ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುವ ಸಿನಿಮಾ ‘ನಮ್ ಸಾಲಿ’

ಎನ್ ಎಸ್ ಶಂಕರ್

ಈ ಸಿನಿಮಾ ಬಗ್ಗೆ ನಾನು ಮುಂಚೆಯೇ ಬರೆಯಬೇಕಿತ್ತು. ನನ್ನ ಮನಸ್ಥಿತಿ ಸರಿ ಇರದೆ ತಡವಾಯಿತು. ಇರಲಿ.

ಗೆಳೆಯ ಅನಿಲ್ ರೇವೂರ್ ನಿರ್ದೇಶನದ ‘ನಮ್ ಸಾಲಿ’ ಚಿತ್ರವನ್ನು ನಾನು ನೋಡಿದ್ದು ಈ ಬಾರಿಯ ಬೆಂಗಳೂರಿನ ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ. ನಂತರ ಅನಿಲ್ ನನ್ನ ಕೋರಿಕೆ ಮೇರೆಗೆ ಅದರ ಲಿಂಕ್ ಕೂಡ ಕಳಿಸಿಕೊಟ್ಟಿದ್ದರಿಂದ ಮತ್ತೂ ಒಮ್ಮೆ ಮನೆಯಲ್ಲೇ ನೋಡಿದೆ.

ಉತ್ತರ ಕರ್ನಾಟಕದ ಒಂದು ಹಳ್ಳಿಯ ಬಡ ಕುಟುಂಬದ ಹುಡುಗನೊಬ್ಬ ಸಾಲಿ ಕಲಿಯುವಾಗ ಹಾದು ಹೋಗುವ ಎಲ್ಲ ಬಗೆಯ ಅನುಭವಗಳ ಸಾರವನ್ನು ಈ ಚಿತ್ರ ಹಿಡಿಯಲೆತ್ನಿಸುತ್ತದೆ. ಬಾಯಿ ಬಿಟ್ಟು ಹೇಳದಿದ್ದರೂ, ಅದು ದಲಿತ ಕುಟುಂಬ ಎನ್ನುವ ಸೂಚನೆಗಳೂ ಚಿತ್ರದಲ್ಲಿವೆ. ಆ ಎಳೆಯ ಹುಡುಗನ ಏಕೋಪಾಧ್ಯಾಯ ಶಾಲೆ, ಹಾಲು ಮಾರಿಕೊಂಡು ಅವನನ್ನು ಸಲಹುತ್ತಿರುವ ಅವನ ಅಜ್ಜಿ, ಉದ್ಯೋಗಕ್ಕಾಗಿ ರತ್ನಗಿರಿಗೆ ವಲಸೆ ಹೋಗುವ ಹವಣಿಕೆಯಲ್ಲಿರುವ ಅವನ ಅಪ್ಪ, ಅಮ್ಮ, ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಓದಿದ ಅವನ ಕಾಕಾ, ಅಪ್ಪ ಕರೆದುಕೊಂಡು ಹೋಗಿ ತೋರಿಸುವ ಸಂತೆ, ಅಲ್ಲಿ ಕೊಳ್ಳುವ ಬಣ್ಣ ಬಣ್ಣದ ಕನ್ನಡಕ, ಶಾಲೆ ತಪ್ಪಿಸಿ ಊರಿನ ಹೊಳೆಯಲ್ಲಿ ಬಿದ್ದು ಹೊರಳಾಡಿ ಪಡುವ ಸಂಭ್ರಮ, ಕಪ್ಪು ಕನ್ನಡಕ ಹಾಕಿಕೊಂಡು ಊರಿಡೀ ಅಡ್ಡಾಡುವ ಕುರುಡ ಮುಸ್ಲಿಂ ಮುದುಕ… ಈ ಹಳ್ಳಿಯ ಪುಟ್ಟ ಜಗತ್ತನ್ನು ಆ ಹುಡುಗ ಗಂಗ್ಯಾನ ಅನುಭವ ಲೋಕವನ್ನಾಗಿ ಕಟ್ಟಿಕೊಟ್ಟಿರುವ ಅನಿಲ್, ತಮ್ಮ ಮೊದಲ ಚಿತ್ರದಲ್ಲೇ ತಾವೆಂಥ ಸಾಚಾ ನಿರ್ದೇಶಕರೆಂದು ಸಾಬೀತು ಮಾಡಿದ್ದಾರೆ. ಪ್ರತಿಯೊಬ್ಬರ ಸಮರ್ಥ ಅಭಿನಯದಿಂದಾಗಿ ಇಡೀ ಹಳ್ಳಿಯೇ ಉಸಿರಾಡುತ್ತದೆ. ಅದರಲ್ಲೂ ಆ ಗಂಗ್ಯಾನ ಅಳು, ಅವನ ಖುಶಿಗಳು ಮತ್ತು ಅಸಹಾಯಕತೆ; ಜೊತೆಗೆ ಅಜ್ಜಿಯ ಅದ್ಭುತ ಪಾತ್ರ ನಿರ್ವಹಣೆ- ಇವು ಚಿತ್ರ ನೋಡಿದ ಮೇಲೂ ಬಹು ಕಾಲ ಕಾಡುತ್ತಲೇ ಇರುತ್ತದೆ. ಅಜ್ಜಿಯ ಪಾತ್ರ ನಿರ್ವಹಿಸಿರುವ ಹನುಮಕ್ಕ ಅಕಾಲ ಮರಣಕ್ಕೀಡಾದದ್ದು ಕನ್ನಡ ಚಿತ್ರರಂಗಕ್ಕಾದ ದೊಡ್ಡ ನಷ್ಟ ಎಂದೇ ಅನಿಸುತ್ತದೆ.

ಅನಿಲ್ ರೇವೂರ್ ಚಿತ್ರಕ್ಕೆ ನಮ್ ಸಾಲಿ ಎಂದು ಹೆಸರಿಟ್ಟಿದ್ದಾರೆ. ಆದರೆ ಚಿತ್ರದಲ್ಲಿ ‘ಸಾಲಿ’ಯ ಭಾಗ ಅಷ್ಟೇನೂ ಇಲ್ಲವಲ್ಲ ಎಂದು ಯೋಚಿಸುವಾಗ, ‘ಓ, ಆ ಇಡೀ ಹಳ್ಳಿಯ ಜೀವ ಪರಿಸರವೇ ಅವನ ಸಾಲಿ’ ಎಂಬುದು ಹೊಳೆಯುತ್ತದೆ…!

ನನಗಿರುವ ಒಂದೇ ತಕರಾರೆಂದರೆ ಸಂಕಲನದ್ದು. ಚಿತ್ರ ಇನ್ನಷ್ಟು ಬಿಗಿಯಾಗಬೇಕಿತ್ತು. ಹಾಗೆ ನೋಡಿದರೆ ಯಾವ ದೃಶ್ಯವನ್ನು ಬಿಡದೆಯೂ, ಸಿನಿಮಾವನ್ನು ಇನ್ನೂ ಹತ್ತು ಹದಿನೈದು ನಿಮಿಷ ಕಡಿಮೆ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಆದ್ದರಿಂದ ಚಿತ್ರವನ್ನು ಅವರೇನಾದರೂ ಥಿಯೇಟರುಗಳಲ್ಲಿ ಬಿಡುಗಡೆ ಮಾಡುವುದಿದ್ದರೆ, ಮತ್ತಷ್ಡು ಸಂಕಲನ ಮಾಡಿಯೇ ರಿಲೀಸ್ ಮಾಡುವುದು ಒಳ್ಳೆಯದೆಂದು ನನ್ನ ನಮ್ರ ಸೂಚನೆ.

ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆ.

‍ಲೇಖಕರು Admin

8 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading