ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಡಿ ಜಾರ್ಜ್‌ಕುಟ್ಟಿಯ ರೋಚಕ ಆಟ..

-ಗೊರುರು ಶಿವೇಶ್

ಮುಂದುವರೆದ ದೃಶ್ಯಂ  ಚಿತ್ರದ ಪ್ರಭಾವ : ಲೇಡಿ ಜಾರ್ಜ್ ಕುಟ್ಟಿಯ ರೋಚಕ ಆಟ ‘ಪ್ರಥಮ ದೃಷ್ಟಿಯ ಕುಟ್ಟಕ್ಕಾರ್ ’

ಜಪಾನಿನ ಕಲ್ಟ್ ಕ್ಲಾಸಿಕ್ ಚಿತ್ರ ‘ರೋಶಮನ್’ ಬಿಡುಗಡೆಯಾಗಿ ಏಳು ದಶಕಗಳಿಗೂ ಹೆಚ್ಚು ಕಾಲ ಸಂದಿದೆ. ಒಂದೇ ಘಟನೆಯನ್ನು ಬೇರೆ ಬೇರೆ ಪಾತ್ರಗಳು ವಿಭಿನ್ನ ದೃಷ್ಟಿಕೋನಗಳಲ್ಲಿ ವಿವರಿಸುವ ಆ ‘ರೋಶಮನ್ ಎಫೆಕ್ಟ್’ ಜಾಗತಿಕ ಸಿನಿಮಾರಂಗದಲ್ಲಿ ಇಂದಿಗೂ ನಿರಂತರವಾಗಿ ಮರುಸೃಷ್ಟಿಯಾಗುತ್ತಲೇ ಇದೆ. ಜಪಾನಿ ಲೇಖಕ ಕೀಗೊ ಹಿಗಾಶಿನೊ ಅವರ ಪ್ರಸಿದ್ಧ ಕಾದಂಬರಿ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ಕಥಾಹಂದರವನ್ನು ಭಾರತೀಯ ಪರಿಸರಕ್ಕೆ ತಕ್ಕಂತೆ ಅಳವಡಿಸಿಕೊಂಡು ಬಂದ ಮಲಯಾಳಂನ ‘ದೃಶ್ಯಂ’ ಚಿತ್ರ ಸಿನಿಪ್ರಿಯರ ಮನಗೆದ್ದಿತ್ತು. ಅನಕ್ಷರಸ್ಥ ಕೇಬಲ್ ಆಪರೇಟರ್ ಜಾರ್ಜ್‌ಕುಟ್ಟಿ ತನ್ನ ಕುಟುಂಬವನ್ನು ರಕ್ಷಿಸಲು ಇಡೀ ಪೊಲೀಸ್ ವ್ಯವಸ್ಥೆಯನ್ನೇ ಯಾಮಾರಿಸುವ ಆ ಸೂತ್ರ ಸರಣಿಯಾಗಿ ಮುಂದುವರಿದು ದೃಶ್ಯಂ ಒಂದು ಎರಡು ಮೂರು ಆಗಿ , ಮುಂದೆ ಕನ್ನಡ, ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಚೀನಾ, ಕೊರಿಯಾ ಮತ್ತು ಇಂಡೋನೇಷ್ಯಾ ಭಾಷೆಗಳಿಗೂ ವಿಸ್ತರಿಸಿ ಜಾಗತಿಕ ಮಟ್ಟದಲ್ಲಿ ಸುಮಾರು 2000 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತು. ಈ ಚಿತ್ರದ ಪ್ರಭಾವ ಹೇಗಿದೆ ಅಂದ್ರೆ ಸ್ವತಹ ಚಿತ್ರದ ನಿರ್ದೇಶಕ ಕೌತುಕ ಕಥೆಗಳಿಗೆ ಹೆಸರಾದ ಜಿತು ಜೋಸೆಫ್ ಈ ಅವಧಿಯಲ್ಲಿ ಬೇರೆ ಚಿತ್ರಗಳನ್ನು ನಿರ್ದೇಶಿಸಿದರೂ ಯಾವ ಚಿತ್ರಗಳು ಹೇಳಿಕೊಳ್ಳುವ ಮಟ್ಟಿಗೆ ಯಶಸ್ವಿಯಾಗದಿರುವುದು ದೃಶ್ಯಂ ಚಿತ್ರದ ಕಥೆಯ ಜನಪ್ರಿಯತೆಗೆ  ಸಾಕ್ಷಿಯಾಗಿದೆ 

ಈ ಯಶಸ್ವಿ ಸೂತ್ರದ ಹಾದಿಯಲ್ಲೇ ಹೆಜ್ಜೆ ಇಟ್ಟು, ಇತ್ತೀಚೆಗೆ ತೆರೆಕಂಡು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿರುವ ನೂತನ ಮಲಯಾಳಂ ಇನ್ವೆಸ್ಟಿಗೇಷನ್ ಕ್ರೈಮ್ ಥ್ರಿಲ್ಲರ್ — ‘ಪ್ರಥಮ ದೃಷ್ಟಿಯ ಕುಟಕಾರ್’ (Pradhama Drishtiya Kuttakkar).

ಕಥಾಸಾರ: ಜಾರ್ಜ್‌ಕುಟ್ಟಿಯ ಸ್ತ್ರೀ ಅವತಾರ ಪೊಲೀಸ್ ‘ ಸ್ಟಿಂಗ್ ಆಪರೇಷನ್’ ವೇಳೆ ಪತಿಯನ್ನು ಕಳೆದುಕೊಂಡ ಅಲೀನಾ (ಪಾರ್ವತಿ ತಿರುವೋತು), ಅನುಕಂಪದ ಆಧಾರದ ಮೇಲೆ ಪೊಲೀಸ್ ಇಲಾಖೆಗೆ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ಸೇರುತ್ತಾಳೆ. ವೃದ್ಧ ಅತ್ತೆ-ಮಾವ, ಸಣ್ಣ ಮಗು ಮತ್ತು ವಿಶೇಷ ಚೇತನ ಸಹೋದರನ ಹೊಣೆ ಹೊತ್ತಿರುವ ಆಕೆಯ ಪಾಲಿಗೆ ಇದು ಕೇವಲ ನೌಕರಿಯಲ್ಲ, ಇಡೀ ಕುಟುಂಬದ ಏಕೈಕ ಆಸರೆ. ಆದರೆ ಕರ್ತವ್ಯಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಠಾಣೆಯಲ್ಲಿ ಅನಿರೀಕ್ಷಿತ ದುರಂತವೊಂದು ಸಂಭವಿಸುತ್ತದೆ: ಬಂಧಿಸಿ ತಂದಿದ್ದ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳುವ ಹುನ್ನಾರದಲ್ಲಿದ್ದಾಗ ನಡೆದ ಸಂಘರ್ಷದಲ್ಲಿ, ನಾಲ್ವರು ಪೊಲೀಸರ ತಂಡದ ಕೈಯಿಂದ ಗುಂಡು ಹಾರಿ ಆತ ಮೃತಪಡುತ್ತಾನೆ. ಕಸ್ಟಡಿಯಲ್ಲಿ ನಡೆದ ಈ ಸಾವಿನಿಂದ ತಮ್ಮ ಕೆಲಸ ಮತ್ತು ಭವಿಷ್ಯ ನಾಶವಾಗುತ್ತದೆ ಎಂದು ಬೆಚ್ಚಿಬೀಳುವ ಆ ತಂಡ, ಶವವನ್ನು ಮುಚ್ಚಿಹಾಕಲು ನಿರ್ಧರಿಸುತ್ತದೆ. ಅಲೀನಾ ಕೂಡ ತನ್ನ ಸಂಸಾರದ ರಕ್ಷಣೆಗಾಗಿ ಈ ಷಡ್ಯಂತ್ರದಲ್ಲಿ ಭಾಗಿಯಾಗಬೇಕಾಗುತ್ತದೆ. ತನಿಖೆಗೆ ಪ್ರವೇಶಿಸುವ ಖಡಕ್ ಅಧಿಕಾರಿ ತನ್ನ ಚತುರ ಪತ್ತೇದಾರಿ ಕೌಶಲ್ಯ ಮತ್ತು ಇನ್ವೆಸ್ಟಿಗೇಷನ್ ಕುರಿತ ಪುಸ್ತಕದ ಮೂಲಕವೇ ಹೆಸರಾದ ವ್ಯಕ್ತಿ. ಆತನ ಆಗಮನದೊಂದಿಗೆ ಶುರುವಾಗುತ್ತದೆ ರೋಚಕ ‘ಇಲಿ-ಬೆಕ್ಕಿನ’ ಕಾದಾಟ. ಆ ಅಧಿಕಾರಿಯ ಪತ್ತೇದಾರಿ ಪುಸ್ತಕಗಳ ಅಧ್ಯಯನ ಮತ್ತು ತನಿಖಾ ತಂತ್ರಗಳನ್ನೇ ಅರಿತಿರುವ ಅಲೀನಾ, ಕಾನೂನಿನ ಚೌಕಟ್ಟಿನಲ್ಲೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೆಣೆಯುವ ರಕ್ಷಣಾ ವ್ಯೂಹ ಇಡೀ ತನಿಖಾ ದಳವನ್ನೇ ದಿಗ್ಭ್ರಮೆಗೊಳಿಸುತ್ತದೆ. ಅಸಹಾಯಕತೆ ಮತ್ತು ತೀಕ್ಷ್ಣ ಬುದ್ಧಿವಂತಿಕೆಯ ನಡುವಿನ ತೊಳಲಾಟವನ್ನು ಪಾರ್ವತಿ ಅತ್ಯಂತ ತನ್ಮಯತೆಯಿಂದ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಆತಂಕದ ನಡುವೆಯೂ ಮುಖದಲ್ಲಿ ಶಾಂತತೆ ಪ್ರದರ್ಶಿಸುತ್ತಾ, ಕಣ್ಣುಗಳಲ್ಲೇ ಭಾವನೆಗಳನ್ನು ದಾಟಿಸುವ ಅವರ ನಟನೆ ಚಿತ್ರಕ್ಕೆ ಗಟ್ಟಿಯಾದ ಬೆನ್ನೆಲುಬು.

ಪೋಷಕ ಪಾತ್ರಗಳ ಬಲ: ಮ್ಯಾಥ್ಯೂ ಥಾಮಸ್, ಸಿದ್ಧಾರ್ಥ್ ಭರತನ್, ಉನ್ನಿಮಾಯಾ ಪ್ರಸಾದ್ ಹಾಗೂ ಅನುಭವಿ ನಟ ವಿಜಯರಾಘವನ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರತಿಯೊಬ್ಬ ಪಾತ್ರಧಾರಿಗೂ ಇರುವ ವೈಯಕ್ತಿಕ ಬಿಕ್ಕಟ್ಟುಗಳು ಕಥೆಗೆ ಭಾವನಾತ್ಮಕ ತೂಕ ನೀಡಿವೆ.

ಶಹಾದ್ ನಿಲಂಬೂರ್ ಅವರ ನಿರ್ದೇಶನ: ಯಾವುದೇ ಅನಗತ್ಯ ನಾಟಕೀಯತೆ ಇಲ್ಲದೆ, ತಾರ್ಕಿಕ ನಡೆಗಳಿಗೆ ಮಹತ್ವ ನೀಡುವ ಮೂಲಕ ನಿರ್ದೇಶಕರು ಚಿತ್ರಕಥೆಯ ಬಿಗಿತವನ್ನು ಕಾಪಾಡಿಕೊಂಡಿದ್ದಾರೆ. ಕೆಲವು ತಿರುವುಗಳು ಊಹೆಗೆ ನಿಲುಕುವಂತಿದ್ದರೂ, ಅಂತಿಮ ಕ್ಷಣದವರೆಗೂ ಕುತೂಹಲ ಜಾರದಂತೆ ದೃಶ್ಯಗಳನ್ನು ಪೋಣಿಸಿದ್ದಾರೆ.

ತಾಂತ್ರಿಕ ವಿಭಾಗ: ಮುಜೀಬ್ ಮಜೀದ್ ಅವರ ಹಿನ್ನೆಲೆ ಸಂಗೀತ ಚಿತ್ರದ ನಿಗೂಢತೆಯನ್ನು ಹೆಚ್ಚಿಸಿದರೆ, ಸೀಮಿತ ಪೊಲೀಸ್ ಠಾಣೆಯ ವಾತಾವರಣ ಮತ್ತು ಮಳೆಯ ಇರುಳನ್ನು ಸೆರೆಹಿಡಿದಿರುವ ಛಾಯಾಗ್ರಹಣ ಪ್ರೇಕ್ಷಕರನ್ನು ಆತಂಕದೊಳಗೆ ಹಿಡಿದಿಡುತ್ತದೆ. ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಯಶಸ್ವಿ ಹೆಜ್ಜೆ ಇಟ್ಟಿರುವ ಈ ಚಿತ್ರ, ಮಹಿಳೆಯೊಬ್ಬಳು ಕಾನೂನಿನ ಒಳಪದರಗಳನ್ನು ಬಳಸಿಕೊಂಡೇ ವ್ಯವಸ್ಥೆಯ ಎದುರು ನಿಲ್ಲುವ ವಿಶಿಷ್ಟ ಕ್ರೈಮ್ ಥ್ರಿಲ್ಲರ್. ‘ದೃಶ್ಯಂ’ ಶೈಲಿಯ ಮೈಂಡ್‌ ಗೇಮ್‌ ಮತ್ತು ತನಿಖಾ ಕಥೆಗಳನ್ನು ಮೆಚ್ಚುವ ಪ್ರೇಕ್ಷಕರಿಗೆ ಇದು ಅತ್ಯುತ್ತಮ ಸಿನಿಮಾ.

ಚಿತ್ರ ಮಲಯಾಳಂ ಭಾಷೆಯಲ್ಲಿ ನೆಟ್ ಫಿಕ್ಸ್ ನಲ್ಲಿ ಲಭ್ಯವಿದೆ.

‍ಲೇಖಕರು Admin

14 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading