–ನಿರಂಜನ
ಸಾರ್ಥಕತೆ
ಬಾಡಿ ಸುಕ್ಕುವ ಮುನ್ನ
ದಿಗಂತಕ್ಕೆ ಘಮವನು ಉಗುಳುವ
ಹೂವಿನದು ಒಂದು ಸಾರ್ಥಕತೆ;
ಕಾಯದ ಅಸ್ತಿತ್ವವನ್ನೇ ಸವಿಸಿ
ಪರಿಮಳದ ಹನಿಗಳ ಹರಿಸುವ
ಶ್ರೀಗಂಧದ ಕೊರಡಿನದು ಒಂದು ಸಾರ್ಥಕತೆ.
ಪೋಣಿಸಿದ ಸುಮಗಳ ಬಿಗಿತಕೆ
ತನ್ನನ್ನು ತಾನು ಒಪ್ಪಿಸಿ
ದೈವದ ಪಾದಕ್ಕೆ ಏರುವ ನಾರಿನ ಸಾರ್ಥಕತೆ;
ನಿಶ್ಶಬ್ದವಾಗಿ ಉರಿಯುತ್ತಾ
ಕತ್ತಲೆಯ ಗರ್ಭ ಸೀಳುವ
ಹಣತೆಯ ಪುಟ್ಟ ಬೆಳಕಿನ ಸಾರ್ಥಕತೆ.
ಆಸೆಗಳ ಹುತ್ತವ ಸುಟ್ಟು
ತಾನೇ ಬೆಳಕಿನ ಸೂರ್ಯನಾದ
ಬುದ್ಧನ ಮಹಾಜ್ಞಾನದ ಸಾರ್ಥಕತೆ;
ನಿಲ್ಲದ ಕಾಲದ ಪ್ರವಾಹದಲಿ
ಅರಿಯದ ಹಾದಿಯಲಿ ಓಡುವ ನಂಬಿಕೆಗೆ
ಬೆನ್ನತ್ತಿದ ಮನುಜನಿಗೆ ಎಲ್ಲಿಯ ಸಾರ್ಥಕತೆ?






0 Comments