ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಅಂಧಕಾರದಿಂದ ಆಶಾವಾದದ ಕಡೆಗೆ: ಈಡಿತ್ ಎಗರ್ ರ ಯಶೋಗಾಥೆ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 20

ಕೃತಿ –ಈಡಿತ್ ಎಗರ್ ಅವರ ‘ದಿ ಚಾಯ್ಸ್’

ಕನ್ನಡಕ್ಕೆ – ಜಯಶ್ರೀ ಭಟ್

ಈಡಿತ್ ಎಗರ್ ಅವರ “ದಿ ಚಾಯ್ಸ್” ಎಂಬ ಆತ್ಮಕಥೆಯನ್ನು ಜಯಶ್ರೀ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. “ನರಕದಲ್ಲೂ ಭರವಸೆಗಳು
ಅರಳುತ್ತವೆ “ಎಂಬ ಅಡಿ ಶೀರ್ಷಿಕೆ ನಿಜವಾಗಿಯೂ ಈ ಕೃತಿಗೆ ಅನ್ವರ್ಥಕ ಮಾತು.ಹಿಟ್ಲರ್ ನ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾದ ಹದಿನಾರು ವಯಸ್ಸಿನ ಬಾಲೆ (ಈಡಿತ್)ಏನೆಲ್ಲಾ ಸಂಕಟ,ನೋವನ್ನು ಮೀರಿ ಬದುಕಿನ ಕಡೆ ಮುಖ ಮಾಡುತ್ತ ಎಲ್ಲವನ್ನೂ ,ಎಲ್ಲರನ್ನೂ ಕ್ಷಮಿಸುತ್ತ ಅನ್ಯರಿಗೆ ಮಾರ್ಗ ತೋರುವ ಒಬ್ಬ ಹೆಣ್ಣಿನ ಯಶೋಗಾಥೆ ಇದಾಗಿದೆ. ಬದುಕನ್ನು ಸಕಾರಾತ್ಮಕವಾಗಿ ಸ್ವೀಕರಿಸುವ, ಸವಾಲನ್ನು ಮೆಟ್ಟಿ ನಿಲ್ಲುವ ಇವಳ ಬದುಕು ಸರ್ವರಿಗೂ ಆದರ್ಶಪ್ರಾಯವಾಗಿ ಕಾಣುವುದು.

ಜನಾಂಗೀಯ ದ್ವೇಷವನ್ನು ಸಾಧಿಸಿ, ೬೦ ಲಕ್ಷ ಯಹೂದಿಗಳ ಮಾರಣ ಹೋಮ ಮಾಡಿದ ವಿಕೃತ ವ್ಯಕ್ತಿ ಹಿಟ್ಲರ್. ಯಹೂದಿಗಳನ್ನು ಹೊಗೆ ಕೊಳವೆ ಮೂಲಕ ಅಥವಾ ಗುಂಡಿಕ್ಕಿ, ಅಹಾರ ನೀಡದೆ,ಛಳಿಯಿಂದ,ಅತಿಯಾದ ದುಡಿತ ಮೇಲಾಗಿ ಅವರ ಮೇಲೆ ವೈದ್ಯಕೀಯ ಪ್ರಯೋಗಕ್ಕೆ ಬಳಸಿ ಬಲಿಪಶುಗಳ ರೀತಿಯಲ್ಲಿ ನಡೆಸಿಕೊಂಡನು.ಅದರಲ್ಲೂ ವಯಸ್ಸಾದವರು, ಮಕ್ಕಳನ್ನು ಮುಲಾಜಿಲ್ಲದೆ ಗ್ಯಾಸ್ ಚೇಂಬರ್ ನಲ್ಲಿ ತುರುಕಿ ಕ್ರಿಮಿಗಳ ಹಾಗೆ ಹೊಸಕಿ ಹಾಕಿದ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಈ ಘಟನೆಯಲ್ಲಿ ಕೆಲವು ಜೀವಗಳು ಬದುಕುಳಿದವು. ಅಂತಹವರಲ್ಲಿ ಈಡಿತ್ ಕೂಡ ಒಬ್ಬರು. ಅವರ ಬದುಕಿನ ಚಿತ್ರಣ ನೀಡುವ ಈ ಕೃತಿ ಒಂದೇ ಉಸಿರಿಗೆ ಓದಿಸಿಕೊಂಡು ಹೋಗುತ್ತದೆ. ಒಮ್ಮೊಮ್ಮೆ ಓದುಗನಿಗೆ ಉಸಿರು ಕಟ್ಟಿದ ಭಾವ ಕೂಡ ಮೂಡುತ್ತದೆ. ಕಾರಣ ಹಿಟ್ಲರ್ ನ ಹಿಂಸೆಯ ಪರಾಕಾಷ್ಟತೆ ಕಂಡಾಗ ನಡುಕ ಉಂಟಾಗುತ್ತದೆ ಒಬ್ಬ ವ್ಯಕ್ತಿಯ ಮಹತ್ವಾಕಾಂಕ್ಷೆಯಿಂದ ಸಾವಿರಾರು ಕುಟುಂಬದ ಕಣ್ಣೀರಿಗೆ ಕಾರಣ ಆದದ್ದು ಕಂಡಾಗ ಯುದ್ಧ ಬೇಕೆ? ಎಂಬ ಪ್ರಶ್ನೆ ಮೂಡದೆ ಇರದು.

ಈಡಿತ್ ಹಂಗೇರಿಯಾದಲ್ಲಿ ತಂದೆ – ತಾಯಿ ಇಬ್ಬರು ಅಕ್ಕಂದಿರ ಜೊತೆ ಕನಸುಗಳ ಮೂಟೆ ಹೊತ್ತು ತನ್ನದೇ ಬ್ರಮಾ ಲೋಕದಲ್ಲಿ ಸುಖವಾಗಿದ್ದಳು. ತಂದೆ ಟೇಲರ್, ತಾಯಿ ಗೃಹಿಣಿ. ಅವಳು ಮಕ್ಕಳಿಗೆ ಒಂದಲ್ಲ ಒಂದು ಕಲೆಯನ್ನು ಕರಗತ ಗೊಳಿಸಲು ಹೆಣಗುತ್ತಿದ್ದಳು. ದೊಡ್ಡ ಮಗಳು ಮಾಗ್ದಾ ಪಿಯಾನೋ ಕಲಿತರೆ, ಎರಡನೇ ಮಗಳು ಕ್ಲಾರಾ ವಯೊಲಿನ್ ನುಡಿಸುವಲ್ಲಿ ನಿಷ್ಣಾತಳು. ಈಡಿತ್ ಮಾತ್ರ ಬ್ಯಾಲೆ ಕಲಿಯುತ್ತ ,ಜಿಮ್ನಾಸ್ಟಿಕ್ಸ್ ನಲ್ಲಿ ಆಸಕ್ತಿ ಹೊಂದಿದ್ದಳು. ಕಿರಿಯ ಮಗಳು ನೋಡಲು ಸಾದಾರಣ,ಆದರೆ ಬುದ್ದಿವಂತೆ ಎಂಬ ಭಾವ ತಾಯಿಯದು.ಅಪ್ಪನ ಮುದ್ದಿನ ಮಗಳು. ಹದಿನಾಲ್ಕರ ಹರೆಯದಲ್ಲಿ ಜಿಮ್ನಾಸ್ಟಿಕ್ಸ್ ನಲ್ಲಿ ಒಲಿಂಪಿಕ್ ನಲ್ಲಿ ಭಾಗವಹಿಸಲು ಈಡಿತ್ ಏನೆಲ್ಲಾ ತಯಾರಿ ಮಾಡಿದ್ದರು ಕೂಡ ಯಹೂದಿ ಎಂಬ ಕಾರಣಕ್ಕೆ ಆಯ್ಕೆ ಆಗಲಿಲ್ಲ. ಆ ನೋವು ಅವಳನ್ನು ಬಲವಾಗಿ ಕಾಡುತ್ತಿತ್ತು. ಆಗ ಅವಳಿಗೆ ಪರಿಚಿತನಾದ ಬಾಲಕ ಎರಿಕ್. ಅವನನ್ನು ಗಾಢವಾಗಿ ಪ್ರೀತಿಸುವ ಅವಳಿಗೆ ಭವಿಷ್ಯತ್ತಿನ ಕುರಿತು ಏನೆಲ್ಲಾ ಕನವರಿಕೆ ಕನಸುಗಳು. ಇಂತಹ ಸಂದರ್ಭದಲ್ಲಿ ಅವರ ಕುಟುಂಬದ ಮೇಲಷ್ಟೆ ಅಲ್ಲ ಎಲ್ಲಾ ಯಹೂದಿಗಳ ಮೇಲೆ ಜರ್ಮನಿ ಸೈನಿಕರ ಆಕ್ರಮಣ ಆಗುತ್ತದೆ. ಆದರೆ ಅದರ ಪರಿಣಾಮ ಅಷ್ಟು ಭಯಾನಕ ಇರುತ್ತದೆಂದು ಯಾರು ಭಾವಿಸಿದ್ದಿಲ್ಲ. ಕೆಲವು ಕಾಲ ಸೆರೆಮನೆ ವಾಸ ನಂತರ ಬಿಡುಗಡೆ ಎಂದುಕೊಂಡ ಅವರಿಗೆ,ಬಂಧಿಯಾದ ಮೊದಲ ದಿನವೆ ಈಡಿತ್ ತಂದೆ ತಾಯಿ ಇಬ್ಬರನ್ನು ಕಣ್ಣಮುಂದೆ ಸುಟ್ಟು ಹೋಗುವುದನ್ನು ನೋಡುತ್ತಾಳೆ. ಅಜ್ಜ ಅಜ್ಜಿ ಗು ಕೂಡ ಇದೆ ಶಿಕ್ಷೆ. ಕೇವಲ ಅಕ್ಕ ಮಾತ್ರ ಜೊತೆಯಾಗುತ್ತಾಳೆ.

ಇನ್ನೊಬ್ಬ ಅಕ್ಕ ವಾಯಲಿನ್ ಕಲಿಯಲು ಹೋದ ಕಾರಣ ನರಕದಿಂದ ತಪ್ಪಸಿಕೊಂಡಿರುತ್ತಾಳೆ. ಇಬ್ಬರು ಸಹೋದರಿಯರ ಸೆರೆಮನೆ ವಾಸದ ಅನುಭವ ಸಂಕಟದಾಯಕ.

ಜೈಲಿನಲ್ಲಿ ಊಟ ತಿಂಡಿಗೂ ತತ್ವಾರ. ಒಂದು ಚೂರು ಬ್ರೆಡ್ ಗಾಗಿ ಏನೆಲ್ಲಾ ಪಡಿಪಾಟಲು. ಈಡಿತ್ ನೃತ್ಯ ಮಾಡಿ ಬ್ರೆಡ್ ಸಂಪಾದಿಸುತ್ತಾಳೆ. ಅಕ್ಕ ತಂಗಿ ಇಬ್ಬರು ಒಬ್ಬರಿಗಾಗಿ ಒಬ್ಬರು ಪ್ರಾಣ ಒತ್ತೆ ಇಟ್ಟು ಜೀವ ಉಳಿಸಿಕೊಳ್ಳಲು ಒದ್ದಾಡುತ್ತಾರೆ. ಹುಲ್ಲು ತಿಂದು ಬದುಕುತ್ತಾರೆ. ಒಮ್ಮೆ ರಾತ್ರಿ ಅಕ್ಕನಿಗಾಗಿ ಕಾರಾಗೃಹದ ಬೇಲಿ ದಾಟಿ ತಿನ್ನಲು ಗಜ್ಜರಿ ತರುವಾಗ, ಸೈನಿಕನ ಕೈಯಲ್ಲಿ ಸಿಕ್ಕಿ ಬೀಳುತ್ತಾಳೆ. ಆಗ ಸಾವಿನ ಕದ ತಟ್ಟಿದ ಭಾವ, ಆದರೆ ಬದುಕುಳಿಯುತ್ತಾಳೆ.

ಒಮ್ಮೆ ಕಾರ್ಟ ವ್ಹೀಲ್ ಮಾಡಿ ಸೈನಿಕರಿಗೆ ಯಾಮರಿಸುತ್ತಾಳೆ ಹೀಗೆ ಪ್ರತಿದಿನ ಅವರ ಬದಕು ತಂತಿ ಮೇಲಿನ ನಡಿಗೆಯಾಗಿತ್ತು. ಆದರೆ ಅಲ್ಲಿ ಕೂಡ ಅಕ್ಕ ತಮಾಷೆ ಮಾಡುವುದನ್ನು ಕಂಡಾಗ ನರಕದಲ್ಲು ನಾಕ ಕಾಣುವ ಮನಸ್ಸು ಅವರದ್ದು.

ಕಾರ್ಯಗ್ರಹದಲ್ಲಿ ಕೆಲವು ತಿಂಗಳ ನಂತರ ಜೊತೆಗಾರರು ಇಲ್ಲವಾಗುತ್ತ ಹೋಗುತ್ತಾರೆ. ನಾನಾ ಕಾರಣಗಳಿಂದ ಜೀವ ಕಳೆದುಕೊಳ್ಳುವುದನ್ನು ಕಣ್ಣೆದುರು ನೋಡುತ್ತಲೇ, ಈಡಿತ್ ಗೆ ಮಾತ್ರ ಹೊರಬಂದು ಎರಿಕ್ ಜೊತೆ ಸಂಸಾರ ಮಾಡುವ ಬಯಕೆ ಇನ್ನೂ ಹಸಿರಾಗಿರುತ್ತದೆ. ಅಶ್ವಿಟ್ಸ್ ನಲ್ಲಿ ಕೈದಿಯಾಗಿ ಕೂಡ ಇನ್ನೂ ಆಶಾವಾದ ಅವಳಲ್ಲಿತ್ತು. ಕೊನೆಗೆ ಯುದ್ಧ ನಿಂತು ಅಮೆರಿಕ ಸೈನಿಕರು ಇವರನ್ನು ರಕ್ಷಿಸಲು ಬಂದಾಗ ನೂರಿನ್ನೂರು ಜನ ಮಾತ್ರ ಉಳಿದಿದ್ದರು. ಸಾವಿರಾರು ಸಂಖ್ಯೆಯಲ್ಲಿ ತೀರಿ ಹೋಗಿದ್ದರು. ಉಳಿದವರು ಜೀವಂತ ಶವಗಳಾಗಿದ್ದರು. ಅದರಲ್ಲೂ ಈಡಿತ್ ಬೆನ್ನು ಮೂಳೆ ಮುರಿದುಕೊಂಡು ಶವಗಳ ಮದ್ಯೆ ಸಿಲುಕಿರುತ್ತಾಳೆ. ಸೈನಿಕರು ಕರೆದಾಗ ಧ್ವನಿ ಕೂಡ ಬಾರದೆ, ಮಿಸುಕಾಡದೆ ಬಿದ್ದ ಇವಳನ್ನು ನೋಡಿದ್ದು, ರಕ್ಷಿಸಿದ್ದು ಪವಾಡವೆ ಸರಿ.

ಸಹೋದರಿಯರು ಮತ್ತೆ ತಮ್ಮ ಗೂಡಿಗೆ ಬಂದಾಗ ಅಕ್ಕ ಕ್ಲಾರಾ ಸ್ವಾಗತಿಸುತ್ತಾಳೆ. ಆರೈಕೆ ಮಾಡಿ ತಂದೆ ತಾಯಿ ಸ್ಥಾನ ತುಂಬುತ್ತಾಳೆ. ಮಾಗ್ದಾ ದೈಹಿಕವಾಗಿ ಚೇತರಿಸಿಕೊಳ್ಳುತ್ತಾಳೆ ಆದರೆ ಈಡಿತ್ ಎಲ್ಲಾ ರೀತಿಯಲ್ಲಿ ಕುಗ್ಗಿರುತ್ತಾಳೆ. ಅವಳ ಪ್ರಿಯಕರ ತೀರಿದ ಸುದ್ದಿ ತಿಳಿಯುತ್ತದೆ. ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡು ಅನಾಥ ಭಾವ ಮೂಡುತ್ತದೆ. ಈ ಕಠಿಣ ಘಳಿಗೆಯಲ್ಲಿ ಬೇಲಾ ಎಗರ್ ನ ಪರಿಚಯ ವಾಗುತ್ತದೆ. ಅವನ ಕುಟುಂಬ ಕೂಡ ಹೀಗೆ ಛಿದ್ರವಾದ ಕಾರಣ ಸಮಾನ ದುಃಖಿಗಳು, ಒಂದೇ ದೋಣಿಯ ಪಯಣಿಗರಾಗಿದ್ದ ಅವರು ಮದುವೆ ಕೂಡ ಆಗುತ್ತಾರೆ. ಅವರಿಗೆ ಒಂದು ಮಗುವಾಗಿ ಬದುಕು ಸುಗಮವಾಗಿ ಸಾಗಿದಾಗ ಮತ್ತೆ ಕಮ್ಯೂನಿಸ್ಟ್‌ ರು ಬೇಲಾನನ್ನು ಸೆರೆ ಹಿಡಿಯುತ್ತಾರೆ. ಆಗ ಈಡಿತ್ ಏನೆಲ್ಲಾ ಪ್ರಯತ್ನಿಸಿ ಅವನನ್ನು ಸೆರೆಯಿಂದ ಬಿಡಿಸಿ ಅವನನ್ನು ಕರೆದುಕೊಂಡು ವಿಯನ್ನಾ ಗೆ ಬರುತ್ತಾಳೆ. ಅಲ್ಲಿಂದ ಜೆರುಸ್ಲೇಮ್ ಹೋಗಬೇಕು ಎಂದು ಸಿದ್ದರಾದಾಗ ಅಕ್ಕ ಮಾಗ್ದಾ ಅಮೆರಿಕಾಕ್ಕೆ ಹೋಗಲು ಹೇಳುತ್ತಾಳೆ. ಬೇಲಾ ಒಲ್ಲದ ಮನಸ್ಸಿನಿಂದ ಹೊರಡುತ್ತಾನೆ. ಅವನು ತನ್ನ ಸಂಪತ್ತನ್ನೆಲ್ಲಾ ಬಿಟ್ಟು ಕುಟುಂಬದ ಸುರಕ್ಷೆಗಾಗಿ ಒಪ್ಪುತ್ತಾನೆ. ಅಕ್ಕ ಕೂಡ ಅಲ್ಲಿಗೆ ಬಂದು ನೆಲೆಸುತ್ತಾಳೆ. ಕ್ಲಾರಾ ಮಾತ್ರ ಆಸ್ಟ್ರೇಲಿಯಾ ಕ್ಕೆ ಹೋಗುತ್ತಾಳೆ. ಮೂವರು ಸಹೋದರಿಯರು ಮದುವೆಯಾಗಿ ಸುಖಿಗಳ ತರಹ ಕಂಡರೂ ಅಂತರಂಗದಲ್ಲಿ ಖಾಲಿತನ ಇದ್ದದ್ದೇ. ಯಾರು ಗತದಿನದ ಕುರಿತು ಮಾತನಾಡಬಾರದೆಂದೆ ನಿರ್ದರಿಸುತ್ತಾರೆ.

ಈಡಿತ್ ಅಮೆರಿಕಾ ದಲ್ಲಿ ಕೆಲಸ ಮಾಡುತ್ತಲೇ ಓದು ಮುಂದುವರಿಸುತ್ತಾಳೆ. ಕುಟುಂಬ ನಿರ್ವಹಿಸಲು ದಂಪತಿಗಳು ಹೆಣಗಾಡುತ್ತಾರೆ. ಮೂರು ಮಕ್ಕಳು ಅದರಲ್ಲಿ ಕಿರಿಯ ಮಗ ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿರುತ್ತಾನೆ.ಅವನನ್ನು ಓದಿಸುತ್ತ ತಾನು ಓದುತ್ತಾ ೫೦ ನೇ ವಯಸ್ಸಿನಲ್ಲಿ ಎಂ.ಎ ಸೈಕಾಲಜಿ ಹಾಗೂ ಪಿಎಚ್ಡಿ ಪೂರೈಸುತ್ತಾಳೆ. ನರಕದಿಂದ ಬದುಕಿ ಬಂದದ್ದಕ್ಕೆ ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೂ ಕೂಡ ಆಗಾಗ ಖಿನ್ನತೆ ಕಾಡುತ್ತದೆ.ಮುಂದೆ ಕ್ಲಿನಿಕಲ್ ಸೈಕಾಲಜಿ ಯಲ್ಲಿ ಹೆಸರು ಮಾಡಿ ಎಲ್ಲರ ಗಮನ ಸೆಳೆಯುತ್ತಾಳೆ.

ಈಡಿತ್ ಗೆ ಮತ್ತೆ ಜರ್ಮನಿಯಲ್ಲಿ ಉಪನ್ಯಾಸ ನೀಡುವ ಅವಕಾಶ ಸಿಗುತ್ತದೆ.ಆಗ ಅಶ್ವಿಟ್ಸ್ ಬಂದಿಖಾನೆಗೆ ಬಂದು ಹಳೆಯದೆಲ್ಲವನ್ನು ಮರೆಯುವ, ಕ್ಷಮಿಸುವ ಸಂಕಲ್ಪ ಮಾಡುತ್ತಾಳೆ.ತಾಯಿಯ ಸಾವಿಗೆ ತಾನೆ ಕಾರಣ ಎಂಬ ನೋವು ಅವಳಲ್ಲಿರುತ್ತದೆ.ಕ್ಯಾಂಪ್ನ ನಲ್ಲಿ ೪೦ವಯಸ್ಸು ಮೀರಿದವರನ್ನು ಗ್ಯಾಸ್‌ ಚೇಂಬರ್ ಗೆ ಕಳಿಸುತ್ತಿದ್ದರು.ತನ್ನ ಅಮ್ಮನ ವಯಸ್ಸು ಸರಿಯಾಗಿ ಹೇಳದೆ,ಅವಳು ನನ್ನ ಸಹೋದರಿ ಎಂದರೆ ಬದುಕುಳಿಯುತ್ತಿದ್ದಳಲ್ಲ ಎಂಬ ಗಿಲ್ಟ ಅವಳ ಬದುಕಿನುದ್ದಕ್ಕೂ ಕಾಡುತ್ತಿರುತ್ತದೆ. ೭೦ರ ಇಳಿವಯಸ್ಸಿನಲ್ಲಿ ಎಲ್ಲಾ ಕಹಿ ಘಟನೆ ಮರೆತು, ಆತ್ಮಬಲದಿಂದ ಎಲ್ಲವನ್ನೂ ಮೀರುವ ಪ್ರಯತ್ನ ಮಾಡಬೇಕು. ಇಲ್ಲಿ ಎಲ್ಲವೂ ನೆಪಮಾತ್ರ, ನಾವು ಭಾವಿಸಿದಂತೆ ಜೀವನದಲ್ಲಿ ಯಾವುದು ಘಟಿಸುವುದಿಲ್ಲ, ಎಂಬ ನೈಜತೆಯನ್ನು ಅರಿತು ಜೀವ‌ನ್ಮುಖಿ ಆಗುವ ಈಡಿತ್ ನ ಸಂಘರ್ಷಮಯ ಬದುಕು ಪ್ರತಿಯೊಬ್ಬ ಓದುಗನಿಗೆ ಜೀವನದ ಕುರಿತು ಭರವಸೆ ಮೂಡಿಸುತ್ತದೆ.

ಅನುವಾದ ಕೂಡ ಸಹಜವಾಗಿ ಮೂಡಿಬಂದಿದ್ದು, ಮುದ್ರಣವು ಅಚ್ಚುಕಟ್ಟಾಗಿದೆ. ಈಡಿತ್ ಎಗರ್ ಇಂದು 98 ವರ್ಷ ದ ಹರೆಯದವರಾಗಿದ್ದು ಅಮೆರಿಕ ದಲ್ಲಿ ವಾಸಿಸುತ್ತಾರೆ, ಕ್ರಿಯಾಶೀಲರಾಗಿದ್ದಾರೆ. ೨೦೧೭ರಲ್ಲಿ ಪ್ರಕಟಗೊಂಡ ಈ ಕೃತಿ ಬೆಸ್ಟ್ ಸೆಲ್ಲರ್ ಎಂದು ಗುರುತಿಸಿಕೊಂಡಿದೆ. ಪ್ರೇರಣಾದಾಯಕ ಕೃತಿ ಇದಾಗಿದೆ.

‍ಲೇಖಕರು Admin

14 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading