-ಡಾ.ಜಿ.ಎನ್ ಉಪಾಧ್ಯ
ಹಿರಿಯ ಸಾಹಿತಿ, ವಿಜ್ಞಾನಿ ಡಾ. ನಿಂಜೂರು ಅವರು ನಿನ್ನೆ ಮುಂಬೈಯಲ್ಲಿ ನಿಧನರಾದರು.ಅವರ ಸಾಧನೆಯ ಸ್ಮರಣೆಗೆ ಈ ಲೇಖನ.
ಜೀವ ವಿಜ್ಞಾನಿಯಾದ ಡಾ. ವ್ಯಾಸರಾವ್ ನಿಂಜೂರ್ ಅವರು ತಮ್ಮೆಲ್ಲ ಬರವಣಿಗೆಯಲ್ಲೂ ಮಾನವ ಜೀವಿಯನ್ನು ತೂಗಿ ನೋಡುವ, ಪರೀಕ್ಷಿಸುವ, ಸಂಶೋಧಿಸುವ, ಸಾಮೂಹಿಕವಾಗಿ ತಾಳೆ ಹಾಕಿ ನೋಡಿ ವಿಶ್ಲೇಷಿಸುವ ಪ್ರವೃತ್ತಿಯಿಂದಾಗಿ ಅವರು ನಮ್ಮ ಸಮಕಾಲೀನ ಲೇಖಕರ ನಡುವೆ ಭಿನ್ನ ಧ್ವನಿಯಾಗಿ ಹೆಸರು ಮಾಡಿದ್ದರು.
‘ಜ್ಞಾನಂ ವಿಜ್ಞಾನ ಸಹಿತಂ’ ಎಂಬುದು ನಮ್ಮಲ್ಲಿ ಚಾಲ್ತಿಯಲ್ಲಿದ್ದ ಪ್ರಾಚೀನ ಹೇಳಿಕೆ. ಈ ದಿಸೆಯಲ್ಲಿ ಮುಂದುವರಿದು ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕೃಷಿ ಮಾಡಿ ವಿಪುಲ ಬೆಳೆ ತೆಗೆದವರು ಡಾ. ವ್ಯಾಸರಾವ್ ನಿಂಜೂರ್. ಮುಂಬೈಯಲ್ಲಿ ನೆಲೆಸಿ ವಿಜ್ಞಾನಿಯಾಗಿ ಹೆಸರು ಮಾಡಿ ಕನ್ನಡದ ತೇರ ನೆಳೆದ ಡಾ. ನಿಂಜೂರರದು ನಿಜವಾಗಲೂ ಅಸಾಧಾರಣ ಪ್ರತಿಭೆ.ಯಕ್ಷಗಾನ ಕಲಾವಿದನಾಗಿ, ವಿಜ್ಞಾನಿಯಾಗಿ, ಸಂಶೋಧಕನಾಗಿ, ಪ್ರಾಧ್ಯಾಪಕನಾಗಿ, ಕತೆಗಾರನಾಗಿ, ಕಾದಂಬರಿಕಾರನಾಗಿ, ಅನುವಾದಕನಾಗಿ, ಪತ್ರಿಕೋದ್ಯಮಿಯಾಗಿ ಅವರು ದೇಶ ವಿದೇಶಗಳಲ್ಲಿ ಸೈಯೆನಿಸಿಕೊಂಡಿದ್ದರು.ಜೀವ ವಿಜ್ಞಾನಿಯಾದ ಡಾ. ವ್ಯಾಸರಾವ್ ನಿಂಜೂರ್ ಅವರು ತಮ್ಮೆಲ್ಲ ಬರವಣಿಗೆಯಲ್ಲೂ ಮಾನವ ಜೀವಿಯನ್ನು ತೂಗಿ ನೋಡುವ, ಪರೀಕ್ಷಿಸುವ, ಸಂಶೋಧಿಸುವ, ಸಾಮೂಹಿಕವಾಗಿ ತಾಳೆ ಹಾಕಿ ನೋಡಿ ವಿಶ್ಲೇಷಿಸುವ ಪ್ರವೃತ್ತಿಯಿಂದಾಗಿ ಅವರು ನಮ್ಮ ಸಮಕಾಲೀನ ಲೇಖಕರ ನಡುವೆ ಭಿನ್ನ ಧ್ವನಿಯಾಗಿ ಹೆಸರು ಮಾಡಿದ್ದರು.
ಮುಂಬೈನ ಬಾಬಾ ಪರಮಾಣು ಸಂಶೋಧನ ಕೇಂದ್ರದಲ್ಲಿ ಜೀವ ರಸಾಯನ ಶಾಸ್ತ್ರದ ವಿಜ್ಞಾನಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದರೂ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯ ಪರಿಚಾರಿಕೆಯಿಂದ ಅವರು ದೂರವಾದವರಲ್ಲ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ `ಫೆಲೋ’ ಆಗಿ ಕೆಲಸ ಮಾಡಿದ ಅವರು ವಿಜ್ಞಾನ ಲೋಕದ ವಿಸ್ಮಯಗಳ ಕುರಿತು ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಒಳ್ಳೊಳ್ಳೆಯ ಬರಹಗಳನ್ನು ಪ್ರಕಟಿಸಿದ್ದರು.ಅವರ ಹೆಸರಲ್ಲಿ ಒಂದು ಎನ್ಜೈಮ್ ಬಹುಕಾಲ ಇತ್ತು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿ.
ಮುಂಬಯಿಯಲ್ಲಿ ನೆಲೆನಿಂತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ ಬಹುಮುಖ್ಯ ಲೇಖಕರಲ್ಲಿ ಡಾ. ವ್ಯಾಸರಾವ್ ನಿಂಜೂರ್ ಅವರೂ ಒಬ್ಬರು. ಹೊರನಾಡಿನಲ್ಲಿದ್ದುಕೊಂಡು ಸತ್ವಪೂರ್ಣವಾದ ಕೃತಿಗಳನ್ನು ಕನ್ನಡ ವಾಙ್ಮಯಕ್ಕೆ ನೀಡಿದ ಡಾ. ನಿಂಜೂರರ ಜೀವನ ಸಾಧನೆ ಅನೇಕ ದೃಷ್ಟಿಯಿಂದ ನಮ್ಮ ಗಮನಸೆಳೆಯುತ್ತದೆ. ಸಾಹಿತ್ಯ ಹಾಗೂ ವಿಜ್ಞಾನ ಇವೆರಡನ್ನೂ ಸಮ ಸಮವಾಗಿ ನಡೆಸಿಕೊಂಡು ಬಂದ ಅವರು ಈ ಉಭಯ ಕ್ಷೇತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದರು.ವಿಜ್ಞಾನಿಯಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡಾಡಿದರೂ ತಮ್ಮ ಬಹುಮುಖ ಸಾಧನೆಯ ನಡುವೆ ಸಾಹಿತ್ಯ ರಚನೆಯನ್ನು ಮೊನ್ನೆ ಮೊನ್ನೆಯವರೆಗೂ ಅವರು ಮುನ್ನಡೆಸಿಕೊಂಡು ಬಂದಿದ್ದರು.
1940ನೆಯ ಇಸವಿ ಅಕ್ಟೋಬರ್ 6ರಂದು ಉಡುಪಿ ಸಮೀಪದ ತೆಂಕನಿಡಿಯೂರಿನಲ್ಲಿ ಜನಿಸಿದ ವ್ಯಾಸರಾವ್ ಬಾಲ್ಯದ ಶಿಕ್ಷಣವನ್ನು ಕೊಡವೂರು, ಕಲ್ಯಾಣಪುರದಲ್ಲಿ ಪೂರೈಸಿದರು. ಅವರ ಬಾಲ್ಯದ ಶಿಕ್ಷಣವೆಲ್ಲ ಕನ್ನಡ ಮಾಧ್ಯಮದಲ್ಲೇ. ಅಷ್ಟೇ ಅಲ್ಲ, ಆಗಿನ ಮದ್ರಾಸ್ ಪ್ರಾಂತದಲ್ಲಿ ಕನ್ನಡ ವಿಷಯದಲ್ಲಿ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ತಮ್ಮ ಜಾಣ್ಮೆಯನ್ನು ತೋರಿಸಿಕೊಟ್ಟರು.ಅನಂತರ ಉಡುಪಿಯ ಎಂ. ಜಿ. ಎಂ. ಮಹಾವಿದ್ಯಾಲಯದಿಂದ ಸ್ನಾತಕ ಪದವಿ ಪಡೆದರು. ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಯಲ್ಲಿಯೂ ಈ ವಿಜ್ಞಾನದ ವಿದ್ಯಾರ್ಥಿ ಮೇಲುಗೈ ಸಾಧಿಸಿದರು. ಲೇಖಕ ಈಶ್ವರಯ್ಯ ಅವರೊಂದಿಗೆ ಸೇರಿಕೊಂಡು `ವ್ಯಾಸೇಶ್ವರ’ ಎಂಬ ಅಂಕಿತ ನಾಮದಿಂದ ಟೀಕೆ ಟಿಪ್ಪಣಿ ಬರೆದು ಆ ಕಾಲದ ಹಿರಿಯ ಸಾಹಿತಿಗಳ ಕೋಪಕ್ಕೆ ಗುರಿಯಾದುದೂ ಉಂಟು.ಒಮ್ಮೆ ಉಡುಪಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಬಂದಿದ್ದ ಅಂದಿನ ಹೆಸರಾಂತ ಸಾಹಿತಿ ಅ. ನ. ಕೃಷ್ಣರಾಯರು `ಬರೇ ಕೆಡುಕನ್ನು ಬೊಟ್ಟು ಮಾಡಿ ತೋರಿಸಿದರೆ ಅದು ಒಳ್ಳೆಯ ವಿಮರ್ಶೆಯಾಗದು ಕಣಯ್ಯ’ ಎಂದು ಬುದ್ಧಿಮಾತು ಹೇಳಿದರಂತೆ.
ಪದವೀಧರರಾದ ಮೇಲೆ ನಿಂಜೂರರು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬಯೊಕೆಮಿಸ್ಟ್ರಿ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ನೌಕರಿ ಹಾಗೂ ಹೆಚ್ಚಿನ ಅಧ್ಯಯನಕ್ಕೆಂದು 1965ರಲ್ಲಿ ಅವರು ಮುಂಬಯಿಗೆ ಬಂದರು. ಮುಂದೆ ಮುಂಬಯಿ ವಿಶ್ವವಿದ್ಯಾಲಯದಿಂದ `ಬಯೊಕೆಮಿಸ್ಟ್ರಿ’ ವಿಷಯದಲ್ಲಿ ಉನ್ನತ ಅಧ್ಯಯನ ನಡೆಸಿ ಎಂ. ಎಸ್ಸಿ ಹಾಗೂ ಡಾಕ್ಟರೇಟ್ ಪದವಿ ಪಡೆದುಕೊಂಡರು.ಬಾಬಾ ಪರಮಾಣು ಸಂಶೋಧನ ಕೇಂದ್ರದಲ್ಲಿ ಜೀವ ರಸಾಯನ ಶಾಸ್ತ್ರದ ವಿಜ್ಞಾನಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸುತ್ತಲೇ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳ ಪರಿಚಾರಿಕೆಯಲ್ಲೂ ಸಕ್ರಿಯವಾಗಿದ್ದರು. ಬಿ. ಎ. ಆರ್. ಸಿ.ಯಲ್ಲಿ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ, ವಿಜ್ಞಾನ ಲೇಖಕರಾಗಿ, ಸಂಶೋಧಕರಾಗಿ ಒಳ್ಳೆಯ ಬರಹಗಳನ್ನು ಪ್ರಕಟಿಸಿದ್ದರು. ಆ ಮೂಲಕ ಸಹೃದಯರ ಅರಿವಿನ ಕಣಜವನ್ನು ವಿಸ್ತರಿಸುತ್ತಾ ಬಂದವರು.ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ `ಫೆಲೋ’ ಆಗಿ ಅಮೇರಿಕಾದ ಮಿಚಿಗನ್, ಕೆಲಿಫೋರ್ನಿಯಾ ರಾಕೆ ಫೆಲರ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನವನ್ನು ಕೈಗೊಂಡು ಬಂದವರು. ಅವರ ನೂರಾರು ಸಂಶೋಧನ ಪ್ರಬಂಧಗಳು ಜಗತ್ತಿನೆಲ್ಲೆಡೆ ಪ್ರಕಟವಾಗಿವೆ. ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದರು. 9191ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು.
ಡಾ. ವ್ಯಾಸರಾವ್ ನಿಂಜೂರ್ ಅವರು ಬರಿ ಶುಷ್ಕ ವಿಜ್ಞಾನಿಯಲ್ಲ. ಒಳ್ಳೆಯ ಸಹೃದಯಿ, ಅಷ್ಟೇ ರಸಿಕರು.ಎಂತಲೇ ಅವರು ಎಲ್ಲವನ್ನು ಕವಿಯ ಕಣ್ಣಿಂದ ನೋಡಬಲ್ಲವರಾಗಿದ್ದರು, ವಿಜ್ಞಾನಿಯ ಶೋಧ ಪ್ರವೃತ್ತಿಯನ್ನು ಎತ್ತಿ ಹಿಡಿದವರು. ಈ ವಿಜ್ಞಾನಿಯ ಬದುಕೇ ಒಂದು ದೊಡ್ಡ ಕಾದಂಬರಿ. ಅವರ ಕಾದಂಬರಿ ಕತೆಗಳಲ್ಲೂ ಇದು ಪಡಿಮೂಡಿದೆ. ಕತೆಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಅವರು ಅಲ್ಲಿಂದ ಕಾದಂಬರಿ ಲೋಕಕ್ಕೆ ಕಾಲಿಟ್ಟರು.
ನಿಂಜೂರರು ಸುಮಾರು ಎಪ್ಪತ್ತರಷ್ಟು ಕತೆಗಳನ್ನು ಬರೆದಿದ್ದಾರೆ. ಅವು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡು ಸಹೃದಯರ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಅವರ ಸಮಗ್ರ ಕಥಾ ಸಂಕಲನವೂ ಬೆಳಕು ಕಂಡಿದೆ .ಡಾ. ವ್ಯಾಸರಾವ್ ನಿಂಜೂರ ಅವರು ಕತೆಗಾರರಾಗಿಯೂ ಮಿಂಚಿದ್ದರು. ಕುಂಕುಮ (1963),`ಮಂಚ (2005)’, ದೂಜ ಮಾಸ್ತರರ ಮಗಳು ಬಸಿರಾದುದು (2011) ಅವರ ಪ್ರಕಟಿತ ಕಥಾ ಸಂಕಲನಗಳು.
ಕನ್ನಡದ ಅತ್ಯುತ್ತಮ ಕತೆ ಗಾರರಲ್ಲಿ ಡಾ. ನಿಂಜೂರು ಅವರೂ ಒಬ್ಬರು. ನಮ್ಮ ಸಾಮಯಿಕ ಪತನಮುಖಿ ಸಮಾಜ ವ್ಯವಸ್ಥೆ, ಮೌಲ್ಯಗಳ ಅಧಃಪತನ, ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳ ವೈದೃಶ್ಯಗಳನ್ನು ಅವರು ತಮ್ಮ ಕತೆಯೊಳಗೆ ಚಿತ್ರಿಸಿರುವ ಪರಿ ಅನನ್ಯ. ನಿರಾಕರಣೆ, ಮಂಚ, ಗರಡಿ ಮಜಲಿನ ಗಾಂಧಿ, ಸಣ್ಣಮ್ಮ, ದೂಜ ಮಾಸ್ತರರ ಮಗಳು ಬಸಿರಾದುದು, ಪುತ್ರಕಾಮೇಷ್ಠಿ, ಆಗಮನ ಮೊದಲಾದ ಅತ್ಯುತ್ತಮ ಕತೆಗಳನ್ನು ಬರೆದ ಡಾ. ನಿಂಜೂರರ ಪ್ರತಿಭೆ ಅಸಾಧಾರಣವಾದುದು.
`ವ್ಯಾಸರಾವ್ ನಿಂಜೂರ್ ಅವರು ನವ್ಯದ ಶಿಸ್ತಿನಲ್ಲಿ ಬರೆಯತೊಡಗಿದವರು. ವ್ಯಕ್ತಿಯ ಆಂತರಂಗಿಕ ಬದುಕನ್ನು ಪ್ರಜ್ಞೆಯ ಕೇಂದ್ರದಲ್ಲಿ ನಿಲ್ಲಿಸುವ ನವ್ಯಕ್ಕಿಂತ ಭಿನ್ನವಾಗಿ ದಟ್ಟ ಪ್ರಾದೇಶಿಕತೆಯನ್ನು ಅವರು ತಮ್ಮ ಕಥೆಗಳಲ್ಲಿ ತರುತ್ತಾರೆ. ಹಾಗಾಗಿ ಅವರ ಕತೆಗಾರಿಕೆಗೆ ಒಂದು ಪ್ರತ್ಯೇಕತೆ ಬಂದಿದೆ. ಹಳ್ಳಿಯ ಬದುಕಿನ ಚಿತ್ರಗಳನ್ನೂ ಅವರು ನವ್ಯದ ಒಳನೋಟದೊಂದಿಗೆ ಕೊಡಬಲ್ಲರು’ ಎಂಬುದಾಗಿ ಹಿರಿಯ ವಿಮರ್ಶಕ ಡಾ. ಜನಾರ್ದನ ಭಟ್ ಅವರು ನಿಂಜೂರರ ಕತೆಗಳ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.
ಡಾ. ವ್ಯಾಸರಾವ್ ಅವರು ಕನ್ನಡ ಸಾಹಿತ್ಯದಲ್ಲಿ ನಾಮಾಂಕಿತರಾಗಿರುವುದು ಕಾದಂಬರಿಕಾರರಾಗಿಯೇ. `ಉಸಿರು’ ಅವರ ಮೊದಲ ಕಾದಂಬರಿ. ಇದು 1965ರಲ್ಲಿ ಕೃತಿರೂಪದಲ್ಲಿ ಬಂದಿತು.ಕತೆಗಾರರಾಗಿ ಹೆಸರು ಮಾಡಿದ ಡಾ. ನಿಂಜೂರರ ಮೊದಲ ಕಾದಂಬರಿಯನ್ನು ಮನೋಹರ ಗ್ರಂಥಮಾಲೆ ಪ್ರಕಟಿಸಿ ಅವರ ಪ್ರತಿಭೆಯನ್ನು ಲೋಕಮುಖಕ್ಕೆ ಪರಿಚಯಿಸಿತು.ಹದಿಹರೆಯದ ಯುವ ಮನಸ್ಸುಗಳ ತವಕ ತಲ್ಲಣಗಳನ್ನು ಉಸಿರು ಕಾದಂಬರಿ ಸಮರ್ಥವಾಗಿ ಸೆರೆಹಿಡಿದಿದೆ. ಸಮಾಜದ ಸ್ಥಿತ್ಯಂತರವನ್ನು ಸಶಕ್ತವಾಗಿ ಗುರುತಿಸಿ ದಾಖಲಿಸುವ ಕೆಲಸವನ್ನು ಡಾ. ನಿಂಜೂರರು ತಮ್ಮ ಕಾದಂಬರಿಗಳಲ್ಲಿ ಮಾಡಿದ್ದಾರೆ.
‘ಶ್ರೀ ಚಾಮುಂಡೇಶ್ವರಿ ಭವನ’ ಅವರ ಇನ್ನೊಂದು ಮಹತ್ವದ ಕಾದಂಬರಿ. ಸಾಹಿತ್ಯ ಅಕಾಡೆಮಿಯ ಬಹುಮಾನವೂ ಈ ಕೃತಿಗೆ ದೊರಕಿದೆ. ಕನ್ನಡದ ಅತ್ಯುತ್ತಮ ಪ್ರಾದೇಶಿಕ ಕಾದಂಬರಿಗಳಲ್ಲಿ ಶ್ರೀ ಚಾಮುಂಡೇಶ್ವರಿ ಭವನವೂ ಒಂದು. ಪ್ರಾದೇಶಿಕತೆಯನ್ನು ಚಿತ್ರಿಸುವುದರಲ್ಲಿ ಡಾ. ನಿಂಜೂರರು ಕನ್ನಡದ ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರನ್ನೂ ಮೀರಿಸಿದ್ದಾರೆ ಎಂದು ನಾಡಿನ ವಿಮರ್ಶಕರು ಅವರ ಈ ಕೃತಿಯನ್ನು ಕೊಂಡಾಟ ಮಾಡಿದ್ದುಂಟು.ಕನ್ನಡದ ವಿರಳ ಪ್ರಾದೇಶಿಕ ಕಾದಂಬರಿಗಳಲ್ಲಿ ಪ್ರಸ್ತುತ ಕೃತಿಯೂ ಒಂದು. ಒಬ್ಬ ವಿಜ್ಞಾನಿಯಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯ ಇತಿಮಿತಿಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಲೇಖಕರು ಮಾಡಿದ್ದಾರೆ. `ನಗರ ಸಂಸ್ಕೃತಿ ಹಳ್ಳಿ ಹಳ್ಳಿಗಳಿಗೆ ಹರಡುವ ರೀತಿಯಲ್ಲಿ ನಿಂತ ನೀರಿನಂತಿರುವ ಹಳ್ಳಿಯ ಸಾಮಾಜಿಕ ವ್ಯವಸ್ಥೆಯು ಕುಸಿಯುತ್ತಲೇ ಬದಲಾಗುವ ರೀತಿಯನ್ನು ತುಂಬ ಮಾರ್ಮಿಕವಾಗಿ ಬಿಂಬಿಸುವ ಈ ಕೃತಿ ಒಂದು ಅನನ್ಯ ಕಾದಂಬರಿ’ ಎಂದು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರು ಅಭಿಪ್ರಾಯ ಪಟ್ಟಿದ್ದಾರೆ.ತೆಂಕನಿಡಿಯೂರಿನ ಕುಳುವಾರಿಗಳು ಅವರ ಕೊನೆಯ ಕಾದಂಬರಿ.ಇದು ಗೋಕುಲವಾಣಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಸಾಕಷ್ಟು ಜನಪ್ರಿಯವಾಗಿದೆ.
ಸಾಹಿತ್ಯ ಸೃಷ್ಟಿ ಎಂದರೆ ಜೀವನ ಸೃಷ್ಟಿಯೇ ಎಂಬ ನಿಲುವು ಡಾ. ನಿಂಜೂರರ ಕೃತಿಗಳಲ್ಲಿ ಕಾಣಸಿಗುತ್ತದೆ. ನಾಟಕ ರಂಗದಲ್ಲೂ ಡಾ. ನಿಂಜೂರರು ಕೈಯಾಡಿಸಿದ್ದಾರೆ.ಕನ್ನಡ ರಂಗಭೂಮಿಯಲ್ಲಿ ಬಣ್ಣ ಹಚ್ಚಿ ರಂಗಮಂಚದಲ್ಲಿ ಮಿಂಚಿದ ಅವರು ಒಳ್ಳೆಯ ನಾಟಕಗಳನ್ನೂ ಬರೆದಿದ್ದರು. ಈ ವಿಜ್ಞಾನಿ ಒಂದು ಕಾಲದಲ್ಲಿ ಪ್ರಸಿದ್ಧ ಯಕ್ಷಗಾನ ವೇಷಧಾರಿ, ಅಷ್ಟೇ ಅಲ್ಲ, ಯಕ್ಷಗಾನ ಭಾಗವತಿಕೆಯ ಮಟ್ಟು ಹಾಗೂ ಹೆಜ್ಜೆಗಳನ್ನು ಶಾಸ್ತ್ರೋಕ್ತವಾಗಿ ಕಲಿತವರು!
ಹೀಗಾಗಿ ಅವರ ನಾಟಕ ಕೃತಿಗಳಲ್ಲಿ ರಂಗಭೂಮಿಯ ಎಲ್ಲ ಸಾಧ್ಯತೆಗಳು ಚೆನ್ನಾಗಿ ಅಭಿವ್ಯಕ್ತಗೊಂಡಿವೆ. `ನಲ್ವತ್ತರ ನಲುಗು’ ಇದು ಅವರ ಪ್ರಕಟಿತ ನಾಟಕ. ಈ ನಾಟಕ ಹತ್ತಾರು ಪ್ರದರ್ಶನಗಳನ್ನು ಕಂಡು ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಟಕವನ್ನು ನಿರ್ದೇಶಿಸಿ ರಂಗದ ಮೇಲೆ ತಂದ ಪ್ರಖ್ಯಾತ ಕಲಾವಿದ ರಂಗ ನಿರ್ದೇಶಕ ಸದಾನಂದ ಸುವರ್ಣ ಅವರೇ ಈ ಕೃತಿಯನ್ನು ಪ್ರಕಟಿಸಿ ಗೌರವಿಸಿದ್ದಾರೆ. ಡಾ. ನಿಂಜೂರರ ಹೆಚ್ಚಿನ ನಾಟಕಗಳು ಬೆಳಕು ಕಂಡಿಲ್ಲ ಎಂಬುದು ದುರದೃಷ್ಟಕರ ಸಂಗತಿ.
ಡಾ. ನಿಂಜೂರ್ ಅವರದು ತುಸು ಸಂಕೋಚ ಪ್ರವೃತ್ತಿ. ಪ್ರಚಾರ, ಪ್ರಶಸ್ತಿ, ಪುರಸ್ಕಾರಗಳಿಂದ ಅವರು ಬಲುದೂರ. ತಮ್ಮ ಬೇಳೆ ಬೇಯಿಸಿಕೊಳ್ಳಲು ಇತರರನ್ನು ಬಳಸಿಕೊಳ್ಳುವ ಪ್ರವೃತ್ತಿಯೂ ಅವರದ್ದಲ್ಲ. ಬರೆದುದೆಲ್ಲ ಪ್ರಕಟವಾಗಲೇಬೇಕೆಂಬ ಹಠವೂ ಅವರಿಗಿರಲಿಲ್ಲ.
ಯಾವ ಸಾಹಿತ್ಯ ಚಳುವಳಿಯ ನೊಗಕ್ಕೂ ಅವರು ಹೆಗಲು ಕೊಟ್ಟವರಲ್ಲ. ಅವರೊಬ್ಬ ಸೂಕ್ಷ್ಮಮತಿಯ ಸ್ವೋಪಜ್ಞ ಲೇಖಕ. ಡಾ. ನಿಂಜೂರರ ಶ್ರೀ ಚಾಮುಂಡೇಶ್ವರಿ ಭವನ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮರು ಮುದ್ರಿಸಿದೆ. ಇದು ಹೊರನಾಡ ಲೇಖಕನಿಗೆ, ಹೊರನಾಡ ಕನ್ನಡಿಗರಿಗೆ ಸಂದ ದೊಡ್ಡ ಗೌರವವೆಂದೇ ಹೇಳಬೇಕು. ಬಿ. ಎ. ಆರ್. ಸಿ. ಕನ್ನಡ ಸಂಘ, ಕರ್ನಾಟಕ ಸಂಘ, ಬಿ. ಎಸ್. ಕೆ. ಬಿ. ಅಸೋಸಿಯೇಶನ್ ಮೊದಲಾದ ಸಂಸ್ಥೆಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಅಕಾಡೆಮಿ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿಗೂ ಅವರು ಪಾತ್ರರಾಗಿದ್ದರು.
ನಿಂಜೂರರ ಶೈಲಿ ಬಹುಹೃದ್ಯ. ತಮ್ಮ ಕತೆಗಳಲ್ಲಿ ಅವರು ಬಳಸುವ ಕಥಾತಂತ್ರ, ಭಾಷಾ ಶೈಲಿ, ನವಿರಾದ ಹಾಸ್ಯ, ಪ್ರಾದೇಶಿಕತೆ ಮೊದಲಾದ ಅಂಶಗಳು ಅವರನ್ನು ನಮ್ಮ ನಡುವಿನ ಮಹತ್ವದ ಕತೆಗಾರನೆಂದು ಗುರುತಿಸಲು ಕಾರಣಗಳಾಗಿವೆ. ತಮ್ಮ ಕತೆ , ಕಾದಂಬರಿಗಳಲ್ಲಿ ಅವರು ಬಿಟ್ಟು ಬಂದ ಬೀಡನ್ನು ಹಾಗೂ ಅನ್ನ ಕೊಟ್ಟ ನಾಡನ್ನು (ಮುಂಬಯಿ ನಗರ) ಅಷ್ಟೇ ಸೊಗಸಾಗಿ ಸಶಕ್ತವಾಗಿ ಚಿತ್ರಿಸಿರುವುದು ವಿಶೇಷ.
ಕರಾವಳಿ ಕರ್ನಾಟಕದ ಗ್ರಾಮೀಣ ಪರಿಸರದ ನಂಬಿಕೆ, ಸಂಪ್ರದಾಯ, ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆ, ಸ್ತ್ರೀ ಪುರುಷರ ನಡುವಿನ ಸರಸ ವಿರಸಗಳನ್ನೆಲ್ಲ ಲಲಿತ ಮನೋಹರವಾಗಿ ಕತೆ ಯೊಳಗೆ ತಂದಿರುವ ಪರಿಗೆ ಯಾರೂ ಬೆರಗಾಗಬೇಕು. ನಿತ್ಯದ ಬದುಕಿನಲ್ಲಿ ಕತೆ ಹೇಗೆ ಹುಟ್ಟಬಲ್ಲದು, ಅದನ್ನು ಹೇಗೆ ಅಭಿವ್ಯಕ್ತಪಡಿಸಬೇಕು ಎಂಬ ಕಲೆಗಾರಿಕೆಯಲ್ಲಿ ಅವರು ಸೈ ಎನಿಸಿಕೊಂಡಿದ್ದರು. ಸಾಮಾನ್ಯ ಘಟನೆಯನ್ನು ಕಲಾತ್ಮಕವಾಗಿ ಕಾವ್ಯಾತ್ಮಕವಾಗಿ ಹೇಳಬಲ್ಲ ಡಾ. ನಿಂಜೂರರು ಯಶಸ್ವಿ ಕತೆಗಾರರಾಗಿಯೂ ಮಿಂಚಿದ್ದಾರೆ.
ನಗರ ಜೀವನದ ಸಂಕೀರ್ಣತೆಯನ್ನು ಸಮರ್ಥವಾಗಿ ಸೆರೆಹಿಡಿದ ಕೆಲವೇ ಕೆಲವು ಲೇಖಕರಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲಬಲ್ಲದು ಎಂಬುದಕ್ಕೆ ಅವರ ಕತೆಗಳೇ ಸಾಕ್ಷಿ. “ಗರಡಿ ಮಜಲಿನ ಗಾಂಧಿ, ಲಗೋರಿ ಫಸ್ಕು, ಕಲೀಮುಲ್ಲ, ಸಣ್ಣಮ್ಮ, ದಬ್ಬೆಟ್ಟು ದಾಮೋದರ ಇಂಥ ಹತ್ತು ಹಲವು ಅಪ್ಪಟ ಜೀವಿಗಳನ್ನು ತನ್ಮಯತೆಯಿಂದ ಮಣ್ಣಿನ ಬೆರಳುಗಳಿಂದ ರೂಪಿಸಿರುವ ನಿಂಜೂರರ ಕಥೆಗಾರಿಕೆ ಕಳೆದ ನಾಲ್ಕು ದಶಕದಲ್ಲಿ ಬಂದು ಹೋದ ಕನ್ನಡದ ವಿವಿಧ ಸಾಹಿತ್ಯಕ ಚಟುವಟಿಕೆಗಳ ಮೇಲುಸ್ತರದ ಪ್ರಭಾವಗಳಿಗೆ, ಆಮಿಷಗಳಿಗೆ ಕಿಂಚಿತ್ತೂ ಬಲಿಯಾಗದೇ, ತನ್ನದೇ ಆದ ಗಟ್ಟಿ ನೋಟಕ್ಕೆ ಮುಕ್ತ ಜೀವನದರ್ಶನಕ್ಕೆ ಪಕ್ಕಾಗುತ್ತ ಬಂದ ರೀತಿ ಹೃದ್ಯವಾಗಿದೆ” ಎಂದು ಜಯಂತ ಕಾಯ್ಕಿಣಿಯವರು ಹೇಳಿರುವ ಮಾತುಗಳಲ್ಲಿ ತಥ್ಯವಿದೆ.
ಡಾ. ನಿಂಜೂರ್ ಅವರು ನಿಜ ಅರ್ಥದಲ್ಲಿ ಮಾನವತಾವಾದಿ ಹಾಗೂ ಪ್ರಗತಿಗಾಮಿ ಚಿಂತಕ. `ಆಗಾಗ ಅನಿಸಿದ್ದು’
ಡಾ. ನಿಂಜೂರರ ಮಹತ್ವದ ಕೃತಿ. `ಗೋಕುಲವಾಣಿ’ ಮಾಸಿಕದಲ್ಲಿ ಅವರು ಬರೆದ ಸಂಪಾದಕೀಯ ಬರೆಹಗಳಿಂದ ಆಯ್ದವು. ಅನಿಸಿದ್ದವುಗಳ ಅನಾವರಣ, ಸಂದರ್ಭಗಳಿಗೆ ಸ್ಪಂದನ, ನೆನಪುಗಳ ದಿಬ್ಬಣ ಎಂಬ ಮೂರು ತೆನೆಗಳು ಹಾಗೂ 89 ಲೇಖನಗಳಿರುವ ಈ ಕೃತಿಯಲ್ಲಿ ಡಾ. ನಿಂಜೂರರ ಸ್ವೋಪಜ್ಞತೆ ಹಾಗೂ ಲೇಖನಶಕ್ತಿ ಬಹು ಸಮರ್ಥವಾಗಿ ಪಡಿಮೂಡಿದೆ. ಭಾರತೀಯ ಸಂಸ್ಕೃತಿ, ಜೀವನಾನುಭವ, ಪರಿಸರದ ಬಗೆಗಿನ ಕಾಳಜಿ, ಅಸ್ಮಿತೆಯ ಬಗೆಗಿನ ಎಚ್ಚರ, ಉದಾತ್ತ ಲೋಕದೃಷ್ಟಿ, ದೇಸಿ ಚಿಂತನೆ, ವೈಜ್ಞಾನಿಕ, ಮನೋವೈಜ್ಞಾನಿಕ ನಿಲುವುಗಳಿಂದ ಕೂಡಿರುವ ಇಲ್ಲಿನ ಲೇಖನಗಳು ಅನೇಕ ದೃಷ್ಟಿಯಿಂದ ಮೌಲಿಕವಾಗಿವೆ.ಎಳೆದ ತೇರು ಅವರ ಆತ್ಮಕಥೆ.ಅದು ಬಹು ರೋಚಕವಾಗಿ ಮೂಡಿಬಂದಿದೆ.
ರಜನಿಕಾಂತ್ ಅಕಸ್ಮಾತ್ ಭೇಟಿ !!
ನನ್ನ ಊರಿನವರು ಇದ್ದಾರಯ್ಯಾ, ಸ್ವಲ್ಪ ಮಾತಾಡಿ ಬರುವೆ!!!!!
“ಯು.ಎಸ್., ಬ್ರಿಟನ್, ಫ್ರಾನ್ಸ್ ಅಲ್ಲದೆ ಶ್ರೀಲಂಕಾದ ಕೊಲಂಬೊಗೂ ನಾನು ಭೇಟಿ ನೀಡಿದ್ದೆ. ಒಮ್ಮೆ ಅಲ್ಲಿ ನಾನು ತಂಗಿದ್ದ `ಹಾಲಿಡೇ ಇನ್’ ಹೊಟೇಲಿನಲ್ಲಿ ಯಾವುದೋ ತಮಿಳು ಸಿನೆಮಾದ ಶೂಟಿಂಗ್ ಜೋರಾಗಿ ನಡೆಯುತ್ತಿತ್ತು. ರಜನಿಕಾಂತ್ ಶೂಟಿಂಗ್ ದಲ್ಲಿ ನಿರತರಾಗಿದ್ದರು. ಶಾಟ್ನ ನಡುವಿನ ಅವಧಿಯಲ್ಲಿ ಲಾಬ್ಬಿಯಲ್ಲಿ ನಾನು ಕುಳಿತ ಸೋಫಾದಲ್ಲೇ ಬಂದು ಕುಳಿತರು. ಸ್ವಲ್ಪ ಸಮಯದಲ್ಲಿ `ಇಂಡಿಯಾ?’- ಎಂದು ನನ್ನನ್ನು ಪ್ರಶ್ನಿಸಿದರು.ಹೌದು ಎಂದು ಕನ್ನಡದಲ್ಲಿ ಉತ್ತರಿಸಿದ್ದೇ ತಡ ಅವರೂ ಕನ್ನಡದಲ್ಲಿ ಮಾತನಾಡಲಾರಂಭಿಸಿದರು!!
ಲಂಕೇಶರು ತಮ್ಮ ಪತ್ರಿಕೆಯಲ್ಲಿ ಏನೋ ಬರೆದುದಕ್ಕೆ ಅವರು ಬೇಸರಿಸಿಕೊಂಡಿದ್ದರು.`ಶಾಟ್ ರೆಡಿ’ ಎಂದು ಅತ್ಯಂತ ಗೌರವದಿಂದ ಬಂದು ಹೇಳಿದವರಿಗೆ `ನನ್ನ ಊರಿನವರು ಇಲ್ಲಿದ್ದಾರಯ್ಯ- ಸ್ವಲ್ಪ ಮಾತಾಡಿ ಬರುತ್ತೇನೆ’ ಎಂದು ಮತ್ತಷ್ಟು ಮಾತನಾಡಿದರು.
ಅಣ್ಣಾವ್ರು, ಪಂಡರಿಬಾಯಿ ಹಾಗೂ ನನ್ನ ಬಂಧುವಾದ ಖ್ಯಾತ ಕನ್ನಡ ಸಿನಿಮಾ ನಿರ್ದೇಶಕ ಆರೂರು ಪಟ್ಟಾಭಿಯವರ ಜೊತೆ ತಮಗಿರುವ ಪರಸ್ಪರ ಅನ್ಯೋನ್ಯತೆ ಸಂಬಂಧಗಳ ಕುರಿತೂ ಪ್ರಸ್ತಾಪಿಸಿದರು. ನಾನು ವಿಜ್ಞಾನಿ ಎಂದು ತಿಳಿದು, `ನಿಮ್ಮೊಂದಿಗೆ ಮಾತಾಡಿದ್ದು ನನ್ನ ಭಾಗ್ಯ’ ಎಂದರು. ತಮಿಳರ ಆರಾಧ್ಯ ದೈವವಾಗಿರುವ ರಜನೀಕಾಂತ್, ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಂಡವರು ಎಂದು ಆ ತನಕ ನಾನಿರಿಸಿಕೊಂಡಿದ್ದ ಕಲ್ಪನೆಯೆಲ್ಲ ಈ ಘಟನೆಯಿಂದ ಬುಡಮೇಲಾಯಿತು. (ಎಳೆದ ತೇರು ಆತ್ಮಕಥೆಯಲ್ಲಿ)






0 Comments