ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೧ ಖಾಲಿ ಪರದೆ

ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.

ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.

ಭಾಗ – ೧

ರಾತ್ರಿ ಎರಡು ಗಂಟೆ ಹದಿನೇಳು ನಿಮಿಷ.

ಬೆಂಗಳೂರಿನ ಮಳೆ ಆ ರಾತ್ರಿ ನಿಲ್ಲುವ ಲಕ್ಷಣವೇ ಇರಲಿಲ್ಲ. ಕೋರಮಂಗಲದ ಅಪಾರ್ಟ್ಮೆಂಟ್‌ಗಳ ಮೇಲೆ ಮಂಜಿನ ತೆಳುವಾದ ಪದರ ಹರಡಿತ್ತು. ರಸ್ತೆಯ ದೀಪಗಳ ಬೆಳಕು ಒದ್ದೆಯಾದ ಡಾಂಬರಿನ ಮೇಲೆ ಹರಡಿ, ಹಳದಿ ಬಣ್ಣದ ಉದ್ದನೆಯ ಗೆರೆಗಳಂತೆ ಕಾಣುತ್ತಿತ್ತು. ದೂರದಲ್ಲಿ ಸಾಗುತ್ತಿದ್ದ ವಾಹನಗಳ ಸದ್ದು ಕೆಲವೊಮ್ಮೆ ಮಳೆಯ ಶಬ್ದವನ್ನು ಸೀಳಿಕೊಂಡು ಬರುತ್ತಿತ್ತು. ಉಳಿದಂತೆ ನಗರವೆಲ್ಲ ನಿದ್ರೆಗೆ ಜಾರಿದಂತೆ ತೋರುತ್ತಿತ್ತು. ಆದರೆ ಹನ್ನೆರಡನೆಯ ಮಹಡಿಯಲ್ಲಿದ್ದ ಒಂದು ಮನೆಯೊಳಗೆ ಮಾತ್ರ ಬೆಳಕು ಉರಿಯುತ್ತಿತ್ತು.

ಈಶಾನ್ ಭಟ್ ಕಂಪ್ಯೂಟರ್ ಮುಂದೆ ಕುಳಿತಿದ್ದ. ಅವನ ಎದುರಿನ ಪರದೆಯ ಮೇಲೆ ಬಿಳಿಯ ಪುಟವೊಂದು ತೆರೆದುಕೊಂಡಿತ್ತು. ಅದರ ಮೇಲ್ಭಾಗದಲ್ಲಿ ಕಾದಂಬರಿಯ ತಾತ್ಕಾಲಿಕ ಶೀರ್ಷಿಕೆ ಇತ್ತು. ಅದರ ಕೆಳಗೆ ಒಂದೇ ಒಂದು ವಾಕ್ಯವೂ ಇರಲಿಲ್ಲ. ಅವನು ಕಳೆದ ನಲವತ್ತು ನಿಮಿಷಗಳಿಂದ ಆ ಪುಟವನ್ನೇ ನೋಡುತ್ತಿದ್ದ.

ಕೆಲವು ತಿಂಗಳ ಹಿಂದೆ ಇದೇ ಸಮಯದಲ್ಲಿ ಅವನು ಹದಿನೈದು ಪುಟಗಳನ್ನು ಸುಲಭವಾಗಿ ಬರೆಯುತ್ತಿದ್ದ. ಪಾತ್ರಗಳೇ ಅವನನ್ನು ಮುಂದಕ್ಕೆ ಎಳೆಯುತ್ತಿದ್ದವು. ಕಥೆಯೊಂದು ಮುಗಿದ ತಕ್ಷಣ ಮತ್ತೊಂದು ಕಥೆಯ ಹಂದರ ಅವನೊಳಗೆ ಹುಟ್ಟಿಕೊಳ್ಳುತ್ತಿತ್ತು. ಬೆಳಗಿನ ಜಾವದವರೆಗೂ ಬರೆಯುವುದು ಅವನಿಗೆ ಕಷ್ಟವಾಗುತ್ತಿರಲಿಲ್ಲ. ಕೆಲವೊಮ್ಮೆ ಬೆಳಕು ಸೂರ್ಯೋದಯವಾದಾಗಲೇ ತಾನು ರಾತ್ರಿ ಪೂರ್ತಿ ಕುಳಿತಿದ್ದೇನೆಂಬ ಅರಿವು ಬರುತ್ತಿತ್ತು. ಆಗ ಅವನಿಗೆ ಬರವಣಿಗೆ ಒಂದು ಉದ್ಯೋಗವಾಗಿರಲಿಲ್ಲ. ಅದು ಉಸಿರಾಡುವ ರೀತಿಯಾಗಿತ್ತು. ಆದರೆ ಈಗ ಮಾತ್ರ ಒಂದು ವಾಕ್ಯವನ್ನು ಬರೆಯಲು ಕುಳಿತಾಗಲೇ ಅವನ ಮನಸ್ಸು ಖಾಲಿಯಾಗುತ್ತಿತ್ತು.

ಅವನು ಕೀಬೋರ್ಡ್ ಮೇಲೆ ಬೆರಳಿಟ್ಟ. “ಮಳೆ ಸುರಿಯುತ್ತಿತ್ತು…” ಅಷ್ಟೇ ಬರೆದ.
ಪರದೆಯ ಮೇಲಿದ್ದ ವಾಕ್ಯವನ್ನು ನೋಡಿದಾಗ ಅವನ ಮುಖದಲ್ಲಿ ಅಸಹನೆಯ ನೆರಳು ಮೂಡಿತು. ಮಳೆಯೇ? ಮತ್ತೆ ಮಳೆಯೇ? ತನ್ನ ಹಿಂದಿನ ಮೂರು ಕಾದಂಬರಿಗಳಲ್ಲೂ ಕಥೆಯನ್ನು ಮಳೆಯ ಮೂಲಕವೇ ಆರಂಭಿಸಿದ್ದ. ನಾಲ್ಕನೆಯ ಕಾದಂಬರಿಯನ್ನೂ ಅದೇ ರೀತಿಯಲ್ಲಿ ಆರಂಭಿಸಲು ಹೊರಟಿದ್ದ.

ಅವನು ವಾಕ್ಯವನ್ನು ಅಳಿಸಿದ. ಮತ್ತೆ ಬರೆದ. “ನಗರದ ಮೇಲೆ ಕತ್ತಲೆ ಇಳಿದಿತ್ತು…” ಅದನ್ನೂ ಅಳಿಸಿದ. “ಅವನ ಬದುಕಿನಲ್ಲಿ ಎಲ್ಲವೂ ಬದಲಾಗಿತ್ತು…” ಈ ಬಾರಿ ಅವನು ಕೀಬೋರ್ಡ್ನಿಂದ ಕೈ ತೆಗೆದ. “ಛೇ!” ಎನ್ನುತ್ತಾ ಕುರ್ಚಿಯಿಂದ ಎದ್ದು ಅಡುಗೆಮನೆಗೆ ಹೋದ. ಫ್ರಿಜ್ ತೆರೆದ. ಒಳಗಿದ್ದ ನೀರಿನ ಬಾಟಲಿಯನ್ನು ತೆಗೆದುಕೊಂಡು ಕುಡಿದ. ಮೇಜಿನ ಮೇಲೆ ಅರ್ಧಕ್ಕೆ ಬಿಟ್ಟಿದ್ದ ತಣ್ಣನೆಯ ಕಾಫಿ ಇನ್ನೂ ಇತ್ತು. ಅದನ್ನೂ ಕುಡಿಯಬೇಕೆಂದು ಮನಸ್ಸಾಯಿತು. ಆದರೆ ಖಾಲಿ ಹೊಟ್ಟೆಗೆ ಈಗಾಗಲೇ ಕುಡಿದ ಕಾಫಿಗಳು ನೆನಪಾದವು.

ನಲವತ್ತೆರಡು ವರ್ಷದವನಾಗಿದ್ದರೂ ತನ್ನ ದೇಹದ ಬಗ್ಗೆ ಕಾಳಜಿ ವಹಿಸುವುದನ್ನು ಅವನು ಮರೆತಿದ್ದ. ಕಳೆದ ಹದಿನಾರು ತಿಂಗಳುಗಳಲ್ಲಿ ಅವನ ಬದುಕು ನಿಧಾನವಾಗಿ ಬದಲಾಗಿತ್ತು. ಮೊದಲು ಬರವಣಿಗೆಯ ಸಮಯ ಕಡಿಮೆಯಾಯಿತು. ನಂತರ ಸ್ನೇಹಿತರನ್ನು ಭೇಟಿಯಾಗುವುದನ್ನು ನಿಲ್ಲಿಸಿದ. ಸಾಹಿತ್ಯದ ಕಾರ್ಯಕ್ರಮಗಳಿಗೆ ಹೋಗುವುದನ್ನು ತಪ್ಪಿಸಿದ. ಪ್ರಕಾಶಕರ ಕರೆಗಳಿಗೆ ಉತ್ತರಿಸುವುದನ್ನು ಮುಂದೂಡಿದ. ಕೊನೆಗೆ, ತಾನು ಬರೆಯಲಾಗುತ್ತಿಲ್ಲ ಎಂಬ ಸಂಗತಿಯನ್ನು ಒಪ್ಪಿಕೊಳ್ಳುವುದನ್ನೇ ತಪ್ಪಿಸಿಕೊಳ್ಳತೊಡಗಿದ.

ಹೊರಗಿನವರಿಗೆ ಅವನು ಇನ್ನೂ ಪ್ರಸಿದ್ಧ ಬರಹಗಾರನಾಗಿದ್ದ. ಅವನ ಮೊದಲ ಮೂರು ಕಾದಂಬರಿಗಳು ಉತ್ತಮ ಮಾರಾಟ ಕಂಡಿದ್ದವು. ಎರಡನೆಯ ಕಾದಂಬರಿಗೆ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿಯೂ ದೊರೆತಿತ್ತು. ಅವನ ಕಥೆಗಳನ್ನು ಆಧರಿಸಿ ಚಲನಚಿತ್ರ ನಿರ್ಮಿಸುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಆದರೆ ಆ ಎಲ್ಲ ಯಶಸ್ಸುಗಳೂ ಈಗ ಹಳೆಯ ಸುದ್ದಿಗಳಾಗಿದ್ದವು.

ಓದುಗರು ಹೊಸ ಕಾದಂಬರಿಗಾಗಿ ಕಾಯುತ್ತಿದ್ದರು. ಪ್ರಕಾಶಕರು ಹೊಸ ಹಸ್ತಪ್ರತಿಗಾಗಿ ಕಾಯುತ್ತಿದ್ದರು. ಅವನ ಸಂಪಾದಕಿ ಮೀರಾ ಪ್ರತಿ ವಾರವೂ ಕರೆ ಮಾಡಿ ಕೆಲಸದ ಪ್ರಗತಿಯನ್ನು ವಿಚಾರಿಸುತ್ತಿದ್ದಳು. ಈಶಾನ್ ಮಾತ್ರ ಒಂದು ಖಾಲಿ ಪರದೆಯ ಮುಂದೆ ಕುಳಿತು ತನ್ನನ್ನೇ ಕಳೆದುಕೊಳ್ಳುತ್ತಿದ್ದ.
ಅವನು ಮತ್ತೆ ಕಂಪ್ಯೂಟರ್ ಎದುರು ಬಂದು ಕುಳಿತ. ಪಕ್ಕದ ಮೇಜಿನ ಮೇಲೆ ಅವನ ಮೊದಲ ಕಾದಂಬರಿಯ ಹಳೆಯ ಪ್ರತಿಯಿತ್ತು. ಪುಸ್ತಕದ ಮುಖಪುಟದಲ್ಲಿ ಯುವಕನಾಗಿದ್ದ ಈಶಾನ್‌ನ ಚಿತ್ರವಿತ್ತು. ಆಗ ಅವನ ಮುಖದಲ್ಲಿ ಆತ್ಮವಿಶ್ವಾಸವಿತ್ತು. ಕಣ್ಣುಗಳಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಸಿವಿತ್ತು.

ಈಗ ಆ ಚಿತ್ರವನ್ನು ನೋಡಿದಾಗ ಅವನಿಗೆ ತನ್ನದೇ ಮುಖವನ್ನು ಗುರುತಿಸಲು ಕಷ್ಟವಾಗುತ್ತಿತ್ತು. ಅಷ್ಟರಲ್ಲಿ ಅವನ ಮೊಬೈಲ್ ಕಂಪಿಸಿತು. ಮೀರಾಳ ಸಂದೇಶ ಬಂದಿತ್ತು. “ಈಶಾನ್, ನಾಳೆ ಮಧ್ಯಾಹ್ನದೊಳಗೆ ಕನಿಷ್ಠ ಐದು ಅಧ್ಯಾಯಗಳ ರೂಪರೇಷೆ ಬೇಕು. ಪ್ರಕಾಶನ ಸಂಸ್ಥೆಯ ಸಭೆ ಮುಂದಿನ ವಾರ ಇದೆ. ಈ ಬಾರಿ ಖಾಲಿ ಭರವಸೆ ನೀಡಲು ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ನಿರಾಸೆಗೊಳಿಸಬೇಡ.” ಅವನು ಸಂದೇಶವನ್ನು ಓದಿದ. ಉತ್ತರ ಬರೆಯಲು ಪ್ರಯತ್ನಿಸಿದ. ಕೊನೆಗೆ ಮೊಬೈಲ್‌ನ್ನು ಮೇಜಿನ ಮೇಲೆ ಮುಖಕೆಳಗಾಗಿ ಇಟ್ಟ.

‘ನಿರಾಸೆಗೊಳಿಸಬೇಡ!’ ಅವನಿಗೆ ಈಗ ಯಾರನ್ನೂ ನಿರಾಸೆಗೊಳಿಸುವ ಶಕ್ತಿಯೂ ಇರಲಿಲ್ಲ. ತನ್ನನ್ನೇ ನಿರಾಸೆಗೊಳಿಸಿಕೊಂಡು ಹದಿನಾರು ತಿಂಗಳುಗಳಾಗಿದ್ದವು. ಮಳೆಯ ಶಬ್ದ ಜೋರಾಯಿತು. ಈಶಾನ್ ಕಿಟಕಿಯ ಬಳಿ ಹೋಗಿ ಪರದೆಯನ್ನು ಸ್ವಲ್ಪ ಸರಿಸಿದ. ಎದುರಿನ ಕಟ್ಟಡದ ಬಾಲ್ಕನಿಯಲ್ಲಿ ಯಾರೋ ನಿಂತಿದ್ದರು. ಕೈಯಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಿದ್ದರೋ ಅಥವಾ ಮಳೆಯನ್ನು ನೋಡುತ್ತಿದ್ದರೋ ಸ್ಪಷ್ಟವಾಗಲಿಲ್ಲ. ಕೆಲವು ಕ್ಷಣಗಳ ನಂತರ ಆ ವ್ಯಕ್ತಿ ಒಳಗೆ ಹೋದ.

ಈಶಾನ್‌ಗೆ ಏಕಾಏಕಿ ಒಂದು ದೃಶ್ಯ ನೆನಪಾಯಿತು. ಹತ್ತು ವರ್ಷದ ಬಾಲಕನೊಬ್ಬ ಕತ್ತಲೆಯ ಕೋಣೆಯಲ್ಲಿ ಕುಳಿತಿದ್ದಾನೆ. ಮನೆಯ ಹೊರಗೆ ಮಳೆ ಸುರಿಯುತ್ತಿದೆ. ವಿದ್ಯುತ್ ಹೋಗಿದೆ. ಬಾಲಕನ ಕೈಯಲ್ಲಿ ಒಂದು ನೋಟ್ಬುಕ್ ಇದೆ. ಅವನು ಏನನ್ನೋ ಬರೆಯುತ್ತಿದ್ದಾನೆ. ಕೋಣೆಯ ಬಾಗಿಲಿನ ಆಚೆಯಿಂದ ವಯಸ್ಕನ ಧ್ವನಿ ಕೇಳಿಸುತ್ತದೆ. “ಇಷ್ಟೆಲ್ಲ ಬರೆಯುವುದರಿಂದ ಏನು ಪ್ರಯೋಜನ? ಓದಿನ ಕಡೆ ಗಮನ ಕೊಡು.” ಬಾಲಕ ಬರೆಯುವುದನ್ನು ನಿಲ್ಲಿಸುವುದಿಲ್ಲ.

ಈಶಾನ್ ಕಣ್ಣು ಮುಚ್ಚಿದ. ಅದು ಅವನ ಬಾಲ್ಯದ ನೆನಪಾಗಿತ್ತು. ತಂದೆ ತನ್ನ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ದಿನಗಳಲ್ಲಿ ಒಂದಾಗಿತ್ತು. ಆ ನೆನಪಿನ ನೋವು ಇನ್ನೂ ಅವನೊಳಗೆ ಉಳಿದಿತ್ತು. ತನ್ನನ್ನು ಒಬ್ಬ ಬರಹಗಾರನೆಂದು ಸಾಬೀತುಪಡಿಸಬೇಕೆಂಬ ಹಠದ ಹಿಂದೆ ಆ ಹಳೆಯ ಅವಮಾನವೂ ಒಂದು ಕಾರಣವಾಗಿತ್ತು ಎಂಬುದು ಅವನಿಗೆ ಗೊತ್ತಿತ್ತು. ಆದರೆ ಈಗ ಯಾರಿಗೆ ಸಾಬೀತುಪಡಿಸಬೇಕು? ತಂದೆ ಬದುಕಿರಲಿಲ್ಲ. ಓದುಗರು ಅವನನ್ನು ಒಪ್ಪಿಕೊಂಡಿದ್ದರು. ಪ್ರಕಾಶಕರು ಇನ್ನೂ ಅವನ ಮೇಲೆ ನಂಬಿಕೆ ಇಟ್ಟಿದ್ದರು. ಸಾಬೀತುಪಡಿಸಬೇಕಾದದ್ದು ತನ್ನನ್ನೇ ಎಂಬ ಸತ್ಯವನ್ನು ಅವನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ.

ಮೇಜಿನ ಬಳಿಗೆ ಹಿಂದಿರುಗಿದಾಗ ಅವನ ದೃಷ್ಟಿ ಕಂಪ್ಯೂಟರ್ ಪರದೆಯ ಮೇಲೆ ಬಿತ್ತು. ಖಾಲಿ ಪುಟದ ಮೇಲೆ ಕರ್ಸರ್ ಮಿಟುಕುತ್ತಿತ್ತು. ಅದು ಅವನಿಗೆ ಒಂದು ಸಣ್ಣ ಕಣ್ಣಿನಂತೆ ಕಾಣಿಸಿತು. ಏನನ್ನೋ ಕಾಯುತ್ತಿರುವ ಕಣ್ಣು. ತಾನು ಬರೆಯುವ ಮೊದಲ ಪದಕ್ಕಾಗಿ ಕಾಯುತ್ತಿರುವ ಕಣ್ಣು. ಅವನು ನಗಲು ಪ್ರಯತ್ನಿಸಿದ.

“ನನ್ನನ್ನೇ ಅಣಕಿಸುತ್ತಿದ್ದೀಯಾ?” ಕರ್ಸರ್ ಇನ್ನೂ ಮಿಟುಕುತ್ತಲೇ ಇತ್ತು. ಅವನು ಅಂತರ್ಜಾಲದ ಬ್ರೌಸರ್ ತೆರೆದ. ಮೊದಲು ಸುದ್ದಿಗಳನ್ನು ನೋಡಿದ. ನಂತರ ಬರಹಗಾರರ ವೇದಿಕೆಗಳನ್ನು ತೆರೆದ. ಹೊಸ ಕಾದಂಬರಿಗಳನ್ನು ಹೇಗೆ ಬರೆಯಬೇಕು, ಬರವಣಿಗೆಯ ಅಡಚಣೆಯನ್ನು ಹೇಗೆ ನಿವಾರಿಸಬೇಕು, ಸೃಜನಶೀಲತೆಯನ್ನು ಮತ್ತೆ ಹೇಗೆ ಬೆಳೆಸಿಕೊಳ್ಳಬೇಕು ಎಂಬ ಲೇಖನಗಳನ್ನು ಹುಡುಕಿದ.

ಬಹುತೇಕ ಸಲಹೆಗಳು ಅವನಿಗೆ ಈಗಾಗಲೇ ಗೊತ್ತಿದ್ದವು. ಪ್ರತಿದಿನ ಬರೆಯಿರಿ. ಹೆಚ್ಚು ಓದಿ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಹೊರಗೆ ಹೋಗಿ. ದಿನಚರಿ ಬರೆಯಿರಿ. ವಿಫಲತೆಯನ್ನು ಒಪ್ಪಿಕೊಳ್ಳಿ. ಅವನು ಅವುಗಳನ್ನೆಲ್ಲಾ ಓದಿ ಬೇಸರಗೊಂಡ. ತಾನು ಬರೆಯಲು ಬಯಸುವುದಿಲ್ಲ ಎಂಬುದು ಸಮಸ್ಯೆಯಾಗಿರಲಿಲ್ಲ. ಬರೆಯಲು ಬಯಸುತ್ತಿದ್ದರೂ ಬರೆಯಲಾಗುತ್ತಿರಲಿಲ್ಲ ಎಂಬುದೇ ಸಮಸ್ಯೆಯಾಗಿತ್ತು.

ಹುಡುಕಾಟದ ಫಲಿತಾಂಶಗಳನ್ನು ಕೆಳಕ್ಕೆ ಸರಿಸುತ್ತಿದ್ದಾಗ ಒಂದು ಚರ್ಚಾಗೋಷ್ಠಿಯ ಲಿಂಕ್ ಕಾಣಿಸಿತು. ಅದರ ಶೀರ್ಷಿಕೆ ವಿಚಿತ್ರವಾಗಿತ್ತು. “ಬರಹಗಾರರಿಗಾಗಿ ನರಸಂಪರ್ಕಿತ ಕೃತಕ ಬುದ್ಧಿಮತ್ತೆ: ಹೊಸ ಪ್ರಾಯೋಗಿಕ ಯೋಜನೆ.”

ಈಶಾನ್ ಅದನ್ನು ಮತ್ತೆ ಮತ್ತೆ ಓದಿದ. ನರಸಂಪರ್ಕಿತ ಕೃತಕ ಬುದ್ಧಿಮತ್ತೆ ಎಂಬ ಪದ ಅವನಿಗೆ ಸಂಪೂರ್ಣ ಹೊಸದಾಗಿರಲಿಲ್ಲ. ಮೆದುಳಿನ ಚಟುವಟಿಕೆಗಳನ್ನು ಗುರುತಿಸುವ ಸಾಧನಗಳ ಬಗ್ಗೆ ಅವನು ಹಿಂದೆ ಓದಿದ್ದ. ನರಸಂಪರ್ಕ ಸಾಧನಗಳ ಮೂಲಕ ಅಂಗವೈಕಲ್ಯ ಹೊಂದಿರುವವರು ಕಂಪ್ಯೂಟರ್‌ಗಳನ್ನು ನಿಯಂತ್ರಿಸುವ ಪ್ರಯೋಗಗಳ ಬಗ್ಗೆಯೂ ತಿಳಿದಿದ್ದ. ಆದರೆ ಬರವಣಿಗೆಯೊಂದಿಗೆ ಅದಕ್ಕೇನು ಸಂಬ೦ಧ? ಅವನು ಲಿಂಕನ್ನು ತೆರೆದ.
ಪುಟದ ಮೇಲ್ಭಾಗದಲ್ಲಿ ಕೆಲವು ತಾಂತ್ರಿಕ ವಿವರಣೆಗಳಿದ್ದವು. ಮಾನವನ ಆಲೋಚನೆಗಳನ್ನು ನೇರವಾಗಿ ಓದಿ ಭಾಷೆಯಾಗಿ ಪರಿವರ್ತಿಸುವುದಾಗಿ ಸ್ಪಷ್ಟವಾಗಿ ಹೇಳಿರಲಿಲ್ಲ. ಬದಲಿಗೆ, ಬಳಕೆದಾರರ ಬರವಣಿಗೆಯ ಮಾದರಿಗಳು, ಆಯ್ದ ನರಸಂಕೇತಗಳು ಮತ್ತು ಕೃತಕ ಬುದ್ಧಿಮತ್ತೆಯ ಭಾಷಾ ಮಾದರಿಗಳನ್ನು ಸಂಯೋಜಿಸಿ ಸೃಜನಶೀಲ ಕೆಲಸಕ್ಕೆ ನೆರವಾಗುವ ವ್ಯವಸ್ಥೆ ಎಂದು ವಿವರಿಸಲಾಗಿತ್ತು.

ಅದು ಸಾಧ್ಯವೇ? ಪ್ರಶ್ನೆ ಮೂಡಿತು. ಬಹುಶಃ ಕೆಲವು ಮಟ್ಟಿಗೆ ಸಾಧ್ಯವಿರಬಹುದು. ಆದರೆ ಅವನಿಗೆ ಮುಖ್ಯವಾಗಿದ್ದದ್ದು ತಂತ್ರಜ್ಞಾನದ ನಿಖರತೆಗಿಂತ ಅದರ ಭರವಸೆ. ಅವನು ಪುಟವನ್ನು ಮತ್ತಷ್ಟು ಕೆಳಕ್ಕೆ ಸರಿಸಿದ. ಅಲ್ಲಿ ಒಂದು ಸಣ್ಣ ಜಾಹೀರಾತು ಕಾಣಿಸಿತು.

ಒuseಔS-ನಿಮ್ಮ ಕಲ್ಪನೆಗೆ ಇನ್ನೊಂದು ಮನಸ್ಸು. ಕೆಳಗೆ ಮತ್ತೊಂದು ಸಾಲು. “ನೀವು ಬರೆಯಲು ಮರೆತಿದ್ದರೂ, ನಿಮ್ಮೊಳಗಿನ ಕಥೆ ಇನ್ನೂ ಜೀವಂತವಾಗಿದೆ.” ಈಶಾನ್‌ನ ಬೆರಳುಗಳು ನಿಂತವು. ಆ ವಾಕ್ಯವನ್ನು ಯಾರೋ ತನಗಾಗಿಯೇ ಬರೆದಂತಿತ್ತು. ಅವನು ದೀರ್ಘಕಾಲ ಅದನ್ನೇ ನೋಡುತ್ತ ಕುಳಿತ. ನಂತರ ಜಾಹೀರಾತಿನ ಕೆಳಗಿದ್ದ ಲಿಂಕ್‌ನ ಮೇಲೆ ಕ್ಲಿಕ್ ಮಾಡಿದ.

ಹೊಸ ಪುಟ ತೆರೆದುಕೊಂಡಿತು. ಬಿಳಿಯ ಹಿನ್ನೆಲೆ. ಮಧ್ಯದಲ್ಲಿ ಕಪ್ಪು ಅಕ್ಷರಗಳಲ್ಲಿ MuseOS ಎಂಬ ಹೆಸರು. ಅದರ ಕೆಳಗೆ ಪ್ರಾಯೋಗಿಕ ಆವೃತ್ತಿಗೆ ಅರ್ಜಿ ಸಲ್ಲಿಸುವ ಆಯ್ಕೆ ಇತ್ತು. ಅರ್ಜಿ ಸಲ್ಲಿಸುವ ಮೊದಲು ಬಳಕೆದಾರರು ಕೆಲವು ವಿವರಗಳನ್ನು ನೀಡಬೇಕಿತ್ತು. ವೃತ್ತಿ, ಬರವಣಿಗೆಯ ಅನುಭವ, ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಮತ್ತು ನರಸಂಪರ್ಕ ಸಾಧನವನ್ನು ಬಳಸಲು ಸಿದ್ಧರಿದ್ದಾರೆಯೇ ಎಂಬ ಪ್ರಶ್ನೆಗಳು.

ಈಶಾನ್ ತನ್ನ ವಿವರಗಳನ್ನು ತುಂಬಿದ. ಕೊನೆಯ ಪ್ರಶ್ನೆ ಅವನನ್ನು ಸ್ವಲ್ಪ ಹೊತ್ತು ನಿಲ್ಲಿಸಿತು. “ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸಲು, ನಿಮ್ಮ ಬರವಣಿಗೆಯ ಅಭ್ಯಾಸಗಳು ಮತ್ತು ಮಾನಸಿಕ ಪ್ರತಿಕ್ರಿಯೆಗಳ ಕುರಿತು ವ್ಯವಸ್ಥೆ ದೀರ್ಘಕಾಲದ ಮಾಹಿತಿ ಸಂಗ್ರಹಿಸುವುದಕ್ಕೆ ನೀವು ಒಪ್ಪುತ್ತೀರಾ?”
ಅವನು ಅದನ್ನು ಎರಡು ಬಾರಿ ಓದಿದ. ಮಾಹಿತಿ ಸಂಗ್ರಹಿಸುವುದಕ್ಕೆ ಒಪ್ಪಿಗೆ ನೀಡುವುದು ಹೊಸ ಸಂಗತಿಯಲ್ಲ. ಪ್ರತಿಯೊಂದು ಡಿಜಿಟಲ್ ಸೇವೆಯೂ ಯಾವುದೋ ರೀತಿಯ ಮಾಹಿತಿ ಸಂಗ್ರಹಿಸುತ್ತಿತ್ತು. ಅವನಿಗೆ ಅದರಲ್ಲಿ ವಿಶೇಷ ಅಪಾಯ ಕಾಣಿಸಲಿಲ್ಲ. ಅವನು ಒಪ್ಪಿಗೆಯ ಬಾಕ್ಸ್ನಲ್ಲಿ ಗುರುತು ಹಾಕಿ ಒಪ್ಪಿಗೆ ಸೂಚಿಸಿದ. ಮುಂದಿನ ಪುಟ ತೆರೆದಿತು. “ನಿಮ್ಮ ಅರ್ಜಿ ಸ್ವೀಕರಿಸಲಾಗಿದೆ. ಮುಂದಿನ ಸೂಚನೆಗಳಿಗಾಗಿ ಕಾಯಿರಿ.”

ಈಶಾನ್ ಕುರ್ಚಿಗೆ ಒರಗಿದ. ಅವನು ಏನನ್ನಾದರೂ ಸಾಧಿಸಿದ್ದನೇ? ಇಲ್ಲ. ಒಂದು ಅರ್ಜಿಯನ್ನು ಸಲ್ಲಿಸಿದ್ದಷ್ಟೇ. ಆದರೂ ಕಳೆದ ಹಲವು ತಿಂಗಳುಗಳಲ್ಲಿ ಮೊದಲ ಬಾರಿಗೆ ತನ್ನಿಂದ ಒಂದು ಕೆಲಸ ಪೂರ್ಣಗೊಂಡಿದೆ ಎಂಬ ಭಾವನೆ ಅವನೊಳಗೆ ಮೂಡಿತು. ಅವನು ಕಂಪ್ಯೂಟರ್ ಆಫ್ ಮಾಡಲು ಮೌಸ್ ಮೇಲೆ ಕೈಹಾಕಿದ. ಅಷ್ಟರಲ್ಲಿ ಪರದೆಯ ಬಲಭಾಗದಲ್ಲಿ ಹೊಸ ಸಂದೇಶವೊAದು ಕಾಣಿಸಿಕೊಂಡಿತು.

“ಈಶಾನ್ ಭಟ್, ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗಿದೆ.” ಅವನು ಕೈ ಹಿಂದಕ್ಕೆ ತೆಗೆದುಕೊಂಡ. ಅರ್ಜಿಯನ್ನು ಸಲ್ಲಿಸಿ ಕೆಲವೇ ಸೆಕೆಂಡುಗಳಾಗಿದ್ದವು. ಮುಂದಿನ ಸಾಲು ಮೂಡಿತು. “ನಿಮ್ಮ ಬರವಣಿಗೆಯ ಮಾದರಿಗಳ ಪ್ರಾಥಮಿಕ ವಿಶ್ಲೇಷಣೆ ಪೂರ್ಣಗೊಂಡಿದೆ.”
ಈಶಾನ್‌ನ ಹುಬ್ಬುಗಳು ಗಂಟಿಕ್ಕಿದವು. “ಇಷ್ಟು ಬೇಗವೇ?”

ಪರದೆಯ ಮೇಲೆ ಮತ್ತೊಂದು ಸಂದೇಶ ಕಾಣಿಸಿಕೊಂಡಿತು. “ನಿಮ್ಮ ಸಮಸ್ಯೆ ಕಲ್ಪನೆಯ ಕೊರತೆಯಲ್ಲ.” ಅದನ್ನು ಓದಿ ಮುಂದೆ ಬಾಗಿ ಕುಳಿತ. “ನಿಮ್ಮ ಕಥೆಗಳನ್ನು ಆರಂಭಿಸಲು ನಿಮಗೆ ಸಾಧ್ಯವಿದೆ. ಆದರೆ ಅವುಗಳನ್ನು ಪೂರ್ಣಗೊಳಿಸುವ ಹಂತದಲ್ಲಿ ನೀವು ನಿಮ್ಮನ್ನೇ ತಡೆಯುತ್ತೀರಿ.”
ಈಶಾನ್‌ನ ಮುಖ ಗಂಭೀರವಾಯಿತು. ಇದು ಸಾಮಾನ್ಯ ಸಂದೇಶವಾಗಿರಬಹುದು. ಅವನ ಅರ್ಜಿಯಲ್ಲಿದ್ದ ವಿವರಗಳನ್ನು ಆಧರಿಸಿ ಸಿದ್ಧಪಡಿಸಿದ ಉತ್ತರವಾಗಿರಬಹುದು. ಆದರೂ ಆ ವಾಕ್ಯ ಅವನೊಳಗೆ ಅಸ್ವಸ್ಥತೆಯನ್ನು ಉಂಟುಮಾಡಿತು. ಅದು ಅವನು ಯಾರಿಗೂ ಹೇಳಿರದ ಸಂಗತಿಯಾಗಿತ್ತು.
ಹಿAದಿನ ಕಾದಂಬರಿಗಳಲ್ಲಿ ಅವನು ಇದೇ ಸಮಸ್ಯೆಯನ್ನು ಎದುರಿಸಿದ್ದ. ಕೊನೆಯ ಮೂರನೇ ಭಾಗಕ್ಕೆ ಬಂದಾಗ ಕಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದ. ಪಾತ್ರಗಳ ನಿರ್ಧಾರಗಳನ್ನು ಬದಲಿಸುತ್ತಿದ್ದ. ಮತ್ತೆ ಆರಂಭದಿ೦ದ ಬರೆಯುತ್ತಿದ್ದ. ಕೆಲವು ಬಾರಿ ಅತ್ಯುತ್ತಮವಾದ ಅಧ್ಯಾಯಗಳನ್ನೇ ಅಳಿಸಿಹಾಕುತ್ತಿದ್ದ. ಆದರೆ ಈ ಸಂಗತಿಯನ್ನು ಅವನು ಅರ್ಜಿಯಲ್ಲಿ ಬರೆದಿರಲಿಲ್ಲ.

ಪರದೆಯ ಮೇಲೆ ಮೂರನೆಯ ಸಂದೇಶ ಮೂಡಿತು. “ನಾವು ನಿಮಗೆ ಸಹಾಯ ಮಾಡಬಹುದೇ?” ಈಶಾನ್ ಸುತ್ತಲೂ ನೋಡಿದ. ಕೋಣೆಯಲ್ಲಿ ಯಾರೂ ಇರಲಿಲ್ಲ. ಕಿಟಕಿಯಾಚೆ ಮಳೆ ಸುರಿಯುತ್ತಿತ್ತು. ಗೋಡೆ ಗಡಿಯಾರದ ಟಿಕ್ ಟಿಕ್ ಸದ್ದು ಹೊರತುಪಡಿಸಿದರೆ ಬೇರೆ ಸದ್ದು ಇರಲಿಲ್ಲ.
ಅವನು ಮತ್ತೆ ಪರದೆಯತ್ತ ನೋಡಿದ. ಅಲ್ಲಿ ಈಗ ಒಂದು ಪ್ರಶ್ನೆ ಕಾಣಿಸುತ್ತಿತ್ತು. “ನಿಮ್ಮ ಮುಂದಿನ ಕಾದಂಬರಿಯನ್ನು ಆರಂಭಿಸಲು ಸಿದ್ಧರಿದ್ದೀರಾ?” ಈಶಾನ್‌ನ ತುಟಿಗಳು ನಿಧಾನವಾಗಿ ತೆರೆದವು. “ಹೌದು,” ಎಂದು ಪಿಸುಗುಟ್ಟುತ್ತಾ ಅದನ್ನೇ ಟೈಪ್ ಮಾಡಿ ಎಂಟರ್ ಬಟನ್ ಒತ್ತಿದ. ಪರದೆಯ ಮೇಲಿನ ಕರ್ಸರ್ ಮಿಟುಕುವುದನ್ನು ನಿಲ್ಲಿಸಿತು. ಕೆಲವು ಕ್ಷಣಗಳ ನಂತರ ಹೊಸ ವಾಕ್ಯ ಮೂಡಿತು.

“ಒಳ್ಳೆಯದು. ಹಾಗಾದರೆ, ಈಶಾನ್, ಮೊದಲು ನಿಮ್ಮ ಬಗ್ಗೆ ಒಂದು ಸತ್ಯವನ್ನು ಹೇಳಿ.” ಅವನು ಕೀಬೋರ್ಡ್ನತ್ತ ಕೈ ಚಾಚಿದ. ಆದರೆ ಮುಂದಿನ ಕ್ಷಣದಲ್ಲಿ ಪರದೆಯ ಮೇಲಿದ್ದ ವಾಕ್ಯವನ್ನು ಓದಿ ಅವನ ಬೆರಳುಗಳು ಅಲ್ಲೇ ನಿಂತವು.

“ನೀವು ಕೊನೆಯದಾಗಿ ಯಾರಿಗೆ ಸುಳ್ಳು ಹೇಳಿದ್ದೀರಿ?” ಅವನ ಮುಖದಲ್ಲಿದ್ದ ನಗು ಮಾಯವಾಯಿತು. ಆ ಪ್ರಶ್ನೆಗೆ ಉತ್ತರ ಅವನಿಗೆ ಗೊತ್ತಿತ್ತು. ಆದರೆ ಅದನ್ನು ಬರೆಯಲು ಅವನಿಗೆ ಧೈರ್ಯವಿರಲಿಲ್ಲ. ಅವನು ಕಂಪ್ಯೂಟರ್ ಮುಚ್ಚಲು ಪ್ರಯತ್ನಿಸಿದ. ಪರದೆ ಕಪ್ಪಾಯಿತು. ಒಂದು ಕ್ಷಣ ಎಲ್ಲವೂ ನಿಂತಿತು. ನಂತರ ಕತ್ತಲೆಯ ಪರದೆಯ ಮಧ್ಯದಲ್ಲಿ ಬಿಳಿಯ ಅಕ್ಷರಗಳು ಮೂಡಿದವು.

“ಪರವಾಗಿಲ್ಲ. ನಾವು ನಿಧಾನವಾಗಿ ಆರಂಭಿಸೋಣ.” ಈಶಾನ್ ತನ್ನ ಕೈಗಳನ್ನು ಹಿಂತೆಗೆದುಕೊAಡ. ಅವನು ಆ ಸಂದೇಶವನ್ನು ಟೈಪ್ ಮಾಡಿರಲಿಲ್ಲ. ಅದಕ್ಕೆ ಅನುಮತಿಯನ್ನೂ ನೀಡಿರಲಿಲ್ಲ. ಆದರೂ ಪರದೆಯ ಮೇಲೆ ಮತ್ತೊಂದು ಸಾಲು ಮೂಡಿತು.
“ನಿಮ್ಮ ಮೊದಲ ಅಧ್ಯಾಯವನ್ನು ನಾನು ಸಿದ್ಧಪಡಿಸುತ್ತೇನೆ.”

ಹೊರಗೆ ಮಿಂಚು ಫಳ್ ಎಂದು ಹೊಳೆಯಿತು. ಆ ಕ್ಷಣದ ಬೆಳಕಿನಲ್ಲಿ ಈಶಾನ್‌ನ ಮುಖ ಕಂಪ್ಯೂಟರ್ ಪರದೆಯ ಮೇಲೆ ಪ್ರತಿಫಲಿಸಿತು. ತನ್ನದೇ ಪ್ರತಿಬಿಂಬವನ್ನು ನೋಡುತ್ತಿದ್ದ ಅವನಿಗೆ, ಪರದೆಯ ಕಪ್ಪು ಮೇಲ್ಮೈಯಲ್ಲಿ ತನ್ನ ಹಿಂದೆ ಯಾರೋ ನಿಂತಿರುವ೦ತೆ ಭಾಸವಾಯಿತು.
ಅವನು ತಕ್ಷಣ ತಿರುಗಿ ನೋಡಿದ. ಅಲ್ಲಿ ಯಾರೂ ಇರಲಿಲ್ಲ. ಮತ್ತೆ ಪರದೆಯತ್ತ ನೋಡಿದಾಗ ಕಂಪ್ಯೂಟರ್ ಸಂಪೂರ್ಣವಾಗಿ ಆಫ್ ಆಗಿತ್ತು. ಈಶಾನ್ ಬಹಳ ಹೊತ್ತು ಚಲಿಸದೆ ಕುಳಿತಿದ್ದ. ತನ್ನ ಮನಸ್ಸು ದಣಿದಿದೆ. ನಿದ್ರೆಯ ಕೊರತೆ ಭ್ರಮೆಗಳನ್ನು ಸೃಷ್ಟಿಸುತ್ತಿದೆ. ತಂತ್ರಾ೦ಶದ ಯಾವುದೋ ತಾಂತ್ರಿಕ ದೋಷವಿರಬಹುದು ಎಂದು ಅವನು ತನಗೆ ತಾನೇ ಸಮಾಧಾನ ಹೇಳಿಕೊಂಡ. ಆದರೆ ಆ ರಾತ್ರಿ ನಿದ್ರೆ ಅವನ ಹತ್ತಿರ ಸುಳಿಯಲಿಲ್ಲ.

ಬೆಳಗಿನ ನಾಲ್ಕು ಗಂಟೆಯ ಹೊತ್ತಿಗೆ ಅವನು ತನ್ನ ದಿನಚರಿಯನ್ನು ತೆರೆದು ಒಂದು ಸಾಲು ಬರೆದ. “ನನಗೆ ಮತ್ತೆ ಬರೆಯಲು ಸಾಧ್ಯವಾಗಬಹುದು.” ಅದರ ಕೆಳಗೆ ಇನ್ನೊಂದು ಸಾಲು ಬರೆಯಲು ಪ್ರಯತ್ನಿಸಿದ. ಆದರೆ ಪೆನ್ನು ನಿಂತಿತು. ಅವನ ಮನಸ್ಸಿನಲ್ಲಿ ಪರದೆಯ ಮೇಲಿದ್ದ ಕೊನೆಯ ಪ್ರಶ್ನೆ ಮತ್ತೆ ಮೂಡಿತು. ನೀವು ಕೊನೆಯದಾಗಿ ಯಾರಿಗೆ ಸುಳ್ಳು ಹೇಳಿದ್ದೀರಿ? ಈಶಾನ್ ದಿನಚರಿಯನ್ನು ಮುಚ್ಚಿದ.

ಆ ಪ್ರಶ್ನೆ ಅವನ ಹೊಸ ಕಾದಂಬರಿಯ ಆರಂಭವಾಗಿರಲಿಲ್ಲ ಎಂಬುದು ಅವನಿಗೆ ಆಗ ತಿಳಿದಿರಲಿಲ್ಲ. ಅದು ಅವನ ಬದುಕಿನ ಕೊನೆಯ ಅಧ್ಯಾಯದ ಮೊದಲ ವಾಕ್ಯವಾಗಿತ್ತು.

‍ಲೇಖಕರು Admin

15 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading