಅರಿವಿಗೆ ಬಾರದಷ್ಟು ಮಿಂಚಿನ ವೇಗದಲ್ಲಿ ಅನಾಹುತ ಸಂಭವಿಸಿತ್ತು.

ಕಾಲಿನ ಹೊಡೆತ ಅಲ್ಲಿದ್ದ ಯಾರಿಗಾದರೂ ಬೀಳಬಹುದಿತ್ತು. ದೇಹದ ಯಾವ ಭಾಗಕ್ಕಾದರೂ ಬೀಳಬಹುದಿತ್ತು! ನನ್ನಿಂದ ಒಂದೇ ಒಂದು ಅಡಿ ಹಿಂದೆ ನಿಂತಿದ್ದ ಬೆಟ್ಟಯ್ಯನ ಎಡ ತೊಡೆಗೆ ಅಪ್ಪಳಿಸಿತು ಎತ್ತಿನ ಕಾಲು. ಅದೇನು ಗುರಿಯಿಟ್ಟು ಹೊಡೆದ ಹೊಡೆತವಾಗಿರಲಿಲ್ಲ. ಗಾಬರಿಯಲ್ಲಿ ಎತ್ತು ತನ್ನ ರಕ್ಷಣೆಗೆ ಕಾಲು ಬೀಸಿತ್ತಷ್ಟೆ. ಎತ್ತಿಗೆ ಸೂಜಿ ಚುಚ್ಚಿ ರೇಗಿಸಿದವನು ನಾನೇ ಆಗಿದ್ದೆ.

ಆದರೆ ಹೊಡೆತ ಐವತ್ತು ವರ್ಷಕ್ಕೂ ಹೆಚ್ಚು ವಯಸ್ಸಾದ ನಿಷ್ಪಾಪಿ ಬೆಟ್ಟಯ್ಯನಿಗೆ ಬಿದ್ದಿತ್ತು. ಆ ಹೊಡೆತ ಬಿದ್ದ ಜಾಗದಲ್ಲಿ ಚರ್ಮವು ಉರುಕಾಗಿ ಸಿಪ್ಪೆ ಸುಲಿದಂತೆ ಉದ್ದಕ್ಕೂ ಸ್ವಲ್ಪ ಊತ ಕಾಣಿಸಿಕೊಂಡಿತು. ತೊಡೆಯ ಒಳಗೆ ದೇಹದ ಅತ್ಯಂತ ಗಟ್ಟಿಮುಟ್ಟಾದ ಮತ್ತು ಹೆಚ್ಚು ಉದ್ದವಾದ ತೊಡೆ ಮೂಳೆ (Femur) ಮಧ್ಯಕ್ಕೆ ಸರಿಯಾಗಿ ಎರಡು ತುಂಡಾಗಿತ್ತು.

‘ಅರೆರೆ!’ `ಥೋ ಥೋ!’ `ಏನಿಡೀತರ‍್ಲ ಎತ್ತ?’ `ಅಯ್ಯಯ್ಯೋ! ಬೆಟ್ಟಯ್ಯನ್ನ ಎತ್ರೋ’ ‘ಪಂಚಣ್ಣನ ಹಣೆ ನೋಡು ಹೆಂಗೆ ರಕ್ತ ಜಿನುಗುತ್ತೆ’ ಇತ್ಯಾದಿ ಉದ್ಗಾರಗಳಿಂದ ಆ ಜಾಗ ತುಂಬಿಹೋಯಿತು. ಎತ್ತನ್ನು ಹಿಡಿಯಲು ಯಾರೂ ಧೈರ್ಯ ಮಾಡಲಿಲ್ಲ. ಅದು ಬುಸಬುಸನೆ ಮುಸುಗರೆಯುತ್ತಾ ವೇಗವಾಗಿ ಮನೆಯತ್ತ ಹೊರಟಿತು. ಎತ್ತಿನ ಮಾಲೀಕ ಆನಂದಪ್ಪ ನಮ್ಮ ಕಡೆ ತಿರುಗಿ ಸಹ ನೋಡದೆ ಅದರ ಹಿಂದೆ ಓಡುತ್ತ ಹೋದವನು ಮತ್ತೆ ಅಂದು ಮುಖ ತೋರಿಸಲೇ ಇಲ್ಲ.

ಬೆಟ್ಟಯ್ಯ ಆಘಾತದಿಂದ ಮತ್ತು ತೀವ್ರ ನೋವಿನಿಂದ ಮಾತು ಹೊರಡದಂತಾಗಿದ್ದ. ತೊಡೆ ಮೂಳೆ ತುಂಡಾದದ್ದನ್ನು ಸನ್ನೆ ಮಾಡಿ ತಿಳಿಸಿದ. ನಾನು ಸಮಯ ಹಾಳು ಮಾಡುವಂತಿರಲಿಲ್ಲ. ನಾನಿದ್ದದ್ದು ಹಳ್ಳಿಯಾದರೂ ಅಲ್ಲಿ ಪ್ರಾಥಮಿಕ ಆರೋಗ್ಯ ಘಟಕವಿತ್ತು. ಅಲ್ಲಿದ್ದ ವೈದ್ಯರು ಪರಿಚಿತರೇ ಆಗಿದ್ದರು. ಅವರಲ್ಲಿಗೆ ಹೋದೆ. ವೈದ್ಯರು ತಮಗೆ ಪರಿಚಿತರಿದ್ದ ಕೀಲು ಮೂಳೆ ತಜ್ಞರಿಗೆ ಒಂದು ಪತ್ರ ಬರೆದುಕೊಟ್ಟರು.

ಅಲ್ಲಿಂದ ನಾನು ಬೈಕಲ್ಲಿ ಮುಖ್ಯ ರಸ್ತೆಗೆ ಹೋಗಿ ಆಟೋರಿಕ್ಷಾ ತಂದೆ. ಸ್ಥಿರ ದೂರವಾಣಿ ಅಥವಾ ಮೊಬೈಲು ಏನೂ ಇರದ ಕಾಲವದು. ಆಟೋದಲ್ಲಿ ಬೆಟ್ಟಯ್ಯನನ್ನು ನಾಲ್ಕೈದು ಜನ ಎತ್ತಿ ಕೂರಿಸಿದೆವು. ಅಷ್ಟೂ ಜನ ತಾಲ್ಲೂಕಿನ ಮುಖ್ಯ ಆಸ್ಪತ್ರೆಗೆ ಬಂದರು. ಅಲ್ಲಿ ಬೆಟ್ಟಯ್ಯನನ್ನು ಒಳ ರೋಗಿಯಾಗಿ ಸೇರಿಸಿದೆ. ಸುದ್ದಿ ಗೊತ್ತಾಗಿ ಬೆಟ್ಟಯ್ಯನ ಮಗ ಕಾಂತ ಮತ್ತು ದಾನಪ್ಪ ಎಲ್ಲರೂ ಬಂದರು. ಬೆಟ್ಟಯ್ಯನನ್ನು ಅವರ ಸುಪರ್ದಿಗೆ ಬಿಟ್ಟು ನಾನು ಮನೆ ಸೇರಿದಾಗ ಆಗಲೇ ಕತ್ತಲಾಗಿತ್ತು.

ಮರುದಿನ ಬೆಳಿಗ್ಗೆ ೮ ಗಂಟೆಗೆ ಹೊಸ ಪಶುವೈದ್ಯರು ಹಾಜರಾದುದರಿಂದ ನನಗೆ ಬೆಟ್ಟಯ್ಯನನ್ನು ನೋಡಿಕೊಂಡು ಬರಲು ಆಗಲಿಲ್ಲ. ಇಡೀ ದಿನ ಪಶು ಆಸ್ಪತ್ರೆಯ ಪ್ರಭಾರವನ್ನು ಹೊಸ ವೈದ್ಯರಿಗೆ ವಹಿಸಿದ್ದಾಯಿತು. ಆಸ್ಪತ್ರೆಯಲ್ಲಿದ್ದ ಕೆಲವು ಶಸ್ತ್ರಚಿಕಿತ್ಸೆಯ ಉಪಕರಣಗಳು ಮೂವತ್ತು ನಲವತ್ತು ವರ್ಷಗಳಷ್ಟು ಹಳೆಯವಾಗಿದ್ದವು. ಉಪಕರಣಗಳಲ್ಲಿ ಹೆಸರೇ ಗೊತ್ತಿರದಂಥವೆಲ್ಲ ಇದ್ದವು! ನನಗೆ ಬೆಟ್ಟಯ್ಯನ ಗೈರು ಕ್ಷಣಕ್ಷಣವೂ ತಟ್ಟತೊಡಗಿತ್ತು.

ಆ ದಿನ ಸಾಯಂಕಾಲ ಹೋಗಿ ಬೆಟ್ಟಯ್ಯನನ್ನು ನೋಡಿಕೊಂಡು ಬಂದೆ. ಇಬ್ಬರು ಆಧಾರ ಕೊಟ್ಟು ಬೆಟ್ಟಯ್ಯನನ್ನು ನಡೆಸಬೇಕಾಗಿತ್ತು. ಎರಡು ಕಂಕುಳ ಊರುಗೋಲುಗಳನ್ನೂ ಸಹ ತರಲಾಗಿತ್ತು. ಕೀಲು ಮೂಳೆ ತಜ್ಞರನ್ನು ಮಾತನಾಡಿಸಿದೆ. ಒಂದೆರಡು ದಿನದಲ್ಲಿ ಬೆಂಗಳೂರಿನ ಯಾವುದಾದರೂ ದೊಡ್ಡ ಆಸ್ಪತ್ರೆಗೆ ಹೋಗುವುದು ಉತ್ತಮ ಎಂದರವರು. ಬೆಟ್ಟಯ್ಯ, ಕಾಂತ, ದಾನಪ್ಪ ಆಗಲಿ ಎಂದರು.

ಮರು ದಿನ ಪ್ರಭಾರ ಸಂಪೂರ್ಣ ವಹಿಸಿಕೊಟ್ಟು ಬಿಡುಗಡೆಯಾದೆ. ಬೆಂಗಳೂರಿಗೆ ಹೋದೆ. ಅಲ್ಲಿ ಸಂಜಯ ಗಾಂಧಿ ಅಪಘಾತ ಮತ್ತು ಕೀಲು ಮೂಳೆ ಆಸ್ಪತ್ರೆಯಲ್ಲಿದ್ದ ಬೆಟ್ಟಯ್ಯನ್ನ ಕಂಡೆ. ಯಾವಾಗಲೂ ನನ್ನ ಜೊತೆ ಇರುತ್ತಿದ್ದ ಬೆಟ್ಟಯ್ಯನನ್ನು ಬೆಂಗಳೂರಿನ ದೊಡ್ಡ ಆಸ್ಪತ್ರೆಯಲ್ಲಿ ಕಂಕುಳ ಊರುಗೋಲಲ್ಲಿ ನೋಡಿ ಕರುಳೆಲ್ಲ ಕಿವುಚಿದಂತಾಯಿತು. ದಿನವಿಡೀ ಬೆಟ್ಟಯ್ಯನ ಪಕ್ಕ ಕುಳಿತಿದ್ದು ಎದ್ದು ಬಂದೆ. ಎಲ್ಲರ ಕಣ್ಣಲ್ಲೂ ನೀರು.

ಒಂದು ದಿನ ಬಿಡುವು ಮಾಡಿಕೊಂಡು ಬೆಟ್ಟಯ್ಯನಿಗಾದ ಅಪಘಾತದ ಬಗ್ಗೆ ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ತಲುಪಿಸಿದೆ. ಇದಕ್ಕೆ ಸಾಕ್ಷಿ ಬೇಕು ಅಂದರು ಸಾಹೇಬರು. ಮತ್ತೆ ಬೆಟ್ಟಯ್ಯನಿಗೆ ಅಪಘಾತವಾದ ಹಳ್ಳಿಗೆ ಹೋಗಿ ಎತ್ತಿನ ಮಾಲೀಕ ಅಂಗಡಿ ಆನಂದಪ್ಪ ಮತ್ತು ಹಳ್ಳಿಯ ಇಪ್ಪತ್ತು ರೈತರ ಸಹಿ ಹಾಕಿಸಿ ಮತ್ತೆ ಖುದ್ದಾಗಿ ಜಿಲ್ಲಾ ಕಛೇರಿಗೆ ತಲುಪಿಸಿದೆ.

ಬೆಟ್ಟಯ್ಯ ತನ್ನ ಸೇವಾವಧಿಯಲ್ಲಿ ವರ್ಷಕ್ಕೊಂದೆರಡು ಸಾಂದರ್ಭಿಕ ರಜೆ ಬಿಟ್ಟರೆ ಬೇರೆ ರಜೆಗಳನ್ನೇ ಹಾಕಿರಲಿಲ್ಲ. ರಜೆ ನಗದೀಕರಣ ಬಿಟ್ಟರೆ ಗಳಿಕೆ ರಜೆಯನ್ನಾಗಲೀ ಅಥವಾ ಪರಿವರ್ತಿತ ರಜೆಯನ್ನಾಗಲೀ ಬಳಸಿರಲೇ ಇಲ್ಲ! ಆದ್ದರಿಂದ ಬೇಕಾದಷ್ಟು ರಜೆಗಳನ್ನು ನಾನೇ ಮಂಜೂರು ಮಾಡಿದ್ದೆ.

ಇದೇ ದಿನಗಳಲ್ಲಿ ಒಂದು ಮಧ್ಯಾಹ್ನ ನನ್ನ ಮನೆಯ ಬಳಿ ಅಂಗಡಿ ಆನಂದಪ್ಪ ಕಾಣಿಸಿಕೊಂಡ. ಅವನ ಮೇಲೆ ನನಗೆ ಸಿಟ್ಟಿದ್ದರೂ ಅವನನ್ನು ನಾನೇನೂ ಮಾಡುವಂತಿರಲಿಲ್ಲ. ಅಪಘಾತವಾದ ಕೂಡಲೇ ನಾಪತ್ತೆಯಾಗಿ ಇವತ್ತು ಪ್ರತ್ಯಕ್ಷವಾಗಿದ್ದ. ‘ಇದು ಬೆಟ್ಟಯ್ಯನಿಗೆ ಕೊಡಿ ಸಾರ್’ ಎಂದು ಐವತ್ತು ರೂಪಾಯಿ ಕೊಡಲು ಬಂದ. ನನಗೆ ಅವನ ಸಣ್ಣತನದ ಬಗ್ಗೆ ಬೇಸರವಾಯಿತು.

ಈಗಾಗಲೇ ನಾಲ್ಕೈದು ಸಾವಿರ ರೂಪಾಯಿ ಮೇಲೆ ಖರ್ಚಾಗಿದ್ದವು. ಐವತ್ತು ಐವತ್ತೈದರ ಆಸುಪಾಸಿನ ಬೆಟ್ಟಯ್ಯನಿಗೆ ಕಾಲು ಸರಿ ಹೋಗುವ ಅಥವಾ ಮೊದಲಿನಂತೆ ನಡೆದಾಗುವ ಬಗ್ಗೆಯೇ ಅನುಮಾನವಿತ್ತು. ಐವತ್ತು ರೂಪಾಯಿ ಈಸಿಕೊಳ್ಳದೆ ಅವನನ್ನು ವಾಪಸ್ ಕಳುಹಿಸಿದೆ.

ಇದಾದ ಒಂದೆರಡು ದಿನದಲ್ಲಿ ನಾನು ವರ್ಗವಾದ ಹೊಸ ಊರಿಗೆ ಪ್ರಯಾಣ ಬೆಳೆಸಿದೆ. ದೂರದ ಊರು. ಅಲ್ಲಿ ಹೋಗಿ ಮನೆ ಮಾಡಿ ಕುಟುಂಬ, ಮನೆಯ ಲಗೇಜನ್ನೆಲ್ಲ ಸಾಗಿಸಿ, ಅಲ್ಲಿ ಗ್ಯಾಸ್ ಸಿಲಿಂಡರ್, ಮಕ್ಕಳ ಶಾಲೆ ಇತರೆ ಹಲವು ಹಲ್ಲಂಡೆಗಳಲ್ಲಿ ಮುಳುಗಿ ಹೋದೆ. ಹೊಸ ಜಾಗ, ಹೊಸ ಮನೆ ಎಲ್ಲವುದಕ್ಕೆ ಹೊಂದಿಕೊಳ್ಳಲು ಒಂದೆರಡು ತಿಂಗಳಾದರೂ ಬೇಕೇ ಬೇಕಾಯ್ತು. ಅಲ್ಲಿಗೆ ಆರು ತಿಂಗಳ ನಂತರ ಒಮ್ಮೆ ನನ್ನ ಹಳೆ ಜಾಗಕ್ಕೆ ಹೋದೆ.

ಬೆಟ್ಟಯ್ಯನ್ನ ನೋಡಿಕೊಂಡು ಬರುವುದು ಏಕೈಕ ಉದ್ದೇಶವಾಗಿತ್ತು. ಸರ್ಕಾರದಿಂದ ಬೆಟ್ಟಯ್ಯನಿಗೆ ಚಿಕ್ಕಾಸೂ ಬಂದಿರಲಿಲ್ಲ. ಎಲ್ಲೋ ಕೆಲವು ಮೆಡಿಕಲ್ ಬಿಲ್ಲುಗಳು ಮಾತ್ರ ಪಾವತಿಯಾಗಿದ್ದವು. ದಾನಪ್ಪನ ಮನೆಗೆ ಹೋದೆ. ಮನೆಯ ಕಟ್ಟೆಯ ಮೇಲೆ ಬೆಟ್ಟಯ್ಯ ಕೂತಿದ್ದ. ಅವನಿಗೆ ಕಂಕುಳ ಊರುಗೋಲಿಲ್ಲದೆ ನಡೆದಾಡಲು ಆಗುತ್ತಿರಲಿಲ್ಲ.

ಬೆಟ್ಟಯ್ಯ ಅಂದ ಕೂಡಲೆ ನನಗೆ ಅಂಗಿ ನಿಕ್ಕರ್ ಉಟ್ಟು ಸರಾಗವಾಗಿ ಓಡಾಡುತ್ತಿದ್ದ ಬೆಟ್ಟಯ್ಯ ನೆನಪಾಗುತ್ತಿದ್ದ. ಆದರೆ ಈ ಊರುಗೋಲಿನ ಬೆಟ್ಟಯ್ಯ ಎದುರಾದದ್ದೇ ನನಗೆ ಉಸಿರು ಸಿಕ್ಕಿಕೊಂಡಂತಾಗುತ್ತಿತ್ತು. ಕಾಂತನು ಅಲ್ಲಿಯೇ ಇದ್ದು ತಂದೆಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದುದು ನನಗೆ ಸಮಾಧಾನ ತಂದಿತ್ತು. ಬೆಟ್ಟಯ್ಯ ಅರ್ಧ ಇಳಿದು ಹೋಗಿದ್ದ.

ಸೇವೆಯಲ್ಲಿರುವಾಗಲೇ ಸತ್ತು ಹೋದರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪಾಧಾರಿತವಾಗಿ ಸರ್ಕಾರಿ ಕೆಲಸ ಕೊಡುತ್ತಾರೆ. ಆದರೆ ಬೆಟ್ಟಯ್ಯನ ಕಾಲು ಮುರಿದಿತ್ತಷ್ಟೇ. ಆದುದರಿಂದ ಅನುಕಂಪಾಧಾರಿತ ಕೆಲಸ ಸಿಗುವಂತಿರಲಿಲ್ಲ. ‘ಅವತ್ತು ನಾನು ಸತ್ತೋಗಬೇಕಿತ್ತು ಸಾರ್. ನನ್ನ ಮಗನಿಗೆ ಕೆಲಸ ಸಿಕ್ತಿತ್ತು’ ಎಂದು ಬೆಟ್ಟಯ್ಯ ತಮಾಷೆ ಮಾಡಿ ನಕ್ಕ. ನನಗೆ ನಗು ಬರಲಿಲ್ಲ. ಬೆಟ್ಟಯ್ಯನಿಗೆ ಆಸ್ಪತ್ರೆಯ ಕೆಲಸ ಮಾಡುವುದು ಸಾಧ್ಯವೇ ಇಲ್ಲದುದ್ದರಿಂದ ಸ್ವಯಂ ನಿವೃತ್ತಿ ಪಡೆಯಲು ಸಿದ್ಧನಾಗುತ್ತಿದ್ದ. ನನಗೂ ಅದೇ ಸರಿಯೆನಿಸಿತು.

ಬೆಟ್ಟಯ್ಯನ ಸ್ವಯಂ ನಿವೃತ್ತಿಯಾಗಿ ಅದೇ ಊರಿನಲ್ಲಿ ವಾಸಿಸುತ್ತಿದ್ದ. ನಿವೃತ್ತಿ ಸಮಯದಲ್ಲಿ ಒಂದಷ್ಟು ಹಣ ಬಂದಿತ್ತು. ಬೆಟ್ಟಯ್ಯ ಬೇರೆ ಮನೆ ಮಾಡಿ ದಾನಪ್ಪನ ಮನೆಯಿಂದ ಬೇರೆ ಹೋಗಿದ್ದ. ತಾನು ಸಾಯುವುದರೊಳಗೆ ಮಗನ ಮದುವೆ ಮಾಡಬೇಕೆಂದು ತಾರಾಡಲು ಸುರುವಿಟ್ಟುಕೊಂಡ. ಈ ಸಮಾಚಾರಗಳು ನಿಧಾನವಾಗಿ ಹೇಗೋ ಬಂದು ನನ್ನನ್ನು ಸೇರುತ್ತಿದ್ದವು.

ಕಾಂತನ ಮದುವೆಯಾಯಿತು. ಅದಾದ ಮರ‍್ನಾಲ್ಕು ವರ್ಷದ ನಂತರ ಬೆಟ್ಟಯ್ಯನನ್ನು ಕಾಣಲು ಹೋದೆ. ಅವನಿಗೆ ನನ್ನನ್ನು ಕಂಡುಹಿಡಿಯಲು ಕಷ್ಟವಾಯಿತು. ಕಣ್ಣು ಮಂಜು ಮಂಜು ಎಂದ. ಕಿವಿ ಮಂದ ಎಂದ. ತಲೆ ಕೆರೆದುಕೊಂಡು ಎಂದಿನಂತೆ ನಕ್ಕ. ಕಾಂತ ಅಲ್ಲೇ ಓಡಾಡಿಕೊಂಡಿದ್ದ. ಕಾಂತನ ಮಗು ತೊಟ್ಟಿಲಲ್ಲಿ ಮಲಗಿತ್ತು. ಮಗು ತಾಜಾ ಗಜ್ಜರಿಯಂತಿತ್ತು. ಅವನ ಎಳೆ ಹೆಂಡತಿ ವಿಶೇಷ ಸೌಂದರ್ಯದಿಂದ ಕೂಡಿದ್ದಳು.

ನಾನು ಬೆಟ್ಟಯ್ಯನನ್ನು ಅದೇ ಕೊನೆಯ ಬಾರಿ ನೋಡಿದ್ದು. ಮತ್ತೊಮ್ಮೆ ನಾನು ಆ ಊರಿಗೆ ಹೋದಾಗ ಬೆಟ್ಟಯ್ಯ ಮನೆ ಖಾಲಿ ಮಾಡಿ ಮಗನ ಸಂಸಾರದೊಂದಿಗೆ ತನ್ನ ಸ್ವಂತ ಹಳ್ಳಿಗೆ ಹೊರಟು ಹೋಗಿದ್ದ. ಬೆಟ್ಟಯ್ಯ ಸ್ವಂತ ಊರಲ್ಲಿ ಅವನದೆಂದು ಮನೆ ಅಥವಾ ಯಾವ ಆಸ್ತಿಯೂ ಇರಲಿಲ್ಲ. ಅಲ್ಲಿಗೇಕೆ ಹೋದನೋ ಎಂಬುದು ನನಗೆ ಒಗಟಾಗಿ ಕಾಣಿಸಿತು.

ಆದರೆ ನಿಜ ಸಂಗತಿ ಗೊತ್ತಾಗಲು ತಡವಾಗಲಿಲ್ಲ. ಅಂದು ಆ ಊರಿನ ರಾಯಭಾರಿಯಂತಿದ್ದ ಭರ್ಮಜ್ಜ ಸಿಕ್ಕಿದ್ದ. ಅದೂ ಇದೂ ಮಾತಾಡುತ್ತ ಬೆಟ್ಟಯ್ಯನ ವಿಷಯ ತೂರಿಬಂದಿತು. “ಸ್ವಲ್ಪನಾದ್ರೂ ತಿಳುವಳಿಕೆ, ಲೋಕಜ್ಞಾನ ರ‍್ಬೇಕು ಸಾರ್. ಕಾಂತ ಬಹಳ ಮುಗ್ಧ. ಏನೂ ತಿಳೀತಿರಲಿಲ್ಲ. ಬೆಳ್ಳಗಿರದ್ನೆಲ್ಲ ಹಾಲು ಅಂತ ತಿಳ್ಕಳ್ತಿದ್ದ. ಅವನ ಹೆಣ್ತಿ ಇನ್ನೂ ಸಣ್ಣುಡುಗಿ. ಅದ್ಕೂ ತಿಳೀತಿದ್ದಿಲ್ಲ.

ಬೆಟ್ಟಯ್ಯನಿಗೆ ಕಣ್ಣು ಕಾಣ್ತಿರಲಿಲ್ಲ, ಕಿವಿ ಕೇಳಿಸ್ತರ‍್ಲಿಲ್ಲ. ನಡೆದಾಡೋದೇ ಕಷ್ಟ. ಮೂಲೆಗುಂಪಾಗಿದ್ದ. ಕಾಂತನ ಸ್ನೇಹಿತರೆ ಕೈಕೊಟ್ರು. ಕಾಂತನಿಗೆ ದುಡ್ಡು ಕೊಟ್ಟು ಆ ಕಡೆ ಈ ಕಡೆ ಸಿನಿಮಾ, ತೋಟ ತುಡಿಕೆ ಅಂತ ಕಳಿಸೋರು. ಕಾಂತ ಅತ್ತ ಹೋದ್ರೆ ಇತ್ತ ಇವರು ಕಾಂತನ ಮನೆ ಸರ‍್ಕೊಳ್ಳೋರು. ಆ ಹುಡುಗಿಗೋ ಕೆಟ್ಟದ್ದು ಯಾವ್ದು, ಒಳ್ಳೇದ್ಯಾವ್ದು ಅನ್ನೋದು ತಿಳೀತರ‍್ಲಿಲ್ಲ. ಪೋಲಿಗಳು ಏನು ಮಾಯ ಮಾಡಿದ್ರೊ, ಏನು ಗಿಲೀಟು ತರ‍್ಸಿದ್ರೊ? ಒಂದು ಸಂಸಾರನೇ ಹಾಳು ಮಾಡಿದ್ರು. ಈ ಸಹವಾಸವೇ ಬೇಡ ಅಂತ ಬೆಟ್ಟಯ್ಯ ಊರು ಖಾಲಿ ಮಾಡ್ದ.” ಅಂದು ಭರ್ಮಜ್ಜ ನಿಟ್ಟುಸಿರಾದ.

*********

‍ಲೇಖಕರು Avadhi

October 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Dr.Devaraj MB.

    So many incidents pass through in the life history memorable, lot of miserable situations who accidentally encounter, suffers, little but bitter ness reality in life situation s. You cover the incidents with possible end ups. Thanks Dr. Basheer .

    ಪ್ರತಿಕ್ರಿಯೆ
  2. Dr.Rathnakar mallya

    So many heart touching Incidents of a veterinary doctor in feildwork narrated very well. Great Docterji.

    ಪ್ರತಿಕ್ರಿಯೆ
  3. Dr akthar Hussain

    This story clearly exposing how sociaty misuses innocent people. Very nice story..

    ಪ್ರತಿಕ್ರಿಯೆ
  4. Mohammad Shareef Nadaf

    Mohammad Shareef
    The real heart touching story of innocent staff narrated very nice

    ಪ್ರತಿಕ್ರಿಯೆ
  5. SUNIL CHANDRA

    REALLY HEART WRENCHING… SO MANY ” BETTAYYA’S IN THOSE DAYS… REAL HONEST AND OBEDIENT ASSISTANTS,… REAL STORY WORTHY OF INSLUCION AS A CHAPTER IN PROFESSIONAL COURSE ON “HUMANITY” ,,,AS USUAL MASTERPICE WRITING

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: