-ವಿಜಯಶ್ರೀ ಹಾಲಾಡಿ
ಹೋರಾಟದ ಹುಡುಗಿಯರು!
*
ಬೀದಿಯಲ್ಲಿ ತನ್ನ ಪಾಡಿಗೆ
ನಡೆದು ಹೋಗುತ್ತಿದ್ದರೂ
ಬಿಸಿಲಲ್ಲಿ ಬಿಸಿಲಾಗಿ
ಸೈಜುಗಲ್ಲು ಹೊರುತ್ತಿದ್ದರೂ
ಕಟ್ಟಕಡೆಯ ನ್ಯಾಯಕ್ಕಾಗಿ
ಎಳೆ ಹುಡುಗಿಯರು
ಕಡು ಕಷ್ಟದ
ಹೋರಾಟ ನಡೆಸುತ್ತಿದ್ದರೂ
ನಿಮಗೆ ಕಾಣುವುದು ಒಂದೇ
ಎದೆ ಎದೆಸೀಳು
ಹೊಟ್ಟೆ ಬೆನ್ನು
ಒಳ ಉಡುಪು ವಗೈರೆ!
ಕಣ್ಣಿನಲ್ಲಿ ಕಿಚ್ಚಿದೆ
ಹೃದಯದಲ್ಲಿ ತಲ್ಲಣವಿದೆ
ಕರುಳಿನಲ್ಲಿ ಸಂಕಟವಿದೆ
ಆತ್ಮದಲ್ಲಿ ನೋವಿದೆ
ಅವಳ ಕಣ ಕಣದಲ್ಲಿ
ಅಪಮಾನದ ಬೆಂಕಿಯಿದೆ!
ತನ್ನನ್ನು ತಾನು
ಮುಚ್ಚಿಡದ
ಬಿಚ್ಚಿಯೂ ಇಡದ
ಸ್ವಾಭಿಮಾನಿ ಅವಳು
ಪ್ರೀತಿಸಿಕೊಳ್ಳುತ್ತಾಳೆ
ತನ್ನ ದೇಹವನ್ನು- ಜೀವವನ್ನು
ಜಗದ ಜೀವಜಾಲವನ್ನು
ಮಗುವಿನಂತೆ
ಗೆಳತಿಯಂತೆ
ತಾಯಿಯಂತೆ
ಭೂಮಿಯಂತೆ!
*






0 Comments