-ಯಮುನಾ ಗಾಂವ್ಕರ್
ಸ್ಪಷ್ಟ ಕಣ್ಣೋಟ, ಸಮತೋಲಿತ ಮನಸ್ಸು ಮತ್ತು ವಾತ್ಸಲ್ಯದ ಒಡನಾಡಿ
ಮೂವತ್ತೈದು ನಲವತ್ತು ವರ್ಷ ಹಿಂದಿನ ಮಾತು. ಅಂದು ನನ್ನ ಬಾಲ್ಯದಲ್ಲಿ ಜೋಯಿಡಾ ಮತ್ತು ನಮ್ಮೂರು ಗುಂದದಲ್ಲಿ ಶೈಕ್ಷಣಿಕ ಸೌಲಭ್ಯಗಳಿಲ್ಲದ ದಿನಗಳು. ನಾವು ಪರ ಊರುಗಳಲ್ಲಿದ್ದು ಯಾರದ್ದಾದರೂ ಮನೆ ಆಶ್ರಯಿಸಿ ಶಾಲೆ ಕಲಿಯುವ ಅನಿವಾರ್ಯತೆ ಮತ್ತು ಅದೇ ಜೀವನಾನುಭವ ಈಗಲೂ. ಆಗ ನಮ್ಮಲ್ಲಿ ವಿಪರೀತ ಬಡತನ, ಸಂಪ್ರದಾಯಸ್ಥ ಮನೋಭಾವ ಇದ್ದರೂ ನನ್ನ ಅಕ್ಕ-ಅಣ್ಣಂದಿರು ಊರು ಬಿಟ್ಟು ಉಳವಿ, ಮುಂಡಗೋಡು, ಯಲ್ಲಾಪುರದ ಕಳಚೆ, ವಜ್ರಳ್ಳಿಗಳಲ್ಲಿ ಶಿಕ್ಷಣ ಪಡೆಯಲು ಪರಿತಪಿಸುತ್ತಿದ್ದರು. ಆಗ ನಾನೂ ಕೂಡ ಜೋಯಿಡಾದ ನಮ್ಮೂರು ಬಿಟ್ಟು ಯಲ್ಲಾಪುರ ತಾಲೂಕಿನ ವಜ್ರಳ್ಳಿ ಸೇರಿದೆ. ಆಗಷ್ಟೇ ಎಂಟನೆಯ ತರಗತಿ. ಘಟ್ಟದ ಕೆಳಗಿನ ಹನೇಹಳ್ಳಿಯ ಓರ್ವ ಸಮರ್ಥ ವಿಜ್ಞಾನ ಮತ್ತು ಗಣಿತ ಮಾಸ್ತರ್ ಡಿ.ಎಲ್. ನಾಯಕರು ನಮಗೆ ಹೆಡ್ ಮಾಸ್ರ‍್ರು. ಸಾಹಿತ್ಯದ ಅಪಾರ ಆಸಕ್ತಿಯ ಪರಿಶ್ರಮಿ ಎಸ್.ಜಿ. ಹೆಗಡೆ ಕಣ್ಣಿಪಾಲ ಸಮಾಜ, ಪೌರನೀತಿ ಕಲಿಸುವವರು. ಪಾಠಿ ಚೀಲ, ಛತ್ರಿ, ಊಟದ ಡಬ್ಬಿ ಹಿಡಿದೇ ಐದಾರು ಕಿಲೋಮೀಟರ್ ಓಡಿಕೊಂಡೇ ೮.೪೫ ರೊಳಗೆ ಶಾಲೆ ತಲುಪಬೇಕಿದ್ದ ದಿನಗಳು ಎಂದು ಸಾಂಕೇತಿಕವಾಗಿ ಮತ್ತು ಸಾಂದರ್ಭಿಕವಾಗಿ ನೆನಪಿಸಿಕೊಳ್ಳುವೆ.
ಅದೇ ವರ್ಷ ನಾನು ಕಲಿಯುತ್ತಿದ್ದ ಪ್ರೌಢಶಾಲೆ – ಸರ್ವೋದಯ ಹೈಸ್ಕೂಲ್, ವಜ್ರಳ್ಳಿ,- ಯಲ್ಲಿ ದೂರದ ಓಟ, ಎಸೆತ, ಜಿಗಿತ, ಗುಂಪು ಆಟ ಮತ್ತು ಭಾಷಣದಲ್ಲಿ ಕೆಲವು ಬಹುಮಾನಗಳನ್ನು ಒಬ್ಬ ಉದ್ದದ ಆಜಾನುಬಾಹು ವ್ಯಕ್ತಿಯಿಂದ ಪಡೆದೆ. ಅವರು ತುಂಬಾ ಬಗ್ಗಿ ಎಲ್ಲ ಮಕ್ಕಳಿಗೂ ಈ ಬಹುಮಾನಗಳನ್ನು ಕೈಯಲ್ಲಿ ಇಡುತ್ತಿದ್ದರು. ಬೇರೆ ಅತಿಥಿಗಳು ಕೊಡುವಾಗಲೂ ಕೆಲವೊಮ್ಮೆ ಜೊತೆಗೆ ನಿಂತುಕೊಳ್ಳುತ್ತಿದ್ದರು. ಅವರ ಕೈ ಅವರ ಎದುರಿನ ಟೇಬಲ್ ದಾಟಿ ಬಂದು ನಮ್ಮೆಲ್ಲರ ಬೆನ್ನು ತಟ್ಟುತ್ತಿತ್ತು. ಅದಾಗಲೇ ನಮ್ಮ ದೈಹಿಕ ಶಿಕ್ಷಕರಾದ ಡಿ.ಜಿ. ಭಟ್ಟರು ಅತಿಥಿಗಳ ಪರಿಚಯದಲ್ಲಿ ಒಬ್ಬರ ಬಗ್ಗೆ ಹೀಗೆ ಹೇಳಿದ್ದರು. “ನಮ್ಮ ಜಿಲ್ಲೆಯ ಮೊದಲ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರು ನಮ್ಮ ಹೈಸ್ಕೂಲಿಗೆ ಬರುತ್ತಿದ್ದಾರೆ. ಅವರು ವಕೀಲರು ಮತ್ತು ಸೊಸೈಟಿ ಬ್ಯಾಂಕಿನಲ್ಲಿ ಅವರದ್ದು ಹಿರಿತನ. ಅವರಿಗೆ ಮತ್ತು ಇತರ ಅತಿಥಿಗಳಿಗೆ ನಾವು ಸಾಲಾಗಿ ನಿಂತು ಸ್ವಾಗತ ಕೋರಿ ವೇದಿಕೆಯ ಕಡೆಗೆ ಕರೆತರೋಣ. ಮಕ್ಕಳೆ ಇನ್ನೊಂದು ವಿಷಯ ನಮ್ಮೂರಲ್ಲಿ ಅವರಷ್ಟು ಉದ್ದದ ವ್ಯಕ್ತಿಯನ್ನು ನೀವು ನೋಡಿಲ್ಲ!” ಎಂದು. ಅದು ಹೌದಾಗಿತ್ತು.
ಹಾಗೆ ಎರಡು ವರ್ಷದ ನಂತರ ಅಂದು ಕಾಲೇಜು ವಿದ್ಯಾಭ್ಯಾಸದ ಸಲುವಾಗಿ ಕಾರವಾರದ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿದ್ದಾಗ ಹಾಸ್ಟೆಲ್ ದುರವಸ್ಥೆ, ಅನಾರೋಗ್ಯಕರ ವಾತಾವರಣ ಹಾಗೂ ಅಪೌಷ್ಟಿಕ ಆಹಾರ ಪರಿಸ್ಥಿತಿ ಖಂಡಿಸಿ, ಸ್ವಂತ ಕಟ್ಟಡಕ್ಕೆ ಆಗ್ರಹಿಸಿ ಜಿಲ್ಲಾ ಪರಿಷತ್ತಿಗೆ ದೌಡಾಯಿಸಿ ಹೋಗಿದ್ದೆವು. ಅಲ್ಲಿ ಕೂಡ ಈ ಮೊದಲೇ ಕಂಡ ಅದೇ ನಗುಮುಖದ ವ್ಯಕ್ತಿ ಇದ್ದರು, ತಮ್ಮ ಜಿಲ್ಲಾ ಪರಿಷತ್ತಿನ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಮತ್ತು ಮೂರ್ನಾಲ್ಕು ಜನ ಇದ್ದರು. ನೆನಪಿಗೆ ಬರುತ್ತಿಲ್ಲ. ಬಹುಶಃ ಯಲ್ಲಾಪುರ ಭಾಗದ ಸದಸ್ಯರಾದ ಮನೋರಮಾ ಮತ್ತು ಸಿದ್ದಾಪುರದ ಎನ್.ವಿ. ಹೆಗಡೆ ಮುತ್ತಿಗೆ ಹೀಗೆ. ಬಹುಶಃ ಮಹೇಂದ್ರ ಜೈನ್ ಅವರು ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯದರ್ಶಿ ಇದ್ದಿರಬಹುದು. ಸರಿಸುಮಾರು ಇದೇ ಅವಧಿ ಕಾರವಾರದ ಶತಮಾನ ಕಂಡ ಸರ್ಕಾರಿ ಪ್ರೌಢಶಾಲೆಯ ದುರಸ್ಥಿಗೆ ಆಗ್ರಹಿಸಿ ಮೆರವಣಿಗೆ ಹೊರಟೆವು ಜಿಲ್ಲಾ ಪರಿಷತ್ತಿಗೆ. ಆಗಲೂ ಇದೇ ವ್ಯಕ್ತಿಯನ್ನು ನೋಡಿದೆವು. ಅದಾಗಲೇ ಇವರ ಬಗ್ಗೆ ಸ್ವಲ್ಪ ಗೊತ್ತಾಗಿತ್ತು. ಅವರೇ ನಮ್ಮೆಲ್ಲರ ಪ್ರೀತಿಯ ಹಿರಿಯರಾದ ಶ್ರೀ ರಮಾನಂದ ನಾಯಕ, ಹಿಚ್ಕಡ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷರು! ಸ್ವಾತಂತ್ರ‍್ಯ ಹೋರಾಟದ ಬಲು ಹೆಮ್ಮೆಯ ನೆಲದವರು. ಜಿಲ್ಲೆಯ ಎಲ್ಲಾ ತಾಲೂಕುಗಳ ಅಗತ್ಯತೆಯ ಬಗೆಗೆ ಜನರ ಬೇಕುಬೇಡಗಳ ಬಗ್ಗೆ ತಮ್ಮದೇ ಆದ ಸ್ಪಷ್ಟ ನಿಲುವು ಹೊಂದಿರುವವರು.
ಹೈಸ್ಕೂಲ್ ಜೀವನದಲ್ಲಿ ನೋಡಿದ ಮತ್ತು ತಮ್ಮ ಒಳ್ಳೆಯ ಮಾತಿನಲ್ಲಿ ಪ್ರಭಾವಿಸಿದ ವ್ಯಕ್ತಿಯನ್ನು, ನಾನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ)ನಲ್ಲಿ ಮತ್ತು ಸಾರ್ವಜನಿಕ ಜೀವನದ ಒಂದು ಹಂತಕ್ಕೆ ಬಂದಾಗ ಮತ್ತೆ ಭೇಟಿಯಾಗಿ ಅವರ ಆತ್ಮೀಯತೆ ಸಂಪಾದಿಸುವ೦ತಾದುದು ನನಗೆ ಖುಷಿಯ ಸಂಗತಿ. ಹಾಗೆಯೇ ನಾನೂ ಕೂಡ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸವಾದಿ (ಸಿಪಿಐಎಂ) ಜಿಲ್ಲಾ ಸಮಿತಿ ಸದಸ್ಯೆಯಾಗಿ ಕಾರ್ಯದರ್ಶಿ ಮಂಡಳಿ ಸದಸ್ಯೆಯಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಕಮ್ಯುನಿಸ್ಟ್ ಪಕ್ಷವೊಂದರ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದಾಗಲೂ ಅವರ ಮೆಚ್ಚುಗೆ ಇದ್ದೇಇತ್ತು. ನಾನು ಈಗಲೂ ಅಂದು ಎಂಟನೇ ತರಗತಿಯ ವಾರ್ಷಿಕೋತ್ಸವದ ವೇದಿಕೆಯಲ್ಲಿದ್ದ ರಮಾನಂದ ನಾಯಕ, ಪ್ರಮೋದ ಹೆಗಡೆ, ಎಸ್. ಎನ್. ಬೆಳ್ಳಿಪಾಲ, ಸುಬ್ಬಯ್ಯ ದೋಗಳೆ, ಗನಾ ಕೋಮಾರ್, ಶಿವರಾಮ ಭಟ್ ಬಿಡಾರ ಹಾಗೂ ಶಿಕ್ಷಣಾಧಿಕಾರಿಗಳು ಮುಂತಾದವರ ನೆನಪಿನಲ್ಲಿ ಇಟ್ಟುಕೊಂಡಿರುವೆ.
ನಾವು ಕೆಲವು ಕಡೆಗಳಲ್ಲಿ ಸಮಾನ ವಿಚಾರದ ವಿಷಯಗಳಲ್ಲಿ ಜೊತೆಯಾಗಿ ಜಂಟಿ ಹೋರಾಟಗಳಲ್ಲಿ -ವಿಶೇಷವಾಗಿ ಭೂಮಿ, ವಿದ್ಯುತ್, ಮೂಲಸೌಕರ್ಯ, ರೈಲು ಮಾರ್ಗ, ಸೌಹಾರ್ದತೆ, ಮಾನವ ಸರಪಳಿ ಇತ್ಯಾದಿಗಳ ಸಮಾನ ಸ್ವರೂಪದ ಹಕ್ಕೊತ್ತಾಯಗಳ ಈಡೇರಿಕೆಗೆ ನಡೆದ ಹೋರಾಟ ಕಾರ್ಯಕ್ರಮಗಳಲ್ಲಿ – ಜೊತೆಯಾಗುತ್ತಿದ್ದೆವು. ಕೆಲವು ಸಂದರ್ಭದಲ್ಲಿ ಸಹಾಯ ಸಹಕಾರ ಕೂಡ ನೀಡಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘದ ಶಾಂತಾರಾಮ ನಾಯಕ ಅಗಸೂರು, ನನ್ನ ಬಾಳಸಂಗಾತಿ ಅಂದು ಡಿವೈಎಫ್.ಐ ಜಿಲ್ಲಾ ಕಾರ್ಯದರ್ಶಿ ವಿಠ್ಠಲ ಭಂಡಾರಿ, ರೈತ ಸಂಘದ ಗೌರೀಶ ನಾಯಕ, ಸಿಐಟಿಯು ಪರವಾಗಿ ಎಚ್.ಬಿ. ನಾಯಕ ನಾನು ಯಮುನಾ ಗಾಂವ್ಕರ್ ಎಲ್ಲರೂ ಇರುತ್ತಿದ್ದೆವು.
ನನಗೆ ರಮಾನಂದ ನಾಯಕರೊಡನೆ ತುಸು ಸಲಿಗೆ ಇದೆ. ಏಕೆಂದರೆ, ನನ್ನೊಡನೆ ಕುಟುಂಬದ ಹಿರಿಯನ ತೆರನಾದ ಪ್ರೀತಿಯಿಂದಲೇ ಮಾತಾಡುತ್ತಾರೆ. ಅಂದು ನಾನು ಅವರಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಬಹುಮಾನ ಪಡೆದ ವಿದ್ಯಾರ್ಥಿ. ಇಂದು ಅವರ ಎದುರು ಕುಳಿತು ರಾಜಕೀಯವಾಗಿ ಸುದೀರ್ಘ ಚರ್ಚೆ ಮಾಡುತ್ತೇನೆ. ಅವರು ಕಾಂಗ್ರೆಸ್ ನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ನಾನು ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯೆ. ನಮ್ಮ ಸಮಾಜಮುಖಿ ಕೆಲಸದ ಬಗ್ಗೆ ಅಭಿಮಾನದ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಅವರು ಮತ್ತು ನಾನು ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಹಾಗೂ ರಾಜಕೀಯ ಸೈದ್ಧಾಂತಿಕ ವಿಚಾರವಾಗಿ, ಕೋಮುವಾದ ಮತ್ತು ಪರಿಸರ ವಾದದ ಬಗ್ಗೆ, ಕೆಲವು ಸಾಂಸ್ಕೃತಿಕ ಹಿರಿಮೆ ಹಾಗೂ ಕೆಲವರ ಸಾಂಸ್ಕೃತಿಕ ದಿವಾಳಿಕೋರತನ ಬಗ್ಗೆ ಮಾತಾಡುತ್ತಿರುತ್ತೇವೆ. ನೆರೆಹಾವಳಿಯ ಅಧ್ವಾನ, ಕೃಷಿ ಮತ್ತು ನೀರಾವರಿ ವಿಷಯ, ಈಗಿನ ಸಾಮಾಜಿಕ ಜಾಲತಾಣ ಅದರಲ್ಲಿ ಬರುವ ದಾರಿ ತಪ್ಪಿಸುವ ಸುಳ್ಳು ಸುದ್ದಿ ಬಗ್ಗೆಯೂ ಅವರ ಮನೆಯಂಗಳದಲ್ಲಿ ಮಾತಾಡಿದ್ದೆವು. ಸಾಹಿತ್ಯ ಸಂದರ್ಭದ ಸಹಾಯ ಸಹಕಾರಗಳು ನಮ್ಮ ಮಾತಿನ ನಡುವೆ ಇದ್ದೇ ಇರುತ್ತದೆ. ಜಿಲ್ಲೆಯ ಅಭಿವೃದ್ಧಿ ಕುರಿತು ಅವರಿಗೊಂದು ಸ್ಪಷ್ಟ ಕಣ್ಣೋಟವಿದೆ.
ಇಷ್ಟು ಮುಕ್ತವಾದ ಸ್ವವಿಮರ್ಷಾತ್ಮಕವಾದ ಚರ್ಚೆ ಎಲ್ಲಾ ರಾಜಕಾರಣಿಗಳಿಗೂ ಸಾಧ್ಯವಾಗದು. ಎಲ್ಲಾ ರಾಜಕಾರಣಿಗಳೊಂದಿಗೆ ಕೂಡ ಇಂತಹ ಸಹನೆಯ ಚರ್ಚೆ ನಿರೀಕ್ಷಿಸಲಾಗದು. ಅವರ ಅದೇ ಮುಗಳ್ನಗು ಈಗಲೂ ನಮ್ಮೊಡನೆ ಇದೆ.
ಇವರು ಸಾಹಿತ್ಯ ವಲಯದ ಹಿರಿಯರಾದ ಗೌರೀಶ ಕಾಯ್ಕಿಣಿ, ಆರ್. ವ್ಹಿ. ಭಂಡಾರಿ ವ್ಹಿ. ಜೆ. ನಾಯಕ, ವಿಷ್ಣು ನಾಯ್ಕ, ಎನ್.ಆರ್. ನಾಯಕ, ಶಾಂತಿನಾಯಕ ಹಾಗೂ ಶಾಂತಾರಾಮ ನಾಯಕ, ಮೋಹನ ಹಬ್ಬು, ಜಯಂತ ಕಾಯ್ಕಿಣಿ ಆರ್.ಜಿ. ಗುಂದಿ, ಕೃಷ್ಣ ನಾಯಕ ಹಿಚ್ಕಡ, ಕಸಾಪ ಬಿ.ಎನ್.ವಾಸರೆ ಇನ್ನೂ ಅನೇಕರ ಜೊತೆಗೆ ಆತ್ಮೀಯರಾಗಿ ವೇದಿಕೆಯನ್ನು ಹಂಚಿಕೊ೦ಡವರು. ನೆಲಮೂಲ ಸಂಸ್ಕೃತಿಯ ಹಾಲಕ್ಕಿಯವರೊಂದಿಗೆ ಆರಂಭವಾಗುವ ಅವರ ದಿನದ ಕೆಲಸ ಎಲ್ಲಾ ವರ್ಗದ ಎಲ್ಲಾ ಜಾತಿಯವರೊಡನೆ ಬೆರೆಯುತ್ತದೆ.
ನಾನು ಡಾ. ಆರ್.ವಿ. ಭಂಡಾರಿಯವರ ಸೊಸೆಯಾಗಿ ಡಾ. ವಿಠ್ಠಲ ಭಂಡಾರಿಯ ಬಾಳಸಂಗಾತಿಯಾಗಿ ಕೂಡ ನಮ್ಮ ಕುಟುಂಬದ ಪರವಾಗಿ ಅವರಿಗೆ ಶುಭಾಶಯ ಸಲ್ಲಿಸುವೆ. ಅಂಕೋಲೆ ಮತ್ತು ಜಿಲ್ಲೆಯ ಅನೇಕ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿನ ಸಾಲಿನಲ್ಲಿ ಇವರೆಲ್ಲರೂ ಇರುತ್ತಿದ್ದರು. ಪರಸ್ಪರ ನಿರ್ಭಿಡೆಯಿಂದ ಚರ್ಚಿಸುತ್ತಿದ್ದರು. ವಿಠ್ಠಲ ಮತ್ತು ರಮಾನಂದ ನಾಯಕರು ಜಿಲ್ಲೆಯ ಪರಿಸರ ಸಂಬ೦ಧಿ ವಿಚಾರ, ರೈಲು ಯೋಜನೆ, ಸಾಹಿತ್ಯದ ಓದಿನ ಬಗ್ಗೆ ಹೀಗೆ ಅನೇಕ ವಿಚಾರ ಮಾತಾಡುತ್ತಿದ್ದರು. ಕೆಲವೊಮ್ಮೆ ಒಂದೇ ವೇದಿಕೆಯಲ್ಲಿದ್ದರು. ವಿಠ್ಠಲ ಅಗಲಿದಾಗ ತುಂಬಾ ಕಕ್ಕುಲಾತಿಯಿಂದ ಸಾಂತ್ವನ ಹೇಳಿದರು ಮಾತ್ರವಲ್ಲ ಈಗಲೂ ಆಗಾಗ ನನ್ನನ್ನೂ ನಮ್ಮ ಹೋರಾಟದ ದಾರಿಯನ್ನೂ ವಿಚಾರಿಸಿಕೊಳ್ಳುತ್ತಾರೆ ಕೂಡ. ಹಾಗಾಗಿ ನನಗೆ ‘ವಾತ್ಸಲ್ಯದ ಒಡನಾಡಿ’.
ರಮಾನಂದ ನಾಯಕರು ತಮ್ಮ ಪ್ರಾಮಾಣಿಕ ರಾಜಕಾರಣದಿಂದಾಗಿ ನಮ್ಮ ದುಡಿಯುವ ವರ್ಗದ ಚಳುವಳಿಗಳಿಗೆ ಹತ್ತಿರದವರು. ಇವರು ನಿಜ ಅರ್ಥದಲ್ಲಿ ಶಾಸಕರಾಗಿ, ಮಂತ್ರಿಗಳಾಗಿ, ನಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿಯೂ ಸೇವೆಸಲ್ಲಿಸುವ ಅವಕಾಶ ಒದಗಬೇಕಿತ್ತು ಎಂದು ನನಗೆ ಅನಿಸಿದರೆ ಅತಿಶಯದ ಮಾತು ಎಂದುಕೊಳ್ಳಬೇಡಿ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿನ ಸಾರಣಿಗೆಯ ತೂತುಗಳಿಂದಾಗಿ ಪ್ರಾಮಾಣಿಕ, ಸಮಾಜಮುಖಿ ಚಿಂತನೆಯವರಿಗೆ ಅವಕಾಶಗಳು ಕಠಿಣ ಸಾಧ್ಯ. ಮತದಾರ ಸಮೂಹದ ಬಹುತೇಕ ಜನರ ರಾಜಕೀಯ ತಿಳಿವಳಿಕೆಯ ಮನೋದೌರ್ಬಲ್ಯವೂ ಇದಕ್ಕೆ ಕಾರಣವೆನ್ನಬಹುದು. ಅದೇನೇ ಇರಲಿ. ರಾಜಕೀಯವಾಗಿ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ, ಪಿಜಿಆರ್ ಸಿಂಧಿಯಾ, ಜೀವರಾಜ್ ಆಳ್ವಾ, ಈಗಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ವರೆಗೂ ಅನೇಕ ಹಿರಿಕಿರಿಯ ರಾಜಕಾರಣಿಗಳೊಂದಿಗೆ ಆಪ್ತ ಸಂಪರ್ಕ ಮತ್ತು ಸಂವಾದ ಇಟ್ಟುಕೊಂಡವರು. ಜಿಲ್ಲೆಯವರೇ ಆದ ಪಿ.ಎಸ್. ಕಾಮತ್, ಹರಿ ಪೈ, ಸ್ವಾತಂತ್ರ್ಯ ಹೋರಾಟಗಾರರಾದ ಶೆಟಗೇರಿ ಜೋಗಿ ನಾಯಕ, ಆರ್.ವಿ.ದೇಶಪಾಂಡೆ ಆದಿಯಾಗಿ ಅನೇಕರ ಸಹಪಥಿಕರಾಗಿದ್ದಾರೆ. ಯಾವುದಕ್ಕೂ ನಿರ್ಭಿಡೆಯ ಮನೋಭಾವ ಜೊತೆಗೆ ಎದುರು ಪಕ್ಷದವರ ಮನಸ್ಸು ಸೋಯಿಸದ ‘ಸಮತೋಲಿತ ಮನೋಭಾವ’ವೂ ಅವರನ್ನು ಪ್ರಾಮಾಣಿಕ ನಾಯಕತ್ವಕ್ಕೇರಿಸಿದೆ ಎಂದು ಭಾವಿಸುತ್ತೇನೆ.
ಸಹಕಾರಿ ರಂಗ, ಶೈಕ್ಷಣಿಕ ಕ್ಷೇತ್ರ, ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊ೦ದು ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುತ್ತಲೇ ತಾನು ವಯಸ್ಸಿನ ಮಿತಿ ಇಲ್ಲದೇ ಸಮಕಾಲೀನಗೊಳ್ಳುತ್ತ ಇರುವ ರಮಾನಂದ ನಾಯಕರಿಗೆ ಶುಭಾಶಯಗಳು ಮತ್ತು ಅವರ ಬದುಕು ಮತ್ತು ಕೆಲಸಗಳನ್ನು ದಾಖಲಿಸುತ್ತಿರುವ ಸಂಪಾದಕ ಮಂಡಳಿಗೆ ಅಭಿನಂದನೆಗಳು.
ಈ ಸಮಾಜದ ಆರೋಗ್ಯ ಸರಿಯಾಗಿ ಕಾಪಾಡಲು ರಮಾನಂದ ನಾಯಕರ ಮತ್ತು ಬಾಳಸಂಗಾತಿ ರಾಜಮ್ಮ ಮತ್ತು ಅವರ ಕುಟುಂಬದ ಎಲ್ಲರ ಆರೋಗ್ಯ ಚೆನ್ನಾಗಿರಬೇಕೆಂದು ನಮ್ಮ ಚಳುವಳಿಗಳ ಪರವಾಗಿ ಬಯಸುತ್ತೇನೆ ಎಂದು ಹಾರೈಸಿದ್ದೆ. ಆದರೆ ಈ ಲೇಖನ ಪುಸ್ತಕದಲ್ಲಿ ಸೇರುವ ಮೊದಲೇ ಅವರು ಅಗಲಿದುದು ನೋವಿನ ಸಂಗತಿ.






0 Comments